Tag: sathyajith

  • ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಚಿತ್ರ: ಮೈಸೂರು
    ನಿರ್ದೇಶನ: ವಾಸುದೇವ ರೆಡ್ಡಿ
    ನಿರ್ಮಾಪಕ: ವಾಸುದೇವ ರೆಡ್ಡಿ, ಜಗದೀಶ್ ಕೆ. ಆರ್ ಅಪ್ಪಾಜಿ
    ಛಾಯಾಗ್ರಹಣ: ಭಾಸ್ಕರ್ ವಿ ರೆಡ್ಡಿ
    ಸಂಗೀತ: ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್
    ತಾರಾಗಣ: ಸಂಹಿತ್, ಪೂಜಾ, ಕುರಿ ಪ್ರತಾಪ್, ಜ್ಯೂನಿಯರ್ ನರಸಿಂಹರಾಜು, ರವಿಕುಮಾರ್, ಇತರರು

    ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ನಿರ್ದೇಶನದ ವಿಭಾಗದಲ್ಲಿ ದುಡಿದ ಅನುಭವವುಳ್ಳ ವಾಸುದೇವ ರೆಡ್ಡಿ ನಿರ್ದೇಶನ ಮತ್ತು ನಿರ್ಮಾಣದ ಮೊದಲ ಚಿತ್ರ ಮೈಸೂರು. ಅನಿವಾಸಿ ಕನ್ನಡಿಗನ ಪ್ರೇಮಕಥೆ ಹೊತ್ತ ಈ ಚಿತ್ರ ಇಂದು ಬಿಡುಗಡೆಯಾಗಿದೆ.

    ಮೂಲತಃ ಮೈಸೂರಿನವರೇ ಆದ ನಾಯಕನ ತಂದೆ ಒಡಿಸ್ಸಾದಲ್ಲಿ ಬ್ಯುಸಿನೆಸ್ ಮಾಡಿಕೊಂಡಿರುತ್ತಾರೆ. ಬ್ಯುಸಿನೆಸ್‌ನಲ್ಲಿ ಆದ ಲಾಸ್ ಆತನ ಸಾವಿಗೆ ಕಾರಣವಾಗುತ್ತೆ. ತಾಯಿಯ ಆಶ್ರಯದಲ್ಲಿ ಬೆಳೆಯುವ ಮಗ ನಕ್ಸಲ್ ನಂಟಿಗೆ ಬೀಳುತ್ತಾನೆ. ಇದರಿಂದ ಬಂಧಿಯಾಗೋ ನಾಯಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುತ್ತೆ. ಆತನ ಕೊನೆಯ ಆಸೆಯ ಬಗ್ಗೆ ಪೊಲೀಸರು ಕೇಳಿದಾಗ ತನ್ನ ಅಂಗಾಂಗ ದಾನಕ್ಕೆ ಆತ ಬೇಡಿಕೆ ಇಡುತ್ತಾನೆ. ಕೊನೆಯ ಆಸೆ ಕಂಡು ಬೆರಗಾಗೋ ಪೊಲೀಸರು ಒಳ್ಳೆಯ ಆಲೋಚನೆ ಇರುವ ವ್ಯಕ್ತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದು ಹೇಗೆ ಎಂದು ಪ್ರಕರಣದ ಮರು ತನಿಖೆ ಆರಂಭಿಸುತ್ತಾರೆ. ಇಲ್ಲಿಂದ ಅಸಲಿ ಕಥೆ ಅನಾವರಣವಾಗುತ್ತೆ. ನಾಯಕನ ಸುಂದರ ಪ್ರೇಮ ಕಥೆಯೂ ತೆರೆದುಕೊಳ್ಳುತ್ತೆ. ಅಸಲಿಗೆ ನಾಯಕ ಅಪರಾಧಿನಾ..? ಗಲ್ಲು ಶಿಕ್ಷೆಯಾಗಲೂ ಕಾರಣವೇನು.? ಶಿಕ್ಷೆಯಿಂದ ಪಾರಾಗಿ ನಾಯಕಿಯನ್ನು ಮತ್ತೆ ಸಂಧಿಸುತ್ತಾನಾ..? ಎಂಬೆಲ್ಲ ಕುತೂಹಲದ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ರೆ ಸಿನಿಮಾ ನೋಡಿಯೇ ಆ ಕುತೂಹಲವನ್ನು ತಣಿಸಿಕೊಳ್ಳಬೇಕು. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಎರಡು ರಾಜ್ಯದಲ್ಲಿ ನಡೆಯೋ ಕಥೆಯಲ್ಲಿ ಒಡಿಸ್ಸಾ ಕಲಾವಿದರನ್ನು ಕಣ್ತುಂಬಿಕೊಳ್ಳಬಹುದು. ಒಡಿಸ್ಸಾ ಮೂಲದ ನಾಯಕ ಸಂಹಿತ್ ನಟನೆ ಇಷ್ಟವಾಗುತ್ತೆ, ನಾಯಕಿ ಪೂಜಾಗೆ ಇದು ಮೊದಲ ಚಿತ್ರವಾದರೂ ಗಮನ ಸೆಳೆಯುತ್ತಾರೆ. ನಾಯಕಿ ತಾಯಿ ಪಾತ್ರದಲ್ಲಿ ಪ್ರತಿಭಾ ಫಂಡಾ, ಕಾಮಿಡಿ ಕಿಕ್‌ನಲ್ಲಿ ಕುರಿ ಪ್ರತಾಪ್, ಉಳಿದಂತೆ ರವಿಶಂಕರ್, ಜ್ಯೂನಿಯರ್ ನರಸಿಂಹ ರಾಜು, ಸತ್ಯಜಿತ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆ ಸಂಗೀತ. ಹಾಡಿನೊಂದಿಗೆ ಸಾಗೋ ಪ್ರೇಮಕಥೆಗೆ ರಮಣಿ ಸುಂದರೇಶನ್, ಅನಿಲ್ ಮತ್ತು ವಿಜಯ್ ರಾಜ್ ಮನಮುಟ್ಟೋ ಸಂಗೀತ ನೀಡಿ ಆವರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

    ಕೇವಲ ಅನಿವಾಸಿ ಕನ್ನಡಿಗನೊಬ್ಬನ ಪ್ರೇಮ್ ಕಹಾನಿಯ ಇರದೇ ಒಂದೊಳ್ಳೆ ಸಂದೇಶವನ್ನು ತನ್ನೊಡಲೊಳಗೆ ಇಟ್ಟುಕೊಂಡಿದೆ ಮೈಸೂರು. ಹೊಸತನದ ಎಳೆ. ಊಹೆಗೂ ಮೀರಿದ ಟ್ವಿಸ್ಟ್, ಹೊಸತನದ ನಿರೂಪಣೆಯಲ್ಲಿ ನಿರ್ದೇಶಕ ವಾಸುದೇವ ರೆಡ್ಡಿ ಗಮನ ಸೆಳೆಯುತ್ತಾರೆ. ಹೆಸರಿಗೆ ತಕ್ಕಂತೆ ಮೈಸೂರಿನಲ್ಲಿಯೇ ಬಹುಭಾಗದ ಚಿತ್ರೀಕರಣ ನಡೆಸಿರೋ ಈ ಸಿನಿಮಾದಲ್ಲಿ ಒಡಿಸ್ಸಾದ ಸುಂದರ ತಾಣಗಳೂ ಇವೆ. ಮೈಸೂರಿನ ಪ್ರವಾಸಿ ತಾಣಗಳನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿಯಲಾಗಿದೆ. ಈ ನಿಟ್ಟಿನಲ್ಲಿ ಭಾಸ್ಕರ್ ವಿ ರೆಡ್ಡಿ ಪರಿಶ್ರಮಕ್ಕೆ ಭೇಷ್ ಎನ್ನಲೇಬೇಕು. ಸುಂದರ ಪ್ರೇಮಕಥೆಯನ್ನು ಎಲ್ಲಾ ವರ್ಗದ ಪ್ರೇಕ್ಷಕರು ಕುಳಿತು ನೋಡುವಂತೆ ಕಟ್ಟಿಕೊಟ್ಟ ನಿರ್ದೇಶಕರ ಪ್ರರಿಶ್ರಮಕ್ಕೂ ಚಪ್ಪಾಳೆ ಸಲ್ಲಲೇಬೇಕು.

    ರೇಟಿಂಗ್:3.5/5

  • ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

    ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

    ಸುಂದರ ಪ್ರೇಮ ಕಥೆಯನ್ನು, ಮನಮುಟ್ಟುವ ಮ್ಯೂಸಿಕ್ ಸ್ಪರ್ಶದೊಂದಿಗೆ ಪ್ರೇಕ್ಷಕರೆದುರು ತೆರೆದಿಡಲು, ಹೊಸಫೀಲ್ ಕೊಡಲು ನಿರ್ದೇಶಕ ವಾಸುದೇವ್ ರೆಡ್ಡಿ ಸಜ್ಜಾಗಿ ನಿಂತಿದ್ದಾರೆ.

    ವಾಸುದೇವ್ ರೆಡ್ಡಿ ಅವರ ಮೊದಲ ಕನಸಿನ ಸಿನಿಮಾ ತೆರೆ ಮೇಲೆ ಬರಲು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಅದುವೇ ‘ಮೈಸೂರು’ ಸಿನಿಮಾ. ಹಾಯ್ ಎನಿಸುವ ಹಾಡು ವಾವ್ ಎನಿಸುವ ಟ್ರೇಲರ್ ಮೂಲಕ ಎಲ್ಲ ಚಿತ್ರ ಪ್ರೇಮಿಗಳ ಮನದಲ್ಲೂ ಚಿತ್ರ ನೋಡಲೇ ಬೇಕು ಎನ್ನುವ ಇಂಗಿತ ಸೃಷ್ಟಿಸಿರುವ ‘ಮೈಸೂರು’ ಸಿನಿಮಾ ಮಾರ್ಚ್ 4ರಂದು ಬೆಳ್ಳಿ ಪರದೆ ಮೇಲೆ ಅನಾವರಣವಾಗಲಿದೆ. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

    ‘ಮೈಸೂರು’ ಸಿನಿಮಾ ಅನಿವಾಸಿ ಕನ್ನಡಿಗನೊಬ್ಬನ ಪ್ರೀತಿ ಕಥೆಯನ್ನು ತೆರೆ ಮೇಲೆ ತೆರೆದಿಡಲಿದೆ. ಅದು ಕೇವಲ ಪ್ರೀತಿಕಥೆಯನ್ನು ಮಾತ್ರ ಹೇಳದೇ ರೋಚಕ ಟ್ವಿಸ್ಟ್ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೋಡುಗರಿಗೆ ಮುಟ್ಟಿಸಲಿದೆ. ಒಡಿಶಾ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಂಹಿತ್ ಈ ಚಿತ್ರದ ನಾಯಕ. ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಪೂಜ ಚಿತ್ರದ ನಾಯಕಿ. ಮೈಸೂರಿನಲ್ಲಿ ನಡೆಯುವ ಈ ಪ್ರೀತಿ ಕಥೆಗೆ ಮೈಸೂರಿನವರೇ ಆದ ವಾಸುದೇವ್ ರೆಡ್ಡಿ ನಿರ್ದೇಶಕರು. ಇದು ಇವರ ನಿರ್ದೇಶನಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ಕೂಡ ಹೌದು. ಮೊದಲ ಚಿತ್ರಕ್ಕೆ ಚೆಂದದ ಕಥೆ ರೆಡಿ ಮಾಡಿಕೊಂಡು ಚಿತ್ರಕಥೆಯನ್ನು ಕಲರ್ ಫುಲ್ ಆಗಿ ಹೆಣೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ ನಿರ್ದೇಶಕರು.

    ಒಡಿಶಾ ಹಾಗೂ ಮೈಸೂರು ನಡುವೆ ನಡೆಯುವ ಪ್ರೀತಿಕಥೆಯಲ್ಲಿ ಮ್ಯೂಸಿಕ್ ಕೂಡ ಪ್ರಮುಖ ಪಾತ್ರ ವಹಿಸಿದ್ದು, ಒಟ್ಟು ಐದು ಹಾಡುಗಳು ಚಿತ್ರದಲ್ಲಿವೆ. ಒಂದಕ್ಕಿಂತ ಒಂದು ಹಾಡು ಡಿಫ್ರೆಂಟ್ ಆಗಿ ಮೂಡಿ ಬಂದಿದ್ದು ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್ ಸೇರಿ ಮೂವರು ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕೃಷ್ಣ ಮಳವಳ್ಳಿ ಸಂಭಾಷಣೆ, ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಚಿತ್ರಕ್ಕಿದೆ. ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಅದ್ಭುತವಾಗಿ ತೆರೆ ಮೇಲೆ ಮೂಡಿಬಂದಿವೆ. ಚಿತ್ರದ ಸಾಹಸ ದೃಶ್ಯಕ್ಕೆ ಶ್ರೀಕಾಂತ್ ನಿರ್ದೇಶನವಿದೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

    ಚಿತ್ರದಲ್ಲಿ ಮೈಸೂರಿನ ಹಲವು ಭಾಗಗಳನ್ನು ಭಾಸ್ಕರ್ ವಿ ರೆಡ್ಡಿ ಕ್ಯಾಮೆರಾ ಕಣ್ಣಲಿ ಸೊಗಸಾಗಿ ಸೆರೆ ಹಿಡಿಯಲಾಗಿದ್ದು, ಉಳಿದಂತೆ ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್‍ನಲ್ಲೂ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಎಸ್.ಆರ್ ಕಂಬೈನ್ಸ್ ಬ್ಯಾನರ್ ನಡಿ ನಿರ್ದೇಶಕ ವಾಸುದೇವ ರೆಡ್ಡಿಯವರೇ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜಗದೀಶ್, ಕೆ.ಆರ್ ಅಪ್ಪಾಜಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರದ ತಾರಾಬಳಗ ಕೂಡ ಅಷ್ಟೇ ಕಲರ್ ಫುಲ್ ಆಗಿದ್ದು ಜ್ಯೂನಿಯರ್ ನರಸಿಂಹರಾಜು, ಸತ್ಯಜಿತ್, ಕುರಿಪ್ರತಾಪ್, ಭಾಸ್ಕರ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಒಳಗೊಂಡ ಹಲವು ಕಲಾವಿದರು ಅಭಿನಯಿಸಿದ್ದಾರೆ.

  • ಹಿರಿಯ ನಟ ಸತ್ಯಜಿತ್ ನಿಧನ – ದುಃಖ ತೋಡಿಕೊಂಡ ಪುತ್ರ

    ಹಿರಿಯ ನಟ ಸತ್ಯಜಿತ್ ನಿಧನ – ದುಃಖ ತೋಡಿಕೊಂಡ ಪುತ್ರ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ಕಲಾವಿದ ಸತ್ಯಜಿತ್ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ 6 ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.

    ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ತಂದೆ ದೊಡ್ಡ ಹೃದಯವಂತರು. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳು ಹಬ್ಬಿತ್ತು. ಅದರಿಂದ ಬೇಸರವಾಗಿತ್ತು. ನೂರಾರು ಕರೆಗಳು ಬಂದಿದ್ದವು. ಸಿನಿಮಾ ರಂಗದವರು ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಸುಳ್ಳು ವದಂತಿಯಿಂದ ಬೇಸರವಾಗಿತ್ತು. ನಿನ್ನೆ ರಾತ್ರಿ ತಂದೆ ಮೃತಪಟ್ಟಿದ್ದಾರೆ, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ವೈದ್ಯರ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿರಲಿಲ್ಲ. ವೈದ್ಯರು ಸಹ ನಮ್ಮ ಬಳಿ ತಂದೆಯ ಪರಿಸ್ಥಿತಿಯನ್ನ ತಿಳಿಸಿದ್ದರು. ಮಾನಸಿಕವಾಗಿ ಸಿದ್ಧರಿರುವಂತೆ ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ತಂದೆಯ ಸಾವಿನ ದುಃಖ ಇದೆ. ಅವರಿಗೆ ಸರ್ಕಾರದಿಂದ ಮತ್ತು ಸಿನಿಮಾ ಇಂಡಸ್ಟ್ರಿಯಿಂದ ಸಹಾಯ ಬೇಕಾಗಿದೆ. ಬಿಡಿಎ ಸೈಟ್‍ಗಾಗಿ ನಮ್ಮ ತಂದೆ ಪ್ರಯತ್ನ ಪಟ್ಟಿದ್ದರು. ಸರ್ಕಾರದಿಂದ, ಚಿತ್ರರಂಗದಿಂದ ಸಹಾಯ ಅಗತ್ಯವಿದೆ. ನಮ್ಮ ತಂದೆಯಂತೆ ಯಾರೂ ಬರೋಲ್ಲ. ದೊಡ್ಡ ಮನಸ್ಸಿನ ವ್ಯಕ್ತಿ, ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು. ಇಂದು ಮಧ್ಯಾಹ್ನ 2 ರಿಂದ 3 ಗಂಟೆಯೊಳಗೆ ಅಂತಿಮ ಸಂಸ್ಕಾರ ಮಾಡುತ್ತೇವೆ. ಅಲ್ಲಿವರೆಗೆ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಅಂತಿಮ ದರ್ಶನದ ವ್ಯವಸ್ಥೆ ಇರಲಿದೆ. ಹೆಗ್ಡೆನಗರದ ಖಬರ್‌ಸ್ತಾನ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟರೆಲ್ಲ ಕೈಬಿಟ್ರು: ಚಿಕಿತ್ಸೆಗೆ ಬಾಗಲಕೋಟೆಗೆ ಬಂದು ನೋವು ತೋಡಿಕೊಂಡ ಸತ್ಯಜಿತ್

  • ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಸತ್ಯಜಿತ್ (72) ನಿಧನರಾಗಿದ್ದಾರೆ.

    ಸಾಮಾನ್ಯ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸತ್ಯಜಿತ್ ಅವರು ಕೆಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಲನಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಸ್ಟಾರ್ ನಟರೆಲ್ಲ ಕೈಬಿಟ್ರು: ಚಿಕಿತ್ಸೆಗೆ ಬಾಗಲಕೋಟೆಗೆ ಬಂದು ನೋವು ತೋಡಿಕೊಂಡ ಸತ್ಯಜಿತ್

    ಹಲವು ಜನಪ್ರಿಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಸತ್ಯಜಿತ್ ನಟಿಸಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಕಳೆದುಕೊಂಡಿದ್ದರು. ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

    ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್, ಇವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಅಭಿನಯಿಸಿದ್ದರು.

    ಪುಟ್ನಂಜ (1995), ಶಿವ ಮೆಚ್ಚಿದ ಕಣ್ಣಪ್ಪ (1988), ಚೈತ್ರಾದ ಪ್ರೇಮಾಂಜಲಿ ( 1992), ಆಪ್ತಮಿತ್ರ (2004) ಇವು ಸತ್ಯಜಿತ್ ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳಾಗಿದೆ. ಅರುಣ ರಾಗ, ಅಂತಿಮ ತೀರ್ಪು, ರಣರಂಗ, ನಮ್ಮೂರ ರಾಜ, ನ್ಯಾಯಕ್ಕಾಗಿ ನಾನು, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಸರ್ಕಲ್ ಇನ್ಸ್‌ಪೆಕ್ಟರ್‌, ಪಟೇಲ, ದುರ್ಗದ ಹುಲಿ, ಅಪ್ಪು, ಧಮ್, ಅಭಿ, ಅರಸು, ಇಂದ್ರ, ಭಾಗ್ಯದ ಬಳೇಗಾರ, ಕಲ್ಪನಾ, ಗಾಡ್ ಫಾದರ್, ಲಕ್ಕಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

  • ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

    ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

    ಬೆಂಗಳೂರು: ನನಗೆ ಈಗ 68 ವರ್ಷ ವಯಸ್ಸು. ಸಿಂಪತಿಯಿಂದ ಹಣ ಮಾಡುವ ವಯಸ್ಸಾ?ನನ್ನ ಮರ್ಯಾದೆ ಬೀದಿ ಪಾಲಾಗಿದೆ, ನನ್ನ ಹೆಸರಿಗೆ ಮಸಿ ಬಳಿದಿದ್ದಾರೆ. ಅವಳು ಬೇಡ ನನಗೆ, ಸತ್ತಿದ್ದಾಳೆ ಎಂದುಕೊಂಡಿದ್ದೇನೆ, ಅವಳಿಂದ ಏನೂ ಬೇಕಾಗಿಲ್ಲ. ದೇವರು ನಮಗೆ ಸಾವು ಕೊಟ್ಟರೆ ಸಾಕು. ನನ್ನ ಮಗಳೇ ಶತ್ರು ರೀತಿ ಆಡುತ್ತಾಳೆ ಅಂದ್ರೆ ಹುಟ್ಟಿದಾಗಲೇ ಸತ್ತಿದ್ದರೆ ಚೆನ್ನಾಗಿತ್ತು ಅನ್ನಿಸುತ್ತಿದೆ ಎಂದು ನಟ ಸತ್ಯಜಿತ್ ಗಳಗಳನೆ ಅತ್ತಿದ್ದಾರೆ.

    ಮಗಳು ತಮ್ಮ ವಿರುದ್ಧ ಹೇಳಿಕೆ ನೀಡಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಸಕ್ಕರೆ ಖಾಯಿಲೆಗೆ ಇನ್ಸೂಲಿನ್, ಇಂಜೆಕ್ಷನ್ ತೆಗೆದುಕೊಳ್ಳಲು ಹಣ ನೀಡಿಲ್ಲ. ಸಂಘ ಸಂಸ್ಥೆಗಳು ಸನ್ಮಾನ ಮಾಡಿದ ಹಣ, ದಾನಿಗಳು ನೀಡಿದ ಹಣದಿಂದ ಬದುಕಿದ್ದೇನೆ. ಆದರೂ ನಮ್ಮ ವಿರುದ್ಧ ದೂರು ನೀಡಿದ್ದಾಳೆ ಎಂದು ಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡನೆ – ತಂದೆ ಸತ್ಯಜೀತ್ ವಿರುದ್ಧ ಮಗಳಿಂದ ದೂರು

    ಮಗಳು ಸಾಧನೆ ಮಾಡಲೆಂದು ಹಗಲು, ರಾತ್ರಿ ದುಡಿದು ಓದಿಸಿದ್ದೇನೆ. ಮನೆ ಮಾರಿ, ಬಡ್ಡಿ ಸಾಲ ಮಾಡಿ ಹಣ ತಂದು ವಿದೇಶದಲ್ಲಿ ಓದಿಸಿದ್ದೇನೆ. ಈಗ ಓದಿ ವಿವಾಹವಾದ ಬಳಿಕ ಇದೀಗ ನಮಗೆ ಸಹಾಯ ಮಾಡಲು ಕೇಳಿದ್ದೇವೆ. ಅಲ್ಲದೆ ನಾವು ಅಗ್ರೀಮೆಂಟ್ ಮಾಡಿಸಿ ಪ್ರತಿ ತಿಂಗಳು ಇಷ್ಟೇ ಹಣ ನೀಡು ಎಂದು ನಾನು ಕೇಳಿಲ್ಲ. ಇದು ಅಪಪ್ರಚಾರ, ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ನನ್ನ ಮಗಳ ಮೂಲಕ ಷಡ್ಯಂತ್ರ ನಡೆಸಿದ್ದಾರೆ.

    ನಾನು ಮಗಳ ಕಡೆಯಿಂದ ಯಾವುದೇ ಹಣ ಕೇಳಿಲ್ಲ. ಮಗಳು ಓದುವಾಗ ಮನೆ ಮಾರಿ ಹಣ ಕೊಟ್ಟಿದೆ. ಹೀಗಾಗಿ ಮನೆ ಮಾಡಿಕೊಡುವಂತೆ ಕೇಳಿದ್ದೇನೆ. ಯಾವುದೇ ಬೆದರಿಕೆ ಕರೆಗಳನ್ನ ಮಾಡೋದಕ್ಕೆ ಉತ್ತೇಜನ ಮಾಡಿಲ್ಲ, ಮಾಡೋದು ಇಲ್ಲ. ಸಾಯುವ ವಯಸ್ಸಿನಲ್ಲಿ ಮಗಳ ಏಳಿಗೆ ಬಯಸುತ್ತೇನೆ ಹೊರತು ಕೆಟ್ಟದ್ದನ್ನ ಬಯಸಲ್ಲ. ಮಗಳು ತಗೆದುಕೊಂಡಿರುವ ನಿರ್ಧಾರ ಮುಂದೆ ಅವಳಿಗೇ ಮುಳುವಾಗಬಹುದು. ಸರಿ ದಾರಿಯಲ್ಲಿ ನಡೆಯುದಕ್ಕೆ ತಿಳಿಸುತ್ತೇನೆ, ಕೆಟ್ಟದ್ದನ್ನ ಬಯಸುವುದಿಲ್ಲ. ಮಗಳೇ ನನ್ನ ವಿರುದ್ಧ ನಿಲ್ಲುತ್ತಾಳೆಂಬ ನಿರೀಕ್ಷೆ ಯಾವುತ್ತೂ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದೇನೆ. ಕಾಲು ಇಲ್ಲದಿದ್ದರೂ ಪರವಾಗಿಲ್ಲ. ನಾನು ನಿಮ್ಮ ಸಹಾಯ ಕೇಳಲ್ಲ. ನನಗೆ ಸಂಘ ಸಂಸ್ಥೆಯವರು ಸನ್ಮಾನಿಸಿ, ಸ್ವಲ್ಪ ಮಟ್ಟಿಗೆ ಸಹಾಯ ಧನ ಕೊಡುತ್ತಾರೆ. ನನ್ನ ಇಬ್ಬರು ಮಕ್ಕಳು ದುಡಿಯುತ್ತಾರೆ ಅಷ್ಟೇ ಸಾಕು. ಆದರೆ ಮುಂದೆ ಮಗಳಿಗೆ ಸಮಸ್ಯೆಯಾಗಬಾರದು. ನಿನ್ನ ಮೇಲೆ ತಪ್ಪು ಹೊರಿಸುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರು ಎಂದು ಕಣ್ಣೀರು ಹಾಕಿದ್ದಾರೆ.

  • ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬೆಂಗಳೂರು: ಅವರು ಕನ್ನಡ ನಾಡು ಕಂಡ ಅದ್ಭುತ ಕಲಾವಿದರು. ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆಗಳಲ್ಲಿ ಸರಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸದ ಹಿರಿಯ ಕಲಾವಿದ. ಇತ್ತೀಚೆಗಷ್ಟೇ ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ನಟ ಇದೀಗ ನಿವೇಶನಕ್ಕಾಗಿ ಪ್ರತಿನಿತ್ಯ ಬಿಡಿಎ ಕದ ತಟ್ಟುತ್ತಿದ್ದಾರೆ.

    ಹಿರಿಯ ನಟ ಸತ್ಯಜಿತ್ ಬಿಡಿಎ ಸೈಟ್‍ಗಾಗಿ ಪ್ರತಿನಿತ್ಯ ಬಿಡಿಎ ಮುಂದೆ ಅಲೆದಾಡೋ ಪರಿಸ್ಥಿತಿ ಬಂದಿದೆ. ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರೋ ಸತ್ಯಜಿತ್ ವ್ಹೀಲ್ ಚೇರ್‍ನಲ್ಲಿ ಬಿಡಿಎ ಆಯುಕ್ತರ ಭೇಟಿಗೆ ಬಂದಿದ್ರು. ಆದ್ರೆ 3-4 ಇಲಾಖೆಗಳನ್ನು ನೋಡಿಕೋಳ್ತಿರೋ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬಿಡಿಎಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಈ ಬಗ್ಗೆ ಗೊತ್ತಿರದ ಸತ್ಯಜಿತ್ ಪ್ರತಿನಿತ್ಯ ಬಿಡಿಎಗೆ ಬಂದು ಆಯುಕ್ತರ ಭೇಟಿಗಾಗಿ ಗಂಟೆಗಟ್ಟಲೆ ಕಾದು ಕಾದು ವಾಪಸ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.

    ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಕೊಟ್ಟ ಪತ್ರವನ್ನು ಪ್ರತಿನಿತ್ಯ ಹಿಡಿದುಕೊಂಡು ನನಗೋಂದು ಸೈಟ್ ಸಿಗುತ್ತೆ ಅನ್ನೋ ಆಸೆಯಿಂದ ಬರೋ ಸತ್ಯಜಿತ್‍ಗೆ ಇದುವರೆಗು ಬಿಡಿಎ ಆಯುಕ್ತ ರಾಕೇಶ್ ಸಿಂಗ್‍ರ ಮುಖ ದರ್ಶನವಾಗಿಲ್ಲ.

    ಇನ್ನಾದ್ರು ಆಯುಕ್ತರು ಕಚೇರಿಗೆ ಬಂದು ಇವರ ನೋವನ್ನು ಆಲಿಸಲಿ ಅನ್ನೋದು ನಮ್ಮ ಆಶಯ