Tag: Sampaje

  • ಕೆಲಸಕ್ಕೆ ಹೋಗಿದ್ದಾಗ ಕಚ್ಚಿತು ನಾಯಿಮರಿ – ರೇಬಿಸ್‌ಗೆ ಸುಳ್ಯದ ಸಂಪಾಜೆಯ ಮಹಿಳೆ ಬಲಿ

    ಕೆಲಸಕ್ಕೆ ಹೋಗಿದ್ದಾಗ ಕಚ್ಚಿತು ನಾಯಿಮರಿ – ರೇಬಿಸ್‌ಗೆ ಸುಳ್ಯದ ಸಂಪಾಜೆಯ ಮಹಿಳೆ ಬಲಿ

    ಮಂಗಳೂರು: ರೇಬಿಸ್ (Rabies) ರೋಗಕ್ಕೆ ಸುಳ್ಯ ತಾಲೂಕಿನ (Sullia) ಸಂಪಾಜೆಯ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

    ಸಂಪಾಜೆಯ (Sampaje) ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಮಾ.7 ರಂದು ಅರಂತೋಡಿಗೆ ತೋಟದ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿದೆ. ನಾಯಿ ಮರಿ ಕಚ್ಚಿದ್ದರೂ ಮಹಿಳೆ ಯಾರಿಗೆ ತಿಳಿಸದೇ, ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ್ದರು.

    ಮಾ.17(ಸೋಮವಾರ) ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆ ಚಿಕಿತ್ಸೆಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ನೀರನ್ನು ನೋಡಿ ಕಿರುಚಾಡಲು ಆರಂಭಿಸಿದ್ದಾರೆ.  ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ

     

    ವಿಚಿತ್ರ ವರ್ತನೆ ತೋರುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಬಳಿ ಮತ್ತಷ್ಟು ಪ್ರಶ್ನೆ ಕೇಳಿದಾಗ ನಾಯಿ ಕಚ್ಚಿದ್ದನ್ನು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ (mangaluru Wenlock Hospital) ದಾಖಲಾಗುವಂತೆ ಸೂಚಿಸಿದ್ದಾರೆ.

    ಸುಳ್ಯ ವೈದ್ಯರ ಶಿಫಾರಸಿನಂತೆ ಮಹಿಳೆಯನ್ನು ವೆನ್ಲಾಕ್‌ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಾ.22) ಬೆಳಗ್ಗೆ ಮಹಿಳೆ ಮೃತಪಟ್ಟಿದ್ದಾರೆ.

    ವೈದ್ಯಕೀಯ ವರದಿಗಳು ಮಹಿಳೆಗೆ ರೇಬಿಸ್ ಸೋಂಕು ತಗುಲಿದ್ದನ್ನು ದೃಢಪಡಿಸಿದೆ. ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಅವರು ನೆಲೆಸಿದ್ದ ಪ್ರದೇಶ ಮತ್ತು ಕುಟುಂಬದ ಹಲವಾರು ಜನರಿಗೆ ರೇಬಿಸ್ ವಿರೋಧಿ ಲಸಿಕೆಗಳನ್ನು ನೀಡಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ತಿಳಿಸಿದ್ದಾರೆ.

    ಅರಂತೋಡಿನಲ್ಲಿ ಆ ನಾಯಿಮರಿ ಇತರರನ್ನು ಕಚ್ಚಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಯಿ ಕಚ್ಚಿದವರು ಕೂಡಲೇ ಲಸಿಕೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • Madikeri: ಗುಡ್ಡ ಕುಸಿಯುವ ಭೀತಿ; ಸಂಪಾಜೆ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ!

    Madikeri: ಗುಡ್ಡ ಕುಸಿಯುವ ಭೀತಿ; ಸಂಪಾಜೆ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ!

    ಮಡಿಕೇರಿ: ಸಂಪಾಜೆಯಿಂದ (Sampaje) ಮಡಿಕೇರಿ (Madikeri) ನಡುವಿನ ಕರ್ತೋಜಿ ಭಾಗದ ರಾಷ್ಟ್ರೀಯ ಹೆದ್ದಾರಿ 275ರ ರಸ್ತೆಯ ಬಲಬದಿ ಗುಡ್ಡ ಕುಸಿಯುವ (Landslide) ಸಾಧ್ಯತೆ ಇದ್ದು, ಜು.18 ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜ್ ತಿಳಿಸಿದ್ದಾರೆ.

    ಸಂಪಾಜೆಯಿಂದ ಮಡಿಕೇರಿ ನಡುವಿನ ಕಿಮೀ 90.05 ರಿಂದ 90.10ರ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಷೇಧದ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Shiradi Ghat: ವರುಣನ ಆರ್ಭಟ; ಶಿರಾಡಿಘಾಟ್ ರಸ್ತೆ ತಾತ್ಕಾಲಿಕ ಬಂದ್ – ಸಂಚಾರಕ್ಕೆ ಬದಲಿ ಮಾರ್ಗ!

    ತುರ್ತು ಸೇವೆ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕೊಡಗು ಜಿಲ್ಲೆಯ ಮೂಲಕ ಮೈಸೂರು, ಬೆಂಗಳೂರು ಮೊದಲಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು ಬದಲಿ ರಸ್ತೆಯಾದ ಚಾರ್ಮಾಡಿ ಘಾಟ್ – ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸಲ್ಲ – ಅಶೋಕ್‌ ಗುಡುಗು

  • ರಾಷ್ಟ್ರೀಯ ಹೆದ್ದಾರಿ ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಪ್ರತಾಪ್ ಸಿಂಹ ಚಾಲನೆ

    ರಾಷ್ಟ್ರೀಯ ಹೆದ್ದಾರಿ ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಪ್ರತಾಪ್ ಸಿಂಹ ಚಾಲನೆ

    ಮಡಿಕೇರಿ: ಸಂಪಾಜೆ-ಕಾಟಕೇರಿ (Sampaje – Katakeri) 21.6 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ (National Highway) ಡಾಂಬರೀಕರಣ ಕಾಮಗಾರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸೋಮವಾರ ಚಾಲನೆ ನೀಡಿದರು.

    ಸಂಪಾಜೆಯ ಗೇಟ್ ಬಳಿ ಚಾಲನೆ ನೀಡಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಸುಮಾರು 14.16 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಸಂಪಾಜೆಯಿಂದ ಸುಂಟಿಕೊಪ್ಪದವರೆಗೆ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಬೇಕಿದೆ ಎಂದು ಸಂಸದರು ಮಾಹಿತಿ ನೀಡಿದರು.

    ಕುಶಾಲನಗರದಿಂದ (Kushalnagar) ಸಂಪಾಜೆಯವರೆಗೆ ಅಪಘಾತ ವಲಯವನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.  ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ

    ಕೊಡಗು ಜಿಲ್ಲೆಯ ಕುಶಾಲನಗರದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು 1.3 ಕಿ.ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರೀಕರಣಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸಬೇಕಿದೆ ಎಂದರು. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    ಹೆದ್ದಾರಿಯಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ 8 ಕಡೆ ಸಣ್ಣಪುಟ್ಟ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜೋಡುಪಾಲ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು ಎಂದು ಸಂಸದರು ವಿವರಿಸಿದರು. 2018 ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 19 ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು. 2019 ರಲ್ಲಿಯೂ ಸಹ ಅತಿವೃಷ್ಟಿಯಾದ ಕಾರಣ 21 ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

    ಸಂಪಾಜೆ ಗ್ರಾ.ಪಂ.ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್, ಸಹಾಯಕ ಎಂಜಿನಿಯರ್ ಹನುಮಂತ, ಸುಧಾಕರಶೆಟ್ಟಿ ಇತರರು ಇದ್ದರು.

     

  • ಸಂಪಾಜೆಯ ಕೊಯನಾಡು ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ

    ಸಂಪಾಜೆಯ ಕೊಯನಾಡು ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ

    ಮಡಿಕೇರಿ: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಕೊಡಗು-ಸಂಪಾಜೆ (Kodagu-Sampaje) ಗ್ರಾಮದ ಕೊಯನಾಡು (Koyanadu) ಅರಣ್ಯ ಇಲಾಖೆ ಕಛೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ.

    ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಬಾರಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ (National Highway) ಪ್ರಾಧಿಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ- ಕೊಡಗು ಗಡಿಭಾಗದಲ್ಲಿ ಮಳೆ ಬಿರುಸು ಪಡೆದಿದೆ. ಈ ಹಿನ್ನೆಲೆ ಕಳೆದ ಮಳೆಗಾಲ ಸಮಯದಲ್ಲೇ ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟಿತ್ತು. ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬದಿಯಲ್ಲೇ ಮತ್ತೊಂದು ರಸ್ತೆಯನ್ನು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದನ್ನೂ ಓದಿ: ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ನಿದ್ರಾಹೀನ ಸ್ಥಿತಿಯಲ್ಲಿ ಇರುವುದರಿಂದ ಮತ್ತೊಮ್ಮೆ ಎರಡು ಜಿಲ್ಲೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷದ ಮಳೆಗಾಲದಲ್ಲಿ ಈ ಪ್ರದೇಶದ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿ, ನೆಪಮಾತ್ರಕ್ಕೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವ ನಾಮಫಲಕ ಹಾಕಿ ಮುಖ್ಯ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ತಾತ್ಕಾಲಿಕ ರಸ್ತೆಯಲ್ಲಿಯೇ ಕಳೆದೊಂದು ವರ್ಷದಿಂದ ವಾಹನ ಸಂಚಾರ ನಡೆಯುತ್ತಿತ್ತು. ಆದರೆ ಎರಡು ತಿಂಗಳ ಬಳಿಕ ಮುಖ್ಯ ರಸ್ತೆಗೆ ಇರಿಸಿದ್ದ ಬ್ಯಾರಿಕೇಡ್ ತೆಗೆದಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ವಾಣಿಜ್ಯ ಸಂಬಂಧಿಸಿದಂತೆ ಭಾರೀ ವಾಹನಗಳು ಹಾಗೂ ಸರ್ಕಾರಿ ಬಸ್ಸುಗಳು ಹೆದ್ದಾರಿಯಲ್ಲಿ ಸಂಚಾರ ನಡೆಸುತ್ತಿದ್ದವು. ಇದನ್ನೂ ಓದಿ: ಬಿಜೆಪಿ ಗ್ಯಾರಂಟಿ ಗಲಾಟೆಗೆ ವಿಧಾನ ಪರಿಷತ್ ಕಲಾಪ ಬಲಿ

    ಇದೀಗ ಮತ್ತೆ ಮುಖ್ಯ ರಸ್ತೆ ಬಂದ್ ಮಾಡಲಾಗಿದ್ದು, ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿದೆ. ಒಂದುವೇಳೆ ಮಳೆ ಹೆಚ್ಚಾಗಿ ರಸ್ತೆ ಸಂಪೂರ್ಣವಾಗಿ ಕುಸಿದರೆ ಎರಡೂ ಜಿಲ್ಲೆಗಳ ಸಂಪರ್ಕ ಕಡಿತಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ಪಾಪ ಬೇಸರದಲ್ಲಿ ಇದ್ದಾರೆ: ಡಿಕೆಶಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಪಾಜೆ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ – 2.41 ಲಕ್ಷ ರೂ. ಮೌಲ್ಯದ ವಸ್ತುಗಳು ಹಸ್ತಾಂತರ

    ಸಂಪಾಜೆ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ – 2.41 ಲಕ್ಷ ರೂ. ಮೌಲ್ಯದ ವಸ್ತುಗಳು ಹಸ್ತಾಂತರ

    – ಕಲ್ಲುಗುಂಡಿ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳಿಂದ ಸಹಾಯ
    – 4 ಸಿಸಿಟಿವಿ, 1 ಇನ್ವರ್ಟರ್, ತಲಾ 26 ಬೆಂಚ್-ಡೆಸ್ಕ್, 8 ಫ್ಯಾನ್ ಕೊಡುಗೆ

    ಮಂಗಳೂರು: ಮಕ್ಕಳ ಹಾಜರಾತಿ ಇಲ್ಲದೆ ರಾಜ್ಯದ ಹಲವು ಶಾಲೆಗಳು ಮುಚ್ಚಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಾವು ಓದಿದ ಸರ್ಕಾರಿ ಕನ್ನಡ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಕಲಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.

    ಹೌದು. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯ ಹಳೆ ವಿದ್ಯಾರ್ಥಿಗಳ ತಂಡವೇ ಇಂತಹದ್ದೊಂದು ಮಾದರಿ ಹೆಜ್ಜೆಯನ್ನಿಟ್ಟು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

    ವಿದ್ಯಾರ್ಥಿಗಳು ಒಂದಾಗಿದ್ದು ಹೇಗೆ?
    ನಮ್ಮೂರ ಶಾಲೆಯನ್ನು ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವಾಟ್ಸಪ್ ನಲ್ಲಿ ನೂರಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳ ತಂಡ ಒಂದಾಯಿತು. ಶಾಲೆಯ ಅಧ್ಯಾಪಕ ಬಳಗ, ಊರಿನ ಗುರು-ಹಿರಿಯರ ಮಾರ್ಗದರ್ಶನ ಪಡೆದು ಶಾಲೆಯ ಸಬಲೀಕರಣಕ್ಕೆ ಮುಂದಾಯಿತು. ಊರಿನ ಶಾಲೆಯ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು, ಮಕ್ಕಳಿಗೆ ಓದಲು ಪೂರಕ ವಾತಾವರಣ ನಿರ್ಮಿಸುವುದು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವುದೇ ಹಳೆ ವಿದ್ಯಾರ್ಥಿಗಳ ತಂಡದ ಪ್ರಮುಖ ಧ್ಯೇಯೋದ್ದೇಶವಾಗಿತ್ತು. ಇದನ್ನೂ ಓದಿ:  ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಕೊರೊನಾ ಸವಾಲು ಮೆಟ್ಟಿ ನಿಂತರು
    ನಮ್ಮೂರ ಶಾಲೆ ಉಳಿಸೋಣ ತಂಡ ಉಳಿಸೋಣ ವಾಟ್ಸಪ್ ಅಭಿಯಾನದ ನೇತೃತ್ವವನ್ನು ಪತ್ರಕರ್ತ ಹೇಮಂತ್ ಸಂಪಾಜೆ ವಹಿಸಿಕೊಂಡಿದ್ದರು. ಇವರಿಗೆ ಮಿತ್ರರಾದ ವಿನಯ್ ಸುವರ್ಣ, ಶರತ್ ಕೈಪಡ್ಕ ಸಾಥ್ ನೀಡಿದರು. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದರಿಂದ ಹೊರಗೆಲ್ಲೂ ಹೋಗುವ ಪರಿಸ್ಥಿತಿ ಇರಲಿಲ್ಲ. ಧನ ಸಂಗ್ರಹಿಸುವುದು ಹೇಗೆ ಎನ್ನುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ವಾಟ್ಸಪ್‌ನಲ್ಲಿಯೇ ಎಲ್ಲವನ್ನೂ ನಿಭಾಯಿಸಲಾಯಿತು. ಹಣದ ಖರ್ಚು ವೆಚ್ಚ, ತೆಗೆದುಕೊಂಡ ವಸ್ತುಗಳಗಳ ಬಿಲ್, ದಾನಿಗಳ ವಿವರ ಸೇರಿದಂತೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಮುಗಿಸಲಾಯಿತು. ತಂಡವು ಸಂಘಟಿತವಾಗಿ ರಚನಾತ್ಮಕ ಕಾರ್ಯ ವೈಖರಿಗೆ ಮುಂದಾಯಿತು. ಯಾರನ್ನೂ ಮುಖತಃ ಭೇಟಿಯಾಗದೇ ಕೇವಲ ವಾಟ್ಸಪ್ ಮೂಲಕ ನಮ್ಮೂರ ಶಾಲೆ ಉಳಿಸೋಣ ತಂಡ ಕೇವಲ 50 ದಿನಗಳಲ್ಲಿ 2,41,741 ರೂ. ಸಂಗ್ರಹಿಸಿತು. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಶಾಲೆಗೆ ಹಲವು ಮಂದಿ ಧನ ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದದ್ದು ವಿಶೇಷವಾಗಿತ್ತು.  ಇದನ್ನೂ ಓದಿ: ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    ಕನಸು ಹುಟ್ಟಿದ್ದೇಗೆ?
    ಕಲ್ಲುಗುಂಡಿ ಶಾಲೆಯಲ್ಲಿ ಇಂತಹದ್ದೊದು ಕೆಲಸವನ್ನು ಮಾಡಬೇಕು ಅನ್ನುವ ಕನಸಿನ ಆರಂಭದ ಹಿಂದೆ ಇರುವುದು ಪತ್ರಕರ್ತ ಹೇಮಂತ್‌ ಸಂಪಾಜೆ ಹಾಗೂ ವಿನಯ್ ಸುವರ್ಣ. ಇಬ್ಬರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಯ ಮೂಲಸೌಲಭ್ಯ ಕುಸಿದಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ತಕ್ಷಣ ದೃಢ ಸಂಕಲ್ಪ ಮಾಡಿದ ಅವರಿಬ್ಬರು ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್‌ ತೆರೆದರು. ಜಾಲತಾಣದ ಮೂಲಕ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿದರು. ‘ನಮ್ಮೂರ ಶಾಲೆ ಉಳಿಸೋಣ’ ಎಂಬ ವಾಟ್ಸಪ್ ಗುಂಪನ್ನು ಸೇರುವಂತೆ, ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದರು. ಇದಕ್ಕೆ ಹಳೆ ವಿದ್ಯಾರ್ಥಿಗಳು, ಊರಿನ ಹಾಗೂ ಪರವೂರಿನ ದಾನಿಗಳು ಸಹಾಯ ಹಸ್ತ ಚಾಚಿದರು. ಇದನ್ನೂ ಓದಿ: ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಜಿಎಂ (ನಿವೃತ್ತ) ರಮೇಶ್ ತೆಂಕಿಲ್ ಹಾಗೂ ಅವರ ತಂಡ, ಸಿನಿಮಾ ನಟ- ಬಾಡಿಬಿಲ್ಡರ್ ಎ.ವಿ.ರವಿ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ನಿರೂಪಕಿ ರೀನಾ ಡಿಸೋಜಾ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎನ್ ಕೆ ಶಿವಣ್ಣ, ಪ್ರೊ ಕಬಡ್ಡಿ ರೆಫ್ರಿ ಉಸ್ನಾ ನವಾಜ್, ಮಾಜಿ ಕಬಡ್ಡಿ ಆಟಗಾರರಾದ ಬಿಸಿ ರಮೇಶ್, ಮಾಜಿ ಕಬಡ್ಡಿ ತಾರೆ ಪ್ರಸಾದ್ ಬಾಬು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ ವೆಂಕಟೇಶ್, ಐಪಿಎಲ್ ಕ್ರಿಕೆಟ್ ನ ಪ್ರಮುಖ ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫಿಸಿಯೋ ಡಾ.ಶ್ರವಣ್, ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆ ಸೇರಿದಂತೆ ಪರವೂರಿನ ಹಲವು ಜನರು ಧನ ಸಹಾಯ ನೀಡಿ ಅಭಿಯಾನಕ್ಕೆ ಶಕ್ತಿ ತುಂಬಿದರು. ಹಳೆ ವಿದ್ಯಾರ್ಥಿಗಳಾದ ವಸಂತ್ ರೈ ಬಿವಿ ಸಂಪಾಜೆ, ಜಯಾನಂದ ಸಂಪಾಜೆ, ದಾಮೋದರ ಮಾಸ್ಟರ್ ಗೂನಡ್ಕ, ಸವೀತಾ ಟೀಚರ್, ಶಶಿಕಲಾ ಟೀಚರ್ ಹಳೆ ವಿದ್ಯಾರ್ಥಿಗಳ ತಂಡದ ಪ್ರಯತ್ನವನ್ನು ಬೆಂಬಲಿಸಿದರು. ಇದನ್ನೂ ಓದಿ: ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಕೊಡಗಿನ ಹಳೆ ವಿದ್ಯಾರ್ಥಿಗಳು

    ನಿಮ್ಮ ಊರಿನ ಶಾಲೆಯನ್ನೂ ಉಳಿಸಿ:
    ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಸ್ತಾವನೆ ಸದ್ಯ ರಾಜ್ಯ ಸರ್ಕಾರದ ಮುಂದಿದೆ. ನಮ್ಮ ಊರಿನಲ್ಲಿ ಅಂತಹ ಪರಿಸ್ಥಿತಿ ಬರಬಾರದು, ನಾವು ಓದಿದ ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಮುಚ್ಚಬಾರದು. ಭವಿಷ್ಯದಲ್ಲೂ ಶಿಕ್ಷಣಾಂಮೃತವನ್ನು ಕಲ್ಲುಗುಂಡಿಯ ಶಾಲೆ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆನ್ನುವ ಕನಸನ್ನಿಟ್ಟುಕೊಂಡ ಹಳೆ ವಿದ್ಯಾರ್ಥಿಗಳ ತಂಡ ಇಂತಹ ಕಾರ್ಯಕ್ಕೆ ಮುಂದಾಗಿದೆ.

  • 60 ದಿನಗಳ ಬಳಿಕ ಮತ್ತೆ ಪಾಸಿಟಿವ್ ಪ್ರಕರಣ- ಕೊಡಗಿಗೆ ಮತ್ತೊಂದು ಗಂಡಾಂತರ ಕಾದಿದೆಯಾ?

    60 ದಿನಗಳ ಬಳಿಕ ಮತ್ತೆ ಪಾಸಿಟಿವ್ ಪ್ರಕರಣ- ಕೊಡಗಿಗೆ ಮತ್ತೊಂದು ಗಂಡಾಂತರ ಕಾದಿದೆಯಾ?

    ಮಡಿಕೇರಿ: ಕಳೆದ 60 ದಿನಗಳಿಂದ ಗ್ರೀನ್‍ಝೋನ್‍ನಲ್ಲಿದ್ದ ಕೊಡಗು ಜಿಲ್ಲೆಗೆ ಮತ್ತೆ ಆತಂಕ ಎದುರಾಗಿದೆ. ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೇ 16 ರಂದು 45 ವಯಸ್ಸಿನ ಮಹಿಳೆಯೊಬ್ಬರು, ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಅಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆ, ಅಲ್ಲಿಂದ ಕ್ಯಾಬ್ ಮಾಡಿಕೊಂಡು ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ ಸಂಪಾಜೆಗೆ ಬಂದಿದ್ದರು.

    ಸಂಪಾಜೆಯ ಚೆಕ್‍ಪೋಸ್ಟ್‍ನಲ್ಲೂ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಪಿ-1,224 ಮಹಿಳೆಯನ್ನು ಅಲ್ಲಿಂದ ನೇರವಾಗಿ ಅಂಬ್ಯುಲೆನ್ಸ್ ಮೂಲಕ ಕೊಡಗಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮಹಿಳೆಯ ವರದಿಯಲ್ಲಿ ಪಾಸಿಟಿವ್ ಬಂದಿರುವ ಪರಿಣಾಮ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೇ 5ರಿಂದ ಇದುವರೆಗೂ ಕೊಡಗು ಜಿಲ್ಲೆಗೆ 409 ಮತ್ತು ಹೊರ ಜಿಲ್ಲೆಗಳಿಂದ 7,268 ಜನರು ಆಗಮಿಸಿದ್ದಾರೆ. ಹೊರ ರಾಜ್ಯಗಳಿಂದ ಬಂದಿರುವವರಿಗೆ ಕ್ವಾರಂಟೈನ್ ಮಾಡಲಾಗಿದೆ.

    ಆದರೆ ಹೊರ ಜಿಲ್ಲೆಗಳಿಂದ ಬಂದಿರುವವರಿಗೆ ಹೋಂ ಕ್ವಾರಂಟೈನ್ ಕೂಡ ಮಾಡಿಲ್ಲ. ಅವರು ಜಿಲ್ಲಿಯಲ್ಲೆಲ್ಲಾ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಒಂದು ಪ್ರಕರಣ ಪಾಸಿಟಿವ್ ಬಂದಿರುವಾಗಲೇ ಹೊರ ಜಿಲ್ಲೆಗಳಿಂದ ಬಂದಿರುವವರು ಆರಾಮಾಗಿ ಓಡಾಡಿಕೊಂಡಿರುವುದು ಜನರಿಗೆ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೂ ಬಂದಿರುವವರಿಗೂ ಜಿಲ್ಲಾಡಳಿತ ಹೋಂಕ್ವಾರಂಟೈನ್ ಮಾಡುವ ಮೂಲಕ ಜಿಲ್ಲೆಯನ್ನು ಸಂರಕ್ಷಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

    ಇತ್ತ ಪಾಸಿಟಿವ್ ಪ್ರರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಂಬೈನಿಂದ ಕೊಡಗಿಗೆ ಬಂದಿದ್ದ 45 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆದರೆ ಜಿಲ್ಲೆಯ ಜನರಿಗೆ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಬರುವ ನಿರೀಕ್ಷೆ ಇದ್ದು, ಇನ್ನೂ ಪಾಸಿಟಿವ್ ವರದಿಗಳು ಬಂದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ 220 ಬೆಡ್ ಗಳ ಸಾಮರ್ಥ್ಯವಿದ್ದು, 11 ವೆಂಟಿಲೇಟರ್ ಗಳಿವೆ. ಅವುಗಳ ಮೂಲಕ 120 ಜನರಿಗೆ ಏಕಕಾಲದಲ್ಲಿ ಆಕ್ಸಿಜನ್ ಪೂರೈಸುವ ಸಾಮರ್ಥ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಮಡಿಕೇರಿ-ಸಂಪಾಜೆ ಹೈವೇ ದುರಸ್ತಿಗೆ ಕೇಂದ್ರದಿಂದ 58.8 ಕೋಟಿ ರೂ. ಬಿಡುಗಡೆ

    ಮಡಿಕೇರಿ-ಸಂಪಾಜೆ ಹೈವೇ ದುರಸ್ತಿಗೆ ಕೇಂದ್ರದಿಂದ 58.8 ಕೋಟಿ ರೂ. ಬಿಡುಗಡೆ

    ಮಡಿಕೇರಿ: ಕಳೆದ ಬಾರಿ ಸುರಿದ ಭಾರೀ ಮಳೆಗೆ ಸಂಪರ್ಕ ಕಳೆದುಕೊಂಡಿದ್ದ ಎನ್.ಹೆಚ್ 275 ಮಡಿಕೇರಿ-ಸಂಪಾಜೆ ರಸ್ತೆಯ ತಡೆಗೋಡೆ ನಿರ್ಮಾಣ ಹಾಗೂ ಮತ್ತಿತರೆ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ 58.8 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ.

    ಮಳೆಯಿಂದ ತೀವ್ರ ಹಾನಿಯಾಗಿರುವ ಎನ್‍ಹೆಚ್ 275 ಮಡಿಕೇರಿ-ಸಂಪಾಜೆ ರಸ್ತೆ ದುರಸ್ತಿಗೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು.

    ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ತಡೆಗೋಡೆ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ 58.8 ಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ಬಾರಿ ಸುರಿದ ಭಾರೀ ಮಳೆಯಿಂದಾಗಿ ಮಡಿಕೇರಿ ಸಂಪಾಜೆ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದೀಗ ದುರಸ್ತಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

  • #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    ಬೆಂಗಳೂರು: ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

    ಶಿರಾಡಿ, ಸಂಪಾಜೆ ಘಾಟಿ ಬಂದ್ ಆಗಿರುವ ಕಾರಣ ಈಗ ವಾಹನಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಸ್ತೆಯಲ್ಲಿ ಸಂಚರಿಸುತ್ತವೆ. ಚಾರ್ಮಾಡಿ ಘಾಟ್ ನಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಾಗಲೇ ಇರುವ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಿ ಎಂದು ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಈಗಾಗಲೇ ಪರ್ಯಾಯ ರಸ್ತೆಗಳು ಇದೆ. ಆದರೆ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಹೀಗಾಗಿ ಈ ರಸ್ತೆಗಳನ್ನೇ ಅಭಿವೃದ್ಧಿ ಪಡಿಸಿದರೆ ಈ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವ ಸಲಹೆಯನ್ನು ಜನ ನೀಡುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು! ಸುಲಭ ರಸ್ತೆಗಳು ಎಲ್ಲಿವೆ? ಎಷ್ಟು ಕಿ.ಮೀ ಇದೆ?

    ಬೇಡಿಕೆ ಯಾಕೆ?
    1. ಕರಾವಳಿಯ ನಗರಗಳಾದ ಮಂಗಳೂರು, ಉಡುಪಿ ರಾಜ್ಯದ ಪ್ರಮುಖ ನಗರಗಳಾಗಿ ಬೆಳೆದಿವೆ. ವಿಮಾನ ಮತ್ತು ರೈಲು ಸಂಪರ್ಕ ಇದ್ದರೂ ಬಹಳಷ್ಟು ಜನ ಈಗಲೂ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕೆಎಸ್ಆರ್‌ಟಿಸಿ ವೋಲ್ವೋ, ರಾಜಹಂಸ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಸರ್ಕಾರಿ ಬಸ್ಸಿಗೆ ಪೈಪೋಟಿ ಎನ್ನುವಂತೆ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಅತಿ ಹೆಚ್ಚು ಆದಾಯ ತರುವ ಮಾರ್ಗಗಳು ಬಂದ್ ಆಗಿರುವ ಕಾರಣ ಸರ್ಕಾರದ ಜೊತೆ ಖಾಸಗಿ ಕಂಪೆನಿಗಳಿಗೂ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.

    2. ಈ ಹಿಂದೆ ಚಾರ್ಮಾಡಿ ಘಾಟಿ ಮೂಲಕ ಮಂಗಳೂರನ್ನು ಬಸ್ಸಿನಲ್ಲಿ ಪ್ರಯಾಣಿಸಿದರೆ 8, 9 ಗಂಟೆಯಲ್ಲಿ ತಲುಪಬಹುದಾಗಿತ್ತು. ಆದರೆ ಈಗ ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟರೂ ಮಂಗಳೂರನ್ನು 9 ಗಂಟೆಯಲ್ಲಿ ತಲುಪಬಹುದು ಎನ್ನುವ ಖಾತರಿ ಇಲ್ಲ. ಅದರಲ್ಲೂ ಅಪಘಾತ, ವಾಹನಗಳು ಪಲ್ಟಿಯಾದರೆ ದಿನಗಟ್ಟಲೇ ಈ ರಸ್ತೆಯಲ್ಲಿ ಸಂಚಾರ ಬಂದ್ ಆಗುತ್ತಿದೆ.

    3. ಘಾಟಿ ರಸ್ತೆಗಳು ಬಂದ್ ಆದರೆ ಜನರ ಪ್ರಯಾಣಕ್ಕೆ ಮಾತ್ರ ಹೊಡೆತ ಬೀಳುವುದಿಲ್ಲ. ವ್ಯಾಪಾರಿಗಳ ಮೇಲೂ ಭಾರೀ ಹೊಡೆತ ಬೀಳುತ್ತದೆ. ಉದಾಹರಣೆಗೆ ಸಂಪಾಜೆ ಘಾಟಿ ಬಂದ್ ಆಗಿರುವುದರಿಂದ ಮಡಿಕೇರಿ, ಸುಳ್ಯ, ಪುತ್ತೂರು ತಾಲೂಕಿನ ಹೋಟೆಲ್ ಹಣ್ಣಿನ ಅಂಗಡಿ, ಜ್ಯೂಸ್… ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲೂ ಹೇಗೂ ವ್ಯಾಪಾರ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ರಸ್ತೆಗಳು ಬಂದ್ ಆದರೆ ಅವರ ಜೀವನೋಪಾಯಕ್ಕೂ ಕಷ್ಟವಾಗುತ್ತದೆ.

    4. ವ್ಯಾಪಾರಕ್ಕೆ ಕಡೆ ರಸ್ತೆ ಬಂದ್ ಹೊಡೆತ ಕೊಟ್ಟರೆ ಇನ್ನೊಂದು ಕಡೆ ಘಟ್ಟ ಪ್ರದೇಶಗಳಿಗೆ ಸರಕು ಸಾಗಣೆಕೆಗೂ ಕಷ್ಟವಾಗುತ್ತದೆ. ದೇಶದ 9ನೇ ಅತಿ ದೊಡ್ಡ ಬಂದರು ಎನ್ನುವ ಹೆಗ್ಗಳಿಕೆ ಮಂಗಳೂರು ಪಾತ್ರವಾಗಿದೆ. ಈ ಬಂದರಿಗೆ ರೈಲಿಗಿಂತ ಹೆಚ್ಚಾಗಿ ಸರಕುಗಳು ರಸ್ತೆಯ ಮೂಲಕವೇ ಬರುತ್ತಿದೆ. ಬಂದರಿನ ಜೊತೆಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಘಟಕ ಮಂಗಳೂರಿನಲ್ಲಿದೆ. ಉದಾಹರಣೆಗೆ ಈಗ ಕೊಡಗು ಜಿಲ್ಲೆಗೆ ಎಂಆರ್‌ಪಿಎಲ್ ನಿಂದ ತೈಲವನ್ನು ಕಳುಹಿಸುವುದೇ ದುಸ್ತರವಾಗಿದೆ. ಸಂಪಾಜೆ ಘಾಟಿ ಮೂಲಕ ಮಡಿಕೇರಿಗೆ 120 ಕಿ.ಮೀ ಕ್ರಮಿಸಿ ಟ್ಯಾಂಕರ್ ತಲುಪುತ್ತಿದ್ದರೆ ಈಗ 250ಕ್ಕೂ ಹೆಚ್ಚು ಕಿ.ಮೀ ಕ್ರಮಿಸಬೇಕಿದೆ.

    5. ದಕ್ಷಿಣ ಕನ್ನಡದ ಪ್ರತಿ ತಾಲೂಕು, ಗ್ರಾಮಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಬೆಳೆದಿರುವ ತರಕಾರಿಗಳನ್ನು ರೈತರು ಇಲ್ಲಿ ತಂದು ಮಾರಾಟ ಮಾಡುತ್ತಾರೆ. ಈಗ ರಸ್ತೆ ಸಂಪರ್ಕವೇ ಬಂದ್ ಆಗಿದ್ದರಿಂದ ರೈತರ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

    6. ಎರಡು ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಈಗ ಚಾರ್ಮಾಡಿ ಮೂಲಕವೇ ಸಂಚರಿಸುತ್ತಿದೆ. ಒಂದು ವೇಳೆ ವಾಹನಗಳ ಒತ್ತಡವನ್ನು ತಾಳಲಾರದೇ ಚಾರ್ಮಾಡಿಯ ರಸ್ತೆಯಲ್ಲೂ ಭೂ ಕುಸಿತವಾದರೆ ಸಂಪರ್ಕ ಮತ್ತಷ್ಟು ದುಸ್ತರವಾಗುತ್ತದೆ.

    7. ಈಗಾಗಲೇ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕೆಲವು ಕಡೆ ಮರಗಳನ್ನು ಕಡಿಯಬೇಕಾದಿತು. ಒಂದು ವೇಳೆ ಪರ್ಯಾಯ ರಸ್ತೆ ಇದ್ದು ಮತ್ತೊಂದು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರೆ ಅದು ತಪ್ಪಾಗುತ್ತದೆ. ಆದರೆ ಇಲ್ಲಿ ಯಾವುದೇ ಪರ್ಯಾಯ ರಸ್ತೆ ಇಲ್ಲದೇ ಇರುವ ಕಾರಣ ಅರಣ್ಯನಾಶವಾಗುತ್ತದೆ ಎನ್ನುವ ಕಾರಣ ನೀಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ.

    8. ರಸ್ತೆ ಸಂಪರ್ಕ ಬಂದ್ ಆದರೆ ವಿಶೇಷವಾಗಿ ಜಿಲ್ಲೆಗಳ ಗಡಿಯಲ್ಲಿರುವ ಮಂದಿ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದ ಜನತೆ ವಾಣಿಜ್ಯ ಕೆಲಸಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕನ್ನೇ ಅವಲಂಬಿಸಿದರೆ ಸರ್ಕಾರಿ ಕೆಲಸಕ್ಕೆ ಮಡಿಕೇರಿಗೆ ಹೋಗುವುದು ಅನಿವಾರ್ಯ. ಅದರಲ್ಲೂ ವಿದ್ಯಾರ್ಥಿಗಳಿಗೆ ಮತ್ತು ಪ್ರತಿನಿತ್ಯ ಉದ್ಯೋಗಕ್ಕೆ ತೆರಳುವ ಮಂದಿ ಪಾಡು ಹೇಳತೀರದಾಗಿದೆ.

    8. ಕೊನೆಯದಾಗಿ ಯಾವುದೇ ಅಭಿವೃದ್ಧಿ ಕೆಲಸ ನಡೆಯಬೇಕಾದರೆ ಅರಣ್ಯ ನಾಶವಾಗುತ್ತದೆ. ಅದರಲ್ಲೂ ರಸ್ತೆ ಸಂಪರ್ಕದಂತಹ ವಿಚಾರಗಳು ಬಂದಾಗ ಅನಿವಾರ್ಯವಾಗಿ ಮೊದಲ ಆದ್ಯತೆಯನ್ನು ರಸ್ತೆಗೆ ನೀಡಬೇಕಾಗುತ್ತದೆ. ಅರಣ್ಯನಾಶವನ್ನು ತಡೆಗಟ್ಟಬೇಕಾದರೆ ಮೊದಲು ಅರಣ್ಯ ಇಲಾಖೆಗೆ ಖಡಕ್ ಅಧಿಕಾರಿಗಳನ್ನು ನೇಮಿಸಿ ಟಿಂಬರ್ ಮಾಫಿಯಾವನ್ನು ತಡೆಗಟ್ಟಬೇಕು. ಟಿಂಬರ್ ಮಾಫಿಯಾ ನಡೆಯಬೇಕಾದರೆ ಗ್ರಾಮಸ್ಥರ ಸಾಥ್ ಇದ್ದೇ ಇರುತ್ತದೆ. ಹೇಗೆ ವ್ಯಕ್ತಿಗಳು ಖಾಸಗಿ ಆಸ್ತಿಯನ್ನು ರಕ್ಷಣೆ ಮಾಡುತ್ತಾರೋ ಅದೇ ರೀತಿಯಾಗಿ ಅರಣ್ಯವು ನನ್ನ ಆಸ್ತಿ. ಅದನ್ನು ನಾನು ರಕ್ಷಿಸುತ್ತೇನೆ ಎಂದು ಅರಣ್ಯದ ಬುಡದಲ್ಲಿರುವ ಜನ ಪಣ ತೊಡುವುದಿಲ್ಲವೋ ಅಲ್ಲಿಯವರೆಗೂ ಈ ಮಾಫಿಯಾವನ್ನು ತಡೆಗಟ್ಟಲು ಸಾಧ್ಯವಿಲ್ಲ.

     

     

     

    https://twitter.com/MeghanNaik/status/1032913383685799936

     

  • ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು

    ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು

    ಮಂಗಳೂರು: ದಕ್ಷಿಣ ಕನ್ನಡ-ಕೊಡಗು ಗಡಿಭಾಗ ಸಂಪಾಜೆಯ ಜೋಡುಪಾಲ ವ್ಯಾಪ್ತಿಯ ಜನರ ಪಾಡು ನರಕವಾಗಿದೆ. ತಮ್ಮದೆಲ್ಲವನ್ನೂ ಕಳೆದುಕೊಂಡು ಬಡ ಜನರು ಬೀದಿಗೆ ಬಿದ್ದಿದ್ದಾರೆ. ಜೋಡುಪಾಲದ 2 ನೇ ಮೊಣ್ಣಂಗೇರಿ ನಿವಾಸಿ 60ರ ವೃದ್ಧೆ ಗಿರಿಜಾ ಎಂಬವರು ನನ್ನ ಪರಿಸ್ಥಿತಿ ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಗಿರಿಜಾರ ಮಗಳು ಲತಾಮಣಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಕೆಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೊಣ್ಣಂಗೇರಿಯ ಮನೆಯಲ್ಲಿ ನಾನೊಬ್ಬಳೇ ವಾಸವಿದ್ದು, ನೋಡನೋಡುತ್ತಲೇ ಕಲ್ಲು ಬಂಡೆಗಳು ನೀರಿನೊಂದಿಗೆ ಉರುಳಿ ಬಂದು ತನ್ನ ಮನೆಯನ್ನು ಸೀಳಿಕೊಂಡು ಹೋಯಿತು. ಕೆಲಹೊತ್ತಿನಲ್ಲಿ ಕಾಡಿನಿಂದ ಆನೆಗಳು ಘೀಳಿಟ್ಟವು. ಬೆಳಗಿನವರೆಗೂ ಅಲ್ಲೆ ಪಕ್ಕದಲ್ಲಿ ಕೂತು, ಆರು ಗಂಟೆಗೆ ಇಳಿದು ಬಂದಿದ್ದೇನೆ ಎಂದು ಹೇಳಿದ್ದಾರೆ.

    ನನ್ನ ಮಗಳು ಲತಾಮಣಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾಳೆ. ಲತಾಳನ್ನು ಸಂಪರ್ಕಿಸಲು ಮೊಬೈಲ್ ನಂಬರ್ ಗೊತ್ತಿಲ್ಲ. ಏನು ಕೆಲಸ ಅನ್ನೋದೂ ಗೊತ್ತಿಲ್ಲ. ನನಗೆ ಹೀಗಾಗಿದ್ದು ಮಗಳಿಗೆ ಗೊತ್ತಿರಲಿಕ್ಕಿಲ್ಲ ಅಂತಾ ಅಲವತ್ತುಕೊಂಡಿದ್ದಾರೆ. ಸದ್ಯಕ್ಕೆ ಗಿರಿಜಾ ಸಂಪಾಜೆಯ ಗಂಜಿ ಕೇಂದ್ರದಲ್ಲಿದ್ದಾರೆ. ಬೆಂಗಳೂರಿನ ಮಂದಿ ನನ್ನ ಪರಿಸ್ಥಿತಿಯನ್ನು ಮಗಳಿಗೆ ತಿಳಿಸಲು ಸಾಧ್ಯವೇ ಅಂತಾ ಕೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುಡ್ಡ ಕುಸಿತಕ್ಕೆ ಓರ್ವ ಬಲಿ: ಸದ್ಯಕ್ಕೆ ಸಂಪಾಜೆ ಘಾಟಿ ಓಪನ್ ಆಗಲ್ಲ

    ಗುಡ್ಡ ಕುಸಿತಕ್ಕೆ ಓರ್ವ ಬಲಿ: ಸದ್ಯಕ್ಕೆ ಸಂಪಾಜೆ ಘಾಟಿ ಓಪನ್ ಆಗಲ್ಲ

    ಮಡಿಕೇರಿ: ಸಂಪಾಜೆ ಘಾಟಿ ರಸ್ತೆಯಲ್ಲಿರುವ ಜೋಡುಪಾಲದ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ದೇವರ ಕೊಲ್ಲಿ, ಜೋಡುಪಾಲ, ಮದೇನಾಡಿನಲ್ಲಿ ಭೂಕುಸಿತವಾಗುತ್ತಿದ್ದು ಬೆಟ್ಟ ಪ್ರದೇಶದಲ್ಲಿದ್ದ 250ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದವರಲ್ಲಿ ಕೆಲ ಮಂದಿಯನ್ನು ಮಡಿಕೇರಿ ಗಂಜಿ ಕೇಂದ್ರಕ್ಕೆ ಕಳುಹಿಸಿದರೆ ಇನ್ನು ಕೆಲವರನ್ನು ಸಂಪಾಜೆ, ಕಲ್ಲುಗುಂಡಿ, ಗೂನಡ್ಕದಲ್ಲಿರುವ ಶಾಲೆಗೆ ಕಳುಹಿಸಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ನಡೆಸಿದ ಸಂಪಾಜೆ ಶಮೀರ್ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆದು, ಹಲವು ಮಂದಿಯನ್ನು ನಾವು ರಕ್ಷಣೆ ಮಾಡಿದ್ದೇವೆ. ಪೊಲೀಸರ ಸಹಾಯದಿಂದ ಹಗ್ಗಕಟ್ಟಿ ರಕ್ಷಣಾ ಕಾರ್ಯಚರಣೆ ಮಾಡಿದ್ದೇವೆ. ಘಾಟಿ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಅಲ್ಲಲ್ಲಿ ಬಂಡೆಕಲ್ಲುಗಳು ಮತ್ತು ಗುಡ್ಡಗಳು ಜರಿದು ಬಿದ್ದಿದೆ. ಕೆಲವು ಕಡೆ ಬಿರುಕು ಬಿಟ್ಟಿದೆ. ಹೀಗಾಗಿ ಮಳೆ ನಿಂತು ರಸ್ತೆ ರಿಪೇರಿಯಾಗಲು ಹಲವು ದಿನಗಳು ಬೇಕಾಗಬಹುದು ಎಂದು ಹೇಳಿದರು. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಇಂದು ರಾತ್ರಿ ಸಂಪಾಜೆಯಲ್ಲಿರುವ ಗಂಜಿಕೇಂದ್ರದಲ್ಲಿರುವ ಸಂತ್ರಸ್ತರ ನೋವು ಅಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವ ಯುಟಿ ಖಾದರ್ ಆಗಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv