Tag: Sandalwood Drugs

  • ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾದಕ ಚೆಲುವೆಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿದೆ. ಇನ್ನುಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಸಂಜನಾ ಪರ ವಕೀಲರ ವಾದ: ರವಿಶಂಕರ್ ಹೇಳಿಕೆಯನ್ನು ಎಸಿಪಿ ಗೌತಮ್ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿಧೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಸ್ಟೇಟ್ ಮೆಂಟ್ ಬಿಟ್ಟರೆ ಯಾವುದೇ ಮಟಿರಿಯಲ್ ಇಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧಾರದ ಮೇಲೆ ಎಫ್‍ಐಆರ್ ಮಾಡಲಾಗಿದೆ. ದಾಖಲಾಗಿರುವ ಎಫ್‍ಐಅರ್ ನಲ್ಲಿ ಅನೇಕ ಸೆಕ್ಷನ್ ಗಳನ್ನ ಹಾಕಲಾಗಿದೆ. ಆದ್ರೆ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಶ್ರೀನಿವಾಸ ಮೂರ್ತಿ ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

    ಎಕ್ಸ್ ಟೆಸಿ ಮಾತ್ರೆ ಸೇವಿಸಿದ್ದಾರೆಂದು ಆರೋಪಿಸಲಾಗಿದ್ದು, ಎಫ್‍ಐಆರ್ ನಲ್ಲಿ ನಿರ್ದಿಷ್ಟ ಆರೋಪಗಳೇ ಇಲ್ಲ. ಎಕ್ಸ್ ಟೆಸಿ ಮಾತ್ರೆಯ ಪ್ರಸ್ತಾಪ ಬಿಟ್ಟರೇ ಬೇರೆ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆಯ ಮೇಲೆ ಪ್ರಕರಣ ನಿಂತಿದೆ. ಆದ್ರೆ ಸಂಜನಾ ಗಲ್ರಾನಿ ಅವರನ್ನ ಯಾಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಗೊತ್ತಾಗಿಲ್ಲ. ಕಕ್ಷಿದಾರರಿಗೆ ಬಂಧನ ವೇಳೆ ಯಾಕೆ ಅರೆಸ್ಟ್ ಮಾಡಲಾಗ್ತಿದೆ ಅಂತ ಹೇಳಿಲ್ಲ. ಹಾಗಾಗಿ ಸಂಜನಾ ಗಲ್ರಾನಿ ಅವರ ಬಂಧನ ಕಾನೂನೂ ಬಾಹಿರವಾಗಿದ್ದು, ಇಲ್ಲಿಯವರೆಗೂ ಪೊಲೀಸರು ನ್ಯಾಯಾಲಯದ ಮುಂದೆ ಯಾವ ಸಾಕ್ಷ್ಯವನ್ನ ಹಾಜರುಪಡಿಸಿಲ್ಲ. ಇದೇ ವೇಳೆ ವಕೀಲರು ಕೆಲ ಹಳೆ ಪ್ರಕರಣಗಳ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:  ನನ್ನ ಮಗಳು ಹೆಣ್ಣು ಸಿಂಹ, ನಾವು ಯಾವುದಕ್ಕೂ ಹೆದರಲ್ಲ: ರಾಗಿಣಿ ತಾಯಿ

    ಜಾಮೀನು ಬೇಡ: ಇತ್ತ ಸಿಸಿಬಿ ಪರ ವಕೀಲರು, ನ್ಯಾಯಾಲಯ ಮುಂದೆ ಮುಚ್ಚಿದ ಲಕೋಟೆಯಲ್ಲಿ ಕೆಲ ಸಿಡಿಗಳನ್ನು ಸಲ್ಲಿಸಿದರು. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಸಿಡಿಯಲ್ಲಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಿಚಾರಣೆ ವೇಳೆ ಬಯಲಿಗೆ ಬಂದ ಅಂಶಗಳ ಮೇಲೆ ತನಿಖೆ ನಡೆಯುತ್ತಿದೆ. ಡ್ರಗ್ ಸೇವನೆ ಮಾಡಿರುವುದೇ ಒಳ್ಳೆಯ ಎವಿಡೆನ್ಸ್ ಆಗುತ್ತೆ. ತನಿಖೆ ಮುಗಿಯುವ ಮುನ್ನವೇ, ಜಾಮೀನು ನೀಡುವುದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನೂ ಓದಿ:  ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ರಾಗಿಣಿ ಪರ ವಕೀಲರ ವಾದ: ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ ಎಂದು ವಾದಿಸಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಆ್ಯಕ್ಟೀವ್ ಮೆಂಬರ್: ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆ?ಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್

  • ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ನೀಡಿರುವ ನೋಟಿಸ್ ನಿರೂಪಕಿ ಅನುಶ್ರೀ ಸ್ವೀಕರಿಸಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗೋದಾಗಿ ಅನುಶ್ರೀ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಹಿನ್ನೆಲೆ ಅನುಶ್ರೀ ಅವರು ನಾಳೆ ಮಂಗಳೂರಿಗೆ ತೆರಳಲಿದ್ದಾರೆ.

    ಅನುಶ್ರೀ ಅವರ ವೈಭವ್ ಸ್ನೇಹ ಬ್ರೀಜೆ ಅಪಾರ್ಟ್‍ಮೆಂಟ್ ಗೆ ತೆರಳಿ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಮಂಗಳವಾರದವರೆಗೂ ಸಮಯ ನೀಡಲಾಗಿದೆ. ಆದ್ರೆ ಅನುಶ್ರೀಯವರು ನಾಳೆಯೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದಾರೆ. ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ಅನುಶ್ರೀಯವರ ವಿಚಾರಣೆ ನಡೆಯಲಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಶ್ರೀ, ಇಂದು ಸಂಜೆ ಇಬ್ಬರು ಅಧಿಕಾರಿಗಳು ಬಂದು ನೋಟಿಸ್ ನೀಡಿದರು. ಮಂಗಳವಾರವರೆಗೂ ಸಮಯ ನೀಡಿದ್ದಾರೆ. ಆದ್ರೆ ನಾನು ನಾಳೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಹೇಳಿಕೆ ದಾಖಲಿಸಬೇಕಿದೆ ಎಂದು ಹೇಳಲಾಗಿದ್ದು, ನೋಟಿಸ್ ನಲ್ಲಿ ಯಾವುದೇ ಕೇಸ್ ಅಂತ ನಿಖರವಾಗಿ ತಿಳಿಸಿಲ್ಲ ಎಂದರು. ಇದನ್ನೂ ಓದಿ: ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಇಂದು ಬಂಧನವಾಗಿರುವ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

  • ಜಮೀರ್ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ನಡೆಸಿ – ದಾಖಲೆಯೊಂದಿಗೆ ಸಿಎಂಗೆ ಸಂಬರಗಿ ದೂರು

    ಜಮೀರ್ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ನಡೆಸಿ – ದಾಖಲೆಯೊಂದಿಗೆ ಸಿಎಂಗೆ ಸಂಬರಗಿ ದೂರು

    ಬೆಂಗಳೂರು: ಮಾಜಿ ಮಂತ್ರಿ, ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ವಿರುದ್ಧ ದೂರು ನೀಡಿ ತನಿಖೆ ನಡೆಸಬೇಕೆಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇಂದು ವಿಧಾನ ಸೌಧಕ್ಕೆ ಯಡಿಯೂರಪ್ಪನವರನ್ನು ಭೇಟಿಯಾಗಲು ಸಂಬರಗಿ ಬಂದಿದ್ದರು. ಆದರೆ ಅವರ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಗೆ ಕಾರಿಡರ್‌ನಲ್ಲಿ ದೂರು ನೀಡಿದರು. ಸಂಬರಗಿ ದೂರಿಗೆ ಸಿಎಂ ತಲೆಯಾಡಿಸಿ ಹೊರಟು ಹೋದರು.

    ಬಳಿಕ ಮಾತನಾಡಿದ ಸಂಬರಗಿ, ಶಾಸಕ ಜಮೀರ್ ಅಹಮದ್ ಕಾನೂನು ಬಾಹಿರವಾದ ಪ್ರಯಾಣ ಮಾಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಯಾವುದೇ ದಾಖಲೆ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು‌ ನೀಡಿದ್ದೇನೆ ಎಂದು ತಿಳಿಸಿದರು.

    ದೂರಿನ ಪತ್ರದಲ್ಲಿ ಏನಿದೆ?
    ಪ್ರಶಾಂತ್ ಸಂಬರಗಿ ಆದ ನಾನು, ಒಬ್ಬ ಉದ್ಯಮಿಯಾಗಿ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಹಲವು ವರ್ಷಗಳಿಂದ ಸಮಾಜ ಸೇವೆ ಮತ್ತು ಸಾರ್ವಜನಿಕ ಜೀವನದಲ್ಲಿದ್ದೇನೆ. ಇತ್ತೀಚೆಗೆ ಡ್ರಗ್ಸ್ ದಂಧೆಗೂ ಕನ್ನಡ ಚಿತ್ರರಂಗಕ್ಕೂ ಇರುವ ಲಿಂಕ್ ಅನ್ನು ಬಯಲಿಗೆಳೆದಿದ್ದೇನೆ.

    ಈ ಪತ್ರದ ಮೂಲಕ ನಾನು, ಕಾಂಗ್ರೆಸ್​ನ ಶಾಸಕ ಮತ್ತು ಮಾಜಿ ಸಚಿವರೊಬ್ಬರು ಗಂಭೀರವಾದ ಮತ್ತು ಅಪಾಯಕಾರಿಯಾದ ನಡೆಯ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ.

    ನಿಮಗೂ ಗೊತ್ತಿರಬಹುದು. ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿಗಳ ನಡಾವಳಿ ಮತ್ತು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿಯಮಗಳ ಪ್ರಕಾರ ಯಾವುದೇ ಸಚಿವರು ಅಥವಾ ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ಮುಖ್ಯ ಕಾರ್ಯದರ್ಶಿಗಳು ಅಥವಾ ಮುಖ್ಯಮಂತ್ರಿಗಳ ಕಚೇರಿಯಿಂದ ಅಥವಾ ರಾಜ್ಯ ಶಿಷ್ಟಾಚಾರ ಅಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು.

    ಈ ವಿಚಾರವಾಗಿ ಚಾಮರಾಜಪೇಟೆಯ ಹಾಲಿ ಶಾಸಕ ಮತ್ತು ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕಳೆದ ಐದು ವರ್ಷಗಳಲ್ಲಿ ಹಲವು ವಿದೇಶಿ ಪ್ರವಾಸಗಳನ್ನ ಮಾಡಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ವಿದೇಶ ಪ್ರವಾಸಕ್ಕೂ ಜಮೀರ್ ಅಹಮದ್ ಖಾನ್ ಅನುಮತಿಯನ್ನು ಪಡೆದುಕೊಂಡಿಲ್ಲ.

    ಜಮೀರ್ ಅಹಮದ್ ಖಾನ್ ಅವರು ಕೇವಲ ಶಾಸಕರಲ್ಲ. 2018 ಜೂನ್ 6 ರಿಂದ 2019 ಜುಲೈ 9 ರ ವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಆಹಾರ ಮತ್ತು ನಾಗರೀಕ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ.

    ಈ ಮೂಲಕ ನಾನು ನಿಮ್ಮ ಗಮನಕ್ಕೆ ತರುವುದೇನೆಂದರೆ, ಜಮೀರ್ ಅಹಮದ್ ಖಾನ್ ಅವರು 2019ರ ಜೂನ್ 8 ರಿಂದ 10 ರ ವರೆಗೆ ವಿದೇಶ ಪ್ರವಾಸ ಮಾಡಿರುತ್ತಾರೆ. ಯಾಕೆ ಅವರು ಈ ಪ್ರವಾಸದ ವಿಚಾರವನ್ನ ಸಂಬಂಧಿತ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಎನ್ನುವುದಕ್ಕೆ ಸ್ಪಷ್ಟತೆಯಿಲ್ಲ. ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಜಮೀರ್ ಅಹಮದ್ ಅವರ ಹೆಸರು ಕನ್ನಡ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

    ಇತ್ತೀಚಿನ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಯ ವರದಿಯೊಂದು ಬಹಿರಂಗಪಡಿಸಿರುವಂತೆ, ಚೀನಾ 10 ಸಾವಿರಕ್ಕೂ ಹೆಚ್ಚು ಭಾರತೀಯರ ಮೇಲೆ ಗೂಡಾಚಾರಿಕೆ ಮಾಡುತ್ತಿದೆ. ಇಂಥಾ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಕಾನೂನು ಪಾಲನೆ ಮಾಡಬೇಕಾಗಿದ್ದ ಜಮೀರ್ ಅಹಮದ್ ಖಾನ್ ಅವರು ತಮ್ಮ ವಿದೇಶಿ ಪ್ರವಾಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಇದು ಅವರ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತಿದೆ.

    ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ನಾಗರೀಕನಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಮೀರ್ ಅಹಮದ್ ಖಾನ್ ಅವರ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ಮಾಡಬೇಕೆಂದು ಮನವಿಮಾಡಿಕೊಳ್ಳುತ್ತೇನೆ.

    ಈ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ನಾನು ನಿಮ್ಮ ಗಮನಕ್ಕೆಂದು ಲಗತ್ತಿಸಿರುತ್ತೇನೆ.

  • ಮೊಬೈಲ್ ವಶಕ್ಕೆ ಪಡೆದಿಲ್ಲ, ಯಾವುದೇ ತಪ್ಪು ಮಾಡಿಲ್ಲ: ನಟಿ ರಶ್ಮಿತಾ ಚೆಂಗಪ್ಪ

    ಮೊಬೈಲ್ ವಶಕ್ಕೆ ಪಡೆದಿಲ್ಲ, ಯಾವುದೇ ತಪ್ಪು ಮಾಡಿಲ್ಲ: ನಟಿ ರಶ್ಮಿತಾ ಚೆಂಗಪ್ಪ

    -ಕೆಲಸ ಮಾಡಿದ್ರೆ ನಮಗೆ ದಿನದ ಸಂಬಳ ಸಿಗುತ್ತೆ

    ಬೆಂಗಳೂರು: ವಿಚಾರಣೆ ವೇಳೆ ಪೊಲೀಸರು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಪ್ರಕರಣದ ಬಗ್ಗೆ ಕೆಲ ಮಾಹಿತಿ ನಮ್ಮಿಂದ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿ ನನ್ನ ವಿಚಾರಣೆ ಕರೆಸಲಾಗಿತ್ತು ಎಂದು ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಶ್ಮಿತಾ ಚೆಂಗಪ್ಪ, ವಿಚಾರಣೆಗೆ ಕರೆದು ತಕ್ಷಣ ನಾವು ಆರೋಪಿಗಳಂತಲ್ಲ. ನಾನು ಈಗಾಗಲೇ ಒಂದು ವಿಚಾರಣೆಗೆ ಹಾಜರಾಗಿದ್ದೇನೆ. ಡ್ರಗ್ಸ್ ಮಾಫಿಯಾದ ಬಗ್ಗೆ ನಿಮಗೆ ಏನಾದ್ರೂ ಮಾಹಿತಿ ಇದೆಯಾ? ನೋಡಿದೀರಾ? ಎಂದು ತಿಳಿದುಕೊಳ್ಳಲು ನಮ್ಮನ್ನ ಕೇಳಲು ಪೊಲೀಸರು ಕರೆದಿದ್ದರು. ಇದನ್ನೂ ಓದಿ: ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

    ಕಿರುತೆರೆಯ ಕಲಾವಿದರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ನಾನು ಟಾಪ್ ಒನ್ ಸೀರಿಯಲ್ ನಲ್ಲಿ ನಟಿಸಿದ್ದೇನೆ. ಮುಂದೆ ಬೇರೆಯವರನ್ನ ಕರೆಯಬಹುದು ಅಥವಾ ಕರೆಯದಿರಬಹುದು. ನಮ್ಮ ಬಳಿ ಕೇಳಿದ ಮಾಹಿತಿಯನ್ನ ನೀಡಿ ಬಂದಿದ್ದೇನೆ. ಪೊಲೀಸರು ವಿಚಾರಣೆಗೆ ಕರೆದ ಮರುದಿನವೇ ಹೋಗಿ ಸ್ಪಷ್ಟನೆ ನೀಡಿ ಬಂದಿದ್ದೇನೆ. ನಮಗೆ ಆ ರೀತಿಯ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕ ಸಹ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

    ವಿಚಾರಣೆಗೆ ಹಾಜರಾಗಬೇಕೆಂದಾಗ ಒಂದು ಕ್ಷಣ ಶಾಕ್ ಆಯ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ವಿಚಾರಣೆಗೆ ಕರೆಯಲಾಗ್ತಿದೆ ಎಂದು ಹೇಳಿದರು. ಯಾವುದೇ ತಪ್ಪು ಮಾಡದೇ ಇರೋದರಿಂದ ಆರಾಮಾಗಿ ಹೋಗಿ ವಿಚಾರಣೆ ಎದುರಿಸಿ ಬಂದಿದ್ದೇನೆ. ಮತ್ತೆ ವಿಚಾರಣೆ ಕರೆಯಲಾಗುವುದು ಎಂದು ಹೇಳಿಲ್ಲ. ಒಂದು ವೇಳೆ ಕರೆಸಿದ್ರೆ ಹೋಗುತ್ತೇನೆ ಎಂದು ತಿಳಿಸಿದರು.

    ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗಿಲ್ಲ. ಕೆಲಸ ಮಾಡುತ್ತಿದ್ದ ವಾಹಿನಿಯ ಇವೆಂಟ್ ಗಳಿಗೆ ಹೋಗಿದ್ದೇನೆ. ಭಾಗಿಯಾದ ಇವೆಂಟ್ ಗಳಲ್ಲಿ ಡ್ರಗ್ಸ್ ಸಂಬಂಧಿಸಿದಂತಹ ಯಾವುದೇ ಕೆಲಸಗಳು ನನ್ನ ಗಮನಕ್ಕೆ ಬಂದಿಲ್ಲ. ನಾವು ಇವಾಗ ಅಂಬೆಗಾಲಿಟ್ಟು ಸಿನಿಮಾ, ಕಿರುತೆರೆಯಲ್ಲಿ ಕೆಲಸ ಮಾಡಬೇಕೆಂದು ಬಂದಿದ್ದೇವೆ. ಪ್ರತಿದಿನ ಕೆಲಸ ಮಾಡಿದ್ರೆ ಮಾತ್ರ ನಮಗೆ ಒಂದು ದಿನದ ಸಂಬಳ ಸಿಗುತ್ತೆ. ನಮ್ಮ ಮೇಲೆ ಕುಟುಂಬಸ್ಥರು ಅವಲಂಬಿತರಾಗಿದ್ದು, ಜೊತೆಗೆ ನನ್ನನ್ನು ನಾನು ನೋಡಿಕೊಳ್ಳಬೇಕು. ಬ್ರಹ್ಮಗಂಟು ಗೀತಾ ಭಾರತಿ ಅವರನ್ನು ವಾಹಿನಿಯ ಇವೆಂಟ್ ಗಳಲ್ಲಿ ಭೇಟಿಯಾಗಿದ್ದೇನೆ. ಅಭಿಷೇಕ್ ದಾಸ್ ಜೊತೆ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದೇನೆ. ಇದನ್ನೂ ಓದಿ: ಇಬ್ಬರು ಡ್ರಗ್ ಪೆಡ್ಲರ್‌ಗಳು ಅರೆಸ್ಟ್ – ಅಯ್ಯಪ್ಪ, ಲೂಸ್ ಮಾದ ಯೋಗಿ ವಿಚಾರಣೆ

    ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಮೊಬೈಲ್ ಮತ್ತು ನನ್ನ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ ಎಂದು ತಿಳಿಸಿದರು.

  • ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

    ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

    ಬೆಂಗಳೂರು: ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ ಅನ್ನೋ ನಟ ದುನಿಯಾ ವಿಜಯ್ ಪ್ರಶ್ನೆಗೆ ನವರಸ ನಾಯಕ ಜಗ್ಗೇಶ್ ಅತ್ಯಂತ ಸರಳವಾಗಿ ಉತ್ತರ ನೀಡಿದ್ದಾರೆ. ತಮಗೆ ಫೋನ್ ಮಾಡಿ ದುನಿಯಾ ವಿಜಯ್ ಮಾತನಾಡಿರುವ ವಿಷಯವನ್ನ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಜಗ್ಗೇಶ್-ದುನಿಯಾ ವಿಜಯ್ ಸಂಭಾಷಣೆ:
    ಕರೆ ಮಾಡಿದ್ದ ವಿಜಿ, ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ ಎಂದು ದುಃಖದಿಂದ ಕೇಳಿಬಿಟ್ಟ. ನಾನು ಯಾಕೆ ಈ ಪ್ರಶ್ನೆ ಎಂದು ಕೇಳಿದೆ. ನೋೀಡಿ ಅಣ್ಣ ನಾವು ಎಷ್ಟೇ ಶ್ರಮಪಟ್ಟು ಜೀವನ ಕಟ್ಟಿಕೊಂಡರು ಸಮಾಜ ಚರ್ಮದ ಬಣ್ಣದಿಂದ ನಮ್ಮನ್ನು ಅಳೆಯುತ್ತಾರೆ. ನಾವು ನೂರು ಶ್ರೇಷ್ಠ ಸಾಧನೆ ಮಾಡಿ ಸಣ್ಣ ತಪ್ಪು ಅರಿಯದಂತೆ ನಮ್ಮಿಂದ ಆಗಿಬಿಟ್ಟರೆ ನಮ್ಮ ಸಾಧನೆ ಶೂನ್ಯಮಾಡಿ ಹಂಗಿಸಿಬಿಡುತ್ತಾರೆ. ಅದೇ ಬಿಳಿ ಚರ್ಮದ ಮನುಜರು ಆಂತರ್ಯವೆಲ್ಲಾ ಕೊಳೆತು ಸಾಧನೆ ಶೂನ್ಯವಾದರು ಅವರ ಬಿಳಿಬಣ್ಣಕ್ಕೆ ಸಮಾಜ ಅವರನ್ನ ನಂಬಿ ಬಿಡುತ್ತಾರೆ ಎಂದು ಹೇಳಿದ. ಇದನ್ನೂ ಓದಿ: ಉದ್ಯಮ ಹರಾಜು ಹಾಕೋದು ನೋಡಿದ್ರೆ ಆ್ಯಸಿಡ್ ಕುಡಿದಂತೆ ಆಗಿದೆ: ಜಗ್ಗೇಶ್ ಬೇಸರ

    ನಾನು ಅದಕ್ಕೆ ಉದಾಹರಣೆ ಎಂದು ಕೇಳಿದಾಗ ಡ್ರಗ್ಸ್ ದಂಧೆಯಲ್ಲಿನ ಮಹಾಮಹಿಮರ ಹೆಸರು ಹೇಳಿದ. ಉತ್ತರವಿಲ್ಲದೆ ಕ್ಷಣಕಾಲ ಮೌನವಾಗಿ ನನ್ನ ಮೈಚರ್ಮ ನೋಡಿಕೊಂಡೆ ಕಾರಣ ನಾನು ವಿಜಿಗಿಂತ ಕಪ್ಪು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲಿ: ಡ್ರಗ್ಸ್ ಮಾಫಿಯಾ ಬಗ್ಗೆ ಜಗ್ಗೇಶ್ ಮಾತು

    ನಾನು ವಿಜಿಗೆ ಇದ್ದ ಅನುಮಾನ ದುಃಖ ದೂರಮಾಡಲು ಈ ಉದಾಹರಣೆ ಹೇಳಿದೆ. ನೋಡು ವಿಜಿ ಮಧ್ಯಮ ವರ್ಗದಲ್ಲಿ ನಾವು ಹುಟ್ಟಿದ್ದು. ಗ್ರಾಮೀಣ ಬಡಕುಟುಂಬದ ತಂದೆತಾಯಿ ಉದರದಲ್ಲಿ. ಅನ್ನಕ್ಕೆ ಕೂಲಿ ಮಾಡಿ ತಿನ್ನುವ ದೇಹ ಪರಿಸರದಲ್ಲಿ ಬೆಂದು ಕೃಷ್ಣವರ್ಣವಾಗಿರುತ್ತದೆ. ಅಂತಹ ಕಷ್ಟ ಜೀವಿಗಳ ಉದರದಲ್ಲಿ ಕಪ್ಪಾಗಿ ಹುಟ್ಟುವುದು ನಮ್ಮ ಜನ್ಮಾಂತರ ಪುಣ್ಯ. ಜಗಕ್ಕೆ ಗುರು ಕೃಷ್ಣ ಕಪ್ಪು. ಶತೃಸಂಹಾರಕ ಭೈರವ ಕಪ್ಪು. ಲಯಕಾರಕ ಶಿವ ಕಪ್ಪು. ಕಾಳಿಮಾತೆ ಕಪ್ಪು. ದೇಹಕಪ್ಪಾಗಿದ್ದರು ಪರವಾಗಿಲ್ಲ. ಆದರೆ ಹೃದಯ ಕಪ್ಪಾಗಿ ಇರಬಾರದು. ಇದನ್ನೂ ಓದಿ: ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು: ಜಗ್ಗೇಶ್ ಆಕ್ರೋಶ

    ಬಿಳಿಚರ್ಮಕ್ಕೆ ಸಹಜವಾಗಿ ಜನ ಮರುಳಾಗೋದು ಶೇ.100ರಷ್ಟು ಸತ್ಯ. ಗುಣವಂತ ಹೆಣ್ಣು ಕಪ್ಪಗಿದ್ದರೆ ಮೂಗು ಮುರಿದು, ಬಿಳಿಹೆಣ್ಣ ಬೇಗ ಒಪ್ಪಿ ಮದುವೆ ಆಗುತ್ತಾರೆ. ನಂತರ ಜೀವನ ಪೂರ ಬಾಯಿಬಡಿದುಕೊಂಡು ಬಾಳುವವರನ್ನು ಬಹಳ ಮಂದಿ ನೋಡಿದ್ದೇವೆ. ವಿಶೇಷವಾಗಿ ನಮ್ಮ ಕಲಾರಂಗದಲ್ಲಿ ಚರ್ಮ ಬಿಳಿ ಇದ್ದರಂತು ಅವರ ಮೇಲೆ ದೇವತೆ, ರಂಬೆ ಕೊಂಬೆ ಕೆರೆಕಟ್ಟೆ ಎಂದು ಹಾಡು ಬರೆದು ಮೆರೆಸುತ್ತಾರೆ. ಜಾಲತಾಣವೆಲ್ಲಾ ಅಂತ ಬಿಳಿಸುಂದರಿಯೇ ಆವರಿಸಿ ಹಾರಾಡುತ್ತಾರೆ. ಎಷ್ಟೋ ಪ್ರತಿಭೆ ಕಪ್ಪು ಇದ್ದರೆ ಅವಕಾಶ ವಂಚಿತರಾಗುತ್ತಾರೆ. ಅದು ಅವರವರ ಅದೃಷ್ಟ ಎಂದು ಸಮಾಧಾನ ಹೇಳಿದೆ. ಇದನ್ನೂ ಓದಿ:  ಇಂದಿನ ಕಲಬೆರಕೆ ಮುಂದೆ 24 ಕ್ಯಾರೆಟ್ ಚಿನ್ನವಿದ್ದಂತೆ: ಪಂಡರೀಬಾಯಿ ಬಗ್ಗೆ ಜಗ್ಗೇಶ್ ಮಾತು

    https://www.instagram.com/p/CFXabTusAlQ/

    ದುನಿಯಾ ವಿಜಯ್ ಫೋನ್ ಕರೆ ಕಡಿತವಾದ ನಂತರ ತಲೆಯಲ್ಲಿ ಕಪ್ಪು ಹುಳ ಆವರಿಸಿತು. ಮೈಬಣ್ಣ ಕಪ್ಪಗಿದ್ದರು ಪರವಾಗಿಲ್ಲಾ ಚಿಂತನೆ ಅಪರಂಜಿಯಂತೆ ಇರಲಿ. ನಾವು ಶವವಾಗಿ ಸುಟ್ಟಾಗ ಕಪ್ಪುಬಿಳಿ ಬೇಧವಿಲ್ಲದೆ ದೇಹ ಬೂದಿಯಾಗುತ್ತದೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

  • ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಜೈಲುಪಾಲು

    ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಜೈಲುಪಾಲು

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ  ರಾಗಿಣಿ ಬೆನ್ನಲ್ಲೇ ಈಗ  ನಟಿ ಸಂಜನಾ ಜೈಲುಪಾಲಾಗಿದ್ದಾರೆ. ಈ ಮೂಲಕ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿದ ಎರಡನೇ ನಟಿ ಎಂಬ ಕುಖ್ಯಾತಿಗೆ ಸಂಜನಾ ಪಾತ್ರವಾಗಿದ್ದಾರೆ.

    ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾ ಜೊತೆ ವೀರೇನ್ ಖನ್ನಾ, ರವಿಶಂಕರ್‌ ಅವರನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ವೀರೇನ್ ಖನ್ನಾ, ರವಿಶಂಕರ್‌  14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರೆ ಸಂಜನಾಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.  ಸಂಜನಾ ಪ್ರಕರಣವನ್ನು ವಿಶೇಷ ಕೋರ್ಟ್‌ಗೆ ವರ್ಗಾಯಿಸಿದ ಜೆಡ್ಜ್‌ ಸೆ.18ರಂದು ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಸೂಚಿಸಿದರು.

    ಸಾಂತ್ವನ ಕೇಂದ್ರದಲ್ಲಿದ್ದ ಸಂಜನಾರನ್ನು ಬೆಳಗ್ಗೆ ಕೆಸಿ ಜನರಲ್ ಆಸ್ಪತ್ರಗೆ ಕರೆತಂದು ವೈದ್ಯಕೀಯ ಪರೀಕ್ಷೆ, ಕೊರೊನಾ ಟೆಸ್ಟ್‌  ನಡೆಸಲಾಯಿತು. ಬಳಿಕ ಸಾಂತ್ವನ ಕೇಂದ್ರಕ್ಕೆ ಕರೆತಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಂದಿನ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಕಸ್ಟಡಿಗೆ ನೀಡುವಂತೆ ಕೇಳಿರಲಿಲ್ಲ. ಹೀಗಾಗಿ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತು.

    ಸೋಮವಾರ ನಟಿ ರಾಗಿಣಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ವೇಳೆ ಸಿಸಿಬಿ ಪೊಲೀಸರು ಸಂಜನಾರನ್ನು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕೇಳಿದ್ದರು. ಆದರೆ ಕೋರ್ಟ್‌ 2 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿತ್ತು.

    ರಾಗಿಣಿ ಸೇರಿದಂತೆ ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ.

     

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

  • ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

    ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

    ಬೆಂಗಳೂರು: ನಟಿ ರಾಗಿಣಿಗೆ ಇಂದು ಜಾಮೀನು ಭಾಗ್ಯವಿಲ್ಲ. ಜಾಮೀನು ಅರ್ಜಿಯ ವಿಚಾರಣೆ ಸೆ.16ಕ್ಕೆ ಮುಂದೂಡಲಾಗಿದೆ.

    ಸರ್ಕಾರಿ ವಕೀಲರು ಜಾಮೀನು ಅರ್ಜಿಯ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್‌ ಬುಧವಾರಕ್ಕೆ ಜಾಮೀನು ಅರ್ಜಿಯನ್ನು ಮುಂದೂಡಿದೆ. ಇದನ್ನೂ ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ರಾಜ್ಯ ಸರ್ಕಾರ ಕಳೆದ ವಾರ ಅಭಿಯೋಜಕರನ್ನು ನೇಮಕ ಮಾಡಿದೆ. ಅವರು ಬಂದು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದೆ. ತನಿಖಾ ಹಂತದಲ್ಲಿ ಇರುವ ಕಾರಣ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೇಳಿದರು. ಸಿಸಿಬಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಜಾಮೀನು ಅರ್ಜಿಯನ್ನು ಸೆ.16ಕ್ಕೆ ಮುಂದೂಡಿತು.

    ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

  • ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾದ ತನಿಖೆಯನ್ನು ಪೊಲೀಸರು ಚುರುಕುಗೊಳಿಸುತ್ತಿದ್ದಂತೆ ನಟಿಯರು ಮಾತ್ರವಲ್ಲ ನಟರೂ ದಂಧೆಯಲ್ಲಿರುವ ವಿಚಾರ ಬೆಳಕಿಗೆ ಬರುತ್ತಿದೆ. ಅದರಲ್ಲೂ ಓರ್ವ ಖ್ಯಾತ ನಟ ಈ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಕೆಲ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದೆ.

    ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಬಂಧಿಸಿದ ಬಳಿಕ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಕಾರ್ತಿಕ್‌ ರಾಜು ಹೆಸರು ಕೇಳಿ ಬಂದಿದೆ.

    ಈಗ ಕಾರ್ತಿಕ್‌ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಬ್ಬೊಬ್ಬರ ವಿಚಾರಣೆಯ ವೇಳೆ ಹಲವು ಮಾಹಿತಿಗಳು ಲಭ್ಯವಾಗುತ್ತಿದೆ.

    ಮೂವರ ವಿಚಾರಣೆಯ ಸಂದರ್ಭದಲ್ಲಿ ಓರ್ವ ಖ್ಯಾತ ನಟನ ಬಗ್ಗೆ ಮಾಹಿತಿ ಸಿಕ್ಕಿರುವ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಕೆಲ ಚಿತ್ರಗಳಲ್ಲಿ ನಟಿಸಿದ್ದ ನಟ ಸೈ ಎನಿಸಿಕೊಂಡಿದ್ದು ಈಗ ನಟನಿಗೆ ಅವಕಾಶಗಳು ಸಿಗುತ್ತಿಲ್ಲ.

    ಈ ನಟನ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದರು. ಇಂದು ರಾಗಿಣಿ ವಿಚಾರಣೆಗೆ ಹಾಜರಾಗಿದ್ದರೆ ಈ ನಟನ ಪಾತ್ರದ ಕುರಿತು ಪಶ್ನಿಸಲು ಸಿದ್ಧತೆ ನಡೆಸಿದ್ದರು.

    ಇಂದಿನ ವಿಚಾರಣೆಗೆ ರಾಗಿಣಿ ಹಾಜರಾಗದೇ ವಕೀಲರನ್ನು ಕಳುಹಿಸಿಕೊಟ್ಟಿದ್ದರು. ಅಲ್ಲದೇ ಸೋಮವಾರದವರೆಗೆ ಸಮಯ ಕೇಳಿದ್ದರು. ಆದರೆ ಸಿಸಿಬಿ ಪೊಲೀಸರು ಸಮಯ ನೀಡದೇ ಶುಕ್ರವಾರವೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ನಾಳೆ ರಾಗಿಣಿ ವಿಚಾರಣೆಗೆ ಹಾಜರಾಗಬೇಕಿದೆ.
    ಇದನ್ನೂ ಓದಿ: ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

    ಪಬ್ಲಿಕ್‌ ಟಿವಿ ಜೊತೆ ಬೆಳಗ್ಗೆ ಮಾತನಾಡಿದ್ದ ಸಂಜನಾ, ಯಾಕೆ ನಟಿಯರನ್ನು ಮಾತ್ರ ಪ್ರಶ್ನಿಸಲಾಗುತ್ತಿದೆ. ನಟರನ್ನು ಪ್ರಶ್ನೆ ಮಾಡುವುದಿಲ್ಲ ಯಾಕೆ? ನಾವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಿ ಹಣವನ್ನು ಸಂಪಾದಿಸಿ ಕಾರುಗಳನ್ನು ಖರೀದಿಸಿದ್ದೇವೆ. ನಮ್ಮ ಆದಾಯದ ಮೇಲೆ ಯಾಕೆ ಅನುಮಾನ ಎಂದು ಕೇಳಿದ್ದರು.

  • ಡ್ರಗ್ಸ್‌ ಮಾಫಿಯಾ – ಬಂಧನ ಭೀತಿಯಿಂದ ಬೆಂಗಳೂರು ತೊರೆದ ಖ್ಯಾತ ನಟಿ

    ಡ್ರಗ್ಸ್‌ ಮಾಫಿಯಾ – ಬಂಧನ ಭೀತಿಯಿಂದ ಬೆಂಗಳೂರು ತೊರೆದ ಖ್ಯಾತ ನಟಿ

    ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸುತ್ತಿದ್ದಂತೆ ಖ್ಯಾತ ನಟಿ ಪರಾರಿಯಾಗಿದ್ದಾಳೆ.

    ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮತ್ತು ಇಂದ್ರಜಿತ್‌ ಲಂಕೇಶ್‌ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಸಿಸಿಬಿ ಪೊಲೀಸರು ನಾಲ್ವರು ನಟಿಯರಿಗೆ ನೋಟಿಸ್‌ ನೀಡಲು ಮುಂದಾಗಿದ್ದರು.

     

    ಈ ಪಟ್ಟಿಯಲ್ಲಿ ಇಂದು ನಟಿ ರಾಗಿಣಿಗೆ ಸಮನ್ಸ್‌ ನೀಡಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ರಾಗಿಣಿಯ ಬಳಿಕ ಖ್ಯಾತ ನಟಿಗೂ ಸಮನ್ಸ್‌ ಜಾರಿ ಮಾಡಲು ಮುಂದಾಗಿದ್ದರು. ಇದನ್ನೂ ಓದಿ: ನಟಿ ರಾಗಿಣಿಗೆ ನೋಟಿಸ್ – ಸಿಸಿಬಿಯಿಂದ ಆಪ್ತ ಅರೆಸ್ಟ್‌

    ಈ ಸಂಬಂಧ ಆಕೆಯನ್ನು ಸಂಪರ್ಕಿಸಲು ಯತ್ನಿಸಿದಾಗ ಆಕೆ ಈಗ ಬೆಂಗಳೂರು ತೊರೆದಿದ್ದಾಳೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ಖ್ಯಾತ ನಟಿ ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ಮೂಲಗಳ ಪ್ರಕಾರ ಬಂಧನ ಭೀತಿಯಿಂದ ನಟಿ ಮ್ಯಾನೇಜರ್‌ ಜೊತೆ ಕರ್ನಾಟಕವನ್ನು ತೊರೆದಿದ್ದು, ಪೊಲೀಸರು ಈಗ ಆಕೆಯ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.