Tag: Sareegamapa

  • ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ: ರಾಘವೇಂದ್ರ ಹುಣಸೂರ್

    ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ: ರಾಘವೇಂದ್ರ ಹುಣಸೂರ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದಲ್ಲಿ ಮುಂದಿನ ವಾರದಿಂದ ಹಂಸಲೇಖ ಅವರು ಮತ್ತೆ ಭಾಗಿಯಾಗಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ಅವರು ತಿಳಿಸಿದ್ದಾರೆ.

    ಪೇಜಾವರ ಶ್ರೀಗಳ ವಿರುದ್ಧ ಟೀಕೆ ಮಾಡಿದ್ದ ಹಂಸಲೇಖ ಅವರು ಕಳೆದ ವಾರ ಸರಿಗಮಪ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ರೀತಿ ಈ ವಾರ ಕೂಡ ಹಂಸಲೇಖ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಆದರೆ ಮುಂದಿನ ವಾರದಿಂದ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

     

    ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ ಎಂದು ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ. ಲಿವರ್ ಕೊಟ್ರೆ ತಿಂತಾರಾ? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ

    ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಹಂಸಲೇಖ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಬಗ್ಗೆ ಹಂಸಲೇಖ ಅವರು ತಮ್ಮ ಆರೋಗ್ಯ ಕ್ಷೇಮವಾಗಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ನೀಡಿದೆ ಹಾಗೂ ಲಕ್ಷಾಂತರ ಅಭಿಮಾನಿಗಳು ನನಗೆ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದ್ದರು.

    ಸದ್ಯ ಇತ್ತೀಚೆಗಷ್ಟೇ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ ಹಂಸಲೇಖ ಅವರು ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿರುವುದಾಗಿ ಹೇಳಿದ್ದರು. ಇದನ್ನೂ ಓದಿ: ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

    Hamsalekha, Sarigamapa, Raghavendra Hunasur, Sandalwood, Bengaluru