ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.
ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.
ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಶುಕ್ರವಾರ ಸದನದಲ್ಲಿ ನಡೆದ ಚರ್ಚೆಯ ವೇಳೆ ಸಚಿವ ಸಾ.ರಾ.ಮಹೇಶ್ ಅವರು ಎಚ್. ವಿಶ್ವನಾಥ್ ಮೇಲೆ 28 ಕೋಟಿ ರೂಪಾಯಿಯ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್ ಅವರು ಮಹೇಶ್ ಅವರಿಗೆ ಧೈರ್ಯವಿದ್ದರೆ ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಚ್.ವಿಶ್ವನಾಥ್, ಕೆಲವು ಕಾರಣಗಳಿಂದ ಮುಂಬೈನಲ್ಲಿ ಇದ್ದೀನಿ ಖಂಡಿತ ಬರುತ್ತೇನೆ. ನಾವು ಬಂದಂತಹ ಸಂದರ್ಭದಲ್ಲಿ ಜಾತಿ, ಹಣದ ಬಗ್ಗೆ ಎತ್ತಿಕಟ್ಟಿ ನಮ್ಮ ಮಾನಹರಣ ಮಾಡುತ್ತಾರೆ. ಹೊರಗಡೆ ಇದ್ದರೂ ಮಾಡುತ್ತಾರೆ ಎಂದು ಗೊತ್ತಿದೆ. ಆದರೆ ಗೈರಾದ ಶಾಸಕನ ಬಗ್ಗೆ ಸದನದೊಳಗೆ ಮಾತನಾಡುವ ಅಧಿಕಾರ ಯಾವ ಸದಸ್ಯನಿಗೂ ಇಲ್ಲ. ಅದಕ್ಕೆ ಸ್ಪೀಕರ್ ಅವಕಾಶ ಮಾಡಿಕೊಡಬಾರದು ಎಂದು ಗರಂ ಆದರು. ಇದನ್ನೂ ಓದಿ: ಬಿಜೆಪಿಯಿಂದ ವಿಶ್ವನಾಥ್‍ಗೆ 28 ಕೋಟಿ ರೂ. ಆಫರ್: ಸಾ.ರಾ.ಮಹೇಶ್
ಇದೆಲ್ಲ ಗೊತ್ತಿದ್ದರೂ ಸಾ.ರಾ.ಮಹೇಶ್ ಸದನದಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ಧೈರ್ಯವಿದ್ದರೆ ಹೊರಗಡೆ ಬಂದು ಪ್ರತಿಕಾಗೋಷ್ಠಿ ಮಾಡಿ ಆರೋಪ ಮಾಡಲಿ. ಆಗ ನಾನು ಅದನ್ನು ಎದುರಿಸುತ್ತೇನೆ. ಅದನ್ನು ಬಿಟ್ಟು ಸದನದಲ್ಲಿ ಆಪಾದನೆ ಮಾಡಿದರೆ ಗಾಳಿಯಲ್ಲಿ ಗುಂಡು ಹೊಡೆದ ರೀತಿಯಲ್ಲಿ ಇರುತ್ತದೆ. ಸದನದಲ್ಲಿ ಯಾರು ಬೇಕಾದರು ಯಾರ ಮೇಲಾದರೂ ಆರೋಪ ಮಾಡಬಹುದು ಎಂದು ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಸದನದಲ್ಲಿ ಸದಸ್ಯನ ಗೈರು ಹಾಜರಿಯಲ್ಲಿ ಆಪಾದನೆ ಮಾಡುವ ಅವಕಾಶವಿಲ್ಲ. ಆದರೆ ಆಪಾದನೆ ಮಾಡುವುದಕ್ಕೆ ಸದನದಲ್ಲಿ ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ಇದನ್ನು ಸದನದಲ್ಲಿ ನೋಡಿದೆ. ಇದು ದ್ರೌಪದಿಯ ಸೀರೆ ಎಳೆಯುವಾಗ ಮಿಕ್ಕವರು ಅದನ್ನು ನೋಡಿ ನಕ್ಕಿದ್ದಂತಾಗಿದೆ. ಇದನ್ನು ನೋಡಿ ಮನಸ್ಸಿಗೆ ತುಂಬ ನೋವಾಯಿತು. ಸ್ಪೀಕರ್ ಪಕ್ಷಪಾತ ಮಾಡಿದ್ದಾರೆ. ಅದನ್ನು ಹೇಗೆ ಎಸದುರಿಸಬೇಕು ಎಂದು ಗೊತ್ತಿದೆ. ಈಗಾಗಲೇ ಸ್ಪೀಕರ್‌ಗೆ ಪತ್ರ ಬರೆಯುತ್ತಿದ್ದೇನೆ.
ಶುಕ್ರವಾರ ನಡೆದ ಚರ್ಚೆಯಲ್ಲಿ ಸಚಿವ ಸಾರಾ ಮಹೇಶ್ ವಿಶ್ವನಾಥ್‍ಗೆ ಬಿಜೆಪಿ ಅವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು.
ಬೆಂಗಳೂರು: ಅವನ್ಯಾರು ನನಗೆ ಮಂತ್ರಿ ಸ್ಥಾನ ಕೊಡೋಕೆ? ನಾನು ಸೇಲ್ ಆಗಿಲ್ಲ ಎಂದು ವಿಶ್ವನಾಥ್ ಅವರು ಸಚಿವ ಸಾರಾ ಮಹೇಶ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮತನಾಡಿದ ಅವರು, ನಾನು ಸಾರಾ ಮಹೇಶ್ ಆರೋಪ ಮಾಡಿರುವುದನ್ನ ನೋಡಿದೆ. ಅವರು ತೋಟದ ಮನೆ ವಿಚಾರ ನಿಜ. ಅಲ್ಲಿಗೆ ನಾನು ಸ್ನೇಹಿತನಾಗಿ ಹೋಗಿದ್ದೆ. ನಾವು ಚುನಾವಣೆಯಲ್ಲಿ ಮಾಡಿಕೊಂಡಿದ್ದಂತಹ ಸಾಲದ ಬಗ್ಗೆ ಕೂಡ ನಾವು ಮಾತನಾಡಿದ್ದೇವು. ಆದರೆ 28 ಕೋಟಿಗೆ ನಾವು ಸೇಲ್ ಆಗಿದ್ದೇವೆ ಎಂದು ಸಾರಾ ಮಹೇಶ್ ಹೇಳಿದ್ದು ನಿಜಕ್ಕೂ ಮನಸಿಗೆ ನೋವಾಯ್ತು ಎಂದರು.
ಸುಮಾರು 40 ವರ್ಷದಿಂದ ಪ್ರಮಾಣಿಕತೆಯನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಈಗ ನಾನು ಸದನದಲ್ಲಿ ಇಲ್ಲವಲ್ಲ, ನಾನು ವಾಪಾಸ್ ಬಂದಮೇಲೆ ಅವರಿಗೆ ಉತ್ತರ ಕೊಡುತ್ತೇನೆ. ಸದನದಲ್ಲಿ ಓರ್ವ ಶಾಸಕ ಗೈರು ಹಾಜರಿ ಹಾಕಿರುವಾಗ ಅವರ ಬಗ್ಗೆ ಬೇರೆ ನಾಯಕರು ಈ ರೀತಿ ಮಾತನಾಡಲು ಸ್ಪೀಕರ್ ಅವಕಾಶ ಕೊಟ್ಟಿರುವುದು ಸರಿಯಲ್ಲ. ಮಾತನಾಡಲು ಬೇಕಾದಷ್ಟಿದೆ, ಸಿಎಂ ನಮ್ಮನ್ನು ಯಾವ ರೀತಿ ನಡೆಸಿಕೊಂಡರು ಎನ್ನುವ ಬಗ್ಗೆ ಆಮೇಲೆ ಹೇಳುತ್ತೇನೆ. ಸಾರಾ ಮಹೇಶ್ ಆರೋಪವನ್ನು ನಾನು ತಿರಸ್ಕಾರ ಮಾಡುತ್ತಿದ್ದೇನೆ. ಮುಂದೆ ಈ ಬಗ್ಗೆ ನಾನು ಕಾನೂನು ಹೋರಾಟವನ್ನು ಕೂಡ ಮಾಡುತ್ತೇನೆ. ಶಾಸನ ಸಭೆಯಲ್ಲೂ ಕೂಡ ಈ ಬಗ್ಗೆ ನಾನು ಪ್ರಸ್ತಾಪ ಮಾಡುತ್ತೇನೆ ಎಂದರು.
ಸಾರಾ ಮಹೇಶ್ ಅವರು ಎಲ್ಲರನ್ನೂ ಜಾತಿ ಆಧಾರದ ಮೇಲೆ ಮಾತನಾಡಿಸುತ್ತಾರೆ. ಅದಕ್ಕೆ ನಾನು ಹಲವು ಸಾರಿ ಸಿಎಂ ಬಳಿ ಈ ಬಗ್ಗೆ ಹೇಳಿದ್ದೆ, ನಿಮ್ಮ ಸಚಿವ ಸಾರಾಸಗಟಾಗಿ ಎಲ್ಲರ ಬಗ್ಗೆ ಜಾತಿ ಹಿಡಿದು ಮಾತನಾಡುತ್ತಾರೆ ಎಂದು ಗಮನಕ್ಕೆ ತಂದಿದ್ದೆ. ಸಾರಾ ಮಹೇಶ್ ಅವರು ಬರೀ ಚಾಡಿ ಹೇಳುತ್ತಾರೆ. ಸರ್ಕಾರದ ಈ ಸ್ಥಿತಿಗೆ ಅವರು ಕೂಡ ಒಂದು ರೀತಿ ನೇರ ಕಾರಣ. ಅವರ ದುರಹಂಕಾರ, ತಿಂಗಳು ತಿಂಗಳಿಗೆ ಕೊಡುತ್ತೇನೆ ತೆಗೆದುಕೊಂಡು ಹೋಗು ಅನ್ನೋಕೆ ನಮ್ಮನ್ನೆಲ್ಲಾ ಏನು ಅಂದುಕೊಂಡಿದ್ದಾನೆ ಎಂದು ಪ್ರಶ್ನಿಸಿ ಗರಂ ಆದರು.
ನಾನು ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದು ಬೇರೆಯ ವಿಚಾರ. ಆ ಸಂದರ್ಭ ಬಂದಾಗ ನಾನು ಅದರ ಬಗ್ಗೆ ಮಾತನಾಡುತ್ತೆನೆ. ವಿಮಾನದಲ್ಲಿ ಹೋಗುವವರೆಲ್ಲ ಯಾರ ಹತ್ತಿರವಾದರೂ ದುಡ್ಡು ತೆಗೆದುಕೊಂಡೆ ಹೋಗುತ್ತಾರಾ? ಹಾಗೆ ಹೋಗಿ ಬರುತ್ತಾರೆ. ಅದು ಬೇರೆಯ ವಿಚಾರವಾಗುತ್ತದೆ ಎಂದು ಕಿಡಿಕಾರಿದರು. ನಾನು 28 ಕೋಟಿ ತೆಗೆದುಕೊಂಡಿರುವುದನ್ನ ಇವರು ಸಾಬೀತು ಮಾಡಲಿ. ಈ ದುಡ್ಡು ಯಾರು ಕೊಟ್ಟರು? ಇವನೆಲ್ಲಿ ಅದನ್ನು ನೋಡಿದ? ಎನ್ನುವುದನ್ನ ಸಾಬೀತು ಮಾಡಲಿ. ನಾನು ಸಾಲ ಮಾಡಿದ್ದು ನಿಜ, ಇವತ್ತಿಗೂ ಸಾಲ ಇದೆ. ಚುನಾವಣೆ ಸಾಲ ಮಾಡದಿದ್ದರೆ ಹೇಗೆ ಆಗುತ್ತೆ. ಪಾಪ ಸಾರಾ ಮಹೇಶ್ ಕರಿಯುತ್ತಿದ್ದಾರೆ ಅಂತ ತೋಟಕ್ಕೆ ಹೋದೆ. ಆಗ ನಿಮ್ಮ ಸಾಲ ಇದ್ದರೆ ತೀರಿಸು ಎಂದು ಸಿಎಂ ನನಗೆ ಹೇಳಿದ್ದಾರೆ ಎಂದರು. ಇವೆಲ್ಲಾ ವಿಚಾರ ಸಿಎಂ ಅವರಿಗೂ ಗೊತ್ತಿದೆ ಎಂದು ಏಕವಚನದಲ್ಲೆ ವಾಗ್ದಾಳಿ ನಡೆಸಿದರು.
ಆದ್ರೆ ನಮ್ಮ ಅಸಹಾಯಕತೆಯನ್ನ ಇವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಂತ್ರಿ ಸ್ಥಾನ ಬೇಕು ಅಂತ ನನಗೆ ಕೇಳೋಕೆ ಇವನ್ಯಾರು? ಮುಖ್ಯಮಂತ್ರಿನಾ? ನಾನು ಮೊದಲೆ ಹೇಳಿದ್ದೆ ನನಗೆ ಮಂತ್ರಿಗಿರಿ ಬೇಡ ಎಂದು ಸಿಎಂಗೆ ಹೇಳಿದ್ದೆ. ಸರ್ಕಾರದಲ್ಲಿ ನಿಮ್ಮ ಜೊತೆ ನಿಂತು ಕೆಲಸ ಮಾಡಲು ಇಷ್ಟ ಪಡುತ್ತೇನೆ ಆದ್ರೆ ಸಚಿವ ಸ್ಥಾನ ಬೇಡ ಅಂದಿದ್ದೆ.
ಏನು ನಡಿತೋ, ಏನು ಗೊತ್ತಾಯ್ತೋ. ಇವರು ಮಾತ್ರ ಸುಳ್ಳಿನ ಕಂತೆ ಹೇಳಿಕೊಂಡು ಇದ್ದಾರೆ. ಇವತ್ತಿನ ಸದನದಲ್ಲಿ ಯಾರು ಯಾರ ಮೇಲೆ ಆರೋಪ ಮಾಡಬೇಕು ಅನ್ನೊದನ್ನ ನಿರ್ಧರಿಸಿಕೊಂಡು ಬಂದ ಹಾಗೆ ಇದೆ. ಸಿಎಂ ಗೆ ಎಲ್ಲಾ ಮಾಹಿತಿ ಗೊತ್ತಿದ್ದರೆ ಇಟ್ಟುಕೊಟ್ಟಲಿ. ಇಲ್ಲವಾದರೆ ಜನರಿಗೆ ಹೇಳಲಿ ಅದಕ್ಕೇನು? ನಾನು ಸ್ವತಂತ್ರ ವ್ಯಕ್ತಿ. ನಾನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲು ಇವರ್ಯಾರು? ನಾನು ಸ್ವಚ್ಛವಾಗಿದ್ದೆನೆ, ನನಗೆ ಬೆರಳು ಮಾಡಿ ಹೇಳುವಂತ ಕೆಲಸವನ್ನ ನಾನು ಮಾಡಿಲ್ಲ. ಇಲ್ಲಿ ಶಕ್ತಿವಂತನಲ್ಲದಿದ್ದರೂ ಪ್ರಾಮಾಣಿಕತೆಯಿಂದ ಬದುಕುವವರ ಪಟ್ಟಿಯಲ್ಲಿ ನಾನಿದ್ದೇನೆ. ನನ್ನ ಮೇಲೆ ಆರೋಪ ಮಾಡಿದಕ್ಕೆ ಸಿಎಂ ಹಾಗೂ ಮಹೇಶ್ ಮೇಲೆ ನನಗೆ ಬೇಸರವಾಯ್ತು. ಸಾರಾ ಮಹೇಶ್ ಅವರಿಂದ ನನ್ನ ವಿರುದ್ಧ ಆರೋಪ ಮಾಡುವಂತೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
ಇವತ್ತು ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ನಾನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಮಹೇಶ್ ಸವಾಲು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದರು.
ಸಾರಾ ಮಹೇಶ್ ಹೇಳಿದ್ದೇನು?
ವಿಶ್ವನಾಥ್‍ಗೆ ಬಿಜೆಪಿ ಅವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಸಾರಾ ಮಹೇಶ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲು ಅಂದರೆ ನಾಲ್ಕು ತಿಂಗಳ ಹಿಂದೆ ಅವರೇ, “ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯುವ ಹಂಬಲ, ಕಾತುರ ಇರುವುದು ಸಹಜವಾಗಿದೆ. ಆದರೆ ಅದಕ್ಕಾಗಿ ವಾಮ ಮಾರ್ಗ ಹಿಡಿಯುವುದು ಸರಿಯಿಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುತ್ತಿರುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಬಿಜೆಪಿಗೆ ಶೋಭೆ ತರುವುದಲ್ಲ. ಅದೇ ರೀತಿ ಕಪ್ಪು ಹಣ ಉಪಯೋಗಿಸಬಾರದು” ಎಂದು ಹೇಳಿಕೆ ಕೊಟ್ಟಿದ್ದರು.
ಆದರೆ ನಾನು ಅಮೆರಿಕಕ್ಕೆ ಹೋಗುವ ಮೊದಲು ಸಾ.ರಾ ಮಹೇಶ್ ಸರಿಯಿಲ್ಲ. ಅವರ ಧೋರಣೆಗೆ ಬೇಸತ್ತು ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆಗ ನಾನು ಅವರನ್ನು ತೋಟಕ್ಕೆ ಕರೆಸಿ, ಏನ್ ಸರ್ ಮಂತ್ರಿ ಆಗಬೇಕೆಂಬ ಆಸೆ ಇದೆಯೇ ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ, ಇಲ್ಲ ನನಗೆ ಅದೇನು ಬೇಡ ಎಂದರು. ಅದಕ್ಕೆ ನಾನು ಮತ್ತೆ ಬೇರೆ ಏನ್ ಬೇಕು ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಚುನಾವಣೆಗೆ ನಾನು ಸಾಲ ಮಾಡಿಕೊಂಡಿದ್ದೇನೆ. ಅದರಿಂದ ಸಮಸ್ಯೆಯಾಗಿದೆ ಎಂದಿದ್ದರು.
ಇದೇ ವೇಳೆ ಅವರು, ನನ್ನನ್ನು ಬಿಜೆಪಿಯವರು ಕರೆದಿದ್ದರು. ಜೊತೆಗೆ 28 ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ. ಆದರೆ ದೇವೇಗೌಡರು ಈ ಕಾಲದಲ್ಲಿ ನನ್ನನ್ನು ನಂಬಿ ಮೂಲೆಯಲ್ಲಿ ಇದ್ದವನ ಕರೆದುಕೊಂಡು ಬಂದು ಶಾಸಕನ ಸ್ಥಾನ ಕೊಟ್ಟರು. ಅವರಿಗೆ ಮೋಸ ಮಾಡಲ್ಲ ಎಂದಿದ್ದೇನೆ. ನೀವು ಸಾಲ ತೀರಿಸಲು ಒಂದು ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಬೇಕಿದ್ದರೆ ಅವರನ್ನು ಕರೆಸಿ ಇಲ್ಲೆ ಕೇಳಿ ನಾನು ಹೇಳುತ್ತಿರುವುದು ಸತ್ಯ. ಇಲ್ಲವಾದಲ್ಲಿ ಇನ್ಮುಂದೆ ಯಾವತ್ತು ಬಿಳಿ ಬಟ್ಟೆ ಹಾಕಲ್ಲ. ಕೈ ಮುಗಿದು ಸಾರ್ವಜನಿಕರ ಮುಂದೆ ವೋಟು ಕೇಳಲ್ಲ ಎಂದು ಮಹೇಶ್ ಶಪಥ ಮಾಡಿದರು.
ಬೆಂಗಳೂರು: ವಿಧಾನಸಭೆಯಲ್ಲಿಯೇ ಸಿಎಂ ಇಬ್ಬರು ಸಚಿವರ ಮೇಲೆ ಸಿಟ್ಟಾಗಿದ್ದು, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಚಿವ ಸಾರಾ ಮಹೇಶ್ ಮತ್ತು ಸಚಿವ ಜಿ.ಟಿ.ದೇವೇಗೌಡ ಅವರಿಗೆ ಸಿಎಂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿ ಅವರನ್ನು ಮೀಟ್ ಮಾಡುವುದಕ್ಕೆ ಹೋಗಿದ್ಯಾ? ಎಂದು ಸಿಎಂ ಸಾ.ರಾ.ಮಹೇಶ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಸಿಎಂ ಪ್ರಶ್ನೆಯಿಂದ ಕಕ್ಕಾಬಿಕ್ಕಿಯಾಗಿ ಜಿ.ಟಿ.ದೇವೇಗೌಡರ ಕಡೆಗೆ ಸಾ.ರಾ. ಮಹೇಶ್ ಬೊಟ್ಟು ಮಾಡಿ ತೋರಿಸಿದ್ದಾರೆ.
ಆಗ ಸ್ಪಷ್ಟನೆ ಕೊಡಲು ಮುಂದಾದ ಜಿಟಿಡಿ ಮೇಲೂ ಸಿಎಂ ಸಿಟ್ಟಾಗಿದ್ದಾರೆ. ಇಬ್ಬರಿಗೂ ಕೈ ತೋರಿಸಿ ಸಿಎಂ ವಾರ್ನಿಂಗ್ ಮಾಡಿದ್ದಾರೆ. ನಿಮ್ಮ ಆಟಗಳಿಂದ ಈ ಎಲ್ಲ ಡ್ರಾಮಾವನ್ನು ನೋಡಬೇಕಾಗಿದೆ ಎಂದು ಗುಡುಗಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಕುಮಾರ ಕೃಪಾದಲ್ಲಿ ಭೇಟಿಯಾಗಿದ್ದರು ಇತ್ತ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಜಿ.ಟಿ.ದೇವೇಗೌಡ ಅವರಿಗೆ ಸ್ವಾಗತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಗಳಿಂದ ಸಿಎಂ ಅವರಿಗೆ ಮುಜುಗರ ಉಂಟಾಗಿದೆ. ಇದರಿಂದ ಕೋಪಗೊಂಡ ಸಿಎಂ ಇಬ್ಬರನ್ನು ಕರೆದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಕೂಡ ಜಿ.ಟಿ.ದೇವೇಗೌಡ ಅವರು ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನವೇ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದರು.
ಬೆಂಗಳೂರು: ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಕ್ಕೆ ಸಚಿವ ಸಾರಾ ಮಹೇಶ್ ಗೆ ಸಿಎಂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ ವಿಷಯ ಸುದ್ದಿಯಾಗುತ್ತಿದ್ದಂತೆ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಸಿಎಂ ಅವರು ಸಾರಾ ಮಹೇಶ್ ರನ್ನ ಕರೆಯಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂಬಾಗಿಲಿನಿಂದ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಂದಿದ್ದ ಸಚಿವ ಸಾ.ರಾ ಮಹೇಶ್, ಬಿಜೆಪಿ ನಾಯಕರ ಜೊತೆಗಿನ ಚರ್ಚೆಯ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾರಾ ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು.
ಇದೀಗ ಈ ರಹಸ್ಯ ಭೇಟಿ ಮೈತ್ರಿ ಪಕ್ಷದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ವಿಚಾರಕ್ಕೆ ಸಚಿವ ಸಾ ರಾ ಮಹೇಶ್ ರನ್ನ ಕರೆಯಿಸಿ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಅಪರೇಷನ್ ಕಮಲದಿಂದ ಸರ್ಕಾರ ಉಳಿಸಿಕೊಳ್ಳುವ ಸಮಯದಲ್ಲೇ ಜೆಡಿಎಸ್ ಸಚಿವರಿಂದ ಎಡವಟ್ಟಾಗಿದ್ದು, ಸಾ.ರಾ ಮಹೇಶ್ ಅವರ ರಹಸ್ಯ ಭೇಟಿ ಮೈತ್ರಿ ಪಕ್ಷದಲ್ಲಿ ಬಿರುಕು ತರುತ್ತಾ ಎಂಬ ಆತಂಕದಲ್ಲಿ ಸಿಎಂ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಯಾದಗಿರಿ: ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯವನ್ನು ಕೊಂಡಾಡಿದ್ದ ಕಮಲ ನಾಯಕರು ಈಗ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಬಿಜೆಪಿಯವರು ಸಿಎಂ ಅವರನ್ನು ಕೊಂಡಾಡಿದ್ದರು. ಆದರೆ ಈಗ ಟೀಕೆ ಮಾಡುತ್ತಿದ್ದಾರೆ, ಇದಕ್ಕೇನು ಹೇಳಬೇಕು? ಎಂದು ಸಚಿವ ಸಾ.ರಾ ಮಹೇಶ್ ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ
ಮುಖ್ಯಮಂತ್ರಿಗಳ ಎರಡನೇ ದಿನದ ಗ್ರಾಮ ವಾಸ್ತವ್ಯಕ್ಕೆ ವರುಣನ ಅಡ್ಡಿಯಾಗಿದೆ. ಹೀಗಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮ ಇಂದಿನ ವಾಸ್ತವ್ಯ ಭಾರೀ ಮಳೆಯಿಂದ ರದ್ದಾಗಿದೆ. ಸುಮಾರು 13 ವರ್ಷಗಳ ಬಳಿಕ ಸಿಎಂ ಕೈಗೊಂಡ ಮೊದಲ ದಿನದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿಎಂ ಗ್ರಾಮವಾಸ್ತವ್ಯದ ಕಾರಣ ಇಡೀ ಚಂಡರಕಿ ಗ್ರಾಮ ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಚಂಡರಕಿಯಲ್ಲಿ ಜನತಾದರ್ಶನ 3 ಗಂಟೆ ತಡವಾಗಿ ಆರಂಭವಾಗಿದ್ದು, ರಾತ್ರಿ 8 ಗಂಟೆ ತನಕವೂ ಸಿಎಂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಇದನ್ನೂ ಓದಿ:ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ
ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಮಕ್ಕಳೊಂದಿಗೆ ರಾತ್ರಿಯ ಭೋಜನ ಸವಿದರು. ರಾತ್ರಿಯ ಭೋಜನದ ಬಳಿಕ ಗ್ರಾಮಸ್ಥರು, ಶಾಲಾ ಮಕ್ಕಳ ಜೊತೆಗೆ ಫೋಟೋ ಸೆಷನ್ ಕೂಡ ನಡೆಯಿತು. ಸಿಎಂಗೆ ಶಾಲೆಯ ಕೊಠಡಿಯಲ್ಲಿ ಯಾವುದೇ ಹಾಸಿಗೆ ಇಲ್ಲದೆ ಚಾಪೆ, ದಿಂಬು, ಹೊದಿಕೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಕಲಬುರಗಿ ಜಿಲ್ಲೆ ಅಫ್ಜಲಪುರದ ಬಿ.ಹೇರೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆಯಾಗಿದ್ದು, ಸಿಎಂ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಹಾಳಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತ ಸಿಎಂ ಅವರ ಹಳ್ಳಿ ವಾಸವನ್ನು ಮುಂದೂಡಿದೆ.
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಶಿಕ್ಷಣ ಖಾತೆಯನ್ನು ವಿಶ್ವನಾಥ್ ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಸರ್ಕಾರ ನಡೆಸಲು ಅವರಿಂದ ಸಿಎಂಗೆ ಒಳ್ಳೆಯ ಸಲಹೆ, ಮಾರ್ಗದರ್ಶನ ಸಿಗುತ್ತದೆ. ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ವಿಶ್ವನಾಥ್ ಅವರ ಮಾತುಗಳನ್ನ ಬೇರೆ ಅರ್ಥದಲ್ಲಿ ನೋಡುವುದು ಬೇಡ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು. ಅದನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಶ್ವನಾಥ್ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಆರೋಗ್ಯದ ದೃಷ್ಟಿಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಆದರೆ ನಾವು ನೀವೇ ಇರಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಪ್ರಗತಿ ಪರಿಶೀಲನೆ ನಡೆಯುವ ಸ್ಥಳಕ್ಕೆ ಸಹಾಯ ಕೇಳಿ ಬಂದಿದ್ದ ಎಚ್.ಡಿ.ಕೋಟೆಯ ನಿವಾಸಿಗಿರುವ ಅಂಗವಿಕಲ ಗೋವಿಂದಪ್ಪ ಅವರಿಗೆ ಸಾ.ರಾ ಮಹೇಶ್ ಅವರು ಸಹಾಯ ಮಾಡಿದ್ದಾರೆ. ಜೀವನ ನಡೆಸಲು ಮಳಿಗೆ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಗೋವಿಂದಪ್ಪ ಸಚಿವರ ಬಳಿ ಕೋರಿಕೊಂಡರು. ಹಾಗೆಯೇ ನನ್ನ ಬೈಕ್‍ನ ಟೈಯರ್ ಗಳು ಹಾಳಾಗಿವೆ, ನನಗೆ ಸಹಾಯ ಮಾಡಿ ಎಂದು ಗೋವಿಂದಪ್ಪ ಕೇಳಿಕೊಂಡಾಗ ಸಚಿವರು ಬೈಕ್‍ಗೆ ಹೊಸ ಟೈಯರ್ ಹಾಕಿಸಿಕೊಳ್ಳಿ ಎಂದು ಹಣ ನೀಡಿ ಸಹಾಯ ಮಾಡಿದರು.
ಬೆಂಗಳೂರು: ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.
ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ ಪರಿಸ್ಥತಿ. ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದು, ಕೆಲವು ಮಾಡೆಲ್ ಮನೆಗಳ ಫೋಟೋ ನೋಡದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳು ಶೀಟ್ ಮನೆ ತರಹ, ಗಾಳಿ ಬೆಳಕಿಲ್ಲದಂತೆ ಕೆಟ್ಟದಾಗಿ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವಾಗ ಚೆನ್ನಾಗಿರುವ ಮನೆ ಕಟ್ಟಿಕೊಡಿ. ಕೊಡಗಿನ ಸಂತ್ರಸ್ಥರ ಸ್ವಾಭಿಮಾನಕ್ಕೆ ದಕ್ಕೆ ಬರದಂತೆ ಒಳ್ಳೆಯ ಮನೆಗಳನ್ನ ಕಟ್ಟಿಕೊಡಿ ಎಂದು ನಾನು ಮನವಿ ಮಾಡಿದ್ದೇನೆ ಅಷ್ಟೆ. ನಾನು ಈ ವಿಷಯಕ್ಕೆ ಯಾರನ್ನೂ ದೂರಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಮಾತನಾಡಲು ಅವರು ಯಾರು? ಏನು ಓದಿದ್ದಾರೆ? ಎಂದು ಕೇಳಿದ್ದಾರೆ. ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಸಾರಾ ಮಹೇಶ್ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಹಾಗೆಯೇ ಕೊಡಗಿನಲ್ಲಿ ತುರ್ತು ಚಿಕಿತ್ಸಾ ಆಸ್ಪತ್ರೆ ಮಾಡಿ ಎನ್ನುವುದು ನಮ್ಮ ಮನವಿ. ಕೊಡಗಿನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಅಲ್ಲದೆ 35 ಲಕ್ಷಕ್ಕೂ ಅಧಿಕ ಮಂದಿ ಪ್ರವಾಸಿಗರು ಪ್ರತಿ ವರ್ಷ ಕೊಡಗಿಗೆ ಪ್ರವಾಸಕ್ಕೆ ಬರುತ್ತಾರೆ. ಇಷ್ಟೆಲ್ಲಾ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಒಂದು ತುರ್ತು ಚಿಕಿತ್ಸಾ ಆಸ್ಪತ್ರೆ ಇಲ್ಲವೆಂದರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ. ಹೀಗಾಗಿ ಕೊಡಗಿಗೆ ತುರ್ತು ಚಿಕಿತ್ಸಾ ಆಸ್ಪತ್ರೆ ಬೇಕು ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಆಸ್ಪತ್ರೆ ನಿರ್ಮಾಣ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ. ಅಲ್ಲದೆ ಮಳೆಗಾಲ ಆರಂಭವಾಗುವ ಮುನ್ನ ಕೊಡಗು ಜನರಿಗೆ ಮನೆ ನಿರ್ಮಿಸಿಕೊಡಿ, ಮಳೆ ಆರಂಭವಾದರೆ ಅವರಿಗೆ ಬೇರೆ ಕಡೆ ಶಿಫ್ಟ್ ಆಗಲು ಕಷ್ಟವಾಗುತ್ತೆ ಎಂದು ಮನವಿ ಮಾಡಿಕೊಂಡರು.
ಸಾರಾ ಮಹೇಶ್ ಹೇಳಿದ್ದೇನು?
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದರು.
ಮೈಸೂರು: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದಾರೆ.
ಹರ್ಷಿಕಾ ಹೇಳಿದ್ದೇನು?:
ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ಸ್ಯಾಂಡಲ್‍ವುಡ್ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಅಲ್ಲದೆ ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.
ಮೈಸೂರು: ರಾಜಕೀಯದಲ್ಲಿ ಕುಸ್ತಿ ಆಡುವ ಜೆಡಿಎಸ್, ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಒಂದೇ ಕಾರಿನಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಓಡಾಡಿದ್ದಾರೆ.
ಹೌದು. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಿ.ಟಿ ದೇವೇಗೌಡ, ಸಚಿವ ಸಾ.ರಾ.ಮಹೇಶ್ ಜೊತೆಯಾಗಿ ಓಡಾಟ ನಡೆಸಿದ್ದಾರೆ. ಅದರಲ್ಲೂ ಒಂದೇ ಕಾರಿನಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಪ್ರಯಾಣಿಸುತ್ತಿರುವುದು ವಿಶೇಷವಾಗಿದೆ. ಮೈಸೂರಿನಲ್ಲಿ ಇಂದು ಹಲವು ಕಾರ್ಯಕ್ರಮದಲ್ಲಿ ನಾಯಕರು ಒಟ್ಟಿಗೆ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.
ಬೆಳಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಿಟಿಡಿ ಹಾಗೂ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಸಹ ನಾಯಕರಿಗೆ ಸಾಥ್ ನೀಡಿದ್ದರು.
ಲೋಕಸಭಾ ಚುನಾವಣೆಯ ಸಮಯದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ಸಿನ ವಿಜಯಶಂಕರ್ ಕಣಕ್ಕೆ ಇಳಿದಾಗ ಸಿಂಹ ವಿರುದ್ಧ ಜೆಡಿಎಸ್ ನಾಯಕರು ಪ್ರಚಾರ ನಡೆಸಿದ್ದರು. ಈಗ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿರುವುದು ಅಚ್ಚರಿ ಮೂಡಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೆಗೌಡ ಅವರು, ವಿಶ್ವನಾಥ್ ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇಲ್ಲ. ಇವತ್ತು ಜೆಡಿಎಸ್ ಪಕ್ಷದ ಸಭೆ ಇದೆ. ಮೈಸೂರು ಕಾರ್ಯಕ್ರಮಗಳನ್ನು ಮುಗಿಸಿ ಬೆಂಗಳೂರಿಗೆ ತೆರಳುತ್ತೇನೆ. ವಿಶ್ವನಾಥ್ ಹಾಗೂ ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇನೆ. ನಂತರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಇದೇ ವಿಚಾರವಾಗಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನಾನು ದೂರವಾಣಿಯಲ್ಲಿ ವಿಶ್ವನಾಥ್ ಜೊತೆ ಮಾತನಾಡಿದ್ದೇನೆ. ನೀವು ಬಂದ ಮೇಲೆ ಪಕ್ಷ ಸಂಘಟನೆ ಚೆನ್ನಾಗಿ ನಡೆದಿದೆ. ನೀವು ರಾಜೀನಾಮೆ ಕೊಡಬಾರದು ಎಂದು ಮನವಿ ಮಾಡಿದ್ದೇನೆ. ನಿಮ್ಮ ಮಾರ್ಗದರ್ಶನದಲ್ಲಿ ಜೆಡಿಎಸ್ ಮುನ್ನಡೆಸಬೇಕು ಎಂದು ಕೇಳಿದ್ದೇನೆ. ಅವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಹೇಳಿದರು.