Tag: saudi arabia

  • ಸೌದಿಯಲ್ಲಿ ಸಿಲುಕಿದ್ದ ದಾವಣಗೆರೆಯ ಮಹಿಳೆ ಸ್ವದೇಶಕ್ಕೆ ವಾಪಸ್

    ಸೌದಿಯಲ್ಲಿ ಸಿಲುಕಿದ್ದ ದಾವಣಗೆರೆಯ ಮಹಿಳೆ ಸ್ವದೇಶಕ್ಕೆ ವಾಪಸ್

    ದಾವಣಗೆರೆ: ನಗರದ ಮಹಿಳೆ ಉದ್ಯೋಗಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಅಣ್ಣನ ಮನೆಯಲ್ಲಿ ಬಿಟ್ಟು ಸೌದಿ ಅರೇಬಿಯಾಕ್ಕೆ ತೆರಳಿದ್ದು, ಊರಿಗೆ ಮರಳಲೂ ಬಿಡದೆ ಕೂಡಿಹಾಕಲಾಗಿತ್ತು. ಇದೀಗ ಸೌದಿಯಲ್ಲಿರುವ ಕನ್ನಡಿಗರ ಸಹಾಯದಿಂದ ಮಹಿಳೆಯನ್ನು ಸ್ವದೇಶಕ್ಕೆ ಕರೆತರಲಾಗಿದೆ.

    ದಾವಣಗೆರೆ ನಗರದ ಆಜಾದ್‍ನಗರದ ಎರಡನೇ ಮುಖ್ಯರಸ್ತೆ, ಐದನೇ ಅಡ್ಡರಸ್ತೆಯ ನಿವಾಸಿ ಮಕ್ಬುಲ್‍ಸಾಬ್ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಮಹಿಳೆಯ ಬಳಿ ಇರುವ ವಿಸಾ, ಪಾಸ್ ಪೋರ್ಟ್ ಕಸಿದುಕೊಂಡು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದರ ಬಗ್ಗೆ ಪಬ್ಲಿಕ್ ಟಿವಿ ಸಹ ವರದಿ ಮಾಡಿತ್ತು. ಇದೀಗ ಸೌದಿಯಲ್ಲಿರುವ ಕನ್ನಡಿಗರು ಮಾಡಿದ ಹೋರಾಟದ ಫಲವಾಗಿ, ಭಾರತ ಸರ್ಕಾರ ಮತ್ತು ಸೌದಿ ಅರೇಬಿಯಾ ಸರ್ಕಾರ ಸ್ಪಂದಿಸಿದ್ದರಿಂದ ಮಹಿಳೆ ಭಾರತಕ್ಕೆ ಮರಳಿದ್ದಾರೆ. ಕಳೆದ ಶನಿವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

    ಮಕ್ಬುಲ್ ಸಾಬ್ ಜುಬೇದಾಬಿ ದಂಪತಿಗೆ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಬಳಿಕ ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಟ್ಟಿರಲಿಲ್ಲ, ವೇತನವನ್ನೂ ನೀಡಿರಲಿಲ್ಲ. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್‍ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

    ಬಳಿಕ ಸೌದಿಯಾ ರಿಯಾದ್‍ನಲ್ಲಿ ಇರುವ ಪಡುಬಿದ್ರಿಯ ಹಮೀದ್ ಇವರಿಗೆ ಸ್ಪಂದಿಸಿದ್ದರು. ಅವರಿಗೆ ದಮಾಮ್‍ನಲ್ಲಿರುವ ಕಲಬುರ್ಗಿಯ ಯಾಸಿನ್ ಕೈ ಜೋಡಿಸಿದ್ದರು. ಈ ಇಬ್ಬರ ಪ್ರಯತ್ನದಿಂದ ಸೌದಿ ರಾಜಧಾನಿ ರಿಯಾದ್‍ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‍ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು. ಸಕಾಕಹ್‍ನಲ್ಲಿ ಇರುವ ಕೇರಳದ ಸಲಿಂ ಎಂಬುವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜೊತೆಗೆ ಅಲ್ಲಿ ಹ್ಯೂಮನ್ ರೈಟ್ಸ್ ಕಮಿಷನ್‍ನ ಗಮನಕ್ಕೆ ತರಲಾಗಿತ್ತು. ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್ ಬಾನು ಅವರ ಕಫೀಲ್ ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾರೆ. ಬಳಿಕ ಶುಕ್ರವಾರ ಸಕಾಕಹ್‍ನಿಂದ ಕತಾರ್‍ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.

  • ವಿದೇಶಿಯರಿಗೆ ಹಜ್ ಯಾತ್ರೆ ಇಲ್ಲ – 60 ಸಾವಿರ ಮಂದಿಗೆ ಮಾತ್ರ ಅನುಮತಿ

    ವಿದೇಶಿಯರಿಗೆ ಹಜ್ ಯಾತ್ರೆ ಇಲ್ಲ – 60 ಸಾವಿರ ಮಂದಿಗೆ ಮಾತ್ರ ಅನುಮತಿ

    ರಿಯಾದ್: ಈ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ ಪವಿತ್ರ ಹಜ್ ಯಾತ್ರೆಯನ್ನು ವಿದೇಶಿಯರಿಗೆ ನಿರ್ಬಂಧಿಸಲಾಗಿದೆ. ತನ್ನ ದೇಶದ ಕೇವಲ 60 ಸಾವಿರ ಮಂದಿಗೆ ಮಾತ್ರ ಅನುಮತಿ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಹೇಳಿದೆ.

    ಹಜ್ ಸಚಿವಾಲಯ ಮತ್ತು ಉಮ್ರಾ ಈ ನಿರ್ಧಾರವನ್ನು ಸೌದಿ ಸರ್ಕಾರದ ಪ್ರೆಸ್ ಏಜೆನ್ಸಿ ಪ್ರಕಟಿಸಿದೆ. ಕಳೆದ ವರ್ಷವೂ ಕೋವಿಡ್ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಯಾತ್ರಿಕರು ಭಾಗವಹಿಸಿದ್ದರು.

    ಜುಲೈ ಮಧ ಭಾಗದಲ್ಲಿ ಈ ವರ್ಷದ ಹಜ್ ಯಾತ್ರೆ ಆರಂಭವಾಗಲಿದ್ದು, 18 ರಿಂದ 65 ವಯಸ್ಸಿನ ಯಾತ್ರಿಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ ಈ ಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸಚಿವಾಲಯ ತಿಳಿಸಿದೆ.  ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    160 ವಿವಿಧ ರಾಷ್ಟ್ರಗಳ ಮೂರನೇ ಎರಡರಷ್ಟು ವಿದೇಶಿ ನಿವಾಸಿಗಳು ಸಾಮಾನ್ಯವಾಗಿ ಹಜ್ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಕಳೆದ ವರ್ಷ ವಿದೇಶಿಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ನಿರ್ಬಂಧ ಜಾರಿಯಾಗುವಷ್ಟರಲ್ಲೇ 1 ಸಾವಿರ ಮಂದಿ ಹಜ್ ಯಾತ್ರೆ ಮಾಡಲು ಸೌದಿ ಅರೇಬಿಯಾಗೆ ಬಂದಿದ್ದರು. ಅವರೆಲ್ಲ ಸೌದಿ ಅರೇಬಿಯಾ ಸುತ್ತಮುತ್ತ ಇದ್ದು ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ.

  • ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಇಸ್ಲಾಮಾಬಾದ್: ಸೌದಿ ಅರೇಬಿಯಾ ಚೀನಾದ ಕೊರೊನಾ ಲಸಿಕೆ ಪಡೆದ ನಾಗರಿಕರಿಗೆ ಪ್ರವೇಶ ನಿರಾಕರಿಸಿದ್ದರಿಂದ ಪಾಕಿಸ್ತಾನದ ಜನ ಆತಂಕಕ್ಕೆ ಒಳಗಾಗಿದ್ದಾರೆ.

    ಚೀನಾ ಅಭಿವೃದ್ಧಿ ಪಡಿಸಿದ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ನೋಂದಾಯಿತವಾಗಿದ್ದರೂ ಸೌದಿ ಅರೇಬಿಯಾ ಈ ಲಸಿಕೆಗಳನ್ನು ಪಡೆದವರಿಗೆ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾ ವ್ಯಾಕ್ಸಿನ್ ಪಡೆದ ಇಮ್ರಾನ್ ಖಾನ್‍ಗೆ ಕೊರೊನಾ ಪಾಸಿಟಿವ್

    ಮಧ್ಯಪ್ರಾಚ್ಯದ ಕೆಲ ರಾಷ್ಟ್ರಗಳು ಚೀನಾದ ಲಸಿಕೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ನಾವು ಬೇರೆ ಲಸಿಕೆಯನ್ನು ಜನತೆಗೆ ನೀಡಬೇಕೆಂದು ಎಂದು ಶೇಖ್ ರಶೀದ್ ಪ್ರಧಾನಿ ಇಮ್ರಾನ್ ಖಾನ್ ಅವರಲ್ಲಿ ಹೇಳಿದ್ದಾರೆ.

    ಫೈಝರ್, ಅಸ್ಟ್ರಾಜೆನೆಕಾ, ಮಾಡೆರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತಯಾರಿಸಿದ ಲಸಿಕೆಯನ್ನು ಪಡೆದವರಿಗೆ ಪ್ರವೇಶ ನೀಡುವುದಾಗಿ ಸೌದಿ ಅರೇಬಿಯಾ ಹೇಳಿದೆ. ಇದನ್ನೂ ಓದಿ: ಭಾರತ ಆಯ್ತು ಈಗ ಚೀನಾದ ಕುತಂತ್ರಿ ನಡೆಯ ವಿರುದ್ಧ ಮ್ಯಾನ್ಮಾರ್‌ ಕಿಡಿ

    ಸೌದಿ ಅರೇಬಿಯಾದ ಈ ನಿರ್ಧಾರದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು, ಪವಿತ್ರ ಹಜ್ ಯಾತ್ರೆಗೆ ತೆರಳುವ ಮಂದಿಗೆ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಆದ್ಯತೆಯ ಆಧಾರದಲ್ಲಿ ಈ ಮಂದಿಗೆ ಫೈಝರ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

    ಚೀನಾದ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದರೂ ಅದರ ಪರಿಣಾಮಕಾರಿತ್ವದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಏಪ್ರಿಲ್‍ನಲ್ಲಿ ಚೀನಾದ ರೋಗ ನಿಯಂತ್ರಣ ಸಂಸ್ಥೆ ಚೀನಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಪರಿಣಾಕಾರಿಯಲ್ಲ. ಲಸಿಕೆಗೆ ಕೆಲ ಸುಧಾರಣೆಯ ಅಗತ್ಯವಿದೆ ಎಂದು ಹೇಳಿತ್ತು.

  • ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    – ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡಲ್ಲ
    – ಕೇಂದ್ರದ ನಿರ್ಧಾರವನ್ನು ಖಚಿತ ಪಡಿಸಿದ 2 ಸಂಸ್ಕರಣಾ ಘಟಕಗಳು

    ನವದೆಹಲಿ: ಕಚ್ಚಾ ತೈಲ ವಿಚಾರದಲ್ಲಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೇರೆ ದೇಶಗಳಿಂದ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.

    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ರೀತಿಯ ಸೂಚನೆ ಸರ್ಕಾರದಿಂದ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.

    ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಶೇ.84ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಿಂದಲೇ ಆಮದಾಗುತ್ತದೆ. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಮಧ್ಯಪ್ರಾಚ್ಯದ ದೇಶಗಳಿಂದ ಬರುವ ತೈಲ ಬಹಳ ಅಗ್ಗ.

    ಭಾರತದ ಮನವಿಯ ಹೊರತಾಗಿಯೂ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಸೌದಿ ಇಂಧನ ಸಚಿವರು ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಬಹಳ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಬಳಸಿ ಎಂದು ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಗೆ ಮುಂದಾಗಿದೆ.  ಇದನ್ನೂ ಓದಿ: ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2020ರಲ್ಲಿ ತೈಲ ಬೇಡಿಕೆ ಕುಸಿತಗೊಂಡರೂ ನಾವು ಅವರ ಜೊತೆ ಮಾಡಿಕೊಂಡಿದ್ದ ತೈಲ ಆಮದನ್ನು ರದ್ದು ಮಾಡಿರಲಿಲ್ಲ. ಹೀಗಾಗಿ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

    ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿದೆ. ಇರಾಕ್‌ ಈಗಾಗಲೇ ವಾರ್ಷಿಕ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

    ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಒಟ್ಟಿಗೆ ಇತ್ತು. ಆದರೆ ಈಗ ಕೆಲ ದೇಶಗಳು ಅವರ ಆರ್ಥಿಕತೆಗಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿ ದೂರಿದ್ದಾರೆ.

  • ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ಲಂಡನ್‌: ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ತೈಲ ಘಟಕದ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್‌ ಗಗನಕ್ಕೆ ಏರತೊಡಗಿದೆ.

    ಇರಾನ್‌ ಬೆಂಬಲಿತ ಯೆಮೆನ್‌ನ ಹೌತಿ ಪಡೆಗಳು ಭಾನುವಾರ ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಪರಿಣಾಮ ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 70 ಡಾಲರ್‌ ಆಗಿದ್ದರೆ ಮಂಗಳವಾರ ಈ ಬೆಲೆ 71 ಡಾಲರ್‌ಗೆ ಏರಿಕೆ ಆಗಿದೆ.

    ಕೋವಿಡ್‌ 19 ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟವನ್ನು ತಲುಪಿದ್ದು ಈ ರೀತಿಯ ದಾಳಿಯಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಅಮೆರಿಕದ ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರ ಎರಡು ವರ್ಷಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

    ಕಳೆದ ವರ್ಷ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿದೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ಮತ್ತಷ್ಟು ಏರಿಕೆ: ಭಾರತ ಸೇರಿದಂತೆ ವಿಶ್ವದ ಹಲವು ತೈಲ ಆಮದು ಮಾಡುವ ರಾಷ್ಟ್ರಗಳು ತೈಲ ಉತ್ಪಾದನೆ ಮಾಡುವ ಒಪೆಕ್‌ ರಾಷ್ಟ್ರಗಳಿಗೆ ತೈಲ ಉತ್ಪಾದನೆ ಹೆಚ್ಚು ಮಾಡುವಂತೆ ಮನವಿ ಮಾಡಿದ್ದವು. ಆದರೆ ಈ ಮನವಿಯನ್ನು ಒಪೆಕ್‌ ರಾಷ್ಟ್ರಗಳು ತಿರಸ್ಕರಿಸಿತ್ತು. ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 19 ಡಾಲರ್‌ಗೆ ಇಳಿಕೆಯಾಗಿತ್ತು. ಈ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಾಷ್ಟ್ರಗಳು ಸಂಗ್ರಹಿಸಿವೆ. ಸಂಗ್ರಹ ಮಾಡಿರುವ ಕಚ್ಚಾ ತೈಲವನ್ನು ವಿತರಣೆ ಮಾಡಿ ಎಂದು ಸೌದಿ ಅರೇಬಿಯಾ ಭಾರತಕ್ಕೆ ಸೂಚಿಸಿತ್ತು.

    ದೇಶದಲ್ಲಿ ಈಗಾಗಲೇ ಪೆಟ್ರೋಲ್‌, ಡೀಸೆಲ್‌ ದರಗಳು ಗರಿಷ್ಠ ಮಟ್ಟದಲ್ಲಿವೆ. ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಾಗಲಿದೆ.

  • ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

    ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಿದ್ದು, ಇಂದು ಸಹ ಏರಿಕೆಯಾಗಿದೆ. ಇಂದು ಪೆಟ್ರೋಲ್‌ ಬೆಲೆ 70 ಪೈಸೆ ಏರಿಕೆ ಆಗಿದ್ದರೆ ಡೀಸೆಲ್‌ ಬೆಲೆ 27 ಪೈಸೆ ಏರಿಕೆಯಾಗಿದೆ.

    ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90.53 ಆಗಿದ್ದರೆ ಡೀಸೆಲ್‌ ಬೆಲೆ 82.40 ರೂ. ಆಗಿದೆ.

    ಒಂದು ಲೀಟರ್‌ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 87.60 ರೂ. ಇದ್ದರೆ ಡೀಸೆಲ್‌ ಬೆಲೆ 77.73 ರೂ. ಇದೆ. ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.12 ರೂ. ಇದ್ದರೆ ಡೀಸೆಲ್‌ ಬೆಲೆ 84.63 ರೂ. ಇದೆ.

    ಸೋಮವಾರ ಬ್ರೆಂಟ್‌ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 60 ಡಾಲರ್‌(ಅಂದಾಜು 4,300 ರೂ.) ತಲುಪಿತ್ತು.  ಈ ದರ ಈ ವರ್ಷದ ಗರಿಷ್ಠವಾಗಿದ್ದು, ಬೆಲೆ ಹೆಚ್ಚಳ ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.

    ಬೆಲೆ ಏರಿಕೆ ಯಾಕೆ?
    ದೇಶದ ಕಚ್ಚಾ ತೈಲ ಬೇಡಿಕೆಯ ಶೇ.84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿತ್ತು.

    ಕೋವಿಡ್‌ ಲಸಿಕೆ ಲಭ್ಯತೆ ಮತ್ತು ಕೋವಿಡ್‌ 19 ಸೋಂಕಿತರ ಸಂಖ್ಯೆ ಇಳಿಕೆ ಆಗುತ್ತಿದ್ದಂತೆ ವಿಶ್ವದೆಲ್ಲೆಡೆ ಆರ್ಥಿಕ ಚಟುವಟಿಕೆಗೆಗಳು ಮತ್ತೆ ಆರಂಭವಾಗಿದೆ. 2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 66 ಡಾಲರ್( ಅಂದಾಜು 4,800) ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಲಾಕ್‌ಡೌನ್, ಸಂಚಾರ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ 2020ರ ಏಪ್ರಿಲ್‌ ವೇಳೆಗೆ 19 ಡಾಲರ್‌(ಅಂದಾಜು 1,300 ರೂ.)ಗೆ ಇಳಿಕೆ ಕಂಡಿತ್ತು.

    ಕೋವಿಡ್‌ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್‌ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್‌ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

    ಅಮೆರಿಕದ ಟ್ರಂಪ್‌ ಆಡಳಿತ ಇರಾನ್ ಮೇಲೆ ತೈಲ ಖರೀದಿ ಮತ್ತು ವ್ಯಾಪಾರ ಸಂಬಂಧ ನಿರ್ಬಂಧ ಹೇರಿತ್ತು. ಆದರೆ ಹೊಸದಾಗಿ ಅಧ್ಯಕ್ಷರಾಗಿರುವ ಜೋ ಬೈಡನ್‌ ಸರ್ಕಾರ ಇರಾನ್‌ ಮೇಲಿನ ನಿರ್ಬಂಧ ತೆಗೆದು ಹಾಕಿದರೆ ತೈಲ ಉತ್ಪಾದನೆ ಹೆಚ್ಚಾಗಿ ದರ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಉಗ್ರರ ಪರ ಗೋಡೆ ಬರಹ ಬರೆದವರಿಗೆ ಸೌದಿ ಅರೇಬಿಯಾದ ಉಗ್ರರ ಲಿಂಕ್

    ಉಗ್ರರ ಪರ ಗೋಡೆ ಬರಹ ಬರೆದವರಿಗೆ ಸೌದಿ ಅರೇಬಿಯಾದ ಉಗ್ರರ ಲಿಂಕ್

    – ಲುಕ್ ಔಟ್ ನೋಟಿಸ್‍ಗೆ ಪೊಲೀಸರ ಸಿದ್ಧತೆ

    ಮಂಗಳೂರು: ನಗರದ ಎರಡು ಕಡೆ ಬರೆದ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸದಂತೆ ತನಿಖೆ ಮುಂದುವರಿದಿದೆ. ಈವರೆಗೂ ಒಟ್ಟು ಮೂವರು ಆರೋಪಿಗಳ ಬಂಧನವಾಗಿದ್ದು, ಹಲವು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಮಂಗಳೂರು ಸೇರಿದಂತೆ ವಿವಿಧ ಕಡೆ ವಿಧ್ವಂಸಕಕಾರಿ ಕೃತ್ಯ ಎಸಗುವ ಸಲುವಾಗಿ ಸೌದಿ ಅರೇಬಿಯಾದಲ್ಲಿ ಒಂದು ಉಗ್ರರ ತಂಡ ಕಾರ್ಯನಿರ್ವಹಿಸುತ್ತಿರೋದು ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಬಂಧಿತರಾಗಿರೋ ಆರೋಪಿಗಳಾದ ಮಹಮ್ಮದ್ ಶಾರೀಖ್ ಮತ್ತು ಮಾಝ್ ಮುನೀರ್ ಅಹ್ಮದ್ ಇಬ್ಬರು ಕೂಡ ಗೋಡೆಬರಹಕ್ಕೂ ಮುನ್ನ ಸೌದಿ ಅರೇಬಿಯಾದಲ್ಲಿರುವ ವ್ಯಕ್ತಿಗಳೊಂದಿಗೆ ಮಾತನಾಡಿರೋದು ಬೆಳಕಿಗೆ ಬಂದಿದೆ. ಇನ್ನು ಇವರಿಬ್ಬರು ಮಾತನಾಡಿದ ವ್ಯಕ್ತಿಗಳು ಉಗ್ರರೇ ಇರಬಹುದಾ ಅನ್ನೋ ಅನುಮಾನ ಪೊಲೀಸರಿಗೆ ಉಂಟಾಗಿದ್ದು, ಆ ವ್ಯಕ್ತಿಗಳ ವಿವರ ಪಡೆದು ಲುಕ್ ಔಟ್ ನೋಟಿಸ್ ಹೊರಡಿಸುವ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಉಗ್ರ ಪರ ಗೋಡೆ ಬರಹ ಬರೆದ ಆರೋಪಿಗಳಾದ ಶಾರೀಖ್ ಮತ್ತು ಮುನೀರ್ ನ ಮೊಬೈಲ್ ನಲ್ಲಿದ್ದ ವಾಟ್ಸಪ್ ಗ್ರೂಪ್ ನ ಆಡ್ಮಿನ್ ಗಳ ಬಂಧನಕ್ಕೆ ತೆರಳಲಾಗಿದೆ. ಇಡೀ ಭಾರತಾದ್ಯಂತ ವಿವಿಧ ರಾಜ್ಯಗಳ ಸದಸ್ಯರು ಈ ಗ್ರೂಪ್ ನಲ್ಲಿದ್ರು ಅನ್ನೋ ಸ್ಟೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಮಹಮ್ಮದ್ ಶಾರೀಖ್ ನ ಚಿಕ್ಕಪ್ಪ ಸಾದತ್ ನ ವಿಚಾರಣೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿದೆ. ಸದ್ಯ ಸಾದತ್ ಗೆ ಜಾಮೀನು ಮಂಜೂರಾಗಿದ್ದು ಆತ ನೀಡಿದ ಸ್ಟೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ.

    ಗೋಡೆ ಬರಹ ಬರೆದ ಬಳಿಕ ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದ ಈ ಸಾದತ್. ಇವರ ಇಂತಹ ದೇಶದ್ರೋಹಿ ಚಟುವಟಿಕೆಗೆ ಹಣ ಪೂರೈಕೆ ಮಾಡುತ್ತಿದ್ದ ಮಹಮದ್ ಶಾರೀಕ್ ನನ್ನು ಟೆರರಿಸ್ಟ್ ಅಂತಾ ಕರೆಯುತ್ತಿದ್ದರು ಅಂತಾ ಮಾಹಿತಿ ನೀಡಿದ್ದಾನೆ.

    ಮಂಗಳೂರು ಸಿಸಿಬಿ ಪೊಲೀಸರು, ನಗರ ಕೇಂದ್ರ ಎಸಿಪಿ ಜಗದೀಶ್ ನೇತೃತ್ವದ ತಂಡ ಹಾಗೂ ವಿಶೇಷ ತಂಡಗಳು ವಿವಿಧ ಕಡೆ ಕಾರ್ಯಾಚರಣೆ ನಡೆಸುತ್ತಿವೆ. ಈ ಪ್ರಕರಣದಲ್ಲಿ ಉಗ್ರರ ಲಿಂಕ್ ಬಗ್ಗೆ ಮಾಹಿತಿ ಸಿಕ್ಕಿದ್ದು ಎನ್.ಐ.ಎ ಕೂಡ ಎಂಟ್ರಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.

     

  • ಪತ್ನಿ, ಮಗಳನ್ನು ಸೌದಿಯಲ್ಲಿಯೇ ಬಿಟ್ಟು ಮಂಗ್ಳೂರಿಗೆ ಬಂದು ತಲಾಖ್ ನೀಡಿದ!

    ಪತ್ನಿ, ಮಗಳನ್ನು ಸೌದಿಯಲ್ಲಿಯೇ ಬಿಟ್ಟು ಮಂಗ್ಳೂರಿಗೆ ಬಂದು ತಲಾಖ್ ನೀಡಿದ!

    ಮಂಗಳೂರು: ದೇಶದಲ್ಲಿ ಮೂರು ವರ್ಷಗಳ ಹಿಂದೆ ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ್ದರೂ ಹಲವು ಪ್ರಕರಣಗಳು ವಿವಿಧ ರಾಜ್ಯಗಳಿಂದ ಹೊರಬರುತ್ತಲೇ ಇವೆ. ಅಂತದ್ದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

    ಆರೋಪಿಯನ್ನು ಶೇಖ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಕಳುಹಿಸುವ ಮೂಲಕ ತಲಾಖ್ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಸಲೀಂನನ್ನು ಶಿರ್ವದಲ್ಲಿ ಬಂಧಿಸಿದ್ದಾರೆ.

    ಶಿರ್ವ ನಿವಾಸಿಯಾಗಿರುವ ಸಲೀಂ 2010ರಲ್ಲಿ ಸ್ವಪ್ನಾಜ್ ಎಂಬಾಕೆಯನ್ನು ವರಿಸಿದ್ದನು. ಈ ದಂಪತಿಗೆ ಹೆಣ್ಣು ಮಗಳೊಬ್ಬಳು ಕೂಡ ಇದ್ದು, ಕುಟುಂಬ ಸೌದಿ ಅರೇಬಿಯಾದಲ್ಲಿ ನೆಲೆಸಿತ್ತು. ಇದೇ ವರ್ಷ ಜುಲೈ ತಿಂಗಳಲ್ಲಿ ಪತ್ನಿ ಹಾಗೂ ಮಗಳನ್ನು ಸೌದಿಯಲ್ಲೇ ಬಿಟ್ಟು ಸಲೀಂ ಭಾರತಕ್ಕೆ ಬಂದಿದ್ದಾನೆ. ಈತನಿಗೆ ಅಕ್ರಮ ಸಂಬಂಧ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

    ಇತ್ತ ತಾಯ್ನಾಡಿಗೆ ಬಂದ ಬಳಿಕ ಸಲೀಂ ತನ್ನ ಪತ್ನಿಗೆ ಮೆಸೇಜ್ ಒಂದನ್ನು ಕಳುಹಿಸಿದ್ದಾನೆ. ಮೆಸೇಜ್ ನಲ್ಲಿ ನಾನು ನಿನಗೆ ತಲಾಖ್ ನೀಡಿರುವುದಾಗಿ ಬರೆದುಕೊಂಡಿದ್ದು, ಈ ಮೂಲಕ ತಲಾಖ್ ನೀಡಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ಮತ್ತೊಬ್ಬ ಮಹಿಳೆಯ ಜೊತೆ ಇದ್ದ ಫೋಟೋವನ್ನು ಕೂಡ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.

    ಪತಿಯ ಇ-ಮೇಲ್ ಮಸೇಜ್ ನೋಡಿ ದಂಗಾದ ಸ್ವಪ್ನಾಜ್ ಕೂಡಲೇ ಪೊಲೀಸರಿಗೆ ಇ-ಮೇಲ್ ಮೂಲಕವೇ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಆರೋಪಿ ಸಲೀಂನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಕೋವಿಡ್ 19 ಟೆಸ್ಟ್ ಗೆ ಒಳಪಡಿಸಿ, ನೆಗೆಟಿವ್ ಎಂದು ವರದಿ ಬಂದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

  • ಆಸ್ಪತ್ರೆಯಿಂದ ಬಂದ ತಕ್ಷಣ ಮಗನನ್ನು ತಬ್ಬಿಕೊಳ್ಳೋಕ್ಕೆ ಆಗದೆ ಕಣ್ಣೀರಿಟ್ಟ ವೈದ್ಯ ತಂದೆ: ವಿಡಿಯೋ

    ಆಸ್ಪತ್ರೆಯಿಂದ ಬಂದ ತಕ್ಷಣ ಮಗನನ್ನು ತಬ್ಬಿಕೊಳ್ಳೋಕ್ಕೆ ಆಗದೆ ಕಣ್ಣೀರಿಟ್ಟ ವೈದ್ಯ ತಂದೆ: ವಿಡಿಯೋ

    – ಕೊರೊನಾ ಜಾಗೃತಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

    ರಿಯಾದ್: ಸೌದಿ ಅರೇಬಿಯಾದಲ್ಲಿ ವೈದ್ಯ ತಂದೆಯೊಬ್ಬರು ಆಸ್ಪತ್ರೆಯಿಂದ ಬಂದ ತಕ್ಷಣ ತನ್ನ ಮಗನನ್ನು ತಬ್ಬಿಕೊಳ್ಳುವುದಕ್ಕೆ ಆಗದೇ ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ವೈದ್ಯರು ತಮ್ಮ ಮನೆಗೆ ಬರುತ್ತಾರೆ. ಬಂದ ತಕ್ಷಣ ಮುಗ್ಧ ಬಾಲಕ ಓಡುತ್ತಾ ತನ್ನ ತಂದೆಯನ್ನು ತಬ್ಬಿಕೊಳ್ಳಲು ಬರುತ್ತಾನೆ. ಮಗ ಓಡಿ ಬರುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ಆತನನ್ನು ತಡೆದು ಕಣ್ಣೀರು ಹಾಕುತ್ತಾ ಕೆಳಗೆ ಕುಳಿತರು. ಮೈಕ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ‘ಸೌದಿ ಅರೇಬಿಯಾದಲ್ಲಿ ವೈದ್ಯರೊಬ್ಬರು ಆಸ್ಪತ್ರೆಯಿಂದ ತಮ್ಮ ಮನೆಗೆ ಹೋಗುತ್ತಾರೆ. ಆಗ ಅವರು ತಮ್ಮ ಮಗನನ್ನು ದೂರ ಇರು ಎಂದು ಹೇಳಿ ಅಳುತ್ತಾ ಕೆಳಗೆ ಕೂತರು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    https://twitter.com/Doranimated/status/1243264320110235649

    ಮಾಧ್ಯಮವೊಂದರ ಪ್ರಕಾರ ಈ ವಿಡಿಯೋವನ್ನು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಾಸಿರ್ ಅಲಿ ಎಂಬವರು ಚಿತ್ರೀಕರಿಸಿದ್ದಾರೆ. ಸದ್ಯ ನಾಸೀರ್ ಕಿಂಗ್ ಸಲ್ಮಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇದು ಹೊರತಾಗಿ ಅವರದೇ ಆದ ಸ್ವಂತ ಕ್ಲಿನಿಕ್ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲು ಮನೆಗೆ ಹೋದ ತಕ್ಷಣ ನನ್ನ ಪತ್ನಿಯನ್ನು ಕರೆದು ಮಗನನ್ನು ತಡೆಯಲು ಹೇಳುತ್ತೇನೆ. ಈ ವೇಳೆ ವೈದ್ಯಕೀಯ ಬಟ್ಟೆಯನ್ನು ಬದಲಿಸಿ ಸ್ವತಃ ಸ್ಯಾನಿಟೈಸ್ ಮಾಡಿ ಸ್ನಾನ ಮಾಡುತ್ತೇನೆ. ಇದು ಆದ ಬಳಿಕ ನಾನು ನನ್ನ ಮಗನನ್ನು ಭೇಟಿ ಮಾಡಿ ಆತನ ಜೊತೆ ಕಾಲ ಕಳೆಯುತ್ತೇನೆ ಎಂದರು.

    ಈ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಭಾವುಕರಾಗಿದ್ದಾರೆ. ಕೊರೊನಾ ಸೋಂಕಿತರ ಪ್ರಾಣ ಉಳಿಸಲು ವೈದ್ಯರಿಗೆ ಸಮಯ ಹೋಗುತ್ತಿರುವುದೇ ಗೊತ್ತಿಲ್ಲ. ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೂ ಸೋಂಕು ತಗಲುವ ಸಾಧ್ಯತೆಗಳಿವೆ. ಹಾಗಾಗಿ ಜನರಿಗೆ ಜಾಗೃತಿ ಮೂಡಿಸಲು ನಾಸಿರ್ ಈ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

  • ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    – ಮನೆ ಮಂದಿಯೆಲ್ಲಾ ಆಸ್ಪತ್ರೆಗೆ ದಾಖಲು

    ಮುಂಬೈ: ಒಂದೇ ಕುಟುಂಬದ 12 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ನಡೆದಿದೆ.

    ಈ ಕುಟುಂಬದ ನಾಲ್ಕು ಜನಕ್ಕೆ ಮೊದಲು ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅವರನ್ನು ಮಾರ್ಚ್ 19ರಂದು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಾಲ್ವರು ಸೌದಿ ಅರೇಬಿಯಾದಲ್ಲಿರುವ ಹಜ್‍ಗೆ ಭೇಟಿ ನೀಡಿ ವಾಪಸ್ ಬಂದಿದ್ದರು ಎಂದು ತಿಳಿದು ಬಂದಿತ್ತು.

    ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದಾದ ನಂತರ ಗುರುವಾರ ಇದೇ ಕುಟುಂಬದ ಉಳಿದ ಮೂವರಿಗೂ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ. ಈ ಮೂಲಕ ಮೊದಲ ನಾಲ್ಕು ಜನ ಮತ್ತು ನಂತರ ಐದು ಜನ ನೆನ್ನೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 12 ಜನ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾರೆ.

    ಈ 12 ಜನರಲ್ಲಿ 11 ಜನ ಮೂಲತಃ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದವರಾಗಿದ್ದು, ಇದೇ ಕುಟುಂಬದ ಮತ್ತೋರ್ವ ಹೆಣ್ಣು ಮಗಳು ಮದುವೆಯಾಗಿ ಕೊಲ್ಹಾಪುರ ಜಿಲ್ಲೆಯ ಪೆಥ್ವಾಡ್ಗಾಂವ್ ಊರಲ್ಲಿ ಇದ್ದರು. ಆದರೆ ಕುಟುಂಬವರು ಹಜ್‍ಗೆ ಹೋಗಿ ಬಂದಿದ್ದಾರೆ ಎಂದು ಆಕೆಯು ಕೂಡ ತವರು ಮನೆಗೆ ಬಂದು ಹೋಗಿದ್ದಳು. ಈ ಕಾರಣದಿಂದ ಆಕೆಗೆ ಕೂಡ ವೈರಸ್ ತಗುಲಿದ್ದು, ಆಕೆಯೂ ಈಗ ಆಸ್ಪತ್ರೆ ಪಾಲಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಾಂಗ್ಲಿ ಜಿಲ್ಲೆಯ ಆರೋಗ್ಯಾಧಿಕಾರಿ ಸಂಜಯ್ ಸಲುಂಖೆ, ಈ ಕೊರೊನಾ ಪೀಡಿತ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಅವರ 11 ಜನ ಸಂಬಂಧಿಕರ ಬ್ಲಡ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿಯ ಫಲಿತಾಂಶ ನಮಗೆ ಇಂದು ಸಂಜೆ ಸಿಗುತ್ತದೆ. ನಮ್ಮ ಇನ್ನೊಂದು ವೈದ್ಯರ ತಂಡವನ್ನು ಇಸ್ಲಾಂಪುರ ಕಳುಹಿಸಿದ್ದೇವೆ. ಅವರು ಆ ಗ್ರಾಮದಲ್ಲಿ ಈ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದ 23 ಜನರ ಬ್ಲಡ್ ಸ್ಯಾಂಪಲ್ ತರುತ್ತಿದ್ದಾರೆ. ಈ 23 ಜನರನ್ನು ಆಗಾಲೇ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಮೊದಲು ಈ ಕುಟುಂಬದ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದ ತಕ್ಷಣ ಅವರ ಕುಟುಂಬದ 27 ಜನರನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು. ಈ 27 ಜನರಲ್ಲಿ 7 ಜನರ ಸ್ಯಾಂಪಲ್ ಅನ್ನು ಮಾರ್ಚ್ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಐವರಿಗೆ ಪಾಸಿಟಿವ್ ಬಂದರೆ ಇಬ್ಬರಿಗೆ ನೆಗೆಟಿವ್ ಬಂದಿತ್ತು. ಈಗ ಈ ಕುಟುಂಬದ 12 ಜನರನ್ನು ಮೀರಾಜ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಸ್ಲಾಂಪುರ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ ಎಂದು ಸಲುಂಖೆ ಮಾಹಿತಿ ನೀಡಿದ್ದಾರೆ.