ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ವಿವಾದಿತ ‘ಪದ್ಮಾವತ್’ ಚಿತ್ರ ಜನವರಿ 25 ರಂದು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಬಿಡುಗಡೆಗೆ ರಜಪೂತ ಕರ್ಣಿಸೇನಾ ವಿರೋಧ ವ್ಯಕ್ತಪಡಿಸಿ ಪದ್ಮಾವತ್ ಬಿಡುಗಡೆ ದಿನದಂದು ಭಾರತ್ ಬಂದ್ ಗೆ ಕರೆ ನೀಡಿದೆ.
ಪ್ರಸ್ತುತ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದ ಜನವರಿ 25 ರಂದು ದೇಶವ್ಯಾಪ್ತಿ ಬಂದ್ ಗೆ ಕರೆ ನೀಡಲು ಕರ್ಣಿ ಸೇನಾ ನಿರ್ಧರಿಸದೆ. ಬಂದ್ ಯಶಸ್ವಿ ಮಾಡುವುದಾಗಿ ಕರ್ಣಿಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜಪೂತ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರೇಮ ಪ್ರಸಂಗವಿದ್ದು, ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಚಿತ್ರದ ನಿಷೇಧ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದ್ದು, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳ ನಿಷೇಧಕ್ಕೆ ತಡೆ ನೀಡಿತ್ತು. ಅಲ್ಲದೇ ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ತಿಳಿಸಿತ್ತು. ಕೋರ್ಟ್ ಆದೇಶ ನಂತರವೂ ಕರ್ಣಿಸೇನಾ ಮಾತ್ರ ಚಿತ್ರ ಬಿಡುಗಡೆಯಾದರೆ ಹಿಂಸಾತ್ಮಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಚಿತ್ರವನ್ನು ಪ್ರದರ್ಶಿಸುವ ಚಿತ್ರ ಮಂದಿರ ಮಾಲೀಕರಿಗೂ ಸಿನಿಮಾವನ್ನು ಬಿಡುಗಡೆ ಮಾಡದಂತೆ ಕರ್ಣಿಸೇನಾ ಎಚ್ಚರಿಕೆ ನೀಡಿದೆ. ಇದರಿಂದ ಚಿತ್ರಮಂದಿರ ಮಾಲೀಕರು ಸಿನಿಮಾ ಬಿಡುಗಡೆ ಮಾಡಲು ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಎಎನ್‍ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ಚಿತ್ರಮಂದಿರ ಮಾಲೀಕ ಸಂಘದ ಅಧ್ಯಕ್ಷ ರಾಕೇಶ್ ಪಟೇಲ್, ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಯಾವುದೇ ಮಾಲ್ಟಿಪ್ಲೆಕ್ಸ್ ಮಾಲೀಕರು ಚಿತ್ರದ ಪ್ರದರ್ಶನದ ವೇಳೆ ಉಂಟಾಗಬಹುದಾದ ನಷ್ಟವನ್ನು ಬರಿಸಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರ ನಿರ್ದೇಶಕರು ಸಿನಿಮಾವನ್ನು ವಿರೋಧಿಸುತ್ತಿರುವ ಸಂಘಟನೆಗಳ ಆರೋಪಗಳನ್ನು ತಿರಸ್ಕರಿಸಿದ್ದು, ಚಿತ್ರದಲ್ಲಿ ಅಂತಹ ಯಾವುದೇ ದೃಶ್ಯಗಳು ಇಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಹಲವು ನಟರಿಗೆ ಜೀವ ಬೆದರಿಕೆಗಳ ಬಂದಿರುವ ಪರಿಣಾಮ ಚಿತ್ರದ ಪ್ರಚಾರ ಕಾರ್ಯದಿಂದ ಎಲ್ಲಾ ನಟರು ದೂರವಿದ್ದಾರೆ.
ಚಿತ್ರೀಕರಣ ಆರಂಭವಾದ ಸಮಯದಿಂದಲೂ ಸಾಕಷ್ಟು ವಿವಾದಗಳಿಗೆ `ಪದ್ಮಾವತ್’ ಚಿತ್ರ ಕಾರಣವಾಗಿತ್ತು. ಹಲವು ಬಾರಿ ಕತ್ತರಿ ಪ್ರಯೋಗಿಸಿ ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ನಿದೇರ್ಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರವನ್ನು ಜನವರಿ 25 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.



