Tag: Sanatana Institute

  • ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ: ಸನಾತನ ಸಂಸ್ಥೆ

    ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ: ಸನಾತನ ಸಂಸ್ಥೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸನಾತನ ಸಂಸ್ಥೆ ಹೇಳಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚೇತನ್, ಗೌರಿ ಹತ್ಯೆ ಕೇಸಿನಲ್ಲಿ ಬಲಪಂಥೀಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇತರೆ ಹಿಂದೂ ಸಂಘಟಕರ ಹತ್ಯೆಯ ಹಿಂದಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿಬರುತ್ತಿವೆ. ಸನಾತನ ಸಂಸ್ಥೆಯ ಆಶ್ರಮದ ಒಳಗೆ ಇದುವರೆಗೂ ಯಾರು ಬಂದಿಲ್ಲ. ಗೌರಿ ಹತ್ಯೆಗೂ, ನಮಗೂ, ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದರು.

    ಎಸ್‍ಐಟಿ ಅಧಿಕಾರಿಗಳ ತಂಡ ಆಶ್ರಮದೊಳಗೆ ಹೋಗಿದೆ ಎನ್ನುವ ಸುದ್ದಿ ಪ್ರಕಟವಾಗಿದೆ. ಆದರೆ ಯಾರೂ ಇದೂವರೆಗೆ ಬಂದಿಲ್ಲ. ಅನಾವಶ್ಯಕವಾಗಿ ಬಲಪಂಥೀಯರನ್ನು ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

    ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳು ನ್ಯಾಯ ರೀತಿಯಲ್ಲಿ ತನಿಖೆಯಾಗುತ್ತಿಲ್ಲ. ರಾಜಕೀಯ ಒತ್ತಡದಿಂದ ಸನಾತನ ಸಂಸ್ಥೆ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಪ್ರಶಾಂತ್ ಪೂಜಾರಿ ಕೊಲೆಯಾದಾಗ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಎಸ್‍ಐಟಿ ಮಾಡಲಿಲ್ಲ, ಗೌರಿ ಹತ್ಯೆ ಆದಾಗ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಚೇತನ್ ರಾಜೇಶ್ ವ್ಯಕ್ತಪಡಿಸಿದರು.

    ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಇರುವುದರಿಂದ ಗೌರಿ ಹತ್ಯೆಯಲ್ಲಿ ರಾಜಕೀಯ ಒತ್ತಡದ ತನಿಖೆ ನಡೆಯುತ್ತಿದೆ. ಬೆಳಗಾವಿ ಸ್ಫೋಟ ಪ್ರಕರಣವನ್ನು ನಮ್ಮವರೇ ಮಾಡಿದ್ದು ಅಂತ ಹೇಳಿದರು. ದಾಬೋಲ್ಕರ್, ಪನ್ಸಾರೆ ಕೇಸುಗಳಲ್ಲಿಯೂ ನಮ್ಮ ಹೆಸರನ್ನೇ ಹೇಳುತ್ತಿದ್ದಾರೆ. ಅಮಾಯಕರನ್ನು ಆರೋಪಿಗಳನ್ನಾಗಿ ಮಾಡುತ್ತಿದ್ದಾರೆ. ಕಲುಬುರಗಿ ಹಾಗೂ ಗೌರಿ ಹತ್ಯೆಗೂ ಒಂದೇ ಸಾಮ್ಯತೆ ಇದೆ ಅಂತಾರೆ. ಕಂಟ್ರಿ ಮೇಡ್ ಪಿಸ್ತೂಲ್‍ನಿಂದ ಇಬ್ಬರ ಕೊಲೆ ಮಾಡಿದ್ದಾರೆ ಅಂತಾರೆ, ಸಾವಿರ ರೂಪಾಯಿಗೆ ಪಿಸ್ತೂಲು ಸಿಕ್ಕುತ್ತೆ, 7.65 ಎಂಎಂ ಪಿಸ್ತೂಲ್‍ನಲ್ಲಿ ಮಹಾರಾಷ್ಟ್ರದಲ್ಲಿ 400 ಕೊಲೆ ಮಾಡಿದ್ದಾರೆ ಎಂದೆಲ್ಲ ಹೇಳಿ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ದೂರಿದರು.

    ಕುಣಿಗಲ್ ಗಿರಿ ರೀತಿ ಪ್ರಚಾರಕ್ಕಾಗಿ ನಾವು ಎಸ್‍ಐಟಿ ಮುಂದೆ ಹೋಗಲು ನಾವು ಸಿದ್ಧರಿಲ್ಲ. ಎಸ್‍ಐಟಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಮ್ಮನ್ನು ಪ್ರಶ್ನಿಸಿಲ್ಲ, ಸನಾತನ ಸಂಸ್ಥೆಯ ಕಾರ್ಯಕರ್ತರ ತನಿಖೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಗೌರಿ ಕೊಲೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ. ನಮ್ಮಿಂದ ಯಾವುದೇ ಸಹಾಯ ಕೇಳಿದರೆ ಹೇಳಲು ಸಂಸ್ಥೆ ಸಿದ್ಧವಿದೆ. ಅಗತ್ಯಬಿದ್ದಲ್ಲಿ ಕಾನೂನಿನ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ಅಮೃತೇಶ್ ಹೇಳಿಕೆ ನೀಡಿದರು.

    ಸನಾತನ ಸಂಸ್ಥೆ ಸುದ್ದಿಗೋಷ್ಠಿಯ ನಡೆಸುವ ವಿಚಾರ ತಿಳಿದು ಎಸ್‍ಐಟಿಯ 8 ಮಂದಿ ಸದಸ್ಯರು ಪ್ರೆಸ್ ಕ್ಲಬ್‍ಗೆ ಬಂದಿದ್ದರು.

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಕೈವಾಡ?

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಕೈವಾಡ?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಪೊಲೀಸರು ಈಗ ಕೃತ್ಯದ ಹಿಂದೆ ಗೋವಾ ಮೂಲದ ಸನಾತನ ಸಂಸ್ಥೆ ಇರಬಹುದಾ ಎನ್ನುವ ಶಂಕೆ ವ್ಯಕ್ತಪಡಿಸಿದೆ.

    ಹೌದು. 7.65 ಎಂಎಂ ಪಿಸ್ತೂಲ್ ಬಳಸಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ. ವಿಚಾರವಾದಿಗಳಾದ ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಅವರ ಹತ್ಯೆಗೂ 7.65 ಎಂಎಂ ಪಿಸ್ತೂಲ್ ಬಳಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ಪಿಸ್ತೂಲ್ ಬಳಕೆಯ ಸಾಮ್ಯತೆ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ಎಸ್‍ಐಟಿ ಈಗ ಸನಾತನ ಸಂಸ್ಥೆಯ ರುದ್ರಪಾಟೀಲ್ ಬಗ್ಗೆ ಶೋಧ ಆರಂಭಿಸಿದೆ ಎಂದು ಎಸ್‍ಐಟಿ ಮೂಲಗಳು ಮಾಹಿತಿ ನೀಡಿವೆ.

    ರುದ್ರಪಾಟೀಲ್ ಮೂಲತಃ ಸಾಂಗ್ಲಿಯವನು. ಇವನು ಸನಾತನ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ. ಕಲಬುರ್ಗಿ ಹತ್ಯೆಯಲ್ಲಿ ಇವನು ಪ್ರಮುಖ ಪಾತ್ರವಹಿಸಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಈತನಿಗಾಗಿ ಎಸ್‍ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ. ಪ್ರಸ್ತುತ ರುದ್ರಪಾಟೀಲ್ ತನ್ನ ತಂಡದ ಜೊತೆ ನೇಪಾಳದಲ್ಲಿ ಅಡಗಿ ಕುಳಿತ್ತಿದ್ದಾನೆ ಎನ್ನುವ ಮಾಹಿತಿ ಇದೆ. ಆದರೆ ರುದ್ರಪಾಟೀಲ್ ಹೇಗಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ. ಪೋಲಿಸರ ಬಳಿ ಅವನ 15 ವರ್ಷದ ಫೋಟೋ ಬಿಟ್ಟರೆ ಬೇರೆ ಯಾವ ಮಾಹಿತಿಯೂ ಸಿಕಿಲ್ಲ.

    ರುದ್ರಪಾಟೀಲ್ ಜೊತೆ ವಿನಯ್ ಪವರ್ ಮತ್ತು ಸಾರಂಗ್ ಅಕೋಳ್ಕರ್ ಸೇರಿ ಈ ಹತ್ಯೆಗಳನ್ನು ಮಾಡಿದ್ದಾರೆ ಎನ್ನುವ ಶಂಕೆಯಿದ್ದು, ಇವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಮೂವರು ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಯ ವಾಂಟೆಡ್ ಪಟ್ಟಿಯಲ್ಲಿ ಇದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದಾರೆ.

    ಈಗಾಗಲೇ ಸಿಬಿಐ, ಎನ್‍ಐಎ, ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸರು ಎಷ್ಟೇ ಹೆಣಗಾಡಿದರೂ ಆರೋಪಿಗಳ ಬಗ್ಗೆ ಕಿಂಚಿತ್ತು ಮಾಹಿತಿ ಸಿಗುತ್ತಿಲ್ಲ. ಈ ಹಿಂದೆ ರುದ್ರಪಾಟೀಲ್ ಮೇಲೆ ಅನುಮಾನಗೊಂಡು ಅವನ ಗೆಳತಿಯನ್ನು ವಿಚಾರಣೆ ಮಾಡಲಾಗಿತ್ತು. ಆದರೆ ಈಗ ಅವನ ಗೆಳತಿಯೂ ನಾಪತ್ತೆಯಾಗಿದ್ದಾಳೆ.

    https://youtu.be/UDTNjtBKqr0

    https://youtu.be/aSiIrfYfaH0