Tag: save

  • ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಗದಗ: ಅಗ್ನಿಶಾಮಕದಳ ಸಿಬ್ಬಂದಿ ಇತ್ತೀಚಿಗೆ ಪಕ್ಷಿಗಳ ರಕ್ಷಣೆಗೂ ಮುಂದಾಗಿದ್ದು, ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಕಾಗೆಯೊಂದನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಸಬ್ ರಿಜಿಸ್ಟರ್ ಕಛೇರಿ ಬಳಿ ಈ ಘಟನೆ ನಡೆದಿದೆ. ಕಾಗೆಯನ್ನು ರಕ್ಷಣೆ ಮಾಡಿ ಹಾರಿಸಿರುವುದು ಕೆಲವರಿಗೆ ಹಾಸ್ಯಾಸ್ಪದ ಅನಿಸಿಬಹುದು. ಆದರೆ ಅದು ಒಂದು ಜೀವಿ ಅಲ್ಲವೆ ಎನ್ನುವ ಮನೋಭಾವದಿಂದ ಸಿಬ್ಬಂದಿ ಕಾಗೆಯನ್ನು ರಕ್ಷಣೆ ಮಾಡಿದ್ದಾರೆ. ಮೊಬೈಲ್ ಟವರ್ ಏರಿ ಕುಳಿತ್ತಿದ್ದ ಕಾಗೆಯೊಂದು ಮೂರು-ನಾಲ್ಕು ಗಂಟೆಯಿಂದ ಟವರ್‍ನಲ್ಲಿ ಸಿಲುಕಿ ಒದ್ದಾಡುತಿತ್ತು. ಇದನ್ನು ಕೆಲ ಸ್ಥಳೀಯರು ಗಮನಿಸಿ, ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ, ಮೊಬೈಲ್ ಟವರ್ ಏರಿ ಕಾಗೆ ಓಡಿಸುವ ಮೂಲಕ ಅದರ ರಕ್ಷಣೆಗೆ ಮುಂದಾದರು.

    ಮಲ್ಲಿಕಾರ್ಜುನ, ಎಸ್.ವಿ ತಳವಾರ, ಅಶೋಕ ಹಾಗೂ ಮುತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆ ಕಾರ್ಯಕ್ಕೆ ಕೆಲವು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕೆಲವರು ಪರಸ್ಥಿತಿ ಎಲ್ಲಿಗೆ ಬಂತಪ್ಪಾ ಅಂತ ವ್ಯಂಗ್ಯವಾಡಿದ್ದಾರೆ. ಆದರೆ, ಬಹುತೇಕರು ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕರು ಕರೆ ಮಾಡಿದಾಗಲೂ ಸಹ ಕಾಗೆ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಿದ ನಂತರ ನಿರ್ಲಕ್ಷ್ಯ ವಹಿಸಿಲ್ಲ. ಬದಲಿಗೆ ಕರೆಯನ್ನು ಗಂಭೀರವಾಗಿ ಪರಿಗಣಿಸಿ, ಅದೂ ಒಂದು ಜೀವಿ ಎಂದು ಅರಿತು ಕಾಗೆಯನ್ನು ರಕ್ಷಿಸಿದ್ದಾರೆ. ಹಲವರು ಕಾಗೆ, ಪ್ರಾಣಿಗಳಿರಲಿ ಮನುಷ್ಯರು ಕಷ್ಟದಲ್ಲಿ ಸಿಲುಕಿರುವಾಗಲೇ ನಿರ್ಲಕ್ಷಿಸುತ್ತಾರೆ. ಅಂತಹ ಸಂದರ್ಭದಲ್ಲಿ ಕಾಗೆಯನ್ನು ಕಾಪಾಡುವ ಮೂಲಕ ಗದಗ ಅಗ್ನಿಶಾಮಕ ಸಿಬ್ಬಂದಿ ಮಾದರಿಯಾಗಿದ್ದಾರೆ.

  • ಹೈವೇ ವೇಳೆ ಮರಗಳ ಮಾರಣಹೋಮಕ್ಕೆ ಕಡಿವಾಣ- ಬುಡಸಮೇತ ಕಿತ್ತು ಮರುಜೀವ ನೀಡಲು ಯೋಜನೆ!

    ಹೈವೇ ವೇಳೆ ಮರಗಳ ಮಾರಣಹೋಮಕ್ಕೆ ಕಡಿವಾಣ- ಬುಡಸಮೇತ ಕಿತ್ತು ಮರುಜೀವ ನೀಡಲು ಯೋಜನೆ!

    ವಿಜಯಪುರ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಮರಗಳ ಮಾರಣಹೋಮವೇ ನಡೆಯುತ್ತದೆ. ಈ ಮರಗಳ ಮಾರಣಹೋಮ ತಪ್ಪಿಸಲು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದ್ದು, ವಿಜಯಪುರ – ಸೋಲ್ಲಾಪುರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಬರುವ ಮರಗಳನ್ನು ಬುಡಸಮೇತ ತೆಗೆದು ಅವುಗಳಿಗೆ ಮರುಜೀವ ನೀಡುವ ಕುರಿತು ಯೋಜನೆ ರೂಪಿಸಿವೆ.

    ಬರದ ನಾಡು ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈ ತರಹದ ಹೊಸ ಪ್ರಯತ್ನ ಹಮ್ಮಿಕೊಳ್ಳಲಾಗಿದೆ. ವಿಜಯಪುರ – ಸೋಲ್ಲಾಪುರ ನಡುವೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 110 ಕಿ.ಮೀ. ಹೊಂದಿದ್ದು, ವಿಜಯಪುರ ಜಿಲ್ಲೆಯಲ್ಲೇ 72 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿಯ ರಸ್ತೆ ಅಗಲೀಕರಣದಲ್ಲಿ ನಾಶವಾಗಬಹುದಾದ 3,019 ಮರಗಳನ್ನು ಕಡಿಯದೇ ಅವುಗಳನ್ನು ಮತ್ತೆ ಪುನರ್ ಸ್ಥಾಪನೆ ಮಾಡಲು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

    ಈಗಾಗಲೇ ನಗರದ ಹೊರವಲಯದಿಂದ ಮರಗಳ ಸ್ಥಳಾಂತರ ಕಾರ್ಯ ಮುಂದುವರಿದಿದ್ದು, 200ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರ ಮಾಡಿ ಅವುಗಳಿಗೆ ಮರು ಜೀವ ಕಲ್ಪಿಸಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಚುರುಕುಗೊಂಡಿದೆ. ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೆಲವೊಂದು ನಿಯಮಾವಳಿಗಳನ್ನು ವಿಧಿಸಿದ್ದು, 1.20 ಮೀಟರ್ ಸುತ್ತಳತೆ ಇರುವ ದಪ್ಪ ಮರಗಳನ್ನು ಮಾತ್ರ ಕಡಿಯಲು ಅನುಮತಿ ನೀಡಿದೆ.

    ಈಗಾಗಲೇ ನಡೆಸಿರುವ ಸಮೀಕ್ಷೆ ಪ್ರಕಾರ ಸರಿಸುಮಾರು 1,252 ಮರಗಳು ಉರುಳಲಿವೆ. ಇನ್ನು ಉರುಳಿರುವ ಮರಗಳ ಬದಲಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ನಿರ್ಮಾಣದ ನಂತರ ಗಿಡ ನೆಡುವ ಕಾರ್ಯವನ್ನು ಅರಣ್ಯ ಇಲಾಖೆಗೆ ವಹಿಸಿದ್ದು, ಅದಕ್ಕೆ ಸರಿಸುಮಾರು 3.50 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ 1.8 ಕೋಟಿ ರೂ. ಅನ್ನು ಪ್ರಾಧಿಕಾರವು ಅರಣ್ಯ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದು, ಇನ್ನು 1.66 ಕೋಟಿ ರೂ. ನೀಡಬೇಕಿದೆ.ಅರಣ್ಯ ಇಲಾಖೆಯ ಈ ಕ್ರಮಕ್ಕೆ ಬರದನಾಡ ಪರಿಸರ ಪ್ರೇಮಿಗಳು ಫುಲ್ ಖುಷ್ ಅಗಿದ್ದು, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಜಮೀನಿನಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ!

    ಜಮೀನಿನಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ!

    ಚಾಮರಾಜನಗರ: ಜಮೀನೊಂದರಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರವೀಣ್ ಎಂಬವರ ಜಮೀನಿನಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಸಂತೇಮರಳ್ಳಿಯ ಸ್ನೇಕ್ ಮಹೇಶ್ ಹಾಗೂ ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

    ಬಳಿಕ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಜೊತೆ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಕಂಡುಬರುವುದು ಸಾಮಾನ್ಯವಾಗಿದೆ. ಆದರೆ ನಶಿಸಿ ಹೋಗುತ್ತಿರುವ ಭಾರೀ ಗಾತ್ರದ ಹೆಬ್ಬಾವುಗಳು ಕಾಣ ಸಿಗುವುದು ಬಲು ಅಪರೂಪ. ಇಂತಹ ಪ್ರಾಣಿಗಳನ್ನು ರಕ್ಷಿಸಿ ಉಳಿಸುವುದು ಅನಿವಾರ್ಯವಾಗಿದೆ.

  • ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನ ಕಾಲಿನಿಂದ ಒದ್ದು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ – ವಿಡಿಯೋ

    ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನ ಕಾಲಿನಿಂದ ಒದ್ದು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ – ವಿಡಿಯೋ

    ಚೀನಾ: 8ನೇ ಮಹಡಿಯಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಅವರನ್ನು ಅಗ್ನಿಶಾಮಕ ಸಿಬ್ಬಂದಿ ಕಾಪಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಮಹಿಳೆಯನ್ನ ಕಾಪಾಡಿರುವ ವಿಡಿಯೋವನ್ನು ಪೇಸ್ ಬುಕ್ ಗೆ ಅಪ್ಲೋಡ್ ಮಾಡಿದ್ದು, ಈಗ ವೈರಲ್ ಆಗಿದೆ. ಈ ಘಟನೆ ಮಾರ್ಚ್ 11 ರಂದು ಚೀನಾದ ನಾನ್ಜಿಂಗ್ ನಗರದಲ್ಲಿ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಮಹಿಳೆಯನ್ನು ಕಾಪಾಡಿದ ವಿಡಿಯೋವನ್ನು ಅಪಾರ್ಟ್ ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋವನ್ನು ಸಿಜಿಟಿಎನ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿದೆ.

    ವಿಡಿಯೋ ಪ್ರಕಾರ, ಮಹಿಳೆಯೊಬ್ಬರು 8ನೇ ಅಂತಸ್ತಿನ ಕಟ್ಟಡದ ತನ್ನ ಮನೆಯ ಕಿಟಕಿ ಮೇಲೆ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಕೆಯ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಕೆಲ ಸಿಬ್ಬಂದಿ ಕೆಳಗೆ ನಿಂತಿದ್ದರೆ ಓರ್ವ ಸಿಬ್ಬಂದಿ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕಟ್ಟಡದ ಮೇಲಿನ ಫ್ಲೋರಿನಿಂದ ಆಕೆಯಿದ್ದ ಫ್ಲೋರ್ ಬಳಿ ಬಂದಿದ್ದಾರೆ. ನಂತರ ಕಿಟಕಿ ಮೇಲೆ ಕುಳಿತಿದ್ದ ಮಹಿಳೆಗೆ ಕಾಲಿನಿಂದ ಒದ್ದಿದ್ದಾರೆ. ಒದ್ದ ರಭಸಕ್ಕೆ ಆಕೆ ಮನೆಯ ಒಳಗಡೆ ಬಿದ್ದಿದ್ದಾಳೆ. ಈ ಎಲ್ಲ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?time_continue=30&v=6r3MgIExud0

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ರಸ್ತೆಯಲ್ಲಿ ಹೃದಯಾಘಾತವಾದ ಬೈಕ್ ಸವಾರನ ಜೀವ ಉಳಿಸಿದ ಹೋಂಗಾರ್ಡ್ಸ್ – ವಿಡಿಯೋ ವೈರಲ್

    ರಸ್ತೆಯಲ್ಲಿ ಹೃದಯಾಘಾತವಾದ ಬೈಕ್ ಸವಾರನ ಜೀವ ಉಳಿಸಿದ ಹೋಂಗಾರ್ಡ್ಸ್ – ವಿಡಿಯೋ ವೈರಲ್

    ಹೈದರಾಬಾದ್: ಇಬ್ಬರು ಹೋಂಗಾರ್ಡ್ಸ್ ತಮ್ಮ ಸಮಯ ಪ್ರಜ್ಞೆಯಿಂದ, ರಸ್ತೆಯಲ್ಲೇ ಹೃದಯಾಘಾತವಾದ ವ್ಯಕ್ತಿಯೊಬ್ಬರ ಜೀವ ಉಳಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬುಧವಾರ ಸುಮಾರು 12.30ರ ವೇಳೆಗೆ ವ್ಯಕ್ತಿಯೊಬ್ಬರು ಧುಲ್‍ಪೇಟೆಯಿಂದ ಟಾಡ್ಬಂಡ್ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪುರಾಣಪುಲ್‍ನಲ್ಲಿ ಸ್ಕೂಟರಿಂದ ಕೆಳಗೆ ಕುಸಿದುಬಿದ್ದಿದ್ದಾರೆ. ತಕ್ಷಣ ಇಬ್ಬರು ಹೋಂಗಾರ್ಡ್ಸ್ ಆದ ಚಂದನ್ ಸಿಂಗ್ ಮತ್ತು ಇನಾಯತ್-ಉಲ್ಲಾ ಖಾನ್ ಖದ್ರಿ ಸ್ಥಳಕ್ಕೆ ದೌಡಾಯಿಸಿ ಆ ವ್ಯಕ್ತಿಗೆ ಕೂಡಲೇ ಸಿಪಿಆರ್ ಮಾಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.

    ಇಬ್ಬರು ಹೋಂಗಾರ್ಡ್ಸ್ ವ್ಯಕ್ತಿಯನ್ನು ಕಾಪಾಡಿದ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ಹೋಂಗಾರ್ಡ್ಸ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಕೂಡ ಹೋಂಗಾರ್ಡ್ಸ್ ಗಳನ್ನು ಶ್ಲಾಘಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಹೋಂಗಾರ್ಡ್ಸ್ ಚಂದನ್ ಸಿಂಗ್, “ನನ್ನ ಜೀವನದಲ್ಲಿ ನಾನು ಇಷ್ಟು ವೇಗವಾಗಿ ಯಾವತ್ತೂ ಓಡಿರಲಿಲ್ಲ. ಮುಂದೆ ಬರ್ತಿದ್ದ ವಾಹನಗಳ ಬಗ್ಗೆ ನಾನು ಚಿಂತಿಸಲಿಲ್ಲ. ಆ ವ್ಯಕ್ತಿಯನ್ನು ರಕ್ಷಿಸಲು ನಾನು ತಕ್ಷಣವೇ ಅವರ ಕಡೆಗೆ ಓಡಿಹೋದೆ. ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವರು ಸ್ವಲ್ಪವೂ ಚಲಿಸದೆ ಪ್ರಜ್ಞೆಹೀನಾ ಸ್ಥಿತಿಗೆ ಹೋಗಿದ್ದರು. ನಾನು ತಕ್ಷಣ ನಾಡಿ ಹಿಡಿದು ಪರಿಶೀಲಿಸಿದೆ. ಆಗ ಅವರ ಹೃದಯಬಡಿತ ನಿಂತು ಹೋಗಿತ್ತು. ನನ್ನ ಸಹಾಯಕ್ಕೆ ಅಲ್ಲೇ ಪಕ್ಕದಲ್ಲಿದ್ದ ಬೈಕ್ ಸವಾರ ಬಂದರು. ನಾನು ಕೂಡಲೇ ಅವರಿಗೆ ಸಿಪಿಆರ್ ಮಾಡಿದೆ. ಅದು ನಮ್ಮ ಟ್ರಾಫಿಕ್ ತರಬೇತಿ ಸಂಸ್ಥೆಯಲ್ಲಿ ತರಬೇತಿಯ ಭಾಗವಾಗಿತ್ತು ಎಂದು ಹೇಳಿದ್ದಾರೆ.

    ನಾನು ಆ ವ್ಯಕ್ತಿಗೆ ಸುಮಾರು ಒಂದು ನಿಮಿಷದವರೆಗೆ ಸಿಪಿಆರ್ ನೀಡಿದೆ. ನಂತರ ಅವರು ಉಸಿರಾಡಿದರು. ಅವರ ಜೀವ ಉಳಿಯಿತಲ್ಲ ಎಂದು ನನಗೆ ತುಂಬಾ ಸಂತೋಷವಾಯಿತು. ನನ್ನ ಸಹೋದ್ಯೋಗಿ ಇನಾಯತ್ ಉಲ್ಲಾ ಅವರು ತ್ವರಿತವಾಗಿ ಟ್ರಾಫಿಕ್ ನಿಯಂತ್ರಿಸಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಚಂದನ್ ಹೇಳಿದರು.

    ಇದರಲ್ಲಿ ನಮ್ಮದೇನೂ ಇಲ್ಲ. ದೇವರ ದಯೆಯಿಂದ ವ್ಯಕ್ತಿ ಬದುಕುಳಿದಿದ್ದಾರೆ. ನಮ್ಮಿಂದ ಆಗಲ್ಲ ಎಂದು ಕೈಚೆಲ್ಲಿಬಿಡುತ್ತಿದ್ದೆವು. ಆದರೆ ಪ್ರಕ್ರಿಯೆ ಮುಂದುವರೆಸಿದರೆ ಅವರು ಬದುಕುತ್ತಾರೆ ಎಂಬ ಸಣ್ಣ ವಿಶ್ವಾಸವಿತ್ತು ಎಂದು ಹೇಳಿದ್ರು.

    ಚಂದನ್ ಸಿಂಗ್ ಮತ್ತು ಇನಾಯತ್ ಉಲ್ಲಾ ಖಾನ್ ಇಬ್ಬರೂ ಇಲ್ಲಿನ ಬಹದ್ದೂರ್ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೋಂಗಾರ್ಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.