Tag: Sampage

  • ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಬೆಂಗಳೂರು: ಕೊಡಗನ್ನು ಸಂಪರ್ಕಿಸುವ ಸಂಪಾಜೆ ಘಾಟಿ ರಸ್ತೆ ಬಂದ್ ಆದ ಪರಿಣಾಮ ಪ್ರತಿನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂದೆ ಮಡಿಕೇರಿ ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದು, ಸರ್ಕಾರ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು.

    ಕೊಡಗು- ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಪಾಜೆ ಘಾಟಿ ರಸ್ತೆ ಕೊಚ್ಚಿ ಹೋಗಿದ್ದು ಅಲ್ಲಲ್ಲಿ ಗುಡ್ಡಗಳು ಜರಿದು ಬಿದ್ದ ಕಾರಣ ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿದೆ. ಕೊಡಗಿನ ಗ್ರಾಮಗಳಾದ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದವರಿಗೆ ವಾಣಿಜ್ಯ ವ್ಯವಹಾರಕ್ಕೆ ಸುಳ್ಯವೇ ಹತ್ತಿರವಾಗಿದ್ದರೂ ಉಳಿದ ಪ್ರತೀ ಕೆಲಸಕ್ಕೂ ತಾಲೂಕು ಮತ್ತು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ತೆರಳಬೇಕು. ಸಂಪಾಜೆಯಿಂದ ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾಗಿದ್ದ ಈ ಸ್ಥಳಕ್ಕೆ ಈಗ ಮಾರ್ಗವೇ ಇಲ್ಲದೇ ಜನ ಕಂಗಾಲಾಗಿದ್ದಾರೆ.

     

    ಸುಳ್ಯ, ಪುತ್ತೂರು ತಾಲೂಕಿನ ಹಲವು ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಶಿರಾಡಿ ಘಾಟಿಯಲ್ಲಿ ಸಂಪರ್ಕ ಬಂದ್ ಆದ ಹಿನ್ನೆಲೆಯಲ್ಲಿ ಸಂಪಾಜೆ ಘಾಟಿ ಮೂಲಕವೇ ಮಡಿಕೇರಿ ತಲುಪಿ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈಗ ಎರಡು ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯ ಮೂಲಕವೇ ಬೆಂಗಳೂರು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

    ಘಾಟಿ ರಸ್ತೆಗಳು ಬಂದ್ ಆಗಿದ್ದರೂ ಮುಂದೆ ಈ ರೀತಿ ಸಂಪರ್ಕ ಸಮಸ್ಯೆ ಆಗದೇ ಇರಲು ನಾವು ಈಗಲೇ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸುಳ್ಯ ಕಡೆಯಿಂದ ಕೊಡಗನ್ನು ಸಂಪರ್ಕಿಸಲು ಕಚ್ಚಾ ರಸ್ತೆಗಳಿದೆ. ಈ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿದರೆ ಕರಾವಳಿ ಭಾಗದ ಜನರು ಕೊಡಗನ್ನು ಸಂಪರ್ಕಿಸಲು ಸಹಾಯವಾಗುತ್ತದೆ.

    ಯಾವೆಲ್ಲ ರಸ್ತೆಗಳಿವೆ?
    ಮಾರ್ಗ 1: ಕಲ್ಲುಗುಂಡಿ – ಬಾಲಂಬಿ- ದಬ್ಬಡ್ಕ- ಚೆಟ್ಟಿಮಾನಿ- ಮಡಿಕೇರಿ ರಸ್ತೆ
    ಈ ರಸ್ತೆಯ ಮೂಲಕ ಸುಳ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 72 ಕಿಲೋ ಮೀಟರ್. ಕಲ್ಲುಗುಂಡಿಯಿದ್ದ ದಬ್ಬಡ್ಕದವರೆಗೆ ಡಾಂಬರ್ ಹಾಕಲಾಗಿದ್ದು, ಕಾಂತಬೈಲು ಸಮೀಪ ಎರಡು ಕಡೆ ಸಣ್ಣ ಸೇತುವೆಗಳು ನಿರ್ಮಾಣವಾದರೆ ಸುಲಭವಾಗಿ ಚೆಟ್ಟಿಮಾನಿ ತಲುಪಬಹುದು. ಬೇಸಿಗೆ ಸಮಯದಲ್ಲಿ ಈ ರಸ್ತೆಯಲ್ಲಿ ದಬ್ಬಡ್ಕದವರೆಗೂ ಬಸ್ ಸಂಚಾರವಿದೆ. ಲೋಕೋಪಯೋಗಿ ಅಧಿಕಾರಿಗಳು ಮನಸ್ಸು ಮಾಡಿದರೆ ಸುಳ್ಯದಿಂದ ಮಡಿಕೇರಿಗೆ ಒಂದುವರೆ ಗಂಟೆಯಲ್ಲಿ ತಲುಪಬಹುದಾಗಿದೆ.

    ಮಾರ್ಗ 2: ಅರಂತೋಡು-ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಡಮಕಲ್- ಗಾಳಿಬೀಡು- ಮಡಿಕೇರಿ ರಸ್ತೆ
    ಅರಂತೋಡಿನಿಂದ ಕುಕ್ಕೆಸುಬ್ರಹ್ಮಣ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಸುಬ್ರಹ್ಮಣ್ಯದಿಂದ ಕಡಮಕಲ್ ಮತ್ತು ಗಾಳಿಬೀಡು ನಡುವೆ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ತೆರವುಗೊಳಿಸಿ ಇರುವ ರಸ್ತೆಯನ್ನು ಕೊಂಚ ಅಗಲೀಕರಣ ಮಾಡಿದರೆ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಇರುವ 38 ಕಿ.ಮೀ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಕ್ರಮಿಸಬಹುದು.

    ಮಾರ್ಗ 3: ಸುಳ್ಯ- ಆಲೆಟ್ಟಿ- ಪಾಣತ್ತೂರು- ಕರಿಕೆ- ಭಾಗಮಂಡಲ- ಮಡಿಕೇರಿ ರಸ್ತೆ
    ಸದ್ಯಕ್ಕೆ ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ. ಆಲೆಟ್ಟಿ ಪಾಣತ್ತೂರು ರಸ್ತೆಯ ಮೂಲಕ ಮಡಿಕೇರಿಗೆ ಪ್ರಯಾಣಿಸಬೇಕಾದರೆ ನೂರೈವತ್ತು ಕಿಲೋ ಮೀಟರ್ ಗಳಿಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ. ಲಘು ವಾಹನಗಳು ಮಾತ್ರ ಓಡಬಹುದಾಗಿರುವ ಈ ರಸ್ತೆಯಲ್ಲಿ ಘನ ವಾಹನಗಳ ಓಡಾಟ ಕಷ್ಟ.

    ಆಗುತ್ತಾ ರಸ್ತೆ?
    ಸದ್ಯಕ್ಕೆ ಚಾರ್ಮಾಡಿ ಘಾಟಿಯೊಂದೇ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಸುಲಭದ ಮಾರ್ಗವಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಅಥವಾ ವಾಹನಗಳು ಪಲ್ಟಿಯಾದರೆ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ. ಈಗಾಗಲೇ ವಾಹನಗಳು ಸಂಚರಿಸಲು ಹರಸಾಹಸ ಪಡುತಿದ್ದು, ಈ ರಸ್ತೆಯೂ ಬಂದ್ ಆದರೆ ಜನರ ಬದುಕು ದುಸ್ತರವಾಗಲಿದೆ. ಹೀಗಾಗಿ ಸರ್ಕಾರ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಅಗಲಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಂತೆ ಆಗುತ್ತದೆ. ಅನಿವಾರ್ಯತೆ ಇರುವ ಕಾರಣ ಜನ ಪ್ರತಿನಿಧಿಗಳು ಮನಸ್ಸು ಮಾಡಿ ಈ ರಸ್ತೆ ನಿರ್ಮಾಣವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

    ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

    ಬೆಂಗಳೂರು: ಕೊಡಗಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ಎಲ್ಲ ಕಡೆ ಯಾಕೆ ಭೂ ಕುಸಿತವಾಗಿಲ್ಲ ಎಂದು ಹಲವು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ದೇವರಕೊಲ್ಲಿ, ಜೋಡುಪಾಲ, ಮದೆನಾಡು, ಮುಕ್ಕೋಡ್ಲು, ಮಾದಾಪುರ ಗಾಳಿಬೀಡು ಹಮ್ಮಿಯಾಲ, ದೇವಸ್ತೂರು, ಸಂಪಾಜೆಯ ಅರೆಕಲ್ಲು, ಜೇಡ್ಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದ್ದರಿಂದ ಜನ ಈಗ ಈ ಪ್ರಶ್ನೆ ಕೇಳುತ್ತಿದ್ದಾರೆ.

    ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಶ್ರೇಣಿಯಲ್ಲಿ ಬಿದ್ದ ಮಳೆಗಿಂತಲೂ ಜಾಸ್ತಿ ಮಳೆ ಪುಷ್ಪಗಿರಿ ಬೆಟ್ಟ, ಕೊಡಗಿನ ಅತಿ ಎತ್ತರ ಬೆಟ್ಟವಾದ ತಡಿಯಂಡಮೋಳು, ಬ್ರಹ್ಮಗಿರಿ ಬೆಟ್ಟ, ತಲಕಾವೇರಿ ಮುಂತಾದ ಬೆಟ್ಟದಲ್ಲಿ ಬಿದ್ದಿದೆ. ಆದರೆ ಇಲ್ಲಿ ಎಲ್ಲೂ ಆಗದ ಕುಸಿತಗಳು ಇಲ್ಲೆ ಯಾಕೆ ಆಗಿದೆ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.

    ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಉತ್ತರ ಕಂಡುಕೊಳ್ಳಬೇಕಾದರೆ ಹಲವು ದಿನಗಳು ಬೇಕಾಗಬಹುದು. ಆದರೆ ನಿರಂತರ ಭೂ ಕೊರೆತ, ಭಾರೀ ವಾಹನಗಳ ಓಡಾಟದಿಂದ ಈ ಪ್ರಮಾಣದಲ್ಲಿ ಭೂ ಕುಸಿತವಾಗಿರಬಹುದು ಎನ್ನುವುದು ಸ್ಥಳೀಯರ ಮಾತು.

    ಭಾರೀ ಪ್ರಮಾಣದ ಓಡಾಟ ಹೇಗೆ?
    ಬೆಂಗಳೂರು – ಮೈಸೂರು – ಮಡಿಕೇರಿಯಿಂದ ಬಂಟ್ವಾಳ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಿಸಲಾಗಿದ್ದು, ಇದರ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು 2014ರಲ್ಲಿ. ಮೈಸೂರಿನಿಂದ- ಕುಶಾಲನಗರ, ಕುಶಾಲನಗರದಿಂದ ಸಂಪಾಜೆ, ಸಂಪಾಜೆಯಿಂದ ಬಂಟ್ವಾಳ ಹೀಗೆ ಮೂರು ಹಂತದಲ್ಲಿ ಈ ಯೋಜನೆಯನ್ನು ಮುಗಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗುವ ಮೊದಲು ಈ ರಸ್ತೆಯಲ್ಲಿ ಕಡಿಮೆ ಪ್ರಮಾಣದ ವಾಹನಗಳು ಓಡಾಡುತಿದ್ದವು. ಯಾವಾಗ ಹೆದ್ದಾರಿ ಕಾಮಗಾರಿಗಳು ಮುಗಿದವೋ ಆಗ ವಾಹನಗಳ ಸಂಖ್ಯೆಯೂ ಹೆಚ್ಚಾಯಿತು. ಈ ಹಿಂದೆ ಅಪಾಯಕಾರಿ ತಿರುವುಗಳಾಗಿದ್ದ ಜಾಗ ಅಗಲವಾಗಿ ನಿರ್ಮಾಣವಾದ ಪರಿಣಾಮ ಘನವಾಹನಗಳ ಓಡಾಟ ಆರಂಭವಾಯಿತು.

    ಈ ನಡುವೆ ಶಿರಾಡಿ ಘಾಟ್ ಸಂಚಾರ 6 ತಿಂಗಳು ಬಂದ್ ಆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹಗಳ ಸಂಖ್ಯೆ ಹೆಚ್ಚಾಯಿತು. ಘನವಾಹನಗಳು ಸಂಪಾಜೆ, ಕೊಯನಾಡು, ಜೋಡುಪಾಲ, ಮದೆನಾಡು ಮೂಲಕ ಮಡಿಕೇರಿಗೆ ಆಗಮಿಸಿ ಮೈಸೂರಿಗೆ ತೆರಳಿದ್ದರೆ, ಇನ್ನು ಕೆಲವು ಮಡಿಕೇರಿಯ ಮೂಲಕ ಹಟ್ಟಿಹೊಳೆ, ಮಾದಾಪುರ ಮೂಲಕ ಹಾಸನಕ್ಕೆ ಓಡಾಡಿವೆ. ಭಾರೀ ವಾಹನಗಳ ಓಡಾಟದಿಂದ ಮನೆಗಳು, ಭೂಮಿ ಅಲುಗಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ ಈ ವಿಚಾರಗಳನ್ನು ಯಾರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಘನವಾಹನಗಳ ಸಂಚಾರಕ್ಕೆ ಈ ರಸ್ತೆಯನ್ನು ಬಂದ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

    ಸಂಪಾಜೆ- ಮಡಿಕೇರಿ ರಸ್ತೆ ಮಧ್ಯೆ ಬಾಯಿಬಿಡುವುದು ಅಥವಾ ಕುಸಿತವಾಗುವುದು ಇದೇ ಮೊದಲೆನಲ್ಲ. 2015ರಲ್ಲಿ ಸುರಿದ ಮಳೆಗೆ ಸಂಪಾಜೆಯಿಂದ 1 ಕಿ.ಮೀ ದೂರದಲ್ಲಿರುವ ಕೊಯಿನಾಡು ಬಳಿ ಇರುವ ಸಿಂಕೋನ ಎಸ್ಟೇಟ್ ಸಮೀಪ ರಸ್ತೆ ಬಿರುಕು ಬಿಟ್ಟಿತ್ತು. ಮಳೆ ನೀರು ಹರಿಯಲು ಸರಿಯಾಗಿ ಜಾಗ ಇಲ್ಲ ಕಾರಣ ರಸ್ತೆಯ ಅಡಿಯಲ್ಲೇ ನೀರು ಹೋದ ಪರಿಣಾಮ ಕುಸಿತಗೊಂಡಿತ್ತು. ಈ ಸಮಸ್ಯೆಯಾದ ಬಳಿಕ ದುರಸ್ತಿ ಕಾರ್ಯದ ವೇಳೆ ರಸ್ತೆಯ ಅಡಿ ಭಾಗದಿಂದ ನೀರು ಹೊರಹೋಗಲು ವ್ಯವಸ್ಥೆ ಮಾಡಲಾಗಿತ್ತು. ಈಗ ಕುಸಿತಗೊಂಡ ಭಾಗದಲ್ಲಿ ರಸ್ತೆ ಚೆನ್ನಾಗಿದೆ. ಹೀಗಾಗಿ ಘಾಟಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೇಲಿನಿಂದ ಬಿದ್ದ ನೀರು ರಸ್ತೆಯ ಕೆಳ ಭಾಗದಿಂದ ಹರಿದು ಹೋಗಲು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಹಲವು ಕಡೆ ಕುಸಿತ ಉಂಟಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

    (ಕೊಯಿನಾಡಿನ ಬಳಿ 2015ರಲ್ಲಿ ಕುಸಿತಗೊಂಡ ರಸ್ತೆ. ಸಾಮಾಜಿಕ ಜಾಲತಾಣದಲ್ಲಿ ಜನ ಈ ಬಾರಿ ಕುಸಿತಗೊಂಡ ಫೋಟೋದ ಜೊತೆಗೆ ಈ ಫೋಟೋವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ)

    ಮೇಲೆ ತಿಳಿಸಿದ ಕಾರಣದ ಜೊತೆ ದಾಖಲೆ ಪ್ರಮಾಣದ ಮಳೆ ಕೊಡಗಿನಲ್ಲಿ ಆಗಿದೆ. ಏಪ್ರಿಲ್ ನಿಂದ ಆರಂಭಗೊಂಡ ಬಳಿ ನಿರಂತರವಾಗಿ ಸರಿಯುತ್ತಲೇ ಇದೆ. ಎಲ್ಲದರ ಪರಿಣಾಮ ಅರಣ್ಯ ನಾಶದಿಂದ ಮೊದಲೇ ಸಡಿಲಗೊಂಡಿದ್ದ ಮಣ್ಣು ಆಗಸ್ಟ್ ಮೂರನೇ ವಾರದಲ್ಲಿ ಬಿದ್ದ ಭಾರೀ ಮಳೆಗೆ ರಸ್ತೆಗೆ ಬಿದ್ದಿದೆ. ನೀರಿನ ರಭಸಕ್ಕೆ ಮರಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv