Tag: sale

  • ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಅಹಮದಾಬಾದ್: ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಏಕತಾ ಪ್ರತಿಮೆಯನ್ನು ಕಿಡಿಗೇಡಿಗಳು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

    ಅನಾಮಧೇಯ ವ್ಯಕ್ತಿಯೊಬ್ಬ ಏಕತಾ ಪ್ರತಿಮೆಯ ಫೋಟೋವನ್ನು ಒಎಲ್‌ಎಕ್ಸ್‌ನಲ್ಲಿ ಅಪ್ಲೋಡ್ ಮಾಡಿ ಪ್ರತಿಮೆ 30 ಸಾವಿರ ಕೋಟಿ ರೂಪಾಯಿಗೆ ಮಾರಾಟಕ್ಕಿದೆ ಎಂದು ಹಾಕಿದ್ದನು. ಈ ಜಾಹಿರಾತನ್ನು ಯಾವುದೇ ರೀತಿಯ ಪೂರ್ವಾಪರ ವಿಚಾರಸಿದೆ ಸಾರ್ವಜನಿಕವಾಗಿ ಜಾಹಿರಾತು ಪ್ರಸಾರ ಮಾಡಿದ್ದಾಕ್ಕಾಗಿ ಕೆವಾಡಿಯಾ ಸ್ಥಳೀಯ ಆಡಳಿತ ಒಎಲ್‍ಎಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕೆವಾಡಿಯಾದ ಉಪ ಆಯುಕ್ತ ನಿಲೇಶ್ ದುಬೆ ಅವರು, ಏಕತಾ ಪ್ರತಿಮೆ ದೇಶದ ಆಸ್ತಿ. ಇದನ್ನು ಯಾರೋ ಒಬ್ಬ ಕಿಡಿಗೇಡಿ ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹಿರಾತು ನೀಡಿದ್ದಾನೆ. ಈ ಬಗ್ಗೆ ಪೂರ್ವಾಪರ ವಿಚಾರಿಸದೇ ಒಎಲ್‍ಎಕ್ಸ್ ಕೂಡ ಜಾಹಿರಾತು ಪ್ರಸಾರ ಮಾಡಿದೆ. ಆದ್ದರಿಂದ ಸಂಸ್ಥೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಕಿಡಿಕಾರಿದ್ದಾರೆ.

    ಏಕತಾ ಪ್ರತಿಮೆಯು ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. 2018ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣ ಮಾಡಿದಾಗಿನಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಕೂಡ ಪಡೆದಿದೆ.

  • ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಚಿಕ್ಕಬಳ್ಳಾಪುರ: ಮೊಬೈಲ್ ಯುಗದಲ್ಲಿ ಎಲ್ಲವೂ ಫಾಸ್ಟ್, ಫಾಸ್ಟ್. ಬೇಗ ದುಡ್ಡು ಮಾಡಬೇಕು, ಬೇಗ ಶ್ರೀಮಂತನಾಗಬೇಕು ಎಂಬ ತವಕದಲ್ಲಿ ಮನುಷ್ಯ ಅತಿಯಾಸೆಗೆ ಬಲಿಯಾಗುತ್ತಿದ್ದಾನೆ. ಇಂತಹದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಶ್ರೀಮಂತಿಕೆ ಆಸೆ ತೋರಿಸಿ ಹಾವನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ರೆಡ್ ಸ್ಯಾಂಡ್ ಬೋವಾ ಸ್ನೇಕ್ ಅಂತ ಕರೆಯುವ ಮಣ್ಣು ಮುಕ್ಕುವ ಹಾವಿನ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಲು ಹೊಂಚು ಹಾಕಿದ್ದ ಮೂವರನ್ನು ಜಿಲ್ಲೆಯ ಗೌರಿಬಿದನುರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಇಡಗೂರು ಗ್ರಾಮದ ಬಳಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನರಸಿಂಹ, ಅನಿಲ್ ಹಾಗೂ ಹರೀಶ್ ಬಂಧಿತರು.

    ಆಕಸ್ಮಿಕವಾಗಿ ಸಿಕ್ಕ ಹಾವನ್ನು ಬಿಂದಿಗೆಯಲ್ಲಿಟ್ಟುಕೊಂಡು 2 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಬಳಿ ಎರಡು ತಲೆ ಹಾವಿದೆ. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮೀದೇವಿ ಒಲಿದು ಬರುತ್ತಾಳೆ ಎಂದು ಹೇಳಿ ಅಮಾಯಕರಿಂದ ಹಣ ಪೀಕಲು ಆರೋಪಿಗಳು ಮುಂದಾಗಿದ್ದರು.

    ಎರಡು ತಲೆ ಹಾವು ಮನೆಯಲ್ಲಿ ಇಟ್ಟುಕೊಂಡರೆ ಹಣ ಗಳಿಸಬಹುದು ಎಂದು ಮಾರಾಟ ಮಾಡೋ ಅಸಾಮಿಗಳೇ ಏಕೆ ಮನೆಯಲ್ಲಿ ಹಾವನ್ನು ಇಟ್ಕೊಂಡು ಹಣವಂತರಾಗಬಾರದೆಂದು ನಾಗರಿಕರು ಪ್ರಶ್ನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಿಂಸಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕೆನ್ನುತ್ತಾರೆ. ವನ್ಯಜೀವಿ ಸಂರಕ್ಷಕ ಪೃಥ್ವಿರಾಜ್. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಹಾವನ್ನು ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಹಾವನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

  • ಅಗ್ಗದ ಎಣ್ಣೆಗೆ ಜೈ ಎಂದ ಚಾಮರಾಜನಗರದ ಕುಡುಕರು

    ಅಗ್ಗದ ಎಣ್ಣೆಗೆ ಜೈ ಎಂದ ಚಾಮರಾಜನಗರದ ಕುಡುಕರು

    ಚಾಮರಾಜನಗರ: ರಾಜ್ಯದ ಇತರ ಜಿಲ್ಲೆಗಳಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದ್ದರೂ ಗಡಿಜಿಲ್ಲೆ ಜನರು ಮಾತ್ರ ಕಳೆದ ವರ್ಷ ಬಿಯರ್ ನತ್ತ ಕಡಿಮೆ ಒಲವು ತೋರಿದ್ದಾರೆ.

    ಹೌದು, ಗುಂಡ್ಲುಪೇಟೆ ಹೊರತು ಪಡಿಸಿದಂತೆ ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲೂಕು ಭಾಗಗಳಲ್ಲಿ 2018ಕ್ಕಿಂತ 2019ರಲ್ಲಿ ಬಿಯರ್ ಮಾರಾಟ ಕಡಿಮೆಯಾಗಿದ್ದು, ಲಿಕ್ಕರ್ ಮಾರಾಟ ಹೆಚ್ಚಾಗಿದೆ. ಆದರೆ ಗುಂಡ್ಲುಪೇಟೆ ಭಾಗದಲ್ಲಿ 2019ರಲ್ಲಿ ಲಿಕ್ಕರ್ ಜೊತೆಗೆ ಬಿಯರ್ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ.

    ಚಾಮರಾಜನಗರ ಭಾಗದಲ್ಲಿ 2,81,871 ಕೇಸ್ ಲಿಕ್ಕರ್ ಮಾರಾಟವಾಗಿದ್ದು, 2018ಕ್ಕೆ ಹೋಲಿಸಿದರೆ 8,597 ಕೇಸ್ ಹೆಚ್ಚಾಗಿದೆ. ಕೊಳ್ಳೇಗಾಲ ಭಾಗದಲ್ಲಿ 2,78,095 ಮದ್ಯದ ಬಾಕ್ಸ್ ಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕಿಂತ 13,352 ಕೇಸ್ ಹೆಚ್ಚಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ 1,47,891 ಕೇಸ್ ಬಿಕರಿಯಾಗಿದ್ದು, 2018ಕ್ಕಿಂತ 16,724 ಕೇಸ್ ಹೆಚ್ಚು ಮಾರಾಟವಾಗಿದೆ. ಚಾಮರಾಜನಗರದಲ್ಲಿ ಬಿಯರ್ ಖರೀದಿಸದ ಜನ ಒಟ್ಟಾರೆಯಾಗಿ ಜಿಲ್ಲಾದ್ಯಂತ 2019ರ ಏಪ್ರಿಲ್‍ನಿಂದ 2019ರ ಡಿಸೆಂಬರ್ ವರೆಗೆ 4,25,986 ಕೇಸ್ ಲಿಕ್ಕರ್ ಮಾರಾಟವಾಗಿದ್ದು, 30,076 ಕೇಸ್ ಮದ್ಯ ಹೆಚ್ಚುವರಿಯಾಗಿ ಮಾರಾಟವಾಗಿದೆ.

    ಬಿಯರ್ ಗಿಲ್ಲ ಬೇಡಿಕೆ: ಲಿಕ್ಕರ್ ಮಾರಾಟದಲ್ಲಿ ಏರಿಕೆ ಕಂಡಿದ್ದರೂ ಗಡಿಜಿಲ್ಲೆಯಲ್ಲಿ ಬಿಯರ್ ಬೇಡಿಕೆಯಲ್ಲಿ ಕುಸಿತ ಕಂಡಿದೆ. 57,653 ಕೇಸ್ ಬಿಯರ್ ಚಾಮರಾಜನಗರದಲ್ಲಿ ಮಾರಾಟವಾಗಿದ್ದು, ಹಿಂದಿನ ವರ್ಷಕ್ಕಿಂತ 237 ಕೇಸ್ ಕಡಿಮೆ ಮಾರಾಟವಾಗಿದೆ.

    ಕೊಳ್ಳೇಗಾಲ ತಾಲೂಕಿನಲ್ಲಿ 61,395 ಕೇಸ್ ಬಿಕರಿಯಾಗಿದ್ದು, ಹಿಂದಿನ ವರ್ಷಕ್ಕಿಂತ 4,530 ಕೇಸ್ ಕಡಿಮೆ ವಹಿವಾಟಾಗಿದೆ. ಆದರೆ ಗುಂಡ್ಲುಪೇಟೆ ತಾಲೂಕಿನ ಲಿಕ್ಕರಿನಂತೆ ಬಿಯರ್ ಮಾರಾಟದಲ್ಲೂ ಏರಿಕೆಯಾಗಿದೆ. 36,641 ಕೇಸ್ ಬಿಯರ್ ಬಿಕರಿಯಾಗಿದ್ದು, ಹಿಂದಿನ ವರ್ಷಕ್ಕಿಂತ 6,849 ಕೇಸ್ ಹೆಚ್ಚು ಮಾರಾಟವಾಗಿದೆ.

  • ಸಕ್ಕರೆ ನಗರಿಯಲ್ಲಿ ಮೈಸೂರ್ ಸಿಲ್ಕ್ ಸೇಲ್ಸ್- 4 ದಿನ ಶೇ.25 ರಿಯಾಯಿತಿ

    ಸಕ್ಕರೆ ನಗರಿಯಲ್ಲಿ ಮೈಸೂರ್ ಸಿಲ್ಕ್ ಸೇಲ್ಸ್- 4 ದಿನ ಶೇ.25 ರಿಯಾಯಿತಿ

    ಮಂಡ್ಯ: ಹೊಸ ವರ್ಷದ ಅಂಗವಾಗಿ ಮಂಡ್ಯಲ್ಲಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಮಂಡ್ಯದ ಜಿಲ್ಲಾ ಪಂಚಾಯತಿಯ ಹಿಂದಿ ಭವನದಲ್ಲಿ ಮಾರಾಟ ಮೇಳ ಏರ್ಪಡಿಸಲಾಗಿದೆ.

    ಹೊಸ ವರ್ಷದ ಅಂಗವಾಗಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರ್ ಸಿಲ್ಕ್ ಸೀರೆಗಳನ್ನು ನೀಡುವ ಉದ್ದೇಶದಿಂದ ಕೆಎಸ್‍ಐಸಿ ಹಾಗೂ ಮೈಸೂರ್ ಸಿಲ್ಕ್ ವತಿಯಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

    ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 4 ಸಾವಿರದಿಂದ ಒಂದುವರೆ ಲಕ್ಷದವರೆಗಿನ ಬೆಲೆಯ ಮೈಸೂರ್ ಸಿಲ್ಕ್ ಸೀರೆಗಳು ಲಭ್ಯವಿದ್ದು. ಪ್ರತಿ ಸೀರೆಗೂ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೇವಲ ಮೈಸೂರ್ ಸಿಲ್ಕ್ ಅಲ್ಲದೇ ಕ್ರೇಪ್ ಡಿ ಚೈನ್, ಜಾರ್ಜೆಟ್, ಸಾದಾ ಮುದ್ರಿತ ಸೀರೆಗಳು ಹಾಗೂ ಸಿಲ್ಕ್ ಶರ್ಟ್‍ಗಳು ಪ್ರದರ್ಶನ ಮತ್ತು ಮಾರಾಟದಲ್ಲಿ ಇವೆ. ಇಂದಿನಿಂದ ಆರಂಭವಾಗಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉದ್ಘಾಟನೆ ಮಾಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನಲ್ಲಿ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನಲ್ಲಿ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ

    ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳು ಮತ್ತು ಕೆಲವೆಡೆ ನಕಲಿ ಚಾಕ್ಲೇಟ್ ಮಾರಾಟ ನಡೆಯುತ್ತಿರುವ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ಸುದ್ದಿ ವರದಿಯಾದ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಅಧಿಕಾರಿಗಳು ಮಡಿಕೇರಿಯಲ್ಲಿ ದಾಳಿ ನಡೆಸಿ, ಕೆಲ ವರ್ತಕರಿಗೆ ನೋಟಿಸ್ ನೀಡಿದ್ದಾರೆ.

    ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ದಂಧೆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಇಲಾಖೆಯ ಹಿರಿಯ ಅಧಿಕಾರಿ ಶಿವಕುಮಾರ್, ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಹೋಮ್ ಮೇಡ್ ದಂಧೆ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಚಾಕ್ಲೇಟ್ ಬಣ್ಣ ಬಯಲು

    ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ನಿಯಮಾನುಸಾರ ಪರವಾನಗಿ ಪಡೆಯಬೇಕು, ನಕಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಅಧಿಕಾರಿಗಳು ಹಲವು ವರ್ತಕರಿಗೆ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಹಲವು ತಂಡಗಳು ಕಾರ್ಯಾಚರಣೆ ನಡೆಸಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

    ಕೊಡಗಿನ ಹೋಂ ಮೇಡ್ ಚಾಕ್ಲೇಟ್‍ಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಹಾಗೂ ಹೊರರಾಜ್ಯದಿಂದ ಬರುವ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಚಾಕ್ಲೇಟ್ ಕೊಳ್ಳುತ್ತಾರೆ. ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ದಂಧೆಕೋರರು ಹೋಂಮೇಡ್ ಹೆಸರಲ್ಲಿ ಜನರ ಹೊಟ್ಟೆಗೆ ವಿಷ ತುಂಬುತ್ತಿದ್ದಾರೆ. ಹೊರರಾಜ್ಯದಿಂದ ಚಾಕ್ಲೇಟ್ ಸ್ಲ್ಯಾಬ್‍ಗಳನ್ನು ತಂದು ಅವುಗಳನ್ನೇ ಕರಗಿಸಿ ಬೇಕಾದ ಶೇಪ್‍ಗಳಿಗೆ ಬದಲಾಯಿಸಿ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಚಾಕ್ಲೇಟ್ ತಯಾರಿಸುತ್ತಿದ್ದಾರೆ. ಈ ಚಾಕ್ಲೇಟ್ ಮೇಲೆ ತಯಾರಿಕಾ ದಿನ ಆಗಲಿ, ಎಕ್ಸ್ ಪೈರಿ ಡೇಟ್ ಆಗಲಿ ಯಾವುದೂ ಇಲ್ಲ. ಅಷ್ಟೇ ಏಕೆ ಆಹಾರ ಸುರಕ್ಷಾ ಇಲಾಖೆ ನೀಡುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಅನುಮತಿ ಕೂಡ ಇಲ್ಲ.

  • ಬ್ಯಾನ್ ಪ್ಲಾಸ್ಟಿಕ್‌ನಲ್ಲಿ ಮಾರಾಟವಾಗ್ತಿದೆ ನೀರು – ರೇಟ್ ಕಡಿಮೆ ಎಂದು ಕೊಂಡ್ಕೊಂಡ್ರೆ ಕಾಯಿಲೆ ಫಿಕ್ಸ್

    ಬ್ಯಾನ್ ಪ್ಲಾಸ್ಟಿಕ್‌ನಲ್ಲಿ ಮಾರಾಟವಾಗ್ತಿದೆ ನೀರು – ರೇಟ್ ಕಡಿಮೆ ಎಂದು ಕೊಂಡ್ಕೊಂಡ್ರೆ ಕಾಯಿಲೆ ಫಿಕ್ಸ್

    ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ. ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ ನಿಮ್ಮ ಆರೋಗ್ಯಕ್ಕೆ ಹಾನಿ ಎಂದೇ ಬ್ಯಾನ್ ಮಾಡಿದೆ. ಹೀಗಿರುವಾಗ ಇರುವ ಹಾನಿಕಾರಕ ವಸ್ತುವಿಗೆ ಮತ್ತಷ್ಟು ಹಾನಿಕಾರಕ ಆ್ಯಡ್ ಮಾಡಿರುವ ನೀರನ್ನು ಬಡ ಜನರಿಗೆ ಸಪ್ಲೈ ಮಾಡುತ್ತಿದ್ದಾರೆ. ಅದರಲ್ಲೂ ಟೋಲ್‌ಗಳ ಬಳಿ ಬಸ್ ಪ್ರಯಾಣಿಕರಿಗೆ, ಬಾರ್ ಗಳಲ್ಲಿ, ಪ್ರತಿಭಟನೆಗೆ ಬಂದವರಿಗೆ ಈ ನೀರು ಕೊಡಲಾಗುತ್ತದೆ.

    ನಗರದ ಹಲವು ಟೋಲ್‌ಗಳ ಬಳಿ ಬಕೆಟ್‌ಗಳನ್ನು ಬಳಸಿ ಈ ಪಾಕೆಟ್ ನೀರನ್ನು ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆ ಸಿಗುತ್ತೆ ಎಂದು ಖರೀದಿಸುವವರು ಜಾಸ್ತಿ. ಕಳಪೆ ಬೆಲೆಗೆ ಪ್ಯಾಕೆಟ್ ನೀರು ನೀಡಲಾಗುತ್ತಿದೆ. ಇದು ಅಪಾಯಕಾರಿ ನೀರು. ರೋಗ ತರುವ ನೀರಾಗಿದ್ದು, ಇದರಲ್ಲಿ ಅನುಮಾನ ಇಲ್ಲ. ಕಾರಣ ಈ ಪಾಕೆಟ್ ನೀರಿಗೆ ಅನುಮತಿಯೆ ಇಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಪ್ರಕಾರ ಐಎಸ್ ಐ ಮಾರ್ಕ್ ಇದ್ದರೆ ಮಾತ್ರ ಪಾಕೆಟ್ ನೀರು ಮಾರಾಟಕ್ಕೆ ಅವಕಾಶವಿದೆ. ಆದರೆ ಈ ಯಾವ ಪಾಕೆಟ್‌ಗೂ ಮಾರ್ಕ್ ಇಲ್ಲ. ಅಷ್ಟೇ ಅಲ್ಲ ಶುದ್ಧವಾಗಿರಬೇಕಾದ ನೀರಿನ ತುಂಬಾ ಹುಳುಗಳೇ ಓಡಾಡುತ್ತೆ.

    ಪ್ರತಿನಿಧಿ: ಪಾಕೆಟ್ ಬೇಕಾ ಶಿವಾಜಿನಗರ ಬನ್ನಿ
    ವ್ಯಾಪಾರಿ: ನಮ್ಮದು ಕ್ಯಾನ್ ಬಿಸಿನೆಸ್ ಇದೆ. ಈಗ ನೀವು ಬಾರ್ ಗೆ ಹಾಕ್ತಿದ್ದೀರಾ. ನಾವು ಇದನ್ನು ಹಾಕೋಣ ಎಂದು ಕೇಳ್ತಿದ್ದೀವಿ
    ಪ್ರತಿನಿಧಿ: ಬ್ಯಾನ್ ಆಗಿದೆ ಅಲ್ವ
    ವ್ಯಾಪಾರಿ: ಅದೆಲ್ಲ ಏನಿಲ್ಲ ಬರೀ ಮೂರು ಬೇರೆ ಬೇರೆ ಬ್ಯಾನ್ ಆಗಿದೆ ಅಷ್ಟೇ
    ಪ್ರತಿನಿಧಿ: ಇದ್ರಿಂದ ಲಾಭ ಇದೇಯಾ
    ವ್ಯಾಪಾರಿ: ಇದ್ರಿಂದ ಲಾಸ್ ಇಲ್ಲ ಲಾಭ ಇದೆ

    ಪ್ರತಿನಿಧಿ: ಲೈಸೆನ್ಸ್ ಇಲ್ಲವಾದ್ರೆ ಏನ್ ಮಾಡೋದು
    ವ್ಯಾಪಾರಿ: ಇಲ್ಲ ಏನ್ ಆಗಲ್ಲ
    ಪ್ರತಿನಿಧಿ: ಅದು ನಮ್ಮದು ಕ್ಯಾನ್ ಬಿಸಿನೆಸ್ ಇದೆ. ಈಗ ಪ್ಲಾಸ್ಟಿಕ್ ವಾಟರ್ ಬಾಟೆಲ್ ಗೆ ನಿಷೇಧ ಇದ್ದರೆ ಎರಡು ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ.
    ವ್ಯಾಪಾರಿ: ಹಾಗಾ ನೋಡೋಣ
    ಪ್ರತಿನಿಧಿ: ಎಷ್ಟಿದು?
    ವ್ಯಾಪಾರಿ: ನೋಡಿ ಇದರ ಮೇಲೆ 3 ರೂ ಬರೆದಿದ್ದಾರೆ. 100 ರೂ. ಬೇಕಾದ್ರು ಸಿಗುತ್ತೆ. ಒಂದ್ ಬ್ಯಾಗ್ ನಲ್ಲಿ 100 ಪಾಕೆಟ್ ಇರುತ್ತೆ. 75 ಪೈಸೆ ಹೋಲ್ ಸೆಲ್ ಸಿಗುತ್ತೆ.

    ಪ್ರತಿನಿಧಿ: ಎಲ್ಲಿಂದ ಬರುತ್ತೆ
    ವ್ಯಾಪಾರಿ: ತಮಿಳುನಾಡಿನಿಂದಲೂ ಈ ಪಾಕೆಟ್ ವಾಟರ್ ಸಿಗುತ್ತೆ
    ಪ್ರತಿನಿಧಿ: 30 ದಿನ ಇರುತ್ತಾ
    ವ್ಯಾಪಾರಿ: ಇಲ್ಲ ಹಾಕಿದ್ದಾರೆ. ಆದರೆ ನಾವ್ ಬೇಗ ಮಾರಾಟ ಮಾಡಿಬಿಡ್ತಿವಿ
    ಪ್ರತಿನಿಧಿ: ಎಣ್ಣೆ ಗಾ ಇದು ತುಂಬಾ ಬಳಕೆ ಆಗುತ್ತಾ?
    ವ್ಯಾಪಾರಿ: ಹೌದು. ಅದ್ರು ಪ್ರೊಟೆಸ್ಟ್ಗೂ ಜಾಸ್ತಿ ಆಗುತ್ತೆ.
    ಪ್ರತಿನಿಧಿ: ಎಲ್ಲೆಲ್ಲಿ ಹಾಕ್ತಿರಾ
    ವ್ಯಾಪಾರಿ: ವಿಧಾನಸೌದಕ್ಕೆಲ್ಲ ಹಾಕ್ತಿನಿ, ಫ್ರೀಡಂಪಾರ್ಕ್ ಹತ್ತಿರನೂ ಹಾಕ್ತಿನಿ

    ಪರವಾನಿಗೆ ಎಂದ್ರೇನೆ ಗೊತ್ತಿಲ್ಲ. ಇನ್ನು ಶುದ್ಧೀಕರಣ ಮಾತು ಬಿಡಿ. ಈ ನೀರು ಕಲುಷಿತ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಪಕ್ಕಾ ಆಗಿದೆ. ದೇಶದಲ್ಲಿ ಶುದ್ಧೀಕರಣ ಮಾಡಿರುವ ನೀರು, ಯಾವುದೇ ರೋಗಾಣುಗಳಿಲ್ಲದ ನೀರು ಪೂರೈಕೆಗೆ ಮಾತ್ರ ಅವಕಾಶ ಇದೆ. ಆದರೆ ಲೈಸೆನ್ಸ್ ಇಲ್ಲದೆ ನೂರಾರು ವಹಿವಾಟು ಶುರುವಾಗಿದೆ. ಈ ಸಂಬಂಧ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಲು ಸಿದ್ಧ ಎಂದು ಹೇಳುತ್ತಿದ್ದಾರೆ.

    ಈ ನಿಷೇಧಿತ ಪ್ಲಾಸ್ಟಿಕ್ ನೀರಿನ ಬಗ್ಗೆ ಗಮನ ಹೆಚ್ಚು ಕೊಡಬೇಕಿದೆ ಈ ನೀರು ಕುಡಿಯುವದರಿಂದ ಸಾಂಕ್ರಾಮಿಕ ರೋಗ, ಲಿವರ್ ಸಂಬಂಧಿತ ಕಾಯಿಲೆ ಬರುತ್ತೆ. ಹೆಪಟೈಟಿಸ್ ಸಂಬಂಧಿಯ ಕಾಯಿಲೆ ಕೂಡ ಬರಲಿದೆ.

  • 10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

    10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

    ಅಹಮದಾಬಾದ್: ಕೆಲಸವಿಲ್ಲವೆಂದು ಜೀವನ ನಿರ್ವಹಣೆಗಾಗಿ ಪಾಪಿ ತಂದೆಯೊಬ್ಬ ತನ್ನ 10 ವರ್ಷದ ಮಗಳನ್ನೇ 50 ಸಾವಿರಕ್ಕೆ ಮಾರಿದ ಅಮಾನವೀಯ ಘಟನೆಯೊಂದು ಅಹಮದಾಬಾದ್ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಗುಜರಾತಿನ ಸಾಮಾಜಿಕ ನ್ಯಾಯ ಇಲಾಖೆ ತನಿಖೆ ನಡೆಸಿದ ವೇಳೆ ತಂದೆಯ ಕೃತ್ಯ ಬಯಲಾಗಿದೆ. ಮದುವೆಯಾದ ವ್ಯಕ್ತಿಯನ್ನು ಗೋವಿಂದ್ ಥ್ಯಾಕೂರ್ ಹಾಗೂ ಏಜೆಂಟಾಗಿ ಕೆಲಸ ಮಾಡಿದ್ದಾತನನ್ನು ಜಗ್ಮಲಗ ಗಮರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ, ಗೋವಿಂದ್, ಏಜೆಂಟ್ ಸೇರಿದಂತೆ ಮತ್ತಿತರ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

    ಬನಸ್ಕಂತ ಜಿಲ್ಲೆಯ ನಿವಾಸಿಯಾಗಿರುವ ವ್ಯಕ್ತಿ ತನ್ನ ಮಗಳನ್ನು 37 ವರ್ಷದವನಿಗೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ. ಮದುವೆಯ ಮೂಲಕ ತನ್ನ ಮಗಳನ್ನು 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಸ್ಥಳೀಯ ಏಜೆಂಟ್ ಮೂಲಕ ತನ್ನ ಮಗಳನ್ನು ಮಾರಾಟ ಮಾಡಲು ಒತ್ತಡ ಹೇರಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಮಹಿಳಾ ಕೈಂ ಬ್ರ್ಯಾಂಚ್ ನವರು ಬಾಲಕಿಯನ್ನು ಅಸರ್ವಾ ಮನೆಯಿಂದ ಮಂಗಳವಾರ ರಕ್ಷಿಸಿದ್ದಾರೆ. ಸದ್ಯ ಆಕೆಯನ್ನು ಒಧವ್ ನಲ್ಲಿರುವ ಮಹಿಳಾ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ.

    ಬಾಲಕಿಯ ತಂದೆ ಬಡವನಾಗಿದ್ದು, ಜೀವನ ನಿರ್ವಹಣೆ ಮಾಡಲು ಹಣಕ್ಕಾಗಿ ಪರದಾಡುತ್ತಿದ್ದನು. ಈ ವೇಳೆ ಗ್ರಾಮದಲ್ಲಿರುವ ಏಜೆಂಟ್ ವೊಬ್ಬ ಹಣದ ಆಮಿಷ ಒಡ್ಡಿದ್ದಾನೆ. ನಿನ್ನ ಮಗಳನ್ನು ನಾನು ಹೇಳಿದ ವ್ಯಕ್ತಿಗೆ ಮದುವೆ ಮಾಡಿಕೊಟ್ಟರೆ 50 ಸಾವಿರ ಸಿಗುತ್ತದೆ ಎಂದು ಹೇಳಿದ್ದಾನೆ ಎಂಬುದಾಗಿ ಬಾಲ್ಯವಿವಾಹ ತಡೆಯ ಅಧಿಕಾರಿ ಮನೀಶ್ ಜೋಶಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಹಡದ್ ಠಾಣೆಯ ಪೊಲೀಸರು ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮದುವೆಯ ವಿಡಿಯೋ ಕೂಡ ಮಾಡಲಾಗಿದ್ದು, ಈ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿಡಿಯೋದಲ್ಲಿ 37 ವರ್ಷದ ಗೋವಿಂದ್ ಥ್ಯಾಕೂರ್ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾನೆ. ಪೊಲೀಸರಿಗೆ ಹಸ್ತಾಂತರವಾದ ವಿಡಿಯೋವನ್ನು ಬಾಲಕಿಯ ತಂದೆಗೆ ತೋರಿಸಿದಾಗ ಆತ ತನ್ನ ಅಪ್ರಾಪ್ತ ಮಗಳನ್ನು ಗುರುತಿಸಿದ್ದಾನೆ. ಅಲ್ಲದೆ ತಾನೇ ಮಗಳನ್ನು ಆಗಸ್ಟ್ ನಲ್ಲಿ ಗೋವಿಂದನಿಗೆ ಮದುವೆ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿ ಗೋವಿಂದ್ ತನ್ನ ನಿವಾಸ ಅಹಮದಾಬಾದ್ ನಲ್ಲಿರುವ ಅಸರ್ವಾದಲ್ಲಿ ಬಾಲಕಿ ಮೇಲೆ ಕಳೆದ 2 ತಿಂಗಳಿನಿಂದ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಅತ್ಯಾಚಾರ ಆರೋಪದಡಿ ಗೋವಿಂದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಬಾಲಕಿ ತಂದೆ, ಏಜೆಂಟ್ ಹಾಗೂ ಮೂವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ.

    ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ಅಗತ್ಯ ಬಿದ್ದರೆ ಕೌನ್ಸಿಲಿಂಗ್ ಕೂಡ ನಡೆಸಲಾಗುವುದು. ಬಾಲಕಿಯ ತಂದೆ ಮದ್ಯವ್ಯಸನಿಯಾಗಿದ್ದು, ಸರಿಸುಮಾರು ಒಂದು ತಿಂಗಳಿನಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

  • ಫಾರೀನ್ ಚಾಕಲೇಟ್ ತಿನ್ನೋ ಮುನ್ನ ಹುಷಾರ್ – ಬ್ಯಾನ್ ಆಗಿದ್ರೂ ಮಾರಾಟ

    ಫಾರೀನ್ ಚಾಕಲೇಟ್ ತಿನ್ನೋ ಮುನ್ನ ಹುಷಾರ್ – ಬ್ಯಾನ್ ಆಗಿದ್ರೂ ಮಾರಾಟ

    – ಮಕ್ಕಳ ಆರೋಗ್ಯಕ್ಕೆ ಕುತ್ತು ತರಬೇಡಿ
    – ಚಾಕಲೇಟ್ ಮದ್ಯ ಮಿಶ್ರಣ

    ಬೆಂಗಳೂರು: ಫಾರೀನ್ ಚಾಕಲೇಟ್ ತಿನ್ನೋ ಮುನ್ನ ಹುಷಾರಾಗಿರಿ. ದುಬಾರಿ ಆಗಿರುವ ವಿದೇಶಿ ಚಾಕಲೇಟ್ ನೀಡಿ ಸರ್ಪ್ರೈಸ್ ಕೊಡುವ ಬರದಲ್ಲಿ ಮಕ್ಕಳ ಆರೋಗ್ಯಕ್ಕೆ ಕುತ್ತು ತರಬೇಡಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಬ್ಯಾನ್ ಆಗಿರೋ ಲಿಕ್ಕರ್ ಚಾಕಲೇಟ್‍ಗಳು ಮಾರಾಟವಾಗುತ್ತಿದೆ.

    ಹೌದು. ವೀಕೆಂಡ್ ಬಂತೆಂದರೆ ಸಾಕು ಮಮ್ಮಿ ಆ ಮಾಲ್‍ಗೆ ಹೋಗೋಣ, ಡ್ಯಾಡಿ ಈ ಮಾಲ್‍ಗೆ ಹೋಗೋಣ ಎಂದು ಪೀಡಿಸಿ ಸಿಲಿಕಾನ್ ಸಿಟಿ ಮಕ್ಕಳು ಮಾಲ್‍ಗಳಲ್ಲೇ ಏಂಜಾಯ್ ಮಾಡುತ್ತಾರೆ. ಅಲ್ಲಿ ಸಿಗುವ ಫಾರೀನ್ ಚಾಕಲೇಟ್ ಎಂದರೆ ಮಕ್ಕಳಿಗೆ ಸಖತ್ ಇಷ್ಟ. ಆದ್ರೆ ಈ ಚಾಕಲೇಟ್ ಕೊಡಿಸೋ ಮುನ್ನ ಪೋಷಕರು ನೂರು ಬಾರಿ ಯೋಚಿಸಿಬೇಕಾಗಿದೆ. ಯಾಕೆಂದರೆ ನೀವು ಕೊಡಿಸೋ ಕೆಲವು ಫಾರಿನ್ ಚಾಕಲೇಟ್‍ನಲ್ಲಿ ಅಲ್ಕೋಹಾಲ್ ಮಿಕ್ಸ್ ಆಗಿರುತ್ತದೆ. ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

    ಗಾರ್ಡನ್ ಸಿಟಿಯ ಬಹುತೇಕ ಎಲ್ಲಾ ಮಾಲ್‍ಗಳಲ್ಲೂ ಆಲ್ಕೊಹಾಲ್ ಮಿಕ್ಸ್ ಆಗಿರೋ ಚಾಕಲೇಟ್ ಲಭ್ಯವಿದೆ. ಅದರಲ್ಲೂ 1%, 1.4%, 1.6% ಆಲ್ಕೋಹಾಲ್ ಕಂಟೆಟ್‍ಗಳಿವೆ. ಇವುಗಳು ವೈನ್, ಬ್ರಾಂಡಿ, ರಮ್, ಬ್ರೀಜರ್ ಗಳ ಟೆಸ್ಟ್ ಮತ್ತು ಸ್ಮೆಲ್ ಹೊಂದಿವೆ. ವೈನ್‍ನಲ್ಲಿ 15-20%, ಬಿಯರ್‍ನಲ್ಲಿ 5-10%, ಬ್ರೀಜರ್‍ನಲ್ಲಿ 8-10% ಮದ್ಯದ ಅಂಶವಿರುತ್ತದೆ. ಈ ಎಲ್ಲಾ ವಿಧದ ಮದ್ಯದ ಅಂಶಗಳನ್ನು ಹೊಂದಿರುವ ಚಾಕಲೇಟ್‍ಗಳನ್ನು ಲಿಕ್ಕರ್ ಚಾಕೊಲೇಟ್ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಕಾರಣಕ್ಕೆ ಇವುಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬ್ಯಾನ್ ಮಾಡಿದೆ. ಆದರೂ ಕೂಡ ಬೆಂಗಳೂರಿನೆಲ್ಲೆಡೆ ರಾಜಾರೋಷವಾಗಿ ಬ್ಯಾನ್ ಆಗಿರುವ ಚಾಕಲೇಟ್ ಮಾರಾಟ ಮಾಡಲಾಗುತ್ತಿದೆ.

    ಈ ಬಗ್ಗೆ ಅಂಗಡಿ ಮಾಲೀಕರನ್ನ ಕೇಳಿದಾಗ ಕಿಕ್ ಕೊಡುತ್ತೆ, ಎರಡು ಸಿಗರೇಟ್ ಸೇದಿದಾಗ ಆಗೋ ಮಜಾ ಇದರಿಂದ ಸಿಗುತ್ತೆ. ಇದಕ್ಕೆ ಸಖತ್ ಬೇಡಿಕೆಯಿದೆ. ಗ್ರಾಹಕರು ಇದನ್ನೇ ಹೆಚ್ಚು ಖರೀದಿಸುತ್ತಾರೆ ಅದಕ್ಕೆ ಮಾರುತ್ತೇವೆ ಎಂದು ಹೇಳುತ್ತಾರೆ.

    ಲಿಕ್ಕರ್ ಚಾಕಲೇಟ್ ಬಗ್ಗೆ ಆಹಾರ ತಜ್ಞರನ್ನು ಕೇಳಿದಾಗ, ಇದೊಂದು ಚಿಕ್ಕ ಮಕ್ಕಳಿಗೆ ವಿಷ ಹಾಕುವ ಹುನ್ನಾರ. ಇವುಗಳನ್ನು ಮಾರುವಂತಿಲ್ಲ. ಇವುಗಳ ಮೂಲಕ ದೊಡ್ಡ ದೊಡ್ಡ ಆಲ್ಕೊಹಾಲ್ ಕಂಪನಿಗಳು ತನ್ನ ಬ್ರಾಡ್‍ನ್ನು ಮಕ್ಕಳಿಗೆ ಪರಿಚಯಿಸತ್ತಿವೆ. ಇದರಿಂದ ಮಕ್ಕಳು ಭವಿಷ್ಯದ ಕುಡುಕರಾಗುವುದು ಗ್ಯಾರಂಟಿ. ದೊಡ್ಡ ದೊಡ್ಡ ವಿಸ್ಕಿ ಕಂಪನಿಗಳು ತಮ್ಮ ಆಲ್ಕೋಹಾಲ್ ಟೆಸ್ಟ್‍ನ್ನು ಹೀಗೆ ಸಣ್ಣದಾಗಿ ಮಕ್ಕಳಿಗೆ ಪರಿಚಯಿಸುತ್ತವೆ ಎಂದು ತಿಳಿಸಿದ್ದಾರೆ.

    ಲಿಕ್ಕರ್ ಚಾಕಲೇಟ್‍ಗಳನ್ನು ನೋಡಿಯೇ ವೈದ್ಯರು ಹೌಹಾರಿದ್ದಾರೆ. ಇಂಥ ಚಾಕ್ಲೇಟ್ ಡೇಂಜರಸ್. ಇವುಗಳನ್ನು ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 15 ರಿಂದ 25 ವರ್ಷದ ಒಳಗಿನ ಮಕ್ಕಳಲ್ಲಿ ಈ ಚಾಕೊಲೇಟ್ ಅಡಿಕ್ಷನ್ ಹೆಚ್ಚು, ಹೀಗಾಗಿ ಇದನ್ನು ಸೇವಿಸುವುದರಿಂದ ಮಕ್ಕಳ ಲಿವರ್, ಕಿಡ್ನಿ ಡ್ಯಾಮೇಜ್ ಆಗುತ್ತೆ. ಡಯಾಬಿಟಿಸ್, ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಜೊತೆಗೆ ಹಲ್ಲು, ವಸಡು ಸಮಸ್ಯೆ ಬರುತ್ತದೆ. ಹೀಗೆ ಹತ್ತು ಹಲವು ದುಷ್ಪರಿಣಾಮಗಳು ಎದುರಿಸಬೇಕಾಗತ್ತದೆ.

    ಈ ಬಗ್ಗೆ ತಿಳಿದಿದ್ದರೂ, ಲಿಕ್ಕರ್ ಚಾಕಲೇಟ್ ಬ್ಯಾನ್ ಆಗಿದ್ದರೂ ಪ್ರತಿಷ್ಠಿತ ಮಾಲ್‍ಗಳಲ್ಲಿ ಇದನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ಯಾಕೆ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎನ್ನುವುದು ಗೊತ್ತಿಲ್ಲ. ಯಾವುದಕ್ಕೂ ನಿಮ್ಮ ಮಕ್ಕಳಿಗೆ ಮಾಲ್‍ಗಳಲ್ಲಿ ವಿದೇಶಿ ಚಾಕಲೇಟ್ ಗಳನ್ನು ನೀಡುವ ಮುನ್ನ ಮುನ್ನ ಎಚ್ಚರವಹಿಸಿ.

  • ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ರಾಂಚಿ: ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸ್ಥಳೀಯ ಯವಕರು ಹಲ್ಲೆ ಮಾಡಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ಘಟನೆ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದು, ಘಟನೆಯಲ್ಲಿ ಕಲಾಂತಸ್ ಬಾರ್ಲಾ ಸಾವನ್ನಪ್ಪಿದ್ದಾನೆ. ಫಾಗು ಕಚಪಾಂಡ್ ಮತ್ತು ಫಿಲಿಪ್ ಹಹೋರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರನ್ನು ಬುಡಕಟ್ಟು ಕ್ರಿಶ್ಚಿಯನ್ನರು ಎಂದು ಗುರುತಿಸಲಾಗಿದೆ.

    ಖುಂಟಿ ಜಿಲ್ಲೆಯಾ ಜಲ್ತಾಂಡಾದ ಸುವಾರಿ ಎಂಬ ಗ್ರಾಮದಲ್ಲಿ ನಿಷೇಧಿತ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ವಾಟ್ಸಾಪ್‍ನಲ್ಲಿ ಸುದ್ದಿ ಆಗಿದೆ. ಈ ಸುದ್ದಿಯನ್ನೇ ಬೆನ್ನಟ್ಟಿದ ಸುತ್ತಮುತ್ತಲ ಊರಿನ ಯುವಕರ ಗುಂಪು ಈ ಮೂವರ ಮೇಲೆ ಹಲ್ಲೆ ಮಾಡಿದೆ. ಇವರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಮೂವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಮಗೆ ಹೆಚ್ಚು ಮಾಹಿತಿಯಿಲ್ಲ. ಈಗಾಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾರನ್ನೂ ಬಂಧಿಸಿಲ್ಲ. ಆದರೆ ಕೆಲ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ಕಳೆದ ಏಪ್ರಿಲ್ ಇದೇ ರೀತಿಯ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಗುಮ್ಲಾ ಜಿರ್ಮೋ ಗ್ರಾಮದ ಬುಡಕಟ್ಟು ಕ್ರಿಶ್ಚಿಯನ್ ಯುವಕ ಪ್ರಕಾಶ್ ಲಕ್ರಾ ಎಂಬವರನ್ನು ಸತ್ತ ಎತ್ತುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಹಲ್ಲೆ ನಡೆದು ಮೃತಪಟ್ಟಿದ್ದ.

  • ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ತುಮಕೂರು: ಕಣ್ಣು, ಕಿಡ್ನಿ ಮಾರುತ್ತೇನೆ, ನನಗೆ ಸಾಲ ತೀರಿಸಲು ದುಡ್ಡು ಕೊಡಿ ಎಂದು ಬೋರ್ಡ್ ಹಿಡಿದು ಶಿರಾ ತಾಲೂಕಿನಲ್ಲಿ ರೈತರೊಬ್ಬರು ಬೀದಿ ಬೀದಿ ಅಲೆಯುತ್ತಿದ್ದಾರೆ.

    ಮೂರ್ನಾಲ್ಕು ಬೋರ್ ವೆಲ್ ಕೊರೆದರೂ ಕೂಡ ರೇಷ್ಮೆ ಬೆಳೆ ಕೈ ಹತ್ತದೆ ಸಾಲ ಮಾಡಿದ ರೈತ ಚಂದ್ರಶೇಖರ್ ನಂತರ ಆ ಸಾಲವನ್ನು ತೀರಿಸಲಾಗದೆ ವಿಷವನ್ನು ಕುಡಿದಿದ್ದರು. ಅದೃಷ್ಟವಾಶಾತ್ ಬದುಕಿ ಬಂದು ಈಗ ಕೈ ಸಾಲ ಮಾಡಿ ಬ್ಯಾಂಕ್ ಸಾಲ ತೀರಿಸಿದ್ದರು. ಈಗ ಕೈ ಸಾಲ ತೀರಿಸಲಾಗದೆ ಕಿಡ್ನಿ ಮಾರುವ ಹಂತಕ್ಕೆ ಬಂದು ತುಲುಪಿದ್ದಾರೆ.

    ಶಿರಾ ತಾಲೂಕಿನ ಮಾಗೂಡಿನ ರೈತನಾದ ಚಂದ್ರಶೇಖರ್ 15 ವರ್ಷದ ಹಿಂದೆ ಪಿಎಲ್‍ಡಿ ಹಾಗೂ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ನಂತರ ಹಂತಹಂತವಾಗಿ ಸಾಲ ತೀರಿಸಿದ್ದರೂ ಕ್ಲಿಯರೆನ್ಸ್ ಸಿಗದೆ ಪಹಣಿಯಲ್ಲು ಇನ್ನೂ ಸಾಲವಿದೆ ಎಂದು ಬರುತ್ತಿದ್ದು ಜಮೀನನ್ನು ಉಪಯೋಗಿಸಿಕೊಂಡು ಮರುಸಾಲವೂ ಮಾಡಲಾಗದ ಪರಿಸ್ಥಿತಿ ತುಲುಪಿದ್ದಾರೆ.

    ಇನ್ನೊಂದಡೆ ಕೈ ಸಾಲ ವಿಪರೀತ ಬೆಳೆದು 10ನೇ ತರಗತಿ ಓದುತ್ತಿರುವ ಮಗಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತೆ ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ. ಈಗ ಕಿಡ್ನಿ ಮಾರಾಟ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬೇರೆ ದಾರಿ ಕಾಣದೆ ಇತ್ತ ಜೀವನವನ್ನೂ ನಡೆಸಲಾಗದೆ ತುತ್ತು ಅನ್ನಕ್ಕೂ ಕೈ ಚಾಚುತ್ತಿದ್ದಾರೆ.