Tag: sandalwood support

  • ಸುಂದರ ಕಥೆಯೊಂದಿಗೆ ಅಮೆರಿಕ ಸುತ್ತಿಸೋ ಬಬ್ರೂ!

    ಸುಂದರ ಕಥೆಯೊಂದಿಗೆ ಅಮೆರಿಕ ಸುತ್ತಿಸೋ ಬಬ್ರೂ!

    ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಪುನರಾಗಮನವೂ ಸೇರಿದಂತೆ ಹಲವಾರು ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿತ್ರ ಬಬ್ರೂ. ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಚಿತ್ರವೆಂಬುದರಿಂದ ಹಿಡಿದು, ಜರ್ನಿಯ ಜೊತೆ ನಡೆಯೋ ರೋಚಕ ಕಥೆಯನ್ನೊಳಗೊಂಡಿದೆಯೆಂಬ ಸುಳಿವು… ಪ್ರೇಕ್ಷಕರು ಈ ಸಿನಿಮಾದತ್ತ ಕಣ್ಣಿಟ್ಟು ಕಾಯಲು ಇವುಗಳ ಹೊರತಾಗಿ ಮತ್ಯಾವ ಕಾರಣಗಳೂ ಬೇಕಿರಲಿಲ್ಲ. ಹೀಗೆ ಯಾವ್ಯಾವ ದಿಕ್ಕಿನಿಂದ ಕುತೂಹಲ ಹುಟ್ಟಿಕೊಂಡಿತ್ತೋ ಅದೆಲ್ಲವನ್ನು ತಣಿಸುವಂತೆ ನಿರ್ದೇಶಕ ಸುಜಯ್ ರಾಮಯ್ಯ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಬಲದಿಂದಲೇ ಪ್ರತೀ ಕ್ಷಣವೂ ತನ್ನ ಜರ್ನಿಯನ್ನು ತೀವ್ರವಾಗಿಸಿಕೊಂಡಿರುವ ಚೆಂದದ ಚಿತ್ರವಾಗಿ ಬಬ್ರೂ ಪ್ರೇಕ್ಷಕರ ಮುಂದೆ ಬಂದಿದೆ.

    ಸುಮನ್ ನಗರ್‍ಕರ್ ಇಲ್ಲಿ ಸನಾ ಎಂಬ ಪಾತ್ರದಲ್ಲಿ ನಟಿಸಿದ್ದರೆ ಮಹಿ ಹಿರೇಮಠ್ ಅರ್ಜುನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಎರಡು ಬದುಕುಗಳ ಒಂದೇ ದಿಕ್ಕಿನ ಪಯಣ. ಆದರೆ ಗುರು ಮಾತ್ರ ತದ್ವಿರುದ್ಧ, ಚಿತ್ರವಿಚಿತ್ರವಾದದ್ದು. ಹೀಗೆ ದೂರ ತೀರದತ್ತ ಯಾನಕ್ಕೆ ಹೊರಟು ನಿಂತ ಸನಾಳ ಹಿಂದೆ ಕೌಟುಂಬಿಕ ತಾಪತ್ರಯದ ಪಡಿಪಾಟಲುಗಳಿರುತ್ತವೆ. ಅರ್ಜುನನದ್ದು ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕ. ಆದರೆ ಈ ಎರಡು ಪಯಣಗಳಿಗೆ ಸಿಗೋದು ಒಂದೇ ಕಾರು. ಅದರಲ್ಲಿಯೇ ಅಮೆರಿಕಾದಿಂದ ಕೆನಡಾದತ್ತ ಪಯಣ ಹೊರಡೋ ಈ ಇಬ್ಬರ ಜೊತೆಗೆ ಕೆಲ ವ್ಯಕ್ತಿಗಳ ರೂಪದಲ್ಲಿ ಬೆಚ್ಚಿ ಬೀಳಿಸುವಂಥಾ ಟ್ವಿಸ್ಟುಗಳು ಜಮೆಯಾಗುತ್ತಾ ಸಾಗುತ್ತವೆ.

    ಸಾಮಾನ್ಯವಾಗಿ ಇಂಥಾ ಜರ್ನಿಯ ಕಥೆಗಳೆಂದರೆ ಪ್ರೇಕ್ಷಕರಲ್ಲೊಂದು ಒಲವು ಇದ್ದೇ ಇರುತ್ತೆ. ಆದರೆ ಬಬ್ರೂವಿನದ್ದು ಯಾರ ಎಣಿಕೆಗೂ ಸಿಗದ ಜರ್ನಿ. ಇಲ್ಲಿ ಬಬ್ರೂ ರೋಚಕವಾದ ಕಥೆ ಹೇಳುತ್ತಲೇ ಇಡೀ ಅಮೆರಿಕಾದ ಸುಂದರ ತಾಣಗಳಲ್ಲಿ ರೌಂಡು ಹೊಡೆಸುತ್ತಾನೆ. ಈ ಹಾದಿಯಲ್ಲಿ ಸನಾ ಮತ್ತು ಅರ್ಜುನರ ಪಯಣದ ದಿಕ್ಕು ಚದುರಿಕೊಳ್ಳುವಂಥಾ ಚಿತ್ರವಿಚಿತ್ರವಾದ ಸನ್ನಿವೇಶಗಳು ಎದುರಾಗುತ್ತಾ ಕುತೂಹಲದ ಕಾವು ನೋಡುಗರಲ್ಲಿ ಬಿಸಿಯೇರಿಸಲಾರಂಭಿಸುತ್ತೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಇಲ್ಲಿ ಒಂದೇ ಕಾರಿನಲ್ಲಿ ಸಾಗುವ ಸನಾ ಮತ್ತು ಅರ್ಜುನ್ ಒಬ್ಬರಿಗೊಬ್ಬರು ಪರಿಚಯವಿರೋದಿಲ್ಲ. ಆದರೆ ಎರಡು ಜೀವಗಳ ನಡುವೆ ಯಾವ ಪರಿಚಯದ ಹಂಗೂ ಇಲ್ಲದೇ ಒಂದು ಹೂ ನಗುವೇ ಎಲ್ಲವನ್ನೂ ಗೌಣವಾಗಿಸಿ ಬಿಡುತ್ತೆ. ಅಷ್ಟಕ್ಕೂ ಈ ಇಬ್ಬರ ದಿಕ್ಕುಗಳೂ ತೀವ್ರವಾದ್ದರಿಂದ ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವಂಥಾ ಯಾವ ವ್ಯವಧಾನವೂ ಇರೋದಿಲ್ಲ. ಹೀಗೆ ಪಯಣ ಸಾಗುತ್ತಲೇ ಬಬ್ರೂ ಕಾರು ಹಾದಿ ಮಧ್ಯೆಯೇ ಪಂಕ್ಚರ್ ಆಗುತ್ತೆ. ಅದಕ್ಕೆ ಪಕ್ಚರ್ ಹಾಕಲು ಬಂದ ಕ್ಯಾರೆಕ್ಟರೊಂದು ಇವರ ಪಯಣಕ್ಕೆ ಜೊತೆಯಾಗಿ ಬಿಡುತ್ತದೆ. ಹಾಗೆ ಜೊತೆಯಾಗೋ ಪಾತ್ರವನ್ನು ಹಾಲಿವುಡ್ ನಟ ರೇ ಟೊಸ್ಟಾಡೋ ನಿರ್ವಹಿಸಿದ್ದಾರೆ. ಈ ಪಾತ್ರದ ಪ್ರವೇಶವಾದ ಬಳಿಕ ನಿಜಕ್ಕೂ ಬಬ್ರೂ ಕಥೆ ರೋಚಕತೆಯತ್ತ ಮಗ್ಗುಲು ಬದಲಿಸಿಕೊಳ್ಳುತ್ತೆ.

    ಹೀಗೆ ಪಯಣ ಹೊರಟ ಮೂವರನ್ನು ಹಿಂಬಾಲಿಸೋ ಮತ್ತೋರ್ವ ರಕ್ಕಸ ವ್ಯಕ್ತಿತ್ವದವನು. ಆತ ಯಾರನ ನೋ ಹುಡುಕಾಡುತ್ತಿರುತ್ತಾನೆ. ಆ ಹುಡುಕಾಟ ಎಂಥಾದ್ದೆಂದರೆ ಅಡ್ಡ ಬಂದವರನ್ನೆಲ್ಲ ಕೊಂದು ಕೆಡವಿಕೊಂಡು ಮುಂದುವರೆಯುತ್ತಿರುತ್ತಾನೆ. ಅಂಥವನು ಯಾಕೆ ಈ ಮೂವರನ್ನು ಹಿಂಬಾಲಿಸುತ್ತಾನೆ, ಈ ಮೂವರ ಹಿನ್ನೆಲೆಗಳೇನು? ಇದೆಲ್ಲ ಎಲ್ಲಿಗೆ ತಲುಪಿಕೊಳ್ಳುತ್ತದೆ ಎಂಬ ಕುತೂಹಲಕ್ಕಿಲ್ಲಿ ಸರಿಕಟ್ಟಾದ ಉತ್ತರವೇ ಸಿದ್ಧವಿದೆ. ಚೂರೇ ಚೂರು ಯಡವಟ್ಟಾದರೂ ಗೋಜಲಾಗಿ ಗೊಂದಲದ ಗೂಡಾಗಿ ಬಿಡುವಂಥ ಇಲ್ಲಿನ ಸನ್ನಿವೇಶಗಳನ್ನು ನಿರ್ದೇಶಕ ಸುಜಯ್ ರಾಮಯ್ಯ ನಯ ನಾಜೂಕಿನಿಂದಲೇ ಹ್ಯಾಂಡಲ್ ಮಾಡಿದ್ದಾರೆ. ಸುಮನ್ ನಗರ್‍ಕರ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಇಂಥಾ ಅನುಭವಸ್ಥ ನಟಿಗೆ ಮಹಿ ಹಿರೇಮಠ್ ಕೂಡಾ ಮೆಚ್ಚಿಕೊಳ್ಳುವಂತೆ ಸಾಥ್ ಕೊಟ್ಟಿದ್ದಾರೆ. ಗಾನಾ ಭಟ್ ಪುಟ್ಟ ಪಾತ್ರದಲ್ಲಿಯೇ ಮನಸಲ್ಲುಳಿಯುವಂತೆ ನಟಿಸಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಹಾಡುಗಳೆಲ್ಲವೂ ಬಬ್ರೂವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಒಂದು ಅಪರೂಪದ ಜನೀಯ ಅನುಭವಕ್ಕಾಗಿ ಬಬ್ರೂವನ್ನು ನೋಡಬೇಕಿದೆ.  ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ರೇಟಿಂಗ್ : 3.5 / 5

  • ಬಬ್ರೂಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಬೆಂಬಲ!

    ಬಬ್ರೂಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಬೆಂಬಲ!

    ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಬಬ್ರೂ. ಈಗಾಗಲೇ ಅಷ್ಟ ದಿಕ್ಕುಗಳಿಂದಲೂ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಈ ವಾರ ಅಂದರೆ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಸಾಮಾನ್ಯವಾಗಿ ಯಾವುದೇ ಹೊಸ ರೀತಿಯ ಪ್ರಯತ್ನಗಳು ನಡೆದರು ಸಹ ಕನ್ನಡ ಚಿತ್ರರಂಗದ ಸ್ಟಾರ್ ನಟರು ಸಾಥ್ ಕೊಡುತ್ತಾರೆ. ಅದೆಷ್ಟೇ ಬ್ಯುಸಿಯಾಗಿದ್ದರೂ ಹಲವು ರೀತಿಯಲ್ಲಿ ಬೆಂಬಲಿಸುತ್ತಾರೆ. ವಿಶಿಷ್ಟವಾದ ಕಥಾ ಹಂದರ ಹೊಂದಿರುವ ಬಬ್ರೂ ಚಿತ್ರಕ್ಕೂ ಸ್ಯಾಂಡಲ್‍ವುಡ್ ಸ್ಟಾರ್‍ಗಳ ಭರ್ಜರಿ ಬೆಂಬಲವೇ ಸಿಕ್ಕಿದೆ.  ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಈ ಚಿತ್ರದ ಹಾಡುಗಳನ್ನು ಒಂದೊಳ್ಳೆ ಮೊತ್ತಕ್ಕೆ ಖರೀದಿಸಿ ಪ್ರೋತ್ಸಾಹಿಸುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಬ್ರೂಗೆ ಬೆಂಬಲ ಸೂಚಿಸಿದ್ದರು. ನಂತರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಂಜಿತ್ ಹೆಗ್ಡೆ ಹಾಡಿದ್ದ ಮಧುರವಾದ ಹಾಡೊಂದನ್ನು ಬಿಡುಗಡೆಗೊಳಿಸೋ ಮೂಲಕ ಸಾಥ್ ನೀಡಿ ಶುಭ ಕೋರಿದ್ದರು. ಆ ನಂತರದಲ್ಲಿ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ್ದು ರಾಕಿಂಗ್ ಸ್ಟಾರ್ ಯಶ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬೆಳದಿಂಗಳ ಬಾಲೆಯ ರೀಎಂಟ್ರಿಯಂತಿರೋ ಈ ಚಿತ್ರಕ್ಕೆ ಬೆಂಬಲ ಸೂಚಿಸಿ ಶುಭ ಕೋರಿದ್ದಾರೆ. ಇದು ಚಿತ್ರತಂಡಕ್ಕೆ ಹೊಸ ಹುರುಪು ತುಂಬೋದರ ಜೊತೆಗೆ ಗೆಲ್ಲುವ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಬಬ್ರೂ ಅತ್ಯಂತ ಅಪರೂಪದ ಕಥಾನಕವನ್ನೊಳಗೊಂಡಿರೋ ಚಿತ್ರವೆಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದರ ಟ್ರೇಲರ್‍ನಲ್ಲಿಯೇ ಆ ಲಕ್ಷಣಗಳು ದಟ್ಟವಾಗಿ ಕಾಣಿಸಿವೆ. ಇದು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಮೊದಲ ಚಿತ್ರ. ಹಾಲಿವುಡ್ ತಂತ್ರಜ್ಞರು ಮತ್ತು ನಟರು ಇದರ ಭಾಗವಾಗಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಈ ಸಿನಿಮಾದ ಮೇಲೆ ಕನ್ನಡದ ಪ್ರೇಕ್ಷಕರೆಲ್ಲ ಮೋಹಗೊಂಡಿದ್ದಾರೆ. ಜರ್ನಿಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥೆಯ ಬಬ್ರೂ ಪ್ರೇಕ್ಷಕರ ಮುಂದೆ ಬರಲು ಇನ್ನೆರಡು ದಿನಗಳು ಮಾತ್ರವೇ ಉಳಿದುಕೊಂಡಿವೆ. ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದರೆ, ಸುಮನ್ ನಗರ್‍ಕರ್ ಸನಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಮಹಿ ಹಿರೇಮಠ್ ನಾಯಕನಾಗಿ ಜೊತೆಯಾಗಿದ್ದಾರೆ. ಇದನ್ನೂ ಓದಿ: ‘ಬಬ್ರೂ’ ಈ ವಾರ ತೆರೆಗೆ