Tag: Sankeshwar

  • ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್‌ ಕತ್ತಿ ರಾಜೀನಾಮೆ

    ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್‌ ಕತ್ತಿ ರಾಜೀನಾಮೆ

    – 30 ವರ್ಷದ ಬಳಿಕ ಕತ್ತಿ ಕುಟುಂಬವನ್ನು ಕೈ ಬಿಟ್ಟ ಕಾರ್ಖಾನೆ

    ಬೆಳಗಾವಿ: ದಿಢೀರ್‌ ಬೆಳವಣಿಗೆಯಲ್ಲಿ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ (Hiranyakeshi Sakkare Karkhane) ಅಧ್ಯಕ್ಷ ಸ್ಥಾನಕ್ಕೆ ಹುಕ್ಕೇರಿ ಶಾಸಕ ನಿಖಿಲ್‌ ಕತ್ತಿ (Nikhil Katti) ರಾಜೀನಾಮೆ ನೀಡಿದ್ದಾರೆ.

    ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್ ನೀಡುವ ನಿರ್ಧಾರಕ್ಕೆ ಆಡಳಿತ ಮಂಡಳಿಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್‌ ಕತ್ತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಕಳೆದ ಸೆಪ್ಟೆಂಬರ್‌ನಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಲೀಸ್‌ ಆಧಾರದಲ್ಲಿ ಖಾಸಗಿಯವರಿಗೆ ನಡೆಸಲು ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಧಾರಕ್ಕೆ ಹೆಚ್ಚಿನ ಸಂಖ್ಯೆಯ ಆಡಳಿತ ಮಂಡಳಿ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಲೀಸ್‌ ನೀಡುವ ಬಗ್ಗೆ ಸಾರ್ವಜನಿಕವಾಗಿ ಹಲವಾರು ಚರ್ಚೆಗಳು ನಡೆದಿದ್ದವು. ರೈತರು ಕಟ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್ ನೀಡಬೇಡಿ ಎಂದು ಆಡಳಿತ ಮಂಡಳಿಯ ಸದಸ್ಯರು ಒತ್ತಾಯಿಸಿದ್ದರು.

    ಇಷ್ಟು ದಿನಗಳ ಕಾಲ ಕತ್ತಿ ಕುಟುಂಬದಲ್ಲಿ ಹಿಡಿತದಲ್ಲಿದ್ದ ಅಧಿಕಾರದ ಚುಕ್ಕಾಣಿಯನ್ನು ಆಡಳಿತ ಮಂಡಳಿಯವರು ಸದ್ಯ ಟೇಕ್ ಓವರ್ ಮಾಡಿದ್ದು ಸಕ್ಕರೆ ಕಾರ್ಖಾನೆಯಲ್ಲಿನ ದುಂದು ವೆಚ್ಚಗಳ ಕಡಿವಾಣ ಸೇರಿದಂತೆ ಅನವಶ್ಯಕ ಕೆಲಸಗಳಿಗೆ ಬ್ರೇಕ್ ಹಾಕಿ ವ್ಯವಸ್ಥಿತವಾಗಿ ಕಾರ್ಖಾನೆ ನಡೆಸಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ

    ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕಾರ್ಖಾನೆ ನಡೆಸಲು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯರೆಲ್ಲರೂ ನಿಖಿಲ್‌ ಕತ್ತಿ ಅವರಿಗೆ ಚುನಾವಣಾ ಸಂದರ್ಭದಲ್ಲಿ ಬೆಂಬಲ‌ ಕೊಡಲು ತೀರ್ಮಾನಿಸಿದ್ದಾರೆ.

    ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮುಂದಿನ ಅಧ್ಯಕ್ಷರಾಗಿ ಮುಖಂಡ ಹುಕ್ಕೇರಿ ಪಟ್ಟಣದ ಅಶೋಕ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ನೊಗನಿಹಾಳ ಗ್ರಾಮದ ಅಜ್ಜಪ್ಪ ಕಲ್ಲಟ್ಟಿ ಆಯ್ಕೆಯಾಗುವ ಕುರಿತು ಚರ್ಚೆ ನಡೆಯುತ್ತಿದೆ.

     

  • ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಚಿಕ್ಕೋಡಿ: ಮಾಜಿ ಸಚಿವ ಹಾಗೂ ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ. ಮಲ್ದಾರಿಗೌಡ ಪಾಟೀಲ್ ಇವರ ಸ್ಮರಣಾರ್ಥ ಜ.11ರಂದು ಸಂಕೇಶ್ವರ (Sankeshwar) ಪಟ್ಟಣದ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಕುಣಾಲ್ ಪಾಟೀಲ್ ತಿಳಿಸಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಶಾಸಕರಾಗಿ, ನೀರಾವರಿ ಸಚಿವರಾಗಿ ಈ ಭಾಗದ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿ, ಗಡಿ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಮಲ್ದಾರಿಗೌಡ ಪಾಟೀಲ್‌ರ ಸೇವೆ ಸ್ಮರಣೀಯವಾಗಿದ್ದು, ಅವರ ಸೇವಾ ಕೈಂಕರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಹಾಗೂ ಗಡಿ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಧಾರವಾಡದ ಕರಾವಳಿ ಟೀಚರ್ಸ್ ಹೆಲ್ಸ್ಲೈನ್‌ನವರ ಸಹಯೋಗದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜಾಬ್ ಜಂಕ್ಷನ್, ಯುಥ್, ಅಪ್ಟಿಮಂ, ಮ್ಯಾನ್ ಪವರ್ ಸಂಸ್ಥೆಗಳು ಭಾಗವಹಿಸಲಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಎನ್ ಟಿಸಿ, ಡಿಇಡಿ, ಬಿಇಡಿ, ಬಿಪಿಇಡಿ, ಎಂ.ಕಾಂ, ಬಿಎ, ಬಿಎಸ್ಸಿ, ಎಂಎಸ್ಸಿ , ಎಂಕಾಂ, ಎಂಎಸ್ಸಿ, ಬಿಬಿಎ, ಬಿಸಿಎ, ಐಟಿಐ, ಫಾರ್ಮಸಿ, ಬಿಇ, ಎಂಟೆಕ್, ಎಂಎಸ್‌ಡಬ್ಲ್ಯೂ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.‌

    ಹೆಚ್ಚಿನ ಮಾಹಿತಿಗೆ ಮತ್ತು ಹೆಸರು ನೋಂದಾಯಿಸಲು . 9743218480, 483585840, 8762903585, 9980116526 ಸಂಪರ್ಕಿಸಬಹುದು.

  • ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡ ಪೊಲೀಸರು

    ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡ ಪೊಲೀಸರು

    ಬೆಳಗಾವಿ: ಸಾಮಾನ್ಯವಾಗಿ ಪೊಲೀಸರು ಎಂದರೇ ಬೈಯುವರೇ ಹೆಚ್ಚು, ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸರು ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡಿದ್ದಾರೆ.

    ಸಂಕೇಶ್ವರ-ವಿಜಯಪುರ ರಾಜ್ಯ ಹೆದ್ದಾರಿಯ ಕರಿ ಮಸೂತಿ ಸಮೀಪದಲ್ಲಿ ಕಾರು ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅಂಬುಲೆನ್ಸ್ ಬಾರದ ಕಾರಣ ಗಸ್ತು ತಿರುಗುತ್ತಿದ್ದ ಪೊಲೀಸರು ತಾವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಪೊಲೀಸ್ ಸಿಬ್ಬಂದಿ ಜಿ, ಎನ್, ದೊಡಮನಿ, ಪಿ ಎಸ್ ಮಲಗೌಡರ ಹಾಗೂ ಗಿರಿಮಲ್ಲ ಆಜುರ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಅಥಣಿ ಜನರಿಂದ ಪ್ರಶಂಸೆಯ ಹರಿದು ಬಂದಿದೆ. ಇದನ್ನೂ ಓದಿ :ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

  • ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ

    ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ

    ಚಿಕ್ಕೋಡಿ: ಕೊರೊನಾ ರಣಕೇಕೆ ಹಿನ್ನೆಲೆ ರಾಜ್ಯಾದ್ಯಂತ ಸಭೆ, ಮದುವೆ ಸಮಾರಂಭಗಳಿಗೆ ಸರ್ಕಾರ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕೋವಿಡ್ ನಿಯಮದ ನಡುವೆಯೂ ಅದ್ಧೂರಿ ಮದುವೆ ಆಯೋಜಿಸಿದ್ದ ವಧ ವರನ ಮೇಲೆ ಪ್ರಕರಣ ದಾಖಲಾಗಿದೆ.

    ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸುರುವ ಕೊರೊನಾ ಟಫ್ ರೂಲ್ಸ್ ಬ್ರೇಕ್ ಮಾಡಿ ಸಂಕೇಶ್ವರ ಪಟ್ಟಣದ ನೀಡಸೊಸಿ ರಸ್ತೆಯಲ್ಲಿರುವ ಮಿಲನ್ ಹಾಲ್ ದಲ್ಲಿ ಅದ್ಧೂರಿ ಮದುವೆ ಆಯೋಜನೆ ಮಾಡಿಕೊಂಡಿದ್ದರು. ಮದುವೆಗೆ ಐವತ್ತು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದು ಕೂಡ ತಹಶೀಲ್ದಾರ್ ಕಚೇರಿಯಿಂದ ಪಾಸ್ ಪಡೆಯಬೇಕು. ಆದ್ರೆ ಮದುವೆಯಲ್ಲಿ ಎಲ್ಲ ನಿಯಮಗಳನ್ನ ಬ್ರೇಕ್ ಮಾಡಲಾಗಿತ್ತು.

    ಹುಬ್ಬಳ್ಳಿ ಮೂಲದ ವರ ಕಾರ್ತಿಕ್ ಗಾಯಕ್ವಾಡ, ವಧು ಮೇಘ ಹಾಗೂ ಕಲ್ಯಾಣ ಮಂಟಪದ ಮಾಲೀಕ ಝಾಕರೀಯಾ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮದುವೆ ನಡೆದಿದೆ.

  • ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಪಾತ್ರ ಅಗಾಧ: ಸುತ್ತೂರು ಶ್ರೀ

    ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಪಾತ್ರ ಅಗಾಧ: ಸುತ್ತೂರು ಶ್ರೀ

    ಚಿಕ್ಕೋಡಿ: ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳ ಪಾತ್ರ ಅಗಾಧವಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ದುರದುಂಡೇಶ್ವರ ವಿದ್ಯಾವರ್ಧಕ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಮತ್ತು ಕಾಯಕಯೋಗಿ ಬಸಗೌಡ ಪಾಟೀಲ್ ಅವರ ಕಂಚಿನ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ಕಲಿಸಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಬಡ ಜನರಲ್ಲಿ ಶಿಕ್ಷಣದ ಅರಿವು ಮೂಡಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಮಠಗಳು ಹಾಗೂ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

    ಸಮಾರಂಭದಲ್ಲಿ ಆಶೀರ್ವಚನ ನೀಡಿದ ವಿಜಯಪುರ ಯೋಗಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಎಲ್ಲ ದಾನಕ್ಕಿಂತ ಶಿಕ್ಷಣ ದಾನ ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣದ ದಾನ ನೀಡುತ್ತಿರುವ ದುರದುಂಡೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯ ಜನ ಮೆಚ್ಚುಗೆಗೆ ಕಾರಣವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನೀಡಿರುವ ಈ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.

    ಸಮಾರಂಭದಲ್ಲಿ ಗದಗದ ತೊಂಟದ ಸಿದ್ದರಾಮ ಮಹಾಸ್ವಾಮೀಜಿಗಳು, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎ.ಬಿ.ಪಾಟೀಲ್, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಭಾಗವಹಿಸಿ ಹಲವಾರು ಮಾಠಾಧೀಶರು ಉಪಸ್ಥಿತರಿದ್ದರು.

  • ಪ್ರತಿಭಟನೆಗೆ ಬಂದೋಬಸ್ತ್ ಕಲ್ಪಿಸಿದ ಪೊಲೀಸರಿಗೆ ಗುಲಾಬಿ ಹೂವು ಕೊಟ್ಟ ಪ್ರತಿಭಟನಾಕಾರರು

    ಪ್ರತಿಭಟನೆಗೆ ಬಂದೋಬಸ್ತ್ ಕಲ್ಪಿಸಿದ ಪೊಲೀಸರಿಗೆ ಗುಲಾಬಿ ಹೂವು ಕೊಟ್ಟ ಪ್ರತಿಭಟನಾಕಾರರು

    ಚಿಕ್ಕೋಡಿ: ಪೌರತ್ವ ಕಾಯ್ದೆ ವಿರೋಧಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.

    ಸಂಕೇಶ್ವರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೇರಿದ ಮುಸ್ಲಿಂ ಬಾಂಧವರು ಸಭೆ ನಡೆಸಿದರು. ಬಳಿಕ ಪ್ರತಿಭಟನೆ ನಡೆಸಿ ಪೌರತ್ವ ತಿದ್ದುಪಡೆ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ವಕೀಲ ವಿಕ್ರಮ್ ಕರನಿಂಗ ಅವರು, ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ದೇಶದ ಯಾವುದೇ ನಾಗರಿಕರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿ ತಂದರೆ ಸುಮ್ಮನೆ ಕುಳಿತುಕೊಳ್ಳದೆ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದರು.

    ಪ್ರತಿಭಟನೆ ಬಳಿಕ ಹುಕ್ಕೇರಿ ತಹಶೀಲ್ದಾರ್ ರೇಷ್ಮಾ ತಾಳಿಕೋಟೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಶಾಂತಿಯುತ ಪ್ರತಿಭಟನೆ ಮಾಡಿದ್ದಕ್ಕೆ ಪ್ರತಿಭಟನಾಕಾರರಿಗೆ ತಹಶೀಲ್ದಾರ್ ಧನ್ಯವಾದ ತಿಳಿಸಿದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪ್ರತಿಭಟನೆಗೆ ಬಂದೋಬಸ್ತ್ ಕಲ್ಪಿಸಿದ್ದ ಪೊಲೀಸರಿಗೆ ಪ್ರತಿಭಟನಾಕಾರರು ಗುಲಾಬಿ ಹೂವು ಕೊಟ್ಟು ಅಭಿನಂದನೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

  • ಬೆಂಕಿ ಹೊತ್ತಿಕೊಂಡಿದ್ರೂ 5 ಕಿ.ಮೀ ಕ್ಯಾಂಟರ್ ಚಾಲನೆ

    ಬೆಂಕಿ ಹೊತ್ತಿಕೊಂಡಿದ್ರೂ 5 ಕಿ.ಮೀ ಕ್ಯಾಂಟರ್ ಚಾಲನೆ

    – ಚಾಲಕನ ಚಾಣಾಕ್ಷತನದಿಂದ ತಪ್ಪಿದ ಭಾರೀ ಅನಾಹುತ

    ಚಿಕ್ಕೋಡಿ: ಕ್ಯಾಂಟರ್ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದರೂ ಚಾಲಕ ನೀರು ಇರುವ ಜಾಗದವರೆಗೂ ಚಾಲನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಕೊಲ್ಲಾಪುರದಿಂದ ತಮಿಳುನಾಡಿನ ಚೆನ್ನೈಗೆ ಜನರೇಟರ್ ಗಳನ್ನು ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಸಂಕೇಶ್ವರ ಪಟ್ಟಣದ ಸಮೀಪದಲ್ಲಿ ಲಾರಿಯ ಹಿಂಬದಿಯಲ್ಲಿದ್ದ ಜನರೇಟರ್ ಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿಯುತ್ತಿತ್ತು. ಇದನ್ನು ನೋಡಿದ ಸಾರ್ವಜನಿಕರು, ಸವಾರರು ಸಂಕೇಶ್ವರ ಪಟ್ಟಣದಲ್ಲಿ ಚಾಲಕನ ಗಮನಕ್ಕೆ ತಂದಿದ್ದಾರೆ.

    ಈ ವಿಚಾರ ಗೊತ್ತಾಗುತ್ತಿದ್ದಂತೆ ಚಾಲಕ ಸಂಜು ಮಾದಿಗಾರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವ ವೇಳೆಗೆ ಲಾರಿ ಕೂಡ ಸುಟ್ಟು ಭಸ್ಮವಾಗುತ್ತದೆ ಎಂದು ಯೋಜಿಸಿದ್ದ. ಹೀಗಾಗಿ ತಕ್ಷಣವೇ ಚಾಣಾಕ್ಷತನ ಮೆರೆದು ವಾಟರ್ ಸರ್ವಿಸ್ ಮಾಡುವ ಗ್ಯಾರೆಜ್‍ವರೆಗೂ ಅಂದ್ರೆ ಹೆಬ್ಬಾಳ ಗ್ರಾಮದ ಸಮೀಪ 5 ಕಿ.ಮೀ ವರೆಗೆ ಜನರೇಟರ್ ಗೆ ಬೆಂಕಿ ಹತ್ತಿದ್ದರೂ ಕ್ಯಾಂಟರ್ ಚಾಲನೆ ಮಾಡಿಕೊಂಡು ಬಂದಿದ್ದಾನೆ.

    ವಾಟರ್ ಸರ್ವಿಸ್ ಗ್ಯಾರೆಜ್‍ಗೆ ಕ್ಯಾಂಟರ್ ಬಂದು ನಿಲ್ಲುತ್ತಿದ್ದಂತೆ ಚಾಲಕನ ಅಲ್ಲಿದ್ದ ಜನರೊಂದಿಗೆ ಸೇರಿ ನೀರು ಸುರಿದು ಬೆಂಕಿಯನ್ನ ನಂದಿಸಿದ್ದಾನೆ. ಘಟನೆಯಲ್ಲಿ ಜನರೇಟರ್ ಸಂಪೂರ್ಣ ಸುಟ್ಟು ಭಸ್ಮವಾದರೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.