Tag: Sanitization

  • ರಾಜ್ಯದಲ್ಲಿ ನಾಳೆಯಿಂದ ಎರಡನೇ ಹಂತದ ಶಾಲೆಗಳು ಆರಂಭ

    ರಾಜ್ಯದಲ್ಲಿ ನಾಳೆಯಿಂದ ಎರಡನೇ ಹಂತದ ಶಾಲೆಗಳು ಆರಂಭ

    ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಎರಡನೇ ಹಂತದ ಶಾಲೆಗಳು ಆರಂಭವಾಗಲಿವೆ. ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಶಾಲೆಗಳು ನಾಳೆಯಿಂದ ಶುರುವಾಗಲಿವೆ.

    ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶಾಲೆ ಓಪನ್ ಸಿದ್ಧತೆಗಳ ಬಗ್ಗೆ ಇಂದು ನಡೆದ ಸಭೆಯಲ್ಲಿ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡರು. ಈ ವೇಳೆ, ಈಗಾಗಲೇ ನಡೆಯುತ್ತಿರುವ ತರಗತಿಗಳಿಂದ ಯಾವುದೇ ತೆರನಾದ ಸಮಸ್ಯೆ ಉಂಟಾಗಿಲ್ಲ ಎಂಬ ವಿಚಾರವನ್ನು ಸಿಎಂ ಗಮನಕ್ಕೆ ಶಿಕ್ಷಣ ಮಂತ್ರಿಗಳು ತಂದರು. ಇದನ್ನೂ ಓದಿ: ಪೋಷಕರು 1ನೇ ತರಗತಿಯಿಂದಲೇ ಶಾಲೆ ಆರಂಭಿಸಲು ಹೇಳ್ತಿದ್ದಾರೆ : ಬಿ.ಸಿ.ನಾಗೇಶ್

    ನಾಳೆಯಿಂದ ಆರಂಭವಾಗಲಿರುವ ತರಗತಿಗಳ ಬಗ್ಗೆ ಮುಂದಿನ ವಾರ ವರದಿ ನೀಡಲು ಸೂಚಿಸಿದ್ದು, ಈ ವರದಿ ಆಧಾರದ ಮೇಲೆ ಪ್ರಾಥಮಿಕ ಶಾಲೆ ತೆರೆಯುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾಳೆ ಶಾಲೆ ಓಪನ್ ಆಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಶುಚಿತ್ವದ ಕೆಲಸಗಳು ಭರದಿಂದ ಸಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ

    ನಿಯಮ ಏನು?
    ನಾಳೆಯಿಂದ 6, 7, 8ನೇ ತರಗತಿಗೆ ಶಾಲೆ ಆರಂಭ. ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯ ಇಲ್ಲ. ಆನ್‍ಲೈನ್ ಅಥವಾ ಆಫ್‍ಲೈನ್ ಹಾಜರಾತಿ ಕಡ್ಡಾಯ. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಶೇಕಡಾ 50ರಷ್ಟು ಮಕ್ಕಳೊಂದಿಗೆ ದಿನಬಿಟ್ಟು ದಿನ ತರಗತಿ. 6,7,8ನೇ ತರಗತಿಗೆ ಬೆಳಗ್ಗೆ. 10-1.30ರವರೆಗೆ ತರಗತಿ. ಸೋಮವಾರದಿಂದ ಶುಕ್ರವಾರದವರೆಗೆ ಕ್ಲಾಸ್. ಶಾಲೆ ಸ್ವಚ್ಛತೆಗಾಗಿ ಶನಿವಾರ ಶಾಲೆಗೆ ರಜೆ (ಎಂದಿನಂತೆ ಭಾನುವಾರ ರಜೆ) ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಇಲ್ಲ.

  • 2 ದಿನಗಳ ಮುನ್ನವೇ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಗಡಿ ಜಿಲ್ಲೆಯಲ್ಲಿ ಸಿದ್ಧತೆ

    2 ದಿನಗಳ ಮುನ್ನವೇ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಗಡಿ ಜಿಲ್ಲೆಯಲ್ಲಿ ಸಿದ್ಧತೆ

    – ಪರೀಕ್ಷಾ ಕೊಠಡಿಗಳ ಸ್ಯಾನಿಟೈಜೇಷನ್

    ಚಾಮರಾಜನಗರ: ಕೊರೊನಾ ಆತಂಕದ ನಡುವೆ ಜೂನ್ 18 ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷೆಯ ಪರೀಕ್ಷೆಗೆ ಗಡಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಪರೀಕ್ಷೆಗೆ ಎರಡು ದಿನ ಮುಂಚೆಯೇ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಜೇಷನ್ ಮಾಡಲಾಗಿದೆ. ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರಗಳ 314 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಕೊಠಡಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಕೊಠಡಿಯಲ್ಲಿ ಕನಿಷ್ಠ 12 ರಿಂದ ಗರಿಷ್ಠ 24 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳುವಂತೆ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ.

    ಜಿಲ್ಲೆಯಲ್ಲಿ 6,535 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಿಗೆಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ಉಚಿತವಾಗಿ ಮಾಸ್ಕ್ ನೀಡಲಾಗಿದೆ. ಈಗಾಗಲೇ ಪರೀಕ್ಷೆ ಕೇಂದ್ರಗಳಿಗೆ ರವಾನಿಸಲಾಗಿದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಲಿದ್ದರೂ ವಿದ್ಯಾರ್ಥಿಗಳು ಬೆಳಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅವಕಾಶ ಮಾಡಿಕೊಡಲಾಗಿದೆ.

    ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಇದಕ್ಕಾಗಿ ಆರೋಗ್ಯ ಸಹಾಯಕರನ್ನು ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಕೋವಿಡ್ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಮಾಮೂಲಿ ಜ್ವರ, ಕೆಮ್ಮು ನೆಗಡಿ ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಜಿಲ್ಲೆಯ ವಿವಿಧೆಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಿಂದ ಕೇರಳ ಹಾಗೂ ತಮಿಳುನಾಡಿಗೆ ಹೋಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಲುಕಿರುವ ಏಳು ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಾರೆ. ಅವರಿಗೆ ಜಿಲ್ಲಾಡಳಿತದಿಂದ ಅನುಮತಿ ಕೊಡಿಸಲಾಗಿದ್ದು, ಇ-ಪಾಸ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಇದರ ಜೊತೆಗೆ ಹೊರ ಜಿಲ್ಲೆಯ 240 ವಿದ್ಯಾರ್ಥಿಗಳು ಸಹ ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.