Tag: Sare

  • ದೀಪಾವಳಿಗೆ ತಂದಿದ್ದ ಸೀರೆ ಸರಿಯಿಲ್ಲ ಎಂದ ಪತ್ನಿ-ಮನನೊಂದ ಪತಿ ಆತ್ಮಹತ್ಯೆ

    ದೀಪಾವಳಿಗೆ ತಂದಿದ್ದ ಸೀರೆ ಸರಿಯಿಲ್ಲ ಎಂದ ಪತ್ನಿ-ಮನನೊಂದ ಪತಿ ಆತ್ಮಹತ್ಯೆ

    ಹಾವೇರಿ: ದೀಪಾವಳಿ ಹಬ್ಬದ ಪ್ರಯುಕ್ತ ತಂದಿದ್ದ ಬಟ್ಟೆ ಸರಿಯಿಲ್ಲ ಎಂಬ ಪತ್ನಿಯ ಮಾತಿನಿಂದ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಅರಿಶಿಣಗುಪ್ಪಿ ಗ್ರಾಮದಲ್ಲಿ ನಡೆದಿದೆ.

    50 ವರ್ಷದ ಚಂದ್ರಪ್ಪ ಮಲ್ಲಾಪುರ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಹಬ್ಬದ ಪ್ರಯುಕ್ತ ಚಂದ್ರಪ್ಪ ಪತ್ನಿಗಾಗಿ ಹೊಸ ಸೀರೆಯನ್ನು ಖರೀದಿಸಿದ್ದರು. ಪತಿ ತಂದಿದ್ದ ಸೀರೆ ಚೆನ್ನಾಗಿಲ್ಲ ಎಂಬ ವಿಚಾರಕ್ಕೆ ದಂಪತಿಯ ನಡುವೆ ಕಳೆದ ರಾತ್ರಿ ಜಗಳ ನಡೆದಿತ್ತು.

    ಪತ್ನಿಯ ಮಾತಿನಿಂದ ಬೇಸರಗೊಂಡ ಪತಿ ಮನೆಯ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ಬೀದರ್: ಪ್ರಧಾನಿ ಮೋದಿ ಸರ್ಕಾರದ ನೋಟ್ ಬ್ಯಾನ್ ಬೆಂಬಲಿಸಿ ನಗರದ ವರ್ತಕರೊಬ್ಬರು ರಂಜಾನ್ ಹಬ್ಬದ ಪ್ರಯುಕ್ತವಾಗಿ 10 ಪೈಸೆಗೆ ಒಂದು ಸೀರೆಯನ್ನ ಮಾರಾಟ ಮಾಡುತ್ತಿದ್ದಾರೆ.

    ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೀರೆಗಳನ್ನು ಕೊಳ್ಳಲು ಕೇವಲ ಹಳೆಯ 10, 25 ಮತ್ತು 50 ಪೈಸೆಯ ನಾಣ್ಯಗಳನ್ನು ನೀಡಿದರೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

    ಮೋದಿಯವರು ನೋಟ್ ಬ್ಯಾನ್ ಮಾಡಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದರ ಪ್ರಯುಕ್ತವಾಗಿ ನಾನು ಸೀರೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡ್ತಾಯಿದ್ದೀನಿ. ಫ್ರೀಯಾಗಿ ನೀಡಿದ್ರೆ ಜನ ತೆಗೆದುಕೊಳ್ಳಲು ಮುಂದೆ ಬರಲ್ಲ. ಅದಕ್ಕಾಗಿ ಒಂದು ಸೀರೆಗಾಗಿ 10 ಪೈಸೆಯನ್ನು ನಿಗದಿ ಮಾಡಲಾಗಿದೆ. ಇದು ವಿಶೇಷವಾಗಿ ರಂಜಾನ್ ಹಬ್ಬಕ್ಕಾಗಿ ಈ ಆಫರ್‍ನ್ನು ಕೊಡಲಾಗಿದೆ ಎಂದು ಅಂಗಡಿಯ ಮಾಲೀಕ ಚಂದ್ರಶೇಖರ್ ಪರಸಂಗಿ ಹೇಳಿದ್ದಾರೆ.

    10 ಪೈಸೆ ಯಾಕೆ? 10 ಪೈಸೆ ಬಹಳಷ್ಟು ಮಂದಿಯ ಜೊತೆಗೆ ಇಲ್ಲದ ಕಾರಣ ಮಾಲೀಕರು ಈ ಆಫರ್ ಇಟ್ಟಿದ್ದಾರೆ. ಆದರೆ ಒಂದು ರೂ. ನೀಡಿ 10 ಸೀರೆಯನ್ನು ಪಡೆಯಲು ಸಾಧ್ಯವಿಲ್ಲ.

    ಸೀರೆ ಖರೀದಿಸಲು ಮಹಿಳೆಯರು ಬೆಳಗ್ಗೆಯಿಂದ ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದಾರೆ. ಇತ್ತ ಪುರುಷರು ತಮ್ಮ ಪತ್ನಿಯರಿಗಾಗಿ 10 ಪೈಸೆ ನೀಡಿ ಸೀರೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಮಂಗಳವಾರದಿಂದ ಈ ವಿಶೇಷ ಆಫರ್ ಪ್ರಾರಂಭವಾಗಿದ್ದು, ಜುಲೈ 15ರವರೆಗೂ ನಿಮಗೆ ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆ ಸಿಗಲಿದೆ. ಕೆಲವು ತಿಂಗಳ ಹಿಂದೆ ಇದೇ ಚಂದ್ರಶೇಖರ್ 20 ರೂ.ಗೆ ಒಂದು ಸೀರೆಯನ್ನು ಮಾರಾಟ ಮಾಡಿದ್ದರು.