Tag: Sara Mahesh

  • ಹೆಚ್‍ಡಿಕೆಯೇ ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದಾರೆ – ಜಿಟಿಡಿ ಹೊಸ ಬಾಂಬ್

    ಹೆಚ್‍ಡಿಕೆಯೇ ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದಾರೆ – ಜಿಟಿಡಿ ಹೊಸ ಬಾಂಬ್

    ಮೈಸೂರು: ದಸರಾ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಗೂ ಬಿಜೆಪಿ ಜೊತೆ ಕುಮಾರಸ್ವಾಮಿ ಅವರೇ ಕಳುಹಿಸಿದ್ದು, ಅವರು ನೀಡಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗಲೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

    ಈ ವೇಳೆ ಜಿಟಿಡಿ ನಮ್ಮ ಹಿರಿಯ ನಾಯಕರು ಅವರನ್ನು ಬಿಟ್ಟರೆ ಅವರ ಮಗ ಜಿ.ಡಿ ಹರೀಶ್ ಚುನಾವಣೆಗೆ ನಿಲ್ಲುಸುತ್ತೇವೆ ಎಂಬ ಸಾರಾ ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹರೀಶ್ ಮೇಲೆ ಪ್ರೀತಿ ಇದ್ದರೆ ಸಾ.ರಾ ಮಹೇಶ್ ಅವರೇ ನೇರವಾಗಿ ಅವನ ಜೊತೆ ಮಾತನಾಡಲಿ. ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ದೇವರಿಗೆ ಗೊತ್ತಿದೆ. ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ನನಗೆ ಗೊತ್ತಿದೆ. ಖುದ್ದು ಸಾ.ರಾ ಮಹೇಶ್‍ಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

  • ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನು ಮಾರಿಕೊಂಡಿಲ್ಲ: ಸಾರಾ ಮಹೇಶ್

    ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನು ಮಾರಿಕೊಂಡಿಲ್ಲ: ಸಾರಾ ಮಹೇಶ್

    ಮೈಸೂರು: ಯಾರ ಮೇಲೆ ಆರೋಪ ಇತ್ತು ಅವರು ನಾನಲ್ಲ ಎಂದು ಹೇಳೋಕೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ವ್ಯವಸ್ಥೆಯಲ್ಲಿ ಜನರಿಗೆ ನನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಿರುವುದು ಸತ್ಯ. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನ ಮಾರಿಕೊಂಡಿಲ್ಲ ಎಂದು ವಿಶ್ವನಾಥ್ ಮೇಲೆ ಕಿಡಿಕಾರಿದ್ದಾರೆ. ಇದನ್ನು ಓದಿ: ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ನೀವು ಮಾರಿಕೊಂಡು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮನಸಾಕ್ಷಿ ಆತ್ಮಗೌರವ ಇದಿಯಾ ನಿಮಗೆ? ಇಷ್ಟು ಅನ್ಯಾಯ ಮಾಡಿ ಮಾತನಾಡುತ್ತಿದ್ದೀರಲ್ಲಾ ಏನು ಅನ್ನಿಸಲ್ವಾ. ನನ್ನನ್ನು ಕರೆದುಕೊಂಡು ಹೋಗಿ ಯಾರ ಹತ್ತಿರ ಮಾತನಾಡಿಸಿದ್ರಿ? ನೀವು ಬಾಂಬೆಯಿಂದ ಕರೆಸಿ ಯಾರನ್ನು ಮಾತನಾಡಿಸಿದ್ರಿ ಗೊತ್ತಿಲ್ವಾ. ನಿಮ್ಮ ಮನೆ ದೇವರ ಬಳಿಗೆ ಕರೆಯಿರಿ, ನೀವು ಏನ್ ಏನ್ ಮಾತನಾಡಿದ್ದೀರಿ ಎಂದು ಎಲ್ಲವನ್ನೂ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

  • ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ಮೈಸೂರು: ಹೆಚ್. ಡಿ ದೇವೇಗೌಡರ ಕುಟುಂಬದ ಕಣ್ಣೀರಿಗೆ ಮಾಜಿ ಸಚಿವ ಸಾರಾ ಮಹೇಶ್ ಕಾರಣ ಎಂದು ಅನರ್ಹ ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಇಂದು ಕೆ.ಆರ್. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ದೇವೇಗೌಡರ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ ಎಂದರೆ ಅದಕ್ಕೆ ಸಾರಾ ಮಹೇಶ್ ಮತ್ತು ಆತನ ಕೆಲ ಸ್ನೇಹಿತರು ಕಾರಣ. ದೇವೇಗೌಡರ ಮನೆಗೆ ಇವತ್ತು ಅನ್ಯಾಯವಾಗಿದ್ದರೆ ಅದಕ್ಕೂ ಸಾರಾ ಮಹೇಶ್ ಕಾರಣ. ದೇವೇಗೌಡರ ಕಣ್ಣೀರಿಗೂ ಅವರೇ ಕಾರಣ ಎಂದು ಕಿಡಿಕಾರಿದರು.

    ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರೇ ಜೆಡಿಎಸ್‍ನಿಂದ ದೂರವಾದರು. ಇವತ್ತಿನ ದೇವೇಗೌಡರ ಈ ಸ್ಥಿತಿಗೆ ನಾವಲ್ಲ ಕಾರಣ ನೀವು. ಮಹೇಶ್ ಕ್ಷೇತ್ರದಲ್ಲಿ ಕೆಲವರಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಕೊಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದರೆ ನನ್ನದ್ದು ಅಭಿವೃದ್ಧಿ ರಾಜಕಾರಣ. ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ. ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಮಾಡಿದಷ್ಟು ಕೆಲಸ ನೀವು ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.

    ಈ ವೇಳೆ ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ವಿಶ್ವನಾಥ್, ಕಾನೂನುಗಿಂತ ಯಾರು ದೊಡ್ಡವರಲ್ಲ. ಡಿಕೆಶಿ ಇದೆಲ್ಲದರಿಂದ ಬಹು ಬೇಗ ಮುಕ್ತವಾಗಿ ಹೊರ ಬರಲಿ. ಹೊರ ಬಂದು ರಾಜಕಾರಣ ಮಾಡಬೇಕು ಎಂದು ಹಾರೈಸಿದರು.

  • ಎಚ್‍ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ- ಸಾರಾ ಮಹೇಶ್

    ಎಚ್‍ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ- ಸಾರಾ ಮಹೇಶ್

    ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಜಿ.ಟಿ.ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವು ಶೀಘ್ರದಲ್ಲೇ ಹೊರ ಬರಲಿವೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಆದರೆ ಎಲ್ಲ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ ಎಂದು ಹೇಳಿದರು.

    14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಎಚ್‍ಡಿಕೆ ಉಂಡಷ್ಟು ನೋವು ಯಾರು ಉಣ್ಣಲಿಲ್ಲ. ಬೆಳಗ್ಗೆ ಒಂದು ಗಂಟೆ ಅಧಿಕಾರಿಗಳ ಸಭೆ ಮಾಡಿದರೆ ಮುಗಿಯಿತು. ನಂತರ ಅಸಮಾಧಾನಗೊಂಡ ಶಾಸಕರ ಸಮಾಧಾನದಲ್ಲೇ ಸಮಯ ಕಳೆಯಬೇಕಾಗಿತ್ತು. ಕುಮಾರಸ್ವಾಮಿಯವರ ಹತ್ತಿರವೇ ನಾನಿದ್ದ ಕಾರಣ ಅವರು ಉಂಡ ಎಲ್ಲ ನೋವುಗಳು ನನಗೆ ತಿಳಿದಿದೆ. ಇದೀಗ ಅಧಿಕಾರ ಹೋದ ನಂತರದಲ್ಲಿ ಮತ್ತೆ ಅದೇ ನೋವು ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಿನ್ನೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಸಭೆಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಗೈರಾಗಿರುವುದರ ಕುರಿತು ಜಿಟಿಡಿ ಹಾಗೂ ದೇವೇಗೌಡರ ನಡುವೆ ವಾಗ್ವಾದ ನಡೆದಿತ್ತು. ಎಚ್‍ಡಿಡಿ ಪ್ರತಿಕ್ರಿಯಿಸಿ ಅವರು ಎಲ್ಲಿಗಾದರೂ ಹೋಗಲಿ ಬಿಡಿ, ಅವರ ಪಾಡಿಗೆ ಅವರನ್ನು ಬಿಡಿ ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಪ್ರತಿಕ್ರಿಯಿಸಿ, ಜೆಡಿಎಸ್ ಸಭೆಗೆ ನನ್ನನ್ನು ಆಹ್ವಾನಿಸಿರಲಿಲ್ಲ. ಹೀಗಾಗಿ ನಾನು ಸಭೆಗೆ ಹೋಗಿಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಜಿಟಿಡಿ ಹೇಳಿದ್ದರು ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಆಕ್ರೋಶ ವ್ಯಕ್ತಪಡಿಸಿ, ಚಾಮುಂಡಿ ತಾಯಿಯಾಣೆ ನಾನು ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಹೇಳಿಲ್ಲ ಎಂದು ತಿರುಗೇಟು ನೀಡಿದ್ದರು. ಇದೀಗ ಸಾರಾ ಮಹೇಶ್ ಪರೋಕ್ಷವಾಗಿ ಜಿಟಿಡಿ ವಿರುದ್ಧ ಹರಿಹಾಯ್ದಿದ್ದಾರೆ.

  • ಕೊನೆಗೂ ಬಿಎಸ್‍ವೈಗೆ ಲಕ್ಕಿ ಸರ್ಕಾರಿ ಬಂಗಲೆ ಬಿಟ್ಟು ಕೊಟ್ಟ ಸಾರಾ ಮಹೇಶ್

    ಕೊನೆಗೂ ಬಿಎಸ್‍ವೈಗೆ ಲಕ್ಕಿ ಸರ್ಕಾರಿ ಬಂಗಲೆ ಬಿಟ್ಟು ಕೊಟ್ಟ ಸಾರಾ ಮಹೇಶ್

    ಬೆಂಗಳೂರು: ಮಾಜಿ ಸಚಿವ ಸಾರಾ ಮಹೇಶ್ ಅವರು ಕೊನೆಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರಿ ಬಂಗಲೆಯನ್ನು ಬಿಟ್ಟುಕೊಟ್ಟಿದ್ದಾರೆ.

    ಇನ್ನೂ 15 ದಿನ ಇರುವಾಗಲೇ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಂಬರ್ 2 ನಿವಾಸವನ್ನು ಮಾಜಿ ಸಚಿವರು ಖಾಲಿ ಮಾಡಿದ್ದಾರೆ. ಈ ಮೊದಲು ನಿವಾಸ ಬಿಟ್ಟು ಕೊಡುವಂತೆ ಸಿಎಂ ಬಿಎಸ್‍ವೈ ಅವರು ಅಧಿಕಾರಿಗಳ ಮೂಲಕ ಸಾರಾ ಮಹೇಶ್ ಗೆ ಸೂಚನೆ ನೀಡಿದ್ದರು. ಆದರೆ ಯಡಿಯೂರಪ್ಪ ಅವರ ಮಾತಿಗೆ ಸಾರಾ ಮಹೇಶ್ ಅವರು ಕ್ಯಾರೇ ಎಂದಿರಲಿಲ್ಲ.

    ಬಿಎಸ್‍ವೈ ಮಾತಿಗೆ ಕಿವಿಗೊಡದೆ ಇಷ್ಟು ದಿನ ಮಹೇಶ್ ನಿವಾಸದಲ್ಲೇ ಇದ್ದರು. ಮೈತ್ರಿ ಸರ್ಕಾರ ಬಿದ್ದು, ಅಧಿಕಾರ ಹೋದರೂ ಆ ಮನೆ ಬಿಡದೆ ಇಷ್ಟು ದಿನ ಅಲ್ಲೇ ವಾಸ್ತವ್ಯವಿದ್ದರು. ಇದೀಗ ಸರ್ಕಾರ ಬಿದ್ದ 50 ದಿನಕ್ಕೆ ಮಾಜಿ ಸಚಿವರು ಮನೆ ಖಾಲಿ ಮಾಡಿದ್ದಾರೆ. ಈ ಬೆನ್ನಲ್ಲೇ ಸಿಎಂ ಅವರ ವಾಸ್ತವ್ಯಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಖಾಲಿ ಮಾಡಿದ ಒಂದೇ ದಿನಕ್ಕೆ ಸಿಬ್ಬಂದಿ ಮನೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಸರ್ಕಾರಿ ಬಂಗಲೆಯನ್ನು ನವೀಕರಣ ಮಾಡುವ ಕೆಲಸ ಆರಂಭಿಸಿದ್ದಾರೆ.

    ಮನೆಯೊಳಗಿರುವ ಗೋಡೆಗಳನ್ನು ಸರಿ ಪಡಿಸುವುದು, ಗೋಡೆಗೆ ಮತ್ತೊಮ್ಮೆ ಪ್ಲಾಸ್ಟಿಂಗ್ ಮಾಡುವುದು, ಹಾಗೂ ಹೊಸದಾಗಿ ಗೋಡೆಗೆ ಪೇಂಟಿಂಗ್ ಮಾಡುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳ ಸೂಚನೆಯ ಮೇರೆಗೆ ಬಿಎಸ್‍ವೈ ಅವರ ಲಕ್ಕಿ ಹೌಸ್ ನ ನವೀಕರಣ ನಡೆಯುತ್ತಿದೆ.

    ಲಕ್ಕಿ ಮನೆಗಾಗಿ ಬಿಎಸ್‍ವೈ ಪಟ್ಟು:
    ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೂ ಬಿಎಸ್‍ವೈ ಅವರು ತಮ್ಮ ಹಳೆಯ ಈ ಲಕ್ಕಿ ಹೌಸನ್ನು ಬಿಟ್ಟಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಮಹಿಸಿಕೊಂಡರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೇ ತಮ್ಮ ಹಳೆಯ ರೇಸ್ ಕೋರ್ಸ್ ನಿವಾಸಕ್ಕೆ ಮರಳಲು ನಿರ್ಧರಿಸಿದ್ದರು. ಈ ಹಿಂದೆಯೂ ಸಿಎಂ ಆಗಿದ್ದಾಗ ಬಿಎಸ್‍ವೈ ಅವರು ಇದೇ ನಿವಾಸದಲ್ಲಿ ನೆಲೆಸಿದ್ದರು. ಅಲ್ಲದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿ ಇದ್ದಾಗ ಬಬಿಎಸ್‍ವೈ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನೂ ಏರಿದ್ದರು.

    ಸಮ್ಮಿಶ್ರ ಸರ್ಕಾರ ಬಂದ ಸಮಯದಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ನನಗೆ ಇದೇ ಮನೆ ಬೇಕು ಎಂದು ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿ ಶಿವಾನಂದ ಸರ್ಕಲ್ ಬಳಿಯ ನಿವಾಸವನ್ನು ಬಿಎಸ್‍ವೈ ನೀಡಿದ್ದರು. ಆದರೆ, ಯಡಿಯೂರಪ್ಪ ಮಾತ್ರ ಶಿವಾನಂದ ಸರ್ಕಲ್ ಬಳಿ ನಿವಾಸಕ್ಕೆ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಾರಾ ಮಹೇಶ್ ನನಗೆ ರೇಸ್ ಕೋರ್ಸ್ ಮನೆಯೇ ಬೇಕು ಎಂದು ಹಠ ಹಿಡಿದು, ಅದೇ ಮನೆ ಪಡೆದಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದು, ಮಾಜಿ ಸಚಿವರಾಗಿದ್ದ ಸಾರಾ ಮಹೇಶ್ ಮನೆ ಖಾಲಿ ಮಾಡಲು ಸೂಚನೆ ನಿಡಿದ್ದರು. ಸದ್ಯ ಮಾಜಿ ಸಚಿವರು ಮುಖ್ಯಮಂತ್ರಿಗಳಿಗೆ ನಿವಾಸ ಬಿಟ್ಟುಕೊಟ್ಟಿದ್ದಾರೆ.

    ಲಕ್ಕಿ ಮನೆ ಯಾಕೆ?
    ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ ಎಂದು ಹೇಳಲಾಗುತ್ತಿದ್ದು, ಇನ್ನು ಮನೆಯ ವಾತಾವರಣವೂ ಸಹ ಉತ್ತಮವಾಗಿದೆ. ಹೀಗಾಗಿ ಬಹುತೇಕ ನಾಯಕರು ಇದೇ ಮನೆ ಬೇಕು ಎನ್ನುತ್ತಾರೆ ಎಂದು ತಿಳಿದು ಬಂದಿದೆ. ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಹೀಗಾಗಿ ಮತ್ತೆ ತಮ್ಮ ಅದೃಷ್ಟದ ಮನೆಗೆ ಹೋಗುತ್ತಿದ್ದಾರೆ.

  • ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಮೈಸೂರು: ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ, ನನಗೆ ಮಾಜಿ ಸಚಿವ ಜಿ.ಟಿ.ದೇವೇಗೌಡರಷ್ಟು ವಿಶಾಲ ಹೃದಯವಿಲ್ಲ ಎಂದು ಪರೋಕ್ಷವಾಗಿ ಜಿಟಿಡಿ ಬಿಜೆಪಿಯವರ ಜೊತೆ ಸುತ್ತವುದಕ್ಕೆ ಸಾ.ರಾ.ಮಹೇಶ್ ಟಾಂಗ್ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಮಗೆ ಅರ್ಹತೆ ಇಲ್ಲ ಎಂದು ಟೀಕಿಸುತ್ತ, ಜನಾದೇಶ ಇಲ್ಲದಿದ್ದರೂ ಬಿಜೆಪಿಯವರು ಸರ್ಕಾರ ಮಾಡಿದ್ದಾರೆ. ನಮಗೆ ಅರ್ಹತೆ ಇಲ್ಲ ಎಂದ ಮೇಲೆ ಅವರ ಜೊತೆ ಸೇರಿ ಹೇಗೆ ದಸರಾ ಮಾಡುವುದು? ನನಗೆ ಜಿ.ಟಿ.ದೇವೆಗೌಡರಷ್ಟು ವಿಶಾಲ ಹೃದಯ ಇಲ್ಲ. ಸಚಿವ ಸೋಮಣ್ಣ ನನ್ನನ್ನು ಮಹಾ ಜ್ಞಾನಿ ಎಂದಿದ್ದಾರೆ. ನಮ್ಮಂತ ಜ್ಞಾನ ಇರುವವರು ಅವರ ಜೊತೆ ಹೇಗೆ ಕೂರುವುದು? ಹೀಗಾಗಿ ದಸರಾ ಕಾರ್ಯಕ್ರಮದಿಂದ ನಾನು ದೂರ ಊಳಿದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹುಣಸೂರಿನಲ್ಲಿ ಜೆಡಿಎಸ್ ಸೋಲುತ್ತದೆ ಎಂಬ ಜಿಟಿಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇವತ್ತಿನ ಪರಿಸ್ಥಿತಿಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ವಾತವಾರಣವಿದೆ. ಈ ಕುರಿತು ಜಿ.ಟಿ.ದೇವೇಗೌಡ ಅವರು ಹೇಳಿರುವುದು ನಿಜ. ಇದನ್ನು ಮುಂದಿನ ದಿನದಲ್ಲಿ ಜಿಟಿಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷದ ಮೇಲಿನ ಅನುಕಂಪ ಹಾಗೂ ನಮ್ಮ ಪಕ್ಷದಿಂದ ಗೆದ್ದು ಹೊರ ಹೋದವರು ಮಾಡಿರುವ ಡ್ಯಾಮೇಜ್‍ನಿಂದಾಗಿ ಪಕ್ಷದ ಪರಿಸ್ಥಿತಿ ಹುಣಸೂರಿನಲ್ಲಿ ಸರಿ ಇಲ್ಲ. ಇದನ್ನೇ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಇದು ಸರಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪಕ್ಷ ಸಂಘಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಜೆಡಿಎಸ್‍ನಲ್ಲಿ ನಾನಿರೋದು ಬಹಳ ಜನಕ್ಕೆ ಇಷ್ಟವಿಲ್ಲ – ಜಿಟಿಡಿ

    ಜೆಡಿಎಸ್‍ನಲ್ಲಿ ನಾನಿರೋದು ಬಹಳ ಜನಕ್ಕೆ ಇಷ್ಟವಿಲ್ಲ – ಜಿಟಿಡಿ

    – ಗೌಡರ ಕುಟುಂಬದ ವಿರುದ್ಧ ಸ್ಫೋಟಕ ಹೇಳಿಕೆ
    – ಚುನಾವಣಾ ನಿವೃತ್ತಿ ಘೋಷಿಸಿದ ಜಿಟಿಡಿ

    ಮೈಸೂರು: ಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಹೇಳಿಕೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ ಎಂದು ಮುನಿಸಿಕೊಂಡಿದ್ದೆ. ಆಗ ಅವರು ನಾನು ಹಾಗೇ ದೂರವಾಗಲಿ ಎಂದು ಕಾಯುತ್ತಿದ್ದರು. ಮಂತ್ರಿ ಸ್ಥಾನ ತೆಗೆದುಕೊಳ್ಳದೆ ವಾಪಸ್ ಹೋಗಲಿ ಎಂದು ಕಾಯುತ್ತಿದ್ದರು. ನಾನು ಮಾತ್ರ ಈ ಸರ್ಕಾರ ಉಳಿಸಲು ಕೊನೆ ಕ್ಷಣದವರೆಗೂ ಹೋರಾಡಿದೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು, ಉಳಿಸಲು ನಾನು ಶತ ಪ್ರಯತ್ನ ಮಾಡಿದ್ದೇನೆ. ಆದರೆ ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜಿ.ಟಿ.ದೇವೆಗೌಡ ಅವರ ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಜನ ಸೋಲಿಸಿ, ನನ್ನನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರು ಸಿಎಂ ಆಗಲು ಕಾರಣವಾದರು. ಆಗ ಎಲ್ಲಾ ಕಡೆ ಕುಮಾರಸ್ವಾಮಿ ಅವರು ಸಿಎಂಗೆ ಇರುವ ಅಧಿಕಾರ ಜಿಟಿಡಿಗೂ ಇದೆ ಎಂದು ಹೇಳಿದ್ದರು. ಆದರೆ ಸಿಎಂ ಆದ ಮೇಲೆ ನಾನು ಯಾವ ಖಾತೆ ಬೇಡ ಎಂದು ಹೇಳಿದ್ದೆನೋ ಅದೇ ಖಾತೆ ಕೊಟ್ಟರು. ನಾನು ಮುನಿಸಿಕೊಂಡರೂ ಸಮಾಧಾನ ಮಾಡಲು ಬರಲಿಲ್ಲ. ನಾನು ಖಾತೆ ಬಿಟ್ಟು ಹೋಗಲಿ ಎಂದು ಕಾಯುತ್ತಿದ್ದರು. ಬಳಿಕ ಮಂಡ್ಯ ರಮೇಶ್ ಅವರು ಸಹಕಾರ ಕೊಡುತ್ತೇನೆ ಎಂದು ಕರೆದುಕೊಂಡು ಹೋದರೂ ಸಹಕರಿಸಲಿಲ್ಲ. ಕೊನೆಗೆ ಉನ್ನತ ಶಿಕ್ಷಣ ಖಾತೆಯನ್ನೇ ತಗೆದುಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ನಾನು ಡಿ.ಕೆ ಶಿವಕುಮಾರ್ ಅವರು ಮುಂಬೈಗೆ ಹೋಗಿದ್ದ ಶಾಸಕರನ್ನು ಕರೆತರಲು ಹೋಗಿದ್ದೇವು. ಕೊನೆ ಕ್ಷಣದವರೆಗೂ ಕುಮಾರಸ್ವಾಮಿ ಸಿಎಂ ಆಗಿರಬೇಕು ಎಂದು ಹೋರಾಡಿದೆವು. ಆದರೆ ಪ್ರಯೋಜನವಾಗಿಲ್ಲ ಎಂದು ಹೇಳಿದರು.

    ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಾಜಿ ಸಚಿವ ಸಾರಾ ಮಹೇಶ್ ಅವರೇ ಸಿಎಂ ಆಗಿರುವ ರೀತಿ ಆ್ಯಕ್ಟಿಂಗ್ ಮಾಡಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನೇ ಕಾರ್ಯಕಾರಣ ಸಮಿತಿಗೆ ಹಾಕಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ರಾಷ್ಟ್ರಮಟ್ಟದಲ್ಲೂ ಪಕ್ಷ ಬೆಳೆಸುವ ಕೆಲಸ ಮಾಡಲಿ ಎಂದು ಸಾರಾ ಮಹೇಶ್ ಅವರನ್ನು ಸಮಿತಿಗೆ ಹಾಕಿದ್ದಾರೆ. ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.

    ನನ್ನನ್ನು ಜೆಡಿಎಸ್ ಬೇಡ ಎಂದಿಲ್ಲ, ನಾನು ಕೂಡ ಜೆಡಿಎಸ್ ಪಕ್ಷವನ್ನು ಬೇಡ ಎಂದಿಲ್ಲ. ಆದರೆ ನಾನು ಬಿಜೆಪಿಗೆ ಹೋದಾಗ ಹುಣಸೂರು ಕ್ಷೇತ್ರದಿಂದ ಸೋತಿದ್ದೆ. ಆಗ ಸಿಎಂ ಯಡಿಯೂರಪ್ಪ ಅವರು ನನಗೆ ಸೋತ್ತಿದ್ದರೂ ಕ್ಯಾಬಿನೆಟ್ ದರ್ಜೆ ಕೊಟ್ಟು, ಗೃಹ ಮಂಡಳಿ ಅಧ್ಯಕ್ಷನ್ನಾಗಿ ಮಾಡಿದ್ದರು. ಬಳಿಕ ಇವರೇ ನನ್ನನ್ನು ವಾಪಸ್ ಪಕ್ಷಕ್ಕೆ ಬನ್ನಿ ಎಂದು ಕರೆದರು. ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ನನಗೆ ಸಚಿವ ಸ್ಥಾನ ನೀಡಲಿಲ್ಲ, ಬೇರೆ ನಾಯಕರಿಗೆ ಸಚಿವ ಸ್ಥಾನ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋತ ಬಳಿಕ ನನ್ನನ್ನು ಏಳು ತಿಂಗಳ ಕಾಲ ಮಂತ್ರಿ ಮಾಡಿದರು ಎಂದು ಕಿಡಿಕಾರಿದರು.

    ಹುಣಸೂರು ಉಪಚುನಾವಣೆ ನಡೆದರೆ ಜೆಡಿಎಸ್ ಸೋಲುತ್ತದೆ ಎಂದು ಚುನಾವಣೆಗೂ ಮುನ್ನವೆ ಜಿಟಿಡಿ ಭವಿಷ್ಯ ನುಡಿದಿದ್ದಾರೆ. ಹುಣಸೂರು ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ನನ್ನ ಮಗನನ್ನು ಅಲ್ಲಿಂದ ಸ್ಪರ್ಧಿಸುವಂತೆ ಹೆಚ್‍ಡಿಕೆ ಕೇಳಿದ್ದರು. ನಾನು ಇಲ್ಲ ಎಂದಿದ್ದೇನೆ. ನನ್ನ ಮಗ ಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದೆ ಸ್ಪರ್ಧೆ ಮಾಡಲಿ. ಸದ್ಯಕ್ಕೆ ನಾವು ಯಾವ ಉಪಚುನಾವಣೆಯಲ್ಲು ಸ್ಪರ್ಧೆ ಮಾಡುತ್ತಿಲ್ಲ ಎಂದು ತಮ್ಮ ನಿರ್ಧಾರ ತಿಳಿಸಿದರು.

    ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಉಣ್ಣುತ್ತಿದ್ದೆ. ನಾನು ಈಗ ಬಹಳ ಆರಾಮಾಗಿದ್ದೇನೆ. ಯಾವ ಅವಮಾನವು ಇಲ್ಲ, ನೋವು ಇಲ್ಲ. ಈಗ ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ ತಲೆಯ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣೆ ರಾಜಕಾರಣದಿಂದ ನಿವೃತ್ತಿ ಪಡೆದು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ ಎಂದು ಹೇಳಿದರು.

    ದಸರಾದಲ್ಲಿ ಬಿಜೆಪಿಯವರ ಜೊತೆ ಕೂರೋಲ್ಲ ಎಂಬ ಸಾ.ರಾ.ಮಹೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಸಾ.ರಾ.ಮಹೇಶ್‍ರನ್ನ ಬಹು ಹತ್ತಿರದಿಂದ ನೋಡಿದ್ದೇನೆ. ಅವರು ಬಿಜೆಪಿಯಲ್ಲಿದ್ದಾಗ, ನಂತರ ಜೆಡಿಎಸ್ ಬಂದಾಗಲೂ ಅವರನ್ನು ನೋಡಿದ್ದೇನೆ. ಸಿಎಂ ಜೊತೆ ಇದ್ದಾಗಲೂ ನೋಡಿದ್ದೇನೆ. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

  • ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಸಿಎಂ ಇನ್ನಿಲ್ಲದ ಯತ್ನ- ಸಾ.ರಾ.ಮಹೇಶ್ ವ್ಯಂಗ್ಯ

    ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಸಿಎಂ ಇನ್ನಿಲ್ಲದ ಯತ್ನ- ಸಾ.ರಾ.ಮಹೇಶ್ ವ್ಯಂಗ್ಯ

    ಮೈಸೂರು: ಮೈಸೂರು ಭಾಗದ ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪರೋಕ್ಷವಾಗಿ ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಸರ್ಕಾರದಲ್ಲಿ ಅಸಮಾಧಾನ ಎದ್ದಿದ್ದು, ಮೈಸೂರಿನಲ್ಲಿಯು ಸಹ ಹಬ್ಬಿದೆ. ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.

    ಅಪವಿತ್ರ ಸರಕಾರದ ಅರ್ಧ ಸಚಿವ ಸಂಪುಟ ಅಂತೂ ರಚನೆಯಾಗಿದೆ. ಮೈಸೂರು ಭಾಗಕ್ಕೆ ಒಂದೇ ಒಂದು ಸಚಿವ ಸ್ಥಾನ ಕೊಟ್ಟಿಲ್ಲ. ಈ ಭಾಗದಲ್ಲಿರುವ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿ ಕೊಡಲು ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿರಬಹುದು. ನಾಡಹಬ್ಬದ ಹೊಸ್ತಿಲಲ್ಲಿದೆ. ಆದರೂ ಸಹ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿಕೊಡಲು ಸಿಎಂ ಈ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ಸಾರಾ ಮಹೇಶ್ ಭವಿಷ್ಯ ನುಡಿದರು.

    ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ರೀತಿ ಆಪರೇಷನ್ ಕಮಲಕ್ಕೆ ಬಳಕೆಯಾದ ಹಣದ ಬಗ್ಗೆಯೂ ಸಹ ತನಿಖೆ ಆಗಲಿ. ಫೋನ್ ಕದ್ದಾಲಿಕೆ ಪ್ರಕರಣದಿಂದ ಜೆಡಿಎಸ್ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ ಎಂದು ಕಿಡಿಕಾರಿದ್ದಾರೆ.

  • ಎಚ್‍ಡಿಕೆಯನ್ನು ಹಳೆ ಮೈಸೂರು ಸಿಎಂ ಎಂದಿದ್ದ ಇವರನ್ನು ಏನಂತ ಕರೆಯಬೇಕು – ಸಾ.ರಾ. ಮಹೇಶ್ ಕಿಡಿ

    ಎಚ್‍ಡಿಕೆಯನ್ನು ಹಳೆ ಮೈಸೂರು ಸಿಎಂ ಎಂದಿದ್ದ ಇವರನ್ನು ಏನಂತ ಕರೆಯಬೇಕು – ಸಾ.ರಾ. ಮಹೇಶ್ ಕಿಡಿ

    ಮೈಸೂರು: ಕೊನೆಗೂ ಮಂತ್ರಿ ಮಂಡಲದ ಗಜ ಪ್ರಸವ ಆಗಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ಮಂತ್ರಿ ಮಂಡಲದ ಗಜ ಪ್ರಸವ ಏನೋ ಆಗಿದೆ, ಕೊನೆಗೂ 17 ಜನ ಮಂತ್ರಿಗಳಾಗಿದ್ದಾರೆ. ಆದರೆ, ಈಗ ಆಗಿರುವ ಮಂತ್ರಿ ಮಂಡಲ ನೋಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾಂತ್ಯವಾರು ಸ್ಥಾನಮಾನ ನೀಡುವಲ್ಲಿ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ನೀಡಿಲ್ಲ, ಇದನ್ನು ನಾನು ಖಂಡಿಸುತ್ತೇನೆ. ಕುಮಾರಸ್ವಾಮಿಯವರನ್ನು ಹಳೆ ಮೈಸೂರು ಭಾಗದ ಸಿಎಂ ಎಂದು ಯಡಿಯೂರಪ್ಪ ಹಾಗೂ ಬಿಜೆಪಿಯವರು ಬ್ರ್ಯಾಂಡ್ ಮಾಡಿದ್ದರು. ಈಗ ಯಡಿಯೂರಪ್ಪ ಅವರನ್ನು ಏನಂತ ಕರೆಯಬೇಕು? ಕನಿಷ್ಠ ಕೊಡಗು ಜಿಲ್ಲೆಗೆ ಆದ್ಯತೆ ನೀಡಬೇಕಿತ್ತು. ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಕೊಡಗು ಜಿಲ್ಲೆಯಲ್ಲೇ ಬಿಜೆಪಿಯ ಇಬ್ಬರು ಶಾಸಕರು, ಸಂಸದರು ಇದ್ದಾರೆ. ಆದರೂ ಅವಕಾಶ ನೀಡಿಲ್ಲ. ಇದು ಜನರ ನಂಬಿಕೆಗೆ ಮಾಡಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ನಡೆಯಲಿದೆ. ಇದನ್ನು ನಿರ್ವಹಿಸಲಿಕ್ಕಾದರೂ ಇಲ್ಲಿನ ಸ್ಥಳೀಯ ನಾಯಕರನ್ನು ಮಂತ್ರಿ ಮಾಡಬೇಕಿತ್ತು. ಅಲ್ಲದೆ, ಮೈಸೂರು ಚಾಮರಾಜನಗರದಲ್ಲೂ ಪ್ರವಾಹದಿಂದ ಹಾನಿಯಾಗಿದೆ. ಇದನ್ನೆಲ್ಲ ಗಮನಿಸಿದರೆ ಯಡಿಯೂರಪ್ಪ ಅವರು ರಬ್ಬರ್ ಸ್ಟ್ಯಾಂಪ್ ಸಿಎಂ ರೀತಿ ಗೋಚರಿಸುತ್ತಿದ್ದಾರೆ ಎಂದು ಹರಿಹಾಯ್ದರು.

  • Exclusive: ಹೆಚ್‍ಡಿಕೆಗಾಗಿ ಎಲ್ಲಾ ನೋವನ್ನೂ ನುಂಗಿದೆ-ದಳಪತಿಗಳ ವಿರುದ್ಧ ಜಿಟಿಡಿ ಕೆಂಡಾಮಂಡಲ

    Exclusive: ಹೆಚ್‍ಡಿಕೆಗಾಗಿ ಎಲ್ಲಾ ನೋವನ್ನೂ ನುಂಗಿದೆ-ದಳಪತಿಗಳ ವಿರುದ್ಧ ಜಿಟಿಡಿ ಕೆಂಡಾಮಂಡಲ

    -ನಾನು ಸಾಲದಲ್ಲೇ ಇದ್ದೇನೆ
    -ಗೌಡರ ಕುಟುಂಬದಿಂದ ನನ್ನ ಶಾಂತಿ, ಭಕ್ತಿಯ ದುರುಪಯೋಗ
    -ಹೆಚ್‍ಡಿಕೆ ಮುಂದೆ ಹೆಚ್‍ಡಿಡಿ ಮಾತು ಶೂನ್ಯ

    ಮೈಸೂರು: ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ಶಾಸಕ ಜಿ.ಟಿ ದೇವೇಗೌಡರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿ ಘೋಷಣೆ ಬಳಿಕ ಪಬ್ಲಿಕ್ ಟಿವಿಗೆ ನೀಡಿದ ಚುಟುಕು ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹೊರಹಾಕಿದ್ದು, ದಳಪತಿಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

    ನಾನು ಆರಂಭದ ಒಂದು ತಿಂಗಳು ಸಚಿವ ಸ್ಥಾನ ಪಡೆಯಲಿಲ್ಲ. ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ದಸರಾ, ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆ, ವಿಶ್ವವಿದ್ಯಾಲಯಗಳ ಘಟಿಕೋತ್ಸವ, ನಿರಂತರ ಸಭೆಗಳಲ್ಲಿ ಭಾಗಿಯಾಗಿದ್ದರಿಂದ ಸ್ವ-ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಿಗುತ್ತಿದ್ದ ಜಿ.ಟಿ.ದೇವೇಗೌಡ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನತೆ ನನ್ನ ಮೇಲೆ ಮುನಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಸಹ ವಿವಿಧ ಬೆಳವಣಿಗೆಗಳು ನಡೆದಿದ್ದರಿಂದ ಮೈತ್ರಿ ಸರ್ಕಾರ ಸಹ ಪತನಗೊಂಡಿತು. ಈ ಎಲ್ಲ ಕಾರಣಗಳಿಂದ ರಾಜಕಾರಣ ಸಾಕು ಎಂಬ ನಿರ್ಣಯಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

     

    ರಾಜಕಾರಣ ಮೊದಲಿನ ಹಾಗೆ ಉಳಿದಿಲ್ಲ. ಉಸ್ತುವಾರಿ ಸಚಿವನಾದ್ರೂ ನಾನು ಬೇರೆಯವರ ಕ್ಷೇತ್ರ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಒಂದು ಜಿಲ್ಲೆಯ ಉಸ್ತುವಾರಿ ಸಚಿವನಾದರೂ ನನಗೆ ಬೇಕಾದ ಅಧಿಕಾರಿಯನ್ನು ಹಾಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇರೆಯವರು ತಮಗೆ ಬೇಕಾದವರನ್ನು ಹಾಕಿಸಿಕೊಳ್ಳಲು ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವಕಾಶ ನೀಡುವ ಮೂಲಕ ನನ್ನನ್ನು ಕಡೆಗಣಿಸಲಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಹೆಚ್‍ಡಿಕೆಗಾಗಿ ನೋವು ನುಂಗಿದೆ: ಅಂದು ನಾನು ಅಸಹಾಯಕನಾಗಿ ಇರದಿದ್ದರೆ ಸರ್ಕಾರಕ್ಕೆ ತೊಂದರೆ ಆಗುತ್ತಿತ್ತು. ನಾವು ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆ ಆಗಿತ್ತು. ಇದು ನಮ್ಮ ಮನೆ, ನಮ್ಮ ನಾಯಕ ಎಂದು ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ಕೆಲಸ ಮಾಡಿದೆ. ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ನನಗಿಂತ ಬೇರೆಯವರ ಮಾತು ನಡೆಯುತ್ತಿತ್ತು. ಮಾಜಿ ಸಿಎಂ ಸಿದ್ದರಾಮಯ್ಯರು ಸಹ ಕೆಲ ಅಧಿಕಾರಿಗಳು ನಮಗೆ ಬೇಕೆಂದು ಹಾಕಿಸಿಕೊಂಡರು. ಬೇರೆಯವರಿಗಿಂತ ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ತುಂಬಾ ನೋವಾಯ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ತಾಯಿ ಚಾಮುಂಡಿಯಲ್ಲಿ ನನ್ನ ಕುಟುಂಬವೇ ಪ್ರಾರ್ಥನೆ ಮಾಡಿದೆ ಎಂದು ತಿಳಿಸಿದರು.

    ನಾನು ಓದಿರೋದು 8ನೇ ತರಗತಿ ಮಾತ್ರ, ಹಾಗಾಗಿ ಉನ್ನತ ಶಿಕ್ಷಣ ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿದ್ರೂ ನೀಡಲಾಯಿತು. ನನಗೆ ಉನ್ನತ ಸ್ಥಾನ ನೀಡಿದ್ದು ಯಾಕೆ ಎಂಬುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ನಾನು ವಿಚಲಿತನಾಗದೇ ನನಗೆ ಸಚಿವ ಸ್ಥಾನವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೂ ಆಡಳಿತ ವ್ಯವಸ್ಥೆಯಲ್ಲಿ ನನ್ನ ಮಾತು ನಡೆಯಲಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು.

    ರಾಜಕೀಯದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ ವಿಷಯವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಎದುರಲ್ಲೇ ವಿವರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಹೇಳಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಜಿ.ಟಿ ದೇವೇಗೌಡರಿಗೆ ಪರ್ಯಾಯವಾಗಿ ಒಂದು ಶಕ್ತಿ(ನಾಯಕ)ಯನ್ನು ಬೆಳೆಸಬೇಕೆಂದು ಯೋಚನೆಯನ್ನು ಕುಮಾರಸ್ವಾಮಿ ಹೊಂದಿದಂತೆ ಇತ್ತು. ನಾನು ಕುಮಾರಸ್ವಾಮಿ ಬಳಿ ಪ್ರೀತಿ ಮತ್ತು ವಿಶ್ವಾಸವನ್ನು ನೋಡಲೇ ಇಲ್ಲ. ಹಾಗಾಗಿ ನನ್ನನ್ನು ನಿರ್ಲಕ್ಷ್ಯ ಮಾಡಲಾಯ್ತು ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ನಾನು ನೇರವಾದಿ: ನಾನು ಸ್ಪಲ್ಪ ನೇರವಾದಿಯಾಗಿದ್ದು, ಎಲ್ಲವನ್ನೂ ನೇರವಾಗಿ ಹೇಳುವುದರಿಂದ ಬಹುಶಃ ಅವರಿಗೆ ಇಷ್ಟವಾಗಿಲ್ಲ ಅನ್ನಿಸುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಮಾತನಾಡಿದ್ದೇನೆ, ಜೊತೆಯಲ್ಲಿ ಕುಳಿತು ಮಾತನಾಡಿದ್ದೇನೆ. ಆದರೆ ಆ ಪ್ರೀತಿ ಕೆಲಸದಲ್ಲಿ ಇರಲಿಲ್ಲ. ವರ್ಗಾವಣೆಯ ವಿಷಯದಲ್ಲಿ ನನ್ನ ಮಾತು ನಡೆಯುತ್ತಿರಲಿಲ್ಲ. ಸಾ.ರಾ.ಮಹೇಶ್ ಅವರನ್ನ ಮೈಸೂರಿನ ರಾಜಕಾರಣದಲ್ಲಿ ಬೆಳೆಸಬೇಕೆಂದು ಕುಮಾರಸ್ವಾಮಿ ಅವರು ಮುಂದಾಗಿದ್ದ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ದೇವೇಗೌಡರು ಮೊದಲು ಮಾತಾಡುತ್ತಿದ್ದರು, ಈವಾಗಲೂ ಮಾತನಾಡುತ್ತಾರೆ. ಆದರೆ ಕುಮಾರಸ್ವಾಮಿ ಅವರ ಮುಂದೆ ದೇವೇಗೌಡರ ಮಾತು ಶೂನ್ಯ ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ ಎಂದರು.

    ಜೆಡಿಎಸ್ ಕಟ್ಟಿದ್ದು ಸಿದ್ದರಾಮಯ್ಯ & ಜಿಟಿಡಿ: ಮೈಸೂರು ಮತ್ತು ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿ ಕಟ್ಟಿದ್ದೇವೆ. ಅಲ್ಲಿಯವರೆಗೂ ಮೈಸೂರಿನಲ್ಲಿ ಜೆಡಿಎಸ್ ಇರಲಿಲ್ಲ. ನಾವು ಚುನಾವಣೆಯಲ್ಲಿ ಗೆಲ್ಲುವರೆಗೂ ಚಾಮುಂಡೇಶ್ವರಿಯಲ್ಲಿ ಯಾರೂ ಗೆದ್ದಿರಲಿಲ್ಲ. 14 ವರ್ಷದ ಹುಡುಗ ಇದ್ದಾಗಿನಿಂದ ಹಿರಿಯ ನಾಯಕರೊಂದಿಗೆ ಬೆಳೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜಕಾರಣವೇ ಗೊತ್ತಿರಲಿಲ್ಲ. ನಾನೇ ಕರೆದುಕೊಂಡು ಬಂದು ಪ್ರತಿ ತಾಲೂಕುಗಳಿಗೆ ಭೇಟಿ ನೀಡಿದಾಗಲೇ ಕುಮಾರಸ್ವಾಮಿ ಅವರಿಗೆ ಮೈಸೂರು ರಾಜಕಾರಣ ಗೊತ್ತಾಗಿದೆ. ಸಿದ್ದರಾಮಯ್ಯರು ಪಕ್ಷ ತೊರೆದಾಗ ಹಲವು ನಾಯಕರನನ್ನು ಜೆಡಿಎಸ್ ಗೆ ಕರೆತಂದು ಪಕ್ಷ ಕಟ್ಟಿದ್ದೇನೆ. ಆದರೆ ಯಾಕೆ ನನ್ನ ಮೇಲೆ ರಾಜಕೀಯ ದ್ವೇಷ ಮಾಡಿದರು ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು.

     

    ನಾನೋರ್ವ ಸಾಲಗಾರ: ಹೌಸಿಂಗ್ ಬೋರ್ಡ್ ನಲ್ಲಿ ಜಿ.ಟಿ.ದೇವೇಗೌಡ ದುಡ್ಡು ಪಡೆದಿದ್ದಾನೆ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾನೋರ್ವ ಸಾಲಗಾರನಾಗಿರುವ ವಿಚಾರ ಯಾರಿಗೂ ಗೊತ್ತಿಲ್ಲ. ಇಂದು ನಾನು ಸಾಲದ ಮೊತ್ತಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ. ಜಿ.ಟಿ.ದೇವೇಗೌಡನನ್ನು ಮುಗಿಸಬೇಕೆಂಬ ವರ್ಗ ನನ್ನ ಪಕ್ಷದಲ್ಲಿದೆ. ಕ್ಷೇತ್ರದ ಜನ ನನ್ನ ಎತ್ತಿಕೊಂಡು ಕುಣಿಸಿದರು. ನನ್ನ ಶಾಂತಿ, ಭಕ್ತಿ, ತ್ಯಾಗ ಮತ್ತು ಪ್ರಾಮಾಣಿಕತೆಯನ್ನು ದೇವೇಗೌಡರ ಕುಟುಂಬ ದುರುಪಯೋಗ ಮಾಡಿಕೊಂಡಿತು ಎಂದು ಗಂಭೀರ ಆರೋಪ ಮಾಡಿದರು.

    ನನ್ನ ಮರಿದೇವೇಗೌಡ ಎಂದು ಯಾವಾಗಲೂ ವರಿಷ್ಠರು ನನ್ನನ್ನು ತುಂಬಾ ಪ್ರೀತಿ ಕಂಡರು. 2004ರಲ್ಲಿ ಧರಂಸಿಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಿದಾಗ ನನ್ನ ಮಂತ್ರಿ ಮಾಡುತ್ತೇನೆ ಎಂದು ಹೇಳಿ ಮಾಡಲಿಲ್ಲ. ಕುಮಾರಸ್ವಾಮಿ ಸಿಎಂ ಆದಾಗ ಏಳು ತಿಂಗಳು, ಈವಾಗ 19 ತಿಂಗಳು ಮಂತ್ರಿ ಆಗಿದ್ದೇನೆ. 19 ತಿಂಗಳು ನನ್ನನ್ನು ಮಂತ್ರಿ ಮಾಡಿದ್ದು ದೊಡ್ಡ ಸಾಧನೆ. ನಾನು ಎಂದಿಗೂ ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಲ್ಲ. ನನ್ನ ಮಗ ಹರೀಶ್ ಗೌಡನನ್ನು ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಲ್ಲಿಸಲ್ಲ ಎಂದು ಪಕ್ಷದ ವರಿಷ್ಠರ ಮುಂದೆ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ನಿವೃತ್ತಿ ಬಳಿಕ ಚಾಮುಂಡೇಶ್ವರಿಯಿಂದ ಹರೀಶ್ ಸ್ಪರ್ಧೆ ಮಾಡಲು ಅಭ್ಯಂತರವಿಲ್ಲ. ರಾಜಕೀಯ ಜೀವನದಲ್ಲಿ ನನ್ನ ಪುತ್ರನನ್ನು ಎಂಎಲ್‍ಸಿ ಮಾಡಿ ಎಂದೂ ಕೇಳಿಲ್ಲ ಎನ್ನುವ ಮೂಲಕ ಕುಟುಂಬ ರಾಜಕಾರಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ನಿವೃತ್ತಿಗೆ ಕಾರಣವೇನು?
    ಇವತ್ತಿನ ರಾಜಕೀಯ ನಾಯಕರಿಗೆ ಪಕ್ಷ ನಿಷ್ಠೆ ಇಲ್ಲ. ತಮ್ಮ ಸ್ವಾರ್ಥಕ್ಕೊಸ್ಕರ ಎಂತಹ ನಾಯಕನನ್ನು ಬೇಕಾದ್ರೂ ಮರಳು ಮಾಡುತ್ತಾರೆ. ಅಂತಹ ಸನ್ನಿವೇಶಗಳನ್ನು ನೋಡಿಕೊಂಡು ನನಗೆ ರಾಜಕೀಯ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿದ್ದಾಗ ಒಂದೂ ದಿನ ದೇವೇಗೌಡರನ್ನು ನೋಡಲು ಹೋಗಿಲ್ಲ. ಅಂದು ದೇವೇಗೌಡರು ಮತ್ತು ಸದಾನಂದ ಗೌಡರನ್ನು ಜಿಟಿಡಿ ಒಂದು ಮಾಡಿದ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದರು. ಈ ಮಾತನ್ನು ಯಡಿಯೂರಪ್ಪ ಸಹ ನಂಬಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವ ನಾಯಕ ನಾನಲ್ಲ ಎಂದು ಶೋಭಾ ಕರಂದ್ಲಾಜೆ ಅವರಿಗೆ ಹೇಳಿದ್ದೆ ಎಂದು ಪಕ್ಷಾಂತರಿಗಳಿಗೆ ಚಾಟಿ ಬೀಸಿದರು.

    ಬಿಜೆಪಿಯ ಯಾವ ನಾಯಕರು ನನ್ನನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿಲ್ಲ. ನಾನು ಸಹ ನಿಮ್ಮ ಪಕ್ಷಕ್ಕೆ ಬರುತ್ತೇನೆಂದು ಹೇಳಿಲ್ಲ. ಆದರೂ ಕೆಲವರು ಈ ಸಂಬಂಧ ಸುಳ್ಳು ಸುದ್ದಿ ಹರಿದಾಡಿಸುತ್ತಿದ್ದಾರೆ. ನನಗೆ ಯಾರೂ ರಾಜಕೀಯ ಗುರುಗಳಿಲ್ಲ. 1969ರಿಂದ ಸಾರ್ವಜನಿಕ ರಂಗದಲ್ಲಿದ್ದೇನೆ. ಅಂದು ನಮ್ಮ ಬೆಂಬಲ ಪಡೆದು ಹಲವರು ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದಾರೆ ಎಂದರು.