Tag: Sana thimmaiah

  • ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್.ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ತೆರೆಕಂಡು ಇದೀಗ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಭರಪೂರ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಬಾಯಿಂದಬಾಯಿಗೆ ಹರಡಿಕೊಂಡ ಸದಭಿಪ್ರಾಯಗಳಿಂದಲೇ ಎರಡನೇ ದಿನ ಮತ್ತಷ್ಟು ಹೌಸ್‍ಫುಲ್ ಪ್ರದರ್ಶನದೊಂದಿಗೆ ಮಹಾ ಗೆಲುವಿನತ್ತ ದಾಪುಗಾಲಿಡುತ್ತಿದೆ. ಅಷ್ಟಕ್ಕೂ ಮೊದಲಿನಿಂದ ಬಿಡುಗಡೆಯ ಕಡೇ ಘಳಿಗೆಯವರೆಗೂ ಒಡೆಯನ ಮೇಲೆ ಕುದುರಿಕೊಂಡಿದ್ದ ಕ್ರೇಜ್ ಇತ್ತಲ್ಲಾ ಅದು ದೊಡ್ಡ ಮಟ್ಟದ ಗೆಲುವಿನ ಮುನ್ಸೂಚನೆಯಂತಿತ್ತು.

    ಒಂದೊಳ್ಳೆ ಕಂಟೆಂಟು ಮತ್ತು ಅದರಲ್ಲಿ ಮಾಸ್ ಮತ್ತು ಫ್ಯಾಮಿಲಿ ಮ್ಯಾನ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರೀತಿಗಳೇ ಅದನ್ನು ನಿಜವಾಗಿಸಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಮಾಸ್, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಥರದ ಪಾತ್ರಗಳಿಗೂ ಸರಿ ಹೊಂದುವಂಥಾ ನಟನೆ. ಒಂದು ಕಡೆ ಅವರ ಅಭಿಮಾನಿಗಳು ದರ್ಶನ್ ಸದಾ ಆಕ್ಷನ್ ಓರಿಯಂಟೆಡ್ ಪಾತ್ರಗಳಲ್ಲಿಯೇಮಿಂಚಬೇಕೆಂದು ಬಯಸುತ್ತಾರೆ. ಮತ್ತೊಂದು ಕಡೆಯಿಂದ ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಮತ್ತೆ ಮತ್ತೆ ಫ್ಯಾಮಿಲಿ ಮ್ಯಾನ್ ಆಗಿ ಕಣ್ತುಂಬಿಕೊಳ್ಳಲು ಕಾತರಿಸುತ್ತಾರೆ. ಈ ಥರದ ಪ್ರೇಕ್ಷಕರ ಎಲ್ಲ ಬೇಡಿಕೆ, ಆಶಯಗಳನ್ನೂ ತಣಿಸುವಂಥಾ ರೀತಿಯಲ್ಲಿ ಒಡೆಯ ಮೂಡಿ ಬಂದಿದೆ. ಈ ಕಾರಣದಿಂದಲೇ ಎರಡನೇ ದಿನ ಮತ್ತಷ್ಟು ಆವೇಗದಿಂದ ಈ ಸಿನಿಮಾಮುನ್ನುಗ್ಗುತ್ತಿದೆ.

    ಒಡೆಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ದರ್ಶನ್ ಅವರಂಥಾ ಸ್ಟಾರ್ ನಟರ ಸಿನಿಮಾಗಳೆಂದ ಮೇಲೆ ಒಂದು ಕ್ರೇಜ್, ದೊಡ್ಡ ಮಟ್ಟದ ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ ಅದೆಲ್ಲವನ್ನೂ ಮೀರಿದಂಥಾ ಮೇಲ್ಮಟ್ಟದಲ್ಲಿ ಅಂಥಾ ಸಿನಿಮಾಗಳು ಮೂಡಿ ಬಂದಾಗ ಪ್ರೇಕ್ಷಕರ ಸಂತಸಕ್ಕೆ ಎಲ್ಲೆಗಳೇ ಇರುವುದಿಲ್ಲ. ಒಡೆಯನ ಗೆಲುವಿನ ನಾಗಾಲೋಟದ ಹಿಂದೆ ಇದೇ ಅಂಶ ಪ್ರಧಾನವಾಗಿ ಕೆಲಸ ಮಾಡಿದೆ.

    ಒಡೆಯ ಚಿತ್ರ ದರ್ಶನ್ ಅವರನ್ನು ಬೇರೆಯದ್ದೇ ಥರದಲ್ಲಿ ಅನಾವರಣಗೊಳಿಸಲಿದೆ ಅನ್ನೋ ನಂಬಿಕೆ ಈ ಹಿಂದಿನಿಂದಲೇ ಹುಟ್ಟಿಕೊಂಡಿತ್ತು. ಅವರಿಲ್ಲಿ ಗಜೇಂದ್ರನಾಗಿ ಅಬ್ಬರಿಸಿದ ರೀತಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಸ್ವರೂಪದ್ದು. ಇದರಿಂದಾಗಿಯೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಒಡೆಯ ಇಷ್ಟವಾಗಿದ್ದಾರೆ. ಈ ಹಿಂದೆ ಎನ್. ಸಂದೇಶ್ ಅವರು ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನ ಮೂಲಕ ದರ್ಶನ್ ಅಭಿನಯದ ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಎಂಬೆರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವೆರಡೂ ಸಿನಿಮಾಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಒಡೆಯ ಚಿತ್ರ ಆ ಸಾಲಿನಲ್ಲಿ ಸಂದೇಶ್ ಪ್ರೊಡಕ್ಷನ್ಸ್‍ಗೆ ಹ್ಯಾಟ್ರಿಕ್ ಗೆಲುವು ತಂದು ಕೊಟ್ಟಿದೆ.

    ಫ್ಯಾಮಿಲ್ ಕಂ ಆಕ್ಷನ್ ಸ್ವರೂಪದ ಈ ಕಥೆ ನಿಜಕ್ಕೂ ಮೋಡಿ ಮಾಡಿದೆ. ವರ್ಷದ ಕೊನೆಯನ್ನು ಒಡೆಯ ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಿಂದಲೇ ಶೃಂಗಾರಗೊಳ್ಳುವಂತೆ ಮಾಡಿದ್ದಾನೆ. ನೀವಿನ್ನೂ ಈ ಸಿನಿಮಾ ನೋಡಿಲ್ಲ ಎಂದಾದರೆ ಖಂಡಿತಾ ಒಮ್ಮೆನೋಡಿ. ಅತ್ಯುತ್ತಮ ಚಿತ್ರ ನೋಡಿದ ಖುಷಿಯೊಂದು ಮನಸು ಸೋಕುತ್ತದೆ.

  • ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ದರ್ಶನ್ ಅಭಿಮಾನಿಗಳ ಪಾಲಿಗೆ ಹ್ಯಾಟ್ರಿಕ್ ಹಬ್ಬದಂತೆ ಬಿಂಬಿಸಲ್ಪಟ್ಟಿದ್ದ ಚಿತ್ರ ಒಡೆಯ. ಒಂದು ಪಕ್ಕಾ ಫ್ಯಾಮಿಲಿ ಕಂ ಮಾಸ್ ಸಬ್ಜೆಕ್ಟಿನೊಂದಿಗೆ ರೂಪುಗೊಂಡಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ಸಂದೇಶ್ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಶುರುವಾತಿನಿಂದಲೂ ಮೂಡಿಸಿದ್ದ ನಿರೀಕ್ಷೆ, ಕುತೂಹಲಗಳದ್ದೊಂದು ಚೆಂದದ ಹಾದಿ. ದರ್ಶನ್ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡಾ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಳ್ಳೋದು ಅಪರೂಪದ ವಿದ್ಯಮಾನವೇನಲ್ಲ. ಆದರೆ, ಒಡೆಯನ ವಿಚಾರದಲ್ಲಿ ಅದರ ತೀವ್ರತೆ ತುಸು ಹೆಚ್ಚೇ ಇತ್ತು. ಅದೆಲ್ಲವೂ ತಣಿಯುವಂತೆ, ನಿರೀಕ್ಷೆಗೂ ಮೀರಿದ ಶೈಲಿಯಲ್ಲಿ ಈ ಸಿನಿಮಾವೀಗ ಪ್ರೇಕ್ಷಕರನ್ನು ಎದುರುಗೊಂಡಿದೆ.

    ಈಗಾಗಲೇ ದರ್ಶನ್ ಅವರ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಎಂ.ಡಿ ಶ್ರೀಧರ್ ನಿರ್ದೇಶನ, ಈ ಹಿಂದೆಯೇ ಎರಡು ಯಶಸ್ವೀ ಚಿತ್ರಗಳನ್ನು ದರ್ಶನ್‍ರೊಂದಿಗೆ ಕೊಡಮಾಡೊರೋ ಸಂದೇಶ್ ಪ್ರೊಡಕ್ಷನ್ ಬ್ಯಾನರ್‍ನ ನಿರ್ಮಾಣ… ಇದೆಲ್ಲದರೊಂದಿಗೆ ಮತ್ತೊಂದು ಮಹಾ ಗೆಲುವು ದಕ್ಕಿಸಿಕೊಳ್ಳುವ ಆವೇಗದೊಂದಿಗೇ ಈ ಸಿನಿಮಾ ಸಾಗಿ ಬಂದಿತ್ತು. ಒಂದರೆ ಕ್ಷಣವೂ ಅತ್ತಿತ್ತ ಕದಲದಂಥಾ ಕ್ಯೂರಿಯಾಸಿಟಿ, ಸದಾ ಅಂತರ್ಗತ ಒರತೆಯಂತೆ ಫ್ಯಾಮಿಲಿ ಸೆಂಟಿಮೆಂಟಿನ ಪಸೆಯನ್ನು ಕಾಪಾಡಿಕೊಂಡು ಸಾಗುವ ಗಟ್ಟಿ ಕಥೆ ಮತ್ತು ಇದೆಲ್ಲದರ ಕೇಂದ್ರ ಬಿಂದುವಾಗಿ ಅಬ್ಬರಿಸೋ ಗಜೇಂದ್ರನ ಪಾತ್ರಗಳೆಲ್ಲವೂ ಸೇರಿ ಒಡೆಯ ಚಿತ್ರವನ್ನು ಬೇರೆಯದ್ದೇ ಮಟ್ಟಕ್ಕೇರಿಸಿ ಬಿಟ್ಟಿವೆ.

    ಇಲ್ಲಿನ ಕಥೆಯ ಕೇಂದ್ರಬಿಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ವಹಿಸಿರುವ ಗಜೇಂದ್ರನ ಪಾತ್ರ. ಗಜೇಂದ್ರ ಟ್ರೇಡಿಂಗ್ ಮತ್ತು ಟ್ರಾನ್ಸ್‍ಪೋರ್ಟ್ ಕಂಪೆನಿಯ ಮಾಲೀಕ. ಹೀಗೆ ತನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದುಕೊಂಡೇ ವ್ಯಕ್ತಿಗತವಾಗಿ ತಮ್ಮಂದಿರ ಪ್ರೀತಿಯನ್ನೇ ಜಗತ್ತೆಂದುಕೊಂಡವನು ಗಜೇಂದ್ರ. ಹಾಗಂತ ಈತನದ್ದು ತನ್ನ ವ್ಯವಹಾರ ಮತ್ತು ವೈಯಕ್ತಿಕ ಬದುಕನ್ನೇ ಜಗತ್ತಾಗಿಸಿಕೊಂಡಿರೋ ವ್ಯಕ್ತಿತ್ವಲ್ಲ. ಗಜೇಂದ್ರ ಅನ್ಯಾಯ ಕಂಡರೆ ಕೆಂಡವಾಗಿ ಆರ್ಭಟಿಸುತ್ತಾನೆ. ಪ್ರೀತಿಯ ಮುಂದೆ ಕರಗುತ್ತಲೇ ರೈತರ ಪರವಾಗಿ ನಿಂತು ಬಡಿದಾಡುತ್ತಾನೆ. ಅನ್ಯಾಯವೆಸಗುವಾತ ಎಂಥಾದ್ದೇ ರಕ್ಕಸ ಪ್ರವೃತ್ತಿ ಹೊಂದಿದವನಾಗಿದ್ದರೂ ಸೆಡ್ಡು ಹೊಡೆದು ನಿಂತು ಮಣ್ಣು ಮುಕ್ಕಿಸುತ್ತಾನೆ.

    ಇದಿಷ್ಟು ಕಥಾ ಎಳೆಯೇ ದರ್ಶನ್ ಒಡೆಯನಾಗಿ ಅದ್ಯಾವ ಪರಿಯಾಗಿ ಮಿಂಚಿದ್ದಾರೆಂಬುದನ್ನು ಸಾರಿ ಹೇಳುತ್ತದೆ. ಮುಂದಿನ ಕಥೆಯ ಎಳೆ ಹೇಳೋದಕ್ಕಿಂತ ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿ ಖುಷಿ ಪಡುವುದೇ ಉತ್ತಮ. ಒಟ್ಟಾರೆಯಾಗಿ ಇಡೀ ಚಿತ್ರದಲ್ಲಿ ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಗಳು ಒಟ್ಟೋಟ್ಟಾಗಿಯೇ ಸಾಗುತ್ತವೆ. ಅದೆಲ್ಲವೂ ಕಣ್ಮನ ತಣಿಸುವಂಥಾ ದೃಷ್ಯ ವೈಭವದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ನಿರ್ದೇಶಕ ಎಂ.ಡಿ ಶ್ರೀಧರ್ ತಮ್ಮ ಕುಸುರಿ ಕಲೆಯ ಪಾಂಡಿತ್ಯವನ್ನು ಸಾಬೀತುಗೊಳಿಸಿದ್ದಾರೆ. ದರ್ಶನ್ ಅವರನ್ನು ಶ್ರೀಧರ್ ಇಲ್ಲಿ ಓರ್ವ ನಟನಾಗಿ ಮತ್ತೊಂದು ಮಟ್ಟಕ್ಕೇರುವಂತೆಯೇ ದೃಶ್ಯ ಕಟ್ಟಿದ್ದಾರೆ. ದರ್ಶನ್ ಗಜೇಂದ್ರನಾಗಿ ಅಬ್ಬರಿಸಿದ ರೀತಿಯ ಬಗೆಗಂತೂ ಯಾವ ವಿವರಣಗಳ ಅಗತ್ಯವೂ ಇಲ್ಲ.

    ಹೀಗೆ ದರ್ಶನ್ ಅವರೊಂದಿಗೆ ಸಲೀಸಾಗಿ ಎಣಿಸಲೂ ಕಷ್ಟವಾಗುವಷ್ಟು ದೊಡ್ಡ ತಾರಾಗಣ ಸಾಥ್ ನೀಡಿದೆ. ಆ ಇಡೀ ತಾರಾಗಣವನ್ನು ಇಲ್ಲಿನ ದೃಷ್ಯಗಳಿಗೆ ಬೇಕಾದಂತೆ ದುಡಿಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ಪಾತ್ರಗಳೂ ಮನಸಲ್ಲಿ ನೆಲೆ ನಿಲ್ಲುತ್ತವೆ. ರವಿಶಂಕರ್, ಶರತ್ ಲೋಹಿತಾಶ್ವ ಎಂದಿನಂತೆಯೇ ವಿಲ್ಲನ್ನುಗಳಾಗಿ ಅಬ್ಬರಿಸಿದ್ದಾರೆ. ಸಾಮಾನ್ಯವಾಗಿ ಅಬ್ಬರದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ದೇವರಾಜ್ ಇಲ್ಲಿ ಮತ್ತಷ್ಟು ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಒಡೆಯ ಎಲ್ಲ ವರ್ಗದ ಪ್ರೇಕ್ಷಕರೂ ಕೂತು ನೋಡಿ ಮನತಣಿಸಿಕೊಳ್ಳುವಂಥಾ ಸ್ವರೂಪದಲ್ಲಿಯೇ ಮೂಡಿ ಬಂದಿದೆ.

    ರೇಟಿಂಗ್: 4 / 5

  • ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರ ಪರಿಪೂರ್ಣವಾದ ಕೌಟುಂಬಿಕ ಕಥಾ ಹಂದರ ಹೊಂದಿರೋ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಟ್ರೇಲರ್, ಟೀಸರ್ ಮತ್ತು ಹಾಡುಗಳ ಮೂಲಕ ಒಡೆಯನ ಅದ್ದೂರಿತನದ ಮಜಲುಗಳು ಸಹ ಅನಾವರಣಗೊಂಡಿವೆ. ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ಅವರು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಇದರಲ್ಲಿ ದರ್ಶನ್ ತುಂಬಿದ ಮನೆಯ ಒಡೆಯನಾಗಿ, ಬಂಧಗಳಿಗೆ ಬೆಲೆ ಕೊಡುವ ನಾಯಕನಾಗಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಭರ್ಜರಿ ಆಕ್ಷನ್ ಸನ್ನಿವೇಶಗಳೂ ಈ ಸಿನಿಮಾದಲ್ಲಿ ಹೇರಳವಾಗಿದೆ. ಅದುವೇ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ಚಿತ್ರತಂಡದ ಭರವಸೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿಯೂ ಸ್ನೇಹಕ್ಕೆ, ಪ್ರೀತಿಗೆ ತುಂಬಾನೇ ಬೆಲೆ ಕೊಡುವಂಥಾ ವ್ಯಕ್ತಿತ್ವ ಹೊಂದಿರುವವರು. ಅವರನ್ನು ಫ್ಯಾಮಿಲಿ ಸಬ್ಜೆಕ್ಟಿನ ಚಿತ್ರಗಳಲ್ಲಿಯೇ ಕಾಣ ಬಯಸುವ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಆಗಾಗ ಆ ವರ್ಗದ ಪ್ರೇಕ್ಷಕರನ್ನು ತಣಿಸುವಂಥಾ ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಾರೆ. ಆದರೆ ಒಡೆಯ ಪೂರ್ತಿಯಾಗಿ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ತನ್ನನ್ನು ನಂಬಿದವರಿಗಾಗಿ ಏನು ಮಾಡಲೂ ಸಿದ್ಧವಿರುವ ಈ ಒಡೆಯ, ಎದುರಾಳಿಗಳು ಯಾರೇ ಇದ್ದರೂ ಎದೆ ಅದುರಿಸುವಂತೆ ಅಬ್ಬರಿಸಲೂ ಹಿಂದೆ ಮುಂದೆ ನೋಡುವವನಲ್ಲ. ಒಡೆಯ ಗಜೇಂದ್ರನ ಈ ಗುಣವೇ ಸದರಿ ಸಿನಿಮಾವನ್ನು ಪಕ್ಕಾ ಆಕ್ಷನ್ ಚಿತ್ರವಾಗಿಯೂ ಗಮನ ಸೆಳೆಯುವಂತೆ ಮಾಡಿದೆ.

    ದರ್ಶನ್ ಅಭಿಮಾನಿಗಳು ಸದಾ ಅವರನ್ನು ಆಕ್ಷನ್ ಪಾತ್ರಗಳಲ್ಲಿಯೇ ನೋಡಲು ಬಯಸುತ್ತಾರೆ. ಅಂಥವರೆಲ್ಲರನ್ನೂ ತಣಿಸುವಂಥಾ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಅದರ ಝಲಕ್‍ಗಳು ಈಗಾಗಲೇ ಟ್ರೇಲರ್, ಟೀಸರ್‍ಗಳಲ್ಲಿ ಕಾಣಿಸಿವೆ. ಒಟ್ಟಾರೆಯಾಗಿ ಒಡೆಯನನ್ನು ನಿರ್ದೇಶಕ ಎಂ ಡಿ ಶ್ರೀಧರ್ ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಿದ್ದಾರೆ. ಈ ಹಿಂದೆ ದರ್ಶನ್ ಅವರ ಫಸ್ಟ್ ಲುಕ್ ಅಭಿಮಾನಿಗಳು ಹುಚ್ಚೇಳುವಂತೆ ಮಾಡಿತ್ತು. ಅದನ್ನೇ ಮೀರಿಸುವಂಥಾ ಚೆಂದದ ಲುಕ್ಕುಗಳಲ್ಲಿ ದರ್ಶನ್ ಇಲ್ಲಿ ಒಡೆಯನಾಗಿ ಕಂಗೊಳಿಸಿದ್ದಾರೆ. ಇದೆಲ್ಲವೂ ಈ ವಾರವೇ ಪ್ರೇಕ್ಷಕರೆಲ್ಲರ ಮುಂದೆ ಅನಾವರಣಗೊಳ್ಳಲಿವೆ.

  • ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಈ ಮೂಲಕ ಅದೆಷ್ಟೋ ಕಾಲದಿಂದ ಅಭಿಮಾನಿಗಳಲ್ಲಿ ನಿಗಿನಿಗಿಸುತ್ತಿದ್ದ ಕಾತರ, ನಿರೀಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಸಿನಿಮಾ ಆರಂಭವಾದ ಕ್ಷಣದಿಂದಲೇ ಇದರ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಹುಟ್ಟಿಕೊಂಡಿತ್ತು. ಈ ಸಾಲಿನಲ್ಲಿ ಒಂದಷ್ಟು ಲೀಡ್ ನಟಿಯರ ಹೆಸರುಗಳೂ ತೇಲಿ ಹೋಗಿದ್ದವು. ಆದರೆ ಕಡೆಯೂ ಒಡೆಯನ ಒಡತಿಯಾಗಿ ನಿಕ್ಕಿಯಾಗಿದ್ದು ಕೊಡಗಿನ ಕುವರಿ ರಾಘವಿ ತಿಮ್ಮಯ್ಯ. ಮೊದಲ ಹೆಜ್ಜೆಯಲ್ಲಿಯೇ ಎಲ್ಲರೂ ಹುಬ್ಬೇರಿಸುವಂಥಾ ಅವಕಾಶ ಗಿಟ್ಟಿಸಿಕೊಂಡಿದ್ದ ರಾಘವಿಯ ಲಕ್ಕು ಈ ಸಿನಿಮಾ ಮೂಲಕವೇ ಬದಲಾಗೋ ಲಕ್ಷಣಗಳಿವೆ. ಈ ಕಾರಣದಿಂದಲೇ ಅವರು ಹೆಸರು ಬದಲಾವಣೆ ಮಾಡಿಕೊಂಡು ಇದೀಗ ಸನಾ ತಿಮ್ಮಯ್ಯ ಆಗಿ ಅವತರಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಬೇಕೆಂಬ ಆಸೆ ಮತ್ತು ಪೈಪೋಟಿ ಲೀಡ್ ನಟಿಯರ ವಲಯದಲ್ಲಿಯೇ ಇರುತ್ತದೆ. ಹಾಗಿರುವಾಗ ಹೊಸಾ ಹುಡುಗಿ ಸನಾ ಅವಕಾಶವನ್ನು ತನ್ನದಾಗಿಸಿಕೊಂಡಾಗ ಸಹಜವಾಗಿಯೇ ಎಲ್ಲರೂ ಹೆಬ್ಬೇರಿಸಿದ್ದರು. ಆದರೆ ಇಲ್ಲಿರೋ ತನ್ನ ಸವಾಲಿನಂಥಾ ಪಾತ್ರವನ್ನು ಸನಾ ಎಲ್ಲರೂ ಮೆಚ್ಚಿಕೊಳ್ಳುವಂತೆಯೇ ನಿಭಾಯಿಸಿದ್ದಾರಂತೆ. ಅದು ಸಾಧ್ಯವಾದದ್ದು ದರ್ಶನ್ ಹಾಗೂ ಇಡೀ ಚಿತ್ರತಂಡದ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಲೇ ಅನ್ನೋದು ಸನಾ ಅಭಿಪ್ರಾಯ. ಈ ನಿಟ್ಟಿನಲ್ಲಿ ಒಡೆಯ ಅಂದರೆ ಅವರ ಪಾಲಿಗೆ ಮಾರ್ಗದರ್ಶಕ ಮತ್ತು ಆತ್ಮಬಂಧು. ತನಗೆ ಇಂಥಾದ್ದೊಂದು ಅವಕಾಶ ಕೊಟ್ಟಿರೋ ಸಂದೇಶ್ ಪ್ರೊಡಕ್ಷನ್ಸ್ ಬಗ್ಗೆಯೂ ಸನಾಗೆ ಅಪಾರವಾದ ಗೌರವಾಧರಗಳಿವೆ.

    ಸನಾಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಅವಕಾಶ ಕೂಡಿ ಬಂದಿರೋದರ ಬಗ್ಗೆ ಖುಷಿಯಿದೆ. ಸವಾಲಿನಂಥಾ ನಾಯಕಿಯ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿರೋದರ ಬಗ್ಗೆ ಹೆಮ್ಮೆಯೂ ಇದೆ. ಇದರ ಜೊತೆ ಜೊತೆಗೇ ಒಡೆಯ ಕನ್ನಡಿಗರೆಲ್ಲರ ಪ್ರೀತಿ ಸಂಪಾದಿಸುವಂಥಾ ಹೆಮ್ಮೆಯ ಚಿತ್ರವಾಗಿ ಮೂಡಿ ಬಂದಿದೆಯೆಂಬ ಭರವಸೆ, ಅದು ದೊಡ್ಡ ಮಟ್ಟದಲ್ಲಿಯೇ ಗೆಲುವು ಕಾಣಲಿದೆ ಎಂಬ ನಂಬಿಕೆ ಸನಾರದ್ದು. ಇದೆಲ್ಲ ಏನೇ ಇದ್ದರೂ ಚೊಚ್ಚಲ ಚಿತ್ರದಲ್ಲಿಯೇ ದರ್ಶನ್ ನಾಯಕಿಯಾದ ಸನಾ ಅದೃಷ್ಟ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಸಿನಿಮಾ ಬಿಡುಗಡೆಯಾದ ನಂತರ ಸನಾ ನಟನೆಯನ್ನು ನೋಡಿಯೂ ಅದೇ ಅಚ್ಚರಿ ಮತ್ತೆ ಮಿರುಗುವಂತಾಗೋದರಲ್ಲಿ ಯಾವ ಸಂದೇಹವೂ ಇಲ್ಲ.