Tag: Santosh

  • ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

    ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

    – ಡಿಕೆಶಿಗೆ ಈಶ್ವರಪ್ಪ ಬಹಿರಂಗ ಸವಾಲ್

    ಬೆಳಗಾವಿ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಿಸಿರುವ ವಿಚಾರವಾಗಿ ಸಚಿವ ಈಶ್ವರಪ್ಪ ಅವರನ್ನು ಪ್ರಶ್ನೆ ಮಾಡಲಾಗಿದ್ದು, ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ ಎಂದು ಉತ್ತರಿಸಿದ್ದಾರೆ

    ಇಂದು ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಮಾಧ್ಯಮಗಳಲ್ಲಿ ರಾತ್ರಿ ಈ ಬಗ್ಗೆ ನೋಡಿದೆ. ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ ಮಾಡುತ್ತಿದ್ದೀರಾ ಎಂದು ವಾಪಸ್ ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.

    ಇದರ ಜೊತೆಗೆ ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ಅವರ ಕುಟುಂಬಸ್ಥರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ರಾಜ್ಯ ಬಿಜೆಪಿಯಲ್ಲಿ ಒಂದು ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ಆದರೆ ಅವನು ಮಾತ್ರ ಯಾಕೆ ಆತ್ಮಹತ್ಯೆಗೆ ಯತ್ನ ಮಾಡಿದ. ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ, ಅದರ ಬಗ್ಗೆ ಅವರ ಮನೆಯವರನ್ನು ಕೇಳಬೇಕು ಎಂದು ತಿಳಿಸಿದರು.

    ಆತನಿಗೆ ರಾಜಕೀಯ ಒತ್ತಡವಿದ್ದರೆ, ಅದೇನು ಎಂದು ನನಗೇನೂ ಗೊತ್ತು? ಆತನೇ ಇಂತಹ ವ್ಯಕ್ತಿ ಇಂತಹ ಕಾರಣಗಳಿಂದ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಲಿ. ಆ ರೀತಿಯ ತೊಂದರೆ ಇದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ. ಸುಮ್ಮನೇ ಹೇಳಿಕೆ ಕೊಟ್ಟು ಬಿಜೆಪಿ ಮೇಲೆ ಆಪಾದನೆ ಮಾಡುತ್ತಾ ಕುಳಿತರೇ? ಮನೆಯಲ್ಲಿಯೂ ಪಾಲಿಟಿಕ್ಸ್ ತುಂಬಾ ಇರುತ್ತೆ. ಆದರೆ ಖಾಸಗಿ ವಿಚಾರ ಬಗ್ಗೆ ನಾನು ಉತ್ತರ ಕೊಡೋಕೆ ಇಷ್ಟಪಡಲ್ಲ ಎಂದು ಹೇಳಿದರು.

    ಇದೇ ವೇಳೆ ಯಾವುದೋ ವೀಡಿಯೋ ವಿಚಾರವಾಗಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರು ಅವರು ಮಾತನಾಡುವಾಗ ಘನತೆಯಿಟ್ಟುಕೊಂಡು ಮಾತನಾಡಬೇಕು. ಅವರ ಬಳಿ ವೀಡಿಯೋ ಇದ್ದರೆ ನಮಗೂ ತೋರಿಸಲಿ ಎಂದು ಬಹಿರಂಗ ಸವಾಲ್ ಹಾಕಿದರು.

  • ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ

    ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ

    – ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು

    ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಏನೋ ಬೇಜಾರಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಕಾರವಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಂತೋಷ್‍ರವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇತ್ತು. ಅದನ್ನು ಮಿನಿಸ್ಟರ್ ಮತ್ತು ಎಂಎಲ್‍ಸಿಗೆ ಸೇರಿ ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನುವುದು ಮಾಹಿತಿ ಇದೆ ಎಂದರು.

    ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವೀಡಿಯೊ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಹೀಗಾಗಿ ಬೇರೆ ತನಿಖೆ ಆಗಬೇಕು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

    ಸಿದ್ದರಾಮಯ್ಯ ಮಾದಕ ದ್ರವ್ಯದಿಂದ ಸರ್ಕಾರ ನಡೆಸಿದ್ದರು ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಏನೋ ಹೆಚ್ಚುಕಮ್ಮಿ ಆಗಿದೆ. ಜವಾಬ್ದಾರಿಯುತ ವ್ಯಕ್ತಿ, ಗೌರವ ಸ್ಥಾನದಲ್ಲಿ ನಡೆದುಕೊಳ್ಳಬೇಕು ಅವರಿಗೆ ಅಲ್ಪಸ್ವಲ್ಪ ಜ್ಞಾನ ಇದೆ ಅಂತಾ ತಿಳಿದಿದ್ದೆ. ಆದರೆ ಆ ಸ್ಥಾನಕ್ಕೆ ಕಳಂಕವಾಗುವ ರೀತಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

  • ಕಾಂಕ್ರೀಟ್‌ ಎಂಎಲ್‌ಎ –  ಶಿವಲಿಂಗೇಗೌಡ ವಿರುದ್ಧ ಹೆದ್ದಾರಿ ಮಧ್ಯೆ ನಿಂತು ಧಿಕ್ಕಾರ ಕೂಗಿಸಿದ ಸಂತೋಷ್

    ಕಾಂಕ್ರೀಟ್‌ ಎಂಎಲ್‌ಎ – ಶಿವಲಿಂಗೇಗೌಡ ವಿರುದ್ಧ ಹೆದ್ದಾರಿ ಮಧ್ಯೆ ನಿಂತು ಧಿಕ್ಕಾರ ಕೂಗಿಸಿದ ಸಂತೋಷ್

    ಹಾಸನ: ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೋರ್ಟ್ ತಡೆ ನೀಡಿದ್ದರಿಂದ ಶಾಸಕ ಶಿವಲಿಂಗೇಗೌಡ ಬೆಂಬಲಿಗರು ನಮ್ಮ ಕಾರ್ಯಕರ್ತರ ಮನೆ ಮುಂದೆ ಪಟಾಕಿ ಹೊಡೆಯುವ ದುಸ್ಸಾಹಸ ಮಾಡಿದ್ದಾರೆ. ಅದನ್ನು ತಡೆ ಹಿಡಿಯುವ ಪ್ರಯತ್ನ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಶಾಸಕರ ಮನೆ ಮುಂದೆ ಪಟಾಕಿ ಹೊಡೆಯುವ ದಿನ ದೂರವಿಲ್ಲ ಎಂದು ಬಿಎಸ್‍ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಎಚ್ಚರಿಕೆ ನೀಡಿದ್ದಾರೆ.

    ಇಂದು ಹಾಸನ ಜಿಲ್ಲೆ ಅರಸೀಕೆರೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಡಿ.ಪ್ರಸಾದ್ ಮತ್ತು ಸದಸ್ಯರಾದ ಶಿವನ್‍ರಾಜ್, ಮುರಳಿಧರ್, ರವಿಕುಮಾರ್ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವೇಳೆ ಅರಸೀಕೆರೆ ಹೆದ್ದಾರಿಯಲ್ಲಿ ನಿಂತು ಶಾಸಕ ಶಿವಲಿಂಗೇಗೌಡ ವಿರುದ್ಧ, ಕಾಂಕ್ರೀಟ್ ಎಂಎಲ್‍ಎಗೆ ಧಿಕ್ಕಾರ ಎಂದು ಕೂಗಿಸಿದರು.

    ಬಳಿಕ ಮಾತನಾಡಿದ ಸಂತೋಷ್, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್‍ಟಿ ಮೀಸಲಾಗಿತ್ತು. ಇದರ ವಿರುದ್ಧ ಶಾಸಕ ಶಿವಲಿಂಗೇಗೌಡ ಕಾನೂನು ಹೋರಾಟ ಮಾಡಿದ್ದರು. 2023ಕ್ಕೆ ಮತ ಚಲಾಯಿಸುವ ಮೂಲಕ ಜನರು ಶಾಸಕರಿಗೆ ಈ ಬಗ್ಗೆ ಕೊಡುತ್ತಾರೆ. ಕೊರೊನಾ ಸೋಂಕು ಹೆಚ್ಚಿದ್ದ ಕಾರಣ ಇಂದಿನ ಕಾರ್ಯಕ್ರಮಕ್ಕೆ 200 ಜನರ ಮೇಲೆ ಬರಬೇಡಿ ಎಂದು ಮನವಿ ಮಾಡಿದ್ದೆವು. ಆದರೆ ಶಾಸಕರು ತಡೆಯಾಜ್ಞೆ ತಂದಿರುವುದರಿಂದ ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಸಿಟ್ಟು ತರಿಸಿದೆ. ಹೀಗಾಗಿ ಇಷ್ಟು ಜನ ಸೇರಿದ್ದಾರೆ ಎಂದು ತಿಳಿಸಿದರು.

    ಶಿವಲಿಂಗೇಗೌಡ ತಂತ್ರ, ಕುತಂತ್ರ ಮಾಡಲು ನಿಪುಣರಿದ್ದಾರೆ. ಈ ಕಾಂಕ್ರೀಟ್ ಎಂಎಲ್‍ಎ ವಿರುದ್ಧ ಒಬ್ಬೊಬ್ಬರು ಹೋರಾಟ ಮಾಡುತ್ತಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಕಲೆ ಹಾಕುತ್ತಿದ್ದೇನೆ. ನನ್ನ ವಿರುದ್ಧ ನಮ್ಮ ಪಕ್ಷದವರು ಬೆಂಗಳೂರು ನಾಯಕರ ಬಳಿ ಹೋಗಿದ್ದರು. ಇದರ ಹಿಂದೆ ಶಾಸಕರ ಕೈವಾಡವಿದೆ. ಅಂದು ಅವರು ಯಾರು ಯಾರಿಗೆ ಬೆಂಗಳೂರಿಗೆ ಹೋಗಲು ವಾಹನ ಸೌಕರ್ಯ ಮಾಡಿಕೊಟ್ಟಿದ್ದರು ಎಂಬ ಮಾಹಿತಿ ಇದೆ ಎಂದು ಸಂತೋಷ್ ಕಿಡಿಕಾರಿದರು. ಇದನ್ನೂ ಓದಿ: ನಗರಸಭೆಗಳ ಅಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ – ಹಾಸನದಲ್ಲಿ ಜೆಡಿಎಸ್ ಸಂಭ್ರಮ

  • ಶಿವಲಿಂಗೇಗೌಡಗೆ ಸವಾಲ್ ಹಾಕಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್

    ಶಿವಲಿಂಗೇಗೌಡಗೆ ಸವಾಲ್ ಹಾಕಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್

    – ಪ್ರತಿ ಸವಾಲ್ ಹಾಕಿದ ಶಾಸಕ ಶಿವಲಿಂಗೇಗೌಡ

    ಹಾಸನ: ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಇದೇ ಸಂತೋಷ್, ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ವಿರುದ್ಧ ಆರೋಪ ಮಾಡುತ್ತಾ ಹೋರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಕೆರಳಿದ ಶಾಸಕ ಶಿವಲಿಂಗೇಗೌಡ ಸಂತೋಷ್‍ಗೆ ಸಖತ್ತಾಗೆ ತಿರುಗೇಟು ನೀಡಿದ್ದಾರೆ.

    ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಸಂತೋಷ್ ಈಗಾಗಲೇ ಓಡಾಟ ಶುರು ಮಾಡಿದ್ದು, ಹಾಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಹರಿಹಾಯುತ್ತಿದ್ದಾರೆ. ಶಾಸಕ ಶಿವಲಿಂಗೇಗೌಡ ಸರಿಯಾಗಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಶಾಸಕರ ವಿರುದ್ಧ ಉತ್ತರ ಕೊಡಿ, ಲೆಕ್ಕ ಕೊಡಿ ಎಂದು ಕರಪತ್ರ ಹಂಚಿಕೆ ಮಾಡುತ್ತೇವೆ. ಜನ ಈ ಶಾಸಕರನ್ನು ಕಾಂಕ್ರೀಟ್ ಎಂಎಲ್‍ಎ ಅಂತಿದ್ದಾರೆ ಎಂದಿದ್ದಾರೆ.

    ಜೆಲ್ಲಿ ಕ್ರಷರ್, ಎಂ ಸ್ಯಾಂಡ್ ಯೂನಿಟ್, ಸಿಮೆಂಟ್ ಗೋಡೌನ್‍ಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಚೀಟಿ ಕೊಟ್ಟು, ಶಾಸಕರು ಮೆಟಿರಿಯಲ್ ಮಾರಿಕೊಳ್ಳುತ್ತಿದ್ದಾರೆ. ಶಾಸಕರ ಆಪ್ತರೊಬ್ಬರ ಕಪಿಮುಷ್ಟಿಯಲ್ಲಿ ಅರಸೀಕೆರೆ ನಗರಸಭೆ ಇದ್ದು, ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪ ಮಾಡುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್, ಶಾಸಕರ ವಿರುದ್ಧ ಹೋರಾಟದ ಎಚ್ಚರಿಕೆ ನೀಡುತ್ತಿದ್ದಾರೆ.

    ಆದರೆ ಸಂತೋಷ್ ಆರೋಪಕ್ಕೆ ಖಡಕ್ಕಾಗೇ ತಿರುಗೇಟು ನೀಡಿರುವ ಶಾಸಕ ಶಿವಲಿಂಗೇಗೌಡ, ಒಂದು ಟೆಂಡರ್ ತಂದು ಕೆಲಸ ಮಾಡೋ ಕಷ್ಟ ನಮಗೆ ಗೊತ್ತಿದೆ. ಕೆಲವೊಂದು ಕೆಲಸ ತಡವಾಗಲು ವೈಜ್ಞಾನಿಕ ಕಾರಣಗಳಿವೆ. ಏನು ಗೊತ್ತಿಲ್ಲದೆ ಅರಸೀಕೆರೆ ಜನರಿಗೆ ಸುಳ್ಳು ಹೇಳಲು ಬಂದವರಿಗೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಇದ್ದರೆ ಗೌರವಯುತವಾಗಿ ನಡೆದುಕೊಳ್ಳಬೇಕು. ಇಡೀ ತಾಲೂಕಲ್ಲಿ ಜನರಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಇಡೀ ತಾಲೂಕಿಗೆ ಕಾಂಕ್ರೀಟ್ ಹಾಕಿಸಿದ್ದೇನೆ. ಇದಕ್ಕೆ ಕಾಂಕ್ರೀಟ್ ಎಂಎಲ್‍ಎ ಎಂದು ವ್ಯಂಗ್ಯವಾಡುತ್ತಾರೆ ಎಂದು ತಿಳಿಸಿದ್ದಾರೆ.

    ಯಾವುದೇ ಕಾಮಾಗಾರಿಯಲ್ಲಿ ಶಿವಲಿಂಗೇಗೌಡ ಯಾರ ಬಳಿಯಾದರೂ ಹಣ ತೆಗೆದುಕೊಂಡಿದ್ದಾನೆ ಅಂದರೆ ಈಗಲೇ ಇವನು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆ. ಕಳೆದ ಎಂಪಿ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ 74 ಸಾವಿರ ಮತ ಬಂದಿತ್ತು. ಹೀಗಾಗಿ ಏನಾದರೂ ಆಗುತ್ತೆ ಅಂತಾ ಬಂದಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ. ಮಾತನಾಡುವಾಗ ಗೌರವಯುತವಾಗಿ ಮಾತನಾಡಬೇಕು ಎಂದು ಸಂತೋಷ್ ವಿರುದ್ಧ ಶಾಸಕ ಶಿವಲಿಂಗೇಗೌಡ ಹರಿಹಾಯ್ದಿದ್ದಾರೆ.

  • ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    – ವಿಚಾರಣೆಗೆ ಹಾಜರಾದ ಅಕುಲ್, ಸಂತೋಷ್

    ಬೆಂಗಳೂರು: ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೇ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ ಎಂದು ನಟ ಸಂತೋಷ ಹೇಳಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್‍ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್‍ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್‍ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.

    ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.

    ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.

    ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಸಂತೋಷ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಸಂತೋಷ್

    ಬೆಂಗಳೂರು: ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಮತ್ತು ದಿವ್ಯ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕಾಮಿಡಿ ಕಿಲಾಡಿಗಳು ಅಡ್ಡಾದ ಮತ್ತೊಬ್ಬ ಕಲಾವಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಲಾಕ್‍ಡೌನ್ ಹಿನ್ನೆಲೆ ಸರಳವಾಗಿ ವಿವಾಹವಾಗಿದ್ದಾರೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಮಿಡಿ ಕಿಲಾಡಿಗಳು ತಂಡದ ಕೆಲ ಸಹ ನಟರು ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.

    ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಅದ್ಧೂರಿಯಾಗಿ ಮದುವೆ ಮಾಡುವಂತಿಲ್ಲ, ಹೆಚ್ಚು ಜನರನ್ನು ಕರೆಯುವಂತಿಲ್ಲ. ಈಗಾಗಲೇ ನಿಗದಿ ಆಗಿರುವ ಕೆಲ ಮದುವೆಗಳನ್ನು ಮುಂದೂಡಲಾಗಿದ್ದು, ಇನ್ನೂ ಹಲವು ಜೋಡಿಗಳು ಸರಳವಾಗಿ ಹತ್ತು, ಇಪ್ಪತ್ತು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಅದೇ ರೀತಿ ಇದೀಗ ಸಂತೋಷ್ ಸಹ ಮದುವೆಯಾಗಿದ್ದು, ಹೆಚ್ಚು ಜನರನ್ನು ಕರೆಯದೆ, ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

    ಏ.10 ರಂದು ಸಂತೋಷ್ ವಿವಾಹ ನಿಗದಿಯಾಗಿತ್ತು. ನಂತರ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಸಂಭ್ರಮದ ಮದುವೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಅನುಮತಿ ಪಡೆದು ಸರಳವಾಗಿ 20 ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತೋಷ್ ಅವರ ಸಹ ನಟ ಮಡೇನೂರು ಮನು ಸಹ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೆಚ್ಚು ಜನ ಸೇರದಿದ್ದರೂ ಫುಲ್ ಎಂಜಾಯ್ ಮಾಡಿದ್ದಾರೆ.

    ಈ ಕುರಿತು ಮಡೇನೂರು ಮನು ಟಿಕ್‍ಟಾಕ್‍ನಲ್ಲಿ ವಿಡಿಯೋಗಳನ್ನು ಹಾಕಿದ್ದು, ವಿವಾಹದ ಸಂದರ್ಭದಲ್ಲಿ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ರನ್ನರ್ ಅಪ್ ಆಗಿ ಹೊರಹೊಮ್ಮಿದ, ತುಕಾಲಿ ಸ್ಟಾರ್ ಸಂತು ಎಂದೇ ಖ್ಯಾತಿ ಪಡೆದಿದ್ದ ಸಂತೋಷ್, ಕನ್ನಡಿಗರ ಮನೆ ಮಾತಾಗಿದ್ದಾರೆ. ಸಂತೋಷ್ ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗುತ್ತಾರೆ ಎಂದು ಹಲವರು ಊಹಿಸಿದ್ದರು. ಆದರೆ ಕೊನೆಗೆ ರಾಕೇಶ್ ಪೂಜಾರಿ ಟ್ರೋಫಿ ಗೆದ್ದರು. ಸಂತೋಷ್ ರನ್ನರ್ ಅಪ್ ಆದರು. ಆದರೆ ಇವರ ಜನಪ್ರಿಯತೆ ಮಾತ್ರ ಇಡೀ ಕರ್ನಾಟಕಕ್ಕೆ ಪಸರಿಸಿತು. ಹೀಗಾಗಿಯೇ ಇವರಿಗೆ ಸಿನಿಮಾ ಆಫರ್ ಗಳು ಹೆಚ್ಚು ಬರಲು ಆರಂಭಿಸಿದವು.

    ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಹೆಚ್ಚು ಆಫರ್‍ಗಳು ಬರುತ್ತಿದ್ದು, ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು. ಲಾಕ್‍ಡೌನ್ ಇರುವುದರಿಂದ ಊರಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

  • ಒನ್ ಲವ್ 2 ಸ್ಟೋರಿ ಹೀರೋ ಪವರ್ ಸ್ಟಾರ್ ಅಭಿಮಾನಿ!

    ಒನ್ ಲವ್ 2 ಸ್ಟೋರಿ ಹೀರೋ ಪವರ್ ಸ್ಟಾರ್ ಅಭಿಮಾನಿ!

    ಚಿತ್ರರಂಗದಲ್ಲಿ ಚಾಲ್ತಿಯಲ್ಲಿರೋ ನಾಯಕ ನಟರನ್ನು ಆರಾಧಿಸುತ್ತಲೇ ಚಿತ್ರರಂಗದತ್ತ ಸೆಳೆತ ಬೆಳೆಸಿಕೊಂಡವರು, ಕಲಾಸಕ್ತಿಯನ್ನು ಮೈಗೂಡಿಸಿಕೊಂಡಿರುವ ಅನೇಕರು ನಾಯಕ ನಟರಾಗಿ ನೆಲೆ ಕಂಡುಕೊಂಡಿದ್ದಿದೆ. ಹುಡುಕಾಡಿದರೆ ಹೊಸತಾಗಿ ಬಂದ ಅನೇಕರಲ್ಲಿ ಇಂಥಾ ಅಭಿಮಾನದ ಕಥೆಗಳು ಸಿಗುತ್ತವೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಒನ್ ಲವ್ 2 ಸ್ಟೋರಿ ಚಿತ್ರದ ಮೂಲಕ ನಾಯಕರಾಗಿ ಅಡಿಯಿರಿಸುತ್ತಿರುವ ಸಂತೋಷ್ ಕೂಡಾ ಈ ಸಾಲಿಗೆ ಸೇರಿಕೊಳ್ಳುವವರು.

    ಸಂತೋಷ್ ಮೂಲತಃ ಬೆಂಗಳೂರಿನ ಹುಡುಗ. ಶಾಲಾ ಕಾಲೇಜು ದಿನಗಳಿಂದಲೇ ಸಿನಿಮಾದ ಗುಂಗು ಹತ್ತಿಸಿಕೊಂಡಿದ್ದ ಅವರ ಪಾಲಿಗೆ ಪುನೀತ್ ರಾಜ್‍ಕುಮಾರ್ ರೋಲ್ ಮಾಡೆಲ್. ಪುನೀತ್ ಅವರ ವೀರಾಭಿಮಾನಿಯಾಗಿರೋ ಸಂತೋಷ್ ಅವರ ಚಿತ್ರಗಳನ್ನು ನೋಡುತ್ತಲೇ ಸಿನಿಮಾ ಕನಸು ತುಂಬಿಕೊಂಡಿದ್ದವರು. ಈ ನಡುವೆ ಮನೆ ಮಂದಿಯ ಒತ್ತಾಸೆಗೆ ಬಿದ್ದು ಇಂಜಿನಿಯರಿಂಗ್ ಮಾಡಿಕೊಂಡರೂ ಅವರ ಆಸಕ್ತಿ ಇದ್ದಿದ್ದೇನಿದ್ದರೂ ಸಿನಿಮಾ ಮೇಲೆಯೇ.

    ಕಡೆಗೆ ಐಟಿ ವಲಯದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ ದಕ್ಕಿಸಿಕೊಂಡಿದ್ದರೂ ಸಿನಿಮಾ ಹೊರತಾಗಿ ಬದುಕು ಖಾಲಿ ಖಾಲಿ ಅನ್ನಿಸಲಾರಂಭಿಸಿತ್ತಂತೆ. ಆದ್ದರಿಂದಲೇ ಒಂದು ಸಮಾನಮನಸ್ಕರ ಟೀಮು ಕಟ್ಟಿಕೊಂಡ ಸಂತೋಷ್ ವರ್ಷಾಂತರಗಳ ಹಿಂದೆ ಊಫಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಆದರೆ ಅದಾದ ನಂತರದಲ್ಲಿ ಒಂದಷ್ಟು ಕಾಲ ಇದೆಲ್ಲದರಿಂದ ದೂರ ಉಳಿಯುವಂಥಾ ಅನಿವಾರ್ಯತೆ ಬಂದೊದಗಿತ್ತು. ಇಂಥಾ ಸಂತೋಷ್ ನಿರ್ದೇಶಕ ವಸಿಷ್ಟ ಬಂಟನೂರರಿಗೂ ತುಂಬಾ ವರ್ಷಗಳ ಪರಿಚಿತರು.

    ಹೀಗೆ ವಸಿಷ್ಟರೊಂದಿಗೆ ಸಿನಿಮಾ ಬಗ್ಗೆ ಚರ್ಚೆ ನಡೆಸುತ್ತಲೇ ಸಂತೋಷ್ ಮತ್ತೆ ಸಿನಿಮಾ ಕನಸು ಕಟ್ಟಿಕೊಳ್ಳಲಾರಂಭಿಸಿದ್ದರು. ಈ ರಂಗದಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸುತ್ತಿದ್ದ ಅವರಿಗೆ ವಸಿಷ್ಟ ನಾಯಕನಾಗಿ ಎಂಟ್ರಿ ಕೊಡೋ ಅವಕಾಶ ಕೊಟ್ಟಿದ್ದರು. ಒಂದೊಳ್ಳೆ ಕಥೆ, ಹೊಸ ಬಗೆಯ ನಿರೂಪಣೆ ಹೊಂದಿರೋ ಚಿತ್ರದ ಮೂಲಕ ಲಾಂಚ್ ಆಗುತ್ತಿರೋ ಖುಷಿ ಸಂತೋಷ್ ಅವರಲ್ಲಿದೆ. ಈಗಾಗಲೇ ಟ್ರೈಲರ್ ಮೂಲಕ ಸಂತೋಷ್ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ.

  • ಎಂಟಿಬಿ ಹಿಂದೆ ಬಿಎಸ್‍ವೈ ಆಪ್ತ ಸಂತೋಷ್- ಬಿಜೆಪಿಯ 3ನೇ ಆಪರೇಷನ್ ಸಕ್ಸಸ್

    ಎಂಟಿಬಿ ಹಿಂದೆ ಬಿಎಸ್‍ವೈ ಆಪ್ತ ಸಂತೋಷ್- ಬಿಜೆಪಿಯ 3ನೇ ಆಪರೇಷನ್ ಸಕ್ಸಸ್

    ಬೆಂಗಳೂರು: ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜಗ್ಗದ ಅತೃಪ್ತ ಶಾಸಕ ಎಂ.ಟಿ.ಬಿ ನಾಗರಾಜ್ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಎಂಟಿಬಿ ನಾಗರಾಜ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಕೂಡ ಕಾಣಿಸಿಕೊಂಡಿದ್ದಾರೆ.

    ಎಂಟಿಬಿ ನಾಗರಾಜ್ ಬೆಂಗಳೂರಿನಿಂದ ವಿಶೇಷ ವಿಮಾನವನ್ನು ಏರಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಅವರನ್ನು ವಿಮಾನ ಹತ್ತಿಸುವವರೆಗೂ ಅವರ ಹಿಂದೆ ಸಂತೋಷ್ ಜೊತೆಯಲ್ಲೇ ಇದ್ದರು. ಈ ಮೂಲಕ ಬಿಎಸ್‍ವೈ ಆಪ್ತ ಸಂತೋಷ್‍ನ ಮೂರನೇ ಆಪರೇಷನ್ ಇದಾಗಿದೆ. ಇದನ್ನೂ ಓದಿ: ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್

    ಈ ಹಿಂದೆ ಪಕ್ಷೇತರರಾದ ಶಂಕರ್ ಮತ್ತು ನಾಗೇಶ್ ಅವರನ್ನು ಹೈಜಾಕ್ ಮಾಡಿ ಮುಂಬೈಗೆ ಕಳುಹಿಸಿ ಯಶಸ್ವಿಯಾಗಿದ್ದರು. ಇದೀಗ ಎಂಟಿಬಿ ನಾಗರಾಜ್ ಅವರನ್ನು ವಿಮಾನ ಹತ್ತಿಸಿ ಮುಂಬೈಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅವರು ಮಾತ್ರ ರಹಸ್ಯವಾಗಿ ತಮ್ಮ ಪ್ಲಾನ್ ಮಾಡುತ್ತಿದ್ದಾರೆ. ಎಂಟಿಬಿ ನಾಗರಾಜ್ ಜೊತೆ ಆರ್.ಅಶೋಕ್ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

    ಶನಿವಾರಷ್ಟೆ ಮಧ್ಯರಾತ್ರಿ 1 ಗಂಟೆ ಸುಮಾರಿನಿಂದ ಮಧ್ಯಾಹ್ನದವರೆಗೂ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಎಂಟಿಬಿ ಅವರ ಮನವೊಲಿಕೆ ಮಾಡಲು ಪ್ರಯತ್ನ ಮಾಡಿದ್ದರು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಎಂಬಂತೆ ರಾಜೀನಾಮೆ ವಾಪಸ್ ಪಡೆಯಲು ಕಾಲಾವಕಾಶ ಕೇಳಿದ್ದರು. ಬಳಿಕ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಬಿಡಲಾಗಿತ್ತು. ಅಲ್ಲಿ ಕೂಡ ಸಿದ್ದರಾಮಯ್ಯ ಎಂಟಿಬಿ ನಾಗರಾಜ್ ಮನವೊಲಿಕೆ ಮಾಡಿದ್ದರು.

    ಸಂಜೆ ಮಾಧ್ಯಮಗಳ ಮುಂದೆ ಮಾತನಾಡುವಾಗ ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯ ಹೋದ ತಕ್ಷಣ ರಾಜೀನಾಮೆ ಪಡೆಯಲು ಸಮಯ ಕೇಳಿದ್ದೇನೆ ಎಂದಿದ್ದರು. ಜೊತೆಗೆ ನಾನು ಮುಂಬೈಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಇದೀಗ ಅವರು ಮುಂಬೈಗೆ ತೆರಳಿದ್ದು, ಈ ಮೂಲಕ ಸುಧಾಕರ್ ಮನವೊಲಿಕೆಯ ನೆಪದಲ್ಲಿ ಅತೃಪ್ತರ ಬಣವನ್ನು ಸೇರುತ್ತಾರ ಎಂಬ ಪ್ರಶ್ನೆ ಮೂಡಿದೆ. ಇತ್ತ ಸುಧಾಕರ್ ಅವರು ಶನಿವಾರವೇ ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

  • ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್

    ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್

    ಬೆಂಗಳೂರು: ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಯಡಿಯೂರಪ್ಪ ಆಪ್ತ ಸಂತೋಷ್ ಒಂದೇ ದಿನದಲ್ಲಿ ಎರಡು ಉಡುಪಿನಲ್ಲಿ ಕಾಣಿಸಿಕೊಂಡು ಟ್ರಬಲ್ ಶೂಟರ್ ಡಿಕೆಶಿಗೆ ಚಮಕ್ ಕೊಟ್ಟಿದ್ದಾರೆ.

    ಇಂದು ಮಧ್ಯಾಹ್ನ ಮುಳುಬಾಗಿಲಿನ ಪಕ್ಷೇತರ ಶಾಸಕ ನಾಗೇಶ್ ಅವರನ್ನು ಸಂತೋಷ್ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಂಬೈಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

    ಈ ವೇಳೆ ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದ್ದರು. ಸಂತೋಷ್ ಜೊತೆ ನಾಗೇಶ್ ತೆರಳಿ ವಿಮಾನ ಹತ್ತುತ್ತಿದ್ದ ಫೋಟೋ ಪಬ್ಲಿಕ್ ಟಿವಿಗೆ ಸಿಕ್ಕಿತ್ತು. ಈ ವೇಳೆ ಸಂತೋಷ್ ನೀಲಿ ಬಣ್ಣದ ಶರ್ಟ್ ಧರಿಸಿದ್ದರು.

    ಸಂಜೆ ಪಕ್ಷೇತರ ಶಾಸಕ ಶಂಕರ್ ಪೌರಾಡಳಿತ ಖಾತೆಗೆ ರಾಜೀನಾಮೆ ನೀಡಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಶಂಕರ್ ಅವರನ್ನು ಮುಂಬೈಗೆ ಕಳುಹಿಸಲು ಸಂತೋಷ್ ಸಿದ್ದರಾಗಿದ್ದರು. ಶಂಕರ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಆಪರೇಷನ್ ಕಮಲವನ್ನು ವಿಫಲಗೊಳಿಸಲು ಡಿಕೆಶಿ ವಿಮಾನ ನಿಲ್ದಾಣ ಪ್ರವೇಶಿಸಿದ್ದಾರೆ.

    ದೆಹಲಿಗೆ ತೆರಳಲು ಡಿಕೆಶಿ ಬಂದಾಗ ಸಂತೋಷ್ ಮುಖಾಮುಖಿಯಾಗಿದ್ದಾರೆ. ನಿಲ್ದಾಣದ ಒಳಗಡೆ ಅಲ್ಲಿದ್ದ ಸಾರ್ವಜನಿಕರ ಮುಂದೆಯೇ ಶಿವಕುಮಾರ್ ಮತ್ತು ಸಂತೋಷ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ನೀನು ಇನ್ನೂ ಬಚ್ಚಾ, ಎಳಸು ಎಂದು ಡಿ.ಕೆ.ಶಿವಕುಮಾರ್ ಅವಾಜ್ ಹಾಕಿದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಸಂತೋಷ್, ಮಾಧ್ಯಮಗಳನ್ನು ಕಂಡ ಕೂಡಲೇ ಓಡೋಡಿ ಹೋಗಿ ಕಾರು ಹತ್ತಿಕೊಂಡಿದ್ದಾರೆ. ಶಿವಕುಮಾರ್ ಅವರ ಪ್ರವೇಶಿಸುವ ಅಷ್ಟರಲ್ಲಿಯೇ ಆರ್.ಶಂಕರ್ ಅವರನ್ನು ಮುಂಬೈನತ್ತ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ.

    ಮಧ್ಯಾಹ್ನ ನಾಗೇಶ್ ಅವರನ್ನು ಕಳುಹಿಸಿದ್ದ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸಂತೋಷ್ ಬಿಳಿ ಬಣ್ಣದ ಶರ್ಟ್ ಧರಿಸಿ ಶಂಕರ್ ಅವರಿಗಾಗಿ ಕಾಯುತ್ತಿದ್ದರು. ಸಂಜೆ ಡ್ರೆಸ್ ಬದಲಿಸಿದ್ದರೂ ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ಸಂತೋಷ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

  • Exclusive: ವಿಮಾನ ನಿಲ್ದಾಣದಲ್ಲಿ ಡಿಕೆಶಿ, ಬಿಎಸ್‍ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ

    Exclusive: ವಿಮಾನ ನಿಲ್ದಾಣದಲ್ಲಿ ಡಿಕೆಶಿ, ಬಿಎಸ್‍ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ

    – ಮಾಧ್ಯಮದವರನ್ನ ಕಂಡು ಓಡೋಡಿ ಹೋದ ಸಂತೋಷ್
    – ನೀನು ಎಳಸು, ಬಚ್ಚಾ ಎಂದ ಡಿಕೆಶಿ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಮತ್ತು ಬಿಎಸ್‍ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ ನಡೆದಿದೆ.

    ಪಕ್ಷೇತರ ಶಾಸಕ ಆರ್.ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಲು ಪ್ರಯತ್ನಿಸಿದ್ದರು. ಆರ್.ಶಂಕರ್ ಬೆನ್ನತ್ತಿದ್ದ ಸಚಿವ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣ ಪ್ರವೇಶಿಸಿದ್ದರು. ಆರ್.ಶಂಕರ್ ಅವರನ್ನು ವಿಮಾನ ನಿಲ್ದಾಣದಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಆಪ್ತ ಸಂತೋಷ್ ಮುಂಬೈಗೆ ಕಳುಹಿಸಲು ಸಿದ್ಧಗೊಂಡಿದ್ದರು.

    ಈ ವೇಳೆ ಡಿ.ಕೆ.ಶಿವಕುಮಾರ್ ಮತ್ತು ಸಂತೋಷ್ ಮುಖಾಮುಖಿಯಾಗಿದ್ದಾರೆ. ನಿಲ್ದಾಣದ ಒಳಗಡೆ ಅಲ್ಲಿದ್ದ ಸಾರ್ವಜನಿಕರ ಮುಂದೆಯೇ ಶಿವಕುಮಾರ್ ಮತ್ತು ಸಂತೋಷ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ನೀನು ಇನ್ನೂ ಬಚ್ಚಾ, ಎಳಸು ಎಂದು ಡಿ.ಕೆ.ಶಿವಕುಮಾರ್ ಅವಾಜ್ ಹಾಕಿದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಸಂತೋಷ್, ಮಾಧ್ಯಮಗಳನ್ನು ಕಂಡ ಕೂಡಲೇ ಓಡೋಡಿ ಹೋಗಿ ಕಾರು ಹತ್ತಿಕೊಂಡಿದ್ದಾರೆ. ಶಿವಕುಮಾರ್ ಅವರ ಪ್ರವೇಶಿಸುವ ಅಷ್ಟರಲ್ಲಿಯೇ ಆರ್.ಶಂಕರ್ ಅವರನ್ನು ಮುಂಬೈನತ್ತ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ.

    ಇಂದು ಬೆಳಗ್ಗೆಯೂ ನಾಗೇಶ್ ಅವರಿಗಾಗಿ ವಿಶೇಷ ವಿಮಾನ ಸಿದ್ಧಪಡಿಸಿಕೊಂಡು ಯಡಿಯೂರಪ್ಪ ಆಪ್ತ ಸಂತೋಷ್ ನಿಂತಿದ್ದರು. ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದ ವೇಳೆ ಯಡಿಯೂರಪ್ಪ ಬೆಂಬಲಿಗರು ಅಡ್ಡಿಪಡಿಸಿದ್ದರು. ಈ ವೇಳೆ ಇಬ್ಬರು ನಾಯಕರ ಆಪ್ತರ ನಡುವೆ ಗಲಾಟೆ ನಡೆದಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದ್ದರು.