Tag: salary

  • ಕೋವಿಡ್‌ 19 ಸಂಸದರ ವೇತನ,ಭತ್ಯೆ ಕಡಿತ- ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?

    ಕೋವಿಡ್‌ 19 ಸಂಸದರ ವೇತನ,ಭತ್ಯೆ ಕಡಿತ- ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?

    ನವದೆಹಲಿ: ಕೋವಿಡ್‌ 19 ಹಿನ್ನೆಲೆಯಲ್ಲಿ ಸಂಸದರ ಒಂದು ವರ್ಷದ ವೇತನ ಮತ್ತು ಭತ್ಯೆ ಕಡಿತಗೊಂಡಿದೆ. ಒಂದು ವರ್ಷದ ಅವಧಿಗೆ ಸಂಸದರ ವೇತನ ಶೇ.30ರಷ್ಟು ಕಡಿತಗೊಂಡರೆ, ಸಚಿವರ ಭತ್ಯೆ ಶೇ.30ರಷ್ಟು ಕಡಿತಗೊಂಡಿದೆ.

    ಈ ಬದಲಾವಣೆ ಈ ವರ್ಷದ ಏಪ್ರಿಲ್‌ 1ರಿಂದ ಒಂದು ವರ್ಷದವರಗೆ ಇರಲಿದೆ. ವೇತನ ಮತ್ತು ಭತ್ಯೆ ಕಡಿತದಿಂದ ಒಟ್ಟು 54 ಕೋಟಿ ರೂ. ಉಳಿತಾಯವಾಗಲಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್‌ 6 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವೇತನ ಕಡಿತದ ನಿರ್ಧಾರ ಕೈಗೊಳ್ಳಲಾಗಿತ್ತು.1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಈ ಸುಗ್ರೀವಾಜ್ಞೆಗೆ ಈ ಬಾರಿಯ ಕಲಾಪದಲ್ಲಿ ಅನುಮೋದನೆ ಸಿಕ್ಕಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‍ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್‍ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದರು.

    ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದರು.

    ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?
    ತಿಂಗಳಿಗೆ ವೇತನ 1 ಲಕ್ಷ ರೂ. ಇದ್ದರೆ ಈಗ 70,000 ರೂ.ಗೆ ಇಳಿಕೆಯಾಗಿದೆ. ಕ್ಷೇತ್ರ ಭತ್ಯೆ 70,000 ರೂ. ಇದ್ದರೆ ಈಗ ಇದು 49,000 ರೂ.ಗೆ ಇಳಿಕೆಯಾಗಿದೆ.

    ಸರ್ಕಾರಿ ಕಚೇರಿ ಖರ್ಚುಗಳ ಭತ್ಯೆ ಈಗ 54,000 ರೂ.ಗಳಿಗೆ ಇಳಿಕೆಯಾಗಿದ್ದರೆ ಮೊದಲು 60,000 ರೂ. ಇತ್ತು. ಇದರಲ್ಲಿ 20,000 ರೂ. ಇದ್ದ ಕಚೇರಿ ಖರ್ಚು 14,000 ರೂ. ಗಳಿಗೆ ಇಳಿಕೆಯಾಗಿದೆ. ಕಾರ್ಯದರ್ಶಿಗಳ ಅನುದಾನ 40,000 ರೂ. ಹಾಗೆಯೇ ಮುಂದುವರಿಯಲಿದೆ.

    3,000 ರೂ. ಇದ್ದ ಪ್ರಧಾನಮಂತ್ರಿಗಳ ಭತ್ಯೆ 2,100 ರೂ., ಸಂಪುಟ ಸಚಿವರುಗಳ ಭತ್ಯೆ 2,000 ರೂ. ಗಳಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ರಾಜ್ಯ ಖಾತೆ ಸಚಿವರುಗಳ ಭತ್ಯೆ 1,000 ರೂ. ನಿಂದ 700 ರೂ.ಗಳಿಗೆ ಇಳಿಕೆಯಾಗಿದೆ. ಉಪ ಸಚಿವರುಗಳ ಭತ್ಯೆ 600 ರೂ. ನಿಂದ 420 ರೂ.ಗಳಿಗೆ ಇಳಿದಿದೆ.

  • ಸಂಬಳ ಕೇಳಿದ್ರೆ ಮಂಚಕ್ಕೆ ಕರೆಯುತ್ತಾನೆ – ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ಸಂಬಳ ಕೇಳಿದ್ರೆ ಮಂಚಕ್ಕೆ ಕರೆಯುತ್ತಾನೆ – ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    – ನಾನು ಹೇಳಿದ ಸ್ಥಳಕ್ಕೆ ಬಂದ್ರೆ ಮಾತ್ರ ವೇತನ

    ಶಿವಮೊಗ: ಗ್ರಾಮ ಸಹಾಯಕಿಯೊಬ್ಬರು ಜಿಲ್ಲೆಯ ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸಂಬಳ ಕೇಳಿದರೆ ತಹಶೀಲ್ದಾರ್ ಮಂಚಕ್ಕೆ ಕರೆಯುತ್ತಾನೆ ಎಂಬ ಆರೋಪ ಕೇಳಿ ಬಂದಿದೆ.

    ಭದ್ರಾವತಿ ತಹಶೀಲ್ದಾರ್ ಎಚ್.ಸಿ.ಶಿವಕುಮಾರ್ ವಿರುದ್ಧ ಗ್ರಾಮ ಸಹಾಯಕಿಯೊಬ್ಬರು ಈ ರೀತಿ ಆರೋಪ ಮಾಡಿದ್ದಾರೆ. ಅಲ್ಲದೇ ಆರೋಪ ಕೇಳಿ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಹಶೀಲ್ದಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

    ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಸಂಬಳ ಮಾಡಿಕೊಡುವುದಾಗಿ ತಹಶೀಲ್ದಾರ್ ಹೇಳಿರುವುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.

    ನಡೆದಿದ್ದೇನು?
    ಮಹಿಳೆ ಪತಿ ಕೂಡ ಇದೇ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಾರೋಗ್ಯದ ಕಾರಣ ಸಂತ್ರಸ್ತೆಯ ಅಕ್ಕ ಆರಂಭದಲ್ಲಿ ಐದಾರು ತಿಂಗಳು ಕೆಲಸ ಮಾಡಿದರು. ಇದಾದ ಬಳಿಕ ಚೇತರಿಸಿಕೊಂಡ ಅವಿನಾಶ್ ಪುನಃ ಕೆಲಸಕ್ಕೆ ವಾಪಸ್ ಆಗಿದ್ದರು. ಆದರೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಕಳೆದ ಐದು ತಿಂಗಳಿನಿಂದ ಮಹಿಳೆ ಕೆಲಸ ಮಾಡುತ್ತಿದ್ದರು.

    ಈ ವೇಳೆ ನೊಂದ ಮಹಿಳೆಗೆ ಐದಾರು ತಿಂಗಳಿನಿಂದ ವೇತನ ಬಂದಿರಲಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರ ಬಳಿ ಮಹಿಳೆ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ತಹಶೀಲ್ದಾರ್ ನನ್ನ ಜೊತೆ ಸಹಕರಿಸಿದರೆ, ನಾನು ಹೇಳಿದ ಸ್ಥಳಕ್ಕೆ ಬಂದರೆ ವೇತನ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಎಂದು ಮಹಿಳೆ ಆರೋಪಿಸಿದ್ದು, ಈ ಬಗ್ಗೆ ತಹಶೀಲ್ದಾರ್ ವಿರುದ್ಧ ಹಳೆನಗರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

    ತಹಶೀಲ್ದಾರ್ ಶಿವಕುಮಾರ್ ವಿರುದ್ಧ ಠಾಣೆಯಲ್ಲಿ ಎಫ್‍ಐಆರ್ ದಾಖಲು ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ತಹಶೀಲ್ದಾರ್ ಶಿವಕುಮಾರ್‌ನನ್ನು ಕೇವಲ ಕರ್ತವ್ಯದಿಂದ ಮಾತ್ರವಲ್ಲದೇ, ಕೆಲಸದಿಂದಲೇ ಅಮಾನತು ಮಾಡಿ, ಶೀಘ್ರವೇ ಬಂಧನ ಮಾಡುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

  • ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಚಿಕ್ಕಮಗಳೂರು: ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದಕ್ಕೆ ಆಶಾ ಕಾರ್ಯಕರ್ತೆಯರ ಸಂಬಳ ತಡೆ ಹಿಡಿಯಲಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಂಟು ಆಶಾ ಕಾರ್ಯಕರ್ತೆಯರು ಮಳೆಯಿಂದಾಗಿ ಬಸ್ ಸೌಕರ್ಯವಿಲ್ಲದೇ ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದರು. ಇದೇ ಕಾರಣ ನೀಡಿ ಆರೋಗ್ಯಾಧಿಕಾರಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ. ಗೈರಾಗಿದ್ದಕ್ಕೆ ವಿಷಾದ ಪತ್ರವನ್ನ ನೀಡಿದ್ರೂ ವೈದ್ಯಾಧಿಕಾರಿ ಮನೋಜ್ ತಮ್ಮ ಸಂಬಳ ತಡೆ ಹಿಡಿದಿದ್ದಾರೆ. ನೀವು ಕೆಲಸವನ್ನೇ ಮಾಡಿಲ್ಲ ನಿಮಗೇಕೆ ಸಂಬಳ ನೀಡಬೇಕು ಎಂದು ಹೇಳುತ್ತಾರೆ. ವೈದ್ಯರು ಸಹಿ ಹಾಕಿದ್ರೆ, ನರ್ಸ್ ಗಳು ಹಾಕಲ್ಲ, ನರ್ಸ್ ಗಳು ಸಹಿ ಹಾಕಿದ್ರೆ ವೈದ್ಯರು ಹಾಕಲ್ಲ ಎಂದು ಆಶಾ ಕಾರ್ಯಕರ್ತೆ ರತ್ನ ಹೇಳುತ್ತಾರೆ.

    ಕೊರೊನಾ ಸಮಯದಲ್ಲಿ ಸಂಬಳ ಆಗೋದು ತಡವಾದ್ರೂ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಕೇವಲ ಮೂರು ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ತಡೆ ಹಿಡಿಯೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಪತ್ನಿ, ಮಗಳಿಗೆ ವಿಷ ಕೊಟ್ಟು ಕೊಂದ – ಶವದ ಮುಂದೆಯೇ ಉದ್ಯೋಗಿ ಆತ್ಮಹತ್ಯೆ

    – ಕೊರೊನಾ ಭಯದಿಂದ ಕೊಲೆ ಮಾಡಿ, ಸೂಸೈಡ್

    ಧಾರವಾಡ: ಪತ್ನಿ ಮತ್ತು ಮಗಳಿಗೆ ವಿಷ ಕೊಟ್ಟ ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ.

    ಅರ್ಪಿತಾ (28) ಹಾಗೂ ನಾಲ್ಕು ವರ್ಷದ ಶುಕೃತಾ ಕೊಲೆಯಾದ ತಾಯಿ-ಮಗಳು. ಮೌನೇಶ್ ಪತ್ತಾರ (36) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಕಂಪನಿಯ ಉದ್ಯೋಗಿ. ಮೊದಲಿಗೆ ಹೆಂಡತಿ ಹಾಗೂ ಮಗಳಿಗೆ ವಿಷ ಕೊಟ್ಟಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಮೌನೇಶ್ ಪತ್ತಾರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವನಾಗಿದ್ದು, ಧಾರವಾಡದಲ್ಲಿ ಉದ್ಯೋಗಕ್ಕಾಗಿ ಬಂದು ನೆಲೆಸಿದ್ದ. ಇಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದನು. ಈ ದಂಪತಿ ಮದುವೆಯಾಗಿ ಐದು ವರ್ಷಗಳಾಗಿತ್ತು. ಆದರೆ ಇತ್ತೀಚಿಗೆ ಕಂಪನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಉದ್ಯೋಗ ಹಾಗೂ ಸಂಬಳ ಕಡಿತವಾಗುವ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

    ಮನೆಯಲ್ಲಿ ಪತ್ನಿಗೆ ಬಿಪಿ ಲೋ ಆಗಿದೆ ಅಲ್ಲದೇ ಮಗಳಿಗೆ ಕೂಡ ಜ್ವರ ಕಾಣಿಡಿಕೊಂಡಿದೆ. ಇದನ್ನ ಕಂಡ ಮೌನೇಶ್ ಸ್ಥಳೀಯ ವೈದ್ಯರೊಬ್ಬರ ಬಳಿ ತೋರಿಸಿದ್ದನು. ವೈದ್ಯರಿಗೆ ತೋರಿಸಿದ್ದರು ಮಗಳ ಜ್ವರ ಕಡಿಮೆಯಾಗದಿದ್ದಾಗ ಕೊರೊನಾ ಲಕ್ಷಣ ಎಂದು ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರು ಪಂಚನಾಮೆ ಮಾಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

  • ಸಾರಿಗೆ ಇಲಾಖೆ ನೌಕರರ ವೇತನಕ್ಕೆ ಸರ್ಕಾರದಿಂದ ಹಣ ಬಿಡುಗಡೆ

    ಸಾರಿಗೆ ಇಲಾಖೆ ನೌಕರರ ವೇತನಕ್ಕೆ ಸರ್ಕಾರದಿಂದ ಹಣ ಬಿಡುಗಡೆ

    ಬೆಂಗಳೂರು: ಕೊರೊನಾ ನಡುವೆ ಭಯದಲ್ಲೇ ಕೆಲಸ ಮಾಡುತ್ತಿರುವ ಸಾರಿಗೆ ಇಲಾಖೆ ಸಿಬ್ಬಂದಿಗೆ ಕಳೆದೆರಡು ತಿಂಗಳಿಂದ ವೇತನ ಆಗಿರಲಿಲ್ಲ. ಇದೀಗ ಸಾರಿಗೆ ಇಲಾಖೆ ನೌಕರರಿಗೆ ಸರ್ಕಾರ ವೇತನದ ಹಣವನ್ನು ಬಿಡುಗಡೆ ಮಾಡಿದೆ.

    ಒಟ್ಟು 961 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, 4 ತಿಂಗಳ ವೇತನಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಜೂನ್ ಮತ್ತು ಜುಲೈ ತಿಂಗಳ ವೇತನಕ್ಕೆ ಈಗಾಗಲೇ 426 ಕೋಟಿ, ಉಳಿದ ಹಣ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕೆ ಬಿಡುಗಡೆ ಮಾಡಲಾಗಿದೆ.

    ಹಣ ಬಿಡುಗಡೆ ಮಾಡಿದ್ದಕ್ಕೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಎಂ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾಸ್ಯ ಸಾರಿಗೆ ಸಿಬ್ಬಂದಿಗೆ ಸಂಬಳ ಭರಿಸಲು 961 ಕೋಟಿ ರೂ.ಬಿಡುಗಡೆ ಮಾಡಿದೆ. ಇದರಿಂದ ಒಟ್ಟು ನಾಲ್ಕು ತಿಂಗಳುಗಳ ಸಂಬಳ ಭರಿಸಲು ಅನುಕೂಲವಾಗಲಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಧನ್ಯವಾದ ತಿಳಿಸಿದ್ದಾರೆ.

  • ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಬಳವಿಲ್ಲ- ಕೆಲಸಕ್ಕೆ ಬಂದರೂ ರಜೆ ಹಾಕಲೇಬೇಕಂತೆ

    ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಬಳವಿಲ್ಲ- ಕೆಲಸಕ್ಕೆ ಬಂದರೂ ರಜೆ ಹಾಕಲೇಬೇಕಂತೆ

    ರಾಯಚೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ರಾಯಚೂರು ಸೇರಿದಂತೆ ಎಲ್ಲೆಡೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೊಸ ಹೊಸ ತೊಂದರೆಗಳು ಶುರುವಾಗಿವೆ. ಒಂದೆಡೆ ಸಂಬಳವಿಲ್ಲ, ಇನ್ನೊಂದೆಡೆ ರಜೆಗಳ ಹರಣ, ಮತ್ತೊಂದೆಡೆ ಕೆಲಸವೂ ಇಲ್ಲಾ. ಒಟ್ಟಿನಲ್ಲಿ ಎಲ್ಲರದ್ದೂ ಒಂದು ತರದ ಕಷ್ಟ. ಆದ್ರೆ ಸಾರಿಗೆ ಸಿಬ್ಬಂದಿ ಬೇರೆ ತೆರನಾದ ಕಷ್ಟ ಎದುರಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವತಃ ಸಾರಿಗೆ ಸಚಿವರಾಗಿದ್ದರೂ ಸಿಬ್ಬಂದಿ ಕಷ್ಟ ಕೇಳುವವರಿಲ್ಲದಂತಾಗಿದೆ ಅಂತ ಸಾರಿಗೆ ಇಲಾಖೆ ನೌಕರರು ಅಸಮಧಾನಗೊಂಡಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೊದಲ ಲಾಕ್ ಡೌನ್ ಆರಂಭವಾದಾಗಿನಿಂದ ರಾಯಚೂರಿನ ಕೆಎಸ್ ಆರ್ ಟಿ ಸಿ ಸಿಬ್ಬಂದಿ ಎಲ್ಲರಂತೆ ಒಂದಿಲ್ಲೊಂದು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಆದ್ರೆ ಈಗ ಸಾರಿಗೆ ಇಲಾಖೆಯ ಚಾಲಕ ಹಾಗೂ ನಿರ್ವಾಹಕರು ಹೊಸ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಿಲ್ಲ. ಕೆಲಸಕ್ಕೆ ಹೋದರು ರಜೆ ಹಾಕಬೇಕಾಗಿದೆ. ಪ್ರತಿ ಮಾರ್ಗದ ಸಿಬ್ಬಂದಿಗೆ ಆರು ದಿನ ಕೆಲಸ ಆರು ದಿನ ರಜೆ ನೀಡಲಾಗುತ್ತಿದೆ. ಆದ್ರೆ ಬಸ್ ಗಳನ್ನ ಓಡಿಸದ ದಿನಗಳ ರಜೆಯನ್ನು ರಜೆಯಂದು ಪರಿಗಣಿಸಲು ಸಿಬ್ಬಂದಿಯ ಸಾಮಾನ್ಯ ರಜೆ, ಗಳಿಕೆ ರಜೆ , ವೈದ್ಯಕೀಯ ರಜೆಗಳನ್ನ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ರಜೆಗೆ ಮುಂದಿನ ಅವಧಿಯ ರಜೆಯನ್ನು ಮಂಜೂರು ಮಾಡಲಾಗುತ್ತಿದೆ. ಇದರಿಂದ ಕೆಲಸಕ್ಕೆ ಬಂದರೂ ಸಿಬ್ಬಂದಿ ತಮ್ಮ ರಜೆಯನ್ನ ಕಳೆದುಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಬಳಿಕ ಬೇಕಾಗಿರುವ ರಜೆಗಳಿಗೆ ತಮ್ಮ ವೇತನವನ್ನು ಸಿಬ್ಬಂದಿ ಕಳೆದುಕೊಳ್ಳಬೇಕಾಗಿದೆ. ಇನ್ನೊಂದೆಡೆ ಸಂಬಳವೇ ಸರಿಯಾಗಿ ಬರುತ್ತಿಲ್ಲ.

    ಕೊರೊನಾ ಲಾಕ್‍ಡೌನ್ ಆರಂಭವಾದಾಗಿನಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ. ಒಂದು ತಿಂಗಳು, ಎರಡು ತಿಂಗಳು ವಿಳಂಬ ಮಾಡುತ್ತಿದ್ದಾರೆ. ಜೂನ್ ತಿಂಗಳ ಸಂಬಳವನ್ನೇ ನೀಡಿಲ್ಲ. ನಮ್ಮ ರಜೆಗಳನ್ನು ಸಹ ಹಾಳು ಮಾಡುತ್ತಿದ್ದಾರೆ ಜೀವನ ನಡೆಸುವುದೇ ಕಷ್ಟವಾಗಿದೆ. ಇದರಿಂದ ನಮ್ಮ ಬದುಕು ಕೂಲಿ ಕೆಲಸ ಮಾಡುವವರಿಗಿಂತಲೂ ಕಷ್ಟವಾಗಿದೆ. ಮನೆ ಸಂಸಾರ ನಡೆಸಲು ಕಷ್ಟ, ಬಾಡಿಗೆ ಕಟ್ಟಲು ಕಷ್ಟವಿದೆ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

    ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದರಿದ್ದರೂ ಕೊರೊನಾ ಹಿನ್ನೆಲೆ ಬಸ್ ಓಡಾಟ ಕಡಿತವಾಗಿದ್ದು, ಸಿಬ್ಬಂದಿ ಸಂಬಳ ಹಾಗೂ ರಜೆ ಎರಡಕ್ಕೂ ಕತ್ತರಿ ಬಿದ್ದಿದೆ. ಬಸ್ ಓಡಾಟ ಇಲ್ಲದೆ ಸಾರಿಗೆ ಸಂಸ್ಥೆಗಳು ಭಾರೀ ನಷ್ಟದಲ್ಲಿ ಇರುವುದೇನೋ ನಿಜ ಆದ್ರೆ ಸಿಬ್ಬಂದಿಗಳ ಸಂಕಷ್ಟಕ್ಕೆ ಸರ್ಕಾರ ಹಾಗೂ ಸಾರಿಗೆ ಸಚಿವರು ಸ್ಪಂದಿಸಬೇಕಿದೆ.

  • ಕೊರೊನಾ ವಾರಿಯರ್ಸ್‍ಗೆ ಸಂಬಳ ಕೊರತೆ: ಸಚಿವರ ಎದುರೇ ಸಿಬ್ಬಂದಿ ಆಕ್ರೋಶ

    ಕೊರೊನಾ ವಾರಿಯರ್ಸ್‍ಗೆ ಸಂಬಳ ಕೊರತೆ: ಸಚಿವರ ಎದುರೇ ಸಿಬ್ಬಂದಿ ಆಕ್ರೋಶ

    ರಾಯಚೂರು: ನಗರದ ರಿಮ್ಸ್ ಹಾಗೂ ಓಪೆಕ್ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ತಮ್ಮ ಅಳಲು ತೋಡಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಕುರಿತ ಸಭೆ ಹಾಗೂ ರಿಮ್ಸ್ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿದ್ದ ಸಚಿವ ಡಾ.ಸುಧಾಕರ್ ರನ್ನ ತಡೆದು ರಿಮ್ಸ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರು ಸಂಬಳ ನೀಡುವಂತೆ ಆಗ್ರಹಿಸಿದರು. ವೈದ್ಯಕೀಯ ವಿಜ್ಞಾನಗಳ ಭೋದಕ ಆಸ್ಪತ್ರೆ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಅಂತ ಆರೋಪಿಸಿದರು.

    ನಗರದ ಕೋವಿಡ್ ಆಸ್ಪತ್ರೆ ಓಪೆಕ್‍ನ ಸಿಬ್ಬಂದಿಗಳಿಗೂ ಸಂಬಳ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಪ್ರತೀ ಬಾರಿಯೂ ಸರ್ಕಾರದಿಂದ ಹಣ ಬಂದಿಲ್ಲ ಅಂತ ಕಾರಣ ಹೇಳಲಾಗುತ್ತಿದೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ಸಿಬ್ಬಂದಿ ಅಳಲು ತೋಡಿಕೊಂಡರು. ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಸಂಬಳ ನೀಡುವಂತೆ ಒತ್ತಾಯಿಸಿದರು. ಪ್ರತೀ ತಿಂಗಳು ನೀಡಬೇಕಾದ ಸಂಬಳವನ್ನ ವರ್ಷಕ್ಕೆ ಎರಡು ಮೂರು ಬಾರಿ ನೀಡಲಾಗುತ್ತೆ ಅಂತ ಆರೋಪಿಸಿದರು.

    ಕೇವಲ ಘೋಷಣೆ ಕೂಗಿದ್ರೆ ನಿಮಗೆ ಸಂಬಳ ಸಿಗುವುದಿಲ್ಲ. ಮನವಿ ಪತ್ರಗಳನ್ನು ನೀಡಿದರೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತೇನೆ ಎಂದ ಸಚಿವ ಡಾ.ಸುಧಾಕರ್ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರೆಗೆ ಸೂಚನೆ ನೀಡಿದರು.

  • ವೇತನವಿಲ್ಲದೆ ಕೆಎಸ್‌ಆರ್‌ಟಿಸಿ ನೌಕರರು ಕಂಗಾಲು

    ವೇತನವಿಲ್ಲದೆ ಕೆಎಸ್‌ಆರ್‌ಟಿಸಿ ನೌಕರರು ಕಂಗಾಲು

    ಬೆಂಗಳೂರು: ಲಾಕ್‍ಡೌನ್ ಎಫೆಕ್ಟ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ಈ ತಿಂಗಳ ವೇತನವನ್ನು ಇನ್ನೂ ನೌಕರರಿಗೆ ಪಾವತಿಸಿಲ್ಲ.

    ಸಾಮಾನ್ಯವಾಗಿ ತಿಂಗಳ 2ನೇ ದಿನಾಂಕದಂದೇ ಸಂಬಳ ನೌಕರರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು. ಆದರೆ ಆರನೇ ತಾರೀಖು ಮುಗಿದರೂ ಸಾರಿಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ನಾಳೆ ಭಾನುವಾರ ಬೇರೆ, ಸೋಮವಾರ ಕೂಡ ಆಗುತ್ತೋ ಇಲ್ವೋ ಅನ್ನೋ ಗ್ಯಾರಂಟಿ ಇಲ್ಲ. ಯಾಕಂದ್ರೆ ಈ ತಿಂಗಳ ಅರ್ಧ ಸಂಬಳ ನೀಡಿ ನೆರವಾಗುವಂತೆ ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಸಿಎಂ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ವೇತನ ಇಲ್ದೇ ಸಾರಿಗೆ ಸಿಬ್ಬಂದಿ ಪರದಾಡುತ್ತಿದ್ದಾರೆ.

    ಬಸ್‍ಗಳಲ್ಲಿ ಸಾಮಾಜಿಕ ಅಂತರ ಪಾಲಿಸಿದರೆ ಮೊದಲಿನಂತೆ ಆದಾಯ ಗಳಿಸುವುದು ಕಷ್ಟ. ಹೀಗಾಗಿ ಸಾಮಾಜಿಕ ಅಂತರ ನಿಯಮ ಕೈ ಬಿಡುವಂತೆ ಕೋರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಸಂಸ್ಥೆಗೆ 531 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೇ 11ರಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಬಸ್‍ಗಳು ಓಡಾಡುತ್ತಿದ್ದರೂ ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸಂಸ್ಥೆ ನಷ್ಟವನ್ನು ಎದುರಿಸುತ್ತಿದೆ.

  • ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?

    ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?

    ಬೆಂಗಳೂರು: ಕೋವಿಡ್ 19 ನಿಂದಾಗಿ ಶಾಸಕರ ಸಂಬಳಕ್ಕೂ ಈಗ ಸರ್ಕಾರ ಕತ್ತರಿ ಹಾಕಿದೆ. ಸಂಬಳ ಕಡಿತದ ಬಗ್ಗೆ ಅಧಿಕೃತವಾಗಿ ಇಂದು ಸ್ಪಷ್ಟೀಕರಣ ನೀಡಿದೆ.

    ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗೆ ಶೇ.30ರಷ್ಟು ಶಾಸಕರ ಸಂಬಳ ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತ ಮಾಡಲಾಗಿದೆ.

     

    ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಭೆಗೆ ಹಾಜರಾಗಲು ದಿನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ ಇವುಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಶೇ.30% ಕಡಿತ ಮಾಡಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಆದೇಶ ನೀಡಿದೆ.

    ಮುಖ್ಯಮಂತ್ರಿಗಳಿಗೆ ಸಂಬಳ ಎಷ್ಟಿದೆ?
    ಸಂಬಳ – 50 ಸಾವಿರ ರೂ.ಮಾಸಿಕ
    ಅತಿಥ್ಯ ಭತ್ಯೆ – 3 ಲಕ್ಷ ಸಾವಿರ ರೂ.
    ವಾಹನ ಭತ್ಯೆ – 1 ಸಾವಿರ ಲೀಟರ್
    ಮನೆ ಬಾಡಿಗೆ – 80 ಸಾವಿರ

    ಸಂಪುಟ ದರ್ಜೆ ಸಚಿವರು
    ಸಂಬಳ – 40 ಸಾವಿರ ರೂ.
    ಅತಿಥ್ಯ ಭತ್ಯೆ – 3 ಲಕ್ಷ ರೂ.
    ವಾಹನ ಭತ್ಯೆ – 1 ಸಾವಿರ ಲೀಟರ್
    ಮನೆ ಬಾಡಿಗೆ – 80 ಸಾವಿರ ರೂ.

    ಶಾಸಕರು
    ಸಂಬಳ – 25 ಸಾವಿರ ರೂ.
    ಕ್ಷೇತ್ರ ಪ್ರಯಾಣ ಭತ್ಯೆ – 40 ಸಾವಿರ ರೂ.
    ದೂರವಾಣಿ ವೆಚ್ಚ – 20 ಸಾವಿರ ರೂ.
    ಕ್ಷೇತ್ರ ಭತ್ಯೆ – 40 ಸಾವಿರ ರೂ.
    ಪ್ರಯಾಣ ಭತ್ಯೆ ಪ್ರತಿ ಕಿ.ಮೀ.25 ರೂ. ಹೆಚ್ಚಳ
    ಹೊರ ರಾಜ್ಯ ಭತ್ಯೆ – 2 ಸಾವಿರ ರೂ
    ಔಷಧಿ ಭತ್ಯೆ – 5 ಸಾವಿರ ರೂ.

  • ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

    ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

    – ಬ್ಯಾಂಕುಗಳಲ್ಲಿದೆ 14 ಸಾವಿರ ಕೋಟಿ ನಗದು
    – 8 ಸಾವಿರ ಕೆಜಿ ಚಿನ್ನ, ವಾರ್ಷಿಕ 750 ಕೋಟಿ ರೂ. ಬಡ್ಡಿ

    ಹೈದರಾಬಾದ್: ಕೋವಿಡ್ 19 ಲಾಕ್‍ಡೌನ್ ನಿಂದ ಸೃಷ್ಟಿಯಾಗಿರುವ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

    ಹೌದು. ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ದೇಗುಲದ ಬಾಗಿಲು ಮುಚ್ಚಿದ್ದು, ಜೂನ್ ತಿಂಗಳಿನಲ್ಲಿ ಬಾಗಿಲು ತೆರೆಯಲು ತೆರೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಜೂನ್ ತಿಂಗಳಿನಲ್ಲೂ ದೇವಾಲಯದ ಬಾಗಿಲು ತೆರೆಯದಿದ್ದರೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಕೆಲ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಟಿಟಿಡಿ ಮುಂದಾಗಿದೆ.

    ಚೆನ್ನೈ, ಮುಂಬೈ, ಸೇರಿದಂತೆ ಕೆಲ ಮಹಾನಗರಗಳಲ್ಲಿ ಭಕ್ತರು ಆಸ್ತಿ ನೀಡಿದ್ದು, ಆ ಸ್ಥಿರಾಸ್ತಿಗಳು ದಶಕಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಇವುಗಳ ಪೈಕಿ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಹಣ ತುಂಬಿಸಲು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಟಿಟಿಡಿಯಲ್ಲಿ ಖಾಯಂ ಮತ್ತು ಗುತ್ತಿಗೆ ರೂಪದಲ್ಲಿ ಒಟ್ಟು 22 ಸಾವಿರ ಸಿಬ್ಬಂದಿ ಇದ್ದು, ಇವರ ತಿಂಗಳ ವೇತನ ಪಾವತಿಗೆ 115 ಕೋಟಿ ರೂ. ಬೇಕಾಗುತ್ತದೆ. ಆದಾಯ ಸಮಸ್ಯೆಯಾದ ಹಿನ್ನೆಲೆಯಲ್ಲಿ 7 ಸಾವಿರ ರೂ. ಕಾಯಂ ಸಿಬ್ಬಂದಿಗೆ ಅರ್ಧ ಸಂಬಳ ಪಾವತಿಸಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ದೇವಾಲಯ ತೆರೆಯದಿದ್ದರೆ ಭಾರೀ ಕಷ್ಟವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮೇ 28ಕ್ಕೆ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಸ್ಥಿರಾಸ್ತಿ ಮಾರಾಟದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

    2020-21ನೇ ಸಾಲಿನಲ್ಲಿ ಹುಂಡಿ ಮೂಲಕ 1,350 ಕೋಟಿ ರೂ., ಲಡ್ಡು, ವಿಶೇಷ ದರ್ಶನ ಟಿಕೆಟ್ ಮೂಲಕ 900 ಕೋಟಿ ರೂ. ಸಂಗ್ರಹವಾಗಬಹುದು ಎಂದು ಟಿಟಿಡಿ ಅಂದಾಜಿಸಿತ್ತು. ಆದರೆ ಲಾಕ್‍ಡೌನ್ ನಿಂದಾಗಿ ದೇವಾಲ ಮುಚ್ಚಿದ್ದು, ಪ್ರತಿ ತಿಂಗಳು 115 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ.

    ವಿವಿಧ ಬ್ಯಾಂಕ್‍ಗಳಲ್ಲಿ 14 ಸಾವಿರ ಕೋಟಿ ನಗದು, ಮತ್ತು 8 ಸಾವಿರ ಕೆಜಿ ಚಿನ್ನವನ್ನು ಟಿಟಿಡಿ ಇಟ್ಟಿದ್ದು, ಇದರಿಂದ ಒಟ್ಟು ವರ್ಷಕ್ಕೆ 750 ಕೋಟಿ ರೂ. ಬಡ್ಡಿ ಬರುತ್ತದೆ. ಈ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.