Tag: Satish Dhawan Space Centre

  • 9 ವಿದೇಶಿ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿದ ಪಿಎಸ್‍ಎಲ್‍ವಿ ಸಿ-48

    9 ವಿದೇಶಿ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿದ ಪಿಎಸ್‍ಎಲ್‍ವಿ ಸಿ-48

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ನಿರ್ಮಿಸಿರುವ ಪಿಎಸ್‍ಎಲ್‍ವಿ ಸಿ-48 ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ 9 ವಿದೇಶಿ ನಿರ್ಮಿತ ಉಪಗ್ರಹಗಳು ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತೊಯ್ದಿದೆ.

    ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 3.25ರ ಸುಮಾರಿಗೆ ಪಿಎಸ್‍ಎಲ್‍ವಿ ಸಿ-48 ನಭಕ್ಕೆ ಹಾರಿದೆ. 2019ರಲ್ಲಿ ಇದು 6ನೇ ಉಡಾವಣೆಯಾಗಿದ್ದು, ಇದೇ ಡಿಸೆಂಬರಿನಲ್ಲಿ ಇನ್ನೊಂದು ಪಿಎಸ್‍ಎಲ್‍ವಿ ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಇದು ಇನ್ನೂ 5 ಉಪಗ್ರಹಗಳನ್ನು ಹೊತ್ತೊಯ್ಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

    ಇದು ಇಸ್ರೋದ ಪಿಎಸ್‍ಎಲ್‍ವಿ 50ನೇ ಉಡಾವಣೆಯಾಗಿದ್ದು, ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾದ 75ನೇ ಉಪಗ್ರಹವಾಗಿದೆ. ಇದು 628 ಕೆಸ.ಜಿ. ತೂಕವಿದ್ದು, 44.4 ಮೀಟರ್ ಎತ್ತರವಿದೆ. ಭೂ ಪರಿವೀಕ್ಷಣಾ ಉಪಗ್ರಹ ಆರ್‍ಐ ಸ್ಯಾಟ್-2ಬಿಆರ್1 ಸೇರಿದಂತೆ ಇತರ ವಿವಿಧ ದೇಶಗಳ 9 ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಆರ್‍ಐ ಸ್ಯಾಟ್-2ಬಿಆರ್1 ಭೂ ವೀಕ್ಷಣೆಯ ಉಪಗ್ರಹವಾಗಿದ್ದು, ರಡಾರ್ ಮೂಲಕ ದೃಶ್ಯವನ್ನು ಸೆರೆಹಿಡಿಯಲಿದೆ. ಈ ಉಪಗ್ರಹ ಉಡಾವಣೆಯಿಂದ ಕೃಷಿ, ಭಾರತೀಯ ಸೇನೆ, ಅರಣ್ಯ ಹಾಗೂ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಹಾಯವಾಗಲಿದೆ ಎಂದು ವರದಿಯಾಗಿದೆ.

    ಪಿಎಸ್‍ಎಲ್‍ವಿ ಸಿ-48 ನೊಂದಿಗೆ ಉಡಾವಣೆ ಮಾಡಲಾದ 10 ಉಪಗ್ರಹಗಳ ಪೈಕಿ 9 ವಿದೇಶದಾಗಿದ್ದು, ಇದರಲ್ಲಿ ಇಸ್ರೋ ನಿರ್ಮಿತ ‘ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್-2 ಬಿಆರ್-1 ಉಪಗ್ರಹ ಕೂಡ ಇದೆ. ಇದನ್ನು ದೇಶದ ಎರಡನೇ ‘ಗುಪ್ತಚರ ಕಣ್ಣು’ ಎಂದೇ ಕರೆಯಲಾಗಿದೆ. ಅಲ್ಲದೆ ಅಮೆರಿಕದ 6, ಇಸ್ರೇಲ್‍ನ 1, ಇಟಲಿಯ 1 ಹಾಗೂ ಜಪಾನಿನ 1 ಉಪಗ್ರಹಗಳು ಸೇರಿವೆ.

  • 31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    ಹೈದರಾಬಾದ್: ವಿದೇಶಿ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್‍ಎಲ್‍ವಿ-ಸಿ43 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

    ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬೆಳಿಗ್ಗೆ 9.58ಕ್ಕೆ ನಭಕ್ಕೆ ಚಿಮ್ಮಿತು. ಇದರಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು ಉಡ್ಡಯನದ ಪ್ರಧಾನ ಉಪಗ್ರಹವಾಗಿದೆ.

    ಉಪಯೋಗವೇನು?:
    ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳು ಇವಾಗಿವೆ.

    ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು 380 ಕೆ.ಜಿ. ತೂಕ ಹೊಂದಿದೆ. ಇದು ಭೂಮಿಯಿಂದ 636 ಕಿ.ಮೀ. ಅಂತರದ ಕಕ್ಷೆಯನ್ನು ಸೇರಲಿದೆ. ಒಟ್ಟು 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಉಳಿದ 30 ಉಪಗ್ರಹಗಳು 504 ಕಿ.ಮೀ. ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಇಸ್ರೋ ತಿಳಿಸಿದೆ.

    ವಿದೇಶಿ ಉಪಗ್ರಹ ಎಷ್ಟು?:
    ಅಮೆರಿಕದ 23 ಉಪಗ್ರಹ ಸೇರಿದಂತೆ ಸ್ಪೇನ್, ಕೆನಡಾ, ಫಿನ್‍ಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್ ದೇಶಗಳ ತಲಾ ಒಂದು ಉಪಗ್ರಹ ಇದರಲ್ಲಿ ಸೇರಿವೆ. ಇವುಗಳಲ್ಲಿ ಒಂದು ಮೈಕ್ರೊ ಹಾಗೂ 29 ನ್ಯಾನೋ ಉಪಗ್ರಹಗಳಿವೆ. ಇದೇ ತಿಂಗಳಲ್ಲಿ ಇಸ್ರೋ ನಡೆಸುತ್ತಿರುವ ಎರಡನೇ ಉಡ್ಡಯನ ಇದಾಗಿದೆ. ನವೆಂಬರ್ 14ರಂದು ಜಿಸ್ಯಾಟ್-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv