Tag: sanitiser

  • ಸ್ವಂತ ಖರ್ಚಿನಲ್ಲಿ 30ಕ್ಕೂ ಅಧಿಕ ಗ್ರಾಮಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ ಯುವಕ

    ಸ್ವಂತ ಖರ್ಚಿನಲ್ಲಿ 30ಕ್ಕೂ ಅಧಿಕ ಗ್ರಾಮಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ ಯುವಕ

    – ಯುವಕನ ಕಾರ್ಯಕ್ಕೆ ಜಿಲ್ಲಾಡಳಿತ ಸೇರಿದಂತೆ ಜನರಿಂದ ಮೆಚ್ಚುಗೆ

    ಯಾದಗಿರಿ: ಸದ್ಯ ಯಾದಗಿರಿ ಜಿಲ್ಲಾದ್ಯಂತ ಕರೊನಾ ಎರಡನೆ ಅಲೆ ಆರ್ಭಟಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ಹಬ್ಬಿರುವುದರಿಂದ ಸೋಂಕಿನ ಚೈನ್ ಲಿಂಕ್ ಕಟ್ ಮಾಡಲು ಅಧಿಕಾರಿಗಳು ಹರಸಹಾಸಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ತನ್ನ ತಾಲೂಕಿನ 30ಕ್ಕೂ ಅಧಿಕ ಹಳ್ಳಿಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ದೇವಿಕೆರಾ ಗ್ರಾಮದ ರಂಗನಗೌಡ ಎಂಬಾತ ಇತರೆ ಯುವಕರಿಗೆ ಮಾದರಿಯಾಗಿದ್ದಾನೆ.

    ಸುರಪುರ ತಾಲೂಕಿನ ಓರ್ವ ರೈತನ ಮಗನಾಗಿರುವ ರಂಗನಗೌಡ, ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರಿಗೆ ಮತ್ತು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನ್ನದಾತ ಫೌಂಡೆಶನ್ ಆರಂಭಿಸಿದ್ದಾರೆ. ಸದ್ಯ ಗ್ರಾಮೀಣ ಭಾಗದಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಸೋಂಕು ಹಬ್ಬವುದನ್ನು ತಡೆಗಟ್ಟಲು ತನ್ನ ಸ್ವಂತ ಖರ್ಚಿನಲ್ಲಿ ವಿಶೇಷ ಟ್ರಾಕ್ಟರ್ ಮೂಲಕ ಸುರಪುರ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಸಿಂಪಡಣೆಗೆ ಮುಂದಾಗಿದ್ದಾರೆ.

    ಇಷ್ಟೇ ಅಲ್ಲದೇ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ತನ್ನ ಕೈಲಾದ ಸಹಾಯವನ್ನು ರಂಗನಗೌಡ ಮಾಡುತ್ತಿದ್ದಾನೆ. ತನ್ನ ಈ ಕಾರ್ಯವನ್ನು ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ನಡೆಸಿಕೊಂಡು ಬರುತ್ತಿರುವ ರಂಗನಗೌಡ ಕಾರ್ಯಕ್ಕೆ ಅಧಿಕಾರಿಗಳು ಸೇರಿದಂತೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಉಪಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪೀಣ್ಯ ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ಕಂಡು ಬಂದಿದೆ.

    ಹೌದು. ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಿಸಾಡಲಾಗಿದೆ. ಮತದಾನ ಮಾಡಿದ ಬಳಿಕ ಜನ ಎಲ್ಲೆಂದರಲ್ಲಿ ಹಾಕಿಹೋಗಿದ್ದಾರೆ. ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಒಂದು ಗ್ಲೌಸ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಜನ ಮತದಾನ ಮಾಡಿ ಬಳಿಕ ಗ್ಲೌಸ್ ಗಳನ್ನು ಸಿಕ್ಕ ಸಿಕ್ಕ ಕಡೆ ಬಿಸಾಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಸ್ಟ್‍ಬಿನ್ ವ್ಯವಸ್ಥೆ ಮಾಡಬೇಕಿದೆ.

    ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಆಗ್ಗಾಗ್ಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮತದಾನ ಕೇಂದ್ರದ ಹೊರಗೆ, ಕಾರಿಡಾರ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡ್ತಿದ್ದಾರೆ.

  • ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಪೋಷಕರು ಕಣ್ಣೀರು

    ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಪೋಷಕರು ಕಣ್ಣೀರು

    ಬೆಂಗಳೂರು: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆಕೋರರ ಪೋಷಕರು ಜಮಾಯಿಸಿದ್ದಾರೆ.

    ಗಲಭೆ ಪ್ರಕರಣ ನಡೆದ ದಿನದಿಂದ ಡಿಜೆ ಹಳ್ಳಿ ಪೊಲೀಸರು ಮಿಡ್‍ನೈಟ್ ಕಾರ್ಯಾಚರಣೆ ಮಾಡುವ ಮೂಲಕ ಪ್ರತಿದಿನ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಶನಿವಾರ ರಾತ್ರಿಯೂ ಸುಮಾರು 57 ಮಂದಿ ಗಲಭೆಕೋರರನ್ನ ಬಂಧಿಸಿದ್ದಾರೆ. ಆದ್ದರಿಂದ ಗಲಭೆಕೋರರ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ.

    ನಮ್ಮ ಮಕ್ಕಳು ಗಲಾಟೆ ನಡೆದ ದಿನ ಇರಲಿಲ್ಲ. ಕೆಲಸ ಮುಗಿಸಿ ಬಂದು ಮಕ್ಕಳು ಮಲಗಿದ್ದರು. ಆದರೆ ಪೊಲೀಸರು ಮಧ್ಯರಾತ್ರಿ ಬಂದು ಮಲಗಿದ್ದವರನ್ನು ಕರೆದುಕೊಂಡು ಬಂದಿದ್ದಾರೆ. ಅವರನ್ನು ನೋಡಲು, ಮಾತನಾಡಲು ಬಿಡುತ್ತಿಲ್ಲ. ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರನ್ನ ಬಿಟ್ಟು ಬಿಡಿ ಎಂದು ಸ್ಟೇಷನ್ ಮುಂದೆ ಪೋಷಕರು ಕಣ್ಣೀರು ಹಾಕಿದ್ದಾರೆ.

    ಪೋಷಕರನ್ನ ಠಾಣೆ ಮುಂದೆ ಜಮಾಯಿಸದಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಗಲಭೆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಇರುವ ಹಿನ್ನಲೆಯಲ್ಲಿ ಯಾವುದೇ ಗುಂಪು, ಜಮಾವಣೆ ಮಾಡದಂತೆ ಪೋಷಕರನ್ನ ವಾಪಸ್ ಕಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನ ಸ್ಟೇಷನ್ ಮುಂದೆ ಪೋಷಕರು ಬರುತ್ತಿದ್ದಾರೆ.

    ಇತ್ತ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಡಿಜೆ ಹಳ್ಳಿ ಪೊಲೀಸರು ಗಲಭೆ ಆರೋಪಿಗಳನ್ನ ಬಂಧಿಸಿದ್ದರು. ಕೆಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಠಾಣೆ ಆವರಣ, ಒಳಗೆ, ಮುಂಭಾಗ ಸ್ಯಾನಿಟೈಸ್ ಮಾಡಲಾಗುತ್ತಿದೆ.

  • ಲಾಕ್‍ಡೌನ್ ಎಫೆಕ್ಟ್- ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು 9 ಮಂದಿ ದುರ್ಮರಣ!

    ಲಾಕ್‍ಡೌನ್ ಎಫೆಕ್ಟ್- ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು 9 ಮಂದಿ ದುರ್ಮರಣ!

    ಹೈದರಾಬಾದ್: ಕೊರೊನಾ ಭೀತಿಯಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಈ ಲಾಕ್‍ಡೌನ್ ವೇಳೆ ಕುಡಿಯಲು ಆಲ್ಕೋಹಾಲ್ ಸಿಗದೆ ಅನೇಕ ಮಂದಿ ಮದ್ಯವ್ಯಸನಿಗಳು ಪರದಾಡಿದ್ದಾರೆ. ಇದೇ ರೀತಿ ಮದ್ಯಪಾನ ಇಲ್ಲದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರನ್ನೇ ಕುಡಿದು ಸುಮಾರು 9 ಮಂದಿ ಮೃತಪಟ್ಟ ದುರಂತ ಘಟನೆ ಆಂಧ್ರಪ್ರದೇಶದ ಪ್ರಕಾಶನ್ ಜಿಲ್ಲೆಯ ಕುರಿಚೆಡು ಪಟ್ಟಣದಲ್ಲಿ ನಡೆದಿದೆ.

    ಬುಧವಾರ ಮಧ್ಯರಾತ್ರಿ ಓರ್ವ ಮೃತಪಟ್ಟರೆ, ಮತ್ತಿಬ್ಬರು ಗುರುವಾರ ರಾತ್ರಿ ಹಾಗೂ ಉಳಿದ 6 ಮಂದಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಭಿಕ್ಷುಕರು ಆಗಿದ್ದು, ಉಳಿದವರನ್ನು ಸ್ಥಳೀಯ ಸ್ಲಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುಮಾರು 20 ಮಂದಿ ಸ್ಯಾನಿಟೈಸರ್ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೃತರನ್ನು ಅನುಗೊಂಡ ಸ್ರೀನು(25), ಭೋಗೆಮ್ ತಿರುಪತಯ್ಯ(35), ಗುಂಟಕ ರಮಿ ರೆಡ್ಡಿ(60), ಕದಿಯಾಮ್ ರಾಮನಯ್ಯ(28), ರಾಜ ರೆಡ್ಡಿ(65), ರಾಮನಯ್ಯ(65), ಬಾಬು(40), ಚಾರ್ಲೆಸ್(45) ಹಾಗೂ ಅಗಸ್ಟಿನ್(45) ಎಂದು ಗುರುತಿಸಲಾಗಿದೆ.

    ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಒತ್ತಾಯಪೂರ್ವಕವಾಗಿ ಕುರಿಚೆಡುನಲ್ಲಿ ಲಾಕ್‍ಡೌನ್ ಹೇರಲಾಗಿತ್ತು. ಹೀಗಾಗಿ ಮದ್ಯದಂಗಡಿಗಳು ಬಂದ್ ಆದ ಪರಿಣಾಮ ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.

    ಸ್ಥಳೀಯ ದುರ್ಗಾ ದೇವಾಲಯದಲ್ಲಿದ್ದ ಭಿಕ್ಷಕನೊಬ್ಬನಿಂದ ಇದು ಪ್ರಾರಂಭವಾಯಿತು. ಆತ ತನ್ನ ಹೊಟ್ಟೆ ವಿಪರೀತವಾಗಿ ಉರಿಯುತ್ತಿದೆ ಎಂದು ಗೋಗರೆಯುತ್ತಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬುಧವಾರ ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ಯುತ್ತಿರುವಾಗ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದರು.

    ಆ ನಂತರ ಅಂದರೆ ಗುರುವಾರ ಬೆಳಗ್ಗೆ ಮತ್ತಿಬ್ಬರು ಹೊಟ್ಟೆನೋವಿನಿಂದ ಪರದಾಡುತ್ತಿದ್ದರು. ಕೂಡಲೇ ಅವರನ್ನು ಅವರ ಕುಟುಂಬಸ್ಥರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರಿಬ್ಬರೂ ಅಂದೇ ರಾತ್ರಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಕೂಡ ಇಂತದ್ದೇ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

    ಘಟನೆಯಿಂದ ಎಚ್ಚೆತ್ತ ಪೊಲೀಸರು, ಸ್ಥಳೀಯ ಅಂಗಡಿಗಳಿಗೆ ದಾಳಿ ಮಾಡಿ ಲ್ಯಾಬ್ ಟೆಸ್ಟ್ ಗೆ ಸ್ಯಾನಿಟೈಸರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತರು ಬರೀ ಸಾನಿಟೈಸರ್ ಮಾತ್ರ ಕುಡಿದಿದ್ದಾರೋ ಅಥವಾ ಅದಕ್ಕೆ ಬೇರೆ ಏನಾದರೂ ಸೇರಿಸಿ ಕುಡಿದಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಕೌಶಲ್ ಮಾಹಿತಿ ನೀಡಿದ್ದಾರೆ.

  • ಶಿವಮೊಗ್ಗ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಕೆ

    ಶಿವಮೊಗ್ಗ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಕೆ

    ಶಿವಮೊಗ್ಗ: ಇಡೀ ರಾಜ್ಯದಲ್ಲಿಯೇ ಹಲವಾರು ಬಂಧೀಖಾನೆಗಳು ಕೊರೊನಾ ಪಾಸಿಟಿವ್ ಗಳಿಂದ ನಲುಗಿ ಹೋಗಿದ್ದರೂ, ಶಿವಮೊಗ್ಗದ ಜೈಲು ಮಾತ್ರ ಕೊರೊನಾ ಮುಕ್ತವಾಗಿದೆ. ಅಲ್ಲದೇ ಇದೀಗ ಈ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ಕೂಡ ರಾಜ್ಯದಲ್ಲೇ ಪ್ರಪ್ರಥಮವಾಗಿದೆ.

    ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿರುವ ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಇಂತಹ ಸುಸಜ್ಜಿತವಾದ ಜೈಲು ಇಡೀ ಭಾರತದಲ್ಲಿಯೇ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆ ನಡುವೆಯೇ ಇದು ಕೊರಿಯನ್ ಮಾದರಿ ಜೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಹೌದು. ಶಿವಮೊಗ್ಗದ ಈ ಕೇಂದ್ರ ಕಾರಾಗೃಹದಲ್ಲಿ ಬೇರೆ ಜೈಲುಗಳಂತೆ, ಇಲ್ಲಿ ಬ್ಯಾರಕ್ ಗಳಿಲ್ಲ. ಬದಲಾಗಿ ಇಲ್ಲಿ ಸೆಲ್ ಗಳಿವೆ. ಇಲ್ಲಿ ಒಟ್ಟು 269 ಸೆಲ್ ಗಳಿದ್ದು ಇಡೀ ಭಾರತದಲ್ಲಿಯೇ ಕೇವಲ ಸೆಲ್ ಗಳು ಮಾತ್ರ ಇರುವ ಜೈಲುಗಳೇ ಇಲ್ಲ. ಬದಲಾಗಿ ಬ್ಯಾರಕ್ ಗಳಿರುತ್ತವೆ. ಈ ಬ್ಯಾರಕ್ ಗಳಲ್ಲಿ 40 ರಿಂದ 50 ಜನ ಸಜಾ ಬಂಧಿಗಳಿರುತ್ತಾರೆ. ಆದರೆ ಈ ಜೈಲಿನಲ್ಲಿ ಸೆಲ್ ಗಳಿದ್ದು ಪ್ರತಿಯೊಂದು ಸೆಲ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ. ಪ್ರತಿ ಸೆಲ್ ನಲ್ಲಿ ಬಾತ್ ರೂಂ, ಟಾಯ್ಲೆಟ್ ಸೇರಿದಂತೆ ಟಿ.ವಿ ಕೂಡ ಅಳವಡಿಸಲಾಗಿದೆ.

    ಇಷ್ಟೇ ಅಲ್ಲದೇ ಓವರ್ ಹೆಡ್ ನೀರಿನ ಟ್ಯಾಂಕ್ ಕೂಡ ಇದ್ದು ಕೈಯಲ್ಲಿ ನೀರು ತೆಗೆದುಕೊಂಡು ಬರುವ ಪ್ರಮೆಯವೇ ಇಲ್ಲಿಲ್ಲ. ಇಲ್ಲಿ ಪ್ರತ್ಯೇಕವಾಗಿ ಮಹಿಳಾ ಬಂಧೀಖಾನೆ ಕೂಡ ಇದ್ದು ಇದೀಗ ಈ ಜೈಲಿನಲ್ಲಿ ವಿಶೇಷತೆಯಿಂದ ಕೂಡಿರುವ ಸ್ಯಾನಿಟೈಸರ್ ಮಾಡುವ ಟನಲ್ ಅಳವಡಿಸಲಾಗಿದೆ. ಇದು ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 1 ಲಕ್ಷದ 2 ಸಾವಿರ ರೂ. ವೆಚ್ಚದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಮೂಲಕ ಈ ಯಂತ್ರ ಅಳವಡಿಸಲಾಗಿದೆ. ಎಲ್ಲೆಡೆ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಈ ವಿಶೇಷ ಯಂತ್ರ ಇಲ್ಲಿ ಅಳವಡಿಸಲಾಗಿದೆ.

    ಅಂದಹಾಗೆ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಈ ಸ್ಯಾನಿಟೈಸರ್ ಟನಲ್ ಯಂತ್ರ ವಿಶೇಷವಾಗಿದ್ದು, ವ್ಯಕ್ತಿಯೊಬ್ಬರು ಹೋಗಿ ಈ ಯಂತ್ರದೊಳಗೆ ಹೋಗಿ ನಿಂತ್ರೆ ಸಾಕು, ಮೂರು ಪೈಪ್ ಗಳಲ್ಲಿ ಸ್ಪಿಂಕ್ಲರ್ ಮೂಲಕ ಇಡೀ ದೇಹವನ್ನು ಸ್ಯಾನಿಟೈಸ್ ಮಾಡುತ್ತದೆ. ಅದರಲ್ಲೂ ಬಯೋ ಆಗ್ರ್ಯಾನಿಕ್ ಸ್ಯಾನಿಟೈಸರ್ ಮೂಲಕ ದೇಹವನ್ನೆಲ್ಲಾ ಸಿಂಪಡಣೆ ಮಾಡಿದ್ರೂ ಕೂಡ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸ್ಯಾನಿಟೈಸರನ್ನು ಈ ಯಂತ್ರದಲ್ಲಿ ಅಳವಡಿಸಲಾಗಿದೆ. ಬಂಧೀಖಾನೆಯ ಸಿಬ್ಬಂದಿ, ಅಧಿಕಾರಿಗಳು, ಸಜಾಬಂಧಿಗಳು ಸೇರಿದಂತೆ ಯಾರೇ ಹೊರಗಿನಿಂದ ಬಂದರೂ ಕೂಡ ಈ ಟನಲ್ ನಿಂದಲೇ ಕಾರಾಗೃಹದ ಒಳಪ್ರವೇಶಿಸಬೇಕು. ಹೀಗಾಗಿ ಪ್ರತಿಯೊಬ್ಬ ಸಿಬ್ಬಂದಿ, ಸಜಾ ಬಂಧಿಗಳು ಸ್ಯಾನಿಟೈಸ್ ಆಗುವುದರಿಂದ ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡುವ ಮಾತು ದೂರ. ಹೀಗಾಗಿ ಇಲ್ಲಿನ ಅಧಿಕಾರಿಗಳು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಶಿವಮೊಗ್ಗದಿಂದ ಸುಮಾರು 12 ಕಿ.ಮೀ. ದೂರವಿರುವ ಕಾರಾಗೃಹದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಕೇಸುಗಳು ಕಂಡಿಲ್ಲ. ಇದೀಗ ಈ ವಿಶೇಷ ಯಂತ್ರ ಅಳವಡಿಕೆ ಮೂಲಕ ಕೊರೊನಾ ಸೋಂಕು ಇನ್ನೂ ದೂರವಾಗಲಿದೆ ಎಂಬ ವಿಶ್ವಾಸವಿದೆ. ಇಲ್ಲಿನ ಅಧಿಕಾರಿಗಳ ಆಸಕ್ತಿಯಿಂದಾಗಿ ಈ ವಿಶೇಷ ಸ್ಯಾನಿಟೈಸರ್ ಟನಲ್ ಯಂತ್ರ ಅಳವಡಿಕೆ ಮೂಲಕ ಇಲ್ಲಿ ಸಜಾ ಬಂಧಿಗಳು ಕೂಡ ಸುರಕ್ಷಿತ.

  • ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

    ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

    ನವದೆಹಲಿ: ಕಡೆಗೂ ದೇಶಿಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಮೇ 25 ರಿಂದ ಸೀಮಿತವಾಗಿ ದೇಶಿಯ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ವಿಮಾನಯಾನ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನೂತನ ಮಾರ್ಗಸೂಚಿಯಲ್ಲಿ ಪ್ರಯಾಣಿಕರು ಮತ್ತು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

    ವಿಮಾನ ಹಾರಾಟದ ನಿಗದಿತ ಸಮಯಕ್ಕೆ ಇಪ್ಪತ್ತು ನಿಮಿಷಗಳ ಮುನ್ನ ನಿರ್ಗಮನವನ್ನು ಮುಚ್ಚಲಾಗುವುದು ಹೀಗಾಗಿ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರಬೇಕು, ಫಿಸಿಕಲ್ ಚೆಕ್ ಇನ್ ವ್ಯವಸ್ಥೆ ನಿರ್ಬಂಧಿಸಿದ್ದು ಕೇವಲ ವೆಬ್ ಚೆಕ್ ಇನ್ ವ್ಯವಸ್ಥೆ ಮೂಲಕ ಗ್ರಾಹಕರು ಮುಂಚೆಯೇ ಚೆಕ್ ಇನ್ ಮಾಡಿಕೊಳ್ಳಬೇಕು, ಕೇವಲ ಒಂದು ಲಗೇಜ್ ಬ್ಯಾಗ್ ನೊಂದಿಗೆ ಪ್ರಯಾಣ ಮಾಡಬಹದಾಗಿದ್ದು, ಪ್ರಯಾಣದ ವೇಳೆ ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

    ಅಲ್ಲದೆ 14 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ವಿಮಾನ ಪ್ರಯಾಣ ಮಾಡುವ ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ. ವಿಮಾನ ನಿಲ್ದಾಣಕ್ಕೆ ಖಾಸಗಿ ವಾಹನಗಳಲ್ಲಿ ಆಗಮಿಸಿದಲ್ಲಿ ಡಿಜಿಟಲ್ ಪೇಮೆಂಟ್ ಗೆ ಆದ್ಯತೆ ನೀಡಿ, ಪ್ರಯಾಣಕ್ಕೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಮಾಸ್ಕ್ ಗ್ಲೌಸ್  ಬಳಕೆ ಕಡ್ಡಾಯ, ಏರ್ ಪೋರ್ಟ್ ಗೆ ಆಗಮಿಸುವ ಮೊದಲು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು ಎಂದು ಷರತ್ತು ವಿಧಿಸಿದೆ. ಪ್ರಯಾಣ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಜನ ಸಂದಣಿ ಪ್ರದೇಶದಲ್ಲಿ ಅನಗತ್ಯ ವಸ್ತುಗಳನ್ನು ಸ್ಪರ್ಶಿದಂತೆ ಎಚ್ಚರಿಸಬೇಕು ಎಂದು ಸೂಚಿಸಿದೆ.

    ವಿಮಾನಯಾನ ಸಂಸ್ಥೆಗಳಿಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದ್ದು, ವಿಮಾನ ನಿಲ್ದಾಣ ಪ್ರವೇಶಕ್ಕೂ ಮುನ್ನ ಸಿಐಎಸ್‍ಎಫ್ ನಿಂದ ಆರೋಗ್ಯ ಸೇತು ಪರಿಶೀಲನೆ ನಡೆಸಬೇಕು ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಬಾರದಿದ್ರೆ ಪ್ರಯಾಣಕ್ಕೆ ಅವಕಾಶ ನೀಡಬಾರದು. ಸೀಟು ಹಂಚಿಕೆಯಲ್ಲಿ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು, ಲಗೇಜ್ ಚೆಕ್ ಇನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಮೇಲುಸ್ತುವಾರಿಗೆ ಸಿಬ್ಬಂದಿ ನೇಮಿಸಿ ಎಂದು ತಿಳಿಸಿದೆ.

    ವಿಮಾನಯಾನ ಸಿಬ್ಬಂದಿ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸಾಗಿಸುವ ಬಸ್ ಸ್ಯಾನಿಟೈಸ್ ಆಗಿರಬೇಕು, ಲಗೆಜ್ ನೀಡುವಾಗ, ಪಡೆಯುವಾಗ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಪ್ರಯಾಣಿಕರು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ಹಲವು ಕಡೆ ವ್ಯವಸ್ಥೆ ಮಾಡಿಕೊಡಬೇಕು. ಶೌಚಾಲಯ ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು, ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು, ಸ್ಯಾನಿಟೈಸರ್ ನೀಡಬೇಕು. ವಿಮಾನ ನಿಲ್ದಾಣಗಳಲ್ಲಿ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಇಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ವಿಮಾನ ನಿಲ್ದಾಣದ ಸಿಬ್ಬಂದಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಎಚ್ಚರಿಕೆ ವಹಿಸಬೇಕು, ವಿಮಾನ ನಿಲ್ದಾಣದೊಳಗಿನ ಅಂಗಡಿಗಳನ್ನು ತೆರೆಯಬಹುದು, ಸಾಮಾಜಿಕ ಅಂತರ ಮತ್ತು ಡಿಜಿಟಲ್ ಪೇಮೆಂಟ್ ಗಳಿಗೆ ಆದ್ಯತೆ ನೀಡಬೇಕು. ವಿಮಾನಯಾನ ಸಚಿವಾಲಯ ನೀಡಿದ ನಿಮಯಗಳ ಹೊರತಾಗಿ ಮತ್ತಷ್ಟು ಮುನ್ನೆಚ್ಚರಿಕೆ ನಿಯಮಗಳನ್ನು ವಿಮಾನಯಾನ ಸಂಸ್ಥೆಗಳು ಪಾಲಿಸಬಹುದು ಮುಂದಿನ ಹಂತದಲ್ಲಿ ಮತ್ತಷ್ಟು ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

  • ಮದ್ಯ ಸಿಗದಕ್ಕೆ ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿದನಾ ವಿದ್ಯಾರ್ಥಿ?

    ಮದ್ಯ ಸಿಗದಕ್ಕೆ ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿದನಾ ವಿದ್ಯಾರ್ಥಿ?

    ಧಾರವಾಡ: ಸ್ಯಾನಿಟೈಸರ್ ಜೊತೆಗೆ ಕೆಮ್ಮಿನ ಔಷಧಿ ಮಿಶ್ರಣ ಮಾಡಿ ಕುಡಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಹೊಯ್ಸಳ ನಗರದಲ್ಲಿ ಈ ಘಟನೆ ನಡೆದಿದ್ದು, ಸುದೀಪ್ ಕೈರಾನ್ ಸಾವನ್ನಪ್ಪಿದ ವಿದ್ಯಾರ್ಥಿ. ಉತ್ತರ ಕನ್ನಡ ಜಿಲ್ಲೆಯ ಮೂಲದವನಾದ ಸುದೀಪ್, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದನು. ವಿದ್ಯಾಭ್ಯಾಸಕ್ಕಾಗಿ ಧಾರವಾಡದ ಹೊಯ್ಸಳ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು.

    ಲಾಕ್‍ಡೌನ್ ಪರಿಣಾಮ ಮದ್ಯ ಸಿಗದ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಜೊತೆ ಕೆಮ್ಮಿನ ಔಷಧಿ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಸ್ಯಾನಿಟೈಸರ್ ಮತ್ತು ಕೆಮ್ಮಿನ ಔಷಧಿ ಬಾಟಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಶವವನ್ನು ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ.

  • ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್, ಸೋಪ್, ನೀರಿನ ವ್ಯವಸ್ಥೆ: ಸುರೇಶ್ ಕುಮಾರ್

    ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್, ಸೋಪ್, ನೀರಿನ ವ್ಯವಸ್ಥೆ: ಸುರೇಶ್ ಕುಮಾರ್

    ಚಾಮರಾಜನಗರ: ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಕೂಡ ಸ್ಯಾನಿಟೈಸರ್, ಸೋಪ್ ಹಾಗೂ ಕೈ ತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಇಡೀ ವಿಶ್ವವನ್ನೇ ಕಾಡ್ತಿರುವ ಕೊರೊನಾ ಭೀತಿ ಇದೀಗ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೂಡ ಕಾಡ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ಒಂದು ರೂಂನಲ್ಲಿ ಕಡಿಮೆ ಮಕ್ಕಳನ್ನು ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ. ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗೆ ಅಂತರ ಕಾಯ್ದುಕೊಳ್ಳಲಾಗುತ್ತೆ ಎಂದರು.

    ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕೂಡ ಸ್ಯಾನಿಟೈಸರ್, ಸೋಪ್ ಹಾಗೂ ಕೈ ತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾರಿಗಾದರೂ ಸಮಸ್ಯೆ ಇದ್ದರೆ ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ತುಂಬಾ ತೊಂದರೆಯಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಪರೀಕ್ಷೆ ಮುಗಿದ ನಂತರ ಮಕ್ಕಳು ಗುಂಪು ಗುಂಪಾಗಿ ಮಕ್ಕಳನ್ನು ಬಿಡುವುದಿಲ್ಲ. ಒಂದು ಕೊಠಡಿ ನಂತರ ಮತ್ತೊಂದು ಕೊಠಡಿಯ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರ ಕಳುಹಿಸಲಾಗುತ್ತದೆ. ಪರೀಕ್ಷೆ ನಡೆಸಬೇಕು? ಬೇಡ್ವೋ ಅನ್ನೋ ಕುರಿತು ಮಕ್ಕಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಎಲ್ಲರೂ ಕೂಡ ಪರೀಕ್ಷೆ ಬೇಕೆ ಬೇಕು ಎಂದು ಕೇಳಿಕೊಂಡಿದ್ದಾರೆಂದು ಸಚಿವರು ಹೇಳಿದರು.