ಲಂಡನ್ ಸ್ಕ್ರೀನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಲಂಡನ್‍ನಲ್ಲಿ ಲಂಬೋದರ ಚಿತ್ರ ಮಾರ್ಚ್ 29ರಂದು ಬಿಡುಗಡೆಯಾಗುತ್ತಿದೆ. ರಾಜ್ ಸೂರ್ಯ ನಿರ್ದೇಶನದ ಈ ಸಿನಿಮಾ ಮೂಲಕ ವಿಶಿಷ್ಟವಾದೊಂದು ಪಾತ್ರದ ಮೂಲಕ ಸಂತೋಷ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಮಾಯೆಯೆಂಬುದು ಎತ್ತೆತ್ತಲಿಂದಲೋ ಸೆಳೆದುಕೊಂಡು ಬರುತ್ತದಲ್ಲಾ? ಅಂಥಾದ್ದೇ ಸೆಳೆತಕ್ಕೆ ಸಿಕ್ಕು ಐಟಿ ವಲಯದ ಕೆಲಸವನ್ನು ತೊರೆದು ಬಣ್ಣದ ನಂಟಿಗೆ ಬಿದ್ದವರು ಸಂತೋಷ್!
ಆರಂಭ ಕಾಲದಿಂದಲೂ ಸಿನಿಮಾಸಕ್ತಿ ಹೊಂದಿದ್ದ ಸಂತೋಷ್ ಪಾಲಿಗೆ ನಾಯಕ ನಟನಾಗಬೇಕೆಂಬುದು ಅದೆಷ್ಟೋ ವರ್ಷಗಳ ಕನಸು. ಕಾಲೇಜು ಅವಧಿಯಲ್ಲಿಯೇ ಚಿಗುರಿಕೊಂಡಿದ್ದ ಈ ಆಸಕ್ತಿಯನ್ನು ಎದೆಯಲ್ಲಿಯೇ ಕಾಪಿಟ್ಟುಕೊಂಡು, ಬೇರೆಯದ್ದೇ ಕ್ಷೇತ್ರಕ್ಕೆ ತೆರಳಿದರೂ ಅಲ್ಲಿಂದ ಮತ್ತೆ ಕಲೆಯ ತೆಕ್ಕೆಗೆ ಬಿದ್ದ ಅವರ ಸಿನಿಮಾ ಯಾನ ರಸವತ್ತಾಗಿದೆ.

ಮೈಸೂರಿನ ಅಗ್ರಹಾರದ ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದವರು ಸಂತೋಷ್. ಅವರು ಓದಿದ್ದೆಲ್ಲವೂ ಮೈಸೂರಿನಲ್ಲಿಯೇ. ಕಾಲೇಜು ಓದೋ ಹೊತ್ತಿಗೆಲ್ಲ ಅವರೊಳಗೆ ಸಿನಿಮಾ ವ್ಯಾಮೋಹದ ಕಿಡಿ ಹೊತ್ತಿಕೊಂಡಿತ್ತು. ಅನೂಪ್ ಭಂಡಾರಿಯವರ ಸಹಪಾಠಿಯೂ ಆಗಿರುವ ಸಂತೋಷ್ ಆ ಹೊತ್ತಿನಲ್ಲಿಯೇ ಮಾಡೆಲಿಂಗ್ ನಲ್ಲಿಯೂ ಮಿಂಚಿದ್ದರು. ಇದೇ ಹಾದಿಯಲ್ಲಿ ಮುಂದುವರಿದು ಫ್ಯಾಶನ್ ಶೋ ಒಂದರ ವಿನ್ನರ್ ಆಗಿಯೂ ಹೊರ ಹೊಮ್ಮಿದ್ದರು. ಆದರೆ ಕಾಲೇಜು ಓದು ಮುಗಿಯುವ ಹೊತ್ತಿಗೆಲ್ಲಾ ಬದುಕು ಬೇರೆಯದ್ದೇ ದಿಕ್ಕು ತೋರಿಸಿತ್ತು.
ಮನಸೆಲ್ಲ ನಟನಾಗುವ ಕನಸಿನತ್ತಲೇ ತುಡಿಯುತ್ತಿದ್ದರೂ ಐಟಿ ಸೆಕ್ಟರಿನಲ್ಲಿ ಕೆಲಸ ಮಾಡುವ ಅನಿವಾರ್ಯತೆ ಬಂದೊದಗಿತ್ತು. ಹೀಗೆ ಆ ಕೆಲಸದಲ್ಲಿ ಕಳೆದು ಹೋಗಿದ್ದರೂ ಮುಂದೊಂದು ದಿನ ನಾಯಕ ನಟನಾಗೇ ತೀರುವ ಹಂಬಲ ಮಾತ್ರ ಅವರಿಗಿದ್ದೇ ಇತ್ತು. ಈ ಬಗ್ಗೆ ತಮ್ಮ ಬಾಲ್ಯ ಸ್ನೇಹಿತರಾದ ಪ್ರಣವ್ ಅವರೊಂದಿಗೆ ಚರ್ಚೆ ಸಾಗುತ್ತಲೇ ಇತ್ತು. ಈ ಹುಡುಕಾಟದಲ್ಲಿದ್ದಾಗಲೇ ರಾಜ್ ಸೂರ್ಯ ಲಂಡನ್‍ನಲ್ಲಿ ಲಂಬೋದರ ಕಥೆ ಹೇಳಿದ್ದರು. ಅದು ಯಾವ ಪರಿ ಇಷ್ಟವಾಗಿತ್ತೆಂದರೆ ಕೇಳಿದಾಕ್ಷಣವೇ ಈ ಚಿತ್ರ ತನ್ನ ಕನಸಿನ ಹಾದಿಯಲ್ಲಿ ಮೈಲಿಗಲ್ಲಾಗುತ್ತದೆಂಬ ಸ್ಪಷ್ಟ ಸೂಚನೆ ಸಿಕ್ಕಿಂತಂತೆ.

ತಕ್ಷಣವೇ ತಮ್ಮ ಕೆಲಸ ಬಿಟ್ಟು ತಯಾರಿ ಆರಂಭಿಸಿದ್ದ ಸಂತೋಷ್ ಆರಂಭಿಕವಾಗಿ ಎರಡ್ಮೂರು ತಿಂಗಳ ಕಾಲ ನಟನಾ ತರಬೇತಿ ಪಡೆದುಕೊಂಡಿದ್ದರಂತೆ. ಯಾಕೆಂದರೆ ಈ ಚಿತ್ರದಲ್ಲಿ ಅವರ ಪಾತ್ರ ಸವಾಲಿನದ್ದು. ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಬೇಡುವಂಥಾದ್ದು. ಪ್ರತೀ ದಿನವೂ ದಿನಭವಿಷ್ಯ ಓದಿ ಅದರಂತೆಯೇ ಬದುಕುವ ವಿಶಿಷ್ಟವಾದ ಪಾತ್ರವನ್ನು ಸಂತೋಷ್ ಇಲ್ಲಿ ನಿರ್ವಹಿಸಿದ್ದಾರಂತೆ. ಈ ಚಿತ್ರದ ಶೇಕಡಾ ಐವತ್ತರಷ್ಟು ಭಾಗ ಲಂಡನ್ ನಲ್ಲಿಯೇ ನಡೆದಿದೆ. ಅದನ್ನೆಲ್ಲ ಎಂಜಾಯ್ ಮಾಡುತ್ತಲೇ ನಿರ್ವಹಿಸಿರುವ ಸಂತೋಷ್ ಚೆಂದದ ಕಥೆ ಹೊಂದಿರೋ ಅಚ್ಚುಕಟ್ಟಾದ ಓಪನಿಂಗ್ ಸಿಕ್ಕ ಖುಷಿಯಲ್ಲಿದ್ದಾರೆ. ಈ ಚಿತ್ರದಿಂದಲೇ ನಾಯಕ ನಟನಾಗಿ ಕಾಲೂರಿ ನಿಲ್ಲುವ ಭರವಸೆಯೂ ಅವರಲ್ಲಿದೆ.

















































