ಮೈಸೂರು: ನಿನ್ನೆಯ ಘಟನೆಯ ಬಗ್ಗೆ ಚಾಮುಂಡಿ ದೇವಿ ಮುಂದೆ ಹಾಗೂ ನಾಡಿನ ಜನರ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಾಚಿವ ಸಾರಾ ಮಹೇಶ್ ಕ್ಷಮೆಯಾಚಿಸಿದ್ದಾರೆ.
ಅಣೆ – ಪ್ರಮಾಣದ ಬಳಿಕ ಇವತ್ತು ಚಾಮುಂಡಿ ಬೆಟ್ಟಕ್ಕೆ ಮತ್ತೆ ಬಂದ ಮಾಜಿ ಸಚಿವ ಸಾರಾ ಮಹೇಶ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ರಾಜಕಾರಣಕ್ಕೆ ತಾಯಿ ಸನ್ನಿಧಾನವನ್ನು ಬಳಸಿಕೊಂಡು ತಪ್ಪು ಮಾಡಿದ್ದೇವೆ. ನನಗೆ ಇಡೀ ಘಟನೆ ಬಗ್ಗೆ ಪ್ರಾಯಶ್ತಿತವಾಗಿ ನನ್ನನ್ನು ಕ್ಷಮಿಸಿ ಅಂತಾ ದೇವಿಯಲ್ಲಿ ಕೋರಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ವೈಶಂಪಾಯನ ಡ್ರಾಮಾ – ದುರ್ಯೋಧನನಿಗೆ ಹೋಲಿಸಿ ವಿಶ್ವನಾಥ್ ವಾಗ್ದಾಳಿ
ಇವತ್ತು ಶುಕ್ರವಾರ, ಚಾಮುಂಡೇಶ್ವರಿ ತಾಯಿಯನ್ನು ನಾವೆಲ್ಲರು ನಂಬಿದ್ದೇವೆ. ಮನ್ನಸ್ಸಿಗೆ ಆತ್ಮ ಸಾಕ್ಷಿಗೆ ನೋವಾದಾಗ, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದಾಗ, ಸಾಕ್ಷಿಗಳು ಬಂದು ಹೇಳದಿದ್ದಾಗ ಎಷ್ಟೇ ದೊಡ್ಡವರಾದರೂ ದೇವರ ಮೊರೆಹೋಗುತ್ತಾರೆ. ಹೀಗಿರುವಾಗ ರಾಜಕಾರಣದ ವಿಚಾರದಲ್ಲಿ ನಾವು ತಾಯಿ ಚಾಮುಂಡೇಶ್ವರಿ ತಾಯಿ ಹೆಸರನ್ನು ತರುವಂತಹ ಕೆಲಸ ಮಾಡಿದ್ದೇವೆ. ಇದು ನನ್ನ ಮನಸ್ಸಿಗೆ ಒಪ್ಪಲಿಲ್ಲ. ಆದ್ದರಿಂದ ಮತ್ತೊಮ್ಮೆ ತಾಯಿಯ ದರ್ಶನ ಪಡೆದು ಕ್ಷಮೆ ಕೇಳಿ, ರಾಜ್ಯದ ಜನತೆಗೂ ಕ್ಷಮೆ ಕೋರಿ ಪೂಜೆಯನ್ನು ಮಾಡಿಸಲು ನಾನು ಬಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:ಆಣೆ ಮಾಡಿ ಕಣ್ಣೀರು ಹಾಕಿದ ಮಹೇಶ್ – ಸಾರಾ ವಿರುದ್ಧ ವಿಶ್ವನಾಥ್ ಮತ್ತೆ ಕಿಡಿ
ಎಲ್ಲರಿಗೂ ಒಳ್ಳೆಯದನ್ನ ಮಾಡು, ಸತ್ಯಾಸತ್ಯತೆಯನ್ನ ನಿನ್ನ ಮುಂದೆ ಇಟ್ಟಿದ್ದೇನೆ. ನೀನೇ ತೀರ್ಮಾನ ಮಾಡಮ್ಮ ಎಂದು ನಿನ್ನೆಯೂ ಬೇಡಿಕೊಂಡಿದ್ದೆ, ಇಂದು ಅದೇ ಬೇಡಿದ್ದೇನೆ. ನನಗೆ ಒಂದು ತಿಂಗಳಿಂದಲೇ ಪ್ರಾಯಶ್ಚಿತವಾಗಿದೆ. ನಿನ್ನೆ ನಡೆದ ಘಟನೆಯಿಂದ ನೋವಾಗಿದೆ ಹೀಗಾಗಿ ದೇವರಲ್ಲಿ ಹಾಗೂ ಜನರಲ್ಲಿ ನಾನು ಕ್ಷಮೆಕೋರುತ್ತೇನೆ ಎಂದರು.
ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿ ಮಹಾಭಾರತದ ಕ್ಲೈಮ್ಯಾಕ್ಸ್ ಸೀನ್ ನಡೆದಿದ್ದು, ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ದುರ್ಯೋಧನನಿಗೆ ಹೋಲಿಸಿ ಅನರ್ಹ ಶಾಸಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಿರೀಕ್ಷೆಯಂತೆಯೇ ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಹೈ ಡ್ರಾಮಾ ನಡೆದಿದೆ. ಇಬ್ಬರೂ ನಾಯಕರೂ ಬೆಟ್ಟಕ್ಕೆ ಆಗಮಿಸಿ ಒಬ್ಬರಿಗೊಬ್ಬರು ಮಾತನಾಡದೇ ತೆರಳಿದರು.
ದೇವಾಲಯದ ಹೊರ ಆವಣರದಲ್ಲಿ ಮಹೇಶ್ ಅವರಿಗೆ ಒಂದು ಗಂಟೆ ಕಾದು ಬೆಟ್ಟದಿಂದ ಕೆಳಗಿಳಿದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಖಾಮುಖಿಯಾಗಲು ನಾನು ತಯಾರಾಗಿಯೇ ಬಂದಿದ್ದೆ ಮಾಜಿ ಸಚಿವ ಸಾರಾ ಮಹೇಶ್ ಒಳಗೆ ಹೋದವರು ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು 8:50ಕ್ಕೆ ಬಂದು ದೇವಿಯ ದರ್ಶನ ಮಾಡಿ 9:05ಕ್ಕೆ ಬಂದು ಹೊರಗೆ ನಿಂತೆ. ಅವರು ಒಳಗೆ ಹೋದವರು ವಾಪಸ್ ಬರಲೇ ಇಲ್ಲ. ನಾನು 10 ಗಂಟೆಯವರೆಗೂ ಕಾದೆ. ನಂತರ ಅವರು ನಿಮ್ಮ ಮುಖ ನೋಡುವುದಿಲ್ಲವಂತೆ ಎಂದು ಮಾಧ್ಯಮದವರು ಹೇಳಿದರು. ನೀವೇ ಪ್ರಮಾಣ ಮಾಡಬೇಕು ಎಂದು ಹೇಳಿದ್ದು, ನನಗೇನು ಹುಚ್ಚು ಹಿಡಿದಿದೆಯಾ ಪ್ರಮಾಣ ಮಾಡೋಕೆ? ಆಣೆ ಪ್ರಮಾಣದ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದರು.
ನಾನು ಕೇವಲ ಸಾ.ರಾ.ಮಹೇಶ್ ಮಾಡಿದ್ದ ಆರೋಪಕ್ಕೆ ಉತ್ತರಿಸಲು ಬಂದಿದ್ದೆ. 25 ಕೋಟಿ ರೂ.ಗೆ ನನ್ನನ್ನ ಕೊಂಡುಕೊಂಡವನನ್ನು ಕರೆದುಕೊಂಡು ಬಾ ಅವನನ್ನು ಮೀಟ್ ಮಾಡೋಣ ಎಂದಿದ್ದೆ. ಕೊನೆಗೂ ಅವರು ಬರಲೇ ಇಲ್ಲ. ಆತನನ್ನು ಕರೆದುಕೊಂಡು ಬರಲಿಲ್ಲ. ನಾವು ಪಾಂಡವರು ಅವರು ಕೌರವರು, ಮಹಾಭಾರತದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಅಡಗಿ ಕುಳಿತ ಹಾಗೆ ಒಳಗೆ ಸಾರಾ ಮಹೇಶ್ ಕೂತಿದ್ದ ಎಂದು ದುರ್ಯೋಧನನಿಗೆ ಸಾರಾ ಮಹೇಶ್ ಅವರನ್ನು ಹೋಲಿಸಿದರು.
ನಾವು ಪಾಂಡವರ ರೀತಿ ಹೊರಗೆ ಕಾಯುತ್ತಿದ್ದೆವು. ದುರ್ಯೋಧನ ಹೇಗೆ ಬರಲಿಲ್ಲವೋ ಹಾಗೆ ಸಾರಾ ಬರಲಿಲ್ಲ, ಮಹೇಶ್ ನೀನು ಬರಲೇ ಇಲ್ಲ ಹೇಡಿ. ನೀನು ಪಲಾಯನವಾದಿ, ನೀನೊಬ್ಬ ಸುಳ್ಳ, ಇನ್ನು ಮುಂದೆ ಸುಳ್ಳು ಹೇಳಬೇಡ. ಜೆಡಿಎಸ್ ಅಂದರೆ ಕಣ್ಣೀರು, ಕಣ್ಣೀರು ಅಂದರೆ ಜೆಡಿಎಸ್. ಸಾ.ರಾ.ಮಹೇಶ್ ಅಂತಹ ಕೊಚ್ಚೆಗುಂಡಿಗೆ ನಾನು ಕಲ್ಲು ಎಸೆಯುವುದಿಲ್ಲ ಎಂದರು.
ನಾನು ನಿಲ್ಲಿಸೋಣ ಎಂದು ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಇಲ್ಲಿಗೆ ನಿಲ್ಲಿಸೋಣ. ಅವರು ಸಾಬೀತು ಮಾಡಬೇಕಿತ್ತು ಮಾಡಿಲ್ಲ. ಇನ್ನು ಮುಂದೆ ಸಾರಾ ಮಹೇಶ್ ವಿಚಾರವನ್ನು ನಾನು ಮಾತನಾಡುವುದಿಲ್ಲ. ಅವರು ನನ್ನ ವಿಚಾರ ಮಾತನಾಡುವುದು ಬೇಡ, ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು.
ಚಾಮುಂಡಿಬೆಟ್ಟದಿಂದ ಇಳಿದು ಬಂದು ಹೆಚ್.ವಿಶ್ವನಾಥ್ ಸ್ನೇಹಿತರೊಂದಿಗೆ ಹೊಟೇಲ್‍ನಲ್ಲಿ ತಿಂಡಿ ಸೇವಿಸಿದರು. ಇನ್ನು ಸಾ.ರಾ.ಮಹೇಶ್ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಸ್ನೇಹಿತರೊಂದಿಗೆ ತಿಂಡಿ ಸೇವಿಸಿದರು.
ಮೈಸೂರು: ಹುಣಸೂರಿನ ಅನರ್ಹ ಶಾಸಕ ಎಚ್ ವಿಶ್ವನಾಥ್ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಇಬ್ಬರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರೂ ಇಂದು ಮಹೇಶ್ ಕಣ್ಣೀರು ಹಾಕಿ ಆಣೆ ಮಾಡಿ ತೆರಳಿದ್ದಾರೆ.
ಗುರುವಾರ ಬೆಳಗ್ಗೆ 9 ಗಂಟೆಗೆ ಇಬ್ಬರು ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡುವುದಾಗಿ ಹೇಳಿದ್ದರಿಂದ ಇಂದು ಏನಾಗುತ್ತದೆ ಎನ್ನುವ ಕುತೂಹಲ ಮೂಡಿತ್ತು. 8 ನಿಮಿಷ ಮೊದಲು ಅಂದರೆ 8:52ಕ್ಕೆ ವಿಶ್ವನಾಥ್ ಮೊದಲಿಗರಾಗಿ ಬೆಟ್ಟಕ್ಕೆ ಆಗಮಿಸಿ ದೇವಾಲಯ ಪ್ರವೇಶಿಸಿದರು.
ದೇವಾಲಯದ ಮುಂಭಾಗ ನಿಂತ ವಿಶ್ವನಾಥ್ ಅವರು ಪೂಜೆ ಮಾಡಿ ಹೊರ ಬಂದರು. ವಿಶ್ವನಾಥ್ ಹೊರ ಬಂದ ಬೆನ್ನಲ್ಲೇ ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದರು. ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದ ವಿಚಾರ ತಿಳಿದ ವಿಶ್ವನಾಥ್ ಹೊರಗಡೆ ಅವರಿಗಾಗಿ ಕಾಯುತ್ತಾ ಕುಳಿತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಹೇಶ್ ಅವರಿಗಾಗಿ ವಿಶ್ವನಾಥ್ ಹೊರಗಡೆ ಕುಳಿತಿದ್ದರು. ಒಂದು ಗಂಟೆ ಕಾದರೂ ಮಹೇಶ್ ಮಾತ್ರ ದೇವಾಲಯದ ಒಳಗಡೆಯಿಂದ ಬರಲೇ ಇಲ್ಲ. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದರು. ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದರು. ಇದನ್ನೂ ಓದಿ: ನನ್ನ ಮಾತನ್ನು ತಿರುಚಬೇಡಿ, ಯಾವುದೇ ಆಣೆ ಪ್ರಮಾಣ ಮಾಡಲು ನಾನು ಬಂದಿಲ್ಲ: ವಿಶ್ವನಾಥ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬದಲಾದಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ಮೂರು ಜನ ಶಾಸಕರು ಹೋಗಿದ್ದಾರೆ. ನಾನು ಯಾರ ಬಗ್ಗಯೂ ಚರ್ಚೆ ಮಾಡಿಲ್ಲ. ಆದರೆ ಇವರು ಹೋದ ನಂತರ ಹಾಗೂ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ನನ್ನನ್ನು ಟೀಕಿಸಿದ್ದರು. ಆದಾದ ನಂತರ ಮುಂಬೈಯಿಂದ ಕೂಡ ಎರಡು ಬಾರಿ ನನ್ನ ಬಗ್ಗೆ ಮಾತನಾಡಿದ್ದರು. ನಂತರ ವಿಧಾನಸಭೆಯಲ್ಲಿ ನನ್ನ ಜೊತೆ ಮಾತನಾಡಿದ್ದನ್ನು ಉಲ್ಲೇಖ ಮಾಡಿದ್ದರು. ಆದಾದ ಬಳಿಕವೂ ಅವರು ನನ್ನ ಬಗ್ಗೆ ಟೀಕೆ ಮಾಡಿದ್ದರು ಎಂದು ದೂರಿದ್ದರು.
ನೀವು ನನ್ನ ಜೊತೆ ಚರ್ಚೆ ಮಾಡಿದ್ದೀರಿ. ಮಂತ್ರಿ ಬೇಡ ಎಂದು ಹೇಳಿದ್ದೀರಿ. ನನಗೆ ಒತ್ತಡ ಇದೆ. ಈ ವಯಸ್ಸಿನಲ್ಲಿ ಅಂತಹ ಕೆಲಸ ಮಾಡಲ್ಲ ಎಂದು ಹೇಳಿದ್ದೀರಿ. ಹಾಗಿದ್ದರೆ ಈಗ ಯಾವ ಅಂಶಕ್ಕೆ ಬಲಿ ಆಗಿದ್ದೀರಿ. ಅದನ್ನು ಬಂದು ಪ್ರಮಾಣ ಮಾಡಿ ಎಂದು ಕೇಳಿದ್ದೆ. ಮೊದಲು ಅವರು ಸಂವಿಧಾನ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾವು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮತ್ತು ನಂಬಿಕೆ ಮೇಲೆ ಗೌರವ ಇದ್ದಿದ್ದರೆ ಅವರು ರಾಜೀನಾಮೆ ನೀಡುತ್ತಿರಲಿಲ್ಲ. ಆದರೆ ಈಗ ಕೊಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ದೇವಸ್ಥಾನಕ್ಕೆ ಕರೆದಿದ್ದೇನೆ ಎಂದು ಹೇಳಿದ್ದಾರೆ.
ಮೊದಲು ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನಮ್ಮ ಸಾರ್ವಜನಿಕ ಬದುಕು ಹಾಗೂ ವೈಯಕ್ತಿಕ ಬದುಕು ಎರಡು ಚೆನ್ನಾಗಿರಬೇಕು. ನಾನು ನಿಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಎಂದರೆ ಪ್ರಮಾಣ ಮಾಡಿ. ಇಲ್ಲವೆಂದರೆ ವೈಯಕ್ತಿಕವಾಗಿ ಮಾಡಿದ ಆರೋಪ ನಿಜವೆಂದು ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೇನೆ. ನಾನು ಏನೂ ಎಂಬುದು ವಿಶ್ವನಾಥ್‍ಗೆ ಸಾರ್ವಜನಿಕವಾಗಿ ಹೇಳಿದ್ದೆ. ಮೊದಲು ಅವರು ಪ್ರಮಾಣ ಮಾಡಲಿ. ನಂತರ ಅವರನ್ನು ಖರೀದಿಸುವವರನ್ನು ಕರೆದುಕೊಂಡು ಬರೋಣ ಎಂದರು.
ಇದೇ ವೇಳೆ ನಾನು ಕುರುಬ ಸಮುದಾಯದವನೂ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೂ ಸಾರಾ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಇಲ್ಲದ ಈ ಮಾತು ಈಗ ಯಾಕೆ ಬಂತು? ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸಮಾಜದವರು ಇದ್ದರೂ ನಾವು ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ರಾಜ್ಯಾಧ್ಯಕ್ಷ ಮಾಡಿರಲಿಲ್ವಾ? ಆಗ ನಮಗೆ ಅವರ ಜಾತಿ ಗೊತ್ತಿರಲಿಲ್ವಾ? ಅವರು ಮೊದಲು ಪ್ರಮಾಣ ಮಾಡಲಿ. ಈಗ ಈ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ವಿಶ್ವನಾಥ್ ಆರೋಪಕ್ಕೆ ಸಾರಾ ಮಹೇಶ್ ಪ್ರತಿಕ್ರಿಯಿಸಿದರು.
ಈ ಬೆಳವಣಿಗೆ ಆದ ನಂತರ ನಾನು ಸ್ಪೀಕರ್‍ರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಮೊದಲಿನಿಂದಲೂ ನನ್ನ ಹಾಗೂ ಸ್ಪೀಕರ್ ಸಂಬಂಧ ಚೆನ್ನಾಗಿರುವ ಕಾರಣ ಅವರು ಎರಡು ಬಾರಿ ನನ್ನನ್ನು ಕರೆದು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದರು. ನಾನು ರಾಜಕೀಯ ವಿಷಯದಲ್ಲಿ ವೈಯಕ್ತಿವಾಗಿ ಯಾವತ್ತೂ ಯಾರಿಗೂ ಟೀಕೆ ಮಾಡಿಲ್ಲ. ಅವರು ನನ್ನಿಂದ ರಾಜೀನಾಮೆ ನೀಡಿಲ್ಲ. ಬದಲಿಗೆ ಅವರು ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮಹೇಶ್ ತಿಳಿಸಿದರು.
ನನ್ನ ರಾಜೀನಾಮೆ ಬಗ್ಗೆ ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನನಗೆ ತಿಳಿ ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಹಜ ಎಂದು ಹೇಳಿದ್ದಾರೆ. ಮಂಗಳವಾರ ನಾನು ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನದಲ್ಲಿ ಹೇಳುತ್ತೇನೆ ಎಂದು ಸಾರಾ ಮಹೇಶ್ ಹೇಳಿದರು.
– ಹುಣುಸೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ನಾನೇ ಅಭ್ಯರ್ಥಿ
– ನಾನು ಕಾನೂನು ಹೋರಾಟ ಮಾಡುತ್ತೇನೆ
– ನನಗೆ ನೋವಾಗಿದೆ, ಹೊಟ್ಟೆ ಉರಿಯುತ್ತೆ
ಮೈಸೂರು: ನನ್ನ ಮಾತನ್ನು ತಿರುಚಬೇಡಿ, ಮೊದಲೇ ನಾನು ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ಇಲ್ಲಿ ಯಾವುದೇ ಆಣೆ ಪ್ರಮಾಣ ಮಾಡಲು ಬಂದವನಲ್ಲ ಎಂದು ಎಚ್. ವಿಶ್ವನಾಥ್ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮಾತನ್ನು ತಿರುಚಬೇಡಿ, ಮೂರು ದಿನಗಳಿಂದಲೂ ನಾನು ಮಾಧ್ಯಮಕ್ಕೆ ಸ್ಪಷ್ಟನೆ ಕೊಡುತ್ತಿದ್ದೇನೆ. ನನ್ನ ಸವಾಲು ಇಷ್ಟೇ ಸದನದಲ್ಲಿ ರಾಜೀನಾಮೆ ಕೊಟ್ಟಿರುವ ಶಾಸಕ ಸಾರಾ ಮಹೇಶ್ ಅವರು ಗುರುತರವಾದಂತಹ ಆರೋಪ ಮಾಡಿದ್ದಾರೆ. ನನ್ನನ್ನು 25 ಕೋಟಿ ರೂ. ಕೊಟ್ಟಿ ಕೊಂಡುಕೊಂಡಿದ್ದಾರೆ ಎಂದಿದ್ದಾರೆ. ಕೊಂಡುಕೊಂಡವರನ್ನು ಕರೆದುಕೊಂಡು ಬನ್ನಿ ಎನ್ನುವುದಷ್ಟೇ ವಿಚಾರ. ಇದರಲ್ಲಿ ಬೇರೆ ವಿಚಾರ ಇಲ್ಲ. ಬೇರೆ ವಿಚಾರವನ್ನು ನೀವು ಕೇಳಲುಬಾರದು, ನಾನು ಹೇಳಲುಬಾರದು. ನಾನು ಇಲ್ಲಿ ಯಾವುದೇ ಆಣೆ ಪ್ರಮಾಣ ಮಾಡಲು ಬಂದವನಲ್ಲ. ನನ್ನನ್ನು ಕೊಂಡುಕೊಂಡಿರುವ ಭೂಪನನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹರಿಹಾಯ್ದರು.
ಸುಮ್ಮಸುಮ್ಮನೆ ಯಾಕೆ ಆಣೆ ಮಾಡಲಿ? ಸಾರಾ ಮಹೇಶ್ ಸಾವಿರ ಕೇಳುತ್ತಾನೆ. ಅದಕ್ಕೆ ನಾನು ಕೂತುಕೊಂಡು ಆಣೆ ಮಾಡಲಾ? ನನ್ನ ವಯಸ್ಸೇನು? ಸುಮ್ಮನ್ನಿರಿ, ನೀವು ಎಲ್ಲವನ್ನು ತಿರುಚಿ ಹಾಳು ಮಾಡುತ್ತಿದ್ದೀರ. ನಾನು ಬಂದಿರೋದು ಇಷ್ಟೇ ಸ್ಪಷ್ಟ, ಅವರು ಬಂದು ಹೌದಪ್ಪ ವಿಶ್ವನಾಥ್ ನನ್ನ ಬಳಿ 25 ಕೋಟಿ ತೆಗೆದುಕೊಂಡಿದ್ದಾನೆ. ಬಾರಪ್ಪ ಅಲ್ಲಿ ಪ್ರಮಾಣ ಮಾಡಿ ಎಂದರೆ ಮಾಡುತ್ತೇನೆ. ಅದುಬಿಟ್ಟರೆ ಸುಮ್ಮನೆ ಯಾಕೆ ಮಾಡಲಿ? ನಾಳೆ ನೀವು ಕರೆಯುತ್ತೀರ ಬರಲೇ? 9 ಗಂಟೆ ತನಕ ಸಮಯ ಕೊಟ್ಟಿದ್ದೇವೆ. ಇಲ್ಲಿಯವರೆಗೂ ಕಾಯುತ್ತೇನೆ. ಅವರು ಬರಲಿಲ್ಲ ಎಂದರೆ ವಾಪಸ್ ಹೋಗುತ್ತೇವೆ. ಆಗ ಮಹೇಶ್ ಅವರ ಆರೋಪ ಸುಳ್ಳೆಂದು ಎಲ್ಲರಿಗೂ ಗೊತ್ತಾಗುತ್ತೆ ಎಂದು ವಿಶ್ವನಾಥ್ ಗುಡುಗಿದರು.
ನನ್ನ ಮೇಲೆ ಆರೋಪ ಮಾಡಿರುವುದು ಅಪ್ಪಟ ಸುಳ್ಳು ಎಂದು ಸಾಬೀತಾಗುತ್ತದೆ. ಯಾವತರ ಸುಳ್ಳು ಎಂದರೆ ಮೊನ್ನೆ ಅವರು ಶಾಸನಸಭೆಗೆ ಹುಸಿ ರಾಜೀನಾಮೆ ಪತ್ರ ಕಳುಹಿಸಿ, ಮಾಧ್ಯಮದ ಮುಂದೆ ರಾಜೀನಾಮೆ ಕೊಟ್ಟಿದ್ದೇನೆ ಎಂದರಲ್ಲ, ಅದೇ ರೀತಿ ಇದು ಕೂಡ ಸುಳ್ಳು ಎಂದು ಟೀಕಿಸಿದರು. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ. ಈಗಾಗಲೇ ಅವರು ಸದನದಲ್ಲಿ ಆರೋಪ ಮಾಡಿರುವ ಸಿಡಿ ತೆಗೆದುಕೊಂಡಿದ್ದೇನೆ, ನಾನು ಹೈಕೋರ್ಟ್ ಗೆ ಹೋಗುತ್ತೇನೆ ಎಂದರು.
ಈಗ ನಾನು ಇಬ್ಬರಿಗಾಗಿ ಕಾಯುತ್ತಿದ್ದೇನೆ. ಒಬ್ಬರು ಸಾರಾ ಮಹೇಶ್, ಇನ್ನೊಬ್ಬರು ನನ್ನನ್ನು ಕೊಂಡುಕೊಂಡ ಭೂಪನಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು. ಬಳಿಕ ಅವರು ಹೇಳುವುದ್ದಕ್ಕೆಲ್ಲಾ ಉತ್ತರ ಕೊಡೋಕೆ ಏನು ಅಂದುಕೊಂಡಿದ್ದಾರೆ? ರಾಜಕೀಯದಲ್ಲಿ ನನ್ನ ಕೊಡುಗೆ ಅನುಭವೇನು ಎಂದು ಗೊತ್ತಿದ್ದರೂ ಸುಮ್ಮನೆ ಏನೇನೋ ಕೇಳುತ್ತಿರಲ್ಲ ಎಂದು ಸಿಟ್ಟಾದರು. ನಂತರ ಸಾರಾ ಮಹೇಶ್ ಅವರು ಒಬ್ಬರೇ ಬಂದಿದ್ದಾರೆ ಎಂದು ಮಾಧ್ಯಮದವರು ಹೇಳಿದಾಗ, ಒಬ್ಬರೇ ಬಂದಿದ್ದಾರಾ? ನನ್ನನ್ನು ಕೊಂಡುಕೊಂಡವರು ಬಂದಿಲ್ಲವಾ? ಹಾಗಾದರೆ ಅವರ ಆರೋಪ ಸುಳ್ಳು ಆಪಾಧನೆ. ಹೀಗಾಗಿ ತಾಯಿ ಹತ್ತಿರ ಬಾ ಎಂದು ನಗುತ್ತಾ ವ್ಯಂಗ್ಯವಾಡಿದರು.
ಹಾಗೆಯೇ ಈ ಬಗ್ಗೆ ಜನ ಏನಾದರೂ ತಿಳಿದುಕೊಳ್ಳಲಿ. ನನಗೆ ನೋವಾಗಿದೆ, ಇದೇನು ಹುಡುಗಾಟಿಕೆಯೇ? ಹಾದಿ, ಬೀದಿಯಲ್ಲಿ ಹೇಳಿರುವ ವಿಚಾರನಾ? ಸಾರ್ವಭೌಮ ಸದನದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನಗೆ ಹೊಟ್ಟೆ ಉರಿಯುತ್ತೆ, 40 ವರ್ಷಗಳ ಕಾಲ ಸುದೀರ್ಘವಾಗಿ, ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ನಿಮ್ಮ ಕ್ಷೇತ್ರದಲ್ಲಿ ಯಾರೂ ಅಭ್ಯರ್ಥಿಯಿಲ್ಲ. ನೀವು ನಿಮ್ಮ ಟಿಕೆಟ್ ಮಾರಿಕೊಂಡಿದ್ದೀರಾ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಹುಣಸೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳಿದರು.
ಮೈಸೂರು: ಮಾಜಿ ಸಚಿವರಾದ ಸಾ.ರಾ ಮಹೇಶ್ ಮತ್ತು ಎಚ್ ವಿಶ್ವನಾಥ್ ನಡುವಿನ ಜಗಳ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇಬ್ಬರ ನಡುವೆ ರಾಜಿ ಸಂಧಾನವಾಗಿ ಇನ್ನೂ 20 ದಿನ ಕಳೆದಿಲ್ಲ. ಆಗಲೇ ಮತ್ತೆ ಏಟು-ಏದಿರೇಟು ಶುರುವಾಗಿದೆ. ಈ ಏಟು – ಏದಿರೇಟಿಗೆ ಇಂದು ಬೆಟ್ಟದ ಮೇಲಿನ ಚಾಮುಂಡಿ ತಾಯಿ ಸಾಕ್ಷಿಯಾಗಲಿದ್ದಾಳೆ.
ಸಾ.ರಾ ಮಹೇಶ್ ಮತ್ತು ವಿಶ್ವನಾಥ್ ಮೈಸೂರು ಭಾಗದ ಪ್ರಭಾವಿ ನಾಯಕರು. ಕೆಲ ದಿನಗಳ ಹಿಂದೆ ಇವರಿಬ್ಬರ ಆರೋಪ ಪ್ರತ್ಯಾರೋಪಗಳು ವೈಯಕ್ತಿಕ ವಿಚಾರವಾಗಿ ತಿರುಗಿ ಕೀಳು ಮಟ್ಟದ ಹೇಳಿಕೆಗಳು ಇಬ್ಬರು ನಡುವೆ ಶುರುವಾಗಿದ್ದವು. ನಂತರ ಇಬ್ಬರು ಎಚ್ಚೆತ್ತು ಪರಸ್ಪರ ಟೀಕೆ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದರು. ಕದನ ವಿರಾಮ ಘೋಷಿಸಿದ್ದರು. ಆದರೆ, ಇದೀಗ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮತ್ತೆ ಇಬ್ಬರ ನಡುವೆ ವಾಕ್ಸಮರ ಆರಂಭವಾಗಿದೆ.
ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಧ್ವನಿ ಎತ್ತಿದ ವಿಶ್ವನಾಥ್ ವಿರುದ್ಧ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ವಿಶ್ವನಾಥ್ ಆಣೆ ಪ್ರಮಾಣದ ವಿಚಾರ ಪ್ರಸ್ತಾಪ ಮಾಡಿದ್ದರು. ನನ್ನನ್ನು ಮಾರಿ ಕೊಂಡವನು ಅಂತ ಸಾರಾ ಮಹೇಶ್ ಆರೋಪಿಸುತ್ತಾರೆ. ನನ್ನನ್ನು ಖರೀದಿ ಮಾಡಿದವನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದರು. ಬುಧವಾರ ಮತ್ತೆ ಸಾ.ರಾ ಮಹೇಶ್, ವಿಶ್ವನಾಥ್ ತಮಗೆ ನೀಡಿದ್ದ ಸವಾಲು ಸ್ವೀಕರಿಸಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ವಿಶ್ವನಾಥ್ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಅನ್ನುವುದಾದರೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ. ನಾನು ಬರುತ್ತೇನೆ ಎಂದು ಸಾ.ರಾ ಮಹೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಹುಣಸೂರು ಉಪಚುನಾವಣೆಯ ಟಿಕೆಟ್ ಒಳ ಒಪ್ಪಂದ ಆಗಿದೆ. ನಮ್ಮ ಜಿಲ್ಲೆಯವರು ಯಾರು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಇಂದು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ಆದರೆ ನನ್ನನ್ನು ಕೊಂಡುಕೊಂಡವನು ಸಾ.ರಾ ಮಹೇಶ್ ಜೊತೆ ಬರಲೇಬೇಕು ಎಂದು ತಾಕೀತು ಮಾಡಿದ್ದಾರೆ. ನಾನು ಕುರುಬ ಸಮುದಾಯದವನು ಎಂದು ಹೀಗೆ ಮನಬಂದಂತೆ ನನ್ನ ಮೇಲೆ ಆರೋಪ ಮಾಡ್ತಿದ್ದೀರಾ ಅಂತ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ.
ಸದ್ಯ ಎಲ್ಲರ ಚಿತ್ತ ಇಂದು ಚಾಮುಂಡಿ ಬೆಟ್ಟದದಲ್ಲಿ ನಡೆಯುವ ವಿದ್ಯಮಾನಗಳ ಕಡೆ ನೆಟ್ಟಿದೆ. ಇಂದು ಇಬ್ಬರ ಆಣೆ ಪ್ರಮಾಣಕ್ಕೆ ಸಮಯ ನಿಗದಿಯಾಗಿದ್ದು, ಇಬ್ಬರು ನಾಡ ದೇವತೆಯ ಸನ್ನಿಧಿಯಲ್ಲಿ ಯಾವ ರೀತಿ ಆಣೆ ಪ್ರಮಾಣ ಮಾಡುತ್ತಾರೆ ಎನ್ನುವುದೇ ಕುತೂಹಲವಾಗಿದೆ.
ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಆಣೆ ಪ್ರಮಾಣದ ಪ್ರಸಂಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಾರಾ ಮಹೇಶ್ ಸವಾಲು ಸ್ವೀಕರಿಸಿದ ವಿಶ್ವನಾಥ್ ಗುರುವಾರ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡಲು ಒಪ್ಪಿಕೊಂಡಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಸಾರಾ ಮಹೇಶ್ ಸುದ್ದಿಗೋಷ್ಠಿ ನಡೆಸಿ, ನಾಳೆ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ವಿಶ್ವನಾಥ್ ಅವರು ಚಾಮುಂಡಿ ದೇವಿ ಮುಂದೆ ನಿಂತು ನಾನು ಯಾವುದೇ ಆಸೆ ಅಮಿಷಕ್ಕೆ ಒಳಗಾಗಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಅನರ್ಹ ಶಾಸಕ ಎಚ್.ವಿಶ್ವನಾಥ್ ನಾಳೆ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟಕ್ಕೆ ಮಾಗಮಿಸಿ ಈ ಕುರಿತು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಅವರು ಚಾಮುಂಡಿ ದೇವಿ ಮುಂದೆ ನಿಂತು ನಾನು ಯಾವುದೇ ಆಸೆ ಅಮಿಷಕ್ಕೆ ಒಳಗಾಗಿಲ್ಲ ಎಂದು ಪ್ರಮಾಣ ಮಾಡಿದರೆ ಅಲ್ಲೇ ನಾನು ನಾಡಿನ ಜನರ ಮುಂದೆ ಬೇಷರತ್ ಕ್ಷಮೆ ಕೇಳುತ್ತೇನೆ. ಹುಣಸೂರಿಗೆ ಹೊಸ ಡಿವೈಎಸ್ಪಿ ಹಾಕಿಸಿಕೊಂಡಿದ್ದೀರಿ, ಅದಕ್ಕೆ ಎಷ್ಟು ಹಣ ಪಡೆದಿದ್ದೀರಿ. ಕುಮಾರಣ್ಣನ ಮುಂದೆ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ, ಎಲ್ಲವನ್ನೂ ನಾನು ಚಾಮುಂಡಿ ಸನ್ನಿಧಿಯಲ್ಲೇ ಹೇಳುತ್ತೇನೆ ಎಂದರು.
ಚಾಮುಂಡಿ ಮುಂದೆ ಪ್ರಮಾಣ ಮಾಡಲು ವಿಶ್ವನಾಥ್ ಬರಲಿ. ಅವರೊಂದಿಗೆ ಪತ್ರಕರ್ತ ಮರಂಕಲ್ ಅವರನ್ನೂ ಕರೆತರಲಿ, ಅವರಿಗೆ ಸತ್ಯ ಗೊತ್ತಿದೆ. ಶರಣಗೌಡ ಪಾಟೀಲ್ ವಿಚಾರದಲ್ಲೂ ಅವರ ಮರಂಕಲ್ ಪಾತ್ರ ಇತ್ತು. ಇದರಲ್ಲೂ ಅವರ ಪಾತ್ರ ಇದೆ. ಹೀಗಾಗಿ ನಾಳೆ ಬೆಟ್ಟಕ್ಕೆ ಮರಂಕಲ್ ಅವರನ್ನು ಕರೆದುಕೊಂಡು ಬರಲಿ, ಅವರಿಗೆ ಸತ್ಯ ಗೊತ್ತಿದೆ. ಮರಂಕಲ್ ಮುಂದೆಯೇ ವಿಶ್ವನಾಥ್ ಚಾಮುಂಡಿ ತಾಯಿ ಬಳಿ ಪ್ರಮಾಣ ಮಾಡಲಿ. ಚಾಮುಂಡಿ ಪಾದ ಬೇಡ ಗೋಪುರದ ಬಳಿಯೇ ಪ್ರಮಾಣ ಮಾಡಲಿ ಸಾಕು ಎಂದು ಸವಾಲು ಹಾಕಿದ್ದಾರೆ.
ಎಚ್.ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಅತೀವ ಬೇಸರವಾಗಿತ್ತು. ಹೀಗಾಗಿ ಸೆಪ್ಟೆಂಬರ್ 18ರಂದು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದೆ. ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು. ಸ್ಪೀಕರ್ ಹೊರ ದೇಶದಿಂದ ಬಂದ ನಂತರ ನನ್ನನ್ನು ಕರೆಸಿ ಸ್ಪೀಕರ್ ಮನವೊಲಿಸಿದ್ದರು. ಹೀಗಾಗಿ ರಾಜೀನಾಮೆ ನೀಡಲಿಲ್ಲ, ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೆ ಎಂದು ಇದೇ ವೇಳೆ ತಿಳಿಸಿದರು.
ಎಚ್.ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು. ಎಸ್.ಎಂ. ಕೃಷ್ಣ ವಿರುದ್ಧ ಪುಸ್ತಕ ಬರೆದಿದ್ದರು. ಕೊನೆಗೆ ಮಾಜಿ ಪ್ರಧಾನಿ ದೇವೇಗೌಡ ಮುಂದೆ ಕೈ ಮುಗಿದು ನನ್ನನ್ನು ಒಂದು ಬಾರಿ ಶಾಸಕರಾಗಿ ಮಾಡಿ ಎಂದು ಕೇಳಿದ್ದರು. ಇಂದು ದೇವರಾಜ ಅರಸು ಹೆಸರು ಹೇಳುತ್ತಾರೆ. ಆದರೆ ದೇವರಾಜ ಅರಸು ಮಗಳ ರಾಜಕೀಯವನ್ನು ಹೇಗೆ ವಿಶ್ವನಾಥ್ ಮುಗಿಸಿದರು ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ವಿಶ್ವನಾಥ್ ನಂಬಿಕೆಗೆ ಅರ್ಹ ಅಲ್ಲ, ಅವರನ್ನು ನಂಬ ಬೇಡ, ಅವರು ಒಳ್ಳೆಯವರಲ್ಲ ಎಂದು ಜಿಟಿಡಿ ನನಗೆ ಅವತ್ತೇ ಹೇಳಿದ್ದರು. ಆದರೆ ನಾನು ಜಿಟಿಡಿ ಮಾತು ಕೇಳಲಿಲ್ಲ ಎಂದರು.
ಹುಣಸೂರಲ್ಲಿ ಎಚ್.ವಿಶ್ವನಾಥ್ ಆಗಲಿ ಅವರ ಕುಟುಂಬದರಾಗಲಿ ಚುನಾವಣೆಗೆ ನಿಲ್ಲುವುದಿಲ್ಲ. ಅಲ್ಲಿನ ಟಿಕೆಟ್ ಬೇರೆಯವರಿಗೆ ನಿರ್ಧಾರವಾಗಿದೆ. ಆದರೆ ನ್ಯಾಯಾಲಯದ ಆದೇಶ ಬಂದ ಮೇಲೆ ಅವರು ಈ ಜಿಲ್ಲೆ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಟಾಂಗ್ ನೀಡಿದರು.
ಹುಣಸೂರಿನಲ್ಲಿ ಈ ಜಿಲ್ಲೆಯವರಂತೂ ಸ್ಪರ್ಧಿಸಲ್ಲ. ಹೊರ ಜಿಲ್ಲೆಯವರು ಬಂದು ಸ್ಪರ್ಧೆ ಮಾಡುತ್ತಾರೆ. ಅದಕ್ಕೆ ಬೇರೆ ರೀತಿಯ ಒಪ್ಪಂದ ಆಗಿದೆ. ಆ ಒಪ್ಪಂದ ಏನು ಎನ್ನುವುದನ್ನು ಹೇಳೋಕೆ ಅವರು ಮತ್ತೆ ದೇವರ ಮುಂದೆ ಬರಬೇಕು. ಅವೆಲ್ಲವನ್ನು ಆಮೇಲೆ ಮಾತಾಡೋಣ ಎಂದು ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಹೇಳಲು ನಿರಾಕರಿಸಿದರು.
ವಿಶ್ವನಾಥ್ ಹೇಳಿದ್ದೇನು?
ಮೈಸೂರು ಜಿಲ್ಲೆ ವಿಭಜನೆಗೆ ಪಟ್ಟು ಹಿಡಿದು ಕುಳಿತಿರುವ ಅನರ್ಹ ಶಾಸಕ ಹೆಚ್ ವಿಶ್ವನಾಥ್, ವಿಭಜನೆ ವಿರೋಧಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ನನ್ನೊಬ್ಬನ ಆಶಯ ಅಲ್ಲ. ಕಿ.ಮೀ. ಲೆಕ್ಕವೂ ಅಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದರು. ಕಿ.ಮೀ. ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅಧ್ಯಯನ ಮಾಡೋದು ಒಳಿತು. ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆ ಆಗಿಲ್ಲವೇ ಎಂದು ಪ್ರಶ್ನಿಸಿದ್ದರು.
ಜಿಲ್ಲೆ ಒಡೆಯುವುದು ಚುನಾವಣೆ ಗಿಮಿಕ್ ಎಂದ ಸಾರಾ ಮಹೇಶ್ ಅವರಿಗೂ ವಿಶ್ವನಾಥ್ ತಿರುಗೇಟು ನೀಡಿದ್ದರು. ನನ್ನನ್ನು 25 ಕೋಟಿ ರೂ.ಗೆ ಮಾರಿಕೊಂಡವನು ಎಂದು ಸಾ.ರಾ ಮಹೇಶ್ ಹೇಳಿದಾಗಲೆಲ್ಲಾ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನನ್ನನ್ನು ಯಾರು ಕೊಂಡುಕೊಂಡಿದ್ದಾರೆ ಎಂದು ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಬಂದು ಹೇಳಲಿ. ನಾನು ಕೂಡ ಅಲ್ಲಿಗೆ ಹೋಗುತ್ತೇನೆ ಎಂದು ಸಾರಾ ಮಹೇಶ್‍ಗೆ ಸವಾಲ್ ಹಾಕಿದ್ದರು.
ಮೈಸೂರು: ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಅವರನ್ನು ಮೈಸೂರು ಜಿಲ್ಲಾಡಳಿತ ಅಕ್ಷರಶಃ ಮರೆತೇ ಬಿಟ್ಟಿದೆ.
10 ದಿನಗಳ ದಸರಾದ ನಾನಾ ಕಾರ್ಯಕ್ರಮದಲ್ಲಿ ಸಾ.ರಾ ಮಹೇಶ್‍ಗೆ ಒಂದೇ ಒಂದು ಕಾರ್ಯಕ್ರಮದ ಉದ್ಘಾಟನೆಗೂ ಅವಕಾಶ ಇಲ್ಲ. ಆದರೆ ಜೆಡಿಎಸ್‍ನ ಮತ್ತೊಬ್ಬ ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಮೂರು ಕಾರ್ಯಕ್ರಮಗಳ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಣತಿಯಂತೆ ಜಿಲ್ಲಾಡಳಿತ ಈ ಕಾರ್ಯಕ್ರಮ ಪಟ್ಟಿ ಸಿದ್ಧ ಮಾಡಿದೆ. ದಸರಾ ಕಾರ್ಯಕ್ರಮದಲ್ಲಿ ಜಿಟಿಡಿಗೆ ಆದ್ಯತೆ ಸಿಕ್ಕಿದ್ದು ಸಾ.ರಾ.ಮಹೇಶ್ ಅವರನ್ನು ಸ್ಪಷ್ಟವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಉಸ್ತುವಾರಿ ಸಚಿವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಈ ಹಿಂದೆ ಹೇಳಿದ್ದರು.
ಈ ಹೇಳಿಕೆಗೆ ಪೂರಕವಾಗಿ ಸಾ.ರಾ ಮಹೇಶ್‍ರನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ದೂರ ಇಟ್ಟಿದ್ದಾರೆ. ಆದರೆ ಜಿ.ಟಿ.ದೇವೇಗೌಡರ ದಸರಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೈಸೂರು: ಇಬ್ಬರೂ ತಪ್ಪು ಮಾಡಿದ್ದೇವೆ, ವೈಯುಕ್ತಿಕ ಟೀಕೆಗಳನ್ನು ನಿಲ್ಲಿಸೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಸಾರಾ ಮಹೇಶ್ ಹೇಳಿಕೆಗಳಿಗೆ ಮಾತಿನ ಚಾಟಿ ಬೀಸಿ ತಿರುಗೇಟು ನೀಡುತ್ತಿದ್ದ ವಿಶ್ವನಾಥ್ ಈಗ ಅವರ ಜೊತೆಗೆ ರಾಜಿಗೆ ಮುಂದಾಗಿದ್ದಾರೆ.
ಹೌದು. ಇಷ್ಟು ದಿನ ಹಾವು ಮುಂಗುಸಿಯಂತೆ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಬಂದಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ವಿಶ್ವನಾಥ್ ಅವರು ಸಾರಾ ಮಹೇಶ್ ಜೊತೆ ರಾಜಿಗೆ ನಿಂತಿದ್ದಾರೆ. ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ಜನರು ನಮ್ಮನ್ನು ನೋಡುತ್ತಿದ್ದಿದ್ದಾರೆ. ಅವರ ಮುಂದೆ ನಾವು ಜಾರಿ ಬೀಳುವುದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತಿದೆ. ನಾವಿಬ್ಬರು ಒಂದೇ ಊರಿನವರು, ಪರಸ್ಪರ ಈ ರೀತಿ ಮಾತನಾಡುವುದು ಬೇಡ. ನೀವೇನೋ ಮಾಡುತ್ತೀರಾ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಆದ್ದರಿಂದ ಇಂತಹ ಪರಸ್ಪರ ವೈಯುಕ್ತಿಕ ಮಾತುಗಳು ನಮಗೆ ಒಳ್ಳೆಯದಲ್ಲ. ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ. ಇಬ್ಬರೂ ಕೂಡ ಮಂತ್ರಿಗಳಾಗಿದ್ದವರು. ಈ ರೀತಿ ಮಾತನಾಡಿದರೆ ಜನ ನೋಡುತ್ತಾರೆ. ಇಲ್ಲಿಗೆ ಎಲ್ಲವನ್ನು ನಿಲ್ಲಿಸೋಣ. ವೈಯುಕ್ತಿಕ ಟೀಕೆಗಳನ್ನ ನಿಲ್ಲಿಸೋಣ ಎಂದು ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿದರು. ಇದನ್ನೂ ಓದಿ:ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು
ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ. ಇದನ್ನ ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ. ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು. ಅದರ ಪರಿಣಾಮ ಸರ್ಕಾರ ಪತನವಾಯಿತು. ಈಗ ನೀವು ಹದ್ದು ಗಿಣಿ ಎಂಬ ಟೀಕೆ ಮಾಡಿಕೊಳ್ಳುತ್ತಿದ್ದೀರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ಸಿದ್ದರಾಮಯ್ಯ, ಕುಮಾರಸ್ವಾಮಿ. ಕುಮಾರಸ್ವಾಮಿಯೇ ತಮ್ಮದು ಕೆಟ್ಟ ಸರ್ಕಾರ ಎಂದು ಹೇಳಿದ್ದಾರೆ. ನಾವು ಅದನ್ನ ಹೇಳಿಯೇ ಸರ್ಕಾರದಿಂದ ಹೊರ ಬಂದಿದ್ದು. ಈಗ ಅದನ್ನು ನೀವೇ ಖಚಿತ ಪಡಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ
ಮಾಜಿ ಸಚಿವ ರೇವಣ್ಣರನ್ನ ಹೊಗಳುವುದರ ಜೊತೆಗೆ ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ. ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ದರು ಅದನ್ನ ಮಾಡುತ್ತಾರೆ. ಜೊತೆಗೆ ಎಲ್ಲಾ ಖಾತೆಗೂ ಕೈಯಾಡಿಸುತ್ತಾರೆ ಎಂದು ಕಾಲೆಳೆದಿದ್ದರು.
15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಆಯೋಗದ ನಿರ್ಧಾರ ಸ್ವಾಗತಾರ್ಹ. ಆದರೆ ಚುನಾವಣೆ ಮುಂದೂಡಿಕೆ ಮಾಡಿ ಎನ್ನುವುದೇ ನಮ್ಮ ಮನವಿ ಎಂದು ಹೇಳಿದರು. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಎನ್ನುವುದು ನಮ್ಮ ಅಭಿಪ್ರಾಯ. ಅದೇನೆ ಇದ್ದರೂ ಬುಧವಾರ ಹಾಗೂ ಶುಕ್ರವಾರದವರೆಗೆ ಕಾಯಬೇಕು. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡುತ್ತೆನೆ. ಅವರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ. ಉಪಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ ಎಂದು ಹೇಳಿದರು.
ಮೈಸೂರು: ಯಾವ ಹೀರೋಯಿನ್ ಜೊತೆ ಯಾವ ರೀತಿ ಮಾತನಾಡಿದ್ದೀರಿ ಅನ್ನೋ ದಾಖಲೆ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಅನರ್ಹ ಶಾಸಕ ಹೆಚ್ ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ವಿಶ್ವನಾಥ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಬನ್ನಿ ಚಾಮುಂಡಿ ಬೆಟ್ಟಕ್ಕೆ, ನಾನು ಯಾವುದೇ ಆಸೆ, ಆಮಿಷಗಳಿಗೂ ಬಲಿಯಾಗಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ ಎಂದು ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲ್ ಹಾಕಿದರು.
ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ಎಂದು ಗುಡುಗಿದರು. ಇದನ್ನು ಓದಿ: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್
25 ಲಕ್ಷ ದುಡ್ಡು ಪಡೆದಿದ್ದೇನೆ ಈ ವರ್ಗಾವಣೆ ಮಾಡಿ ಕೊಡಿ ಎಂದು ಅವತ್ತು ಕೇಳಿದರಲ್ಲ. ಅದನ್ನು ನಾನು ಮಾಡಿಸಿ ಕೊಡಲಿಲ್ಲ ಎಂದು ಹೀಗೆ ಮಾತನಾಡುತ್ತಿದ್ದೀರಾ? ನೀವು ವಕೀಲರಾಗಿದ್ದಾಗ ಒಬ್ಬ ವಿಧವೆ ನಿಮ್ಮ ಬಳಿ ನ್ಯಾಯ ಕೇಳೋಕೆ ಬಂದ ಅವರ ಕಥೆ ಏನಾಯ್ತು ಎಂದು ಹೇಳಬೇಕಾ? 1994 ರಲ್ಲಿ ಕೆಆರ್ ನಗರದ ಹಳ್ಳಿಗಳಿಗೆ ನೀವು ಹೋದಾಗ ಮನೆ ಬಾಗಿಲು ಯಾಕೆ ಹಾಕಿ ಕೊಳ್ಳುತ್ತಿದ್ದರು ಅನ್ನೋದು ಹೇಳಬೇಕಾ? ಎಂದು ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಿದರು.
ನಾನು ನಿಮಗಿಂತ ಏಕವಚನದಲ್ಲಿ ಮಾತಾಡಬಲ್ಲೆ. ಆದರೆ ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ ಅದಕ್ಕೆ ಮಾತಾಡಲ್ಲ. ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಸಾಕು ನಾನು ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಾನಾ ಅಯೋಗ್ಯ ನೀವಾ ಅಂತಾ ತೀರ್ಮಾನವಾಗಲಿ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು. ನಿಮ್ಮ ಯೋಗ್ಯತೆ ಮೈಸೂರು ಮತ್ತು ಮಡಿಕೇರಿ ಜನರಿಗೆ ಗೊತ್ತಿದೆ. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನನ್ನ ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕಿಡಿಕಾರಿದರು.
ನಾನು ಜನರ ಮನೆಗೆ ಹೋದರೆ ನನ್ನ ಅಣ್ಣ ಬಂದ, ತಮ್ಮ ಬಂದ, ಮಗ ಬಂದಾ ಎಂದು ಮನೆಯೊಳಗೆ ಕರೆಯುತ್ತಾರೆ. ನೀವು ಹೋದರೆ ಜನ ಎಲ್ಲಿ ನಿಮ್ಮನ್ನು ಕೂರಿಸುತ್ತಾರೆ ಎಂದು ಗೊತ್ತಿದೆ. ಅನರ್ಹ ಆದ ಮೇಲೆ ಹೆಚ್ ವಿಶ್ವನಾಥ್ ಹೋಗಿ ಹುಚ್ಚು ವಿಶ್ವನಾಥ್ ಆಗಿದ್ದಾರೆ. ಅವರಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು. 9 ದಿವಸದ ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ ಇಲ್ಲ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಹೇಳಿದರು.
ಮೈಸೂರು: ನಾನಾ ಅವರಾ ಅನ್ನೋದನ್ನ ಭಾನುವಾರ ಜನರ ಮುಂದೆ ನಿರೂಪಿಸುತ್ತೇನೆ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.
ಕೆ.ಆರ್.ನಗರ ಅಭಿವೃದ್ಧಿ ಮಾಡುವುದರಲ್ಲಿ ಸಾ.ರಾ.ಮಹೇಶ್ ವಿಫಲರಾಗಿದ್ದಾರೆ. ಅವರಿಗಿಂತ ನಾನೇ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದರು. ಈ ಹೇಳಿಕೆಗೆ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಯಾವ ಯಾವ ಕೆಲಸ ಮಂಜೂರಾಗಿದೆ ಎಂದು ಅವರಿಗೆ ಗೊತ್ತಿಲ್ಲ. ಅವರು ದಿನ ಬೆಳಗ್ಗೆ ಎದ್ದರೆ ಯಾರಿಗೆ ವಿಷ ಹಾಕಬೇಕು? ಯಾವಾಗ ಸರ್ಕಾರ ಬೀಳಿಸಬೇಕು? ಯಾರ ಹತ್ತಿರ ದುಡ್ಡು ತಗೊಂಡು ಲೈಫ್ ಸೆಟಲ್ ಮಾಡ್ಕೋಬೇಕು ಎನ್ನುವ ಬಗ್ಗೆ ಯೋಚನೆಯಲ್ಲಿದ್ದರು. ಹೀಗಾಗಿ ಕೆ.ಆರ್.ನಗರಕ್ಕೆ ಯಾವ ಯಾವ ಕೆಲಸ ಮಂಜೂರಾಗಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಸಾ.ರಾ ಮಹೇಶ್ ಟಾಂಗ್ ಕೊಟ್ಟರು.
ಈ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿ ಕರೆದು ದಾಖಲೆ ಸಮೇತ ಉತ್ತರ ಕೊಡುತ್ತೇನೆ. ನಾನು ಅಭಿವೃದ್ಧಿ ಮಾಡಿದ್ದೀನಾ? ಇಲ್ಲಾ ಅವರು ಅಭಿವೃದ್ಧಿ ಮಾಡಿದ್ದಾರಾ ಅನ್ನೋದನ್ನ ಜಿಲ್ಲೆಯ ಹಾಗೂ ತಾಲೂಕಿನ ಜನರಿಗೆ ಹೇಳುತ್ತೇನೆ. ಅವರು ಇನ್ನೊಂದು ಪದ ಹೇಳಿದ್ದಾರೆ ಸುದ್ದಿಗೋಷ್ಠಿ ನಡೆದ ಮೇಲೆ ಅದು ನಾನಾ ಅಥವಾ ಅವರಾ ಎಂದು ಜನ ನಿರ್ಧಾರ ಮಾಡುತ್ತಾರೆ ಎಂದು ವಿಶ್ವನಾಥ್ ಅವರಿಗೆ ಸವಾಲ್ ಹಾಕಿದರು.
ವಿಶ್ವನಾಥ್ ಹೇಳಿದ್ದೇನು?
ಇವತ್ತು ದೇವೇಗೌಡರ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ ಎಂದರೆ ಅದಕ್ಕೆ ಸಾರಾ ಮಹೇಶ್ ಮತ್ತು ಆತನ ಕೆಲ ಸ್ನೇಹಿತರು ಕಾರಣ. ದೇವೇಗೌಡರ ಮನೆಗೆ ಇವತ್ತು ಅನ್ಯಾಯವಾಗಿದ್ದರೆ ಅದಕ್ಕೂ ಸಾರಾ ಮಹೇಶ್ ಕಾರಣ. ದೇವೇಗೌಡರ ಕಣ್ಣೀರಿಗೂ ಅವರೇ ಕಾರಣ ಎಂದು ಕಿಡಿಕಾರಿದ್ದರು.
ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರೇ ಜೆಡಿಎಸ್‍ನಿಂದ ದೂರವಾದರು. ಇವತ್ತಿನ ದೇವೇಗೌಡರ ಈ ಸ್ಥಿತಿಗೆ ನಾವಲ್ಲ ಕಾರಣ ನೀವು. ಮಹೇಶ್ ಕ್ಷೇತ್ರದಲ್ಲಿ ಕೆಲವರಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಕೊಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದರೆ ನನ್ನದ್ದು ಅಭಿವೃದ್ಧಿ ರಾಜಕಾರಣ. ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ. ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಮಾಡಿದಷ್ಟು ಕೆಲಸ ನೀವು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.