Tag: Satellite bus Stand

  • ಆಹಾರ ಸಿಗದೆ ಮಂಗಳಮುಖಿಯರು ಕಂಗಾಲು- ನೆರವಿಗೆ ನಿಂತ ಶಿ ಫಾರ್ ಸೊಸೈಟಿ

    ಆಹಾರ ಸಿಗದೆ ಮಂಗಳಮುಖಿಯರು ಕಂಗಾಲು- ನೆರವಿಗೆ ನಿಂತ ಶಿ ಫಾರ್ ಸೊಸೈಟಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ದೇಶಾದಂತ್ಯ ಲಾಕ್‍ಡೌನ್‍ನಿಂದ ಜನ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಆದರೆ ಭಿಕ್ಷೆ ಬೇಡಿ ಜೀವನ ಸಾಗುಸ್ತಿರುವ ಮಂಗಳಮುಖಿಯರ ಪಾಡು ಹೇಳತೀರದಾಗಿದ್ದು, ಹಸಿವಿನಿಂದಾಗಿ ಕಂಗೆಟ್ಟಿದ್ದಾರೆ.

    ಮಂಗಳಮುಖಿಯರ ಹಸಿವಿನ ಸಂಕಟಕ್ಕೆ ಮಿಡಿದ ಶಿ ಫಾರ್ ಸೊಸೈಟಿ ಎಂಬ ಎನ್‍ಜಿಓ ಒಂದು ತಿಂಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳು ಹಾಗೂ ಹಣವನ್ನು ವಿತರಣೆ ಮಾಡುವ ಮೂಲಕ ಅವರ ನೆರವಿಗೆ ನಿಂತಿದೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ 125ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಗೂ ಸ್ಲಂ ನಿವಾಸಿಗಳಿಗೆ ಇಂದು ದಿನಸಿಯನ್ನ ಹಂಚಲಾಯಿತು. ಕಳೆದ ಒಂದು ವಾರದಿಂದ ಶಿ ಫಾರ್ ಸೊಸೈಟಿಯ 15 ಸದಸ್ಯೆಯರ ತಂಡ ಬೆಂಗಳೂರಿನ ಕೆಂಗೇರಿ ಉಪನಗರ, ರಾಮಸಂದ್ರ ಸೇರಿದಂತೆ ಹಲವು ಕಡೆ ದಿನಸಿಯನ್ನು ವಿತರಿಸಿದೆ.

    ಅನೇಕರು ಮಂಗಳಮುಖಿಯರ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಆದಿ ಶಕ್ತಿ ದೇವಸ್ಥಾನದ ಅರ್ಚಕರಾಗಿರುವ ರಾಜೇಶ್ವರಿ ಅವರು ನಮ್ಮ ಗಮನಕ್ಕೆ ತಂದಿದ್ದರು. ಅಷ್ಟೇ ಅಲ್ಲದೆ ಅವರೇ ಮುಂದೆ ನಿಂತು ಆರ್.ಪಿ.ಸಿ. ಲೇಔಟ್, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಮಂಗಳಮುಖಿಯರನ್ನು ಕರೆದುಕೊಂಡು ಬಂದಿದ್ದಾರೆ. ಮಂಗಳಮುಖಿಯರೊಂದಿಗೆ ಮಾತನಾಡಿದಾಗ ಅವರು ಪಡುತ್ತಿದ್ದ ಕಷ್ಟ ನಮಗೆ ನೋವು ತಂದಿದೆ ಎಂದು ಶಿ ಫಾರ್ ಸೊಸೈಟಿ ಸದ್ಯಸೆಯರು ತಿಳಿಸಿದ್ದಾರೆ.

    ಮಂಗಳಮುಖಿಯರಿಗೆ ವೈದ್ಯಕೀಯ ಸಮಸ್ಯೆ ಕೂಡ ಇದೆ. ಈ ಕುರಿತು ಮಾಹಿತಿ ಪಡೆದುಕೊಂಡು ಸಹಾಯ ಮಾಡುತ್ತೇವೆ. ಸದ್ಯಕ್ಕೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.