Tag: Saudi Aramco

  • ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ರಿಯಾದ್‌: ಉಕ್ರೇನ್‌ ರಷ್ಯಾ ಯುದ್ಧದಿಂದಾಗಿ ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋಗೆ ಭರ್ಜರಿ ಲಾಭವಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಅರಾಮ್ಕೋ ಕಂಪನಿಯ ನಿವ್ವಳ ಆದಾಯ 48.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ನಿವ್ವಳ ಆದಾಯ ಶೇ.25.5 ಶತಕೋಟಿ ಡಾಲರ್‌ ಇತ್ತು. ಈ ಬಾರಿ ಶೇ.90 ರಷ್ಟು ಏರಿಕೆಯಾಗಿ ಇತಿಹಾಸ ಸೃಷ್ಟಿಸಿದೆ.

    ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಮಾಡಿದ ಕಂಪನಿಗಳ ಪೈಕಿ ತ್ರೈಮಾಸಿಕದಲ್ಲಿ ಸೌದಿ ಅರಾಮ್ಕೋ ಅತಿ ಹೆಚ್ಚು ಲಾಭ ಮಾಡಿದ ಕಂಪನಿ ಎಂದು ಬ್ಲೂಮ್‌ಬರ್ಗ್‌ ಹೇಳಿದೆ. ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

    ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ಉಕ್ರೇನ್‌ ಮೇಲಿನ ದಾಳಿಯಿಂದಾಗಿ ಈಗ ಸೌದಿಯಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿದೆ. ಕೋವಿಡ್‌ ಕಡಿಮೆಯಾದ ಬಳಿಕ ತೈಲ ಬೆಲೆ ನಿಧಾನವಾಗಿ ಏರಲು ಆರಂಭವಾಗಿತ್ತು. ಈ ಮಧ್ಯೆ ಯುದ್ಧದಿಂದಾಗಿ ಬೇಡಿಕೆ ಜಾಸ್ತಿಯಾಗಿ ತೈಲ ಬೆಲೆ ಗಗನಕ್ಕೆ ಏರಿತ್ತು.

    ಒಪೆಕ್‌ ದೇಶಗಳ ಪೈಕಿ ಸೌದಿ ಅರೆಬಿಯಾ ಅತಿ ದೊಡ್ಡ ತೈಲ ಉತ್ಪಾದನಾ ದೇಶವಾಗಿದೆ. ವಿಶ್ವದ ಹಲವು ದೇಶಗಳು ಮನವಿಯ ಹಿನ್ನೆಲೆಯಲ್ಲಿ ಕಳೆದ ವಾರ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿವೆ.

    ಸೌದಿ ಅರಾಮ್ಕೋ ಅಲ್ಲದೇ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಗಳಾದ ಎಕ್ಸನ್‌ಮೊಬಿಲ್‌, ಶೆವ್ರಾನ್‌ ಮತ್ತು ಬಿಪಿ ಕಂಪನಿಗಳು ಕಚ್ಚಾ ತೈಲ ಬೆಲೆ ಏರಿಕೆಯಿಂದ ಲಾಭ ಮಾಡಿಕೊಂಡಿವೆ.

    ಸರ್ಕಾರಿ ಸಿಬ್ಬಂದಿ ವೇತನ, ಸಬ್ಸಿಡಿ, ಇತರ ಅಭಿವೃದ್ಧಿ ಕೆಲಸಗಳಿಗೆ ತೈಲ ಮತ್ತು ಅನಿಲ ಮಾರಾಟದ ಮೇಲೆ ಸೌದಿ ಅರೇಬಿಯಾ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ಈಗ ಕಡಿಮೆ ಬೆಲೆಯಲ್ಲಿ ತೈಲ ನೀಡುವ ಆಫರ್‌ ನೀಡಿದ್ದರೂ ಪ್ರಸ್ತುತ 1 ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 100 ಡಾಲರ್‌ ಬೆಲೆಯಲ್ಲಿ ಮಾರಾಟವಾಗುತ್ತಿದೆ.

    ಪ್ರಸ್ತುತ ಈಗ ಸೌದಿ ಅರೇಬಿಯಾ ಪ್ರತಿ ದಿನ 10 ದಶಲಕ್ಷ ಬ್ಯಾರೆಲ್‌ ತೈಲವನ್ನು ಉತ್ಪಾದಿಸುತ್ತಿದೆ. ಪ್ರತಿ ದಿನ 13 ದಶಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡುವ ಸಾಮರ್ಥ್ಯ ನಮಗಿದೆ. ಮುಂದಿನ ದಿನಗಳಲ್ಲಿ ಈ ಗರಿಷ್ಠ ಪ್ರಮಾಣವನ್ನು ನಾವು ತಲುಪಲಿದ್ದೇವೆ ಎಂದು ಸೌದಿ ಕಿಂಗ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಹಿಂದೆ ಪ್ರಕಟಿಸಿದ್ದರು.

    ಮೂರು ವರ್ಷದ ಹಿಂದೆ ಸೌದಿ ಅರಾಮ್ಕೋ ಐಪಿಒ ಬಿಡುಗಡೆ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಲಾಭ ಬಂದ ಹಿನ್ನೆಲೆಯಲ್ಲಿ ಷೇರುದಾರರಿಗೆ 18.8 ಶತಕೋಟಿ ಡಾಲರ್‌ ಡಿವಿಡೆಂಡ್‌ ನೀಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಸೌದಿ ಅರಾಮ್ಕೋ ಕಂಪನಿಯಲ್ಲಿ ಸರ್ಕಾರವೇ ಶೇ.98 ರಷ್ಟು ಷೇರನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಲಂಡನ್‌: ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ತೈಲ ಘಟಕದ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್‌ ಗಗನಕ್ಕೆ ಏರತೊಡಗಿದೆ.

    ಇರಾನ್‌ ಬೆಂಬಲಿತ ಯೆಮೆನ್‌ನ ಹೌತಿ ಪಡೆಗಳು ಭಾನುವಾರ ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಪರಿಣಾಮ ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 70 ಡಾಲರ್‌ ಆಗಿದ್ದರೆ ಮಂಗಳವಾರ ಈ ಬೆಲೆ 71 ಡಾಲರ್‌ಗೆ ಏರಿಕೆ ಆಗಿದೆ.

    ಕೋವಿಡ್‌ 19 ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟವನ್ನು ತಲುಪಿದ್ದು ಈ ರೀತಿಯ ದಾಳಿಯಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಅಮೆರಿಕದ ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರ ಎರಡು ವರ್ಷಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

    ಕಳೆದ ವರ್ಷ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿದೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ಮತ್ತಷ್ಟು ಏರಿಕೆ: ಭಾರತ ಸೇರಿದಂತೆ ವಿಶ್ವದ ಹಲವು ತೈಲ ಆಮದು ಮಾಡುವ ರಾಷ್ಟ್ರಗಳು ತೈಲ ಉತ್ಪಾದನೆ ಮಾಡುವ ಒಪೆಕ್‌ ರಾಷ್ಟ್ರಗಳಿಗೆ ತೈಲ ಉತ್ಪಾದನೆ ಹೆಚ್ಚು ಮಾಡುವಂತೆ ಮನವಿ ಮಾಡಿದ್ದವು. ಆದರೆ ಈ ಮನವಿಯನ್ನು ಒಪೆಕ್‌ ರಾಷ್ಟ್ರಗಳು ತಿರಸ್ಕರಿಸಿತ್ತು. ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 19 ಡಾಲರ್‌ಗೆ ಇಳಿಕೆಯಾಗಿತ್ತು. ಈ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಾಷ್ಟ್ರಗಳು ಸಂಗ್ರಹಿಸಿವೆ. ಸಂಗ್ರಹ ಮಾಡಿರುವ ಕಚ್ಚಾ ತೈಲವನ್ನು ವಿತರಣೆ ಮಾಡಿ ಎಂದು ಸೌದಿ ಅರೇಬಿಯಾ ಭಾರತಕ್ಕೆ ಸೂಚಿಸಿತ್ತು.

    ದೇಶದಲ್ಲಿ ಈಗಾಗಲೇ ಪೆಟ್ರೋಲ್‌, ಡೀಸೆಲ್‌ ದರಗಳು ಗರಿಷ್ಠ ಮಟ್ಟದಲ್ಲಿವೆ. ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಾಗಲಿದೆ.

  • ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    – ಅಮೆರಿಕದ ಕಂಪನಿಯನ್ನು ಹಿಂದಿಕ್ಕಿದ ರಿಲಯನ್ಸ್‌

    ಮುಂಬೈ: ವಿಶ್ವದ 5ನೇ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ಜಗತ್ತಿನ  ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಾರುಕಟ್ಟೆ ಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್‌ ಕಾರ್ಪೊರೇಷನ್‌ ಕಂಪನಿಯನ್ನು ಹಿಂದಿಕ್ಕಿ ರಿಲಯನ್ಸ್‌ ಈ ಸಾಧನೆ ನಿರ್ಮಿಸಿದೆ. ಈಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಹೊರ ಹೊಮ್ಮಿದೆ.

    ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ಶುಕ್ರವಾರ ಶೇ.4.3ರಷ್ಟುಏರಿಕೆ ಆಗಿತ್ತು. ಇದರಿಂದ ಸಂಸ್ಥೆಗೆ 8 ಶತಕೋಟಿ ಡಾಲರ್‌ ಸೇರ್ಪಡೆಯಾಗಿ ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 189 ಶತಕೋಟಿ ಡಾಲರ್‌ಗೆ ಏರಿಕೆ ಆಗುವುದರೊಂದಿಗೆ ನಂ.2 ಪಟ್ಟವನ್ನು ಅಲಂಕರಿಸಿದೆ.

    ಎಕ್ಸೋನ್‌ಮೊಬಿಲ್‌ ಷೇರುಗಳು ಶೇ.39ರಷ್ಟು ಇಳಿಕೆಯಾಗಿದ್ದು, 1 ಶತಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಕೋವಿಡ್‌ 19 ನಿಂದಾಗಿ ತೈಲ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ಎಕ್ಸೋನ್‌ಮೊಬಿಲ್‌ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

    1.75 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಅರಾಮ್ಕೋ ವಿಶ್ವದ ನಂ.1 ಇಂಧನ ಕಂಪನಿಯಾಗಿದೆ. ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಶೇ.80ರಷ್ಟು ಆದಾಯ ಇಂಧನ ಉದ್ಯಮದಿಂದಲೇ ಹರಿದುಬಂದಿದೆ. ಇದನ್ನೂ ಓದಿ: ಗೂಗಲ್‌ ಜೊತೆ ಸೇರಿ ಕಡಿಮೆ ಬೆಲೆಗೆ ಜಿಯೋ ಫೋನ್‌ – ಕಡಿಮೆ ಬೆಲೆಗೆ ಫೋನ್‌ ನಿರ್ಮಾಣ ಹೇಗೆ?

    2019ರ ಅಗಸ್ಟ್ ತಿಂಗಳಿನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ, ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿ ಹೊರಹೊಮ್ಮಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

  • ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಮುಂಬೈ: ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಸಂಬಂಧ ಸೌದಿ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ  ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಇದನ್ನೂ ಓದಿ: ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

    ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮಥ್ರ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

    ತೈಲ, ಟೆಲಿಕಾಂ, ರಿಟೇಲ್ ಈ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವ ದೇಶದ ಏಕೈಕ ಕಂಪನಿ ರಿಲಯನ್ಸ್ ಎಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ತಿಳಿಸಿದರು.