Tag: Santhosh Patil

  • ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

    ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

    – ಅಮಿತ್ ಶಾ ನಿವಾಸದ ಬಳಿ ಪ್ರತಿಭಟನೆಗೆ ಪ್ಲ್ಯಾನ್

    ಬೆಂಗಳೂರು: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬಿದ್ದಿವೆ. ಕಮಿಷನ್ ಆರೋಪ, ಗುತ್ತಿಗೆದಾರರ ಸಾವು ಇಟ್ಟುಕೊಂಡು, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಇವತ್ತು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

    ಗುತ್ತೆಗೆದಾರ ಸಂತೋಷ್ ಡೆತ್‍ನೋಟ್‍ನಲ್ಲಿ ಈಶ್ವರಪ್ಪ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ, ಬೆಳಗ್ಗೆ 9 ಗಂಟೆಗೆ ರಾಜಭವನಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಲಿದ್ದಾರೆ.

    ಈಶ್ವರಪ್ಪ ತಲೆದಂಡ ಹಾಗೂ ಬಂಧನಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿನ ಈಶ್ವರಪ್ಪ ನಿವಾಸ ಹಾಗೂ ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‍ಗೂ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ರು. ಇಂದು ಕೂಡ ರಾಜ್ಯಾದ್ಯಂತ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಇದನ್ನೂ ಓದಿ: ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ: ಸಂತೋಷ್ ಪತ್ನಿ ಕಣ್ಣೀರು

    ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಬಿಜೆಪಿಯ 40% ಕಮಿಷನ್ ಸರ್ಕಾರ ತಮ್ಮದೇ ಕಾರ್ಯಕರ್ತನನ್ನು ಬಲಿ ಪಡೆದಿದೆ. ಸಂತ್ರಸ್ತ ಪ್ರಧಾನಿಗೆ ಸಲ್ಲಿಸಿದ ಮನವಿಗೆ ಉತ್ತರ ಸಿಕ್ಕಿಲ್ಲ. “ಬಿಜೆಪಿ ಕರಪ್ಷನ್ ಫೈಲ್ಸ್” ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಂತೋಷ್ ಪ್ರಕರಣ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆಯಾಗುತ್ತಿದೆ: ಆರಗ ಜ್ಞಾನೇಂದ್ರ

    ಇಂದು ದೆಹಲಿಯಲ್ಲಿ ಯೂಥ್ ಕಾಂಗ್ರೆಸ್, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ, ಗೃಹ ಸಚಿವ ಅಮಿತ್ ನಿವಾಸದ ಮುಂದೆ ಪ್ರತಿಭಟನೆಗೆ ನಿರ್ಧರಿಸಿದೆ. ಇದಷ್ಟೇ ಅಲ್ಲ, ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಸೇರಿದಂತೆ ಹಲವು ಬಿಜೆಪಿ ನಾಯಕರ ಮನೆ ಮುಂದೆ ಪ್ರತಿಭಟನೆ ನಡೆಸಲು ಪ್ಲ್ಯಾನ್ ಮಾಡಿದೆ. ಒಟ್ಟಾರೆ ಧರ್ಮ ಸಂಕಟದಲ್ಲಿ ಸಿಲುಕಿದ್ದ ಕಾಂಗ್ರೆಸ್‍ಗೆ, ಇದೀಗ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದು, ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ.

  • ಸಾರ್ವಜನಿಕರಿಗೆ ಸಂಶಯ ಬಾರದಂತೆ ಬೇಗ ಒಂದು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು: ವಿಶ್ವನಾಥ್

    ಸಾರ್ವಜನಿಕರಿಗೆ ಸಂಶಯ ಬಾರದಂತೆ ಬೇಗ ಒಂದು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು: ವಿಶ್ವನಾಥ್

    ಬೆಂಗಳೂರು: ಸಾರ್ವಜನಿಕರಿಗೆ ಸಂಶಯ ಬಾರದಂತೆ ಬೇಗ ಒಂದು ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಸಂತೋಷ್ ಆತ್ಮಹತ್ಯೆ ಹಿನ್ನೆಲೆ ಬೇರೆ ಬೇರೆ ಇದೆ ಎನ್ನಲಾಗುತ್ತಿದೆ. ಸರ್ಕಾರ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕು. ಸತ್ಯಾಸತ್ಯತೆ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ, ಸಂತೋಷ್ ತಪ್ಪು ಮಾಡಿರೋದು : ಈಶ್ವರಪ್ಪ

    ಈಶ್ವರಪ್ಪ ರಾಜೀನಾಮೆ ಅಮೇಲೆ, ಮೊದಲು ತನಿಖೆ ಆಗಲಿ. ಆಡಳಿತ ಇದ್ದಾಗ ಒಂಥರಾ ಮಾತಾಡ್ತೀವಿ, ವಿರೋಧ ಪಕ್ಷದಲ್ಲಿ ಇದ್ದಾಗ ಬೇರೆ ತರಹ ಮಾತಾಡ್ತೀವಿ. ಸಾರ್ವಜನಿಕರಿಗೆ ಸಂಶಯ ಬಾರದ ಹಾಗೇ ಬೇಗ ಒಂದು ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

    ಯಾವುದೇ ಮಂತ್ರಿ ನೈತಿಕತೆ ಬಂದಾಗ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಅದು ಅವರ ನೈತಿಕ ಹೊಣೆಗಾರಿಕೆ ಪ್ರಶ್ನೆ. ನಾವು ಫೋರ್ಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲಿದೆ ನೈತಿಕತೆ, ಮೂರು ಪಾರ್ಟಿ ಅಲ್ಲಿಗೇ ಬಂದು ನಿಂತಿವೆ. 10% ನವರು ಈಗ ಯಾಕೆ 40% ತಗೋತಾರೆ ಅಂತಾ ಕೇಳುತ್ತಾರೆ. 40% ತಗೊಂಡವರು ನೀವು ತಗೊಂಡಿಲ್ಲವಾ ಅಂತಾರೆ. ಏನ್ ವಿಪರ್ಯಾಸ ಎಂದು ನಕ್ಕು ವಿಶ್ವನಾಥ್ ಅಲ್ಲಿಂದ ಹೊರಟರು.

  • ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಡೆತ್ ಮೆಸೇಜ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಿರುವುದರಿಂದ ಅವರನ್ನ ವಜಾ ಮಾಡಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರಿಂದ ನೇಮಿಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ನಾತನಾಡಿದ ಅವರು, ಗುತ್ತಿಗೆದಾರರು ಈ ಮುಂಚೆ ಸರ್ಕಾರ 40% ಕಮಿಷನ್ ಬೇಡಿಕೆ ಇಟ್ಟಿದೆ. ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಆದರೂ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ದಾಖಲೆ ಕೇಳುತ್ತಿದೆ. ಈಗ ಒಂದು ಜೀವ ಹೋಗಿದೆ ಇದಕ್ಕಿಂತ ಪ್ರೂಫ್ ಬೇಕಾ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಬೊಮ್ಮಾಯಿ

    40% ಪರ್ಸೆಂಟ್ ಕಮಿಷನ್ ಬಗ್ಗೆ ಈ ಹಿಂದೆ ಅನೇಕ ಬಾರಿ ಸಂತೋಷ್ ಹೇಳಿದ್ದರು. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾ ಖಾವುಂಗ..ಖಾನೇ ದೂಂಗಾ ಎಂದು ಪ್ರಧಾನಿ ಹೇಳಿದ್ದರು. ಆದರೆ ಸರ್ಕಾರದಲ್ಲಿ ಎಲ್ಲವೂ ನಡೆಯುತ್ತಿದೆ. ಈ ವಿಷಯವನ್ನು ಬೆಳಗಾವಿ-ಬೆಂಗಳೂರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆವು. ಆದರೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ದುರ್ದೈವವೆಂದರೆ ಚರ್ಚೆ ಮಾಡಲು ನಿಮ್ಮಹತ್ರ ಪ್ರೂಫ್ ಇದೆಯಾ ಅಂತಾ ಕೇಳಿದ್ದರು ಎಂದು ನೆನಪಿಸಿಕೊಂಡರು.

    ಸಿಎಂ ಬಸವರಾಜ ಬೊಮ್ಮಾಯಿ ಆರ್‍ಎಸ್‍ಎಸ್ ಕೈಗೊಂಬೆಯಾಗಿದ್ದು ಅಸಹಾಯಕರಾಗಿದ್ದಾರೆ. ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ಕ್ರಮ ತೆಗೆದುಕೊಳ್ಳದ ಸಿಎಂ, ಓರ್ವ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರಾ? ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನರ ಹಿತ ಬಲಿ ಕೊಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರಾಜ್ಯದಲ್ಲಿ ಡಿಜಿಪಿ ಬದುಕಿದ್ದರೆ, ಕ್ರಮ ಕೈಗೊಳ್ಳಬೇಕು: ಡಿಕೆಶಿ

    ಸಂತೋಷ್ ಪಾಟೀಲ್ ಡೆತ್ ಮೆಸೇಜ್ ನಲ್ಲಿ ತಮ್ಮ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಆತ್ಮಹತ್ಯೆಗೆ ಪ್ರೇರಣೆ ಎಂದು ಕೇಸು ದಾಖಲಿಸಬೇಕು. ಜೊತೆಗೆ ನ್ಯಾಯಾಧೀಶರಿಂದ ಸಮಗ್ರ ತನಿಖೆವಾಗುವರೆಗೆ ಈಶ್ವರಪ್ಪನವರನ್ನ ವಜಾಗೊಳಿಸಬೇಕು ಎಂದು ಪುನರುಚ್ಛರಿಸಿದರು.

  • ರಾಜ್ಯದಲ್ಲಿ ಡಿಜಿಪಿ ಬದುಕಿದ್ದರೆ, ಕ್ರಮ ಕೈಗೊಳ್ಳಬೇಕು: ಡಿಕೆಶಿ

    ರಾಜ್ಯದಲ್ಲಿ ಡಿಜಿಪಿ ಬದುಕಿದ್ದರೆ, ಕ್ರಮ ಕೈಗೊಳ್ಳಬೇಕು: ಡಿಕೆಶಿ

    ಬೆಂಗಳೂರು: ಈ ರಾಜ್ಯದಲ್ಲಿ ಡಿಜಿಪಿ ಬದುಕಿದ್ದಾರೆ ಅಂದರೆ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

    Eshwarappa

    ನಗರದ ಕೆಪಿಸಿಸಿ ಕಛೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು, ಮುಖ್ಯಮಂತ್ರಿ ಏನೂ ಮಾಡಲ್ಲ. ಈ ರಾಜ್ಯದಲ್ಲಿ ಡಿಜಿಪಿ ಬದುಕಿದ್ದಾರೆ ಅಂದರೆ ಕ್ರಮ ಕೈಗೊಳ್ಳಬೇಕು. ಅವರು ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಸತ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ಮೊದಲು ಎಫ್‍ಐಆರ್ ದಾಖಲಿಸಬೇಕು. ಎಫ್‍ಐಆರ್ ಆಧಾರದ ಮೇಲೆ ತನಿಖೆ ಕೈಗೊಳ್ಳಬೇಕು. ಡೆತ್ ನೋಟ್ ಬಂದಾಗ ಎಫ್‍ಐಆರ್ ದಾಖಲಿಸುತ್ತಾರೆ. ಇಂತಹ ಕೇಸ್ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ಪೊಲೀಸರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸರ್ಕಾರ ಬೇರೆ, ತನಿಖೆ ಮಾಡುವವರು ಬೇರೆ. ಅನೇಕ ಕೇಸ್‍ಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಿದೆ. ಮಧ್ಯಪ್ರವೇಶ ಮಾಡಿ ಅವರನ್ನು ರಕ್ಷಿಸಿದೆ. ಮಂತ್ರಿಗಳ ಕೇಸ್‍ನಲ್ಲಿ ಅವರನ್ನು ರಕ್ಷಣೆ ಮಾಡಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

    ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ಇಂದು ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ  ಬೊಮ್ಮಾಯಿ

    ವಾಟ್ಸಾಪ್ ಸಂದೇಶದಲ್ಲಿ ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ. ಕರ್ನಾಟಕ ಸರ್ಕಾರದಿಂದ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.