Tag: Sanjana Doss

  • ಎಲ್ಲೋ ಜೋಗಪ್ಪ ನಿನ್ನರಮನೆ: ಬೆಂಗಳೂರಿಂದ ಹಿಮಾಲಯದವರೆಗಿನ ರೋಚಕ ಪಯಣ!

    ಎಲ್ಲೋ ಜೋಗಪ್ಪ ನಿನ್ನರಮನೆ: ಬೆಂಗಳೂರಿಂದ ಹಿಮಾಲಯದವರೆಗಿನ ರೋಚಕ ಪಯಣ!

    ತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಪ್ರೇಕ್ಷಕರೆಲ್ಲರ ಗಮನ ಸೆಳೆದಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’ (Yello Jogappa Nin Aramane). ಈ ಟ್ರೈಲರ್ ನಲ್ಲಿ ಕಾಣಿಸಿರುವ ತಾಜಾತನ, ಗಹನವಾದ ಕಥನದ ಸುಳಿವುಗಳೆಲ್ಲ ಕಡೇ ಕ್ಷಣದ ಗಾಢ ಕೌತುಕವಾಗಿ ರೂಪಾಂತರ ಹೊಂದಿವೆ. ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಭಾವ ಮೂಡಿಸಿ, ನೋಡಬೇಕೆಂಬ ತುಡಿತ ಹೊಮ್ಮಿಸೋದು ಟ್ರೈಲರ್ ಒಂಥರ ಅಸಲೀ ಸಾರ್ಥಕತೆ. ಈ ನಿಟ್ಟಿನಲ್ಲಿ ಹೇಳೋದಾದರೆ ಸದರಿ ಸಿನಿಮಾ (Cinema) ಆ ವಿಚಾರದಲ್ಲಿ ಯಶ ಕಂಡಿದೆ. ಹೀಗೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಗಳಿಸಿಕೊಂಡಿರೋ ಟ್ರೈಲರ್ ಪ್ರಭೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಕಿರುತೆರೆಯಲ್ಲಿ ಯಶಸ್ವೀ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ಅವರ ಪಾಲಿಗಿದು ಮತ್ತಷ್ಟು ಹುರುಪಿನ ವಿದ್ಯಮಾನ.

    ಏಕೆಂದರೆ, ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನು ಸೂಕ್ಷ್ಮವಾಗಿ ಗ್ರಹಿಸಿ ಗೆದ್ದಿರುವ ಹಯವದನ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ನಿರ್ದೇಶಕರಾಗಿ ಬೆಳ್ಳಿ ತೆರೆಗೆ ಪ್ರವೇಶಿಸುತ್ತಿದ್ದಾರೆ. ಕಿರುತೆರೆಯಲ್ಲಿ ವರ್ಷಗಟ್ಟಲೆ ಪ್ರಸಾರವಾಗಿದ್ದ ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ಹಯವದನ. ಕಿರುತೆರೆಯಲ್ಲಿ ಸೀರಿಯಲ್‌ಗಳನ್ನ ವಾರವಾರವೂ ಕುತೂಹಲ ಮೂಡುವಂತೆ, ಟಿಆರ್‌ಪಿ ರೇಸಿನಲ್ಲಿ ಮುಂಚೂಣಿ ಕಾಯ್ದುಕೊಳ್ಳುವಂತೆ ಕಟ್ಟಿ ಕೊಡುವುದು ಸವಾಲಿನ ಕೆಲಸ. ಅಂಥಾ ಸವಾಲನ್ನು ವರ್ಷಾಂತರಗಳ ಕಾಲ ಎದುರುಗೊಂಡು ಯಶಸ್ವಿ ನಿರ್ದೇಶಕರಾಗಿ ಹಯವದನ ಗೆಲುವು ಕಂಡಿದ್ದಾರೆ. ಅದರ ಫಲವಾಗಿಯೇ ಅಷ್ಟೂ ಸೀರಿಯಲ್ಲಿಗಳು ಕಿರುತೆರೆ ಪ್ರೇಕ್ಷಕರ ನೆನಪಿನಲ್ಲುಳಿದುಕೊಂಡಿವೆ.

    ಇಂತಹ ಹಿನ್ನೆಲೆ ಹೊಂದಿರೋದರಿಂದಲೇ ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ಘೋಶಣೆಯಾದ ಕ್ಷಣದಿಂದಲೂ ಪ್ರೇಕ್ಷಕರು ಅದರತ್ತ ಕಣ್ಣಿಟ್ಟಿದ್ದರು. ಟ್ರೈಲರ್ ಮೂಲಕ ಅವರೆಲ್ಲ ತೃಪ್ತರಾಗಿದ್ದಾರೆ. ಹೀಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದೊಂದಿಗೆ ಬೆಳ್ಳಿ ತೆರೆ ಪ್ರವೇಶಿಸಿರುವ ಹಯವದನ ಈ ಸಿನಿಮಾಕ್ಕಾಗಿ ಹಲವಾರು ವರ್ಷಗಳ ಕಾಲ ಶ್ರಮ ಹಾಕಿದ್ದಾರೆ. ಮಾಡಿದರೆ ಹೊಸ ಬಗೆಯ ಸಿನಿಮಾವನ್ನೇ ಮಾಡಬೇಕೆಂಬುದು ಅವರ ತುಡಿತವಾಗಿತ್ತು. ಬಹುಶಃ ತರಾತುರಿ ಮಾಡಿದ್ದರೆ ಯಾವತ್ತೋ ಸಿನಿಮಾ ನಿರ್ದೇಶಕರಾಗಬಹುದಿತ್ತೇನೋ… ಈಗಿನ ಟ್ರೆಂಡಿಗೆ ತಕ್ಕಂತೆ ಬೇರೆಯದ್ದೇ ಧಾಟಿಯ ಕಥೆಯ ಧ್ಯಾನದಲ್ಲಿದ್ದ ಅವರು ಕಡೆಗೂ ಅಂದುಕೊಂಡಂತೆಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಅಂಥಾದ್ದೊಂದು ತೃಪ್ತ ಭಾವ ಅವರ ಮಾತುಗಳಲ್ಲಿಯೇ ಹೊಮ್ಮುತ್ತದೆ.

    ಸಾಮಾನ್ಯವಾಗಿ ಜರ್ನಿ ಕಥೆಗಳತ್ತ ಕನ್ನಡದಲ್ಲಿ ಎಂದಿಗೂ ನೀಗದಂಥಾದ್ದೊಂದು ಬೆರಗಿದೆ. ಆದರಲ್ಲಿಯೇ ಭಿನ್ನ ಹಾದಿಯಲ್ಲಿ ಈ ಸಿನಿಮಾವನ್ನು ರೂಪಿಸಿರುವ ಸ್ಪಷ್ಟ ಸೂಚನೆ ಟ್ರೈಲರ್ ಮೂಲಕ ಸಿಕ್ಕಿದೆ. ಬೆಂಗಳೂರಿಂದ ಹಿಮಾಲಯದ ವರೆಗಿನ ವಿಶಿಷ್ಟವಾದೊಂದು ಪಯಣದ ಕಥನ ಇಲ್ಲಿದೆ. ಆ ಹಾದಿಯ ಪ್ರತೀ ಹೆಜ್ಜೆಗಳೂ ಪ್ರೇಕ್ಷಕರಿಗೆಲ್ಲ ಆಪ್ತ ಎನಿಸುವಂತೆ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಭಾರತದ ನಾನಾ ಪ್ರದೇಶಗಳಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಒಂದು ಸಿನಿಮಾಕ್ಕಾಗಿ ಒಂದಿಡೀ ಭಾರತ ಸುತ್ತಿ, ಅಲ್ಲಿನ ಚೆಂದದ ಲೊಕೇಷನ್ನುಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದರ ತಾಜಾತನ ಟ್ರೈಲರ್ ನೋಡಿದ ಪ್ರತಿಯೊಬ್ಬರನ್ನೂ ತೀವ್ರವಾಗಿಯೇ ತಾಕಿದೆ.

    ಮೂಲತಃ ಬಾಗಲಕೋಟೆಯವರಾದ ಹಯವದನ ಸಿನಿಮಾ ಕನಸನ್ನಿಟ್ಟುಕೊಂಡು ಬೆಂಗಳೂರು ಸೇರಿಕೊಂಡಿದ್ದವರು. ಅವರ ಪಾಲಿಗೆ ಮೊದಲ ಅವಕಾಶ ಒಲಿದು ಬಂದಿದ್ದು ವೈಶಾಲಿ ಕಾಸರವಳ್ಳಿ ನಿರ್ದೇಶನದ ಮೂಡಲಮನೆ ಧಾರಾವಾಹಿಯ ಮೂಲಕ. ಮುಕ್ತ ಧಾರಾವಾಹಿ ಮೂಲಕ ಟಿ.ಎನ್ ಸೀತಾರಾಮ್ ಅವರ ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ಹಯವದನ ದಶಕಗಳ ಕಾಲ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅಗ್ನಿಸಾಕ್ಷಿ ಮತ್ತು ಶುಭ ಮಂಗಲ ಧಾರಾವಾಹಿಗಳನ್ನು ಬಾಹುಬಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಅರ್ಕಾ ಮೀಡಿಯಾ ವಕ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಅಂಥಾ ಪ್ರತಿಷ್ಠಿತ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆ ಹಯವದನ ಅವರದ್ದು.

    ಇಂತಹ ಸುದೀರ್ಘ ಅನುಭವ ದಕ್ಕಿಸಿಕೊಂಡಿದ್ದ ಅವರು ಕಡೆಗೂ ಒಂದೊಳ್ಳೆ ಕಥೆಯ ಮೂಲಕ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರವನ್ನು ರೂಪಿಸಿದ್ದಾರೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ ೨೧ರಂದು ತೆರೆಗಾಣಲಿದೆ.

  • ಎಲ್ಲೋ ಜೋಗಪ್ಪ ನಿನ್ನರಮನೆ – ಅಲೆಮಾರಿಯಾದರೇ ಅಂಜನ್ ನಾಗೇಂದ್ರ?

    ಎಲ್ಲೋ ಜೋಗಪ್ಪ ನಿನ್ನರಮನೆ – ಅಲೆಮಾರಿಯಾದರೇ ಅಂಜನ್ ನಾಗೇಂದ್ರ?

    ಕಿರುತೆರೆಯಲ್ಲಿ ಸ್ಟಾರ್ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ನಿರ್ದೇಶನದ ಚೊಚ್ಚಲ ಸಿನಿಮಾ `ಎಲ್ಲೋ ಜೋಗಪ್ಪ ನಿನ್ನರಮನೆ’ (Yello Jogappa Nin Aramane). ಈ ವಾರ ಅಂದರೆ, ಫೆಬ್ರವರಿ 21ರಂದು ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ.

    ಪ್ರೇಮವೂ ಸೇರಿದಂತೆ ಬದುಕಿಗೆ ಹತ್ತಿರಾಗಿರುವ ಎಲ್ಲವನ್ನೂ ಒಳಗೊಂಡಂತೆ ಕಾಣಿಸುವ ಈ ಕಥಾನಕ ಸಿನಿಮಾ ಪ್ರೇಮಿಗಳ (Cinema Lovers) ವಲಯದಲ್ಲೊಂದು ಸಕಾರಾತ್ಮಕ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ಚಿತ್ರ ನಾಯಕನಾಗಿ, ಭಿನ್ನ ಚಹರೆಗಗಳಿರುವ ವಿಶೇಷ ಪಾತ್ರದಲ್ಲಿ ನಟಿಸಿರುವವರು ಅಂಜನ್ ನಾಗೇಂದ್ರ. ಈ ಹಿಂದೆ ಕಂಬ್ಳಿಹುಳ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿ ಮನ ಗೆದ್ದಿದ್ದ ಅಂಜನ್ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ಸಂಕೀರ್ಣವಾದ ಪಾತ್ರವನ್ನು ಆವಾಹಿಸಿಕೊಂಡಿರೋದು ಟ್ರೈಲರ್ ಮೂಲಕವೇ ಋಜುವಾತಾಗಿದೆ.

    ಮೂಲತಃ ಹಾಸನದವರಾದ (Hassan) ಅಂಜನ್ ನಾಗೇಂದ್ರ ಎಳವೆಯಿಂದಲೇ ರಂಗಭೂಮಿಯಲ್ಲಿ ಪಳಗಿಕೊಂಡಿರುವ ನಟ. ಇವರ ತಂದೆ ನಾರಾಯಣ್ ಕೂಡಾ ರಂಗಭೂಮಿಯಲ್ಲಿ ಹೆಸರಾಗಿರುವವರು. ಪ್ರೈಮರಿ ಶಾಲಾ ದಿನಗಳಲ್ಲಿಯೇ ಬಣ್ಣ ಹಚ್ಚಿದ ಅಂಜನ್ ಪಾಲಿಗೆ ನಟನೆ ಎಂಬುದು ಕರತಲಾಮಲಕವಾಗಿತ್ತು. ವಿಶೇಷವೆಂದರೆ, ಶಾಲಾ ಕಾಲೇಜು ಹಂತದವರೆಗೂ ಸಿನಿಮಾ ನಟನಾಗಬೇಕೆಂಬ ಕನಸೇನೂ ಅವರಲ್ಲಿರಲಿಲ್ಲ. ಎಂಜಿನಿಯರಿಂಗ್ ಪದವೀಧರರಾದ ಅಂಜನ್ ಕಾಲೇಜು ವ್ಯಾಸಂಗ ನಡೆಸುತ್ತಿರುವಾಗ ಒತ್ತಾಯ ಮಾಡಿ ಸಿನಿಮಾ ಒಂದರ ಆಡಿಷನ್ನಿಗೆ ತೆರಳುವಂತತೆ ಮಾಡಿದ್ದರಂತೆ. ಆ ಕ್ಷಣದಲ್ಲಿಯೇ ಎಲ್ಲರೂ ತನ್ನೊಳಗಿನ ನಟನನ್ನು ಗುರುತಿಸುತ್ತಿದ್ದಾರೆಂಬ ಮನವರಿಕೆಯಾಗಿ, ಆ ಮೇಲಿಂದ ನಟನೆಯತ್ತ ಆಕರ್ಷಿತರಾಗಿದ್ದವರು ಅಂಜನ್.

    ಎಂಜಿನಿಯರಿಂಗ್ ಪದವಿ ಮುಗಿಸಿಕೊಂಡು ಸಿನಿಮಾ ರಂಗದತ್ತ ಹೊರಳಿಕೊಂಡಿದ್ದ ಅಂಜನ್ ಎರಡು ವರ್ಷದ ಗಡುವು ವಿಧಿಸಿಕೊಂಡಿದ್ದರಂತೆ. ಪ್ರಯತ್ನಗಳಾಚೆಗೂ ಆ ಎರಡು ವರ್ಷಗಳಲ್ಲಿ ಏನೂ ಸಾಧ್ಯವಾಗಿರಲಿಲ್ಲ. ಕಡೆಗೂ ಲಾಕ್ ಡೌನ್ ಕಾಲದಲ್ಲಿ ಕಂಬ್ಳಿಹುಳ ಚಿತ್ರದ ನಾಯಕನಾಗೋ ಅವಕಾಶ ಬಂದೊದಗಿತ್ತು. ಅದೇ ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದ ಹಯವದನ ಅದಾಗಲೇ ರೆಡಿಯಾಗಿದ್ದ ಕಥೆಗೆ ಅಂಜನ್ ನಾಯಕನಾಗೋದು ಪಕ್ಕಾ ಎಂಬಂಥಾ ನಿರ್ಧಾರ ಮಾಡಿದಂತಿದ್ದರು. ಕಂಬ್ಳಿಹುಳ ಚಿತ್ರ ನೋಡಿದ ನಂತರ ಅವರೊಳಗೆ ಅಂಜನ್ ನಟನೆಯ ಕಸುವಿನ ಬಗೆಗೊಂದು ನಂಬಿಕೆ ಮೂಡಿಕೊಂಡಿತ್ತು. ಆ ನಂತರ ಕಥಾ ಎಳೆ ಹೇಳಿದ್ದ ಹಯವದನ ಅವರು ರಿಹರ್ಸಲ್ಲಿಗೂ ಅಂಜನ್‌ರನ್ನು ತಯಾರುಗೊಳಿಸಿದ್ದರು.

    ಬೇರೆಯದ್ದೇ ತೆರನಾದ ಕಥೆ ಸಿಕ್ಕಿ, ಭಿನ್ನ ಬಗೆಯ ಪಾತ್ರ ಮಾಡಬೇಕೆಂಬ ತುಡಿತ ಹೊಂದಿದ್ದ ಅಂಜನ್ ಪಾಲಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಕುಟುಂಬ ಸಮೇತರಾಗಿ ಕೂತು ನೋಡುವಂಥಾ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಈ ಸಿನಿಮಾ ಭಾಗವಾಗಿಒರುವ ಬಗ್ಗೆ ಅಂಜನ್ ಅವರೊಳಗೊಂದು ಹೆಮ್ಮೆ ಇದೆ. ಈ ಸಿನಿಮಾ ಮೂಲಕ ನಾಯಕ ನಟನಾಗಿ ತನ್ನ ಬದುಕಿನ ದಿಕ್ಕು ಬದಲಾದೀತೆಂಬ ತುಂಬು ನಂಬಿಕೆಯೂ ಅವರಲ್ಲಿದ್ದಂತಿದೆ. ಈ ಚಿತ್ರದ ಚಿತ್ರೀಕರಣದುದ್ದಕ್ಕೂ ಭಾರತವನ್ನಿಡೀ ಸುತ್ತುವ ಅವಕಾಶ ಅವರ ಪಾಲಿಗೆ ಒದಗಿ ಬಂದಿದೆ. ಸಾಕಷ್ಟು ರಿಸ್ಕು ತೆಗೆದುಕೊಂಡು, ಅತ್ಯಂತ ನೈಜವಾಗಿ ಪಾತ್ರಕ್ಕೆ ಜೀವ ತುಂಬಿರುವ ಖುಷಿಯೂ ಅವರಲ್ಲಿದೆ.

    ಇಡೀ ಭಾರತದ ಅತ್ಯಂತ ಅಪರೂಪದ, ಸುಂದರ ಲೊಕೇಷನ್ನುಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. ಟ್ರೈಲರಿನಲ್ಲಿ ಕಂಡಂಥಾ ತಾಜಾ ತಾಜಾ ದೃಶ್ಯಗಳು ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಚಕಿತಗೊಳಿಸಲಿವೆ ಎಂಬ ಭರವಸೆಯೂ ಅಂಜನ್ ನಾಗೇಂದ್ರ ಅವರಲ್ಲಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 21ರಂದು ತೆರೆಗಾಣಲಿದೆ.

  • ಎಲ್ಲೋ ಜೋಗಪ್ಪ ನಿನ್ನರಮನೆ – ಭರತನಾಟ್ಯ ಪ್ರವೀಣೆಗೊಲಿದ ಚೆಂದದ ಪಾತ್ರ!

    ಎಲ್ಲೋ ಜೋಗಪ್ಪ ನಿನ್ನರಮನೆ – ಭರತನಾಟ್ಯ ಪ್ರವೀಣೆಗೊಲಿದ ಚೆಂದದ ಪಾತ್ರ!

    ವಿಭಿನ್ನ ಕಥನದ ಸುಳಿವಿನೊಂದಿಗೆ ಎಲ್ಲರನ್ನೂ ಸೆಳೆದುಕೊಂಡಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ (Yello Jogappa Nin Aramane Movie) ಈ ವಾರ ಅಂದರೆ ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಕಿರುತೆರೆಯಲ್ಲಿ ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಸೀರಿಯಲ್‌ಗಳ ಮೂಲಕ ಯಶಸ್ವಿ ನಿರ್ದೇಶಕರು ಅನ್ನಿಸಿಕೊಂಡಿರುವ ಹಯವದನ (Hayavadana) ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.

    ಒಂದು ಅಪರೂಪದ ಕಥಾನಕದೊಂದಿಗೆ ಅವರು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುವ ಸುಳಿವು ಟ್ರೈಲರ್ ಮೂಲಕ ನಿಖರವಾಗಿಯೇ ಸಿಕ್ಕಿದೆ. ಅಂಜನ್ ನಾಗೇಂದ್ರ (Anjan Nagendra) ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಮಂಗಳೂರು ಹುಡುಗಿ ವೆನ್ಯಾ ರೈ (Venya rai) ಹಾಗೂ ಭರತನಾಟ್ಯ ಪ್ರವೀಣೆ ಸಂಜನಾ ದಾಸ್ ನಾಯಕಿಯರಾಗಿ ನಟಿಸಿದ್ದಾರೆ.

    ನಿರ್ದೇಶಕ ಹಯವದನ ಅವರು ವರ್ಷಗಟ್ಟಲೆ ಶ್ರಮ ವಹಿಸಿ ಈ ಸಿನಿಮಾದ ಕಥೆಯನ್ನು ಸಿದ್ಧ ಪಡಿಸಿದ್ದಾರೆ. ಅಷ್ಟೇ ಶ್ರದ್ಧೆಯಿಂದ, ಸೂಕ್ಷ್ಮತೆಯಿಂದ ಈ ಸಿನಿಮಾದ ಪ್ರತೀ ಪಾತ್ರಗಳಿಗೆ ಒಪ್ಪುವಂಥಾ ನಟ ನಟಿಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಥಾದ್ದೊಂದು ಜವಾಬ್ದಾರಿಯುತ ಹುಡುಕಾಟದಲ್ಲಿ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಕೆ ಸಂಜನಾ ದಾಸ್. ಈಕೆ ಈ ಹಿಂದೆ ಕೇಟಿಎಂ ಅಂತೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾದ ಟೀಸರ್ ನೋಡಿದ್ದ ಹಯವದನ ಅವರಿಗೆ ಈ ಸಿನಿಮಾದ ಒಂದು ಪಾತ್ರಕ್ಕೆ ಈ ಹುಡುಗಿಯೇ ಸೂಕ್ತ ಅಂತನ್ನಿಸಿದ್ದೇ ಸಂಜನಾರ ಲಕ್ಕು ಕುದುರಿದಂತಾಗಿದೆ.

    ಅಂದಹಾಗೆ, ಸಂಜನಾ ದಾಸ್ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ತಮಿಳು ಹುಡುಗಿಯಾಗಿ ನಟಿಸಿದ್ದಾರೆ. ಅಡ್ವೆಂಚರ್ ಅನ್ನು ಇಷ್ಟಪಡುವ ಲವಲವಿಕೆಯ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿಯೇ ಅವರು ಜೀವ ತುಂಬಿದ್ದಾರೆ. ಸಂಜನಾ ಪಾತ್ರದ ಚಿತ್ರೀಕರಣ ಮನಾಲಿಯಲ್ಲಿ ನಡೆದಿದೆ. ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಸಂಜನಾ ಪಾಲಿಗೆ ನಟನೆ ಎಂಬುದು ಎಳವೆಯಿಂದಲೇ ಆವರಿಸಿಕೊಂಡಿದ್ದ ಸೆಳೆತ. ತಾನು ನಿರ್ವಹಿಸಬಹುದಾದ ಪಾತ್ರಗಳ ಬಗ್ಗೆ ಸಹಜವಾಗಿಯೇ ಒಂದಷ್ಟು ಕಲ್ಪನೆಗಳು ಸಂಜನಾಗಿದ್ದವು. ಅಂಥದ್ದೊಂದು ಪಾತ್ರ ಎಲ್ಲೋ ಜೋಗಪ್ಪ ನಿನ್ನರಮನೆ ಮೂಲಕ ಒಲಿದು ಬಂದ ಬಗ್ಗೆ ಆಕೆ ಥ್ರಿಲ್ ಆಗಿದ್ದಾರಂತೆ.

    ನಟಿಯಾಗಬೇಕೆಂಬ ಬಯಕೆಯಿಂದ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸ್ಕೂಲಿನಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಂಡಿದ್ದವರು ಸಂಜನಾ ದಾಸ್. ಆ ಅನುಭವವೆಲ್ಲ ಈ ಸಿನಿಮಾ ಪಾತ್ರ ಪೋಷಣೆಯಲ್ಲಿ ಸಹಕಾರಿಯಾಗಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 21ರಂದು ತೆರೆಗಾಣಲಿದೆ.