Tag: Sante

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಬೆಳಗಾವಿ(ಚಿಕ್ಕೋಡಿ): ಕೊರೊನಾ ವೈರಸ್ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಗೂ ಕೊರೊನಾ ಬಿಸಿ ತಟ್ಟಿದೆ.

    ಚಿಂಚಲಿಯ ಮಾಯಕ್ಕಾದೇವಿಯ ದರ್ಶನವನ್ನು ಇಂದಿನಿಂದ ಮಾರ್ಚ್ 31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು ಬಂದ್ ಮಾಡಿದೆ. ಮಾಯಕ್ಕಾದೇವಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾದ್ಯ ದೇವತೆಯಾಗಿದ್ದು, ದೇವಿಯ ದರ್ಶನ ಪಡೆಯಲು ದಿನನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತಿದ್ದರು.

    ಕೊರೊನಾ ಭೀತಿಯಿಂದ ಮಾರ್ಚ 31ರವರೆಗೆ ಮಾಯಕ್ಕಾದೇವಿ ದರ್ಶನಕ್ಕೆ ಬಾರದಂತೆ ಭಕ್ತರಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ. ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಇಂದು ದರ್ಶನ ಬಂದ್ ಮಾಡಿದ ಹಿನ್ನೆಲೆ ಭಕ್ತರಿಲ್ಲದೆ ಬಣಗುಡುತ್ತಿದೆ.

    ಇತ್ತ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರದ ಸಂತೆಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ರದ್ದು ಮಾಡಿದ್ದಾರೆ. ಸಂತೆ ನಡೆಸಬಾರದೆಂಬ ಆದೇಶವನ್ನು ಲೆಕ್ಕಸದೆ ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸಂತೆಯನ್ನ ಬಂದ್ ಮಾಡಿಸಿದ್ದಾರೆ. ಜನ ಸಂತೆಗೆ ಬರುತ್ತಾರೆ ಎಂದು ವ್ಯಾಪಾರಸ್ಥರು ತರಕಾರಿ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಮಾರಾಟಕ್ಕೆ ತಂದಿದ್ದರು. ಆದರೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸಂತೆಯನ್ನ ತೆರವುಗೊಳಿಸಲಾಯಿತು.

  • ಕುರಿ ಸಂತೆಯಲ್ಲಿ ಕಲ್ಲು ತೂರಾಟ-ರಸ್ತೆ ಬಿಡಿ ಎಂದಿದ್ದಕ್ಕೆ ಹಲ್ಲೆ

    ಕುರಿ ಸಂತೆಯಲ್ಲಿ ಕಲ್ಲು ತೂರಾಟ-ರಸ್ತೆ ಬಿಡಿ ಎಂದಿದ್ದಕ್ಕೆ ಹಲ್ಲೆ

    ಬಾಗಲಕೋಟೆ: ಕುರಿ ಸಂತೆಯಲ್ಲಿ ರಸ್ತೆ ಬಿಡಿ ಎಂದು ಕೇಳಿದ್ದಕ್ಕೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದಲ್ಲಿ ನಡೆದಿದೆ.

    ಶನಿವಾರ ಈ ಗಲಾಟೆ ನಡೆದಿದ್ದು, ಮಹಾಂತೇಶ್ ಬಾರಡ್ಡಿ ಎಂಬವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ಸದ್ಯ ಮಹಾಂತೇಶ್, ಬಾಗಲಕೋಟೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಂತೇಶ್ ಜೊತೆಯಲ್ಲಿದ್ದ ಸಂಗಪ್ಪ ಹೂಗಾರ, ಸಂಜೀವ್ ಬೇವೂರ ಎಂಬವರಿಗೂ ಸಹ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

    ಪ್ರತಿ ಶನಿವಾರ ಅಮಿನಗಡ ಪಟ್ಟಣದಲ್ಲಿ ಕುರಿ ಸಂತೆ ನಡೆಯುತ್ತದೆ ಅದಕ್ಕಾಗಿ ನಿಗದಿತ ಜಾಗವಿದ್ದರೂ, ಮುಖ್ಯರಸ್ತೆಯಲ್ಲೇ ಕುರಿ ವಹಿವಾಟು ನಡೆಸಲಾಗುತ್ತದೆ. ನಿನ್ನೆಯೂ ಹೀಗೆ ರಸ್ತೆಯ ಮೇಲೆ ಕುರಿ ವ್ಯಾಪಾರ ಜೋರಾಗಿತ್ತು, ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಇದೇ ವೇಳೆ ಅಲ್ಲಿಗೆ ಕಾರ್ ನೊಂದಿಗೆ ಆಗಮಿಸಿದ್ದ ಮಹಾಂತೇಶ್, ರಸ್ತೆ ಬಿಡಿ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕುರಿ ವಹಿವಾಟು ನಡೆಸುವವರ ಪೈಕಿ ಕೆಲ ದುಷ್ಕರ್ಮಿಗಳು ಮಹಾಂತೇಶ್ ಸೇರಿದಂತೆ ಮೂವರ ಹಲ್ಲೆ ನಡೆಸಿದ್ದಾರೆ.

    ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಮಹಾಂತೇಶ್ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿ ತಲುಪುವಂತಾಗಿದೆ. ನೆಲಕ್ಕೆ ಬೀಳಿಸಿ 8-10 ಜನ ಸೇರಿ ಹೊಡೆಯುವ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯ ಅದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದಲ್ಲದೇ ಅಲ್ಲಿದ್ದ ಮೂರ್ನಾಲ್ಕು ವಾಹನಗಳ ಗಾಜುಗಳ ಮೇಲೆ ಈ ದುಷ್ಕರ್ಮಿಗಳ ಗುಂಪು ಕಲ್ಲು ತೂರಿದ್ದಾರೆ. ಅಮಿನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ಬಾರಿ ವೈರಲ್ ಆಗಿದೆ. ವಿಷಯ ತಿಳಿದ ಡಿವೈಎಸ್.ಪಿ ನಂದರಡ್ಡಿ ದೂರು ದಾಖಲಿಸಿಕೊಂಡು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೊವ ಭರವಸೆ ನೀಡಿದ್ದಾರೆ.

  • ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆ: ಮಳೆಗಾಗಿ ದೇವರ ಮೊರೆ ಹೋಗುವುದು ಹಾಗೂ ಹೋಮ ಹವನಗಳನ್ನು ಮಾಡುವುದನ್ನು ಕೇಳಿದ್ದೇವೆ ಆದರೆ, ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ವಿಶಿಷ್ಟವಾಗಿ ದೇವರ ಸಂತೆಯನ್ನು ಮಾಡುವ ಮೂಲಕ ಉತ್ತಮ ಮಳೆಯಾಗಲೆಂದು ಬೇಡಿಕೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಗುತ್ತಿದೆ. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಸಂತೆ ನಡೆಸಲಾಯಿತು.

    ಮೂರು ವಾರ ದೇವಸ್ಥಾನದ ಮುಂಭಾಗ ಸಂತೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದರೆ ಫಸಲು ಕೈ ಸೇರುತ್ತದೆ. ಹೀಗಾಗಿ ಮಳೆ ಕರುಣಿಸುವಂತೆ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡುವ ಮೂಲಕ ಬೇಡಿಕೊಳ್ಳುತ್ತಿದ್ದಾರೆ.

    ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಈ ವಾರದಿಂದ ಮೂರು ವಾರಗಳ ಕಾಲ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗ ಸಂತೆ ನಡೆಸಿದರೆ, ಮಳೆಯಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಇರುವ ನಂಬಿಕೆ. ಹೀಗಾಗಿ ಜನ ಸಂತೆಯನ್ನೂ ಮಾಡಿ ನೋಡಿಯೇ ಬಿಡೋಣ ಮಳೆ ಬರಬಹುದು ಎಂದು ನಿರ್ಧರಿಸಿದ್ದಾರೆ.