Tag: Sanitizer

  • ಶ್ರಾವಣ ಮಾಸದಿಂದಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ – ಕೋವಿಡ್ ನಿಯಮ ಉಲ್ಲಂಘನೆ

    ಶ್ರಾವಣ ಮಾಸದಿಂದಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ – ಕೋವಿಡ್ ನಿಯಮ ಉಲ್ಲಂಘನೆ

    ರಾಯಚೂರು: ಇಂದಿನಿಂದ ಶ್ರಾವಣ ಮಾಸ ಪ್ರಾರಂಭವಾಗಿದ್ದು, ಜಿಲ್ಲೆಯ ಈಶ್ವರ ದೇವಾಲಯಗಳಲ್ಲಿ ಒಂದು ತಿಂಗಳ ಪೂರ್ತಿ ವಿಶೇಷ ಪೂಜೆ, ಭಜನೆಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ಷರತ್ತುಗಳ ಮೇಲೆ ವಿಶೇಷ ಪೂಜೆ ಅಭಿಷೇಕಗಳನ್ನು ಮಾಡಲು ಅನುಮತಿ ನೀಡಿದೆ. ಆದರೆ ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

    ಜಿಲ್ಲಾಡಳಿತದ ಆದೇಶವನ್ನ ಅಕ್ಷರಶಃ ಉಲ್ಲಂಘಿಸಿ ಪೂಜೆಗಳನ್ನು ಮಾಡಲಾಗುತ್ತಿದೆ. ಭಕ್ತರು ಕೋವಿಡ್ ನಿಯಮ ಪಾಲಿಸಲು ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ. ಸಾಮಾಜಿಕ ಅಂತರ ಕಾಪಾಡಲು ಮಾರ್ಕ್ ಮಾಡಿಲ್ಲ, ಸ್ಯಾನಿಟೈಸರ್ ವ್ಯವಸ್ಥೆಯಿಲ್ಲ. ವಿಶೇಷ ಪೂಜೆ ಮಾಡಿಸುವ ಭಕ್ತರನ್ನು ಗರ್ಭಗುಡಿಯೊಳಗೆ ಬಿಟ್ಟುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಇಲ್ಲಿನ ಅರ್ಚಕರು ಹಾಗೂ ಆಡಳಿತ ಮಂಡಳಿ ಉಲ್ಲಂಘಿಸಿದೆ.

    ಭಕ್ತರು ಸಹ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಸಹ ಧರಿಸದೇ ದೇವರ ದರ್ಶನ ಪಡೆಯುತ್ತಿದ್ದಾರೆ. ಶ್ರಾವಣ ಮಾಸದ ನೆಪದಲ್ಲಿ ದೇವಾಲಯಗಳೇ ಕೊರೊನಾ ಹಾಟ್ ಸ್ಪಾಟ್ ಆಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಶ್ರಾವಣ ಮಾಸದ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆ. ಹೀಗಾಗಿ ಶ್ರಾವಣ ಸೋಮವಾರ ದಿನ ದೇವಾಲಯಗಳಿಗೆ ಹೆಚ್ಚು ಜನ ಬರುತ್ತಾರೆ. ಕೋವಿಡ್ ನಿಯಮ ಪಾಲನೆ ಅಗತ್ಯವಾಗಿದೆ. ಇದನ್ನೂ ಓದಿ:ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರಾ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್

  • 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    – ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ
    – ಭಕ್ತಾದಿಗಳಿಗೆ ವಿಶೇಷ ಸುರಕ್ಷೆ ನೀಡಲು ಕರೋನಾ ಕಿಲ್ಲರ್ ಯಂತ್ರ ಅಳವಡಿಕೆ
    – ಒಂದು ವಾರದ ಬಳಿಕ ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ
    – ಸಂಸದ ತೇಜಸ್ವೀ ಸೂರ್ಯ ಅವರಿಂದ ಶ್ಲಾಘನೆ

    ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು.

    ಕೊರೊನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷ ವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿಕ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ ನಲ್ಲಿ ಇರುವಂತಹ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ ಮೋಹನ ರಾಜ್ ತಿಳಿಸಿದರು.

    ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಆಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್ ಅವರ ಕಾರ್ಯ ಶ್ಲಾಘನೀಯ ಎಂದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ

    ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆ ಕವಿತಾ ಮಾತನಾಡಿ, ಲಾಕ್‍ಡೌನ್ ನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರಕ್ಕೀಡಾಗಿದ್ದೇವು. ಲಾಕ್‍ಡೌನ್ ಸಡಲಿಕೆಗೊಂಡ ನಂತರ ಇಂತಹ ವಿಭಿನ್ನ ಆಲೋಚನೆಯ ಆಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು ಎಂದು ಹೇಳಿದರು. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

  • ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಗಳು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೀಡಿದ್ದಾರೆ.

    ಈ ಸಂಘ ಸಂಸ್ಥೆಗಳು ತಾವು ಪರೀಕ್ಷಾರ್ಥಿಗಳಿಗೆ ಒದಗಿಸುವ ಪರಿಕರಗಳನ್ನು ಇಂದು ಡಿ.ಎಸ್.ಇ.ಆರ್.ಟಿ.ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷದಂತೆಯೇ ಅನೇಕ ಸಂಘಸಂಸ್ಥೆಗಳು ನಮ್ಮ ಮಕ್ಕಳ ಹಿತಕ್ಕೋಸ್ಕರ ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗಾಗಿ ಈ ವರ್ಷವೂ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಒದಗಿಸುತ್ತಿರುವುದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಪರೀಕ್ಷೆಗಳು ಮತ್ತು ಮಕ್ಕಳ ಹಿತಾಸಕ್ತಿ ಕುರಿತು ಸಮಾಜದ ಬೆಂಬಲ ಈ ಮೂಲಕ ವ್ಯಕ್ತವಾಗಿರುವುದು ನಮ್ಮಲ್ಲಿ ಹರ್ಷ ಮೂಡಿಸಿದೆ ಎಂದರು. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ವಿದ್ಯಾರ್ಥಿಗಳು ಹೇಗೆ ಪಾಸ್?

    ಹಾಗೆಯೇ ಸಹಾಯ ಮತ್ತು ಸಹಕಾರದ ಹಸ್ತ ಚಾಚಿರುವ ಎಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪರೀಕ್ಷಾರ್ಥಿಗಳಿಗೆ ಬಟ್ಟೆಯಿಂದ ಮಾಡಿದ ಮಾಸ್ಕ್ ಮತ್ತು ಸಿಬ್ಬಂದಿಗೆ ಎನ್-95 ಮಾಸ್‍ಗಳನ್ನು ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಧುರೀಣ ಪಿ.ಜಿ.ಆರ್.ಸಿಂಧ್ಯಾ ಅವರು ತಮ್ಮ ಸಂಸ್ಥೆಯ ಕೊಡುಗೆಗಳನ್ನು ಸಚಿವರಿಗೆ ಹಸ್ತಾಂತರಿಸಿ, ತಮ್ಮ ಸಂಸ್ಥೆಯಿಂದ ಮಕ್ಕಳ ಹಿತಕ್ಕಾಗಿ ಅಲ್ಪ ಪ್ರಮಾಣದ ಸಹಾಯ ಮಾಡಲು ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

    ಯೂತ್ ಫಾರ್ ಸೇವಾ ಸಂಸ್ಥೆ 1.10 ಲಕ್ಷ ಎನ್-95 ಮಾಸ್ಕ್ ಗಳನ್ನು, ರೋಟರಿ ಇಂಟರ್ ನ್ಯಾಷನಲ್- 1.34 ಲಕ್ಷ ಎನ್-95 ಮಾಸ್ಕ್ ಗಳನ್ನು, ಅಡ್ವಾನ್ಸಡ್ ಎಜುಕೇಷನಲ್ ಸರ್ವೀಸಸ್ ಮತ್ತು ರೈನ್‍ಬೋ ಮಕ್ಕಳ ಆಸ್ಪತ್ರೆಯವರು ಮೂರು ಪದರದ ಒಂದು ಲಕ್ಷ ಸರ್ಜಿಕಲ್ ಮಾಸ್ಕ್ ಗಳು, ಎಂಬೆಸ್ಸಿ ಗ್ರೂಪ್ ಸಂಸ್ಥೆ 10 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಒದಗಿಸಿದರು.

    ಪರೀಕ್ಷಾ ಸಿದ್ಧತೆ ಕುರಿತು ಕಿರುಚಿತ್ರ:
    ರಾಜ್ಯದಲ್ಲಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಸಂಬಂಧದಲ್ಲಿ ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡಿರುವ ಪರೀಕ್ಷಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಿರುಚಿತ್ರ ಪ್ರದರ್ಶಿಸಲಾಯಿತು.

    ಕಿರುಚಿತ್ರವನ್ನು ರಾಜ್ಯದ ಮೂಲೆಮೂಲೆಗಳಿಗೂ ತಮ್ಮ ವಾಹಿನಿಗಳ ಮೂಲಕ ಪ್ರಚಾರಪಡಿಸಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪೋಷಕರು ಮತ್ತು ಮಕ್ಕಳಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಬೇಕೆಂದು ಸಚಿವರು ಮಾಧ್ಯಮ ಪ್ರತಿನಿಧಿಗಳನ್ನು ಕೋರಿದರು.

  • ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ಗದಗ: ನಾಳೆಯಿಂದ 5 ದಿನ ಜಿಲ್ಲೆಯಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದರು.

    ಜಿಲೆಯಾದ್ಯಂತ ಮತ್ತೆ ಜೂನ್ 7ರ ವರೆಗೆ ಸಂಪೂರ್ಣ ಕಠಿಣ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಜನರಿಗೆ ಇಂದು ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನ ಮಾತ್ರ ಎಷ್ಟೇ ಹೇಳಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೈ ಮರೆತು ಓಡಾಡಿದ್ದರು.

    ನಗರದ ನಾಮ ಜೋಶಿ ರೋಡ್, ಗ್ರೀನ್ ಮಾರ್ಕೆಟ್, ಬ್ಯಾಂಕ್ ರೋಡ್, ಪಟೇಲ್ ರೋಡ್, ನಾನ್ ವೆಜ್ ಮಾರ್ಕೆಟ್‍ನಲ್ಲಿ ಜನ ಜಂಗುಳಿಯೇ ತುಂಬಿತ್ತು. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಜನರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರು.

    ಗದಗ- ಬೆಟಗೇರಿ ಅವಳಿ ನಗರದ ಜನರು ಸೇರಿದಂತೆ ಗ್ರಾಮೀಣ ಭಾಗದ ಜನರು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಮಾರುಕಟ್ಟೆಗಳು ಜನ ಜಾತ್ರೆಯಂತಾಗಿತ್ತು. ಬಹುತೇಕರು ಮಾಸ್ಕ್‌ಗಳನ್ನೇ ಹಾಕಿಕೊಂಡು ಬಂದಿರಲಿಲ್ಲ. ಇನ್ನು ಕೆಲವರು ನಾಮಕಾವಸ್ತೆಗೆ ಮಾಸ್ಕ್ ಹಾಕಿಕೊಂಡಿದ್ದರು. ಸಾಮಾಜಿಕ ಅಂತರವಂತೂ ಅವರಿಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರು.

    ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳ ಮೂಲಕ ಹಾಗೂ ಲಾಕ್‍ಡೌನ್ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರೂ ಜನರು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಎಷ್ಟೇ ಬುದ್ಧಿ ಹೇಳಿದರೂ ಜನ ಮಾತ್ರ ತಮ್ಮ ವರ್ತನೆಯಿಂದಲೇ ಎಲ್ಲವನ್ನೂ ಖರೀದಿಸಿ ಮನೆಗಳತ್ತ ಮುಖ ಮಾಡಿದರು.

  • ಸತೀಶ್ ಜಾರಕಿಹೊಳಿ ಹುಟ್ಟುಹಬ್ಬ- 10 ಸಾವಿರ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಸತೀಶ್ ಜಾರಕಿಹೊಳಿ ಹುಟ್ಟುಹಬ್ಬ- 10 ಸಾವಿರ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಬೆಳಗಾವಿ: ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಜನ್ಮದಿನದ ನಿಮಿತ್ತ ಇಂದು ಜಾರಕಿಹೊಳಿ ಬೆಂಬಲಿಗರು ತಾಲೂಕಿನ ಕೊರೊನಾ ವಾರಿಯರ್ಸ್‍ಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.

    ಕೊರೊನಾ ವೇಳೆ ಹಗಲಿರುಳು ಶ್ರಮಿಸುತ್ತಿರುವ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಸತೀಶ್ ಶುಗರ್ಸ್ ವತಿಯಿಂದ ಕೊರೊನಾ ವಾರಿಯರ್ಸ್‍ಗಳಾದ ಪೊಲೀಸ್ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಈ ವೇಳೆ ಮಾತನಾಡಿದ ಜಾರಕಿಹೊಳಿ ಆಪ್ತ ಸಹಾಯಕ ಕಿರಣ ರಜಪೂತ, ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ವಾರಿಯರ್ಸ್‍ಗಳಿಗೆ ಜಿಲ್ಲೆಯಾದ್ಯಂತ ಸೂಮಾರು 10 ಸಾವಿರಾರ ಸ್ಯಾನಿಟೈಸರ್ 10 ಸಾವಿರ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಇದಲ್ಲದೇ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಸತೀಶ್ ಶುಗರ್ಸ್ ತಾಲೂಕಿನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳನ್ನು ಆಯಾ ಧರ್ಮದ ಅನುಸಾರ ಸರಕಾರದ ನಿಯಮದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ ಎಂದು ಹೆಳಿದರು. ಇದನ್ನೂ ಓದಿ: ನಾವು ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ: ಡಿಕೆಶಿ

    ಈ ಸಂಧರ್ಭದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ವಿನಯ ಪಾಟೀಲ, ಇಲಿಯಾಸ ಇನಾಮದಾರ, ಅಕ್ಷಯ ವಿರಮುಖ, ಸಂಜು ಗಂಡ್ರಾಳಿ, ಜಿ.ಪಂ ಸದಸ್ಯ ಮಹಾಂತೇಶ ಮಗದುಮ್ಮ ಸೇರಿದಂತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಇದ್ದರು.

  • ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

    ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

    ಶಿವಮೊಗ್ಗ: ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೊಪ್ಪ ನಿವಾಸಿಯಾದ ಶರಣ್ (36) ಮೃತ ದುರ್ದೈವಿ. ಶಿವಮೊಗ್ಗದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶರಣ್ ಕೊರೊನಾ ಬಂದ ದಿನದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪೊಲೀಸರು, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಎನ್ 95 ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ಹಂಚುವ ಮೂಲಕ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು.

    ಕೊರೊನಾದಿಂದ ಪ್ರತಿಯೊಬ್ಬರು ದೂರ ಇರಿ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಮನವಿ ಮಾಡುತ್ತಿದ್ದರು. ಆದರೆ ಕಳೆದ 4 ದಿನದ ಹಿಂದೆ ಮೃತ ಶರಣ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಶರಣ್ ಸೋಂಕಿಗೆ ಬಲಿಯಾಗಿದ್ದಾರೆ. ಇದನ್ನು ಓದಿ: ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ

    ಶರಣ್ ಪತ್ನಿ ಸಹ ಕಳೆದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ತನ್ನ ಪುಟ್ಟ ಮಗಳೊಂದಿಗೆ ನೋವನ್ನು ಮರೆತು ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಶರಣ್‍ನನ್ನು ಬಲಿ ತೆಗೆದುಕೊಂಡಿದೆ. ಇದೀಗ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಮೂರು ವರ್ಷದ ಹೆಣ್ಣು ಮಗು ಅನಾಥವಾಗಿದೆ.

  • ಸ್ಯಾನಿಟೈಸರ್‌ನಿಂದ ಮದ್ಯ ತಯಾರಿ- 6 ಮಂದಿ ಅರೆಸ್ಟ್

    ಸ್ಯಾನಿಟೈಸರ್‌ನಿಂದ ಮದ್ಯ ತಯಾರಿ- 6 ಮಂದಿ ಅರೆಸ್ಟ್

    ಚೆನ್ನೈ: ಸ್ಯಾನಿಟೈಸರ್‌ನಿಂದ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್‍ನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, 6 ಜನರನ್ನು ಬಂಧಿಸಿದ್ದಾರೆ.

    ತಮಿಳುನಾಡಿನ ಕಡಲೂರು ಜಿಲ್ಲೆಯ ರಾಮನಾಥನ್ ಕುಪ್ಪಮ್‍ನಲ್ಲಿ ಘಟನೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಯಾನಿಟೈಸರ್ ನಿಂದ ಮದ್ಯ ತಯಾರಿಸುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ. ಮದ್ಯ ತಯಾರಿಸಲು ಸ್ಯಾನಿಟೈಸರ್ ಬಳಸುತ್ತಿದ್ದರು ಎಂದು ತಪಾಸಣೆ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ತಮಿಳುನಾಡಿನಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಸರ್ಕಾರದ ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಮೇ 24ರ ವರೆಗೆ ತಮಿಳುನಾಡಿನಲ್ಲಿ ಸರ್ಕಾರ ಸಂಪೂರ್ಣ ಲಾಕ್‍ಡೌನ್ ವಿಧಿಸಿದೆ. ಹೀಗಾಗಿ ಮದ್ಯ ಪ್ರಿಯರು ಪರದಾಡುವಂತಾಗಿದೆ.

    ತಮಿಳುನಾಡಿನಲ್ಲಿ ಬುಧವಾರ ಒಂದೇ ದಿನ 34,875 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು, ಈ ವರೆಗೆ 16,99,225 ಕೇಸ್‍ಗಳು ಪತ್ತೆಯಾಗಿವೆ. ಹೀಗಾಗಿ ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ.

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದ ಏಳು ಜನರ ಸಾವು

    ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದ ಏಳು ಜನರ ಸಾವು

    ಮುಂಬೈ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಏಳು ಜನರು ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಏಳು ಜನರು ಸಹ ಸಾವನ್ನಪ್ಪಿದ್ದಾರೆ.

    ತೆಲಿ ಫೀಲ್ ವ್ಯಾಪ್ತಿಯ ದತ್ತಾ ಲಾಂಜೇವಾರ್ ಮತ್ತು ನೂತನ್ ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದರು. ರಾತ್ರಿ ಇಬ್ಬರಿಗೀ ತಲೆನೋವು ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರ ಸಾವಾಗಿದೆ.

    ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಸಹ ಸ್ಯಾನಿಟೈಸರ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.

    ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಘೋಷಣೆಯ ಪರಿಣಾಮ ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯಪಾನ ಪ್ರಿಯರು ಅಂಗಡಿಗಳತ್ತ ಹೆಜ್ಜೆ ಹಾಕಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

  • ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ ಪ್ರಧಾನಿ- ವೀಡಿಯೋ ವೈರಲ್

    ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ ಪ್ರಧಾನಿ- ವೀಡಿಯೋ ವೈರಲ್

    ಬ್ಯಾಂಕಾಕ್: ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಇರುಸುಮುರುಸಿಗೆ ಒಳಗಾಗಿದ್ದು, ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿ ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ನಡೆದಿದ್ದು, ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಸಿವಿಸಿಗೊಂಡ ಪ್ರಯುತ್ ಚಾನ್ ಓಚಾ, ಸ್ಟೇಜ್ ಮೇಲಿಂದ ಇಳಿದು ಬಂದು ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ. ಇದನ್ನು ಕಂಡ ಉಳಿದ ಪತ್ರಕರ್ತರು ತಬ್ಬಿಬ್ಬಾಗಿದ್ದು, ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮ ಪ್ರಶ್ನೆಗಳಲ್ಲೇ ಕೆಟ್ಟ ವೈರಸ್ ಇದೆ. ಮೊದಲು ಅದನ್ನು ಹೊಡೆದೋಡಿಸಬೇಕು ಎಂದು ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ. ಪ್ರಧಾನಿ ಪ್ರಯುತ್ ಚಾನ್ ಸಂಪುಟದ ಮೂವರು ಸಚಿವರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಈ ರೀತಿ ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ.

    ಪೋಡಿಯಂನಿಂದ ಇಳಿದು ಬಂದು ಸ್ಯಾನಿಟೈಸರ್ ಬಾಟಲಿಯನ್ನು ಹಿಡಿದು, ಪತ್ರಕರ್ತರ ಬಳಿ ಆಗಮಿಸುತ್ತಾರೆ. ಬಳಿಕ ನೆರೆದಿದ್ದ ಪತ್ರಕರ್ತರಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡುತ್ತಾರೆ. ಬಳಿಕ ಪತ್ರಿಕಾಗೋಷ್ಠಿಯಿಂದ ಹೊರ ನಡೆಯುತ್ತಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ.