Tag: sanjjjanaagalrani

  • ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಬೆಂಗಳೂರು: ಸ್ಯಾಂಡಲ್‍ವುಡ್ ಪಾಲಿಗೆ ಇಂದು ಬ್ಲಾಕ್ ಮಂಡೇ ಅಂತಾನೇ ಹೇಳಬಹುದು. ಡ್ರಗ್ಸ್ ಕೇಸ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಯೊಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದ ನಟಿ ರಾಗಿಣಿ ಮುಂದಿನ 14ದಿನ ಅಂದ್ರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಈಗ ಜೈಲಿನಲ್ಲಿರುವ ಮಹಿಳಾ ಕ್ವಾರಂಟೇನ್ ಸೆಲ್‍ನಲ್ಲಿ ರಾಗಿಣಿಯನ್ನು ಇರಿಸಲಾಗಿದ್ದು, ಪಲ್ಯ, ಚಪಾತಿ, ಅನ್ನ ಸಾಂಬರ್ ಊಟ ನೀಡಲಾಗಿದೆ. 6604 ವಿಚಾರಣಾಧೀನ ಕೈದಿ ನಂಬರನ್ನು ರಾಗಿಣಿಗೆ ನೀಡಲಾಗಿದೆ. ಆರ್‍ಟಿ-ಪಿಸಿಆರ್ ಟೆಸ್ಟ್ ಫಲಿತಾಂಶ ಬಂದ ಬಳಿಕ ಬ್ಯಾರಕ್‍ಗೆ ಕಳಿಸಲಾಗುತ್ತದೆ. ಇದಕ್ಕೂ ಮುನ್ನ ಎಫ್‍ಎಸ್‍ಎಲ್ ಕೇಂದ್ರದ ಬಳಿ ಪೊಲೀಸ್ ವಾಹನ ಹತ್ತುವ ಮುನ್ನ ನಟಿ ರಾಗಿಣಿ ಕಣ್ಣೀರು ಇಟ್ಟರು. ಅಲ್ಲದೆ ಮಾಧ್ಯಮಗಳನ್ನು ಕಂಡು ಕೈಮುಗಿದ್ರು.

    ಜೈಲಿಗೆ ಹೊರಟಿದ್ದ ರಾಗಿಣಿಗೆ ನಟಿ ಸಂಜನಾ ಧೈರ್ಯ ತುಂಬಿ ಕಳಿಸಿಕೊಟ್ರು. ನಟಿ ಸಂಜನಾ ಸೇರಿ ಮೂವರು ಆರೋಪಿಗಳನ್ನು ಮತ್ತೆರಡು ದಿನ ಸಿಸಿಬಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಹೆಚ್ಚಿನ ವಿಚಾರಣೆ ಅಗತ್ಯದ ಇದೆ ಎಂದು ಸಿಸಿಬಿ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ನಟಿ ಸಂಜನಾ ಸೇರಿ ಮೂವರನ್ನು ಸೆಪ್ಟೆಂಬರ್ 16ರವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.

    ರಾಗಿಣಿ ಪರಪ್ಪನ ಅಗ್ರಹಾರ ಸೇರಿದ್ರೆ, ನಟಿ ಸಂಜನಾ ಮತ್ತೆ ಸಾಂತ್ವನ ಕೇಂದ್ರ ಸೇರಿದ್ದಾರೆ. ಇನ್ನು ರಾಗಿಣಿ ಸೇರಿ ಐವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಬುಧವಾರಕ್ಕೆ ಹೋಗಿದೆ. ನಾಳೆ ಅಥವಾ ನಾಡಿದ್ದರಲ್ಲಿ ಇಡಿ ಅಧಿಕಾರಿಗಳು ಸಹ ವಿಚಾರಣೆಗೆ ಮುಂದಾಗುವ ಸಾಧ್ಯತೆ ಇದೆ.

    ಡ್ರಗ್ಸ್ ಕೇಸಿನ ಎ2 ಆರೋಪಿ ನಟಿ ರಾಗಿಣಿ ದ್ವಿವೇದಿ, ಎ4 ಆರೋಪಿ ಡ್ರಗ್ ಪೆಡ್ಲರ್ ಪ್ರಶಾಂತ್ ರಾಂಕಾ, ಎ7 ಆರೋಪಿ ಲೂಮ್ ಪೆಪ್ಪರ್, ಎ11 ಆರೋಪಿ ರಾಹುಲ್ ಶೆಟ್ಟಿ, ಎ13 ಆರೋಪಿ ನಿಯಾಜ್ ಜೈಲು ಪಾಲಾದವರು. ಇನ್ನು ಎ14 ಆರೋಪಿ ನಟಿ ಸಂಜನಾ ಗಲ್ರಾಣಿ, ಎ3 ಆರೋಪಿ ಡ್ರಗ್ ಪೆಡ್ಲರ್ ಶಂಕೆಯಿರುವ ವೀರೇನ್ ಖನ್ನಾ ಹಾಗೂ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಕಸ್ಟಡಿಯಲ್ಲಿದ್ದಾರೆ.

    ನಟಿ ರಾಗಿಣಿ ಪರ ವಕೀಲರು ಅವರು ಜಡ್ಜ್ ಮುಂದೆ ನನಗೆ ಅಸ್ತಮಾ, ಬಿಪಿ ಇದೆ. ಆಪರೇಷನ್ ಕೂಡ ಆಗಿದೆ. ಪ್ರೈವೇಟ್ ಹಾಸ್ಪಿಟಲ್‍ನಲ್ಲಿ ಚೆಕಪ್ ಮಾಡಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಆರೋಪಿಗೆ ಜೈಲು ಹಾಸ್ಪಿಟಲ್‍ನಲ್ಲಿ ಟ್ರೀಟ್‍ಮೆಂಟ್ ಕೊಡಿಸಿ ಎಂದು ಜಡ್ಜ್ ಹೇಳಿದ್ದಾರೆ.

    ಸಂಜನಾ ಮತ್ತು ಇತರೆ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದಾಗ ನಟಿ ಸಂಜನಾ ವಿಚಾರಣೆಗೆ ಸಹಕರಿಸುತ್ತಿಲ್ಲ. ಮೊಬೈಲ್ ಸಿಮ್ ಕೊಡದೇ ಆಟವಾಡ್ತಿದ್ದಾರೆ. ಸಾಕಷ್ಟು ತನಿಖೆ ಅಗತ್ಯತೆ ಇದೆ ಎಂದು ಸಿಸಿಬಿ ವಾದ ಮಾಡಿದೆ. ಅಲ್ಲದೆ ರವಿಶಂಕರ್ ಮತ್ತಷ್ಟು ವಿಚಾರಣೆ ಅಗತ್ಯವಿದೆ. ವೀರೇನ್ ಖನ್ನಾ ವಿಚಾರಣೆಗೆ ಸ್ಪಂದಿಸ್ತಿಲ್ಲ. ಆರು ಮೇಲ್ ಐಡಿ, ಪಾಸ್‍ವರ್ಡ್‍ಗಳ ಮಾಹಿತಿ ನೀಡುತ್ತಿಲ್ಲ. ವೀರೇನ್ ಖನ್ನಾ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಸಿಸಿಬಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಸೆ.16ರವರೆಗೆ ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ.