Tag: Samajwadi Party

  • ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್

    ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶದಲ್ಲಿ ಈ ಹಿಂದೆ ಇದ್ದ ಸರ್ಕಾರ ಬಡವರಿಗಾಗಿ ಮೀಸಲಾದ ಹಣವನ್ನು ಕಬ್ರಿಸ್ತಾನ್‍ಗಳಿಗೆ ಬಳಸುವ ಮೂಲಕ ವ್ಯರ್ಥ ಮಾಡಿತ್ತು ಎಂದು ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟೂರಿನ ಗ್ರಾಮ ಬಟೇಶ್ವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಬಡವರಿಗಾಗಿ ಮೀಸಲಾದ ಹಣವನ್ನು ಕಬ್ರಿಸ್ತಾನ್ (ಸ್ಮಶಾನ)ಗಳಿಗೆ ವ್ಯರ್ಥ ಮಾಡಿತ್ತು. ಅಲ್ಲದೇ ಉರ್ದು ಭಾಷೆ ಗೊತ್ತಿಲ್ಲದವರನ್ನು ಉರ್ದು ಭಾಷಾಂತರಕಾರರನ್ನಾಗಿ ಮಾಡಿತು. ಆದರೆ ಸಂಸ್ಕೃತ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಏನೂ ಮಾಡಿಲ್ಲ ಎಂದು ಹೇಳಿದರು.

    ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ ಹೊರಗುಳಿದಿದ್ದರೂ 200 ಕೋಟಿ ರೂ. ಖರ್ಚುಮಾಡಿದೆ. ಈ ಹಣ ಎಲ್ಲಿಂದ ಬಂತು? ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅದನ್ನು ಲೂಟಿ ಮಾಡಿ ಸಂಗ್ರಹಿಸಲಾಗಿದೆ ಎನ್ನಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

    ಮಾಜಿ ಪ್ರಧಾನಿಯವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಬಟೇಶ್ವರದಲ್ಲಿ 230 ಕೋಟಿ ರೂಪಾಯಿ ಯೋಜನೆಗಳ ಶಂಕುಸ್ಥಾಪನೆ ಮಾಡಿದ ಯೋಗಿ ಆದಿತ್ಯನಾಥ್ ಅವರು, ಭಾರತೀಯ ಜನತಾ ಪಕ್ಷದ ಸರ್ಕಾರವು ಸಂಸ್ಕೃತ ಶಾಲೆಗಳ ಬಗ್ಗೆ ಕಾಳಜಿ ವಹಿಸಿದೆ ಎಂದರು ಮತ್ತು ಬಟೇಶ್ವರ ಅಭಿವೃದ್ಧಿಗೊಳಿಸುವ ಬಗ್ಗೆ ಜನರಿಗೆ ಭರವಸೆ ನೀಡಿದರು. ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ

    ಬಿಜೆಪಿ ಸರ್ಕಾರವು ಉತ್ತರ ಪ್ರದೇಶದ ಯುವಕರಿಗೆ ಟ್ಯಾಬ್ಲೆಟ್‍ಗಳು ಮತ್ತು ಸ್ಮಾರ್ಟ್‍ಫೋನ್‍ಗಳನ್ನು ನೀಡುತ್ತಿದೆ. ಇದಲ್ಲದೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಹಲವಾರು ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಹೆಸರಿನಲ್ಲಿ ವೈದ್ಯಕೀಯ ಕಾಲೇಜುಗಳು, ವಸತಿ ಶಾಲೆಗಳು ಮತ್ತು ಮಧ್ಯಂತರ ಶಾಲೆಗಳು ತೆರೆಯುತ್ತಿವೆ ಮತ್ತು ವಸ್ತುಸಂಗ್ರಹಾಲಯ, ಸಾಂಸ್ಕೃತಿಕ ಸಂಕೀರ್ಣ ಮತ್ತು ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

  • ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    – ಕೆಂಪು ಬಣ್ಣ ಅಪಾಯದ ಸಂಕೇತ
    -ತಿಜೋರಿಯನ್ನು ಭರ್ತಿ ಮಾಡಿಲು ಸಮಾಜವಾದಿ ಪಕ್ಷಕ್ಕೆ ಅಧಿಕಾರಬೇಕು
    – ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಎಚ್ಚರಿಕೆ ಅಗತ್ಯ

    ನವದೆಹಲಿ: ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಉತ್ತರಪ್ರದೇಶ ಜನರು ಎಚ್ಚರಿಕೆಯಿಂದಿರಿ. ಕೆಂಪು ಟೋಪಿ ಧರಿಸುವವರು ರಾಜ್ಯಕ್ಕೆ ಅಪಾಯಕಾರಿ ಎಂಬುದನ್ನು ಜನರು ಮರೆಯಬಾರದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎಸ್‍ಪಿ ವಿರುದ್ಧ ಕಿಡಿಕಾರಿದ್ದಾರೆ.

    ಗೋರಖ್‍ಪುರದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಹಾಗೂ ಎಐಐಎಂಎಸ್ ಶಾಖೆ ಉದ್ಘಾಟಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಟೋಪಿ ಧರಿಸುವ ಈ ಜನರಿಗೆ ಸಾಮಾನ್ಯ ಜನರ ಬಗ್ಗೆ ಕಳಕಳಿ ಇಲ್ಲ. ಕೆಂಪು ಬಣ್ಣ ಅಪಾಯದ ಸಂಕೇತ. ರೆಡ್ ಕ್ಯಾಪ್ (ಕೆಂಪು ಟೋಪಿ) ಎಂದರೆ, ಉತ್ತರ ಪ್ರದೇಶ ಪಾಲಿಗೆ ರೆಡ್ ಅಲರ್ಟ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    Akhilesh Yadav

    ತಮ್ಮ ತಿಜೋರಿಯನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಸಮಾಜವಾದಿ ಪಕ್ಷದ ನಾಯಕರಿಗೆ ಅಧಿಕಾರ ಬೇಕಾಗಿತ್ತು. ಜೈಲಿನಲ್ಲಿರುವ ಉಗ್ರರ ಬಿಡುಗಡೆ ಹಾಗೂ ಪಾತಕಿಗಳಿಗೆ ಮುಕ್ತ ಅವಕಾಶ ನೀಡುವುದಕ್ಕಾಗಿಯೂ ಅಧಿಕಾರ ಬೇಕಿತ್ತು. ಸಮಾಜವಾದಿ ಚಿಂತಕರಾದ ರಾಮಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ತತ್ವಗಳನ್ನು ಸಮಾಜವಾದಿ ಪಕ್ಷ ಪಾಲನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ

  • ಅಸಾದುದ್ದೀನ್ ಓವೈಸಿ ಸಮಾಜವಾದಿ ಪಕ್ಷದ ಏಜೆಂಟ್ : ಯೋಗಿ ಆದಿತ್ಯನಾಥ್

    ಅಸಾದುದ್ದೀನ್ ಓವೈಸಿ ಸಮಾಜವಾದಿ ಪಕ್ಷದ ಏಜೆಂಟ್ : ಯೋಗಿ ಆದಿತ್ಯನಾಥ್

    ಲಕ್ನೋ: ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸಮಾಜವಾದಿ ಪಕ್ಷದ ಏಜೆಂಟ್ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಪ್ರತೀ ಮೂರ್ನಾಲ್ಕು ದಿನಗಳಿಗೊಮ್ಮೆ ಗಲಭೆಗಳು ನಡೆಯುತ್ತಿದ್ದವು. ಈಗ ಉತ್ತರ ಪ್ರದೇಶಕ್ಕೆ ಗಲಭೆ ಮುಕ್ತ ರಾಜ್ಯ ಎಂಬ ಹೆಸರು ಬಂದಿದೆ. ಚಾಚಾ ಜಾನ್(ಓವೈಸಿ), ಅಬ್ಬಾ ಜಾನ್(ಮುಲಾಯಂ) ಅನುಯಾಯಿಗಳೇ ಕೇಳಿ. ರಾಜ್ಯದ ಹಿತಾಸಕ್ತಿ ಬಲಿಕೊಡುವ ಗಲಭೆಗೆ ಪ್ರಚೋದನೆ ನೀಡುವಂತಹ ಕೃತ್ಯ ಎಸಗಿದರೆ ಅದರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳುವುದು ನಮಗೆ ತಿಳಿದಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್

    ಸಮಾಜವಾದಿ ಪಕ್ಷದ ಏಜೆಂಟರಾಗಿ ಗಲಭೆ ಪ್ರಚೋದಿಸುವ ಕೆಲಸದಲ್ಲಿ ಓವೈಸಿ ನಿರತರಾಗಿದ್ದಾರೆ. ಹಾಲಿ ಸರ್ಕಾರವು ಗಲಭೆಗಳಿಗೆ ಸೊಪ್ಪು ಹಾಕುತ್ತಿಲ್ಲ. ಮಾಫಿಯಾಗಳ ಮೇಲೆ ಬುಲ್ಡೋಜರ್ ಹರಿಸುತ್ತಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು’ ಎಂದು ಯೋಗಿ ಗುಡುಗಿದ್ದಾರೆ. ಕೃಷಿ ಕಾಯ್ದೆಗಳ ರೀತಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಯನ್ನು ಹಿಂಪಡೆಯಬೇಕು ಎಂದು ಅಸಾದುದ್ದೀನ್ ಓವೈಸಿ ಬೆಳಗ್ಗೆ ಒತ್ತಾಯಿಸಿದ್ದರು ಸರ್ಕಾರವು ಎನ್‍ಪಿಆರ್ ಮತ್ತು ಸಿಎಎಗಳನ್ನು ಜಾರಿಗೆ ತಂದರೆ, ನಾವು ಮತ್ತೊಂದು ‘ಶಾಹೀನ್ ಬಾಗ್’ ಸೃಷ್ಟಿಸುತ್ತೇವೆ’ ಎಂದು ಹೇಳಿದ್ದರು. ಸಿಎಎ ವಿರೋಧಿಸಿ ದೆಹಲಿ ಶಾಹೀನ್ ಬಾಗ್ ಪ್ರದೇಶದಲ್ಲಿ ಡಿಸೆಂಬರ್ 2019ರಿಂದ ಮಾರ್ಚ್ 2020ರವರೆಗೆ ಬೃಹತ್ ಹೋರಾಟ ನಡೆದಿತ್ತು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ: ಅರವಿಂದ್ ಕೇಜ್ರಿವಾಲ್

  • ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

    ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

    ಲಕ್ನೋ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜಮೀನು ಖರೀದಿಯ ಸಂದರ್ಭ ನಿಮಿಷಗಳ ಅಂತರದಲ್ಲಿ 2 ಕೋಟಿಯಿಂದ 18 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಗಂಭೀರವಾಗಿ ಆರೋಪಿಸಿದೆ.

    ಈ ಕುರಿತು ಲಕ್ನೋದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸಂಜಯ್ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳ ವಿರುದ್ಧ ಆರೋಪ ನಡೆಸಿದ್ದಾರೆ. ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ಸಿಂಗ್ ಅವರು, ಅಯೋಧ್ಯೆಯಲ್ಲಿ ಸುಮಾರು 5.8ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎಂಬುವವರು ಸುಲ್ತಾನ್ ತಿವಾರಿ ಮತ್ತು ರವಿ ಮೋಹನ್ ತಿವಾರಿ ಎಂಬುವವರಿಗೆ 2 ಕೋಟಿ ಬೆಲೆಗೆ ಕಳೆದ ಮಾರ್ಚ್ 18ರಂದು ಮಾರಾಟಮಾಡಿದ್ದರು. ಬಳಿಕ ಕೇವಲ 5 ನಿಮಿಷ ಕಳೆದ ನಂತರ ಜಮೀನು ಪಡೆದುಕೊಂಡಿದ್ದ ಅನ್ಸಾರಿ ಮತ್ತು ತಿವಾರಿಯವರು ಅದೇ ಭೂಮಿಯನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಾರಾಟದ ಮೊತ್ತದಲ್ಲಿ 17 ಕೋಟಿ ರೂಪಾಯಿಗಳನ್ನು ಆರ್‍ಟಿಜಿಎಸ್ ಮೂಲಕ ಪಾವತಿ ಮಾಡಿದ್ದಾರೆ. ಇದಲ್ಲದೇ ಈ ಎರಡೂ ಭೂಮಿ ಖರೀದಿಯ ದಾಖಲಾತಿಗೆ ಸಾಕ್ಷಿಯಾಗಿ ಒಬ್ಬರೇ ಇರುವುದು, ಅದು ಅಯೋಧ್ಯೆಯ ಮೇಯರ್ ರಿಶಿಕೇಶ್ ಉಪಾಧ್ಯ ಮತ್ತು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ, ಸಿಬಿಐ ತನಿಖೆಗೆ ಆದೇಶ ನೀಡಬೇಕು, ಟ್ರಸ್ಟ್ ನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನ ಮೇಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಹಿರಿಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್ ಭರವಸೆ

    ಪವನ್ ಪಾಂಡೆ ಅವರು ಸುದ್ದಿಗೋಷ್ಠಿ ನಡೆಸಿ ಸಂಜಯ್ ಸಿಂಗ್ ಅವರ ಮಾದರಿಯಲ್ಲೇ ಆರೋಪ ನಡೆಸಿದ್ದು, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ 120 ಕೋಟಿ ಜನರಿಗೆ ಅವಮಾನ ಮಾಡಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

    ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಬಗ್ಗೆ ಆರೋಪ ಕೇಳಿ ಬರುತ್ತಿದ್ದಂತೆ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರತಿಕ್ರಿಯಿಸಿ, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಟ್ರಸ್ಟ್ ನ ಸಭೆಯ ಬಗ್ಗೆ ನನಗೆ ಸರಿಯಾಗಿ ತಿಳಿದಿದೆ. ಆರೋಪಗಳು ಮಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಗಳನ್ನು ಒಳಗೊಂಡಂತೆ 100 ವರ್ಷಗಳಿಂದ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

  • ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಭಗವತಿ ಸಿಂಗ್ ಇನ್ನಿಲ್ಲ

    ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಭಗವತಿ ಸಿಂಗ್ ಇನ್ನಿಲ್ಲ

    ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಭಗವತಿ ಸಿಂಗ್ ಭಾನುವಾರ ನಿಧನರಾಗಿದ್ದಾರೆ.

    ಭಗವತಿ ಸಿಂಗ್(83) ಲಕ್ನೋದ ಬಕ್ಷಿಕಾ ತಲಾಭ್ ಪ್ರದೇಶದ ಪದವಿ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಸಾಯುವುದಕ್ಕೂ ಮುನ್ನ ಭಗವತಿ ಸಿಂಗ್ ತಮ್ಮ ಶರೀರವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾನ ಮಾಡುವುದಾಗಿ ಮಾತು ನೀಡಿದ್ದರು. ಹೀಗಾಗಿ ಅವರ ಅಂತಿಮ ವಿಧಿ ವಿಧಾನವನ್ನು ಮಾಡುತ್ತಿಲ್ಲ ಎಂದು ವರದಿಯಾಗಿದೆ.

    ಭಗವತಿ ಸಿಂಗ್ ಸಾವಿಗೆ ಮಾಜಿ ಸಿಎಂ ಅಖಿಲೇಶ್ ಯಾದವ್, ‘ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ, ನಿಮ್ಮ ಕುಟುಂಬಕ್ಕೆ ನಷ್ಟವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಸಂತಾಪ ಸೂಚಿಸಿದ್ದಾರೆ.

    ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದ ಭಗವತಿ ಸಿಂಗ್, ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿದ್ದರು.

  • ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ, ನಾನು ಪಡೆಯಲ್ಲ – ಅಖಿಲೇಶ್‌ ಯಾದವ್‌

    ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ, ನಾನು ಪಡೆಯಲ್ಲ – ಅಖಿಲೇಶ್‌ ಯಾದವ್‌

    ಲಕ್ನೋ: ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದಂತೆ ಈಗ ಇದರಲ್ಲೂ ರಾಜಕೀಯ ಆರಂಭವಾಗಿದೆ. ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

    ನಾನು ಸದ್ಯಕ್ಕೆ ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇಂದು ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆ ಸಂಬಂಧ ಡ್ರೈ ರನ್‌ ನಡೆಯುತ್ತಿದೆ. ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡುವ ಕ್ಷಣಗಳು ಹತ್ತಿರವಾಗಿವೆ. ನಿನ್ನೆ ದೆಹಲಿಯಲ್ಲಿ ಸಭೆ ಸೇರಿದ್ದ ಡಿಸಿಜಿಐನ ವಿಷಯ ತಜ್ಞರ ಸಮಿತಿ ಕೋವಿಶೀಲ್ಡ್ ತುರ್ತು ಬಳಕೆಗೆ ಶಿಫಾರಸು ಮಾಡಿದೆ. ಇದಕ್ಕೆ ಈಗ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಒಪ್ಪಿಗೆ ನೀಡುವುದು ಮಾತ್ರ ಬಾಕಿ ಉಳಿದಿದೆ. ಡಿಸಿಜಿಐ ಒಪ್ಪಿಗೆ ನೀಡಿದರೆ ಕೋವಿಶೀಲ್ಡ್ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಲಸಿಕೆ ಆಗಲಿದೆ.

    ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ್ದು, ಇದನ್ನು ಪುಣೆಯ ಸಿರಂ ಸಂಸ್ಥೆ ಉತ್ಪಾದಿಸುತ್ತಿದೆ.

  • ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು- ಅಖಿಲೇಶ್ ಯಾದವ್

    ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು- ಅಖಿಲೇಶ್ ಯಾದವ್

    – ಪಕ್ಷದ ಸದಸ್ಯರೆಲ್ಲರೂ ರಾಮ, ಕೃಷ್ಣನ ಭಕ್ತರು

    ಲಕ್ನೋ: ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಮ ತಮ್ಮ ಪಕ್ಷಕ್ಕೆ ಸೇರಿದವನು. ಅಲ್ಲದೆ ಪಕ್ಷದ ಸದಸ್ಯರೆಲ್ಲರೂ ರಾಮನ ಭಕ್ತರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಅಯೋಧ್ಯೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಕುಟುಂಬಸ್ಥರ ಜೊತೆ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ಪಕ್ಷದ ಅನುಭವದಂತೆ ದೊಡ್ಡ ಪಕ್ಷಗಳೊಂದಿಗೆ ಸೇರುವುದು ಒಳ್ಳೆಯದಲ್ಲ. ಹೀಗಾಗಿ ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು. ನಾವೆಲ್ಲರೂ ರಾಮ, ಕೃಷ್ಣನ ಭಕ್ತರು. ಈ ಹಿಂದೆ ನಾವು ಸರಯು ನದಿಯ ತಟದಲ್ಲಿ ದೀಪೋತ್ಸವ ಹಾಗೂ ಭಜನಾ ಸ್ಥಳದಲ್ಲಿ ಸೌಂಡ್ ಸಿಸ್ಟ್ ಮ್ ಹಾಕಿಸಿರುವುದಾಗಿ ಅವರು ಹೇಳಿದರು. ಅಲ್ಲದೆ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಯೋಜನೆಗಳು ಕುರಿತು ಮೆಲುಕು ಹಾಕಿದರು.

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್‍ಪಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ದೊಡ್ಡ ಪಕ್ಷಗಳೊಂದಿಗಿನ ನಮ್ಮ ಅನುಭವ ಸರಿಯಾಗಿಲ್ಲ. ಅಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ನಮ್ಮ ಪಕ್ಷ 351 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

  • ನೂರಾರು ಜನರ ಎದುರೇ ಎಸ್‍ಪಿ ಮುಖಂಡ, ಮಗನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ನೂರಾರು ಜನರ ಎದುರೇ ಎಸ್‍ಪಿ ಮುಖಂಡ, ಮಗನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    – ನರೇಗಾ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
    – ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

    ಲಕ್ನೋ: ನೂರಾರು ಜನರ ಎದುರೇ ಸಮಾಜವಾದಿ ಪಕ್ಷ (ಎಸ್‍ಪಿ) ಮುಖಂಡ ಹಾಗೂ ಅವರ ಮಗನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಚೋಟೆಲಾಲ್ ದಿವಾಕರ್ (50) ಮತ್ತು ಸುನಿಲ್ ಕುಮಾರ್ (28) ಕೊಲೆಯಾದವರು. ಸಂಭಾಲ್ ಜಿಲ್ಲೆಯ ಬಹ್ಜೋಯಿ ಸಮೀಪದ ಶಂಶೋಯಿ ಹಳ್ಳಿಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರೋಪಿಗಳು

    ಎಸ್‍ಪಿ ಮುಖಂಡ ಚೋಟೆಲಾಲ್ ಅವರು ಪುತ್ರನ ಜೊತೆಗೆ ಶಂಶೋಯಿ ಗ್ರಾಮದ ಸಮೀಪದ ನರೇಗಾ ಯೋಜನೆ ಅಡಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಸವಿಂದರ್ ಜೊತೆಗೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಸವಿಂದರ್, ಆತನ ಓರ್ವ ಸಂಬಂಧಿ ಬಂದೂಕಿನಿಂದ ಗುಂಡು ಹಾರಿಸಿ ಚೋಟೆಲಾಲ್ ಹಾಗೂ ಸುನೀಲ್ ಅವರನ್ನು ಹತ್ಯೆಗೈದಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಕೆಲವರು ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಎಸ್‍ಪಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಭಾರೀ ಭದ್ರತಾ ಪಡೆ ನಿಯೋಜಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಸಂಭಾಲ್ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್, “ಶಂಶೋಯಿ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ನಡುವೆ ಜಗಳವಾಗಿದೆ. ಪರಿಣಾಮ ಬಂದೂಕು ಹಿಡಿದಿದ್ದ ಸವಿಂದರ್ ಹಾಗೂ ಮತ್ತೋರ್ವ ಚೋಟೆಲಾಲ್, ಸುನಿಲ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದಾರೆ. ಈ ಸಂಬಂಧ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಚೋಟೆಲಾಲ್ ದಿವಾಕರ್ ಮತ್ತು ಸವಿಂದರ್ ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಚೋಟೆಲಾಲ್ ಹಾಗೂ ಸುನಿಲ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಯಮುನಾ ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಮಾಜಿ ಎಸ್‍ಪಿ ಸಂಸದ ಧರ್ಮೇಂದ್ರ ಯಾದವ್ ಪ್ರತಿಕ್ರಿಯಿಸಿ, ಚೋಟೆಲಾಲ್ ದಿವಾಕರ್ ನಮ್ಮ ಪಕ್ಷದ ಕ್ರೀಯಾಶೀಲ ನಾಯಕ. ಅವರಿಗೆ 2017ರಲ್ಲಿ ಪಕ್ಷವು ಚಂದೌಸಿ ವಿಧಾನಸಭೆಯಿಂದ ಟಿಕೆಟ್ ನೀಡಿತ್ತು. ಆದರೆ ಈ ಸ್ಥಾನವು ಮೈತ್ರಿಗೆ ಹೋಯಿತು. ಸಂಭಾಲ್‍ನಲ್ಲಿ ನಮ್ಮ ನಾಯಕನ ಹತ್ಯೆಯಿಂದ ಪೊಲೀಸರು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ವಿಶೇಷವಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ರಾಜ್ಯದಲ್ಲಿ ಸ್ಪಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    https://twitter.com/Sirbaraj/status/1262715267882332170

  • ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಲಕ್ನೋ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಆದರೆ ಇದನ್ನು ಮರೆತು ಸಮಾಜವಾದಿ ಪಕ್ಷದ ಮುಖಂಡ, ಶಾಸಕ ಹಾಜಿ ಇಕ್ರಮ್ ಖುರೇಷಿ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಸಿಗರೇಟ್ ಸೇದಿದ್ದಾರೆ.

    ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನದ ನಿಮಿತ್ತ ಸಮಾಜವಾದಿ ಪಕ್ಷದ ಎಸ್‍ಪಿ ಶಾಸಕರು ಮೊರಾದಾಬಾದ್ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲು ಬಂದಿದ್ದರು. ಈ ವೇಳೆ ಶಾಸಕ ಹಾಜಿ ಇಕ್ರಮ್ ಖುರೇಷಿ ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಶೇಷವೆಂದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಹಾಜಿ ಇಕ್ರಮ್ ಖುರೇಷಿ ತಪ್ಪನ್ನು ಸ್ವೀಕರಿಸುವ ಬದಲು, ಅಸಂಬದ್ಧ ಉತ್ತರವನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ತನ್ನ ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಶಾಸಕರು ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ತಮ್ಮದೆಯಾದ ಮಾಡಿದ್ದಾರೆ.

  • ಮಾಯಾವತಿ ಬೆನ್ನಲ್ಲೇ ಕಾಂಗ್ರೆಸ್ ಜೊತೆ ಮೈತ್ರಿಯಿಂದ ಹಿಂದೆ ಸರಿಯುವ ಸೂಚನೆ ನೀಡಿದ ಅಖಿಲೇಶ್ ಯಾದವ್

    ಮಾಯಾವತಿ ಬೆನ್ನಲ್ಲೇ ಕಾಂಗ್ರೆಸ್ ಜೊತೆ ಮೈತ್ರಿಯಿಂದ ಹಿಂದೆ ಸರಿಯುವ ಸೂಚನೆ ನೀಡಿದ ಅಖಿಲೇಶ್ ಯಾದವ್

    ಲಕ್ನೋ: ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ನಿರಾಕರಿಸಿ ಏಕಾಂಗಿ ಸ್ಪರ್ಧಿಸಲಿದ್ದೇವೆ ಎಂದು ಹೇಳಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್ ನೊಂದಿಗೆ ಮೈತ್ರಿ ರಚಿಸುವ ಬಗ್ಗೆ ಹಿಂದೆ ಸರಿದಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, ಕಾಂಗ್ರೆಸ್ ಪಕ್ಷ ನಮ್ಮನ್ನು ಈಗಾಗಲೇ ಹೆಚ್ಚು ಸಮಯ ಕಾಯುವಂತೆ ಮಾಡಿದೆ. ಅದ್ದರಿಂದ ಮುಂಬರುವ ಮಧ್ಯಪ್ರದೇಶ ಚುನಾವಣೆಗೆ ನಾವು ಬಿಎಸ್‍ಪಿ ಜೊತೆಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ಅವರ ಈ ತೀರ್ಮಾನ ಮಹಾಮೈತ್ರಿ ರಚಿಸಲು ಸಿದ್ಧತೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಭಾರೀ ಹಿನ್ನಡೆ ಉಂಟು ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

    ಯಾದವ್ ಅವರ ಈ ನಿರ್ಧಾರದ ಹಿಂದೆ ಪ್ರಮುಖ ಕಾರಣವೂ ಇದ್ದು ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷದೊಂದಿಗೆ ಮೈತ್ರಿ ರಾಜಕಾರಣಕ್ಕೆ ಮುಂದಾದರೆ ಜಾತಿ ರಾಜಕೀಯ ಲೆಕ್ಕಚಾರದಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಲಭಿಸುವ ಸಾಧ್ಯತೆ ಇದೆ. ಇದರೊಂದಿಗೆ ಕಳೆದ 15 ವರ್ಷಗಳಿಂದ ಮುಂದಾಳತ್ವದಲ್ಲಿರುವ ಬಿಜೆಪಿ ವಿರುದ್ಧ ಗೆಲುವು ನಿಶ್ಚಿತವಾಗಲಿದೆ ಎಂಬ ಲೆಕ್ಕಾಚಾರ ನಡೆಸಿದ್ದಾರೆ ಎನ್ನಲಾಗಿದೆ.

    ಕಳೆದ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಯಾವತಿ ಅವರು, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಬಿಎಸ್‍ಪಿ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯವಾಗಿ ಬಿಎಸ್‍ಪಿ ಪಕ್ಷವನ್ನು ಮುಗಿಸಲು ಪ್ರಯತ್ನ ನಡೆಸಿದೆ. ಪಕ್ಷದ ಬೆಳವಣಿಗೆ ಉದ್ದೇಶದಿಂದ ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv