Tag: Sardar Vallabhbhai Patel

  • ಪುಣ್ಯಸ್ಮರಣೆ ವೇದಿಕೆಯಲ್ಲಿ ಫೋಟೋ ಮಾಯ – ಸರ್ದಾರ್ ಪಟೇಲ್‌ರನ್ನೇ ಮರೆತ್ರಾ ಕೈ ನಾಯಕರು?

    ಪುಣ್ಯಸ್ಮರಣೆ ವೇದಿಕೆಯಲ್ಲಿ ಫೋಟೋ ಮಾಯ – ಸರ್ದಾರ್ ಪಟೇಲ್‌ರನ್ನೇ ಮರೆತ್ರಾ ಕೈ ನಾಯಕರು?

    ಬೆಂಗಳೂರು: ಇಲ್ಲಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) 39ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಇಂದಿರಾಗಾಂಧಿ ಭಾವಚಿತ್ರಕ್ಕೆ ಕೈ ನಾಯಕರು ಪುಷ್ಪ ನಮನ ಸಲ್ಲಿಸಿ ಸ್ಮರಿಸಿದರು. ಆದ್ರೆ ವೇದಿಕೆಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ (Sardar Vallabhbhai Patel) ಅವರ ಫೋಟೋವನ್ನೇ ಇಡದಿರುವುದು ಚರ್ಚೆಗೆ ಗ್ರಾಸವಾಗಿದೆ.

    ಇದೇ ದಿನ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವೂ ಆಗಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲರ ಭಾವಚಿತ್ರ ಇಡುವುದನ್ನೇ ಮರೆತು ಎಡವಟ್ಟು ಮಾಡಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಕಾರ್ಯಕ್ರಮದ ವೇದಿಕೆಯ ಒಂದು ಭಾಗದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರ ಮಾತ್ರ ಇಡಲಾಗಿತ್ತು. ಆದ್ರೆ ಸಿಎಂ, ಡಿಸಿಎಂ ಮಾತನಾಡುತ್ತಾ ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನ, ಅವರ ಸಾಧನೆಗಳನ್ನ ನೆನಪಿಸಿಕೊಂಡರು. ಇಂದು ಪಟೇಲರ ಭಾವಚಿತ್ರ ಇಡಬೇಕಿತ್ತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: 15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ

    ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ಇಡೀ ದೇಶ, ಪ್ರಪಂಚ ಬಲಿಷ್ಠ ನಾಯಕಿಯನ್ನ ನೆನಪು ಮಾಡಿಕೊಳ್ಳೋ ಪವಿತ್ರ ದಿನ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ ಮಾಡೋ ದಿನ. ದೇಶ ಇಬ್ಬರು ಮಹಾನ್ ಶಕ್ತಿಗಳನ್ನ ನೆನಪು ಮಾಡಿಕೊಳ್ತಿದ್ದೇವೆ. ನಾನು ಯೂತ್ ಕಾಂಗ್ರೆಸ್‌ನಲ್ಲಿದ್ದಾಗ (Youth Congress), ದೆಹಲಿಗೆ ಯೂತ್ ಕಾಂಗ್ರೆಸ್ ಸಮಾವೇಶಕ್ಕೆ ಹೋಗ್ತಿದ್ದೆವು. ಬೆಂಗಳೂರು ಬಿಟ್ಟು ಹೋಗೋವಾಗ ಅರ್ಧಕ್ಕೆ ರೈಲು ನಿಂತುಹೋಯಿತು. ಆಗ ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಅಂತ, ದೊಡ್ಡ ಗಲಾಟೆ ಆಯ್ತು. ಆಗ ನನ್ನನ್ನೂ ಅರೆಸ್ಟ್ ಮಾಡಿ ಮಲ್ಲೇಶ್ವರಂ ಜೈಲಿನಲ್ಲಿ ಇರಿಸಿದ್ದರು ಎಂದು ಆ ದಿನಗಳನ್ನ ನೆನಪಿಸಿಕೊಂಡರು. ಇದನ್ನೂ ಓದಿ: IPL 2024: ನಿವೃತ್ತಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಹಿ – ಅಭಿಮಾನಿಗಳಿಗೆ ಬಿಗ್‌ ಶಾಕ್‌!

    ಸಿಎಂ ಸಿದ್ದರಾಮಯ್ಯ, ಸಚಿವರಾದ ಚೆಲುವರಾಯಸ್ವಾಮಿ, ಮಾಜಿ ಸಚಿವ ರೇವಣ್ಣ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ನರೇಂದ್ರ ಸ್ವಾಮಿ, ರಾಣಿ ಸತೀಶ್, ನಜೀರ್ ಅಹಮದ್ ವೇದಿಕೆಯಲ್ಲಿದ್ದರು.  ಇದನ್ನೂ ಓದಿ: ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ: ಸಿದ್ದರಾಮಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲ್ಯಾಣ ಕರ್ನಾಟಕ ಉತ್ಸವ- ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ

    ಕಲ್ಯಾಣ ಕರ್ನಾಟಕ ಉತ್ಸವ- ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ

    ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ನಗರದ ಸರ್ದಾರ್ ವಲ್ಲಭ್ ಭಾಯಿ ವೃತ್ತದಲ್ಲಿರುವ ಸರ್ದಾರ್ ವಲ್ಲಭ್ ಭಾಯಿ ಪಟೇಲರ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಸಿಎಂ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದ್ರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಮಾತ್ರ ಸ್ವಾತಂತ್ರ್ಯವಾಗದೇ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಅಂದಿನ ಕೇಂದ್ರ ಸಚಿವರಾದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ನಿಜಾಂ ಸರ್ಕಾರದ ವಿರುದ್ಧ ಸೈನಿಕ ಕಾರ್ಯಚರಣೆ ನಡೆಸಿ, ಇಂದಿನ ಕಲ್ಯಾಣಕರ್ನಾಟಕ ಭಾಗಕ್ಕೆ ನಿಜಾಂ ಸರ್ಕಾರದಿಂದ ಮುಕ್ತಿ ನೀಡಿದ್ದರು ಎಂದರು. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್ 

    ಹೀಗಾಗಿ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ಮಾಡುವ ಮುನ್ನ ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಪಟೇಲ್ ರ ಪುತ್ಥಳಿಗೆ ಸಿಎಂ ಮಾಲಾರ್ಪಣೆ ಮಾಡಿ ಧ್ವಜಾರೋಹಣ ಮಾಡುವುದು ವಾಡಿಕೆಯಾಗಿದೆ ಎಂದು ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ತೋಟಗಾರಿಕೆ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಸಂಸದ ಡಾ.ಉಮೇಶ ಜಾಧವ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಅಫಜಲಪೂರ ಶಾಸಕ ಎಂ.ವೈ.ಪಾಟೀಲ್, ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಅಧ್ಯಕ್ಷ ಶಶೀಲ್ ಜಿ.ನಮೋಶಿ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಉಪಸ್ಥಿತರಿದ್ದರು. ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟುಹಬ್ಬ- ಶುಭ ಕೋರಿದ ಎಚ್‍ಡಿಡಿ, ಎಚ್‍ಡಿಕೆ

  • ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ದೇಶದ ಮೊದಲ ಸೀಪ್ಲೇನ್‍ಗೆ ಮೋದಿ ಚಾಲನೆ – ಟಿಕೆಟ್ ದರ ಎಷ್ಟು? ಮುಂದೆ ಎಲ್ಲೆಲ್ಲಿ ಜಾರಿ?

    ಗಾಂಧಿನಗರ: ದೇಶದ ಮೊದಲ ಸೀಪ್ಲೇನ್‍ಗೆ ಪ್ರಧಾನಿ ನರೇದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜ್ಮದಿನಾಚಣೆಯ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

    ಸರ್ದಾರ್ ಸರೋವರದ ಡ್ಯಾಮ್‍ನ ಬಳಿಯ ಮೂರನೇ ಡ್ಯಾಮ್ ಬಳಿ ಮೋದಿ ಸೀಪ್ಲೇನ್‍ಗೆ ಚಾಲನೆ ನೀಡಿದರು. ಗುಜರಾತ್‍ನ ಸ್ಟ್ಯಾಚ್ಯೂ ಆಫ್ ಯುನಿಟಿಯ ಕೆವಾಡಿಯಾ ಕಾಲೋನಿ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಒಂದು ಗಂಟೆಯಲ್ಲಿ ಪ್ರಯಾಣವನ್ನು ಮಾಡಲಿದೆ.

    ಸೀಪ್ಲೇನ್ ವಿಶೇಷತೆ ಏನು?
    ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್‍ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಸ್ಪೈಸ್ ಜೆಟ್ ಕಂಪನಿ ಭಾರತದಲ್ಲಿ ಸದ್ಯ ಸೀಪ್ಲೇನ್ ಸರ್ವೀಸ್ ನೀಡಲಿದ್ದು, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆ ನೀಡಲಾಗುತ್ತಿದೆ. 19 ಆಸನಗಳನ್ನು ಹೊಂದಿರುವ ವಿಮಾನದಲ್ಲಿ 12 ಪ್ರಯಾಣಿಕರು ಈ ವಾಹನದಲ್ಲಿ ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ.

    ಟಿಕೆಟ್ ದರ ಎಷ್ಟು?
    ಒಬ್ಬರಿಗೆ 4,800 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಪ್ರತಿದಿನ ಸೀಪ್ಲೇನ್ ವಿಮಾನ ಅಹಮದಾಬಾದ್‍ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಿಂದ ಅಹಮದಾಬಾದ್‍ಗೆ 4 ಬಾರಿ ಸಂಚಾರ ಮಾಡಲಿದೆ.

    ಮಾಲ್ಡೀವ್ಸ್‍ನಿಂದ ಅಕ್ಟೋಬರ್ 26 ರಂದು ಸೀಪ್ಲೇನ್ ಬಂದಿಗಳಿದಿತ್ತು. ಸರ್ಕಾರದ ಉಡಾನ್ ಯೋಜನೆಯಡಿ ಇದನ್ನು ಒದಗಿಸಲಾಗಿದೆ. ಯೋಜನೆಗಾಗಿ ಗುಜರಾತ್ ಸರ್ಕಾರ ಜುಲೈನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತ್ತು. ಸಬರಮತಿ ಮತ್ತು ಸರ್ದಾರ್ ಸರೋವರ ಮಾರ್ಗವನ್ನು ದೇಶದ 16 ಸೀಪ್ಲೇನ್ ಮಾರ್ಗಗಳಲ್ಲಿ ಸೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಪೂರ್ಣಗೊಳಿಸಲಾಗಿದೆ. ಸೀಪ್ಲೇನ್‍ಗಳು ಭೂಮಿ ಮತ್ತು ಲಕ್ಷದ್ವೀಪಗಳು ಮತ್ತು ಕೊಚ್ಚಿಯಲ್ಲಿನ ಒಳನಾಡಿನ ನೀರಿನ ಮಾರ್ಗಗಳ ನಡುವೆ ಸಂಚರಿಸ ಬಹುದಾದ ಉತ್ತಮ ತಾಂತ್ರಿಕತೆಯನ್ನು ಹೊಂದಿದೆ.

    ಮುಂದೆ ಎಲ್ಲೆಲ್ಲಿ ಸಾಧ್ಯತೆ?
    ಸಬರಮತಿ ಬಳಿಕ ದೇಶದ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಭಾರತದ ಸೀಪ್ಲೇನ್ ಬೆಳವಣಿಗೆ ದೇಶಕ್ಕೆ ಹೊಸ ಸಾರಿಗೆ ವಿಧಾನವನ್ನು ಕಲ್ಪಿಸಲಿದ್ದು, ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ಸಿಕ್ಕಿದಂತಾಗುತ್ತದೆ. ಏಕೆಂದರೆ ಯಾವುದೇ ಕೊಳವನ್ನು ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬಹುದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಇಂದು ಅವರ ಗುಜರಾತ್ ಭೇಟಿ ಅಂತ್ಯವಾಗಲಿದೆ. ಸ್ಟ್ಯಾಚ್ಯೂ ಆಫ್ ಯುನಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್), ಗುಜರಾತ್ ಪೊಲೀಸರು ಏಕ್ತಾ ದಿವಾಸ್ ಪೆರೇಡನ್ನು ಆಯೋಜಿಸಿದ್ದರು. ಉಳಿದಂತೆ ಶುಕ್ರವಾರ ಗುಜರಾತ್‍ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ನರ್ಮದಾ ಜಿಲ್ಲೆಯ ಕೆವಾಡಿಯಾದ ಸ್ಟ್ಯಾಚ್ಯೂ ಆಫ್ ಯುನಿಟಿ ಬಳಿ ಹೊಸ ಪ್ರವಾಸಿ ಆಕರ್ಷಣೆಗಳು ಸೇರಿದಂತೆ ಗುಜರಾತ್‍ನಲ್ಲಿ 17 ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಆರೋಗ್ಯ ವ್ಯಾನ್, ಏಕ್ತಾ ಮಾಲ್, ಸರ್ದಾರ್ ಪಟೇಲ್ ಪಾರ್ಕ್, ದೋಣಿ ವಿಹಾರ ಸೇರಿದಂತೆ ಹಲವು ಪ್ರಮುಖ ಆಕರ್ಷಣಿಯ ಯೋಜನೆಗಲು ಇದರಲ್ಲಿ ಸೇರಿದೆ.

  • ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಹ್ಮದಾಬಾದ್: ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ.

    ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವಿಶ್ವಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಸುಮಾರು 133 ವರ್ಷ ಹಳೆಯದಾದ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ. ಏಕತಾ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸರಾಸರಿ 15 ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಸ್ಥಾಪನೆಯಾದ ಪ್ರಥಮ ವರ್ಷದಲ್ಲೇ ಏಕತಾ ಪ್ರತಿಮೆ ಅತಿ ಹೆಚ್ಚು ಜನರನ್ನು ಆಕರ್ಷಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪ್ರತಿನಿತ್ಯ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನವೆಂಬರ್ 1, 2018ರಿಂದ ಅಕ್ಟೋಬರ್ 31, 2019ರ ವರೆಗೆ ಪ್ರವಾಸಿಗರ ಭೇಟಿಯಲ್ಲಿ ಸರಾಸರಿ ಶೇ.74 ರಷ್ಟು ಹೆಚ್ಚಿದೆ. ಇದೀಗ ಎರಡನೇ ವರ್ಷದ ಮೊದಲ ತಿಂಗಳಲ್ಲಿ ಪ್ರತಿದಿನ ಸರಾಸರಿ 15,036 ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

    ಅಲ್ಲದೆ ವಾರಾಂತ್ಯದ ದಿನಗಳಲ್ಲಿ ಇದು ಸುಮಾರು 22,430ಕ್ಕೆ ಏರುತ್ತದೆ. ಅಮೆರಿಕದ ನ್ಯೂಯಾರ್ಕ್‍ನ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆಯು ನಿತ್ಯ 10 ಸಾವಿರ ಪ್ರವಾಸಿಗರನ್ನು ಮಾತ್ರ ಆಕರ್ಷಿಸುತ್ತಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಏಕತೆಯ ಪ್ರತೀಕವಾಗಿ ಭಾರತದ ಮೊದಲ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಪುತ್ಥಳಿಯನ್ನು ನರ್ಮದಾ ನದಿಯ ತಟದಲ್ಲಿ ಸ್ಥಾಪಿಸಲಾಗಿದೆ. ಇದು 182 ಮೀಟರ್ ಎತ್ತರವಿದ್ದು, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನರ್ಮದಾ ನದಿಯ ತಟದ ಸರ್ದಾರ್ ಸರೋವರ ಡ್ಯಾಂ ಬಳಿ ಇದ್ದು, ಗುಜರಾತ್‍ನ ಕೇವಾಡಿಯಾ ಕಾಲೋನಿ ಬಳಿ ಸ್ಥಾಪಿತವಾಗಿದೆ.

    ಪ್ರವಾಸಿಗರ ಭೇಟಿಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅದರಲ್ಲೂ ನವೆಂಬರ್ 2019ರಲ್ಲಿ ಹೆಚ್ಚು ಜನ ಭೇಟಿ ನೀಡಿದ್ದಾರೆ. ಈ ವರ್ಷ ನವೆಂಬರ್ 30ರ ವರೆಗೆ ಒಟ್ಟು 30.91 ಲಕ್ಷ ಪ್ರವಾಸಿಗರು ಕೆವಾಡಿಯಾಗೆ ಭೇಟಿ ನೀಡಿದ್ದಾರೆ. ಒಟ್ಟು 85.57 ಕೋಟಿ ರೂ.ಗಳ ಆದಾಯ ದಾಖಲಾಗಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತಿಳಿಸಿದೆ.

    ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಸಫಾರಿ, ಮಕ್ಕಳ ನ್ಯೂಟ್ರಿಷನ್ ಪಾರ್ಕ್, ಕ್ಯಾಕ್ಟಸ್ ಗಾರ್ಡನ್, ಚಿಟ್ಟೆಗಳ ಗಾರ್ಡನ್, ಎಕತಾ ನರ್ಸರಿ, ದಿನೋ ಟ್ರೈಯಲ್, ರಿವರ್ ರ್ಯಾಫ್ಟಿಂಗ್, ಬೋಟಿಂಗ್ ಅಲ್ಲದೆ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

    ಏಕತಾ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣ ಮಾಡಿದ್ದರು.

    ಈ ಏಕತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ನಿರ್ಮಾಣಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿತ್ತು. ಏಕತಾ ಪ್ರತಿಮೆ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ವಿಶೇಷತೆಯಿಂದ ಇಂದು ಬ್ರಿಟನ್‍ನ ಪ್ರತಿಷ್ಠ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

  • ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಅಹಮದಾಬಾದ್: ಸರ್ದಾರ್ ವಲ್ಲಭಭಾಯ್ ಪಟೇಲ್‍ರ 144ನೇ ಜನ್ಮದಿನವನ್ನು ದೇಶಾದ್ಯಂತ ‘ಏಕತಾ ದಿವಸ್’ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ಕೆವಡಿಯಾದಲ್ಲಿರುವ ಏಕತಾ ಪ್ರತಿಮೆಯ ಪಾದಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

    ಇತ್ತ ದೆಹಲಿಯ ಪಟೇಲ್ ಚೌಕ್‍ನಲ್ಲಿ ಸರ್ದಾರ್ ಪ್ರತಿಮೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಪುಷ್ಪನಮನ ಸಲ್ಲಿಸಿದ್ದಾರೆ. ಹಾಗೆಯೇ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ ಬಾಕ್ಸರ್ ಮೇರಿ ಕೋಮ್ ಕೋಡ ಉಪಸ್ಥಿತರಿದ್ದರು. ಇತ್ತ ಬೆಂಗಳೂರಿನಲ್ಲಿ ಕೂಡ ಏಕತಾ ಮ್ಯಾರಥಾನ್ ನಡೆದಿದ್ದು, ವಿಧಾನಸೌಧದಲ್ಲಿ ಮ್ಯಾರಥಾನ್‍ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

    ಸರ್ದಾರ್ ವಲ್ಲಭಭಾಯ್ ಪಟೇಲ್‍ರ ಜಯಂತೋತ್ಸವದಂದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯರೂಪಕ್ಕೆ ಬಂದಿದೆ. ಕೇಂದ್ರ ಸರ್ಕಾರವು 370ರ ವಿಧಿ ರದ್ದು ಮಾಡಿದ ಮೂರು ತಿಂಗಳ ಬಳಿಕ ಕಣಿವೆ ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಜಾರಿಗೆ ಬಂದಿದೆ.

    370ನೇ ವಿಧಿ ಹಾಗೂ 35(ಎ) ವಿಧಿ ಈ ಎರಡು ವಿಧಿಗಳು ಭಾರತದಲ್ಲಿ ಭಯೋತ್ಪಾದನೆಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಪ್ರಧಾನಿಯವರು 370ನೇ ವಿಧಿ ಹಾಗೂ 35 ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದಾರಿಯನ್ನು ಮುಚ್ಚಿದ್ದಾರೆ ಎಂದು ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಅಮಿತ್ ಶಾ ಹೇಳಿದರು.

    2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದ್ದರು. ಹೀಗಾಗಿ 2014ರಿಂದ ಪ್ರತಿ ವರ್ಷ ಅಕ್ಟೋಬರ್ 31ರಂದು ಏಕತಾ ದಿನವನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಬರೀ ಕೇಂದ್ರ ನಾಯಕರು ಮಾತ್ರವಲ್ಲದೆ ರಾಜ್ಯದ ಅನೇಕ ರಾಜಕಾರಣಿಗಳು ಕೂಡ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಸಿದ್ದಾರೆ.

  • ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗಾಂಧಿನಗರ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಕ್ಕಿನ ಪ್ರತಿಮೆ ಇರುವ ಸ್ಥಳಕ್ಕೆ ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದ್ದಾರೆ.

    ಗುಜರಾತ್‍ನ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಬಾಯಿ ಅವರ 182 ಮೀಟರ್ ಉದ್ದದ ಏಕತಾ ಪ್ರತಿಮೆಯನ್ನು ದೇವೇಗೌಡರು ವೀಕ್ಷಿಸಿದ್ದಾರೆ.

    ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಗುಜರಾತ್‍ಗೆ ವಿಮಾನ ಮೂಲಕ ಪ್ರಯಾಣ ಬೆಳೆಸಿರುವ ಗೌಡರು, ಏಕತಾ ಪ್ರತಿಮೆಯ ಜೊತೆಗೆ ಗುಜರಾತ್ ನಲ್ಲಿರುವ ಇತರ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ. ಇದರ ಜೊತೆಗೆ ಗರುಡೇಶ್ವರ ದೇವಸ್ಥಾನ, ರಂಗ್ ಅವದೂತ್ ಮಹಾರಾಜ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

    ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ 2018 ಅಕ್ಟೋಬರ್ 31 ಅನಾವರಣ ಮಾಡಲಾಯಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ನಾವು ಪ್ರತಿಮೆಯಲ್ಲಿ ಕಾಣಬಹುದು.

    ಈ ಯೋಜನೆ ಆರಂಭಗೊಂಡಿದ್ದು ಹೇಗೆ?
    2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

    ಎಷ್ಟು ಖರ್ಚಾಗಿದೆ?
    ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿತ್ತು. 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.

    ಏನೆಲ್ಲ ವಿಶೇಷತೆಯಿದೆ?
    ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ `ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೋ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸಲಾಗುತ್ತದೆ.

  • ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಧಾರವಾಡ: ಬ್ರಿಟಿಷರಂತೆಯೇ ಕಾಂಗ್ರೆಸ್ ಕೂಡ ಮುಸ್ಲಿಂ ತುಷ್ಟೀಕರಣ ಮಾಡುತ್ತ ಒಡೆದು ಆಳುವ ನೀತಿ ಅನುಸರಿಸಿದೆ ಎಂದು ಸಂಶೋಧಕ, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಕಾಂಗ್ರೆಸ್ ಹಾಗೂ ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡದಲ್ಲಿ ನಡೆದ ಆವರಣ ಕೃತಿಯ 40ನೇ ಮುದ್ರಣದ ಸಂಭ್ರಮದಲ್ಲಿ ಮಾತನಾಡಿದ ಅವರು, ನೆಹರು ನೇರವಾಗಿಯೇ ಮುಸ್ಲಿಮರಿಗೆ ಧಮ್ಕಿ ಹಾಕಿ ನೀವು ನಮಗೆ ಮತ ಹಾಕಬೇಕು ಅಂದಿದ್ದರು. ಅದನ್ನೇ ಮಾದರಿಯಾಗಿ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದೇ ಕಾರಣಕ್ಕೆ ಇಂದು ರಾಹುಲ್‍ಗಾಂಧಿ 370ನೇ ವಿಧಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಇದನ್ನು ವಿರೋಧಿಸದೇ ಹೋದರೆ ನನ್ನ ಮುತ್ತಜ್ಜ ನೆಹರೂ ಮಾಡಿದ್ದೆಲ್ಲ ತಪ್ಪಾಗಿ ಬಿಡುತ್ತದೆ ಎನ್ನುವುದು ರಾಹುಲ್‍ಗೆ ಗೊತ್ತಿದೆ, ಹೀಗಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆಹರು ಕುಟಂಬಕ್ಕೆ ತುಂಬಾ ಸೊಕ್ಕು ಇತ್ತು. ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರು ಔರಂಗಜೇಬನ ಇತಿಹಾಸ ಮರೆಮಾಚಿದ್ದಾರೆ. ಔರಂಗಜೇಬ್ ಖುರಾನ್ ಪ್ರತಿಗಳನ್ನು ನಕಲು ಮಾಡಿ ಮಾರಿ ಆ ದುಡ್ಡಿನಲ್ಲಿ ಮಾತ್ರ ಊಟ ಮಾಡುತಿದ್ದ ಎಂದು ಬರೆದಿದ್ದಾರೆ. ಇಷ್ಟು ದೇವಸ್ಥಾನ ಒಡೆದ, ಇಷ್ಟು ಜನರನ್ನು ಮತಾಂತರ ಮಾಡಿಸಿದ ಎಂದು ಎಲ್ಲಿಯೂ ಬರೆದಿಲ್ಲ ಎಂದು ನೆಹರು ವಿರುದ್ಧ ಕಿಡಿಕಾರಿದರು.

    ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ದೇಶವನ್ನು ಯಾರ ಕೈಗೆ ಕೊಡಬೇಕೆಂದು ಕಾಂಗ್ರೆಸ್‍ಗೆ ಕೇಳಿದರು. ಆಗ ಕಾಂಗ್ರೆಸ್‍ನ 15 ಪ್ರಾದೇಶಿಕ ಕಮೀಟಿಗಳ ಪೈಕಿ ನೆಹರು ಹೆಸರನ್ನು ಒಬ್ಬರೂ ಹೇಳಿರಲಿಲ್ಲ. ಆದರೆ ಸರ್ದಾರ ವಲ್ಲಭಾಯ್ ಪಟೇಲ್‍ರ ಹೆಸರನ್ನು 12 ಕಮೀಟಿ ಹೇಳಿದ್ದವು. ನೆಹರು ನಾನು ಆದರೆ ಪ್ರಧಾನಿಯೇ ಆಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಆಗ ಗಾಂಧೀಜಿ ಸರ್ದಾರ್ ವಲ್ಲಭಾಯ್ ಪಟೇಲರಿಗೆ ಹಿಂದೆ ಸರಿಯುವಂತೆ ಸೂಚಿಸಿದರು ಎಂದು ವಿವರಿಸಿದರು.

    ಇದಕ್ಕೂ ಮೊದಲು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಭೂಗತರಾಗಬೇಕಾದಲ್ಲಿ ಗಾಂಧೀಜಿಯೆ ಕಾರಣವಾಗಿದ್ದರು. ಹಾಗೆಯೇ ನನ್ನ ಸ್ಥಿತಿಯೂ ಆಗದಿರಲಿ ಎಂದು ಸರ್ದಾರ್ ವಲ್ಲಭಾಯ್ ಪಟೇಲರು ಹಿಂದೆ ಸರಿದಿದ್ದರು ಎಂದು ತಿಳಿಸಿದರು.

  • ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಉಡುಪಿ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರವನ್ನು ಲೋಕಸಭೆಯಲ್ಲಿ ಮಂಡಿಸಿದ ಅಮಿತ್ ಶಾ ಅವರು ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಉಕ್ಕಿನ ಮನುಷ್ಯರಾಗಿದ್ದಾರೆ. ಭಾರತದ ಜನ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ್ದು ಇಂದು ಸಾರ್ಥಕವಾಯಿತು ಎಂದು ಹೇಳಿದರು.

    ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯ ಮೂಲಕ ಕಾಶ್ಮೀರದ ಭೂಮಿಯನ್ನು ಬೇರೆ ಯಾವ ಭಾರತದ ಪ್ರಜೆಯೂ ಕೊಂಡುಕೊಳ್ಳಲು ಆಗುವುದಿಲ್ಲ. ಇದರ ಜೊತೆಗೆ ಭಾರತದ ಸಂವಿಧಾನದ ಯಾವುದೇ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಈ ಎಲ್ಲಾ ವಿಚಾರದಿಂದ ಭಾರತದಿಂದ ಕಾಶ್ಮೀರ ಬೇರ್ಪಟ್ಟು ಹೋಗುತ್ತದೆ ಎನ್ನು ಆತಂಕ ಎಲ್ಲರಲ್ಲೂ ಎದುರಾಗಿತ್ತು.

    ಆದರೆ ಮೋದಿ ಮತ್ತು ಅಮಿತ್ ಶಾ ಇಂದು ಆ ವಿಧಿಯನ್ನು ತೆಗೆದು ಹಾಕುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರತಿಯೊಬ್ಬ ರಾಷ್ಟ್ರಭಕ್ತನೂ ಪಕ್ಷ ಬೇಧ ಮರೆತು ಬೆಂಬಲಿಸಬೇಕು. ನಾನು ಭಾರತೀಯ ಎಂದು ಹೇಳಿಕೊಳ್ಳಲು ಇಂದು ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.

  • 3 ಸಾವಿರ ಕೋಟಿ ವೆಚ್ಚದಲ್ಲಿ ಏಕತಾ ಪುತ್ಥಳಿ – ವರ್ಷಕ್ಕೂ ಮೊದ್ಲೇ ಸೋರುತ್ತಿದೆ ವೀಕ್ಷಕರ ಗ್ಯಾಲರಿ

    3 ಸಾವಿರ ಕೋಟಿ ವೆಚ್ಚದಲ್ಲಿ ಏಕತಾ ಪುತ್ಥಳಿ – ವರ್ಷಕ್ಕೂ ಮೊದ್ಲೇ ಸೋರುತ್ತಿದೆ ವೀಕ್ಷಕರ ಗ್ಯಾಲರಿ

    ಗಾಂಧಿನಗರ: ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಕಟ್ಟಿಸಲಾಗಿರುವ ಏಕತಾ ಪ್ರತಿಮೆಯ ಕಾಂಪ್ಲೆಕ್ಸ್ ಒಂದೇ ಮಳೆಯಲ್ಲಿ ಸೋರಲು ಆರಂಭಿಸಿದೆ.

    ಕಳೆದ ವರ್ಷದ ಅಕ್ಟೋಬರ್ ನಲ್ಲಿ ವಡೋದಾರದಲ್ಲಿ 182 ಅಡಿಯ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈ ಪ್ರತಿಮೆಯ ವೀಕ್ಷಣೆಗಾಗಿ 153 ಮೀಟರ್ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಕಟ್ಟಿಸಲಾಗಿತ್ತು. ಆ ವೀಕ್ಷಣಾ ಗ್ಯಾಲರಿಯ ಮೇಲ್ಫಾವಣಿಯಲ್ಲಿ ನೀರು ಸೋರಿಕೆ ಆಗುತ್ತಿದೆ.  ಇದನ್ನೂ ಓದಿ:  ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ಯೋಜನೆ ಆರಂಭಗೊಂಡಿದ್ದು ಹೇಗೆ?

    ನಾವು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನೋಡಲು ಹೋಗಿದ್ದೆವು. ಈ ವೇಳೆ ಮಳೆಯಲ್ಲಿ ಪುತ್ಥಳಿ ನೆನೆಯುತ್ತಿರುವುದು ನೋಡಿ ಬೇಸರವಾಯಿತು. ಮಳೆ ಜೋರಾಗಿ ಬರದಿದ್ದರೂ ಮೈನ್ ಹಾಲ್ ಹಾಗೂ ವೀಕ್ಷಣಾ ಗ್ಯಾಲರಿಯಲ್ಲಿ ನೀರು ತುಂಬಿಕೊಂಡಿತ್ತು ಎಂದು ಪ್ರತಿಮೆಯನ್ನು ನೋಡಲು ಹೋಗಿದ್ದ ಪ್ರವಾಸಿಗರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:   ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

    ಈ ಬಗ್ಗೆ ಸ್ಟ್ಯಾಚ್ಯೂ ಆಫ್ ಯೂನಿಟಿ ಟ್ವೀಟ್ ಮಾಡಿ, “ಗಾಳಿ ಜೋರಾಗಿ ಬೀಸಿದ್ದ ಕಾರಣ ಮಳೆ ನೀರು ವೀಕ್ಷಣಾ ಗ್ಯಾಲರಿಯೊಳಗೆ ನುಗ್ಗಿದೆ. ವಿನ್ಯಾಸದ ಮೂಲಕ ಪ್ರವಾಸಿಗರು ಆನಂದಿಸಬಹುದಾದ ಉತ್ತಮ ವೀಕ್ಷಣೆಗಾಗಿ ಅದನ್ನು ತೆರೆದಿಡಬೇಕು. ನೀರಿನ ಸಂಗ್ರಹವನ್ನು ನಿರ್ವಹಣಾ ತಂಡವು ತ್ವರಿತವಾಗಿ ನಿಭಾಯಿಸುತ್ತಿದೆ” ಎಂದು ತಿಳಿಸಿದೆ.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅಕ್ಟೋಬರ್ 31ರಂದು ಅನಾವರಣಗೊಂಡಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ಈ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದರು.

  • ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ವಿಶೇಷತೆ

    ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ವಿಶೇಷತೆ

    ಬೆಂಗಳೂರು: ದಿಟ್ಟ ನಿರ್ಧಾರಗಳಿಂದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆಗೂ ಇದು ಪಾತ್ರವಾಗಲಿದೆ.

    ಇಂದು ಸರ್ದಾರ್ ವಲ್ಲಭ್‍ಭಾಯ್ ಪಟೇಲ್ ಅವರ 142ನೇ ಜನ್ಮದಿನ. ದೇಶದ ಮೊದಲ ಉಪಪ್ರಧಾನಿ, ಏಕೀಕೃತ ಭಾರತದ ಶಿಲ್ಪಿ, ಉಕ್ಕಿನ ಮನುಷ್ಯ ಖ್ಯಾತಿಯ ಪಟೇಲರ ಸ್ಮರಣಾರ್ಥ ಗುಜರಾತ್‍ನ ನರ್ಮದಾ ನದಿ ದಡದ ಸಾಧುಬೆಟ್ಟದಲ್ಲಿ ವಿಶ್ವದ ಎತ್ತರದ ಪ್ರತಿಮೆ ಅನಾವರಣ ಆಗಲಿದೆ. ಬೆಳಗ್ಗೆ 11.30ಕ್ಕೆ ಪ್ರಧಾನಿ ಮೋದಿ ಈ ಜಗದ್ವಿಖ್ಯಾತ ‘ಐಕ್ಯತಾ ಪ್ರತಿಮೆ’ಯನ್ನ ಲೋಕಾರ್ಪಣೆ ಮಾಡಲಿದ್ದಾರೆ.

    ‘ಐಕ್ಯತಾ ಪ್ರತಿಮೆ’ಯ ವಿಶೇಷತೆ
    ಈ ಐಕ್ಯತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ಇದಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿದೆ.
    ಇದನ್ನೂ ಓದಿ: ಏಕತಾ ಪ್ರತಿಮೆ ಉದ್ಘಾಟನೆಗೆ ಬರುತ್ತಿರುವ ನಿಮಗೆ ಬಹಿಷ್ಕಾರ: ಮೋದಿಗೆ ಗ್ರಾಮಸ್ಥರ ಪತ್ರ

    2010ರಲ್ಲಿ ಯೂನಿಟಿ ಸ್ಟ್ಯಾಚ್ಯೂ ಯೋಜನೆ ಘೋಷಣೆಯಾಗಿತ್ತು. ನರೇಂದ್ರ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ಟ್ಯಾಚೂ ಆಫ್ ಯೂನಿಟಿ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಇದೀಗ ಅದು ಪೂರ್ಣಗೊಂಡಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ. ಈ ಏಕತಾ ಪ್ರತಿಮೆ ಜೊತೆ ಪಟೇಲರ ಜೀವನಗಾಥೆ ಸಾರುವ ವಸ್ತು ಸಂಗ್ರಹಾಲಯ, ಲೇಸರ್ ಲೈಟ್ ಪ್ರದರ್ಶನ, ಪ್ರತಿಮೆ ಸುತ್ತಲಿನ ಪ್ರದೇಶದಲ್ಲಿ ಜಲವಿಹಾರ, ವಿವಿಧ ರಾಜ್ಯಗಳ ಮಹತ್ವ ಸಾರುವ ಪ್ರದರ್ಶನ ಕೇಂದ್ರ, ಸರ್ದಾರ್ ಪಟೇಲ್, ಗಾಂಧೀಜಿ, ಅಂಬೇಡ್ಕರ್ ಜೀವನ ಸಾಧನೆಗಳ ಅಧ್ಯಯನಕ್ಕೆ ಸಂಶೋಧನಾ ಕೇಂದ್ರ ಇದೆ. ಇದನ್ನೂ ಓದಿ:  ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ಯೋಜನೆ ಆರಂಭಗೊಂಡಿದ್ದು ಹೇಗೆ?

    ನೋಯ್ಡಾ ಮೂಲದ ಶಿಲ್ಪಿ ರಾಮ್. ವಿ. ಸುತರ್ ಈ ಪ್ರತಿಮೆ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಸುತರ್, ಪಟೇಲ್‍ರ ಸುಮಾರು 2 ಸಾವಿರ ಫೋಟೋಗಳನ್ನ ಅಧ್ಯಯನ ಮಾಡಿದ್ದರು. ಈ ಪ್ರತಿಮೆಯನ್ನ ದೂರದಿಂದ ನೋಡಿದರೆ ಸರ್ದಾರ್ ಪಟೇಲ್ ಅವರು ನೀರಿನಲ್ಲಿ ನಡೆದುಕೊಂಡು ಸರ್ದಾರ್ ಸರೋವರ್ ಡ್ಯಾಮ್‍ನತ್ತ ಬರುತ್ತಿರುವಂತೆ ಕಾಣುತ್ತದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ, 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಅದನ್ನು ತಡೆಯುವ ಸಾಮರ್ಥ್ಯ ಈ ‘ಉಕ್ಕಿನ ಮನುಷ್ಯ’ನ ಪ್ರತಿಮೆಗೆ ಇದೆ ಎನ್ನುವುದು ಭಾರತದ ಮತ್ತೊಂದು ಹೆಮ್ಮೆ.

    ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಏಕತೆಯ ಓಟ ಆಯೋಜಿಸಲಾಗಿದೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕತಾ ಓಟ ನಡೆಸೋದಾಗಿ ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆಗೆ ಆದೇಶಿಸಲಾಗಿದೆ. ಒಟ್ಟಿನಲ್ಲಿ ಇದೀಗ ಎಲ್ಲಾ ಸವಾಲುಗಳನ್ನ ದಾಟಿ ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv