Tag: Sanjeev kumar

  • ಉಪ ಸಮರ- ಅಕ್ರಮವಾಗಿ ಸಂಗ್ರಹಿಸಿದ್ದ 33 ಲಕ್ಷ ರೂ.ನಗದು, 29 ಲಕ್ಷ ರೂ. ಮೌಲ್ಯದ ಸೀರೆ ವಶ

    ಉಪ ಸಮರ- ಅಕ್ರಮವಾಗಿ ಸಂಗ್ರಹಿಸಿದ್ದ 33 ಲಕ್ಷ ರೂ.ನಗದು, 29 ಲಕ್ಷ ರೂ. ಮೌಲ್ಯದ ಸೀರೆ ವಶ

    ಬೆಂಗಳೂರು: 33.04 ಲಕ್ಷ ರೂ. ಅಕ್ರಮ ನಗದು ಹಾಗೂ 29,03 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರಿಗೆ ಹಂಚಲು ತಂದಿದ್ದ 33.04 ಲಕ್ಷ ರೂ. ಅಕ್ರಮ ನಗದು ಹಾಗೂ 29,03 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಗಳಿಂದ 95,19,291 ರೂ. ನಗದು ಹಾಗೂ 3.5 ಲಕ್ಷ ರೂ. ಮೌಲ್ಯದ 99 ಸಾವಿರ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಒಟ್ಟು 165 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 156 ಪುರುಷರು, 09 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ 53 ಅಭ್ಯರ್ಥಿಗಳು ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದಾರೆ. ಪ್ರಸ್ತುತ 112 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಾಜಿನಗರದಲ್ಲಿ ಅತಿ ಹೆಚ್ಚು 19 ಅಭ್ಯರ್ಥಿಗಳು ಕಣದಲ್ಲಿದ್ದು, ಹೊಸಕೋಟೆಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.

    ಮತದಾರ ಚೀಟಿ ಇಲ್ಲದಿದ್ದರೂ ಸಮಸ್ಯೆ ಇಲ್ಲ. ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಅಥವಾ ಯಾವುದೇ ಅಧಿಕೃತ ವಿಳಾಸ ಐಡಿ ಕಾರ್ಡ್ ಇದ್ದರೂ ಮತ ಹಾಕಬಹುದು. ಮತದಾರರಿಗೆ ಕಲರ್ ಫೋಟೋ ಇರುವ ಸ್ಮಾರ್ಟ್ ಕಾರ್ಡ್ ಕೊಡುತ್ತಿದ್ದೇವೆ. ಹೊಸ ಮತದಾರರಿಗೆ ಈ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಉಪಚುನಾವಣೆಯಲ್ಲಿ ಒಟ್ಟು 37,77,970 ಮತದಾರರು ಮತದಾನ ಮಾಡಲಿದ್ದಾರೆ. ಈ ಬಾರಿಯೂ ವಿವಿ ಪ್ಯಾಟ್ ಹಾಗೂ ಇವಿಎಂ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

    ಇವಿಎಂ ವಿವಿಪ್ಯಾಟ್ ಗಳ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. 282 ಮೊಬೈಲ್ ಟೀಂಗಳು ಇದಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. 15 ಕ್ಷೇತ್ರಗಳಲ್ಲಿ ಒಟ್ಟು 37,77,970 ಮತದಾರರಿದ್ದು, ಇದರಲ್ಲಿ 19,25,529 ಪುರುಷ, 18,52,027 ಮಹಿಳಾ ಮತದಾರರಿದ್ದಾರೆ. 18 ರಿಂದ 19 ವರ್ಷದ 79,714 ಜನ ಯುವ ಮತದಾರರಿದ್ದಾರೆ ಎಂದು ತಿಳಿಸಿದರು.

  • ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

    ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

    ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿ ಕರೆದರು. ಅನರ್ಹ ಶಾಸಕರ 17 ಕ್ಷೇತ್ರದ ಪೈಕಿ ಆರ್ ಆರ್ ನಗರ ಹಾಗೂ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗದ ಬಗ್ಗೆ ಸ್ಪಷ್ಟನೆಯನ್ನು ನೀಡಿದರು.

    ಕಳೆದ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆಹಿಡಿಯಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದರು.

    ಇನ್ನು ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯಿಲ್ಲ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದು, ಬೋಗಸ್ ಮತದಾನ ನಡೆಯದಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂಬುವುದು ಬಸನಗೌಡ ತುರ್ವಿಹಾಳ ವಾದವಾಗಿದೆ. ಹೀಗಾಗಿ ಎರಡು ಪ್ರಕರಣ ಕೋರ್ಟಿನಲ್ಲಿ ಇರುವ ಕಾರಣದಿಂದ 2 ಕ್ಷೇತ್ರಗಳ ಉಪಚುನಾವಣೆ ಕೋರ್ಟ್ ತೀರ್ಪು ಬರುವವರೆಗೂ ಕೈ ಬಿಡಲಾಗಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಅ.21 ರಂದು ಮತದಾನ ನಡೆಯಲಿದ್ದು ಅ.24 ರಂದು ಮತ ಎಣಿಕೆ ನಡೆಯಲಿದೆ.

  • ರಾಜ್ಯದಲ್ಲಿ ಲೋಕ ಫಲಿತಾಂಶ 4 ಗಂಟೆ ತಡ!

    ರಾಜ್ಯದಲ್ಲಿ ಲೋಕ ಫಲಿತಾಂಶ 4 ಗಂಟೆ ತಡ!

    ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23(ನಾಳೆ)ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು.

    ಲೇಟ್ ಯಾಕೆ?: ಹಿಂದೆ 12 ಗಂಟೆಗೆ ಮುಗಿಯುತ್ತಿತ್ತು. ಆದರೆ ಈಗ ಒಂದು ರೌಂಡ್ ಎಣಿಕೆಗೆ 45 ನಿಮಿಷ ಬೇಕಾಗುತ್ತದೆ. 57 ಅಭ್ಯರ್ಥಿಗಳು ಬೆಳಗಾವಿ ಕ್ಷೇತ್ರದಲ್ಲಿ ಇದ್ದಾರೆ. ಅಲ್ಲದೆ ನಾವು ಬೇಗ ಎಣಿಕೆ ಮಾಡಲು ಸಾಧ್ಯವಿಲ್ಲ. ಬೇಗ ಎಣಿಕೆ ಮುಗಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಸ್ವಲ್ಪ ತಡ ಆಗಬಹುದು. 3 ಗಂಟೆಯ ಒಳಗೆ ಬಹುತೇಕ ರಿಸಲ್ಟ್ ಕೊಡುತ್ತೇವೆ. ಸಂಜೆ 6 ಗಂಟೆ ಒಳಗೆ 28 ಕ್ಷೇತ್ರಗಳ ರಿಸಲ್ಟ್ ಕೊಡಲಾಗುತ್ತದೆ ಎಂದು ಹೇಳಿದರು.

    ಇದೂವರೆಗೆ 98, 606 ಪೋಸ್ಟಲ್ ಬ್ಯಾಲೆಟ್ ಬಂದಿದೆ. 25, 768 ಸರ್ವಿಸ್ ವೋಟರ್ಸ್ ಪೋಸ್ಟಲ್ ಬ್ಯಾಲೆಟ್ ಬಂದಿದೆ. 5 ವಿವಿ ಪ್ಯಾಟ್ ಗಳನ್ನು ವೇಗವಾಗಿ ಎಣಿಕೆ ಮಾಡಲಾಗುತ್ತದೆ ಎಂದರು.

    ಎಣಿಕೆ ಕಾರ್ಯ: ಅಧಿಕೃತ ಪಾಸ್ ಇದ್ದವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ ಕೊಡಲಾಗುವುದು. ಪೊಲೀಸ್ ಸಿದ್ಧತೆ ಮಾಡಲಾಗಿದೆ. ಕೌಂಟರ್ ಸೆಂಟರ್ ಗೆ ವೀಕ್ಷಕರಿಗೆ ಹೊರತುಪಡಿಸಿ ಯಾರೂ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. 18 ರಿಂದ 33 ರೌಂಡ್ಸ್ ಎಣಿಕೆ ನಡೆಯುತ್ತದೆ. ಮತದಾರರ ಸಂಖ್ಯೆ ಆಧಾರದಲ್ಲಿ ಎಷ್ಟು ರೌಂಡ್ಸ್ ಅನ್ನೋದು ಡಿಸೈಡ್ ಆಗುತ್ತದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತೀ ಹೆಚ್ಚು ರೌಂಡ್ಸ್ ಮತ ಎಣಿಕೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

    ಕೌಂಟಿಂಗ್ ಟೇಬಲ್ ಅಳವಡಿಕೆ: ಮತ ಎಣಿಕೆಗೆ 28 ಕ್ಷೇತ್ರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಡಿಷನಲ್ ಎಆರ್ ಓ- 180  ಮಂದಿ ಇರಲಿದ್ದಾರೆ. 28 ಲೋಕಸಭಾ ಹಾಗೂ 2 ಕ್ಷೇತ್ರಗಳ ಬೈ ಎಲೆಕ್ಷನ್ ಮತ ಎಣಿಕೆ 23ರಂದು ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಶೇ. 80.23 ಅತೀ ಹೆಚ್ಚು ಮತದಾನ ಮಂಡ್ಯದಲ್ಲಿ ಆಗಿದೆ. ದಕ್ಷಿಣ ಕನ್ನಡದಲ್ಲಿ ಶೇ. 77.90, ತುಮಕೂರಿನಲ್ಲಿ ಶೇ.77.90 ಮತದಾನವಾಗಿತ್ತು. ಶೇ.53.47 ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. 28 ಕ್ಷೇತ್ರಗಳಲ್ಲಿ 461 ಮಂದಿ ಕಣದಲ್ಲಿದ್ದಾರೆ. 3224 ಕೌಂಟಿಂಗ್ ಟೇಬಲ್ ಗಳನ್ನ ಅಳವಡಿಸಲಾಗಿದೆ ಎಂದರು.

  • ಗಮನಿಸಿ, ಮತದಾನದ ಅವಧಿ 1 ಗಂಟೆ ವಿಸ್ತರಣೆ

    ಗಮನಿಸಿ, ಮತದಾನದ ಅವಧಿ 1 ಗಂಟೆ ವಿಸ್ತರಣೆ

    ಬೆಂಗಳೂರು: ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ ಎಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿದ್ದಾರೆ.

    ಬೆಳಗ್ಗೆ 7 ಘಂಟೆಯಿಂದ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಸಂಜೆ 5 ಘಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗುತಿತ್ತು ಎಂದು ತಿಳಿಸಿದರು.

    ಮತದಾನದ ಜಾಗೃತಿಗೆ ಸಾಹಿತಿ ಚಂದ್ರಶೇಖರ ಕಂಬಾರ, ನಟ ಪುನೀತ್, ನಟಿ ಪ್ರಣಿತ ಅವರನ್ನ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿರೋದಾಗಿ ತಿಳಿಸಿದರು.

    ಇದುವರೆಗೆ 155 ನಾಮಪತ್ರ ಸಲ್ಲಿಕೆಯಾಗಿದೆ. ರಾಜ್ಯದ ವಿವಿಧೆಡೆ 34 ಕೋಟಿ ರೂ. ಹಣವನ್ನು ಸೀಜ್ ಮಾಡಲಾಗಿದೆ. ಇವತ್ತು ದೇವನಹಳ್ಳಿಯಲ್ಲಿ 52 ಲಕ್ಷ, ಹೂವಿನಹಡಗಲಿ ಬಳಿ 10 ಲಕ್ಷ ಮೌಲ್ಯದ ಬಂಗಾರ ಹಾಗೂ 1.58 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.

  • ರಾಜ್ಯದಲ್ಲಿ ಮತದಾನ ಜಾಗೃತಿಗೆ ಭಟ್ಟರ ತಾಳ-ಮೇಳ..!

    ರಾಜ್ಯದಲ್ಲಿ ಮತದಾನ ಜಾಗೃತಿಗೆ ಭಟ್ಟರ ತಾಳ-ಮೇಳ..!

    – ಚುನಾವಣಾ ಗೀತೆಯ ಚಿತ್ರೀಕರಣದಲ್ಲಿ ಯೋಗರಾಜ್ ಭಟ್ ಮತ್ತು ತಂಡ ಬ್ಯುಸಿ

    ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವಂತೆ ಮಾಡಲು ಮತ್ತು ಮತದಾರರನ್ನು ಜಾಗೃತಿಗೊಳಿಸುವ ಸಲುವಾಗಿ ಚುನಾವಣಾ ಆಯೋಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಹಳ ಸುಲಭವಾಗಿ ಸಾಮಾನ್ಯ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಯೋಗರಾಜ್ ಭಟ್ಟರ ಗೀತೆಯ ಮೊರೆ ಹೋಗಿದೆ.

    ಹೌದು. ಕನ್ನಡದ ಚಿತ್ರರಂಗದ ಜನಪ್ರಿಯ ನಿರ್ದೇಶಕ, ತಮ್ಮ ಸಾಲುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಬಲ್ಲ ಪ್ರಸಿದ್ಧ ಗೀತ ಸಾಹಿತಿ ಯೋಗರಾಜ್ ಭಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಹೊಸ ಹಾಡೊಂದನ್ನು ರಚಿಸಿದ್ದಾರೆ. ಈ ಮೂಲಕ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ.

    ಯೋಗರಾಜ್ ಭಟ್ ಬರೆದ ಈ ಚುನಾವಣಾ ಗೀತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಇತರ ಗಾಯಕರು ಹಾಡಲಿದ್ದಾರೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂ, ವಿಧಾನಸೌಧ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ ಹೀಗೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸುವ ನೂರಾರು ಸಾಂಸ್ಕೃತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

    ಇನ್ನು ಈ ಚುನಾವಣಾ ಗೀತೆಯ ಬಗ್ಗೆ ಮಾತನಾಡಿರುವ ಯೋಗರಾಜ್ ಭಟ್, `ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರ ಪ್ರಯತ್ನದಿಂದ ಈ ಗೀತೆ ಮೂಡಿಬರುತ್ತಿದೆ. ಇದರ ಹಿಂದಿನ ಕೀರ್ತಿ ಅವರಿಗೆ ಸಲ್ಲಬೇಕು. ಅವರು ಈ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿಸಿದ್ದರಿಂದ ನಾವು ಮಾಡಲು ಮುಂದಾದೆವು. ಇದರ ಚಿತ್ರೀಕರಣಕ್ಕೆ ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಪ್ರಾಜೆಕ್ಟ್ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ’ ಎಂದರು.

    ಈ ಗೀತೆಯ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ ಎಂದರು.

    ಒಟ್ಟಾರೆ ಯೋಗರಾಜ್ ಭಟ್ಟರ ಈ ಚುನಾವಣಾ ಗೀತೆಯಲ್ಲಿ ಹೊಸ ಥರದ ಧಮ್, ರಿದಮ್ ಎರಡೂ ಇದ್ದು ಭಟ್ಟರ ಇತರೆ ಗೀತೆಗಳಂತೆ ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಈ ಚುನಾವಣಾ ಗೀತೆ ಮತದಾರರ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

     

  • ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಬೆಂಗಳೂರು: ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಇವಿಎಂ ಯಂತ್ರಗಳು ಬಂದಿವೆ. ಗುಜರಾತ್, ಉತ್ತರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ದಿಂದ ಸುಮಾರು 85,600 ಇವಿಎಂಗಳು ಬಂದಿವೆ. ಅಲ್ಲಿ ಬಳಸಲಾಗಿರುವ ಇವಿಎಂ ಯಂತ್ರಗಳೇ ಇಲ್ಲಿಗೆ ಬಂದಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಬಳಸಿರುವ ಇವಿಎಂ ಗಳು ಕರ್ನಾಟಕಕ್ಕೆ ಬಂದಿವೆ ಎಂಬ ಅನುಮಾನದ ಗ್ರಹಿಕೆ ಬೇಡ. ಇದರ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಕ್ರಿಮಿನಲ್ ಸ್ವರೂಪದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೇಳಿದ್ರು.

    ಕರ್ನಾಟಕಕ್ಕೆ ಯಾವುದೋ ಒಂದು ರಾಜ್ಯದಿಂದ ಇವಿಎಂ ಯಂತ್ರ ಬಂದಿಲ್ಲ. ಐದು ರಾಜ್ಯಗಳಿಂದ ಇವಿಎಂ ಯಂತ್ರ ಗಳು ಬಂದಿವೆ. ಈ ರೀತಿ ಬಿಂಬಿಸುವುದು ಬೇಡ ಅಂತಾ ಚುನಾವಣಾ ಆಯೋಗ ಮನವಿ ಮಾಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಹೊಸ ಇವಿಎಂ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

    ರಾಜ್ಯ ಚುನಾವಣೆಗಾಗಿ ಈ ಬಾರಿ ಒಟ್ಟು 73,850 ವಿವಿಪ್ಯಾಟ್ ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 56,290 ಹೊಸ ವಿವಿಪ್ಯಾಟ್ ಗಳನ್ನ ಬಿಇಎಲ್ ನಿಂದ ಈಗಾಗಲೇ ತರಲಾಗಿದೆ. ಇನ್ನುಳಿದ 17,560 ವಿವಿಪ್ಯಾಟ್ ಗಳನ್ನ ಬಿಇಎಲ್ ಮತ್ತು ಗುಜರಾತ್ ನಿಂದ ತರಿಸಲಾಗುತ್ತದೆ. 13,000 ಗುಜರಾತ್ ನಿಂದ ಮತ್ತು 4 ಸಾವಿರ ಬಿಇಎಲ್ ನಿಂದ ತರಲಾಗುತ್ತದೆ. ಚುನಾವಣೆಗೆ 85,170 ಬಿಯು(ಬ್ಯಾಲೆಟ್ ಯುನಿಟ್) ಬೇಕಿದ್ದು, 70,190 ಬಿಯು ರಾಜ್ಯಕ್ಕೆ ಬಂದಿದೆ. ಸಿಯು(ಕಂಟ್ರೋಲ್ ಯುನಿಟ್) 70990 ಬೇಕಿದ್ದು, ಅದರಲ್ಲಿ 52110 ಸಿಯು ರಾಜ್ಯಕ್ಕೆ ಬಂದಿದೆ. ಒಟ್ಟು 5 ರಾಜ್ಯದಿಂದ ಮೆಷೀನ್ ಗಳು ಬರುತ್ತಿವೆ ಎಂದು ತಿಳಿಸಿದ್ರು.

    ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

    ಈವರೆಗೆ 30 ಕೋಟಿ ರೂ. ಹಣ ಖರ್ಚು: ಈ ಬಾರಿ ವಿವಿಪ್ಯಾಟ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ಮ್ಯಾನ್ ಪವರ್ ಹೆಚ್ಚು ಬೇಕು. 25% ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಕಳೆದ ಬಾರಿ ಪೋಲಿಸರನ್ನ ಹೊರತುಪಡಿಸಿ 2.75 ಲಕ್ಷ ಸಿಬ್ಬಂದಿಯನ್ನ ಬಳಸಲಾಗಿತ್ತು. ಆದ್ರೆ ಈ ಬಾರಿ 3.25 ಲಕ್ಷ ಸಿಬ್ಬಂದಿಯನ್ನ ಬಳಸಲಾಗುತ್ತದೆ. ಇಲ್ಲಿಯವರೆಗೆ 30 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ 1.14 ಕೋಟಿ ಹಣದಂತೆ 224 ಕ್ಷೇತ್ರಕ್ಕೆ ಖರ್ಚಾಗಬಹುದು ಎಂದು ಸಂಜೀವ್ ಕುಮಾರ್ ಹೇಳಿದ್ರು.

    ತಪ್ಪು ಆಕ್ಷೇಪಣೆ ಸಲ್ಲಿಸಿದ್ರೆ ಕ್ರಮ: ಮತ ಚಲಾಯಿಸುವುದರ ಬಗ್ಗೆ ಅನುಮಾನ ವಿಚಾರವಾಗಿ ಮಾತನಾಡಿದ ಅವರು, ಮತ ಚಲಾಯಿಸಿದ ಮೇಲೆ ಮತ ಬೇರೆಯವರಿಗೆ ಹೋಗಿದೆ ಎಂದು ಅನುಮಾನ ಬಂದ್ರೆ ಆ ಮತದಾರ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಅಂದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತದಾನ ಮಾಡಿದ ನಂತರ ಮತದಾರ ಪರಿಶೀಲನೆ ಮಾಡಬಹುದು. ಯಾರಿಗೆ ಮತ ಚಲಾಯಿಸಿದ್ದೇವೆಂದು 7 ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದು ಎಂದು ಹೇಳಿದ್ರು.

    ರಾಜ್ಯದಲ್ಲಿ ಒಟ್ಟು 4,96,56,059 ಮತದಾರರಿದ್ದಾರೆ. 4,552 ತೃತೀಯಲಿಂಗಿಗಳು, 2,51,79,219 ಪುರುಷರು ಹಾಗೂ 2,44,72,288 ಮಹಿಳಾ ಮತದಾರರಿದ್ದಾರೆ. 15.42 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದೆ. ಶೃಂಗೇರಿ ಅತ್ಯಂತ ಕಡಿಮೆ ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 1,62,108 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 5,81,408 ಮತದಾರರಿದ್ದಾರೆ. ಹಾಗೂ ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮಹಿಳಾ ಮತದಾರರು ಹೊಂದಿರುವ ಕ್ಷೇತ್ರವಾಗಿದ್ದು, 2,69,878 ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಫೆಬ್ರವರಿ 28ರಿಂದ ಪುನಃ ಮತದಾರರ ತಿದ್ದುಪಡಿ/ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ರು.