Tag: Sandeep Shetty

  • ತುಳು ನಟನ ಜೊತೆ ಯಜ್ಞ ಶೆಟ್ಟಿ ಕಲ್ಯಾಣ

    ತುಳು ನಟನ ಜೊತೆ ಯಜ್ಞ ಶೆಟ್ಟಿ ಕಲ್ಯಾಣ

    ಮಂಗಳೂರು: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಇಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕುಟುಂಬ ಸದಸ್ಯರು ಸೇರಿದಂತೆ ಕಲೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಂದು ಮಂಗಳೂರಿನಲ್ಲಿ ಮದುವೆ ನಡೆದಿದ್ದು, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದಾರೆ.

    ಯಜ್ಞ ಶೆಟ್ಟಿ ಅವರು 2007ರಲ್ಲಿ ತೆರೆಕಂಡ ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಆ ಬಳಿಕ ‘ಎದ್ದೇಳು ಮಂಜುನಾಥ’, ‘ಲವ್ ಗುರು’, ‘ಉಳಿದವರು ಕಂಡಂತೆ’, ‘ಕಿಲ್ಲಿಂಗ್ ವೀರಪ್ಪನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದೊಂದಿಗೆ ತೆಲುಗು ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದ್ದ ಯಜ್ಞಶೆಟ್ಟಿ ಅವರು, ‘ಲಕ್ಷ್ಮಿ’ಸ್ ಎನ್‍ಟಿಆರ್’ ಸಿನಿಮಾ ನಟನೆಗೆ ಭಾರೀ ಪ್ರಶಂಸೆಗಳನ್ನು ಪಡೆದಿದ್ದರು.

    ಕಿರುತೆಯಲ್ಲೂ ಮೋಡಿ ಮಾಡಿದ್ದ ಯಜ್ಞಶೆಟ್ಟಿ ಅವರು, ಸುದೀಪ್ ನಿರ್ಮಾಣದ ‘ವಾರಸ್ಥಾರ’ ಧಾರವಾಹಿಯಲ್ಲಿ ನಟಿಸಿದ್ದರು. ಉಳಿದಂತೆ ಸಂದೀಪ್ ಶೆಟ್ಟಿ ಅವರು ತುಳು ‘ಥಾಂಡಾ ಮದಿಮೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಮಣ್ಣಲ್ಲಿ ಮಣ್ಣಾದ ಹಾಸನದ ವೀರ ಯೋಧ ಸಂದೀಪ್ ಶೆಟ್ಟಿ

    ಹಾಸನ: ವೀರಯೋಧ ಸಂದೀಪ್ ಪಾರ್ಥಿವ ಶರೀರ ಇಂದು ಮಣ್ಣಲ್ಲಿ ಮಣ್ಣಾಗಿದೆ. ಸ್ವಗ್ರಾಮ ದೇವಿಹಳ್ಳಿಯಲ್ಲಿ ಅಗಲಿದ ವೀರ ಯೋಧನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.

    ವೀರಯೋಧ ಸಂದೀಪ್ ಶೆಟ್ಟಿ 18ನೇ ಗುಜರಾತ್ ರೆಜಿಮೆಂಟ್‍ಗೆ ಸೇರಿದವರು. ಜನವರಿ 25ರಂದು ಕಾಶ್ಮೀರದ ಬಳಿಯ ಗುರೆಜ್ ಕ್ಯಾಂಪನಲ್ಲಿ ಹಿಮಪಾತಕ್ಕೆ ಸಿಲುಕಿ ಹಿಮರಾಶಿಯಲ್ಲಿ ಹುದುಗಿ ಹೋಗಿದ್ದರು. ಮೃತದೇಹವನ್ನ ಪತ್ತೆ ಮಾಡಿದ್ದರೂ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲು ಸರಿಯಾಗಿ 7 ದಿನಗಳೇ ಬೇಕಾಯಿತು. ಇದಕ್ಕೆ ಅಲ್ಲಿಯ ಹವಾಮಾನದ ವೈಪರಿತ್ಯ ಅಡ್ಡಿಯಾಗಿತ್ತು. ಮಂಗಳವಾರ ದೆಹಲಿಯಿಂದ ಹೊರಟು ಬೆಂಗಳೂರಿನ ಮೂಲಕ ಹಾಸನಕ್ಕೆ ಮಧ್ಯರಾತ್ರಿ ಪಾರ್ಥಿವ ಶರೀರವನ್ನ ತರಲಾಗಿತ್ತು.

    ವೀರ ಯೋಧನ ಪಾರ್ಥಿವ ಶರೀರವನ್ನ ಇಂದು ಮುಂಜಾನೆ 8ಗಂಟೆಯಿಂದ 10 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಇಡಲಾಗಿತ್ತು. ನಂತ್ರ 10.30ಕ್ಕೆ ಮೃತದೇಹವನ್ನು ಹೇಮಾವತಿ ಪ್ರತಿಮೆ ಮಾರ್ಗವಾಗಿ ಬಿ.ಎಸ್.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸ್ವಗ್ರಾಮ ದೇವಿಹಳ್ಳಿಗೆ ತರಲಾಯ್ತು. ಈ ವೇಳೆ ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ವೀರಯೋಧನಿಗೆ ಅಮರ್ ರಹೇ ಸಂದೀಪ್ ಶೆಟ್ಟಿ ಎನ್ನುವ ಜಯ ಘೋಷದ ಮೂಲಕ ನಮನ ಸಲ್ಲಿಸಿದ್ರೆ, ಸಾವಿರಾರು ಮಂದಿ ಅಂತ್ಯಸಂಸ್ಕಾರದ ಸಮಯದಲ್ಲಿ ಸಾಕ್ಷಿಯಾಗಿದ್ರು.

    ನಿಂತಲ್ಲೇ ಕುಸಿದ ಸಂದೀಪ್ ತಾಯಿ: ಸಂದೀಪ್ ಅಂತ್ಯ ಸಂಸ್ಕಾರದ ವೇಳೆಯಲ್ಲಿ ತಾಯಿ ಗಂಗಮ್ಮ ಕುಸಿದು ಹೋದರು. ಮಗನ ಸಾವಿನ ಸುದ್ದಿ ತಿಳಿದ ಕ್ಷಣದಿಂದ ಸರಿಯಾಗಿ ಆಹಾರ ಸೇವಿಸಿರದ ಕಾರಣ ನಿಶ್ಯಕ್ತಿಯಿಂದ ಕುಸಿದು ಬಿದ್ದರು. ಪ್ರಥಮ ಚಿಕಿತ್ಸೆಯ ನಂತರ ಗಂಗಮ ಚೇತರಿಸಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸ್ಥಳೀಯ ಶಾಸಕ ಎಚ್.ಎಸ್.ಪ್ರಕಾಶ್, ಎಚ್.ಡಿ.ರೇವಣ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಪಾರ್ಥಿವ ಶರೀರಕ್ಕೆ ಪುಪ್ಪಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ರು. ಕಳೆದ ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಪಾರ್ಥೀವ ಶರೀರದೊಂದಿಗೆ ಸೇನಾ ಅಧಿಕಾರಿಗಳ ತಂಡವೂ ಬಂದಿತ್ತು. ಆರ್ಮಿ ಸರ್ವಿಸ್ ಕೋರ್ಸ್ ನ 35 ಮಂದಿ ಯೋಧರು ಅಂತ್ಯ ಸಂಸ್ಕಾರ ಮುಗಿಯುವರೆಗೂ ತಮ್ಮ ಕಾರ್ಯವನ್ನು ನಿರ್ವಹಸಿದರು.

    ಮದ್ಯಾಹ್ನ ಸರಿಯಾಗಿ 3 ಗಂಟೆಗೆ ಸೇನೆಯ ಯೋಧರು 21 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ನಂತರ ನಡೆದ ಅಂತಿಮ ವಿಧಿವಿಧಾನವನ್ನು ದೇವಾಂಗ ಸಂಪ್ರದಾಯದಂತೆ ನೆರವೇರಿತು.

    ದೇವಿಹಳ್ಳಿ ಗ್ರಾಮದ ಪುಟ್ಟರಾಜ್ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ ಸಂದೀಪ್. ತಂದೆ-ತಾಯಿ, ಬಂಧು ಬಳಗ, ಸ್ನೇಹಿತರನ್ನೆಲ್ಲ ಅಗಲಿದ ವೀರ ಯೋಧ ದೇಶಕ್ಕಾಗಿ ತನ್ನ ಪ್ರಾಣ ಅರ್ಪಿಸಿದ್ದಾನೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧನಿಗೆ ಒಂದು ಸಲಾಂ.