Tag: salary

  • ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ಉಡುಪಿ: ನ್ಯಾಶನಲ್ ಹೆಲ್ತ್ ಮಷೀನ್ (ಎನ್‍ಎಚ್‍ಎಂ)ನ 24,000 ಸಿಬ್ಬಂದಿ ರಾಜ್ಯದಲ್ಲಿ ಇಂದು ಗಾಂಧಿಗಿರಿ ಮಾಡಿದ್ದಾರೆ. ರಜೆ ತೆಗೆದುಕೊಳ್ಳದೆ ಹಾಜರಿ ಹಾಕದೆ ಸಂಬಳ ತೆಗೆದುಕೊಳ್ಳದೆ ಸೇವೆ ಮಾಡುತ್ತಿದ್ದಾರೆ.

    ಆರೋಗ್ಯ ಇಲಾಖೆಯ ಎನ್‍ಹೆಚ್‍ಎಂನ ಗುತ್ತಿಗೆ ಆಧಾರದ ಸಿಬ್ಬಂದಿಗೆ ಏಪ್ರಿಲ್ 1 ರಂದು ರಜೆ ಕೊಟ್ಟು ತಮ್ಮ ಹುದ್ದೆಯನ್ನು ರಿನಿವಲ್ ಮಾಡುವ ಉದ್ದೇಶವನ್ನು ಎನ್‍ಎಚ್‍ಎಂ ಹೊಂದಿತ್ತು. ಆದರೆ ರಾಜ್ಯದ 25 ಸಾವಿರ, ಉಡುಪಿ ಜಿಲ್ಲೆಯ 450 ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ. ಇವತ್ತು ರಜೆ ತೆಗೆದುಕೊಳ್ಳದೆ ದಿನಪೂರ್ತಿ ಉಚಿತ ಸೇವೆ ಮಾಡುತ್ತಿದ್ದಾರೆ. ತಮ್ಮ ಹಲವಾರು ವರ್ಷದ ಬೇಡಿಕೆ ಈ ವರ್ಷವೂ ಈಡೇರಿಸಿಲ್ಲ ಎಂದು ಸರ್ಕಾರ ಮತ್ತು ಯೋಜನೆಯ ನಿರ್ದೇಶಕರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಉಚಿತ ಸೇವೆ ಮಾಡುತ್ತಿದ್ದಾರೆ.

    ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿ ಪ್ರತಿವರ್ಷ ಕಾಂಟ್ರ್ಯಾಕ್ಟ್ ಲೆಕ್ಕದಲ್ಲಿ ರಿನಿವಲ್ ಆಗುತ್ತಾ ಬರುತ್ತಾರೆ. ರಾಜ್ಯದಲ್ಲಿ ಸದ್ಯ ಮಹಾಮಾರಿ ಕೊರೊನಾದ ವಿಷಮ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಕಾನೂನು ನಿಯಮ ಎಂದು ರಜೆ ನೀಡಲು ಎನ್‍ಎಚ್‍ಎಂ ನಿರ್ಧಾರ ತೆಗೆದುಕೊಂಡಿತ್ತು. ಇದರ ವಿರುದ್ಧ ಸಾಕಷ್ಟು ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇಷ್ಟಾದರೂ ಇಲಾಖೆಯ ಅಧಿಕಾರಿಗಳು, ಸರ್ಕಾರ ತಮ್ಮ ಪಟ್ಟು ಸಡಿಲಿಸಿಲ್ಲ. ಇದೇ ಕಾರಣದಿಂದ ಉಡುಪಿ ಜಿಲ್ಲೆಯ ಸಿಬ್ಬಂದಿ ಗಾಂಧಿಗಿರಿ ಮಾಡಿದ್ದಾರೆ. ಸಂಬಳ ತೆಗೆದುಕೊಳ್ಳದೇ ರಜೆ ಮಾಡದೆ, ಹಾಜರಾತಿ ನಮೂದಿಸಿದೆ ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿದ್ದಾರೆ.

    ಆಶಾ ಕಾರ್ಯಕರ್ತೆಯರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಚೆಕ್ ಪೋಸ್ಟ್ ಹೀಗೆ ಎಲ್ಲ ಸ್ಥರದಲ್ಲಿ ಎನ್‍ಎಚ್‍ಎಂ ಸಿಬ್ಬಂದಿ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಬ್ಬಂದಿಯೊಬ್ಬರು ಮಾತನಾಡಿ, ಕೊರೊನಾ ಪ್ರಕರಣಗಳೆಲ್ಲ ಹತೋಟಿಗೆ ಬಂದ ಮೇಲೆಯಾದರೂ ನಮ್ಮ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೋಲ್ಕತಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಮೂರು ತಿಂಗಳ ಸಂಬಳ ಮತ್ತು ಬಿಸಿಸಿಐ ಪಿಂಚಣಿಯನ್ನು ದಾನ ಮಾಡಿದ್ದಾರೆ.

    ಲಕ್ಷ್ಮಿ ರತನ್ ಶುಕ್ಲಾ ಅವರು ಭಾರತದ ಮಾಜಿ ಆಟಗಾನಾಗಿದ್ದು, ಈಗ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟವಾಡಿದ್ದಾರೆ. ಹಾಗಾಗಿ ಈಗ ರಾಜ್ಯ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಧನಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಅವರು, ನಾವೆಲ್ಲರೂ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆ ನೀಡುವ ಸಮಯ ಬಂದಿದೆ. ನಾನು ಈಗಾಗಲೇ ನನ್ನ ಶಾಸಕ ಸ್ಥಾನದ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅಲ್ಲದೆ ನನಗೆ ಬಿಸಿಸಿಐನಿಂದ ಪಿಂಚಣಿ ಬರುತ್ತದೆ. ನಾನು ಬಿಸಿಸಿಐ ಪಿಂಚಣಿಯ ಮೂಲಕ ಬರುವ ಮೂರು ತಿಂಗಳ ಹಣವನ್ನು ಸಹ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಶುಕ್ಲಾ ಅವರು 1999ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ನಂತರ ಪಾದದ ಗಾಯದಿಂದಾಗಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಬೇಕಾಯಿತು. ಆದರೆ ಅವರು ದೇಶೀಯ ಕ್ರಿಕೆಟ್‍ನಲ್ಲಿ ಗೌರವಾನ್ವಿತ ಆಲ್‍ರೌಂಡರ್ ಆಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳ ಮತ್ತು ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. ಇದರ ಜೊತೆಗೆ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು.

    ಕೊರೊನಾ ವೈರಸ್ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು 851 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ 20 ಜನ ಸಾವನ್ನಪ್ಪಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಓರ್ವ ಇದರಿಂದ ಸಾವನ್ನಪ್ಪಿದ್ದಾನೆ. ವಿಶ್ವದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 24 ಸಾವಿರ ದಾಟಿದೆ.

  • ಕೊರೊನಾ ಎಮರ್ಜೆನ್ಸಿಗೆ ಮೂರು ತಿಂಗಳ ಸಂಬಳ ನೀಡಿದ ಯತ್ನಾಳ್

    ಕೊರೊನಾ ಎಮರ್ಜೆನ್ಸಿಗೆ ಮೂರು ತಿಂಗಳ ಸಂಬಳ ನೀಡಿದ ಯತ್ನಾಳ್

    ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಜನರ ಸಂಕಷ್ಟಕ್ಕೆ ಸಹಯ ಮಾಡಲು ರಾಜ್ಯ ಸರ್ಕಾರದ ಮನವಿ ಮಾಡಿದೆ. ಪ್ರಕೃತಿ ವಿಕೋಪ ನಿಧಿಗೆ ಧನ ಸಹಾಯ ಮಾಡಲು ಸೂಚಿಸಿದೆ. ಇದಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಂದಿಸಿದ್ದಾರೆ.

    ಕೊರೊನಾ ಎಮರ್ಜೆನ್ಸಿಗೆ ತಮ್ಮ ತಿಂಗಳ ವೇತನವನ್ನ ಸರ್ಕಾರಕ್ಕೆ ನೀಡಲು ಯತ್ನಾಳ್ ನಿರ್ಧರಿಸಿದ್ದಾರೆ. ತಮ್ಮ ಮೂರು ತಿಂಗಳ ವೇತನವನ್ನ ಪ್ರಕೃತಿ ವಿಕೋಪ ನಿಧಿಗೆ ಪಡೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ.

    ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯಕವಾಗಲಿ. ಕೊರೊನಾದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಸಮಯದಲ್ಲಿ ನಾವು ಆರ್ಥಿಕವಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಅದಕ್ಕೆ ನನ್ನ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪಡೆಯಬೇಕೆಂದು ಪತ್ರದಲ್ಲಿ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ. ಸಿಎಂಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್ ಹಂಚಿಕೊಂಡಿದ್ದಾರೆ.

  • ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಭುವನೇಶ್ವರ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಎಲ್ಲ ಸರ್ಕಾರಿ ವೈದ್ಯಕೀಯ ವೃತ್ತಿಪರರು ಭಾಗಿಯಾಗಿದ್ದಾರೆ. ಅವರಿಗೆ ಎಪ್ರಿಲ್, ಮೇ, ಜೂನ್, ಜುಲೈ ಸೇರಿ ಒಟ್ಟು ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.

    ದೇಶದಲ್ಲಿ 584 ಕೊರೊನಾ ಸೋಂಕು ಪತ್ತೆಯಾಗಿದ್ದು, ಒಡಿಸಾದಲ್ಲಿ ಇದುವರೆಗೂ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿರುವ ವೈದ್ಯರು, ವೃತ್ತಿಪರ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ವೈದ್ಯರು, ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಇದಲ್ಲದೇ ತಮ್ಮ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶಾಸಕರಿಗೂ ನೆರವಾಗುವಂತೆ ಮನವಿ ಮಾಡುತ್ತೇನೆ ಎಂದರು. ಜೊತೆಗೆ ಕೊರೊನಾ ಸಂಕಷ್ಟಕ್ಕೆ ರಾಜ್ಯದ ಜನರು ನೆರವಾಗಬೇಕಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಪಟ್ನಾಯಕ್ ಮನವಿ ಮಾಡಿದ್ದಾರೆ.

  • ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    – ಮಾನವೀಯತೆ ಮೆರೆದ ಭಜರಂಗ್ ಪೂನಿಯಾ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಇದುವರೆಗೆ ಭಾರತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಕ್ರೀಡಾಪಟುಗಳು, ನಟ-ನಟಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಭಾರತ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ.

    ಭಜರಂಗ್ ಪೂನಿಯಾ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ತಮ್ಮ 6 ತಿಂಗಳ ವೇತನನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. “ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಸ್ಥಾಪಿಸಿದ ಕೋವಿಡ್ -19 ರೋಗಿಗಳ ಪರಿಹಾರ ನಿಧಿಗೆ ನನ್ನ ಆರು ತಿಂಗಳ ವೇತನವನ್ನು ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ಭಜರಂಗ್ ರೈಲ್ವೆ ಇಲಾಖೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ “ಹರಿಯಾಣ ಕೊರೊನಾ ಪರಿಹಾರ ನಿಧಿಗೆ” ಕೊಡುಗೆ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    2019ರ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾ ಅವರ ಪ್ರಯತ್ನ ಶ್ಲಾಘನೀಯ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕ ಸೇವೆಗಳನ್ನು ಒದಗಿಸಲು ಹರಿಯಾಣ ಸರ್ಕಾರ ಸೋಮವಾರ ಸ್ವಯಂಪ್ರೇರಿತ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೋವಿಡ್-19 ಅನ್ನು ನಿರ್ಮಾಣ ಮಾಡಲು ”ಕೋವಿಡ್ – ಸಂಘರ್ಷ ಸೇನಾನಿ” ಎಂಬ ಕಾರ್ಯಕ್ರಮವನ್ನು ಸೋಮವಾರ ಪ್ರಾರಂಭಿಸಲಾಗಿದೆ.

    ಭಾರತದ ಮಾಜಿ ಆರಂಭಿಕ ಮತ್ತು ಬಿಜೆಪಿ ಶಾಸಕ ಗೌತಮ್ ಗಂಭೀರ್ ಅವರು ಕೂಡ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅವರ ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ(ಎಂಪಿಎಲ್‍ಎಡಿಎಸ್) ನಿಧಿಯಿಂದ 50 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಅಗತ್ಯ ಸಲಕರಣೆಗಳಿಗಾಗಿ ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.

  • ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    – ಅರ್ಧಂಬರ್ಧ ಸುಟ್ಟ ಮೃತದೇಹ ಕೆರೆಗೆ ಎಸೆದ

    ಬೆಂಗಳೂರು: ಸಂಬಳ ಹೆಚ್ಚು ಕೇಳಿದಕ್ಕೆ ಚಾಲಕನ ಮೇಲೆ ಮಾಲೀಕ ಹಾಗೂ ಆತನ ಸ್ನೇಹಿತ ಕಲ್ಲು ಎತ್ತಾಕಿ ಕೊಲೆಗೈದು, ಮೃತದೇಹ ಸುಟ್ಟು, ಅರ್ಧಂಬರ್ಧ ಸುಟ್ಟ ಮೃತದೇಹವನ್ನು ರಾಮ್‍ಪುರ ಕೆರೆಯಲ್ಲಿ ಎಸೆದ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಮಾರ್ಚ್ 10ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ಯಾಕರ್ಸ್ ಅಂಡ್ ಮೂವರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಚಿಂತಾಮಣಿ ನಿವಾಸಿ ಕೃಷ್ಣ ಹಾಗೂ ಹಲಸೂರು ನಿವಾಸಿ ಮಾಯಾಕೃಷ್ಣ ಎಂದು ಗುರುತಿಸಲಾಗಿದೆ. ಕೃಷ್ಣ ನಡೆಸುತ್ತಿದ್ದ ಕಂಪನಿಯನ್ನು ಚಾಲಕನಾಗಿದ್ದ ಶ್ರೀನಿವಾಸ್ ಪಾರ್ಸೆಲ್‌ಗಳನ್ನು ಗ್ರಾಹಕರ ಮನೆ ಬಾಗಲಿಗೆ ಡೆಲಿವರಿ ಮಾಡುತ್ತಿದ್ದನು.

    ಮಾಚ್ 10ರಂದು ಶ್ರೀನಿವಾಸ್ ಕೃಷ್ಣನ ಬಳಿ ತನಗೆ ಸಂಬಳ ಹೆಚ್ಚಿಗೆ ಮಾಡಿ ಎಂದು ಕೇಳಿದ್ದನು. ಈ ಬಗ್ಗೆ ಆತನ ಜೊತೆ ಕೂತು ಮಾತನಾಡಿ ಮಾಲೀಕ ನಿರ್ಧಾರ ತೆಗೆದುಕೊಳ್ಳುವ ಬದಲು ಚಾಲಕನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದು, ತನ್ನ ಸ್ನೇಹಿತ ಮಾಯಾಕೃಷ್ಣನ ಸಹಾಯ ಪಡೆದು ಚಾಲಕನನ್ನ ಕೊಲೆ ಮಾಡಲು ನಿರ್ಧರಿಸಿದನು.

    ಚಾಲಕ ಮಲಗಿದ್ದ ವೇಳೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೃಷ್ಣ ಹಾಗೂ ಆತನ ಗೆಳೆಯ ಕೊಲೆ ಮಾಡಿದರು. ಬಳಿಕ ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದರು. ಆ ನಂತರ ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅರ್ಧಂಬರ್ಧ ಸುಟ್ಟಿದ್ದ ಶವವನ್ನು ರಾಮ್‍ಪುರ ಕೆರೆಯಲ್ಲಿ ಎಸೆದು ಹೋದರು.

    ಆದರೆ ಸ್ಥಳೀಯರು ಕೆರೆ ಬಳಿ ಓಡಾಡುತ್ತಿದ್ದಾಗ ದುರ್ನಾತ ಬರುತ್ತಿದ್ದದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.

    ಪ್ರಮುಖ ಆರೋಪಿ ಕೃಷ್ಣನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ವಿಚಾರಣೆ ವೇಳೆ ಕೊಲೆ ಮಾಡಲು ಕಾರಣವೇನು? ಹೇಗೆ ಕೊಲೆ ಮಾಡಲಾಯ್ತು ಎಂಬ ವಿಚಾರವನ್ನು ಆರೋಪಿ ಬಾಯಿಬಿಟ್ಟಿದ್ದಾನೆ.

  • ಪೊಲೀಸರಿಗೆ ವೇತನ ಕೊಡೋಕೆ ಬೊಕ್ಕಸದಲ್ಲಿ ದುಡ್ಡಿಲ್ವೇ..?

    ಪೊಲೀಸರಿಗೆ ವೇತನ ಕೊಡೋಕೆ ಬೊಕ್ಕಸದಲ್ಲಿ ದುಡ್ಡಿಲ್ವೇ..?

    ಬೆಂಗಳೂರು: ಪೊಲೀಸರಿಗೆ ವೇತನವನ್ನು ಸಕಾಲಕ್ಕೆ ನೀಡಲು ಸಾಧ್ಯವಾಗದಷ್ಟು ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆದಂತೆ ಕಾಣುತ್ತಿದೆ. ಯಾಕಂದ್ರೆ ರಾಜ್ಯದ ಅರ್ಧದಷ್ಟು ಪೊಲೀಸರಿಗೆ ಇನ್ನೂ ಫೆಬ್ರವರಿ ತಿಂಗಳ ಸಂಬಳ ಆಗಿಲ್ಲ.

    ಬೆಂಗಳೂರಿನಲ್ಲಿ ಖಜಾನೆ ಒಂದರ ಅಡಿ ಬರುವ ಪೊಲೀಸರಲ್ಲಿ ಬಹುತೇಕರ ಖಾತೆಗೆ ವೇತನ ಬಂದಿದೆ. ಆದರೆ ಖಜಾನೆ ಎರಡರ ಅಡಿ ಬರುವ ಪೊಲೀಸರಿಗೆ ಇನ್ನೂ ಸಂಬಳವೇ ಆಗಿಲ್ಲ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ವೇತನ ವಿಳಂಬ ಆಗುವ ಸಾಧ್ಯತೆ ಇದೆ. ಈ ವಿಷಯವನ್ನು ಎಲ್ಲಾ ಪೊಲೀಸರಿಗೆ ತಿಳಿಸಬೇಕೆಂದು ಸೂಚಿಸಿ ಹುಬ್ಬಳ್ಳಿ ಧಾರವಾಡದ ಪೊಲೀಸ್ ಆಯುಕ್ತ ಆರ್ ದಿಲೀಪ್, ತಮ್ಮ ಅಧೀನ ಅಧಿಕಾರಿಗಳಿಗೆ ಫ್ಯಾಕ್ಸ್ ಸಂದೇಶ ರವಾನಿಸಿದ್ದಾರೆ.

    ಡಿಸಿಎಂ ಅಶ್ವಥ್ ನಾರಾಯಣ್ ಅವರು ಮಾತ್ರ, ಸರ್ಕಾರಕ್ಕೆ ಅಂತಹ ಪರಿಸ್ಥಿತಿ ಏನು ಬಂದಿಲ್ಲ ಎಂದಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ, ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಆದರೆ ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎಂದು ಹೇಳಿದ್ದಾರೆ.

  • ಮಗ ಮನೆ ಬಿಟ್ಟು ಹೊರಗಡೆ ಮಜಾ ಮಾಡುತ್ತಾನೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದ ತಂದೆ

    ಮಗ ಮನೆ ಬಿಟ್ಟು ಹೊರಗಡೆ ಮಜಾ ಮಾಡುತ್ತಾನೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದ ತಂದೆ

    – ನ್ಯಾಯಮಂಡಳಿ ಖಡಕ್ ಆದೇಶಕ್ಕೆ ತಲೆ ಬಾಗಿದ ಮಗ

    ರಾಯಚೂರು: ದಿನಗೂಲಿ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೂ ಹಿರಿಯ ಮಗ ಪೋಷಕರ ಜೀವನಕ್ಕೆ ಆಧಾರವಾಗದೆ ಮನೆ ಬಿಟ್ಟು ಬೇರೆಡೆ ಐಶಾರಾಮಿ ಜೀವನ ನಡೆಸುತ್ತಿದ್ದಕ್ಕೆ ತಂದೆ ಮಗನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿ ಗೆದ್ದಿದ್ದಾನೆ.

    ನಗರದ ನಿವಾಸಿ ಬೂದೆಪ್ಪ (ಹೆಸರು ಬದಲಾಯಿಸಲಾಗಿದೆ) ಪ್ರತಿ ದಿನ ಕೂಲಿ ಕೆಲಸ ಮಾಡಿ ಐದು ಜನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ನಾಲ್ಕು ಜನ ಮಕ್ಕಳು ಇನ್ನೂ ಓದುತ್ತಿದ್ದಾರೆ. ಹಿರಿಯ ಮಗ ವರಪ್ರಸಾದ್ (ಹೆಸರು ಬದಲಾಯಿಸಲಾಗಿದೆ) ಓದು ಮುಗಿಸಿ ಮೊಬೈಲ್ ಕಂಪೆನಿಯೊಂದರಲ್ಲಿ ನೆಟ್‍ವರ್ಕ್ ಪ್ಲಾನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ 43 ಸಾವಿರ ರೂ. ಸಂಬಳ ಬರುತ್ತಿದ್ದು ಮನೆಗೆ ನಯಾಪೈಸೆ ಕೊಡುತ್ತಿರಲಿಲ್ಲ.

    ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಭವಾದ ಮೇಲೆ ಹಿರಿಯ ಮಗ ಮನೆಗೆ ಸರಿಯಾಗಿ ಬಾರದೇ ಹೋಟೆಲ್‍ನಲ್ಲಿಯೇ ಊಟ ಮಾಡಿಕೊಂಡು ಊರು ಊರು ಅಲೆಯುತ್ತಾ ಮನೆಗೆ ಬರುವುದನ್ನೆ ಕಡಿಮೆ ಮಾಡಿದ್ದಾನೆ. ಇದರಿಂದ ಮನೆಯ ಪರಿಸ್ಥಿತಿ ಕಷ್ಟಕರವಾಗಿದ್ದು ತಂದೆ-ತಾಯಿಗೆ ಮನೆ ನಡೆಸುವುದು ಕಷ್ಟವಾಗಿದೆ. ಇದರಿಂದ ಬೇಸತ್ತ ತಂದೆ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದಾರೆ.

    ವಾದ-ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ್ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ಮಾಡಿದ್ದಾರೆ.

    ಆದೇಶದಲ್ಲೇನಿದೆ?
    ಪ್ರತಿ ತಿಂಗಳು 10ರೊಳಗೆ ಆರ್‌ಟಿಜಿಎಸ್‌ ಮೂಲಕ 20 ಸಾವಿರ ರೂ. ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ತಿಂಗಳಿಗೊಮ್ಮೆ ತಂದೆ-ತಾಯಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಬೇಕು. ಭಾನುವಾರ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು ಎಂದು ಆದೇಶ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತಂದೆ ಹಾಗೂ ಮಗ ಒಪ್ಪಿದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.

  • ಅರಣ್ಯಾಧಿಕಾರಿ ದೌರ್ಜನ್ಯಕ್ಕೆ ಬೇಸತ್ತು ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಅರಣ್ಯಾಧಿಕಾರಿ ದೌರ್ಜನ್ಯಕ್ಕೆ ಬೇಸತ್ತು ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    – ವೇತನ ತಾರತಮ್ಯ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ದೌರ್ಜನ್ಯ

    ಚಿತ್ರದುರ್ಗ: ಅರಣ್ಯ ಇಲಾಖೆ ಅಧಿಕಾರಿಯ ದೌರ್ಜನ್ಯದಿಂದ ಮನನೊಂದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

    ಅರಣ್ಯ ಇಲಾಖೆ ಕಚೇರಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕಸಗೂಡಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗಂಡ ಬಿಟ್ಟು ನಿರ್ಗತಿಕಳಾದ ಲಕ್ಷ್ಮಿ ಅವರಿಗೆ ಒಬ್ಬಳು ಮಗಳಿದ್ದು, ಆಕೆಯ ವಿದ್ಯಾಭ್ಯಾಸ ಹಾಗೂ ಜೀವನೋಪಾಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ಚಿತ್ರದುರ್ಗದ ಆರ್.ಎಫ್.ಓ ಸಂದೀಪ್‍ನಾಯಕ ಅವರು ಲಕ್ಷ್ಮಿ ಅವರಿಗೆ 9,000 ರೂ. ಬದಲಾಗಿ 7,000 ರೂ. ನೀಡುತ್ತಿದ್ದರು. ಆದರೂ ಕೊಟ್ಟಷ್ಟು ಕೊಡಲಿ ಅಂತ ಸಹನೆಯಿಂದ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಅವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡ ಸಂದೀಪ್ ನಾಯಕ ವೇತನವನ್ನು ದಿಢೀರ್ ಆರು ಸಾವಿರ ರೂ.ಗೆ ಇಳಿಸಿದ್ದರು.

    ವೇತನವನ್ನು ದಿಢೀರ್ ಅಂತಾ ಇಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂದೀಪ್ ಅವರು ಜನವರಿ ತಿಂಗಳಿಂದಲೇ ಲಕ್ಷ್ಮಿ ಅವರ ಮೇಲೆ ದೌರ್ಜನ್ಯ ಎಸಗಿದ್ದರು. ಅಷ್ಟೇ ಅಲ್ಲದೆ ಕೆಲಸದಿಂದಲೇ ತೆಗೆದು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

    ಅರಣ್ಯಾ ಇಲಾಖೆ ಅಧಿಕಾರಿ ದೌರ್ಜನುದಿಂದ ಮನನೊಂದ ಲಕ್ಷ್ಮಿ, ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಬಳಿ ಹೋಗಿ ಅಳಲನ್ನು ತೋಡಿಕೊಂಡಿದ್ದರು. ಆದರೂ ಸಹ ಅಲ್ಲಿಯೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರದುರ್ಗ ಡಿಸಿ ವಿನೋತ್ ಪ್ರಿಯಾ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಜಿಲ್ಲಾಧಿಕಾರಿ ಇವರ ಕೈಗೆ ಸಿಗಲಾರದೇ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಂಗಾಲಾದ ಮಹಿಳೆಯು ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಡಿಸಿ ಕಚೇರಿ ಸಿಬ್ಬಂದಿ ಲಕ್ಷ್ಮಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಕಳ್ಳತನಕ್ಕೆ ಸಂಬಳ ನೀಡುತ್ತಿದ್ದವನಿಗೆ ಬಲೆ ಬೀಸಿದ ಪೊಲೀಸ್- ಇಬ್ಬರು ಅರೆಸ್ಟ್

    ಕಳ್ಳತನಕ್ಕೆ ಸಂಬಳ ನೀಡುತ್ತಿದ್ದವನಿಗೆ ಬಲೆ ಬೀಸಿದ ಪೊಲೀಸ್- ಇಬ್ಬರು ಅರೆಸ್ಟ್

    ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿರುವ ಕಳವು ಪ್ರಕರಣಗಳನ್ನು ಭೇದಿಸಲು ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ.

    ಜಿಲ್ಲೆಯ ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಸಾಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ನಡೆದಿದ್ದವು. ಈ ಕಳ್ಳರ ಗ್ಯಾಂಗ್ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸುಲಭವಾಗಿ ಹಣವನ್ನು ದೋಚುತ್ತಿತ್ತು. ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ತಮಿಳುನಾಡಿನ ತಿರುಚನಾಪಳ್ಳಿಯ ಕಾರ್ತಿಕ್ ಹಾಗೂ ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಿದ ಬಳಿಕ ಅಂತರ ರಾಜ್ಯ ಕಳ್ಳರ ಕೈವಾಡವಿದೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    ಈ ಕಳ್ಳರ ತಂಡದ ನಾಯಕ ಆಂಧ್ರ ಪ್ರದೇಶದ ಮೂಲದವನಾಗಿದ್ದು, ಯುವಕರನ್ನು ಕಳ್ಳತನ ಪ್ರಕರಣಕ್ಕೆ ನೇಮಿಸಿಕೊಂಡು ಅವರಿಗೆ ಸಂಬಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕಳ್ಳರ ತಂಡ ಕಳವು ಮಾಡಿದ ಮಾಲನ್ನು ತಾನೇ ಖರೀದಿಸುತ್ತಿದ್ದ ಎನ್ನಲಾಗಿದೆ.

    ಮಲೆನಾಡಿನ ಭಾಗದಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಪೊಲೀಸರ ವಿರುದ್ಧ ಅಸಮಾಧಾನ ಹೆಚ್ಚಾಗಿತ್ತು. ಅಲ್ಲದೇ ಎಷ್ಟೇ ಪ್ರಯತ್ನಪಟ್ಟರೂ ಪೊಲೀಸರಿಗೆ ಆರೋಪಿಗಳ ಸುಳಿವು ಸಹ ಸಿಗದೆ ಇಕ್ಕಟ್ಟಿಗೆ ಸಿಲುಕಿದ್ದರು. ಸತತ ಪ್ರಯತ್ನದ ಫಲವಾಗಿ ಪೊಲೀಸರು ಕೊನೆಗೂ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಳ್ಳರ ಗುಂಪಿನ ಲೀಡರನ್ನು ಬಂಧಿಸಲು ಕಾರ್ಯೋನ್ಮುಖವಾಗಿದ್ದು, ಆತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.