Tag: Sarkari Hiriya Prathamika Shale Kasaragodu

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ರಿಷಬ್ ಶೆಟ್ಟಿ

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ರಿಷಬ್ ಶೆಟ್ಟಿ

    ನವದೆಹಲಿ: ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿದ್ದು, ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರಿಂದ ರಿಷಬ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

    ಉತ್ತಮ ಮಕ್ಕಳ ಚಿತ್ರವಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ರಾಷ್ಟ್ರೀಯಾ ಪ್ರಶಸ್ತಿ ಪಡೆದಿದ್ದು, ಕನ್ನಡ ಚಿತ್ರರಂಗದ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಸೋಮವಾರ ದೆಹಲಿಯಲ್ಲಿ ನಡೆದ 66ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಿಷಬ್ ಶೆಟ್ಟಿ ಅವರಿಗೆ ಸ್ವರ್ಣ ಕಮಲ ಪ್ರಶಸ್ತಿ ನೀಡಿ ಗೌರವಿಸಿದರು.

    2018ರಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಯಾಗಿತ್ತು. ಗಡಿಭಾಗ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಏನು? ಅಲ್ಲಿನ ಮಕ್ಕಳು ತಮ್ಮ ಶಾಲೆಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು ಎನ್ನುವುದನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತವಾಗಿ ತೋರಿಸಿದ್ದರು. ಜೊತೆಗೆ ಈ ಚಿತ್ರದ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಸಕಾರಾತ್ಮಕ ಸಂದೇಶವನ್ನು ಸಾರುವ ಮೂಲಕ ರಿಷಬ್ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದರು.

    ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆದ ಬಳಿಕ ಟ್ವೀಟ್ ಮಾಡಿ, ಪ್ರಶಸ್ತಿ ಸ್ವಿಕರಿಸಿರುವ ಬಗ್ಗೆ ನಿಜಕ್ಕೂ ತುಂಬಾ ಹೆಮ್ಮೆಯಾಗುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ತಾರೆಯರು ಕೂಡ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಸ್ನೇಹಿತ, ನಟ ರಕ್ಷಿತ್ ಶೆಟ್ಟಿ ಕೂಡ ಗೆಳೆಯನ ಸಾಧನೆಗೆ ಖುಷಿ ಪಟ್ಟಿದ್ದಾರೆ.

    ಎಂಥಾ ಸಾಧನೆ, ನಮ್ಮ ಇಡೀ ತಂಡವೇ ನಿನ್ನ ಬಗ್ಗೆ ಹೆಮ್ಮೆ ಪಡುತ್ತಿದೆ ಮಗಾ. ಇನ್ನೂ ಸಾಕಷ್ಟು ಪ್ರಶಸ್ತಿಗಳು ನಿನ್ನ ಸಾಧನೆಯ ಹಾದಿಯಲ್ಲಿ ಜೊತೆಯಾಗಲಿದೆ ಎಂದು ಬರೆದು ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋ, ಫೋಟೋವನ್ನು ಹಾಕಿ ಟ್ವಿಟ್ಟರ್ ನಲ್ಲಿ ಸಿಂಪಲ್ ಸ್ಟಾರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    – ಕಮರ್ಷಿಯಲ್ ಅಲೆಗೆದುರಾದ ಕಲಾತ್ಮಕ ಹಾದಿ!

    ಬೆಂಗಳೂರು: ಕಮರ್ಷಿಯಲ್ ಸ್ವರೂಪದ ಸಿನಿಮಾಗಳಲ್ಲಿ ಗೆದ್ದ ನಂತರವೂ ಕಲಾತ್ಮಕ ಸಿನಿಮಾಗಳತ್ತ ಹೊರಳಿಕೊಳ್ಳುವುದು ಕನ್ನಡದ ಮಟ್ಟಿಗೆ ಅಪರೂಪದ ಬೆಳವಣಿಗೆ. ಅಂಥಾ ಹೊಸಾ ಥರದ ಬೆಳವಣಿಗೆಯೊಂದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಡಿಗಲ್ಲು ಹಾಕಿದ್ದಾರೆ. ಅದರ ಭಾಗವಾಗಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಎಂಬ ಚಿತ್ರವೀಗ ತೆರೆಗಾಣಲು ಅಣಿಗೊಂಡಿದೆ!

    ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ಹೀರೋ ಆಗಿಯೂ ನಟಿಸುತ್ತಿರುವ ರಿಷಬ್ ಶೆಟ್ಟಿ ಅದಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನೂ ನಿರ್ದೇಶನ ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಸಿಗುತ್ತಿರೋ ವ್ಯಾಪಕ ಪ್ರಚಾರ, ಅದರ ಬಗ್ಗೆ ಮೂಡಿಕೊಂಡಿರೋ ನಿರೀಕ್ಷೆಗಳನ್ನು ನೋಡಿದರೆ ಭಿನ್ನ ಬಗೆಯ ಪ್ರಯೋಗಗಳಿಗೆ ಕನ್ನಡ ಚಿತ್ರ ರಂಗದಲ್ಲೊಂದು ಸುವರ್ಣ ಯುಗ ಆರಂಭಗೊಂಡಿದೆ ಅಂತಲೂ ಅನ್ನಿಸುತ್ತದೆ.

    ಕಾಸರಗೋಡು ಗಡಿನಾಡು. ಸಂಪನ್ನವಾದ ಸಾಂಸ್ಕೃತಿಕ ಹಿನ್ನೆಲೆ, ಪ್ರಾಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಅಲ್ಲಿನ ಜನರನ್ನು ಕಾಲಾಂತರಗಳಿಂದಲೂ ನಾನಾ ಸಂಕಷ್ಟಗಳು ಕಾಡುತ್ತಲೇ ಬಂದಿವೆ. ಇದನ್ನು ಸರ್ಕಾರಿ ಶಾಲೆಯೊಂದರ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ತಲುಪಿಸುವ ಸದುದ್ದೇಶದೊಂದಿಗೇ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.

    ಈಗಾಗಲೇ ದಡ್ಡ ದಡ್ಡ ಸೇರಿದಂತೆ ನಾನಾ ಹಾಡುಗಳ ಮೂಲಕವೂ ಈ ಚಿತ್ರ ಕಮರ್ಷಿಯಲ್ ಸಿನಿಮಾಗಳನ್ನೇ ಮೀರಿಸುವಂತೆ ಪ್ರಚಲಿತಕ್ಕೆ ಬರುತ್ತಿದೆ. ಅನಂತ್ ನಾಗ್ ಅವರು ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಚಿತ್ರ ವಾಸ್ತವದಲ್ಲಿ ಮಕ್ಕಳ ಚಿತ್ರವಾದರೂ ಕೂಡಾ ಅದನ್ನೊಂದು ಜಾನರಿಗೆ ಸೀಮಿತ ಮಾಡುವಂತಿಲ್ಲವಂತೆ. ಯಾಕೆಂದರೆ ಇಲ್ಲಿ ಮಕ್ಕಳ ಮೂಲಕ ಘನ ಗಂಭೀರವಾದ ವಿಚಾರಗಳನ್ನೂ ಕೂಡಾ ತಣ್ಣಗೆ ನಿರೂಪಿಸಲಾಗಿದೆಯಂತೆ.

    ಇದೆಲ್ಲ ಏನೇ ಇದ್ದರೂ ಕಲಾತ್ಮಕ ಜಾನರಿನದ್ದೆಂದೇ ಹೇಳಲಾಗುತ್ತಿರೋ ಈ ಚಿತ್ರ ಅಲೆಯೆಬ್ಬಿಸುತ್ತಿರುವ ರೀತಿ ನಿಜಕ್ಕೂ ಅಚ್ಚರಿದಾಯಕವಾಗಿದೆ.