Tag: Sanju Samson

  • ಸಂಜು ಭವಿಷ್ಯದ ಧೋನಿ ಅಂದ್ರು ತರೂರ್- ನಾನು ಒಪ್ಪಲ್ಲವೆಂದ ಗಂಭೀರ್

    ಸಂಜು ಭವಿಷ್ಯದ ಧೋನಿ ಅಂದ್ರು ತರೂರ್- ನಾನು ಒಪ್ಪಲ್ಲವೆಂದ ಗಂಭೀರ್

    ನವದೆಹಲಿ: ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್‍ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಸಂಜು ಸ್ಯಾಮ್ಸನ್ ಭವಿಷ್ಯದ ಧೋನಿ ಎಂದು ಹೇಳಿದ್ದಾರೆ. ಆದರೆ ತರೂರ್ ಅವರ ಈ ಹೇಳಿಕೆಗೆ ಬಿಜೆಪಿ ಸಂಸದ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪಂಜಾಬ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ 224 ರನ್‍ಗಳ ಬೃಹತ್ ಮೊತ್ತದ ಗುರಿಯನ್ನು ಚೇಸ್ ಮಾಡಿ ರಾಜಸ್ಥಾನ ರಾಯಲ್ಸ್ ತಂಡ 3 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಗೆಲುವಿಗೆ ಕೊಡುಗೆ ನೀಡಿದ್ದರು. ಐಪಿಎಲ್ 2020ರ ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿರುವ ಸಂಜು ಒಟ್ಟು 159 ರನ್‍ಗಳನ್ನು ಗಳಿಸಿದ್ದಾರೆ. ಸಂಜು ಬ್ಯಾಟಿಂಗ್ ಶೈಲಿಗೆ ಹಲವು ವಿಶ್ಲೇಷಕರು ಮೆಚ್ಚುಗೆ ಸೂಚಿಸಿದ್ದಾರೆ.

    ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೂಡ ಸಂಜು ಸ್ಯಾಮ್ಸನ್‍ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು, ಭಾರತ ಕ್ರಿಕೆಟ್‍ನಲ್ಲಿ ಮುಂದಿನ ಧೋನಿ, ಸಂಜು ಸ್ಯಾಮ್ಸನ್ ಆಗುತ್ತಾರೆ ಎಂದು ಆತ 14 ವರ್ಷದವನಾಗಿದ್ದಾಗಲೇ ಹೇಳಿದ್ದೆ. ಆ ದಿನ ಈಗ ಬಂದಿದ್ದು, ಐಪಿಎಲ್‍ನ 2 ಇನ್ನಿಂಗ್ಸ್ ಗಳ ಬಳಿಕ ಎಲ್ಲರಿಗೂ ಅಂತಾರಾಷ್ಟ್ರೀಯ ಮಟ್ಟದ ಆಟಗಾರನ ಆಗಮನವಾಗಿದೆ ಎಂದು ತಿಳಿದಿದೆ ಎಂದು ಟ್ವೀಟ್ ಮಾಡಿದ್ದರು.

    ಶಶಿ ತರೂರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಬೇರೋಬ್ಬರಂತೆ ಆಗುವ ಅಗತ್ಯ ಸಂಜು ಸ್ಯಾಮ್ಸನ್‍ಗೆ ಇಲ್ಲ. ಆತ ಎಂದಿಗೂ ಭಾರತ ಕ್ರಿಕೆಟ್‍ನಲ್ಲಿ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು ಎಂದು ಹೇಳಿದ್ದಾರೆ.

    ಇತ್ತ ತರೂರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟಿಗ ಶ್ರೀಶಾಂತ್, ಸಂಜು ಸ್ಯಾಮ್ಸನ್ ಧೋನಿ ವಾರಸುದಾರ ಅಲ್ಲ. ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾನೆ. 2015 ರಿಂದಲೂ ಸಂಜು ಟೀಂ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲೂ ಆಡಬೇಕಿತ್ತು. ಆದರೆ ಸರಿಯಾದ ಅವಕಾಶ ಆತನಿಗೆ ಲಭಿಸಿಲ್ಲ. ವಿಶ್ವಕಪ್ ಗೆಲುವಿಗೂ ಆತ ಸಹಕಾರಿ ಆಗುತ್ತಿದ್ದ. ಭವಿಷ್ಯದಲ್ಲೂ ಸಂಜು ಉತ್ತಮ ಆಟ ಪ್ರದರ್ಶಿಸುತ್ತಾರೆ. ಆತನನ್ನು ಯಾರಿಗೂ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

    ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‍ನಲ್ಲಿ ಸತತವಾಗಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆತನಿಗೆ ಟೀಂ ಇಂಡಿಯಾ ಪರ ಆಡುವ ಹೆಚ್ಚಿನ ಅವಕಾಶಗಳು ಲಭಿಸಿಲ್ಲ. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಇದುವರೆಗೂ ಕೇವಲ 4 ಅಂತಾರಾಷ್ಟ್ರೀಯ ಪಂದ್ಯಗಳನಷ್ಟೇ ಆಡಿದ್ದಾರೆ.

  • ಭರ್ಜರಿ ಸಿಕ್ಸರ್‌ಗಳ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಂಜು ಸ್ಯಾಮ್ಸನ್

    ಭರ್ಜರಿ ಸಿಕ್ಸರ್‌ಗಳ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಂಜು ಸ್ಯಾಮ್ಸನ್

    ಶಾರ್ಜಾ: ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಆಗ ನನ್ನನ್ನು ನಾನೇ ಪ್ರಶ್ನಿಸಿಕೊಂಡು ಆತ್ಮ ವಿಮರ್ಶೆ ಮಾಡಿಕೊಂಡಿದ್ದೇ ನನ್ನ ಪ್ರದರ್ಶನದಲ್ಲಿ ಬದಲಾವಣೆಯಾಗಲು ಕಾರಣ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಯುವ ಆಟಗಾರ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

    2020ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿಯೂ ಅರ್ಧ ಶತಕ ಸಿಡಿಸಿ ಮಿಂಚಿರುವ ಸಂಜು ಸ್ಯಾಮ್ಸನ್ ಎಲ್ಲರ ಗಮನ ಸೆಳೆದಿದ್ದಾರೆ. ಚೆನ್ನೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 32 ಎಸೆಗಳಲ್ಲಿ 9 ಸಿಕ್ಸರ್, ಬೌಂಡರಿ ನೆರವಿನಿಂದ ತಂಡ 216 ರನ್‍ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2ನೇ ಪಂದ್ಯದಲ್ಲಿ 4 ಬೌಂಡರಿ, 7 ಸಿಕ್ಸರ್ ಗಳ ನೆರವಿನಿಂದ 42 ಎಸೆತಗಳಲ್ಲಿ 85 ರನ್ ಗಳಿಸಿ ಸತತ ಎರಡು ಪಂದ್ಯಗಳಲ್ಲಿ ಭಾರೀ ಸ್ಕೋರ್ ಗಳಿಸಿ ತಂಡ ಗೆಲುವಿಗೆ ತಮ್ಮ ಕಾಣಿಕೆ ನೀಡಿದ್ದರು. ಅಲ್ಲದೇ ಎರಡು ಬಾರಿಯೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಪಂಜಾಬ್ ವಿರುದ್ಧ ಪಂದ್ಯದ ಬಳಿಕ ಮಾತನಾಡಿದ ಸ್ಯಾಮ್ಸನ್, ಕಳೆದ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದೇನೆ. ನನ್ನ ಆಟದಲ್ಲಿ ಸ್ಪಷ್ಟ ಬದಲಾವಣೆಗಳನ್ನು ಕಂಡುಕೊಂಡಿದ್ದೇನೆ. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಜೀವನದಲ್ಲಿ ಏನು ಸಾಧನೆ ಮಾಡಬೇಕು? ನನ್ನ ವೃತ್ತಿ ಜೀವನ ಅಂತ್ಯವಾಗುವ ವೇಳೆಗೆ ಎಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿಕೊಂಡಿದ್ದೆ.

    ಆ ಬಳಿಕ ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ ಆಡಬೇಕು ಎಂದು ನಿರ್ಧರಿಸಿ ನನ್ನ ಪೂರ್ತಿ ಸಮಯವನ್ನು ಇದಕ್ಕೆ ನೀಡಿದ್ದೆ. ನನ್ನ ಕುಟುಂಬ ಸದಸ್ಯರು, ಸ್ನೇಹಿತರು ನನಗೆ ಬೆಂಬಲವಾಗಿ ನಿಂತಿದ್ದರು. ನನ್ನ ಪೂರ್ತಿ ಸಾಮರ್ಥ್ಯವನ್ನು ಆಟದ ಕಡೆ ಗಮನಹರಿಸಿ ಆಡುತ್ತಿದ್ದು, ಫಲಿತಾಂಶ ಅದೇ ಬರುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸರಳವಾಗಿ ವಿವಾಹವಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ಕೆ ಉತ್ತಪ್ಪ

    ನನ್ನ ಸ್ಫೋಟಕ ಪವರ್ ಫುಲ್ ಸಿಕ್ಸರ್ ಗಳಿಗೆ ನನ್ನ ಜಿನ್ಸ್ ಕಾರಣ. ಏಕೆಂದರೆ ನಮ್ಮ ತಂದೆ ತುಂಬ ಪವರ್ ಫುಲ್ ವ್ಯಕ್ತಿ. ಉತ್ತಮ ಪ್ರದರ್ಶನ ನೀಡಲು ಫಿಟ್ ಆಗಿರುವುದು ಮುಖ್ಯವಾಗುತ್ತದೆ. ಆದ್ದರಿಂದಲೇ ಹೆಚ್ಚು ಫಿಟ್ನೆಸ್ ಕಡೆ ಗಮನಹರಿಸಿದ್ದೇನೆ ಎಂದು ಹೇಳಿದರು.

    ರಾಜಸ್ಥಾನ ರಾಯಲ್ಸ್ ತಂಡ ಶಾರ್ಜಾ ಕ್ರೀಡಾಂಗಣದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಪಡೆದು 4 ಅಂಕ ಹಾಗೂ 0.615 ನೆಟ್ ರನ್ ರೇಟ್‍ನೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಗೆಲುವಿನ ಓಟ ಮುಂದುವರಿಸುವ ಭರವಸೆ ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡದ ಸೆ.30 ರಂದು ದುಬೈ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ರನ್ನು ಎದುರಿಸಲಿದೆ.

    ಲಾಕ್‍ಡೌನ್ ಸಮಯವನ್ನು ಉತ್ತಮವಾಗಿ ಬಳಸಿಕೊಂಡಿರುವ ಸಂಜು ಸ್ಯಾಮ್ಸನ್, ಈ ಅವಧಿಯಲ್ಲಿ ಸುಮಾರು 20 ಸಾವಿರ ಅಧಿಕ ಎಸೆತಗಳನ್ನು ಎದುರಿಸಿದ್ದಾರೆ. ಮನೆಯ ಬಳಿ ನೆಟ್ಸ್ ನಲ್ಲಿ ಬೆವರಿಳಿಸಿದ್ದ ಸ್ಯಾಮ್ಸನ್, ಥ್ರೋ ಡೌನ್ ಮೂಲಕ ಎಸೆತಗಳನ್ನು ಎದುರಿಸಿ ಅಭ್ಯಾಸ ನಡೆಸಿದ್ದರು. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಬಳಿಕ ಅವರ ಸ್ಥಾನವನ್ನು ಪಡೆಯಲು ಭಾರೀ ಪೈಪೋಟಿ ನಡೆಯುತ್ತಿದ್ದು, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಬ್ ಪಂತ್ ಈ ಸ್ಥಾನದಲ್ಲಿ ಮುಂದಿದ್ದಾರೆ.

  • 9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    ಶಾರ್ಜಾ: ಇಂದು ನಡೆದ ಐಪಿಎಲ್ 9ನೇ ಮ್ಯಾಚಿನಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್‍ಗಳಿಂದ ರೋಚಕ ಗೆಲುವು ಸಾಧಿಸಿದೆ.

    ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮಯಾಂಕ್ ಅಗರ್ವಾಲ್ ಅವರ ಸೂಪರ್ ಸೆಂಚ್ಯೂರಿ ಮತ್ತು ನಾಯಕ ರಾಹುಲ್ ಅವರ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 223 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿಯನ್ನು ತಲುಪಿತು.

    ತೆವಾಟಿಯಾ ಸ್ಫೋಟಕ ಆಟ
    ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಯಲ್ಸ್ ಕೈಜಾರುವ ಹಂತದಲ್ಲಿ ಇತ್ತು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ತೆವಾಟಿಯಾ 17ನೇ ಓವರಿನಲ್ಲಿ ಕಮಾಲ್ ಮಾಡಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಮೊದಲ 23 ಎಸೆತದಲ್ಲಿ 17 ರನ್‌ ನಂತರದ 8 ಎಸೆತದಲ್ಲಿ ತೆವಾಟಿಯಾ 36 ರನ್‌ ಚಚ್ಚಿದ್ದರು. ಜೊತೆಗೆ 31 ಬಾಲಿಗೆ 51 ರನ್ ಸಿಡಿಸಿ ಔಟ್ ಆದರು. ಈ ಗೆಲುವಿನ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಚೇಸ್‌ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ಪಾತ್ರವಾಗಿದೆ.

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.

    ನಂತರ ಭರ್ಜರಿ ಬ್ಯಾಟಿಂಗ್ ಆಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸ್‍ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು.

    ಸ್ಯಾಮ್ಸನ್ ಸ್ಫೋಟಕ ಆಟ:
    ಇದೇ ವೇಳೆ ರಾಹುಲ್ ತೆವಾಟಿಯಾ ರನ್ ಗಳಿಸಲು ಕಷ್ಟಪಟ್ಟರು. ಆದರೆ ಇನ್ನೊದಡೆ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಮಾಡಿದ 15ನೇ ಓವರಿನಲ್ಲಿ ಅವರು ಭರ್ಜರಿ 21 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿಯವರ ಬೌಲಿಂಗ್ ಔಟ್ ಆದರು.

    17ನೇ ಓವರಿನಲ್ಲಿ ತೆವಾಟಿಯಾ ಕಮಾಲ್ ನಾಲ್ಕು ಬಾಲಿಗೆ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಜೊತೆ ಅದೇ ಓವರಿನ ಕೊನೆ ಬಾಲಿನಲ್ಲಿ ಇನ್ನೊಂದು ಸಿಕ್ಸ್ ಸಿಡಿಸಿ ಒಟ್ಟು ಒಂದೇ ಈವರಿನಲ್ಲಿ 5 ಸಿಕ್ಸರ್ ಸಿಡಿಸಿ ರಾಯಲ್ಸ್ ಅನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಬಂದರು. ಆದರೆ ರಾಬಿನ್ ಉತ್ತಪ್ಪ ಅವರು 18ನೇ ಓವರಿನ ಮೊದಲ ಬಾಲಿನಲ್ಲೇ ಔಟ್ ಆದರು. ಆಗ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿದರು.

    ಈ ಹಿಂದೆ 2012ರಲ್ಲಿಆರ್‌ಸಿಬಿ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ತಂಡ ಸ್ಪಿನ್ನರ್ ರಾಹುಲ್ ಶರ್ಮಾ ಅವರ 5 ಎಸೆತಗಳನ್ನು ಸಿಕ್ಸರ್‍ ಗೆ ಅಟ್ಟಿದ್ದರು.

  • ದ್ರಾವಿಡ್‍ರ ಮಾತು ನನ್ನ ಕನಸನ್ನು ನನಸು ಮಾಡಿತ್ತು: ಸಂಜು ಸ್ಯಾಮ್ಸನ್

    ದ್ರಾವಿಡ್‍ರ ಮಾತು ನನ್ನ ಕನಸನ್ನು ನನಸು ಮಾಡಿತ್ತು: ಸಂಜು ಸ್ಯಾಮ್ಸನ್

    ತಿರುವನಂತಪುರಂ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ‘ನನ್ನ ತಂಡದಲ್ಲಿ ಆಡುತ್ತೀಯಾ’ ಎಂದು ಕೇಳಿದ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಯುವ ಆಟಗಾರ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

    2013ರ ಐಪಿಎಲ್ ವೇಳೆ ದ್ರಾವಿಡ್ ಅವರು ನನ್ನ ತಂಡದಲ್ಲಿ ಆಡುತ್ತೀಯಾ ಎಂದು ಕೇಳಿದ ತಕ್ಷಣ ನನ್ನ ಹೃದಯದಲ್ಲಿ ಕೋಟಿ ವೀಣೆ ಮಿಡಿದ ಅನುಭವ ಆಗಿತ್ತು. ದಿಗ್ಗಜ ಕ್ರಿಕೆಟ್ ಆಟಗಾರ ದ್ರಾವಿಡ್ ಅವರ ಮಾತು ಹೇಳಿದ ತಕ್ಷಣ ನನ್ನ ಕನಸು ನನಸಾದ ಅನುಭವ ಆಗಿತ್ತು ಎಂದು ಸ್ಯಾಮ್ಸನ್ ಹೇಳಿದ್ದಾರೆ. ಅಂದಹಾಗೆ ದ್ರಾವಿಡ್, ಸ್ಯಾಮ್ಸನ್ ಐಪಿಎಲ್‍ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ದ್ರಾವಿಡ್ ಅವರಂತಹ ವ್ಯಕ್ತಿ ಮತ್ತೊಬ್ಬರು ಇರುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ತಕ್ಕ ಪರಿಹಾರ ಮಾರ್ಗವನ್ನು ನೀಡುತ್ತಿದ್ದರು. ತಂಡದ ಎಲ್ಲಾ ಆಟಗಾರರಿಗೂ ಅವರು ಯಾವುದೇ ಸಮಯದಲ್ಲಾದರೂ ಲಭ್ಯರಾಗಿರುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಸ್ ಬಟ್ಲರ್ ಯಾವ ರೀತಿ ತಯಾರಿ ನಡೆಸುತ್ತಾರೆ ಎಂದು ಗಮನಿಸುವ ಅವಕಾಶ ಲಭಿಸಿತ್ತು ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.

    ಟೀಂ ಇಂಡಿಯಾ ತಂಡಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರೊಂದಿಗೆ ಆಡುವುದು ಅತ್ಯುತ್ತಮ ಅನುಭವ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸೂಪರ್ ಓವರ್ ವೇಳೆ ನನ್ನ ಮೇಲೆ ಭರವಸೆ ಇಟ್ಟು ಅವಕಾಶ ನೀಡಿದ್ದರು. ಅವರೊಂದಿಗೆ ನನ್ನನ್ನು ಮ್ಯಾಚ್ ವಿನ್ನರ್ ಎಂದು ಪರಿಗಣಿಸಿದ್ದು ಸಂತಸ ತಂದಿದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

    25 ವರ್ಷ ವಯಸ್ಸಿನ ಸ್ಯಾಮ್ಸನ್ ಐಪಿಎಲ್‍ನಲ್ಲಿ 93 ಪಂದ್ಯಗಳನ್ನು ಆಡಿ 2,209 ರನ್ ಗಳಿಸಿದ್ದಾರೆ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‍ನಲ್ಲಿ ಸ್ಯಾಮ್ಸನ್ ತೋರಿದ ಪ್ರದರ್ಶನ ಟೀಂ ಇಂಡಿಯಾಗೆ ಆಯ್ಕೆ ಆಗಲು ಪ್ರಮುಖ ಕಾರಣವಾಗಿತ್ತು. ಅಲ್ಲದೇ 2020ರ ಟಿ20 ವಿಶ್ವಕಪ್ ತಂಡದ ಆಯ್ಕೆಯ ರೇಸ್‍ನಲ್ಲೂ ತಂದು ನಿಲ್ಲಿಸಿದೆ.

  • ಐಪಿಎಲ್ ರದ್ದಾದರೆ 3 ಭಾರತೀಯ ಆಟಗಾರ ಭವಿಷ್ಯ ಅತಂತ್ರ

    ಐಪಿಎಲ್ ರದ್ದಾದರೆ 3 ಭಾರತೀಯ ಆಟಗಾರ ಭವಿಷ್ಯ ಅತಂತ್ರ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಕೊರೊನಾ ವೈರಸ್ ಕರಿ ನೆರಳು ಬಿದ್ದು, ರದ್ದಾಗುವ ಹಂತಕ್ಕೆ ಬಂದು ನಿಂತಿದೆ. ಈ ಬಾರಿಯ ಐಪಿಎಲ್ ರದ್ದಾದರೆ ಫ್ರಾಂಚೈಸ್‍ಗಳಿಗೆ ನಷ್ಟವಾಗುವುದು ಅಷ್ಟೇ ಅಲ್ಲದೆ ಭಾರತದ ಮೂರು ಆಟಗಾರರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

    ಕೊರೊನಾ ವೈರಸ್ ಏಕಾಏಕಿ ವಿಶ್ವದಾದ್ಯಂತದ ಪ್ರಮುಖ ಕ್ರೀಡಾಕೂಟಗಳನ್ನು ರದ್ದುಗೊಳಿಸುವಂತೆ ಮಾಡಿದೆ. ಮಾರಕ ವೈರಸ್‍ನಿಂದಾಗಿ ಐಪಿಎಲ್ 2020 ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಟೂರ್ನಿ ನಡೆಸುವ ಆಶಯವನ್ನು ಹೊಂದಿದ್ದು, ಏಪ್ರಿಲ್ 15ರ ಬಳಿಕ ಇಲ್ಲವೇ ಜೂನ್-ಸೆಪ್ಟಂಬರ್ ನಡುವೆ ವೇಳಾಪಟ್ಟಿ ನಿಗದಿಪಡಿಸಲು ಸಜ್ಜಾಗಿದೆ.

    ಟೂರ್ನಿ ನಡೆಯದಿದ್ದರೆ ಬಿಸಿಸಿಐ ಮಾತ್ರವಲ್ಲದೆ ಆಟಗಾರರು ಸಹ ಹೆಚ್ಚಿನ ಪರಿಣಾಮ ಎದುರಿಸಲಿದ್ದಾರೆ. ಅವರಲ್ಲಿ ಕೆಲವರು ಬೃಹತ್ ಮೊತ್ತದ ಹಣ ಪಡೆಯುವುದನ್ನು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಮುಂದಿನ ಆವೃತ್ತಿ ಹಾಗೂ ಇತರ ವೇದಿಕೆಯನ್ನು ತಪ್ಪಿಸಿಕೊಳ್ಳುತ್ತಾರೆ. ಐಪಿಎಲ್‍ನಲ್ಲಿ ಆಟಗಾರರು ತೋರುವ ಫಾರ್ಮ್ ಟೀಂ ಇಂಡಿಯಾ ಆಯ್ಕೆಗೆ ವೇದಿಕೆ ಆಗಿರುತ್ತದೆ. ಈ ಸಾಲಿನಲ್ಲಿ ಮೂರು ಆಟಗಾರರಿದ್ದು, ಐಪಿಎಲ್ 2020 ರದ್ದಾದರೆ ಅವರು ಸಂಕಷ್ಟಕ್ಕೆ ಸಿಲುಕಬಹುದು ಎನ್ನಲಾಗುತ್ತಿದೆ.

    ಎಂ.ಎಸ್.ಧೋನಿ:
    ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜುಲೈ 2019ರಿಂದ ಯಾವುದೇ ರೀತಿಯ ಕ್ರಿಕೆಟ್ ಆಡಿಲ್ಲ. ಹೀಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿಯು ಅವರನ್ನು ನೇರವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೇರ ಆಯ್ಕೆ ಕೊಟ್ಟರೆ ಈಗಾಗಲೇ ಅಭ್ಯಾಸ ನಡೆಸುತ್ತಿರುವ ಇತರ ಆಟಗಾರರಿಗೆ ಅನ್ಯಾಯವಾಗುತ್ತದೆ. ಎಂ.ಎಸ್.ಧೋನಿ ಅವರು ಕೆಲವು ಸ್ಪರ್ಧಾತ್ಮಕ ಕ್ರಿಕೆಟ್ ಆಡುವವರೆಗೂ ಆಯ್ಕೆಯಿಂದ ದೂರವಿರುತ್ತಾರೆ ಎನ್ನಲಾಗುತ್ತಿದೆ.

    ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು, ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳೇ ಇಲ್ಲ ಎಂದು ಹೇಳಿದ್ದಾರೆ. ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತಾರೆ ಅಂತ ಅಭಿಮಾನಿ ನಿರೀಕ್ಷೆ ಹೊಂದಿದ್ದರು. ಐಪಿಎಲ್‍ನಲ್ಲಿ ಮಿಂಚಿದರೆ, ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟಿ20 ವಿಶ್ವಕಪ್‍ಗೆ ಧೋನಿ ಮರಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

    ಎಂ.ಎಸ್.ಧೋನಿ ಐಪಿಎಲ್ 13ನೇ ಆವೃತ್ತಿ ಆರಂಭಕ್ಕಾಗಿ ಕಾಯುತ್ತಿದ್ದರು. ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದರು. ಆದರೆ ಟೂರ್ನಿಯನ್ನು ಏಪ್ರಿಲ್ 15ರವರೆಗೆ ರದ್ದುಗೊಳಿಸುತ್ತಿದ್ದಂತೆ ಧೋನಿ ತವರಿಗೆ ಮರಳಿದರು.

    ಪೃಥ್ವಿ ಶಾ:
    ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅವರು ಈವರೆಗೂ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ. ಈ ಅವಕಾಶ ಪಡೆದುಕೊಳ್ಳಲು ಅವರು ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುವುದ ಅಗತ್ಯವಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯು ಟಿ20 ಪಂದ್ಯಗಳ ಓಪನರ್ ಆಟಗಾರರಿಗೆ ಹುಡುಕಾಟ ನಡೆಸಿದೆ.

    ಪೃಥ್ವಿ ಶಾ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಬಹುದಾಗಿದೆ. ಆದರೆ ಆಯ್ಕೆ ಸಮಿತಿಯು ಧವನ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಶಾ ಅವಕಾಶ ತಪ್ಪಿಸಿಕೊಳ್ಳಬಹುದು. ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕರನ್ನಾಗಿ ಮೈದಾನಕ್ಕೆ ಇಳಿಸಲು ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಧವನ್ ಅವರಿಗೆ ವಿಶ್ರಾಂತಿ ಕೊಡುವ ವಾತಾವರಣವೂ ಸೃಷ್ಟಿಯಾಗಬಹುದು.

    ಸಂಜು ಸ್ಯಾಮ್ಸನ್:
    ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಿಗಾಗಿ ಆಡುವ ಇಲೆವೆನ್‍ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಮೂಲಕ ತಂಡದ ಆಡಳಿತವು ರಿಷಭ್ ಪಂತ್ ಅವರಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿತ್ತು. ಭವಿಷ್ಯದಲ್ಲಿ ಸ್ಯಾಮ್ಸನ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತಾದರೂ ಅವರು ವಿಫಲರಾಗಿದ್ದರು.

    ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸ್ಯಾಮ್ಸನ್ ಭವಿಷ್ಯದಲ್ಲಿ ಟೀಂ ಇಂಡಿಯಾ ಸೇರುವ ಸಾಧ್ಯತೆಗಳಿವೆ. ಆದರೆ ಐಪಿಎಲ್ ನಡೆಯದಿದ್ದರೆ ಅವರು ಆಯ್ಕೆಯಿಂದ ದೂರ ಉಳಿಯಲಿದ್ದಾರೆ.

  • ವಿಂಡೀಸ್ ವಿರುದ್ಧದ ಟಿ-20ಗೆ ಧವನ್ ಔಟ್ – ಸಂಜು ಸ್ಯಾಮ್ಸನ್‍ಗೆ ಅವಕಾಶ

    ವಿಂಡೀಸ್ ವಿರುದ್ಧದ ಟಿ-20ಗೆ ಧವನ್ ಔಟ್ – ಸಂಜು ಸ್ಯಾಮ್ಸನ್‍ಗೆ ಅವಕಾಶ

    ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ಮೊಣಕಾಲು ಗಾಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.

    ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಶಿಖರ್ ಧವನ್ ಎಡ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡವು ಮಂಗಳವಾರ ಪರೀಕ್ಷೆ ನಡೆಸಿ, ಗಾಯವನ್ನು ಗುಣಪಡಿಸಲು ಸಮಯ ಬೇಕಾಗುತ್ತದೆ. ಅವರಿಗೆ ಸ್ವಲ್ಪ ಸಮಯದ ವಿಶ್ರಾಂತಿ ಅತ್ಯವಿದೆ ಎಂದು ತಿಳಿಸಿದೆ.

    ವಿಕೆಟ್‍ಕೀಪರ್ ವೃದ್ಧಿಮಾನ್ ಸಹಾ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಅವರ ಬಲಗೈ ಉಂಗುರದ ಬೆರಳು ಮುರಿತಗೊಂಡಿದೆ. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡವು ತಪಾಸಣೆ ನಡೆಸಿ, ಮುಂಬೈನಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಿದೆ.

    ಬಿಸಿಸಿಐ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯ ತಂಡವನ್ನು ನವೆಂಬರ್ 21ರಂದು ಪ್ರಕಟಿಸಿತ್ತು. ಈ ಪಟ್ಟಿನಲ್ಲಿ ಸಂಜು ಸಾಮ್ಸನ್ ಅವರಿಗೆ ಸ್ಥಾನ ನೀಡಿರಲಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಭಾರತ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ಸಂಜು ಸಾಮ್ಸನ್ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಆಯ್ಕೆಯಾಗಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಸಾಮ್ಸನ್ ಸದ್ಯ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಅವರು ತಮ್ಮ 4 ಪಂದ್ಯಗಳಲ್ಲಿ 112 ರನ್ ಗಳಿಸಿದ್ದಾರೆ. ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಟಿ-20 ಮತ್ತು ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 6ರಂದು ಹೈದರಾಬಾದ್‍ನಲ್ಲಿ ನಡೆಯಲಿದೆ.

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಸಂಜು ಸ್ಯಾಮ್ಸನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್, ದೀಪಕ್ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್.

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕುಲದೀಪ್ ಶಾದ್ ಮತ್ತು ಭುವನೇಶ್ವರ್ ಕುಮಾರ್.

    ಟಿ-20 ವೇಳಾಪಟ್ಟಿ:
    ಮೊದಲ ಟಿ-20 ಪಂದ್ಯವು ಡಿಸೆಂಬರ್ 6ರಂದು ಹೈದರಾಬಾದ್‍ನಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಡಿಸೆಂಬರ್ 8ರಂದು ತಿರುವನಂತಪುರಂನಲ್ಲಿ ನಡೆದರೆ, ಕೊನೆಯ ಹಾಗೂ ಮೂರನೇ ಪಂದ್ಯ ಡಿಸೆಂಬರ್ 11ರಂದು ಮುಂಬೈನಲ್ಲಿ ನಡೆಯಲಿದೆ.

    ಏಕದಿನದ ಸರಣಿ ವೇಳಾಪಟ್ಟಿ:
    ಮೊದಲ ಏಕದಿನ ಪಂದ್ಯವು ಡಿಸೆಂಬರ್ 15ರಂದು ಚೆನ್ನೈನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 18ರಂದು ವಿಶಾಖಪಟ್ಟಣಂ ಹಾಗೂ ಕೊನೆಯ ಪಂದ್ಯ ಡಿಸೆಂಬರ್ 22ರಂದು ಕಟಕ್‍ನಲ್ಲಿ ನಡೆಯಲಿದೆ.

  • ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ತಿರುವಂನಂತಪುರಂ: ಭಾರತದ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್‍ಸನ್ ಅವರು ತಮ್ಮ ಎರಡು ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ಮೈದಾನದ ಸಿಬ್ಬಂದಿಗೆ ದಾನ ಮಾಡಿದ್ದಾರೆ.

    ಶುಕ್ರವಾರ ತಿರುವನಂತಪುರಂನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಕೆಟ್‍ಕೀಪರ್, ಬ್ಯಾಟ್ಸ್ ಮೆನ್ ಸಂಜು ಸ್ಯಾಮ್‍ಸನ್ ಭಾರತ ಎ ಪರ ಅದ್ಭುತವಾಗಿ ಆಡಿದ್ದಾರೆ. ಸಂಜು 48 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಎ ತಂಡ 4-1 ಸರಣಿಯಿಂದ ಗೆದ್ದಿದೆ.

    ಸಂಜು ಸ್ಯಾಮ್‍ಸನ್ ಅವರ ಅತ್ಯುತ್ತಮ ಆಟವಾಗಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇದಾದ ಬಳಿಕ ಅವರು ತಮ್ಮ ಎರಡೂ ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ವನ್ನು ತಿರುವನಂತಪುರಂ ಕ್ರೀಡಾಂಗಣದ ಸಿಬ್ಬಂದಿಗೆ ದಾನ ಮಾಡಿದ್ದಾರೆ. ಸಂಜು ಅವರು ಮೈದಾನದ ಸಿಬ್ಬಂದಿಯ ಕೆಲಸದಿಂದ ಪ್ರಭಾವಿತರಾಗಿದ್ದಾರೆ. ಮಳೆ ಅಡ್ಡಿಪಡಿಸಿದ ಪಂದ್ಯವನ್ನು ಪೂರ್ಣಗೊಳಿಸಲು ಅವರು ಶ್ರಮಿಸಿದ್ದರು.

    ಪಂದ್ಯ ಮುಗಿದ ನಂತರ ಮಾತನಾಡಿದ ಸಂಜು ಸ್ಯಾಮ್‍ಸನ್, ಈ ಪಂದ್ಯವನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂಪೂರ್ಣವಾಗಿ ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲುತ್ತದೆ. ಏಕೆಂದರೆ ಅವರಿಂದಾಗಿ ನಾವು ಈ ಪಂದ್ಯವನ್ನು ಆಡಲು ಸಾಧ್ಯವಾಯಿತು. ಕ್ರೀಡಾಂಗಣ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಿರಲಿಲ್ಲ. ಸಿಬ್ಬಂದಿಯ ಕಠಿಣ ಪರಿಶ್ರಮದಿಂದಾಗಿ ಈ ಪಂದ್ಯ ಆಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

  • ‘ನಮ್ಮ ಟಾಪರ್ಸ್ ಸೂಪರ್’- ಹರ್ಭಜನ್ ಟ್ವೀಟ್‍ಗೆ ಯುವಿ ವ್ಯಂಗ್ಯ

    ‘ನಮ್ಮ ಟಾಪರ್ಸ್ ಸೂಪರ್’- ಹರ್ಭಜನ್ ಟ್ವೀಟ್‍ಗೆ ಯುವಿ ವ್ಯಂಗ್ಯ

    ಮುಂಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡ ಉತ್ತಮ ಪ್ರದರ್ಶನ ನೀಡಿದರೂ, ತಂಡದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯಾವ ಆಟಗಾರ ಸೂಕ್ತ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

    ಸಿಮೀತ ಓವರ್ ಗಳ ಕ್ರಿಕೆಟ್ ಟೂರ್ನಿಯಲ್ಲಿ ತಂಡದ 4ನೇ ಕ್ರಮಾಂಕದಲ್ಲಿ ಯಾವ ಆಟಗಾರ ಸ್ಥಾನ ಪಡೆಯುತ್ತಾರೆ ಎಂಬ ಚರ್ಚೆ ಮುಂದುವರಿದಿದೆ. ಇದರ ನಡುವೆಯೇ ಹಲವು ಆಟಗಾರರನ್ನು ಈ ಸ್ಥಾನಕ್ಕೆ ಪ್ರಯೋಗ ಮಾಡಲಾಗಿತ್ತು. ಆದರೆ ಇದರಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದರು. ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಕೂಡ ಈ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ತರುವಲ್ಲಿ ವಿಫಲರಾದರು ಎಂದೇ ಹೇಳಬಹುದು. ಆದರೆ ಸದ್ಯ ನೂತನ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋಡ್ ಅವರು ಸ್ಥಾನಕ್ಕೆ ಸೂಕ್ತ ಆಟಗಾರರನ್ನು ತುಂಬಲು ಸಕ್ಸಸ್ ಆಗುತ್ತಾರಾ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

    ಇದರ ನಡುವೆಯೇ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ 4ನೇ ಸ್ಥಾನಕ್ಕೆ ಯುವ ಆಟಗಾರ ಸಂಜು ಸ್ಯಾಮ್ಸನ್ ರನ್ನು ಆಯ್ಕೆ ಮಾಡಿ ಪ್ರಯೋಗ ನಡೆಸಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಬಿಸಿಸಿಐ ಸಲಹೆ ನೀಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಮಾಜಿ ಆಟಗಾರ ಯುವರಾಜ್ ಸಿಂಗ್, ನಮ್ಮ ತಂಡದ ಟಾಪ್ ಆರ್ಡರ್ ಸೂಪರಾಗಿದ್ದು, 4ನೇ ಸ್ಥಾನದ ಅಗತ್ಯವೇ ಇಲ್ಲವೆಂದು’ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು. ಯುವಿರ ಈ ಟ್ವೀಟ್‍ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡುತ್ತಿದ್ದಾರೆ.

  • ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್ – ಶಿಷ್ಯನಿಗೆ ಶುಭ ಕೋರಿದ ದ್ರಾವಿಡ್

    ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್ – ಶಿಷ್ಯನಿಗೆ ಶುಭ ಕೋರಿದ ದ್ರಾವಿಡ್

    ಕೊಚ್ಚಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಶನಿವಾರ ತಮ್ಮ ಬಹು ಕಾಲದ ಗೆಳತಿ ಚಾರುಲತಾರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

    ಕೇರಳದ ಕೋವಲಂ ರೆಸಾರ್ಟ್‍ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಸಂಜು, ಚಾರುಲತಾ ವಿವಾಹ ನೆರವೇರಿತು. ಕಾರ್ಯಕ್ರಮಕ್ಕೆ ಆಪ್ತ ವಲಯದ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

    24 ವರ್ಷದ ಸಂಜು ಟೀಂ ಇಂಡಿಯಾ ಪರ ಏಕೈಕ ಟಿ20 ಪಂದ್ಯವನ್ನು ಮಾತ್ರ ಆಡಿದ್ದಾರೆ. ಉಳಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪರ ಆಡಿದ್ದ ಸಂಜು ಸ್ಯಾಮ್ಸನ್ ತಮ್ಮ ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಟೀ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದರು. ಐಪಿಎಲ್ ನಲ್ಲಿ ಆಡುವ ವೇಳೆ ರಾಜಸ್ಥಾನ ತಂಡ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಗರಡಿಯಲ್ಲಿ ಸಂಜು ಮತ್ತಷ್ಟು ಪಳಗಿದ್ದರು. ಮದುವೆ ಕಾರ್ಯಕ್ರಮದಲ್ಲಿ ದ್ರಾವಿಡ್ ಭಾಗವಹಿಸಿ ನವದಂಪತಿಗ ಶುಭ ಕೋರಿದರು.

    2014ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಗೆ ಆಯ್ಕೆ ಸಂಜು ಸ್ಯಾಮ್ಸನ್ ಆಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ 2017ರ ಐಪಿಎಲ್ ನಲ್ಲಿ 1 ಸಾವಿರ ರನ್ ಹೊಡೆದ ಕಿರಿಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ ಕೇರಳ ರಣಜಿ ತಂಡವನ್ನು ಮುನ್ನಡೆಸಿದ ಕಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಐಪಿಎಲ್ ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾರು ಕೈ ಹಿಡಿಯಲಿದ್ದಾರೆ ಸಂಜು ಸ್ಯಾಮ್ಸನ್

    ಚಾರು ಕೈ ಹಿಡಿಯಲಿದ್ದಾರೆ ಸಂಜು ಸ್ಯಾಮ್ಸನ್

    ಚೆನ್ನೈ: ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ ಪ್ರೀತಿಯ ಕುರಿತ ಗುಟ್ಟನ್ನು ಬಹಿರಂಗ ಪಡಿಸಿದ್ದು, ತಮ್ಮ ಗೆಳತಿ ಚಾರು ಕೈ ಹಿಡಿಯುತ್ತಿದ್ದಾಗಿ ತಿಳಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಗೆಳತಿಯೊಂದಿಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ. ಸಂಜು ಕಳೆದ 5 ವರ್ಷಗಳಿಂದ ಫೋಟೋ ಶೇರ್ ಮಾಡಲು ಕಾಯುತ್ತಿದ್ದಾಗಿ ತಿಳಿಸಿದ್ದಾರೆ.

    2013 ಆಗಸ್ಟ್ 22 ರ 11:11 ಗಂಟೆಗೆ ನಾನು ಆಕೆಗೆ ಮೊದಲ ಬಾರಿಗೆ ಸಂದೇಶ ಮಾಡಿದ್ದು, ಇಲ್ಲಿಗೆ 5 ವರ್ಷ ಕಳೆದಿದೆ. ಅಂದಿನಿಂದ ಇಡೀ ವಿಶ್ವಕ್ಕೆ ಈಕೆ ನನ್ನ ಪ್ರೇಯಸಿ ಎಂದು ಹೇಳಲು ಬಯಸಿದ್ದೆ. ನಾವು ಒಟ್ಟಿಗೆ ಹಲವು ಬಾರಿ ಸಮಯ ಕಳೆದಿದ್ದರು, ಸಾರ್ವಜನಿಕವಾಗಿ ಓಡಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಾನು ನಮ್ಮ ಪೋಷಕರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ನೀವು ಕೂಡ ನಮ್ಮ ಜೋಡಿಗೆ ಶುಭ ಹಾರೈಸಿ ಎಂದು ತಿಳಿಸಿದ್ದಾರೆ.

    https://www.instagram.com/p/BnfoBX5lm2s/?hl=en&taken-by=imsanjusamson

    ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಾರು ತಂದೆ ಡಿಸೆಂಬರ್ 22 ರಂದು ಇಬ್ಬರ ವಿಹಾರ ಸಮಾರಂಭ ನಡೆಯಲಿದೆ ಎಂದು ಖಚಿತ ಪಡಿಸಿದ್ದಾರೆ. ಅಂದಹಾಗೇ ಚಾರು, ಸಂಜು ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದ ಸ್ನೇಹಿತರಾಗಿದ್ದು, ಸ್ನೇಹ ಬೆಳೆದಂತೆ ಇಬ್ಬರ ನಡುವೆ ಪ್ರೀತಿ ಆರಳಿದೆ. ಸದ್ಯ ಚಾರು ತನ್ನ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

    2005 ರಲ್ಲಿ ಟೀಂ ಇಂಡಿಯಾ ಟಿ20 ತಂಡಕ್ಕೆ ಆಯ್ಕೆ ಆಗಿ ಸ್ಯಾಮ್ಸನ್ ಒಂದು ಪಂದ್ಯವಾಡಿ 19 ರನ್ ಗಳಿಸಿದ್ದರು. 2013 ರಲ್ಲಿ ಐಪಿಎಲ್ ಗೆ ಪ್ರವೇಶ ಪಡೆದ ಸ್ಯಾಮ್ಸನ್ ತಮ್ಮ ಆಕರ್ಷಕ ಆಟದ ಮೂಲಕ ಗಮನ ಸೆಳೆದಿದ್ದರು. 2018 ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ ಪರ 15 ಪಂದ್ಯಗಳನ್ನಾಡಿದ್ದ ಸ್ಯಾಮ್ಸನ್ 441 ರನ್ ಗಳಿಸಿದ್ದರು. ಉಳಿದಂತೆ 44 ಪ್ರಥಮ ದರ್ಜೆ ಪಂದ್ಯಗಳಿಂದ 2,602 ರನ್ ಸಿಡಿಸಿದ್ದಾರೆ. ಇನ್ನು 130 ಟಿ20 ಪಂದ್ಯಗಳಲ್ಲಿ 20 ಅರ್ಧಶತಕ, ಏಕೈಕ ಶತಕದೊಂದಿಗೆ 3011 ರನ್ ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv