Tag: Sanjay nagar

  • ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ

    ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ

    ಬೆಂಗಳೂರು: ಮಾಜಿ ಮೇಯರ್ (Former Mayor) ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ (Theft) ಮಾಡಿರುವ ಘಟನೆ ಬೆಂಗಳೂರಿನ (Bengaluru) ಸಂಜಯನಗರದಲ್ಲಿ (Sanjay Nagar) ನಡೆದಿದೆ.

    ನಗರದ ಆರ್‌ಎಂವಿ 2ನೇ ಹಂತದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯ ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಯಿಂದ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ

    ಒಟ್ಟು 1,29,17,000 ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಾಚ್‌ಗಳು ಹಾಗೂ ನಗದು ಕಳ್ಳತನ ಮಾಡಲಾಗಿದೆ. 99,75,000 ರೂ. ಮೌಲ್ಯದ 1,425 ಗ್ರಾಂ ಚಿನ್ನಾಭರಣ, 18,92,000 ರೂ. ಮೌಲ್ಯದ 22 ಕೆಜಿ ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್‌ಗಳು ಹಾಗೂ 4 ಲಕ್ಷ ರೂ. ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಆರ್.ನಾರಾಯಣಸ್ವಾಮಿ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ

  • ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ

    ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ

    ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶ ಮಾಡಿದ ಬೆನ್ನಲ್ಲೇ ಇಂದು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆಯಿಂದ ಹೊರಬಂದವರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದರೆ, ಇಲ್ಲಿ ಮಾತ್ರ ಪೊಲೀಸರ ಮೇಲೆಯೇ ಹಲ್ಲೆ ನಡೆದಿದೆ.

    ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದುರ್ವರ್ತನೆ ತೋರಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಚೆಕ್ ಪೊಸ್ಟ್ ನಲ್ಲಿ ಗಾಡಿ ತಪಾಸಣೆ ಮಾಡಿದ್ದಾರೆ. ಅಲ್ಲದೆ ಮನೆಯಿಂದ ಹೊರಗೆ ಬಂದಿದ್ದಕ್ಕೆ ಸಾರ್ವಜನಿಕರನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಪೊಲೀಸರನ್ನ ನೆಲಕ್ಕೆ ತಳ್ಳಿ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ.

    ಘಟನೆಯಿಂದಾಗಿ ಪೊಲೀಸ್ ಪೇದೆಗಳಿಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ, ಪೊಲೀಸರು ಎಲ್ಲಾ ಅಪಾಯಗಳನ್ನು ಎದುರಿಸಿಕೊಂಡು ನಮಗೋಸ್ಕರ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

  • ಸಂಜಯ್ ನಗರ ಠಾಣೆ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್

    ಸಂಜಯ್ ನಗರ ಠಾಣೆ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್

    – ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ?
    – ಸಿಬ್ಬಂದಿಯ ಚಳಿ ಬಿಡಿಸಿದ ಪೊಲೀಸ್ ಆಯುಕ್ತರು

    ಬೆಂಗಳೂರು: ಸಂಜಯ್ ನಗರ ಪೊಲೀಸ್ ಠಾಣೆಗೆ ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಂಜಯ್ ನಗರ ಠಾಣೆಯಲ್ಲಿ ಬರೋಬ್ಬರಿ 9 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳಿಂದ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರು ಠಾಣೆಯ ಭೇಟಿ ನೀಡಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

    ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ? ಇಷ್ಟೊಂದು ಪ್ರಕರಣಗಳು ನಡೆದರೂ ಆರಾಮಾಗಿ ಇದ್ದೀರಾ. ಆರೋಪಿಗಳ ಬಂಧನ ಯಾಕೆ ಆಗಿಲ್ಲ ಎಂದು ಚಳಿ ಬಿಡಿಸಿದರು.

    ಜೆಡಬ್ಲ್ಯು ಮ್ಯಾರಿಯೇಟ್ ಮಾಲೀಕ ದೀಪಕ್ ರಹೇಜ ಮತ್ತು ಪುತ್ರ ಆದಿತ್ಯ ರಹೇಜ ರಕ್ಷಣೆಗೆ ಸಂಜಯ್‍ನಗರ ಪೊಲೀಸರು ನಿಂತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 2014ರಲ್ಲಿ ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿತ್ತು. ಅಪ್ಪ-ಮಗ ಸೇರಿ ಸಾರ್ವಜನಿಕರಿಗೆ ಒಂದು ಕೋಟಿ ವಂಚನೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಇಬ್ಬರನ್ನೂ ಬಂಧಿಸಿಲ್ಲ. ಸಾಕಷ್ಟು ಬಾರಿ ವಾರೆಂಟ್ ಜಾರಿಯಾದರೂ ಬಂಧನವಾಗಿಲ್ಲ ಎಂದು ಗುಡುಗಿದರು.

    ಉಮೇಶ್ ನೋಡಿ ಇದು ಸರಿಯಾಗಿ ತನಿಖೆಯಾಗಬೇಕು. ಕೋರ್ಟ್ ನಿಂದ ಉದ್ಘೋಷಿತ ಅಪರಾಧಿ ಅಂತ ಸೂಚಿಸಿದರೂ ಆರೋಪಿಗಳನ್ನು ಹಿಡಿದಿಲ್ಲ. ಯಾರ್ಯಾರು ಸಿಬ್ಬಂದಿ ಜೆಡಬ್ಲ್ಯು ಮ್ಯಾರಿಯೇಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು.

    ಈ ವೇಳೆ ಅಲೋಕ್ ಕುಮಾರ್ ಅವರು, ಸಂಜಯನಗರ ಮೋಸ್ಟ್ ವಾಂಟೆಡ್ ರೌಡಿ ಯಾರು ಎಂದು ಪ್ರಶ್ನಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಂಜಯ್‍ನಗರ ಸಿಬ್ಬಂದಿ, ಶರಣಪ್ಪ ಸರ್ ಅಂತ ಉತ್ತರಿಸಿದರು. ಆಗ ಅಲೋಕ್ ಕುಮಾರ್ ಅವರು, ಯಾರಪ್ಪ ನೀನು? ದೊಡ್ಡ ರೌಡಿಯಾ? ಯಾವ ಊರು, ಸಂಜಯ್‍ನಗರದ ದಾದಾ ಆಗ್ಬೇಕಾ ನೀನು, ಎಷ್ಟು ವಯಸ್ಸು ಎಂದು ರೌಡಿ ಶರಣಪ್ಪಗೆ ಕೇಳಿದರು.

    ಅಲೋಕ್ ಕುಮಾರ್ ಅವರ ಖಡಕ್ ಪ್ರಶ್ನೆಗಳಿಗೆ ನಡುಗುತ್ತಲೇ ಉತ್ತರ ನೀಡಿದ ರೌಡಿ ಶರಣಪ್ಪ, ಸರ್ ನಾನು ಗುಲ್ಬರ್ಗ ಮೂಲದವನು. ಆಟೋ ಓಡಿಸುತ್ತಿದ್ದೇನೆ, 19 ವಯಸ್ಸು ಸರ್ ಎಂದು ಹೇಳಿದ. ಆಗ ಅಲೋಕ್ ಕುಮಾರ್ ಅವರು, ನಾನು ಗುಲ್ಬರ್ಗದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆ ರೀತಿ ಬದುಕಿ. ಇಲ್ಲ ಗೊತ್ತಲ್ಲ ಎಂದು ರೌಡಿಶೀಟರ್ ಗೆ ವಾರ್ನಿಂಗ್ ಕೊಟ್ಟರು. ಬಳಿಕ, ಇವನನ್ನ ಕರ್ಕೊಂಡ್ ಹೋಗಿ ಕಟಿಂಗ್ ಶೇವಿಂಗ್ ಮಾಡಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.