Tag: Salim Khan

  • ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ: ಪ್ರಚಾರದ ಗಿಮಿಕ್ ಎಂದ ಸಲ್ಮಾನ್ ತಂದೆ

    ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ: ಪ್ರಚಾರದ ಗಿಮಿಕ್ ಎಂದ ಸಲ್ಮಾನ್ ತಂದೆ

    ಜೀವ ಬೆದರಿಕೆಯೊಂದಿಗೆ ಬದುಕುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕುಟುಂಬಕ್ಕೆ ನಿನ್ನೆ ಮತ್ತೊಂದು ಆಘಾತ ಕಾದಿತ್ತು. ಮನೆಯ ಮುಂದೆ ಏಕಾಏಕಿ ಗುಂಡಿನ ದಾಳಿ (Shooting) ನಡೆದಿದೆ. ಈ ಕುರಿತಂತೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ (Salim Khan) ಮಾತನಾಡಿದ್ದು, ಅದೊಂದು ಪ್ರಚಾರದ ಗಿಮಿಕ್. ನಮಗೆ ಯಾವ ತೊಂದರೆಯೂ ಆಗಲ್ಲ. ಪ್ರಚಾರಕ್ಕಾಗಿ ಅವರೆಲ್ಲ ಹಾಗೆ ಮಾಡುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

    ನಿನ್ನೆ ಸಲ್ಮಾನ್ ಖಾನ್ (Salman Khan) ಮುಂಬೈ ನಿವಾಸದ ಹೊರಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi) ಹೇಳಿಕೊಂಡಿದ್ದಾರೆ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    ಅನ್ಮೋಲ್‌ನ ಫೇಸ್‌ಬುಕ್ ಪೇಜ್‌ನಲ್ಲಿ, ಈ ಘಟನೆ ಟ್ರೈಲರ್ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಸಲ್ಮಾನ್ ಖಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಸಲ್ಮಾನ್ ಖಾನ್ ಇದು ನಾವು ನಿಮಗೆ ತೋರಿಸಿದ್ದು, ಟ್ರೈಲರ್ ಮಾತ್ರ. ನಮ್ಮ ಸಾಮರ್ಥ್ಯ, ಶಕ್ತಿ ಏನು ಎಂಬುದರ ಪರಿಚಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಇದು ನಾವು ನೀಡುವ ಮೊದಲ ಮತ್ತು ಕೊನೆಯ ವಾರ್ನಿಂಗ್ ಎಂದು ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.

    ನಿನ್ನೆ (ಏ.14) ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ಸ್ಥಳದಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಗುಂಡು ಹಾರಿಸಿದ ವ್ಯಕ್ತಿ ಪತ್ತೆಗೆ ಬಲೆ ಬೀಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಹೇಳಿದ್ದ. ತಾನು ಟಾರ್ಗೆಟ್ ಮಾಡಿರುವ 10 ಮಂದಿ ಹೆಸರಿನ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲಿಗರಾಗಿದ್ದಾರೆ ಎಂದಿದ್ದ. 1998ರ ಕೃಷ್ಣಮೃಗ ಬೇಟೆ ಆರೋಪ ಹೊತ್ತಿರುವ ಬಾಲಿವುಡ್ ನಟನ ಮೇಲೆ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ.

     

    ಬಿಷ್ಣೋಯ್ ತನ್ನ ಸಹಾಯಕ ಸಂಪತ್ ನೆಹ್ರಾ ಬಳಸಿಕೊಂಡು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಕಣ್ಣಿಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ನೆಹ್ರಾನನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ವಶಪಡಿಸಿಕೊಂಡಿದೆ. ಕಳೆದ ವರ್ಷ ಏಪ್ರಿಲ್ 11 ರಂದು ಬಂದ ಮತ್ತೊಂದು ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಭದ್ರತೆಯನ್ನು Y + ಗೆ ಹೆಚ್ಚಿಸಿದ್ದರು. ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ವಿದ್ಯಾರ್ಥಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.

  • ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

    ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

    ಮುಂಬೈ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದ್ದು, `ನೀನೂ ಮೂಸೆವಾಲಾನ ರೀತಿ ಕೊನೆಯಾಗುತ್ತೀಯ’ ಎಂದು ಅನಾಮಿಕ ಪತ್ರದಲ್ಲಿರುವುದಾಗಿ ವರದಿಯಾಗಿದೆ.

    ಸಿನಿಮಾ ಬರಹಗಾರ, ನಿರ್ಮಾಪಕ ಸಲೀಂ ಖಾನ್ ಅವರು ಬೆಳಗಿನ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ದಿನವೂ ಕುಳಿತುಕೊಳ್ಳುವ ಸ್ಥಳದ ಬಳಿ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಸಿಕ್ಕಿದೆ. ಈ ಸಂಬಂಧ ಪೊಲೀಸರು FIR ದಾಖಲಿಸಿದ್ದಾರೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    Salim Khan Salman Khan

    ಕಾರಣವೇನು?: ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ಪೂಜನೀಯವಾಗಿ ಕಾಣುತ್ತದೆ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಸಲ್ಮಾನ್‌ಗೆ ಜೋಧಪುರದಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು. ಲಾರೆನ್ಸ್ ಬಿಷ್ಣೋಯಿ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿ ಎನ್ನಲಾಗಿದೆ.

    ಮೂಸೆವಾಲಾ ಹತ್ಯೆಯ ಬೆನ್ನಲ್ಲೇ ಸಲ್ಮಾನ್ ಖಾನ್ ಅವರಿಗೆ ಭದ್ರತೆ ನೀಡಲಾಗಿದೆ. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ ಸುತ್ತಲೂ ಭದ್ರತೆ ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ಕಳೆದವಾರ ಪಂಜಾಬ್‌ನ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಅದೇ ಗ್ಯಾಂಗ್ 2018ರಲ್ಲಿ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದೆ.

  • ಸರ್ಕಾರದ ಅನುಮತಿಯಿಂದ್ಲೇ ಪ್ರತಿ ದಿನ ಹೊರ ಬರ್ತಿದ್ದಾರೆ ಸಲ್ಲು ತಂದೆ

    ಸರ್ಕಾರದ ಅನುಮತಿಯಿಂದ್ಲೇ ಪ್ರತಿ ದಿನ ಹೊರ ಬರ್ತಿದ್ದಾರೆ ಸಲ್ಲು ತಂದೆ

    ಮುಂಬೈ; ಕೊರೊನಾ ಲಾಕ್‍ಡೌನ್ ನಡುವೆಯೂ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ತಂದೆ ಪ್ರತಿದಿನವೂ ಹೊರಗೆ ಬರುತ್ತಿದ್ದಾರೆ.

    ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಿರುವಾಗ ಸಲ್ಲು ತಂದೆ ಸಲೀಂ ಖಾನ್ ಹೊರಗೆ ಬಂದು ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ಹೊರೆಗೆ ಬರುತ್ತಿರುವುದಕ್ಕೆ ಕಾರಣ ಸಲೀಂ ಅವರಿಗೆ ಬೆನ್ನಿನ ನೋವಿನ ಸಮಸ್ಯೆಯಿದ್ದು, ವೈದ್ಯರ ಸಲಹೆಯೆಂತೆ ಪ್ರತಿ ದಿನ ಹೊರಗೆ ಬಂದು ವಾಕಿಂಗ್ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ 84 ವರ್ಷದ ಸಲೀಂ ಖಾನ್, ನನಗೆ ಬೆನ್ನು ನೋವಿನ ಸಮಸ್ಯೆಯಿದೆ. ಹೀಗಾಗಿ ವೈದ್ಯರ ಸಲಹೆಯಂತೆ ಲಾಕ್‍ಡೌನ್ ಇದ್ದರೂ ಹೊರಗೆ ಹೋಗಿ ವಾಕಿಂಗ್ ಮಾಡುತ್ತೇನೆ. ನಾನು ಕಳೆದ 40 ವರ್ಷದಿಂದ ಈ ರೀತಿ ವಾಕಿಂಗ್ ಮಾಡುತ್ತಿದ್ದೇನೆ. ಈಗ ತಕ್ಷಣ ಆ ಅಭ್ಯಾಸವನ್ನು ನಿಲ್ಲಿಸಿದರೆ ನನ್ನ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಲು ನಾನು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದೇನೆ. ಆರೋಗ್ಯದ ದೃಷ್ಟಿಯಿಂದ ನನಗೆ ಈ ಪಾಸ್ ಸಿಕ್ಕಿದೆ. ನನ್ನ ಬಳಿ ಏಪ್ರಿಲ್ 30ರ ವರೆಗೆ ಮನೆಯಿಂದ ಹೊರಗೆ ಹೋಗಲು ಪಾಸ್ ಇದೆ. ಇದರ ಜೊತೆಗೆ ಮನೆಯಿಂದ ಹೊರಗೆ ಹೋಗುವಾಗ ನಾನು ಕೊರೊನಾ ಸುರಕ್ಷತಾ ಕ್ರಮವನ್ನು ತಗೆದುಕೊಳ್ಳುತ್ತಿದ್ದೇನೆ ಎಂದು ಸಲೀಂ ಖಾನ್ ಅವರು ಹೇಳಿದ್ದಾರೆ.

    ನಾನು ಕಾನೂನುಗಳನ್ನು ಹೆಚ್ಚು ಪಾಲಿಸುವ ವ್ಯಕ್ತಿ. ಹೀಗಾಗಿ ಆರೋಗ್ಯದ ಸಮಸ್ಯೆಯಿಂದ ಮಾತ್ರ ಮನೆಯಿಂದ ಹೊರಗೆ ಹೋಗುತ್ತೇನೆ. ಆದರೆ ನಮ್ಮ ಏರಿಯಾದಲ್ಲೇ ಕೆಲವರು ಯಾವುದೇ ಅನುಮತಿ ಪಡೆಯದೆ ಮನೆಯಿಂದ ಹೊರ ಬರುತ್ತಾರೆ. ನಾಯಿಯನ್ನು ಕರೆದುಕೊಂಡು ಏರಿಯಾದ ಎಲ್ಲಾ ಕಡೆ ಸುತ್ತುತ್ತಾರೆ. ನಾವು ಸೆಲೆಬ್ರಿಟಿಗಳು ಆದ ಕಾರಣ ಜನರು ನಮ್ಮನ್ನು ನೋಡುತ್ತಿರುತ್ತಾರೆ ಎಂದು ಸಲೀಮ್ ಖಾನ್ ತಿಳಿಸಿದ್ದಾರೆ.