Tag: sand mafia

  • ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

    ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

    ಕಲಬುರಗಿ: ಹೆಡ್‍ಕಾನ್ಸ್ಟೇಬಲ್ (Head Constable) ಮೇಲೆ ಟ್ರ್ಯಾಕ್ಟರ್ (Tractor) ಹರಿಸಿ ಕೊಲೆ ಮಾಡಿದ್ದ ಮರಳು ದಂಧೆಕೋರನನ್ನು (Sand Mafia) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರೋಪಿಯನ್ನು ಸಾಯಿಬಣ್ಣ ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣ ಮತ್ತು ಸಾಯಿಬಣ್ಣ ಇಬ್ಬರು ಸಹೋದರರು. ಆರೋಪಿ ಸಿದ್ದಣ್ಣನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾತ್ರೆ ತೊಳೆದ ನೀರು ಪಕ್ಕದ ಮನೆಯತ್ತ ಹರಿದಿದ್ದಕ್ಕೆ ಜಗಳ- ಯುವಕನ ಕೊಲೆ

    ಸಾಯಿಬಣ್ಣ ವಿಜಯಪುರ (Vijayapur) ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದ ಜಮೀನಿನಲ್ಲಿ ಅಡಗಿ ಕುಳಿತ್ತಿದ್ದ. ಆತನನ್ನು ಬಂಧಿಸಿ ಕಲಬುರಗಿಗೆ ಕರೆತರುವಾಗ, ಜೇರಟಗಿ ಗ್ರಾಮದ ಮಧ್ಯೆ ಮೂತ್ರ ವಿಸರ್ಜನೆಗೆ ಎಂದು ವಾಹನ ನಿಲ್ಲಿಸಲು ಮನವಿ ಮಾಡಿದ್ದಾನೆ. ಈ ವೇಳೆ ಲುಂಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಬಟನ್ ಚಾಕುವಿನಿಂದ ಯಡ್ರಾಮಿ ಠಾಣೆ ಪಿಎಸ್‍ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‍ಐ ಬಸವರಾಜ್ ಆತ್ಮರಕ್ಷಣೆಗಾಗಿ ಆರೋಪಿ ಸಾಯಿಬಣ್ಣ ಕಾಲಿಗೆ ಎರಡು ಸುತ್ತು ಫೈರಿಂಗ್ ಮಾಡಿ ಬಂಧಿಸಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಜೂನ್ 15 ರಂದು ಕಲಬುರಗಿ (Kalaburagi) ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆಯಲು ನೇಲೋಗಿ ಠಾಣೆ ಹೆಡ್‍ಕಾನ್ಸ್ಟೆಬಲ್ ಮೈಸೂರು ಅಲಿಯಾಸ್ ಮಯೂರ್ ಚೌವ್ಹಾಣ್ ಪ್ರಯತ್ನಿಸಿದ್ದರು. ಆದರೆ ಆರೋಪಿಗಳು ವಾಹನ ನಿಲ್ಲಿಸದೆ ಮಯೂರ್ ಮೇಲೆ ವಾಹನ ಹರಿಸಿದ್ದರು. ಬಳಿಕ ಪ್ರಮುಖ ಆರೋಪಿ ಸಾಯಿಬಣ್ಣ ತಲೆಮರೆಸಿಕೊಂಡಿದ್ದ.

    ಆರೋಪಿ ಸಾಯಿಬಣ್ಣ ಕುಖ್ಯಾತ ರೌಡಿಶೀಟರ್ ಆಗಿದ್ದು, ಆತನ ಮೇಲೆ ನೇಲೋಗಿ ಪೊಲೀಸ್ ಠಾಣೆಯಲ್ಲಿ 2016 ರಲ್ಲೇ ರೌಡಿಶೀಟರ್ ಓಪನ್ ಮಾಡಲಾಗಿತ್ತು. ಅಲ್ಲದೇ ಸಾಯಿಬಣ್ಣನ ಮೇಲೆ ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿದ್ದವು. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಭೀಮಾ ನದಿ ತಟದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನೆ ಕಸುಬು ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಜೇವರ್ಗಿ (Jevargi) ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್‍ಐ ಗೌತಮ್ ಮತ್ತು ಕಾನ್ಸ್ಟೇಬಲ್ ರಾಜಶೇಖರ ಇವರನ್ನು ಎಸ್ಪಿ ಇಶಾ ಪಂತ್ ಅಮಾನತ್ತು ಮಾಡಿದ್ದಾರೆ. ಇದನ್ನೂ ಓದಿ: PublicTV Explainer: ಗೃಹಜ್ಯೋತಿ ಗ್ಯಾರಂಟಿ- ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

  • ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ

    ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ

    ಜೈಪುರ್: ಟ್ರ್ಯಾಕ್ಟರ್ ಹಾಗೂ ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿ ಹಾಗೂ ಆತನ ಮೂರು ಮಕ್ಕಳು ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ಅಲ್ವಾರ್‌ನ (Alwar) ಕಥೂಮರ್‌ನಲ್ಲಿ (Kathoomar) ನಡೆದಿದೆ.

    ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಟ್ರ್ಯಾಕ್ಟರ್‌ಗೆ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಶವವನ್ನು ರಸ್ತೆಯಲ್ಲಿ ಇರಿಸಿ ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್

     

    ಅಕ್ರಮ ಮರಳು ಗಣಿಗಾರಿಕೆಯ ವಾಹನಗಳು ವಿಪರೀತವಾಗಿವೆ. ಅದರಲ್ಲೂ ರಸ್ತೆಯಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಮರಳು ದಂಧೆಕೋರರ (Sand mafia) ಜೊತೆ ಪೊಲೀಸರು ಸಹ ಭಾಗಿಯಾಗಿದ್ದಾರೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪೊಲೀಸರ ಮನವೊಲಿಕೆ ಬಳಿಕ ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ

  • ಅರಂತೋಡಲ್ಲಿ ಗಣಿ ಇಲಾಖೆಗೆ ಡೋಂಟ್ ಕೇರ್- ಕಾಟಾಚಾರಕ್ಕೆ ದಾಳಿ, ಮರಳು ದಂಧೆ ನಿರಾತಂಕ

    ಅರಂತೋಡಲ್ಲಿ ಗಣಿ ಇಲಾಖೆಗೆ ಡೋಂಟ್ ಕೇರ್- ಕಾಟಾಚಾರಕ್ಕೆ ದಾಳಿ, ಮರಳು ದಂಧೆ ನಿರಾತಂಕ

    ಮಂಗಳೂರು: ನದಿಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಸ್ಪಷ್ಟ ಆದೇಶ ನೀಡಿದ್ದರೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದು ಆಯಕಟ್ಟಿನ ಜಾಗಗಳಲ್ಲಿ ಅಕ್ರಮ ದಂಧೆಗೆ ಗ್ರೀನ್ ಸಿಗ್ನಲ್ ನೀಡಿರುವುದು ಬೆಳಕಿಗೆ ಬಂದಿದೆ.

    ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮರಳುಗಾರಿಕೆ ನಿಲ್ಲಿಸುತ್ತೇವೆ ಎಂದು ಪೋಸ್ ಕೊಟ್ಟಿದ್ದರು. ಆದರೆ ಸಂಜೆಯ ಹೊತ್ತಿಗೆ ಮತ್ತೆ ಮರಳು ಸಾಗಾಟ ನಿರಾತಂಕವಾಗಿ ಆರಂಭಗೊಂಡಿದ್ದು, ಈಗಾಗಲೇ ನೂರಾರು ಲೋಡ್ ಗಳಷ್ಟು ಮರಳು ಸಾಗಾಟ (Sand Mafia) ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಅರಂತೋಡು ಕಾಮಧೇನು ಹೋಟೆಲ್ (Kamadhenu Hotel) ಮುಂಭಾಗ ಮಲ್ಲಡ್ಕಕ್ಕೆ ತೆರಳುವ ಸಾರ್ವಜನಿಕ ರಸ್ತೆಯನ್ನು ಮರಳು ಲಾರಿಗಳು ಹದಗೆಡಿಸಿಬಿಟ್ಟಿವೆ. ಮಲ್ಲಡ್ಕದ ಖಾಸಗಿ ವ್ಯಕ್ತಿಯ ಜಾಗದಲ್ಲಿ ಹಗಲು ಹೊತ್ತು ನದಿಯಿಂದ ಮರಳು ತೆಗೆದು ರಾಶಿ ಹಾಕಲಾಗುತ್ತಿದ್ದು, ಸಂಜೆಯಾಗ್ತಾ ಇದ್ದಂತೆ ಲಾರಿಗಳು ಮರಳು ಸಾಗಾಟ ಮಾಡುತ್ತಿವೆ. ಈ ಬಗ್ಗೆ ಸ್ಥಳೀಯ ಪಿಡಿಓ ಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನೂ ಓದಿ: ಮಳಲಿ ಮಸೀದಿ ವಿವಾದ – ವಿಹೆಚ್‌ಪಿ ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು

    ಇಲ್ಲಿನ ಅಕ್ರಮ ದಂಧೆಯಲ್ಲಿ ಪುತ್ತೂರು ಶಾಸಕರ (Puttur MLA) ಆಪ್ತನೊಬ್ಬ ತೊಡಗಿಕೊಂಡಿದ್ದು, ಶಾಸಕರ ಕೃಪೆಯಿಂದ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳವರೆಗೆ ಎಲ್ಲರೂ ಕೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಅರಂತೋಡು, ಅಜ್ಜಾವರ, ಮರ್ಕಂಜ, ಸಂಪಾಜೆಯಲ್ಲಿ ನಡೀತಾ ಇರೋ ಮರಳು ದಂಧೆಯಲ್ಲಿ ತೊಡಗಿರುವ ಉಬರಡ್ಕ ಮೂಲದ ವ್ಯಕ್ತಿ ಪುತ್ತೂರು ಶಾಸಕ ಮಠಂದೂರು ಜೊತೆ ಗುರುತಿಸಿಕೊಂಡಿದ್ದು, ಹತ್ತಾರು ಹೊಸ ಟಿಪ್ಪರ್ ಗಳನ್ನು ಮರಳು ಸಾಗಾಟಕ್ಕೆ ಬಳಸುತ್ತಿದ್ದು ಅಕ್ರಮ ಸಾಗಾಟದ ಬಗ್ಗೆ ಪ್ರಶ್ನೆ ಮಾಡಿದರೆ ಶಾಸಕರ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಾನೆ ಎನ್ನಲಾಗುತ್ತಿದೆ.

    ಈ ಅಕ್ರಮ ದಂಧೆಯಿಂದಾಗಿ ಸರಕಾರಕ್ಕೆ ರಾಜಧನ ಪಾವತಿಸಿ ಲೈಸೆನ್ಸ್ ಪಡೆದಿರೋ ಮರಳು ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜಧನವನ್ನು ಪ್ರತಿವರ್ಷ ಏರಿಸುವ ಸರಕಾರ ಇನ್ನೊಂದು ಕಡೆ ಅಕ್ರಮ ದಂಧೆಗೂ ಪ್ರೋತ್ಸಾಹ ನೀಡುತ್ತಿದೆ. ಹೀಗಾದರೆ ಯಾರನ್ನು ಕೇಳೋದು ಅಂತಾರೆ ಗುತ್ತಿಗೆ ಪಡೆದವರು. ಇನ್ನಾದರೂ ಜಿಲ್ಲಾಡಳಿತ, ಗಣಿ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಪಯಸ್ವಿನಿ ನದಿಯೊಡಲು ಬರಿದಾಗಿ ಪ್ರವಾಹ ಪರಿಸ್ಥಿತಿ ತಲೆದೋರುವ ದಿನಗಳು ದೂರವಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಟಿಪ್ಪರ್: ಯುವಕ ಸ್ಥಳದಲ್ಲೇ ಸಾವು

    ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಟಿಪ್ಪರ್: ಯುವಕ ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ಮರಳು ಸಾಗಣೆ ಟಿಪ್ಪರ್ ಹರಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಮಾರುತಿ (19) ಮೃತ ಯುವಕ. ಬೇಸಿಗೆ ಹಿನ್ನೆಲೆಯಲ್ಲಿ ಮನೆ ಮುಂಭಾಗದಲ್ಲಿ ಮಲಗಿದ್ದ ಮಾರುತಿ ಟಿಪ್ಪರ್‌ಗೆ ಬಲಿಯಾಗಿದ್ದಾನೆ. ಹೊಲದಲ್ಲೆ ಮನೆ ಮಾಡಿಕೊಂಡು ಮಾರುತಿ ಕುಟುಂಬ ಕೃಷಿ ಕೆಲಸ ಮಾಡಿಕೊಂಡಿತ್ತು. ಇವರ ಮನೆ ಎದುರೇ ಮರಳು ಸಂಗ್ರಹಣೆ ಅಡ್ಡಾ ಇದ್ದು, ಹಗಲು ರಾತ್ರಿ ಮರಳು ಸಾಗಣೆ ನಡೆಯುತ್ತದೆ. ನಿನ್ನೆ ರಾತ್ರಿ ಮರಳು ಲೋಡ್ ಬಂದಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ಮಂಜುನಾಥ್ ಹಾಗೂ ಹನುಮಂತ್ ಎನ್ನುವವರು ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೊರಗಡೆ ಮಲಗಿದ್ದ ಮಾರುತಿ ಮೇಲೆ ರಾತ್ರಿ ಬಂದ ಟಿಪ್ಪರ್ ಹರಿದು ದುರ್ಘಟನೆ ನಡೆದಿದೆ. ಮಾರುತಿ ಸಾವು ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಮಗಿನ್ನೂ ಅವಕಾಶವಿದೆ: ಹಿಜಬ್‌ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಸಿಎಂಗೆ ವಿದ್ಯಾರ್ಥಿನಿ ಮನವಿ

  • ರೈತರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ

    ರೈತರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚೆಗೆ ಅಕ್ರಮದ್ದೇ ಸದ್ದು ಹೆಚ್ಚಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಜೊತೆಗೆ ಫಿಲ್ಟರ್ ಮರಳು ದಂಧೆ ಕೂಡ ನಡೆಯುತ್ತಿದೆ. ಊರಿನ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಕೆರೆಯಲ್ಲಿ ಪ್ರಭಾವಿ ಮಹಾನುಭಾವನೊಬ್ಬ ಮರಳು ಮಾಫಿಯಾ ನಡೆಸುತ್ತಿದ್ದಾನೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಕಿರಬನಕಟ್ಟೆ ಕೆರೆ ಬಳಿ ಹಲವು ವರ್ಷಗಳಿಂದ ಮರಳು ಫಿಲ್ಟರ್ ದಂಧೆ ನಡೆಸಲಾಗುತ್ತಿದೆ. ಗ್ರಾಮದ ತಮ್ಮೇಗೌಡರು ಮತ್ತವರ ಮಕ್ಕಳಾದ ಅವಿನಾಶ್ ಹಾಗೂ ಆನಂದ್ ಈ ದಂಧೆ ನಡೆಸುತ್ತಿದ್ದಾರಂತೆ. ಕೆರೆ ಪಕ್ಕದ ತಮ್ಮ ಜಮೀನಿಗೆ ಹೊರಗಡೆಯಿಂದ ಲೋಡ್ ಗಟ್ಟಲೇ ಮಣ್ಣನ್ನು ತಂದು ಶೇಖರಣೆ ಮಾಡಿಕೊಂಡು ಕೆರೆಯೊಳಗೆ ಗುಂಡಿ ನಿರ್ಮಿಸಿ, ಫಿಲ್ಟರ್ ಮಾಡಿ ನಿತ್ಯ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮರಳನ್ನು ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರಗಳಿಗೆ ರವಾನಿಸುವ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಮಣ್ಣಿನ ರಾಶಿಯನ್ನು ಮರಳಾಗಿ ಪರಿವರ್ತಿಸಿ ಮಾರಾಟ ಮಾಡ್ತಿರುವ ದಂಧೆ ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿಗೂ ನಡೆಯುತ್ತಿದೆ. ಈ ದಂಧೆ ಕಾನೂನು ಬಾಹಿರವಾಗಿದ್ದು, ಫಿಲ್ಟರ್ ಮರಳಿನಿಂದ ನಿರ್ಮಿಸುವ ಮನೆ ತನ್ನ ಆಯಸ್ಸು ಕಳೆದುಕೊಳ್ಳುವ ಜೊತೆಗೆ ಕೆಲವೇ ವರ್ಷಗಳಲ್ಲಿ ಶಿಥಿಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ಈ ದಂಧೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಳ್ಳುತ್ತಿದ್ದು, ಕೆರೆಯ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ದಂಧೆಕೋರರಿಗೆ ಹೆದರಿ ಗ್ರಾಮಸ್ಥರು ವಿರೋಧ ಮಾಡುತ್ತಿಲ್ಲ. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 25 ಲೋಡ್ ಮರಳು ಹಾಗೂ ಮಣ್ಣನ್ನು ವಶಪಡಿಸಿಕೊಂಡಿದ್ದಾರೆ.

  • ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮರಳು ದಂಧೆ – ಅಧಿಕಾರಿಗಳು ಮೌನ, ಭಕ್ತರ ಆಕ್ರೋಶ

    ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮರಳು ದಂಧೆ – ಅಧಿಕಾರಿಗಳು ಮೌನ, ಭಕ್ತರ ಆಕ್ರೋಶ

    ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೇ ಕಳೆದೊಂದು ತಿಂಗಳಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಆಡಳಿತ, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

    ನದಿಯಲ್ಲಿ ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳು ಮೇಲೆತ್ತುತ್ತಿದ್ದು ಕುಮಾರಧಾರ ಸೇತುವೆಗೆ ಮುಂದೊಂದು ದಿನ ಕಂಟಕ ತಪ್ಪಿದ್ದಲ್ಲ. ಕೊರೋನಾ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಅಂತ್ಯದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಸ್ನಾನಘಟ್ಟದ ಹೂಳೆತ್ತುವ ಗುತ್ತಿಗೆ ಪಡೆದವರು ಮರಳು, ಶಿಲ್ಟ್ ಸಂಗ್ರಹಿಸಿ ಗಣಿ ಇಲಾಖೆಯ ಯಾರ್ಡ್ ಗಳಿಗೆ ಸಾಗಿಸುವ ಬದಲು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಭಕ್ತರು ದೂರಿದ್ದಾರೆ. ದಿನವೊಂದಕ್ಕೆ 50-60 ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದ್ದು ಸಂಜೆ 6 ಗಂಟೆಯ ಬಳಿಕ ಅನುಮತಿ ಇಲ್ಲದಿದ್ದರೂ ರಾತ್ರಿಯಾದರೂ ಹಿಟಾಚಿಯಲ್ಲಿ ಮರಳು ಅಗೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗಣಿ ಇಲಾಖೆ, ಅಧಿಕಾರಿಗಳಿಗೆ ತಿಳಿದಿದ್ದರೂ ಸುಮ್ಮನಿರುವುದೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಸುಬ್ರಮಣ್ಯ ದೇವಸ್ಥಾನದ ಸ್ನಾನಘಟ್ಟದಲ್ಲೇ ಪೊಲೀಸ್ ಔಟ್ ಪೋಸ್ಟ್ ಇದೆ. ಅವರ ಕಣ್ಣೆದುರಿಗೆ ಡ್ರೆಜ್ಜಿಂಗ್ ಬಳಸಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ದಾಳಿ ನಡೆದಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಶುಕ್ರವಾರ ಸಂಜೆಯೇ ಮಾಹಿತಿ ಪಡೆದಿದ್ದ ದಂಧೆಕೋರರು ರಾತೋರಾತ್ರಿ ಸಂಗ್ರಹಿಸಿದ್ದ ಮರಳು, 2 ಡ್ರೆಜ್ಜಿಂಗ್ ಮೆಷಿನ್, ಹಿಟಾಚಿ ಎಲ್ಲವನ್ನು ಮಂಗಮಾಯ ಮಾಡಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿ ಉಳಿದಿದ್ದ ಸೊತ್ತುಗಳನ್ನು ಸೀಜ್ ಮಾಡಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ದಂಧೆ ಯಾವ ರೀತಿ ನಡೀತಾ ಇದೆ ಅಂದ್ರೆ ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ ಮರಳು ದಾಸ್ತಾನು ಇಡುವುದು ಮಾತ್ರವಲ್ಲದೆ ಸರ್ಕಾರಿ ಕಚೇರಿ, ಆಸ್ಪತ್ರೆ ಆವರಣದಲ್ಲೂ ಅಭಿವೃದ್ಧಿ ಕಾಮಗಾರಿ ಎಂದು ಹೇಳಿಕೊಂಡು 50-60 ಲೋಡ್ ಮರಳು ದಾಸ್ತಾನು ಇಟ್ಟಿರುವ ಮಾಹಿತಿಯಿದೆ. ಇದನ್ನೂ ಓದಿ: ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್

    ಜಿಪಿಎಸ್, ಕ್ಯಾಮೆರಾ ಯಾವುದೂ ಇಲ್ಲ….!:
    ನದಿಯ ಹೂಳೆತ್ತುವ ನೆಪದಲ್ಲಿ ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇದರಲ್ಲಿ ಗಣಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್, ಲೈಸೆನ್ಸ್, ನಂಬರ್ ಪ್ಲೇಟ್, ಸಿಸಿ ಕ್ಯಾಮೆರಾ ಯಾವುದೂ ಇಲ್ಲ. ಒಂದು ಲೋಡ್ ಮರಳು 15-18 ಸಾವಿರ ರೂ. ತನಕ ಹೊರಗಡೆ ಮಾರಾಟವಾಗುತ್ತಿದ್ದು ಗಣಿ ಇಲಾಖೆಯ ಅಧಿಕೃತ ಲೈಸೆನ್ಸ್ ಇದ್ದು ಸಾವಿರಾರು ರೂಪಾಯಿ ಖರ್ಚು ಮಾಡಿ, ಕ್ಯಾಮೆರಾ, ಜಿಪಿಎಸ್ ಹಾಕಿ ಡ್ರೆಜ್ಜಿಂಗ್ ಗೆ ಅನುಮತಿಯಿಲ್ಲದೆ ದೋಣಿಗಳಲ್ಲಿ ಮರಳು ಸಂಗ್ರಹ ಮಾಡುವ ವ್ಯಾಪಾರಿಗಳು ಇವರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಕ್ರಮ ನಿಲ್ಲಿಸಲು ಹಿಂದೇಟು ಹಾಕುತ್ತಿರುವ ಆರೋಪವೂ ಇದೆ.

    ಕುಕ್ಕೆಯನ್ನು ಸಂಪರ್ಕಿಸುವ ಸೇತುವೆಗೆ ಅಪಾಯ…!:
    ಸ್ನಾನಘಟ್ಟದಲ್ಲಿ ಹೊಸ ಸೇತುವೆಯ ಅಡಿಯಲ್ಲಿ ಮರಳು ಸಂಗ್ರಹಕ್ಕೆ ಆಳವಾದ ಕುಳಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಅರಿವಿಲ್ಲದೆ ತೀರ್ಥಸ್ನಾನಕ್ಕೆ ನದಿಗಿಳಿಯುವ ಭಕ್ತರ ಪ್ರಾಣಕ್ಕೂ ಸಂಚಕಾರ ತಪ್ಪಿದ್ದಲ್ಲ. ಇದು ಹೀಗೆ ಮುಂದುವರಿದರೆ ಸೇತುವೆಗೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಲಾರಪಟ್ನ ಸೇತುವೆ ಮರಳು ದಂಧೆಗೆ ಕುಸಿದಿದ್ದರೆ ಮರವೂರು ಸೇತುವೆ ಬಿರುಕು ಬಿಟ್ಟಿದೆ. ಮುಂದೊಂದು ದಿನ ಇವುಗಳ ಸಾಲಿಗೆ ಕುಮಾರಧಾರ ಸೇತುವೆಯೂ ಸೇರಿದರೆ ಅಚ್ಚರಿ ಪಡಬೇಕಿಲ್ಲ.

  • ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

    ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

    ಬೆಂಗಳೂರು: ತಮ್ಮ ವಿರುದ್ಧದ ಆರೋಪಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

    ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದ್ದಕ್ಕೆ ‘ರೇಣುಕಾಚಾರ್ಯ ಅವರು ಪೊಲೀಸರಿಗೆ ಅವಾಜ್’ ಎನ್ನುವ ಸುದ್ದಿ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸೋಮವಾರ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಸತ್ಯಕ್ಕೆ ದೂರವಾದ ವಿಷಯ.

    ನಿನ್ನೆ ನನ್ನ ಮತ ಕ್ಷೇತ್ರದ ಬೇಲಿಮಲ್ಲೂರು ಸೇರಿದಂತೆ ಕೆಲವು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ರೈತರುಗಳು ಮನೆ ಕಟ್ಟಿಕೊಳ್ಳಲು #ಎತ್ತಿನ ಗಾಡಿ ಮತ್ತು #ಬೈಕ್ ಗಳಲ್ಲಿ ಲೀಗಲ್ ಕ್ವಾರೆಗಳಿಲ್ಲದ ನದಿ ದಡದಿಂದ ಮರಳನ್ನು ಹೊಡೆದುಕೊಳ್ಳುತ್ತಿದ್ದು ಇಷ್ಟು ದಿನ ಸುಮ್ಮನಿದ್ದ ಪೊಲೀಸ್ ಇಲಾಖೆಯವರು ಈಗ ತೊಂದರೆ ನೀಡುತ್ತಿದ್ದರೆ ಎಂದು ನನ್ನ ಬಳಿ ನೋವನ್ನು ಹೇಳಿಕೊಂಡರು.

    ಎಸ್‍ಪಿ ಸೂಚನೆ ಮೇರೆಗೆ ಮರಳನ್ನು ಸೀಜ್ ಮಾಡಲು ಹೋಗಿದ್ದ ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಬಡವರು ಮನೆ ಕಟ್ಟಿಕೊಳ್ಳಲು ಎತ್ತಿನ ಗಾಡಿ ಹಾಗು ಬೈಕ್ ಗಳಲ್ಲಿ ಹೊಡೆದು ಕೊಂಡಿರುವ ಮರಳನ್ನು ಸೀಜ್ ಮಾಡದಿರಲು ಸೂಚಿಸಿದೆನು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ ರೂ.10,000 ದರ ಇತ್ತು, ಈಗ ನಮ್ಮ ಸರ್ಕಾರ ಬಂದ ಮೇಲೆ ಸಾರ್ವಜನಿಕರಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮರಳು ಸಿಗುತ್ತಿದೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

    ಈ ಹಿಂದೆ ನನ್ನ ಮತ ಕ್ಷೇತ್ರದ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವ ಸಲುವಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದು ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕೆ ನಾನು ಈಗಲೂ ಬದ್ದವಾಗಿದ್ದೇನೆ. ದೇವಸ್ಥಾನ ಮಂದಿರ ಮಸೀದಿಗಳನ್ನು ಕಟ್ಟಿಕೊಳ್ಳಲು ನದಿ ದಡದಲ್ಲಿರುವ ಗ್ರಾಮಗಳಿಗೆ ಉಚಿತವಾಗಿ ಹಾಗು ನದಿ ದಡದಲ್ಲಿಲ್ಲದ ಗ್ರಾಮಗಳಿಗೆ ಅತಿ ಕಡಿಮೆ ದರದಲ್ಲಿ ಮರಳನ್ನು ಕೊಡಿಸುತ್ತಿದ್ದೇನೆ.

    ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ ಹಾಗು ಅಕ್ರಮ ಮರಳುಗರಿಕೆಯನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಆದ್ರೆ ಬಡ ಜನತೆಗೆ ತೊಂದರೆ ನೀಡಿದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಪ್ರಕಟಣೆ ಹೊರಡಿಸಿದ್ದಾರೆ.

  • ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

    ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

    ದಾವಣಗೆರೆ: ಕಾನೂನು ಸುವ್ಯವಸ್ಥೆ ಸರಿಪಡಿಸಲು ಮುಂದಾಗಿರುವ ನೂತನ ಎಸ್‍ಪಿ ರಿಷ್ಯಂತ್‍ಗೆ ಪ್ರಚಾರ ಪ್ರಿಯ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದಾರೆ.

    ಹೊನ್ನಾಳಿಯ ಅಕ್ರಮ ಮರಳು ಅಡ್ಡೆಗಳ ಮೇಲೆ ನಿನ್ನೆ ನಡೆದ ಪೊಲೀಸ್ ರೇಡ್‍ಗೆ ಸಿಟ್ಟಾಗಿರುವ ರೇಣುಕಾಚಾರ್ಯ, ಸಿಪಿಐ ದೇವರಾಜ್‍ಗೆ ಕರೆ ಮಾಡಿ ಎಸ್‍ಪಿ ರಿಷ್ಯಂತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಎಸ್‍ಪಿ ದೊಡ್ಡ ಹೀರೋನೇನ್ರೀ.. ಬಂದ ತಕ್ಷಣ ರೇಡ್ ಮಾಡಿಸಿದ್ದಾರೆ.. ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ.. ಮರಳುಗಾರಿಕೆ ಮಾಡೋರೇನು ರೇಪ್ ಮಾಡಿದ್ದಾರಾ? ಕೊಲೆ ಮಾಡಿದ್ದಾರಾ..? ಅವ್ರ ತಂಟೆಗೆ ಹೋದ್ರೆ ನಾನು ಸುಮ್ನೆ ಇರಲ್ಲ. ತಾಕತ್ ಇದ್ರೆ ಸೀಜ್ ಮಾಡಿರೋ ಮರಳನ್ನು ತುಂಬಿ ನೋಡೋಣ ಎಂದೆಲ್ಲಾ ನಾಲಗೆ ಹರಿಬಿಟ್ಟಿದ್ದಾರೆ.

    ಎಸ್‍ಪಿ ರಿಷ್ಯಂತ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಾಸಕ ರೇಣುಕಾಚಾರ್ಯ, ಸಿಪಿಐ ದೇವರಾಜ್ ಗೆ ಕರೆ ಮಾಡಿ ಎಸ್‍ಪಿಗೆ ಅವಾಜ್ ಹಾಕಿದ್ದಾರೆ. ಇನ್ನು ಈ ವೀಡಿಯೋವನ್ನು ರೇಣುಕಾಚಾರ್ಯ ಅವರೇ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿಕೊಂಡಿದ್ದಾರೆ.

  • ಶೀಘ್ರದಲ್ಲೇ ಉಚಿತ ಮರಳು ನೀತಿ- ವಿಧಾನಸಭೆಯಲ್ಲಿ ನಿರಾಣಿ ಘೋಷಣೆ

    ಶೀಘ್ರದಲ್ಲೇ ಉಚಿತ ಮರಳು ನೀತಿ- ವಿಧಾನಸಭೆಯಲ್ಲಿ ನಿರಾಣಿ ಘೋಷಣೆ

    – ಬಡವರಿಗೆ 100ರಿಂದ 200 ರೂ.ಗೆ ಒಂದು ಟನ್ ಮರಳು
    – ಗ್ರಾಮಪಂಚಾಯ್ತಿಯಿಂದ ನಗರಸಭೆವರೆಗೂ ಸೌಲಭ್ಯ

    ಬೆಂಗಳೂರು: ರಾಜ್ಯದಲ್ಲಿ ಬಡವರು ಹಾಗೂ ಜನ ಸಾಮಾನ್ಯರು 10 ಲಕ್ಷದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಯಲ್ಲಿ ಘೋಷಿಸಿದರು.

    ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮರಳು ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆಶ್ರಯ ಮನೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ 10 ಲಕ್ಷದೊಳಗಿನ ಮನೆಗೆ 100ರಿಂದ 200 ರೂ.ಗೆ ಒಂದು ಟನ್ ದರದಲ್ಲಿ ಪೂರೈಕೆ ಮಾಡುವ ಉಚಿತ ಮರಳು ನೀತಿಯನ್ನು ಜಾರಿಗೆ ಮಾಡುತ್ತೇವೆ ಎಂದು ಪ್ರಕಟಿಸಿದರು.

    ಸರ್ಕಾರದಿಂದಲೇ ಉಚಿತವಾಗಿ ಮರಳು ಪೂರೈಕೆ ಮಾಡುವ ಯೋಜನೆ ಇದೆ. ಗ್ರಾಮ ಪಂಚಾಯಿತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವವರೆಗೆ ಇದು ಅನುಕೂಲವಾಗಲಿದೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ, ತೊರೆ ಮತ್ತಿತರ ಕಡೆ ಎತ್ತಿನಗಾಡಿ ಮೂಲಕ ಮರಳು ಸಾಗಿಸಲು ಅವಕಾಶ ಕಲ್ಪಿಸಿದ್ದೇವೆ. ಪ್ರಸ್ತುತ ರಾಜ್ಯದ 193 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಿ 87 ಬ್ಲಾಕ್‍ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

    1,2 ಮತ್ತು 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮೂಲಕ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ 4,5 ಮತ್ತು 6ನೇ ಶ್ರೇಣಿಯ ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್ ಹಾಗೂ ಅಣೆಕಟ್ಟಿನ ಇನ್ನೀರಿನ ಪ್ರದೇಶಗಳಲ್ಲಿ ಮರಳು ತೆಗೆಯಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿಗೆ ವಹಿಸಲಾಗಿದೆ ಎಂದರು.

    ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ 46 ಹಾಗೂ ಹಟ್ಟಿ ಚಿನ್ನದ ಗಣಿಶ್ರೇಣಿಯ 43 ಮರಳು ಬ್ಲಾಕ್‍ಗಳಲ್ಲಿ ಗಣಗಾರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

    ರಾಜ್ಯದ ಬಹುತೇಕ ಕಡೆ ಒಂದೇ ಪರ್ಮಿಟ್‍ನಲ್ಲಿ ಅನೇಕರು ಕಾನೂನು ಬಾಹಿರವಾಗಿ ಮರಳು ಸಾಗಿಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಈಗಾಗಲೇ ಅನೇಕ ಕಡೆ ಸಭೆಗಳನ್ನು ನಡೆಸಿ ಇದಕ್ಕೆ ಕಡಿವಾಣ ಹಾಕಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಅಧಿಕಾರಿಗಳನ್ನು ತನಿಖೆ ನಡೆಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಒಂದು ವೇಳೆ ನಮ್ಮ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

    ನಾನು ಪ್ರವಾಸ ಮಾಡಿದ ರಾಜ್ಯದ ಎಲ್ಲ ಕಡೆ ಮರಳಿನ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕಂದಾಯ, ಅರಣ್ಯ, ಗೃಹ, ಪರಿಸರ ಮತ್ತು ಮಾಲಿನ್ಯನಿಯಂತ್ರಣ ಮಂಡಳಿಯಲ್ಲಿ ಇಂತಹ ದೂರುಗಳು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಏಕಗಾವಾಕ್ಷಿ ಪದ್ಧತಿಯನ್ನು ಜಾರಿ ಮಾಡುತ್ತಿರುವುದಾಗಿ ತಿಳಿಸಿದರು.

    ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 150 ಕೋಟಿ ರೂ. ಆದಾಯ ಬರುತ್ತದೆ. ಕೆಲವು ಕಡೆ ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಎಲ್ಲಿಯೂ ಕೂಡ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕೊಡುತ್ತಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸುವುದು ಖಚಿತ ಎಂದರು.

    ನಾನು ಸಚಿವನಾದ ನಂತರ ಜಿಲ್ಲಾ ಪ್ರವಾಸ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮಣ್ಣನ್ನು ಫಿಲ್ಟರ್ ಮಾಡಿ ಕೆಲವು ಕಡೆ ಮರಳು ತಯಾರಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಅವರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇದಕ್ಕೂ ಮುನ್ನ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಹಾಸನ ಸೇರಿದಂತೆ ರಾಜ್ಯದ ಅನೇಕ ಕಡೆ ಮಣ್ಣನ್ನು ಫಿಲ್ಟರ್ ಮಾಡಿ ಮರಳಿನ ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಬಳಕೆ ಮಾಡಿ ಮನೆ ಕಟ್ಟಿದರೆ ಕಟ್ಟಡಗಳು ಉರುಳಿ ಬೀಳುತ್ತವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

    ಶಾಸಕ ಡಾ.ಅನ್ನದಾನಿ ಮಾತನಾಡಿ, ರೈತರಿಗೆ ಎತ್ತಿನಗಾಡಿಯಲ್ಲಿ ಮರಳು ಸಾಗಾಣೆ ಮಾಡಲು ಅವಕಾಶ ಕೊಟ್ಟಿದ್ದೀರಿ ಎಂದು ಹೇಳುತ್ತೀರಿ. ಹಳ್ಳ-ಕೊಳ್ಳ, ಕೆರೆ ಮತ್ತಿತರ ಕಡೆ ಮರಳು ತೆಗೆಯಲು ಹೋದರೆ ಪೆÇಲೀಸರು ರೈತರ ಎತ್ತಿನಗಾಡಿಗಳನ್ನೇ ವಶಪಡಿಸಿಕೊಂಡಿದ್ದಾರೆ. ರಾತ್ರಿ ವೇಳೆ ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡಿದರೂ ಪೆÇಲೀಸರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

    ಇದಕ್ಕೆ ದನಿಗೂಡಿಸಿದ ಶಾಸಕ ಎಚ್.ಡಿ.ರೇವಣ್ಣ, ಬಹುತೇಕ ಕಡೆ ಇಂತಹ ಅಕ್ರಮ ನಡೆಯಿತ್ತಿದೆ. ಇದನ್ನು ಪರಿಶೀಲಿಸಲು ನಿಮ್ಮ ಇಲಾಖೆಯಲ್ಲಿ ಅಧಿಕಾರಿಗಳೇ ಇಲ್ಲ. ಒಂದಿಬ್ಬರು ಇದ್ದರೂ ಅವರು ಏನೂ ಮಾಡಲಾಗದ ಸ್ಥಿತಿಗತಿಯಲ್ಲಿ ಇರುತ್ತಾರೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಮರಳು ಸಾಗಾಣಿಕೆ ಮಾಡಿದರೆ ರೈತರ ಮೇಲೆ ಮೊಕದ್ದಮೆ ದಾಖಲಿಸುತ್ತೀರಿ. ಸರ್ಕಾರದ ಬೊಕ್ಕಸಕ್ಕೆ ನೂರಾನು ಕೋಟಿ ನಷ್ಟವಾಗುತ್ತಿದೆ. ಮೊದಲು ಇದನ್ನು ಸರಿಪಡಿಸಲು ಸ್ಪಷ್ಟವಾದ ಕಾನೂನು ತನ್ನಿ ಎಂದರು.

  • ಅಕ್ರಮ ಮರಳು ದಂಧೆಕೋರರಿಂದ ಜೀವ ಬೆದರಿಕೆ- ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ

    ಅಕ್ರಮ ಮರಳು ದಂಧೆಕೋರರಿಂದ ಜೀವ ಬೆದರಿಕೆ- ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ

    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಯುವಕ

    ಯಾದಗಿರಿ: ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಕಂಡ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ದಂಧೆಕೋರರು ಯುವಕನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾನೆ.

    ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸುಗುರು ಗ್ರಾಮದ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ವಿಪರೀತವಾಗಿದ್ದು, ಅಕ್ರಮ ಮರಳು ದಂಧೆಕೋರರ ದರ್ಪಕ್ಕೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ಸ್ಥಳೀಯ ಠಾಣೆಗಳ ಪೊಲೀಸರ ಕೃಪಾಕಟಾಕ್ಷ ಸಹ ಇರುವ ಅನುಮಾನ ಮೂಡಿದ್ದು, ಇದರಿಂದ ಅಮಾಯಕ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.

    ಮರಳು ಸಾಗಾಟಕ್ಕೆ ಜೆಸಿಬಿ ಆಪರೇಟಿಂಗ್ ಮಾಡಲು, ಅದೇ ಗ್ರಾಮದ ಮಲ್ಲಿಕಾರ್ಜುನ ತೆರಳಿದ್ದ, ಇದು ಅಕ್ರಮ ದಂಧೆ ಎಂದು ತಿಳಿಯದ ಮಲ್ಲಿಕಾರ್ಜುನ, ದಂಧೆ ನಡೆಯುತ್ತಿರುವುದನ್ನು ಸೆಲ್ಫಿ ವೀಡಿಯೋ ಮಾಡಿಕೊಂಡು, ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಬಳಿಕ ವಿಡಿಯೋ ವೈರಲ್ ಆಗಿದೆ. ಇದರಿಂದ ಕೋಪಗೊಂಡಿರುವ ಅಕ್ರಮ ಮರಳು ದಂಧೆಕೊರ ರಘುಪತಿ, ಮಲ್ಲಿಕಾರ್ಜುನ ಅವರ ಮನೆಗೆ ರಾತ್ರಿ ತೆರಳಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಗ್ರಾಮ ಬಿಡುವಂತೆ, ಅವಾಜ್ ಸಹ ಹಾಕಿದ್ದಾನೆ. ಈ ಬಗ್ಗೆ ರಘುಪತಿ ಸೇರಿ ಇನ್ನಿತರರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದರೂ ಆರೋಪಿಗಳ ವಿರುದ್ಧ ವಡಗೇರಾ ಠಾಣೆಯ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

    ಜೀವ ಬೆದರಿಕೆ ಹಿನ್ನೆಲೆ ಊರು ತೊರೆದಿರುವ ಮಲ್ಲಿಕಾರ್ಜುನ, ರಕ್ಷಣೆ ನೀಡಬೇಕೆಂದು ಎಸ್ಪಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಪೊಲೀಸರು ರಕ್ಷಣೆ ನೀಡದಿದ್ದರೆ ನಾವು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ, ಪೊಲೀಸ್ ಅಧಿಕಾರಿಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಒಂದು ವೇಳೆ ರಕ್ಷಣೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಪೊಲೀಸರೇ ಕಾರಣ ಎಂದು ಯುವಕ ಮಲ್ಲಿಕಾರ್ಜುನ ನೋವು ತೊಡಿಕೊಂಡಿದ್ದಾರೆ. ಯಾದಗಿರಿ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.