Tag: Sanitizer

  • ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ

    ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ

    ಧಾರವಾಡ: ಲಾಕ್‍ಡೌನ್ ಹಿನ್ನೆಲೆ ಮದ್ಯ ಸಿಗದಕ್ಕೆ ಕಂಗಾಲಾದ ಮದ್ಯವ್ಯಸನಿಯೊಬ್ಬ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಗಾಂಧಿಚೌಕ್ ಬಾಲಾಜಿ ಓಣಿ ನಿವಾಸಿ ದೀಪಕ್ ಶಿಂಧೆ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದು, ಕುಡಿಯಲು ಮದ್ಯ ಸಿಗದಕ್ಕೆ ತನ್ನ ಕೈಗೆ ಸಿಕ್ಕ ಸ್ಯಾನಿಟೈಜರ್ ಗಳನ್ನೇ ಕುಡಿದು ಬಿಟ್ಟಿದ್ದಾನೆ. ಸ್ಯಾನಿಟೈಜರ್ ಕುಡಿದ ತಕ್ಷಣವೇ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶಹರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಹಿಂದೆ ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ-ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದಳು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಹೀಗಾಗಿ ಸ್ಯಾನಿಟೈಜರ್ ಕುಡಿದ ಪರಿಣಾಮ ಸಾವನ್ನಪ್ಪಿದ್ದರು.

  • ಒಂದು ಲಕ್ಷ ಮಾಸ್ಕ್ ವಿತರಣೆಗೆ ಎಂಎಲ್‍ಸಿ ಗೋಪಾಲಸ್ವಾಮಿ ವ್ಯವಸ್ಥೆ

    ಒಂದು ಲಕ್ಷ ಮಾಸ್ಕ್ ವಿತರಣೆಗೆ ಎಂಎಲ್‍ಸಿ ಗೋಪಾಲಸ್ವಾಮಿ ವ್ಯವಸ್ಥೆ

    ಹಾಸನ: ಹಗಲು ರಾತ್ರಿ ಕೊರೊನಾ ಕರ್ಫ್ಯೂಗಾಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಗೌರವ ಸಲ್ಲಿಸುವ ಸಲುವಾಗಿ ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಗೌರವ ಸಲ್ಲಿಸಿದ್ದಾರೆ.

    ಸರ್ಕಾರ ಈಗಾಗಲೇ ಎಲ್ಲರೂ ಮಾಸ್ಕ್ ಧರಿಸಿಯೇ ಹೊರಗಡೆ ಬರಬೇಕು ಎಂದು ಖಡಕ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಇಂದು ಎಂಎಲ್‍ಸಿ ಗೋಪಾಲಸ್ವಾಮಿ ಸುಮಾರು ಒಂದು ಲಕ್ಷ ಮಾಸ್ಕ್ ಅನ್ನು ಚನ್ನರಾಯಪಟ್ಟಣ ತಾಲೂಕಿನ ಜನರಿಗೆ ವಿತರಿಸುವ ವ್ಯವಸ್ಥೆ ಮಾಡಿದರು. ತಾಲೂಕಿನಲ್ಲಿ ಸುಮಾರು 75 ಸಾವಿರ ಪಡಿತರದಾರರಿದ್ದು ನ್ಯಾಯಬೆಲೆ ಅಂಗಡಿ ಮೂಲಕ ಪ್ರತಿಯೊಬ್ಬರಿಗೂ ಮಾಸ್ಕ್ ಸಿಗುವಂತೆ ತಾವೇ ಸ್ವತಃ ನ್ಯಾಯಬೆಲೆ ಅಂಗಡಿಗೆ ತೆರಳಿ ಮಾಸ್ಕ್ ಬಾಕ್ಸ್ ವಿತರಿಸಿದರು.

    ಅಷ್ಟೇ ಅಲ್ಲದೆ ಆಶಾ ಕಾರ್ಯಕರ್ತೆಯರು, ಪೊಲೀಸರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಪ್ರತಿಯೊಬ್ಬರಿಗೂ ತಲುಪುವಂತೆ ಸೂಚಿಸಿ ಅಧಿಕಾರಿಗಳಿಗೆ ಮಾಸ್ಕ್ ಬಾಕ್ಸ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದರು.

  • ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಹುಬ್ಬಳ್ಳಿ: ಸ್ಯಾನಿಟೈಜರ್ ಕುಡಿದು ಅಕ್ಕ-ತಮ್ಮ ಸಾವನ್ನಪ್ಪಿದ ಘಟನೆಯಿಂದ ಹುಬ್ಬಳ್ಳಿಯ ಕಲಘಟಗಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಕಲಘಟಗಿಯ ಗಂಬ್ಯಾಪುರದಲ್ಲಿ 15 ಜನ ಮದ್ಯವ್ಯಸನಿಗಳು ಸ್ಯಾನಿಟೈಜರ್ ಸೇವಿಸಿದ್ದರು. ಇದೇ ಸ್ಯಾನಿಟೈಜರ್ ಕುಡಿದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಅಕ್ಕ ಹಾಗೂ ತಮ್ಮ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ಇವರ ಜೊತೆ ಇನ್ನು 13 ಜನರು ಸ್ಯಾನಿಟೈಸರ್ ಸೇವನೆ ಮಾಡಿದ್ದರು ಎನ್ನಲಾಗಿದೆ. ಅದರಲ್ಲಿ ನಾಲ್ವರನ್ನು ಕಲಘಟಗಿ ಇನ್ಸ್ ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ. ತಲೆಮರೆಸಿಕೊಂಡಿದ್ದ 9 ಜನರಿಗೆ ಹುಡುಕಾಟ ನಡೆಸುತ್ತಿದ್ದಾರೆ.

    ಗ್ರಾಮಕ್ಕೆ ಕಲಬೆರಕೆ ಸ್ಯಾನಿಟೈಸರ್ ತಂದವರನ್ನು ಹುಡುಕಲು ತಂಡ ರಚಿಸಲಾಗಿದ್ದು, ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪೊಲೀಸರು ಜನತೆಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯ ವಾಹನದ ಮುಖಾಂತರ ಗ್ರಾಮಸ್ಥರು ಯಾರು ಭಯಪಡದೇ ಬಂದು ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಯಾರೂ ಸ್ಯಾನಿಟೈಜರ್ ಸೇವಿಸವೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

  • ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ ಕಲಘಟಗಿ ಸಿಪಿಐ ವಿಜಯ ಬಿರಾದಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಹಿತಿ ಬಹಿರಂಗವಾಗಿದೆ. 13 ಜನರಲ್ಲಿ 4 ಜನರಿಗೆ ಗ್ರಾಮದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಘಟಗಿಯಿಂದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಉಳಿದ 9 ಜನರಿಗೆ ಮತ್ತು ಗ್ರಾಮಕ್ಕೆ ಕಲಬೆರಕೆ ಮದ್ಯ ತಂದವರನ್ನು ಹುಡುಕಲು ತಂಡ ರಚನೆ ಮಾಡಲಾಗಿದೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಸ್ಯಾನಿಟೈಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಸ್ಯಾನಿಟೈಸರ್‍ನಿಂದಾಗಿ ಗ್ರಾಮದಲ್ಲಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.

    ಭಾನುವಾರ ಇಬ್ಬರ ಸಾವು
    ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದರು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ ಮೂರು ದಿನಗಳಿಂದ ಸ್ಯಾನಿಟೈಸರ್ ದಾಸರಾಗಿದ್ದರು.

  • ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ವ್ಯಕ್ತಿ ಸಾವು

    ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ವ್ಯಕ್ತಿ ಸಾವು

    ಹುಬ್ಬಳ್ಳಿ: ಲಾಕ್‍ಡೌನ್ ಎಫೆಕ್ಟ್ ನಿಂದ ಮದ್ಯ ಸಿಗದೆ ಮದ್ಯ ವ್ಯಸನಿಗಳು ಪರದಾಡುತ್ತಿದ್ದಾರೆ. ಈ ಮಧ್ಯೆ ಎಣ್ಣೆ ಸಿಗದೆ ವ್ಯಕ್ತಿಯೋರ್ವ ಸ್ಯಾನಿಟೈಸರ್ ಕುಡಿದು ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.

    ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ವೆಂಕಪ್ಪ ಕುರುವಿನಕೊಪ್ಪ(45) ಮೃತ ವ್ಯಕ್ತಿ. ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದ ಪರಿಣಾಮ ಮೂರು ದಿನಗಳ ಹಿಂದೆ ಬಸವರಾಜ್ ಅಸ್ವಸ್ಥಗೊಂಡಿದ್ದನು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಸವರಾಜ್‍ನನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆತ ಸಾವನ್ನಪ್ಪಿದ್ದಾನೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟ ಸ್ಥಗಿತಗೊಂಡಿದ್ದು, ಎಣ್ಣೆ ಸಿಗದೇ ಮದ್ಯ ಪ್ರಿಯರು ಬೇಸತ್ತು ಹೋಗಿದ್ದಾರೆ. ಈ ಹಿಂದೆ 21 ದಿನಗಳ ಲಾಕ್‍ಡೌನ್ ಏಪ್ರಿಲ್ 14ರಂದು ಮುಗಿಯುತ್ತೆ. ಆ ಬಳಿಕ ಮದ್ಯದ ಅಂಗಡಿ ತೆರೆಯುತ್ತೆ ಎಂದು ಮದ್ಯ ವ್ಯಸನಿಗಳು ಖುಷಿಯಲ್ಲಿದ್ದರು. ಆದರೆ ಲಾಕ್‍ಡೌನ್ ಅವಧಿಯನ್ನು ಮೇ 3ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಹಿನ್ನೆಲೆ ಮದ್ಯ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಮದ್ಯ ಪ್ರಿಯರ ಆಸೆಗೆ ಕಣ್ಣೀರು ಎರಚಿದಂತಾಗಿದೆ.

  • ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಕ್ನೋ: ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಲಾಕ್‍ಡೌನ್ ಅವಧಿಯಲ್ಲಿ ಜನಿಸಿದ ಮಗುವಿಗೆ ಪೋಷಕರು ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯ ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತಮ್ಮ ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಸ್ಯಾನಿಟೈಸರ್ ಗೆ ಇದೆ. ಈ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ನನ್ನ ಮಗ ಹುಟ್ಟಿದ್ದಾನೆ. ಹೀಗಾಗಿ ಮಗನಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.

    ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಕ್ಕಿದ್ದರು. ಈ ಹಿಂದೆ ಗೋರಖ್ ಪುರದಲ್ಲಿಯೂ ಹೀಗೆ ವಿಚಿತ್ರ ನಾಮಕರಣ ಮಾಡಿದ ಘಟನೆ ನಡೆದಿತ್ತು. ಜನತಾ ಕರ್ಫ್ಯೂ ದಿನ ಜನಿಸಿದ ಹೆಣ್ಣು ಮಗುವಿಗೆ ಪೋಷಕರು ‘ಕೊರೊನಾ’ ಎಂದೇ ನಾಮಕರಣ ಮಾಡಿದ್ದರು.

    ಆ ಬಳಿಕ ಲಾಕ್‍ಡೌನ್ ಅವಧಿಯಲ್ಲಿ ಮಗು ಜನಿಸಿದ್ದಕ್ಕೆ ಮಗುವಿಗೆ ‘ಲಾಕ್‍ಡೌನ್’ ಎಂದು ಪೋಷಕರು ನಾಮಕರಣ ಮಾಡಿದ್ದರು. ಆ ಬಳಿಕ ರಾಮ್‍ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ‘ಕೋವಿಡ್’ ಎಂದೇ ಹೆತ್ತವರು ಹೆಸರಿಟ್ಟಿದ್ದ ಸುದ್ದಿ ಹೆಚ್ಚು ಸದ್ದು ಮಾಡಿತ್ತು.

  • ವೈದ್ಯರು, ಸರ್ಕಾರಿ ಸಿಬ್ಬಂದಿ ಹಿತಕ್ಕಾಗಿ ಪಣ – 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ

    ವೈದ್ಯರು, ಸರ್ಕಾರಿ ಸಿಬ್ಬಂದಿ ಹಿತಕ್ಕಾಗಿ ಪಣ – 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ

    ಉಡುಪಿ: ಮದ್ಯವ್ಯಸನಿಗಳ ಹಿತ ಕಾಯ್ದು ಸರ್ಕಾರದ ಬೊಕ್ಕಸ ತುಂಬಿಸುವುದು ಅಬಕಾರಿ ಇಲಾಖೆಯ ಕೆಲಸ. ಆದರೆ ಕೊರೊನಾ ವೈರಸ್‍ನಿಂದ ಭಾರತ ಲಾಕ್‍ಡೌನ್ ಆಗಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿ ಅಬಕಾರಿ ಇಲಾಖೆ ಜನ ಮೆಚ್ಚುವ ಕೆಲಸ ಮಾಡಿದೆ.

    ಉಡುಪಿ ಅಬಕಾರಿ ಇಲಾಖೆ ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿಗಾಗಿ 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಉಡುಪಿಯಲ್ಲಿ ತಯಾರು ಮಾಡಿದ ಸ್ಯಾನಿಟೈಸರ್ ರಾಜ್ಯಕ್ಕೆ ಮಾದರಿಯಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ವಿಪರೀತ ಹರಡಲು ಶುರುವಾದಾಗ ಸ್ಯಾನಿಟೈಸರ್ ಮತ್ತು ಮಾಸ್‍ಗಾಗಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ಕಂಪನಿಗಳಲ್ಲೂ ಸ್ಟಾಕ್ ಸಂಪೂರ್ಣ ಖಾಲಿಯಾಯಿತು. ರಾಜ್ಯ ಸಂಪೂರ್ಣ ಲಾಕ್‍ಡೌನ್ ಆದ ಸಂದರ್ಭ ಅಬಕಾರಿ ಇಲಾಖೆಗೆ ಪರ್ಯಾಯ ಜವಾಬ್ದಾರಿಯೊಂದನ್ನು ಹೊತ್ತುಕೊಂಡಿತು. ತನ್ನ ಇಲಾಖೆಯ ಮೂಲಕ ವೈದ್ಯಕೀಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸ್ಯಾನಿಟೈಸರ್ ತಯಾರು ಮಾಡಿಕೊಡಲು ಇಲಾಖೆ ಪಣ ತೊಟ್ಟಿತ್ತು.

    ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಕಂದಾಯ ಇಲಾಖೆ ಹೀಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ, ಪೊಲೀಸರಿಗೆ ಅಗತ್ಯವಾದ ಸ್ಯಾನಿಟೈಸರ್ ತಯಾರು ಮಾಡಿ ಉಡುಪಿಯ ಅಬಕಾರಿ ಇಲಾಖೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು ಐದು ವರ್ಷಕ್ಕೆ ಪರವಾನಗಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಈಗಾಗಲೇ 4,000 ಲೀಟರ್ ಸ್ಯಾನಿಟೈಸರನ್ನು ತಯಾರು ಮಾಡಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇನ್ನೂ 2,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆಯಿದೆ.

    375 ml ಸ್ಯಾನಿಟೈಸರ್ ಬಾಟಲಿಗೆ ಮಾರುಕಟ್ಟೆಯಲ್ಲಿ 197.50 ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಅಬಕಾರಿ ಇಲಾಖೆ ಸ್ಯಾನಿಟೈಸರ್ ಬಾಟಲಿಗೆ 96 ರೂಪಾಯಿ ಮಾತ್ರ ನಿಗದಿ ಮಾಡಿದೆ. ಇದರ ಖರ್ಚನ್ನು ಉಡುಪಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗೇಶ್ ಕುಮಾರ್, ಪಡುಬಿದ್ರೆಯ ಡಿಸ್ಟಿಲರಿ ಘಟಕದಲ್ಲಿ ನಾವು ಸ್ಯಾನಿಟೈಸರ್ ತಯಾರು ಮಾಡುತ್ತಿದ್ದೇವೆ. ಸರ್ಕಾರಿ ಇಲಾಖೆಗೆ ನಾವು ನಿಗದಿತ ಪ್ರಮಾಣದಲ್ಲಿ ಇದನ್ನು ಪೂರೈಕೆ ಮಾಡುತ್ತಿದ್ದೇವೆ. ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಜವಾಬ್ದಾರಿ ಜೊತೆ ಸರ್ಕಾರಿ ಎಂಎಸ್‍ಐಎಲ್‍ಗೆ ರಕ್ಷಣೆ ಕೊಡುತ್ತಿದ್ದೇವೆ. ಈ ನಡುವೆ ಜನ ಹಿತವಾದ ಕೆಲಸ ಮಾಡುತ್ತಿದ್ದೇವೆ ಎಂಬ ತೃಪ್ತಿ ಇಲಾಖೆಗೆ ಇದೆ. ಯಾವುದೇ ಕಾರಣಕ್ಕೂ ಇದನ್ನು ದುರುಪಯೋಗ ಮಾಡಬಾರದು. ಸ್ಯಾನಿಟೈಸರ್ ನಲ್ಲಿ ವಿಷಕಾರಿ ಅಂಶಗಳು ಇವೆ ಎಂದು ಅವರು ಮಾಹಿತಿ ನೀಡಿದರು.

  • ಡಿಕೆ ಸಹೋದರರಿಂದ 2 ಲಕ್ಷ ಮಾಸ್ಕ್, 17 ಸಾವಿರ ಲೀಟರ್ ಸ್ಯಾನಿಟೈಜರ್ ವಿತರಣೆ

    ಡಿಕೆ ಸಹೋದರರಿಂದ 2 ಲಕ್ಷ ಮಾಸ್ಕ್, 17 ಸಾವಿರ ಲೀಟರ್ ಸ್ಯಾನಿಟೈಜರ್ ವಿತರಣೆ

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರು ಹೆಮ್ಮಾರಿ ಕೊರೊನಾ ವೈರಸ್ ತಡೆಗೆ 2 ಲಕ್ಷ ಮಾಸ್ಕ್, 17 ಸಾವಿರ ಲೀಟರ್ ಸ್ಯಾನಿಟೈಜರ್ ವಿತರಣೆ ಮಾಡಿದ್ದಾರೆ.

    ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಲು ರಾಮನಗರ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಕಿಟ್ ನೀಡಲಾಗಿದೆ. ಡಿ.ಕೆ.ಸಹೋದರರು 200 ಎಂಎಲ್ ಹಾಗೂ 500 ಎಂಎಲ್ ಬಾಟಲ್‍ಗಳುಳ್ಳ ಒಟ್ಟು 17 ಸಾವಿರ ಲೀಟರ್ ಹ್ಯಾಂಡ್ ಸ್ಯಾನಿಟೈಜರ್ ಹಾಗೂ 2 ಲಕ್ಷ ಮಾಸ್ಕ್‌ಗಳನ್ನು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ನಿತ್ಯವೂ 10 ಸಾವಿರ ಜನರಿಗೆ ‘ದಾದಾ’ನಿಂದ ಅನ್ನದಾನ

    ಈ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯ ಮೂಲಕ ನಗರದ ಪ್ರತಿ ಮನೆಗಳಿಗೆ ಹಾಗೂ ಗ್ರಾಮಗಳಲ್ಲಿ ಕೆಲವು ಕಡೆಗಳಲ್ಲಿ ಸ್ಯಾನಿಟೈಜರ್ ಸ್ಥಳ ನಿರ್ಮಿಸಿ ಸಾರ್ವಜನಿಕರಿಗೆ ಹಾಕುವುದನ್ನು ಮಾಡಲಿ ಎಂದು ತಿಳಿಸಿದರು.

  • ಮಾರುಕಟ್ಟೆಗೆ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ಎಂಟ್ರಿ ಇಲ್ಲ

    ಮಾರುಕಟ್ಟೆಗೆ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ಎಂಟ್ರಿ ಇಲ್ಲ

    – ಸ್ಯಾನಿಟೈಸರ್ ಸಿಂಪಡಣೆಗೆ ಹೊಸ ಐಡಿಯಾ

    ಮೈಸೂರು: ಜಿಲ್ಲೆಯ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ ಇವತ್ತಿನಿಂದ 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಪ್ರವೇಶವಿಲ್ಲ.

    ಕೊರೊನಾ ವೈರಸ್‍ನ ಈ ವಯಸ್ಸಿನವರಿಗೆ ಬಹು ಬೇಗ ಉಂಟಾಗುವ ಕಾರಣ ಈ ರೀತಿಯ ನಿರ್ಬಂಧ ಹೇರಲಾಗಿದೆ. ಈ ನಿಬಂಧನೆ ಗ್ರಾಹಕರು ಮತ್ತು ವ್ಯಾಪಾರಸ್ಥರು ಇಬ್ಬರಿಗೂ ಅನ್ವಯವಾಗಿತ್ತದೆ. ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ನಂತರ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಪರಿಣಾಮ ಇಡೀ ಸಂತೆಯಲ್ಲಿ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿದೆ.

    ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಇವತ್ತಿನಿಂದ ಸ್ಯಾನಿಟೈಸರ್ ಎಂಟ್ರಿ ಪಾಥ್ ಮಾಡಲಾಗಿದೆ. ಅಂದರೆ ಜನರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸರ್ ನೀಡಲು ಸಾಧ್ಯವಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಗ್ರಾಹಕರು, ವ್ಯಾಪಾರಸ್ಥರು ಇಡೀ ದೇಹದ ಮೇಲೆ 6 ಸೆಕೆಂಡ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಇದು ಒಂದು ವಿಭಿನ್ನ ಪ್ರಯೋಗ. ಸೋಡಿಯಂ ಹೈಪೋ ಕ್ಲೋರೈಡ್ ಔಷಧಿ ಮಿಶ್ರಿತ ಸ್ಯಾನಿಟೈಸರ್ ಇದ್ದಾಗಿದ್ದು, ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ.

    ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಎಂಜಿನಿಯರ್ ಸಹಾಯದಿಂದ ಈ ಮಾದರಿ ಸಿದ್ಧವಾಗಿದೆ. ಎಲ್ಲರಿಗೂ ಸ್ಯಾನಿಟೈಸರ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಐಡಿಯಾ ಬಳಕೆಯಾಗಿದೆ.

  • ಔಷಧಿ ಅಂಗಡಿ ಮೇಲೆ ದಾಳಿ- 10 ಲಕ್ಷದ ನಕಲಿ ಸ್ಯಾನಿಟೈಸರ್, ಥರ್ಮೋ ಮೀಟರ್ ವಶಕ್ಕೆ

    ಔಷಧಿ ಅಂಗಡಿ ಮೇಲೆ ದಾಳಿ- 10 ಲಕ್ಷದ ನಕಲಿ ಸ್ಯಾನಿಟೈಸರ್, ಥರ್ಮೋ ಮೀಟರ್ ವಶಕ್ಕೆ

    – ಇಬ್ಬರನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು

    ಬೆಂಗಳೂರು: ನಕಲಿ ಥರ್ಮೋ ಮೀಟಸ್ ಹಾಗೂ ಸ್ಯಾನಿಟೈಸರ್ ಸಂಗ್ರಹಿಸಿಟ್ಟುಕೊಂಡಿದ್ದ ಔಷಧಿ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ನಗರದ ರಾಜಾಜಿನಗರದ ಔಷಧಿ ಅಂಗಡಿಯೊಂದರಲ್ಲಿ ನಕಲಿ ಥರ್ಮೋ ಮೀಟರ್ ಹಾಗೂ ಸ್ಯಾನಿಟೈಸರ್ ಗಳನ್ನು ಸಂಗ್ರಹಿಸಿಡಲಾಗಿದ್ದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕ ಶಿವಕುಮಾರ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

    ಐದು ಸಾವಿರ ಸ್ಯಾನಿಟೈಸರ್ ಮತ್ತು ಹತ್ತು ಸಾವಿರ ಥರ್ಮೋ ಮೀಟರ್ ಸೇರಿ ಒಟ್ಟು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಥರ್ಮೋ ಮೀಟರ್ ಹಾಗೂ ಸ್ಯಾನಿಟೈಸರ್ ಅವಶ್ಯವಿರುವ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ನಕಲಿ ವಸ್ತುಗಳ ತಯಾರಿಕೆಗೆ ಮುಂದಾಗಿದ್ದಾರೆ.