Tag: Sangolli Rayanna

  • ದೇಶದಲ್ಲಿ ಮೊದಲು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಟಿಪ್ಪು, ರಾಣಿ ಚನ್ನಮ್ಮ, ರಾಯಣ್ಣನ ಕಾಲದಲ್ಲಿ: ಸಿದ್ದು

    ದೇಶದಲ್ಲಿ ಮೊದಲು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಟಿಪ್ಪು, ರಾಣಿ ಚನ್ನಮ್ಮ, ರಾಯಣ್ಣನ ಕಾಲದಲ್ಲಿ: ಸಿದ್ದು

    – ಸ್ವಾತಂತ್ರ್ಯ ಸಂಗ್ರಾಮದ ಪಾಠ ಹೇಳಿದ ಸಿದ್ದರಾಮಯ್ಯ

    ದಾವಣಗೆರೆ: ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಸ್ವಾತಂತ್ರ್ಯ ಸಂಗ್ರಾಮ ನಡೆಸಿದ್ದು ಟಿಪ್ಪು ಸುಲ್ತಾನ್, ರಾಣಿ ಚನ್ನಮ್ಮನ ಹಾಗೂ ಸಂಗೊಳ್ಳಿ ರಾಯಣ್ಣನ ಕಾಲದಲ್ಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದರು.

    ಜಿಲ್ಲೆಯ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಣ್ಣ ಸೋತಿದ್ದು, ನಮ್ಮಲ್ಲಿರುವ ಕೆಲ ದೇಶ ದ್ರೋಹಿಗಳಿಂದ. ರಾಯಣ್ಣ ಸಣ್ಣ ಸೈನ್ಯವನ್ನು ಕಟ್ಟಿ ಗೆರಿಲ್ಲಾ ಯುದ್ಧ ಮಾಡಿದ್ದರು. ಗೆರಿಲ್ಲಾ ಯುದ್ಧ ಅಂದ್ರೆ ನಿಮಗೆ ಗೊತ್ತಾ ಎಂದು ಜನರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.

    ಯಕ್ಕನಹಳ್ಳಿಯನ್ನು ಮಿನಿ ನಂದಗಡ ಎಂದು ಕರೆಯುತ್ತಾರೆ ಅದು ತಪ್ಪು, ನಂದಗಡ ಸಂಗೊಳ್ಳಿ ರಾಯಣ್ಣನನ್ನು ನೇಣು ಹಾಕಿದ ಸ್ಥಳ. ಹುಟ್ಟಿದ ಜಾಗ ಸಂಗೊಳ್ಳಿ ಗ್ರಾಮ. ಮಿನಿ ನಂದಗಡ ಅಂದರೆ ರಾಯಣ್ಣನನ್ನು ನೇಣು ಹಾಕಿದ ಜಾಗಾನಾ ಇದು ಎಂದು ಪ್ರಶ್ನಿಸುವ ಮೂಲಕ ಗ್ರಾಮಸ್ಥರಿಗೆ ವಿಸ್ತಾರವಾಗಿ ವಿವರಿಸಿದರು. ಸಂಗೊಳ್ಳಿ ಹಾಗೂ ನಂದಗಡ ಅಭಿವೃದ್ಧಿಗೆ 270 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಈಗ ಏನಾದರೂ ಅನುದಾನ ಕೊಡುತ್ತಿದ್ದಾರೇನಯ್ಯ ರೇವಣ್ಣ ಎಂದು ಪ್ರಶ್ನಿಸಿದರು.

    ರೇಣುಕಾಚಾರ್ಯ ನೀನು ಯಡಿಯೂರಪ್ಪನ ಜೊತೆ ಚೆನ್ನಾಗಿದ್ದೀಯಾ, ನೀನು ಹೇಳಿ ಬೇಗ ಅನುದಾನ ಕೊಡಿಸು. ರಾಯಣ್ಣ ಬಿಡಿ, ಚನ್ನಮ್ಮನ ಹೆಸರಿನಲ್ಲಾದರೂ ಅನುದಾನ ಬಿಡುಗಡೆ ಮಾಡಿ ಎಂದು ಶಾಸಕ ರೇಣುಕಾಚಾರ್ಯಗೆ ಕುಟುಕಿದರು.

  • ರಾಯಣ್ಣನನ್ನು ನಮ್ಮವರೇ ಹಿಡಿದು ಕೊಟ್ರು, ಇಂಥ ದೇಶ ದ್ರೋಹಿಗಳು ಯಾವಾಗಲೂ ಇರ್ತಾರೆ: ಸಿದ್ದರಾಮಯ್ಯ

    ರಾಯಣ್ಣನನ್ನು ನಮ್ಮವರೇ ಹಿಡಿದು ಕೊಟ್ರು, ಇಂಥ ದೇಶ ದ್ರೋಹಿಗಳು ಯಾವಾಗಲೂ ಇರ್ತಾರೆ: ಸಿದ್ದರಾಮಯ್ಯ

    ಮೈಸೂರು: ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನ ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನ ಹಿಡಿಯೋಕೆ ಸಹಾಯ ಮಾಡಿಬಿಟ್ಟರು ಎಂದು ಇತಿಹಾಸವನ್ನು ನೆನೆದರು.

    ಜಿಲ್ಲೆಯ ಗಂಧನಹಳ್ಳಿ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನ ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನ ಹಿಡಿಯೋಕೆ ಸಹಾಯ ಮಾಡಿಬಿಟ್ಟರು. ಕೊನೆಗೆ ಅವರನ್ನ ಬ್ರಿಟಿಷರು ಗಲ್ಲಿಗೇರಿಸಿದರು. ಇಂತಹ ದೇಶದ್ರೋಹಿಗಳು ಸಮಾಜದಲ್ಲಿ ಯಾವಾಗಲೂ ಇರುತ್ತಾರೆ ಎಂದು ಹೇಳಿದರು.

    ಅವರು ಹುಟ್ಟಿದ್ದು ಆಗಸ್ಟ್ 15ರಂದು. ಅವರನ್ನ ಗಲ್ಲಿಗೇರಿಸಿದ್ದು ಜನವರಿ 26ರಂದು. ಎರಡು ದಿನ ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನಗಳು. ನಿಮಗೆ ಗೊತ್ತಾ ಈ ದಿನಗಳು? ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ. ಕೆಲವರಿಗೆ ಗೊತ್ತಿರುವುದಿಲ್ಲ ಆದರೂ ತಲೆ ಅಲ್ಲಾಡಿಸಿಬಿಡುತ್ತಾರೆ. ತಿಳ್ಕೋಬೇಕು ಇದನ್ನೆಲ್ಲ ಗೊತ್ತಾಯ್ತಾ ಎಂದು ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿಮ್ಮೂರಿನಲ್ಲಿ ನಿರ್ಮಾಣ ಆಗಿದೆ. ಅವರ ಪ್ರತಿಮೆನಾ ಯಾಕೇ ನಿರ್ಮಾಣ ಮಾಡ್ತಾರೆ ಗೊತ್ತಾ? ಅವರಂತೆ ದೇಶ ಪ್ರೇಮ ಹುಟ್ಟಲಿ ಅಂತ. ಕುರುಬ ಜಾತಿಯಲ್ಲಿ ಹುಟ್ಟಿದಕ್ಕೆ ಅವರ ಪ್ರತಿಮೆ ಮಾಡೋದಲ್ಲ. ಅವರೇನು ಅರ್ಜಿ ಹಾಕ್ಕೊಂಡು ಕುರುಬ ಜಾತಿಯಲ್ಲಿ ಹುಟ್ಟಿರಲಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಿ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು.

    ಇದೇ ವೇಳೆ ಹಳೆ ನೆನಪು ಬಿಚ್ಚಿಟ್ಟ ಸಿದ್ದರಾಮಯ್ಯ, ನಾನು ಲಾಯರ್ ಆಗಿದ್ದಾಗಲೂ ಗಂಧನಹಳ್ಳಿ ಗೊತ್ತು. ಆಗ ಮೂವರು ನಾಯಕರು ಇದ್ದರು. ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗುತ್ತಿರಲಿಲ್ಲ. ಅವರನ್ನು ಒಟ್ಟಿಗೆ ಸೇರಿಸಿದರೆ ವಿಧಾನ ಸಭೆ ಚುನಾವಣೆ ಗೆಲ್ಲಬಹುದು ಎಂದು ಇಲ್ಲಿದೆ ಬಂದಿದ್ದೆ. ಅವರನ್ನ ಒಟ್ಟಾಗಿಸುವ ದಿನ ಮರಿ ಹೊಡೆದು ಮಾಂಸದ ಊಟ ಹಾಕಿದ್ದರು. ಹೀಗಾಗಿ ಈ ಗ್ರಾಮದ ಜೊತೆ ನನಗೆ ನಿಕಟ ಸಂಪರ್ಕ ಇದೆ ಎಂದರು.

  • ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗಾಗಿ ಗಲಾಟೆ- ಎಸಿ, ಡಿವೈಎಸ್‍ಪಿ ಕಾರು ಜಖಂ

    ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗಾಗಿ ಗಲಾಟೆ- ಎಸಿ, ಡಿವೈಎಸ್‍ಪಿ ಕಾರು ಜಖಂ

    ಗದಗ: ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಪ್ರತಿಷ್ಠೆಗಾಗಿ 2 ಸಮುದಾಯದ ನಡುವೆ ಗಲಾಟೆ ನಡೆದಿರುವ ಘಟನೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.

    ಬಳಗಾನೂರ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಜಾಗದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಹಾಲುಮತ ಕುರುಬ ಸಮಾಜದವರು. ಅದೇ ಜಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಪಂಚಮಸಾಲಿ ಸಮುದಾಯವರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಎರಡು ಸಮುದಾಯದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು, ಈ ಹಿಂದೆ ಹಾಕಿದ್ದ ರಾಣಿ ಚೆನ್ನಮ್ಮ ನಾಮ ಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ರಾತ್ರೋರಾತ್ರಿ ನಿರ್ಮಾಣವಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ್ದಾರೆ.

    ಇದರಿಂದ ರಾಯಣ್ಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಮುಂದಾದವ ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಗುಂಪು ಚದುರಿಸಲು ಲಘುಲಾಠಿ ಪ್ರಹಾರ ಮಾಡಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಗದಗ ಎಸಿ ರಾಯಪ್ಪ ಹಾಗೂ ಡಿವೈಎಸ್‍ಪಿ ಪ್ರಹ್ಲಾದ್ ಅವರ ಎರಡು ವಾಹನಕ್ಕೆ ಕಲ್ಲು ಹೊಡೆದು ಜಖಂ ಗೊಳಿಸಿದ್ದಾರೆ.

    ಘಟನೆಯಲ್ಲಿ ಸಂಬಂಧ ಎರಡು ಸಮುದಾಯದ ಹತ್ತಾರು ಜನರ ಬಂಧನ ಮಾಡಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಬೀಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಘಟನೆಗೆ ಕಾರಣ ಸಚಿವ ಸಿ.ಸಿ ಪಾಟೀಲ್ ಎಂಬುದು ರಾಯಣ್ಣ ಬ್ರಿಗೇಡ್ ಸಂಘಟಿಕರ ಆರೋಪವಾಗಿದೆ. ಸಚಿವ ಸಿ.ಸಿ ಪಾಟೀಲ್ ಒಂದು ಸಮುದಾಯಕ್ಕೆ ಮಾತ್ರ ಪ್ರೋತ್ಸಾಹಿಸಿ ಅಧಿಕಾರಿಗಳನ್ನು ಬಳಸಿಕೊಂಡು ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಬಳಗಾನೂರ ಗ್ರಾಮದಲ್ಲಿ ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧಿಸೋದು ಕನ್ನಡಿಗರ ಸ್ವಾಭಿಮಾನ, ಸಹನೆ ಕೆಣಕಿದಂತೆ: ನಿಖಿಲ್

    ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧಿಸೋದು ಕನ್ನಡಿಗರ ಸ್ವಾಭಿಮಾನ, ಸಹನೆ ಕೆಣಕಿದಂತೆ: ನಿಖಿಲ್

    ಬೆಂಗಳೂರು: ನಮ್ಮದೇ ನಾಡಿನಲ್ಲಿ ನಮ್ಮ ನೆಲದ ಕ್ರಾಂತಿವೀರರ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವುದು ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಆಗ್ರಹಿಸಿದ್ದಾರೆ.

    ನಿಖಿಲ್ ಟ್ವೀಟ್ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪನೆ ಗಲಾಟೆಯ ವಿಚಾರದ ಬಗ್ಗೆ ಪ್ರತಿಕ್ತಿಯಿಸಿದ್ದಾರೆ.

    “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಅಸ್ಮಿತೆ. ಅಂತಹವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ನಾಡದ್ರೋಹದ ಕೆಲಸ. ನಮ್ಮದೇ ನೆಲದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಕನ್ನಡಿಗರು ಇಷ್ಟು ಹರಸಾಹಸ ಪಡಬೇಕೇ?” ಎಂದು ನಿಖಿಲ್ ಪ್ರಶ್ನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪುಂಡಾಟಿಕೆ ಮಾಡುತ್ತಿರುವ ಕೆಲವು ಸಂಘಟನೆಗಳನ್ನು ಸರ್ಕಾರ ಕೂಡಲೇ ಮಟ್ಟ ಹಾಕಬೇಕು ಎಂದು ನಿಖಿಲ್ ಆಗ್ರಹಿಸಿದ್ದಾರೆ.

    “ನಮ್ಮದೇ ನಾಡಿನಲ್ಲಿ ನಮ್ಮ ನೆಲದ ಕ್ರಾಂತಿವೀರರ ಪ್ರತಿಮೆ ಸ್ಥಾಪನೆಗೆ ವಿರೋಧ ಮಾಡುವುದು ಕನ್ನಡಿಗರ ಸ್ವಾಭಿಮಾನ ಹಾಗೂ ಸಹನೆಯನ್ನು ಕೆಣಕಿದಂತೆಯೇ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ” ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ.

    ಏನಿದು ಗಲಾಟೆ:
    ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ. ಪೀರನವಾಡಿಯಲ್ಲಿ ಈಗಾಗಲೇ ಶಿವಾಜಿ ಮೂರ್ತಿ ಇದೆ. ಆದರೂ ರಾಯಣ್ಣ ಪ್ರತಿಮೆ ಈ ಜಾಗದಲ್ಲಿ ಬೇಡ ಅನ್ನೋದು ಈ ಪುಂಡರ ಒತ್ತಾಯ. ಇದಕ್ಕೆ ಒಪ್ಪದ ರಾಯಣ್ಣ ಬೆಂಬಲಿಗರು ಶುಕ್ರವಾರ ಬೆಳಗ್ಗಿನ ಜಾವ ರಾಯಣ್ಣ ಪ್ರತಿಮೆಯನ್ನು ಸ್ಥಾಪಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದ್ದರು.

    ಕೊನೆಗೆ ನಮ್ಮ ನೆಲದಲ್ಲೇ, ನಮ್ಮ ನಾಡ ವೀರಪುತ್ರ, ವೀರಕನ್ನಡಿಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಕ್ಕೆ 20 ಕನ್ನಡಿಗರ ಮೇಲೆ ಕೇಸ್ ಬಿದ್ದಿದೆ. ಅದು ಗಲಭೆ, ಅನುಮತಿ ಇಲ್ಲದೆ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ನಡೆಸಿದ್ದ ಕೇಸ್ ಹಾಕಲಾಗಿದೆ.

  • ಪೀರನವಾಡಿ ಪುತ್ಥಳಿ ಗಲಾಟೆ – ವಿಚಾರಣೆಗೆ ಬೊಮ್ಮಾಯಿ ಸೂಚನೆ

    ಪೀರನವಾಡಿ ಪುತ್ಥಳಿ ಗಲಾಟೆ – ವಿಚಾರಣೆಗೆ ಬೊಮ್ಮಾಯಿ ಸೂಚನೆ

    ಬೆಂಗಳೂರು: ಬೆಳಗಾವಿಯ ಪೀರನವಾಡಿನಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ ವಿಚಾರ ಸಂಬಂಧ ಪೊಲೀಸರು ದಾಖಲಿಸಿಕೊಂಡಿರುವ ಎಫ್‍ಐಆರ್ ಬಗ್ಗೆ ವಿಚಾರಣೆ ನಡೆಸಲು ಸೂಚಿಸಿರುವುದಾಗಿ ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ರಾಜ್ಯ ಸರ್ಕಾರ ಕನ್ನಡಿಗರ ಪರವಾಗಿದೆ ಅವರ ಹಿತರಕ್ಷಣೆಯನ್ನು ಕಾಪಾಡಲು ಬದ್ಧವಾಗಿದೆ. ಬೆಳಗಾವಿಯ ಪೀರನವಾಡಿನಲ್ಲಿ ಪೋಲಿಸರು ದಾಖಲು ಮಾಡಿಕೊಂಡಿರುವ ಎಫ್‍ಐಆರ್ ಬಗ್ಗೆ ಎಡಿಜಿಪಿ (L&O) ಅವರಿಗೆ ವಿಚಾರಣೆ ಮಾಡಲು ಸೂಚಿಸಿದ್ದೇನೆ. ಅವರು ಈಗಾಗಲೇ ಘಟನಾ ಸ್ಥಳದಲ್ಲಿದ್ದು, ಶಾಂತಿ ಸಭೆಯನ್ನು ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಾಗಿ ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.

  • 20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಸಂಘಟನೆಗಳ 20 ಮಂದಿ ಕಾರ್ಯಕರ್ತರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲಾಗಿದೆ.

    ದೊಂಬಿ, ಅತಿಕ್ರಮ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ ಕನಿಷ್ಠ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.

    ಆದರೆ ಕನ್ನಡ ಕನ್ನಡ ಧ್ವಜಕ್ಕೆ ಚಪ್ಪಲಿ ಎಸೆದವರೊಂದಿಗೆ ಸಂಧಾನ ಮಾಡಲು ಸರ್ಕಾರ ಮುಂದಾಗಿದ್ದು ಟೀಕೆಗೆ ಗುರಿಯಾಗಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸಭೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವೀಟ್‌ ಮಾಡಿ ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ‌ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ. ನಾನು ಈಗಷ್ಟೆ ಅಲ್ಲಿನ ಜಿಲ್ಲಾಧಿಕಾರಿ‌ ಮತ್ತು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು, ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

    ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ. ಕನ್ನಡಿಗರೆಂದರೆ -ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಹೇಳಿದ್ದಾರೆ.

  • ನೀರು, ಪುತ್ಥಳಿ, ಮಂದಿರ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಲಕ್ಷ್ಮಿ ಹೆಬ್ಬಾಳ್ಕರ್

    ನೀರು, ಪುತ್ಥಳಿ, ಮಂದಿರ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಲಕ್ಷ್ಮಿ ಹೆಬ್ಬಾಳ್ಕರ್

    ಧಾರವಾಡ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ ವಿಚಾರವಾಗಿ ಸರ್ಕಾರದ ಮಧ್ಯ ಪ್ರವೇಶಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ ಪಡಿಸಿದರು.

    ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಇದು ಬಹಳ ದುರದೃಷ್ಟಕರ ವಿಚಾರ. ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ದೊಡ್ಡದು. ಅಂತಹ ವೀರ ಒಂದು ಕಡೆ, ಈ ದೇಶ ಒಗ್ಗಟ್ಟಾಗಿ ಕಟ್ಟಿದ ಶಿವಾಜಿ ಮಹಾರಾಜರು ಇನ್ನೊಂದು ಕಡೆ. ಇವರಿಬ್ಬರು ದೇಶದ ಹೆಮ್ಮೆ, ವಿಶ್ವಮಾನವರು, ಇಂಥವರ ವಿಷಯದಲ್ಲಿ ಪುತ್ಥಳಿ ರಾಜಕಾರಣ ಆಗಬಾರದು ಎಂದು ಹೇಳಿದರು.

    ನೀರು, ಪುತ್ಥಳಿ ಹಾಗೂ ಮಂದಿರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮಾಡಿದರೆ ನಮ್ಮಂತ ಶಾಸಕರು ಅನರ್ಹ ಆಗಬೇಕು ಎಂದು ಶಾಸಕಿ ಲಕ್ಷ್ಮಿ ಹೇಳಿದರು.

    ನಮ್ಮ ದೇಶಕ್ಕೆ ಇಬ್ಬರೂ ವೀರಪುತ್ರರು. ಇವರಿಗೆ ಸಂಬಂಧಿಸಿದವರು ಶಾಂತ ರೀತಿಯಿಂದ ಕುಳಿತು ಬಗೆಹರಿಸಬೇಕು. ನಾನು ಎಂಇಎಸ್ ಬಗ್ಗೆ ಯಾವಾಗಲೂ ವಿರೋಧಿಸುತ್ತ ಬಂದಿದ್ದೇನೆ. ಎಂಇಎಸ್‍ನ ಈ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.

  • ಮುಂಬರೋ ವಿಧಾನಸಭಾ ಎಲೆಕ್ಷನ್ ಬಿಎಸ್‍ವೈ ನೇತೃತ್ವದಲ್ಲೇ ನಡೆಸಬೇಕು: ಜಾರಕಿಹೊಳಿ

    ಮುಂಬರೋ ವಿಧಾನಸಭಾ ಎಲೆಕ್ಷನ್ ಬಿಎಸ್‍ವೈ ನೇತೃತ್ವದಲ್ಲೇ ನಡೆಸಬೇಕು: ಜಾರಕಿಹೊಳಿ

    ಚಿಕ್ಕೋಡಿ(ಬೆಳಗಾವಿ): ಮುಂಬರುವ ವಿಧಾನಸಭಾ ಚುನಾವಣೆಯನ್ನೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇನಡೆಸಬೇಕು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

    ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಚರ್ಚೆ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.

    ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ಯುವನಾಯಕರು, ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿಜಯೇಂದ್ರ ಅವರ ಮೇಲೆ ಬಂದಿರುವ ಆರೋಪಗಳು ಎಲ್ಲ ಸುಳ್ಳು. ಆರೋಪ ಮಾಡುವವರು ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ವಿರೋಧಿಗಳು ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

    ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ವಿಚಾರವಾಗಿ ಮಾತನಾಡುತ್ತಾ ಲಾಠಿ ಚಾರ್ಜ್ ಕುರಿತು ಮಾತನಾಡಿದ ಅವರು, ಘಟನೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಈ ಬಗ್ಗೆ ಡಿಸಿ, ಎಸ್ ಪಿ ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೆವೆ. ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. ರಾಯಣ್ಣ ಅಭಿಮಾನಿಗಳ ಮೇಲೆ ಚಪ್ಪಲಿ ಎಸೆದಿದ್ದು ಸುಳ್ಳು, ಏಳೆಂಟು ಜನರ ಗುಂಪು ಬಂದಿತ್ತು ಲಾಠಿ ಚಾರ್ಜ್ ಮಾಡಲಾಗಿದೆ. ಸದ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದರು.

    ಪೀರನವಾಡಿಯಲ್ಲಿ ಇಷ್ಟೆಲ್ಲ ಗಲಾಟೆಯಿದ್ದರೂ ನಾನು ಇಂದು ಪೀರನವಾಡಿಗೆ ಭೇಟಿ ನೀಡುವುದಿಲ್ಲ. ಸಂಗೊಳ್ಳಿ ರಾಯಣ್ಣ, ಶಿವಾಜಿ ದೇಶದ ಆಸ್ತಿ ಅವರು ಜಾತಿಗೆ ಸಿಮೀತ ಮಾಡುವುದಿಲ್ಲ. ಅವರಿಗೆ ಯಾವುದೇ ಅಪಮಾನ ಆಗದಂತೆ ಸಮಸ್ಯೆಯನ್ನ ಸರಿಪಡಿಸುತ್ತೆವೆ ಎಂದರು.

    ಪೀರನವಾಡಿ ಗಲಾಟೆ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರಿ ವಾಹನ ಬಿಟ್ಟು ಕಾರ್ಯಕರ್ತರನ್ನ ಭೇಟಿ ಮಾಡುತ್ತಿದ್ದಾರೆ. ಚಿಕ್ಕೋಡಿ ಭಾಗದಲ್ಲಿ ಕಾರ್ಯಕರ್ತರನ್ನ ಭೇಟಿ ಆಗುವುದರಲ್ಲಿ ಬ್ಯುಸಿ ಆಗಿದ್ದರು.

  • ಬೆಳಗಾವಿಯಲ್ಲಿ ಪ್ರತಿಮೆ ಪಾಲಿಟಿಕ್ಸ್- ರಾಯಣ್ಣ ಪ್ರತಿಮೆ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಸ್ಥಾಪಿಸಲು ಯತ್ನ

    ಬೆಳಗಾವಿಯಲ್ಲಿ ಪ್ರತಿಮೆ ಪಾಲಿಟಿಕ್ಸ್- ರಾಯಣ್ಣ ಪ್ರತಿಮೆ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಸ್ಥಾಪಿಸಲು ಯತ್ನ

    – ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ
    – ಎಂಇಎಸ್ ಕಾರ್ಯಕರ್ತರ ಬಂಧನ

    ಬೆಳಗಾವಿ: ರಾಯಣ್ಣ ಪ್ರತಿಮೆ ವಿವಾದ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.

    ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

    ನಿನ್ನೆ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಕುರುಬರ ಸಂಘ ಮತ್ತು ಕನ್ನಡ ಸಂಘಟನೆಯ ನೂರಾರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ನಾಳೆ ಸಚಿವ ಈಶ್ವರಪ್ಪ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಮಾಡುತ್ತೇನೆ ಎಂದಿದ್ದರು.

    ಇತ್ತ ರಾತ್ರೋರಾತ್ರಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮರಾಠಿ ಭಾಷಿಕರು, ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಶಿವಾಜಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಶಿವಾಜಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೇ ಶಿವಾಜಿ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಲು ಬಂದ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಿದರು. ಈ ವೇಳೆ ಪೊಲೀಸರ ಹಾಗೂ ಮರಾಠಿ ಭಾಷಿಕರ ನಡುವೆ ವಾಗ್ವಾದ ನಡೆಯಿತು. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿರುವುದರಿಂದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ ನೀಡುವ ಸಾಧ್ಯತೆ ಇದೆ.

  • ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಸ್ಥಾಪನೆಗೆ ಆಗ್ರಹಿಸಲಾಯಿತು.

    ಸಂಕೇಶ್ವರ ಪಟ್ಟಣದ ಬೀರದೇವರ ದೇವಸ್ಥಾನದಿಂದ ಸಂಗೋಳಿ ರಾಯಣ್ಣ ವೃತ್ತದವರೆಗೆ ರಾಯಣ್ಣ ಅಭಿಮಾನಿಗಳು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಪೀರಣವಾಡಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಕನ್ನಡಿಗರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಪಮಾನ ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತಕೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ವಾಲ್ಮೀಕಿ ಸಂಘ, ಹಾಲುಮತ ಸಮಾಜ ಸೇರಿದಂತೆ ರಾಯಣ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.