Tag: salary

  • ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ನವದೆಹಲಿ: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ನೇರ ಮಾತುಗಳ ಮೂಲಕವೇ ಅವರು ಚಿರಪರಿಚಿತರಾಗಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ಆರ್ಥಿಕತೆಯೇ ಬುಡಮೇಲಾಗಿದ್ದು, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಕಂಪನಿಗಳಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ. ಇನ್ನು ಸಿನಿಮಾ ರಂಗದ ಸಂಬಳದ ಕುರಿತು ಸಹ ಚರ್ಚೆ ನಡೆಯುತ್ತಿದ್ದು, ಈ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ತಾಪ್ಸಿ ಬಾಲಿವುಡ್‍ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, ತಮ್ಮ ವಿಶಿಷ್ಠ ಸಿನಿಮಾಗಳ ಮೂಲಕವೇ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ತುಂಬಾ ವಿಭಿನ್ನ, ವಿಶೇಷ ಸಿನಿಮಾಗಳನ್ನು ಮಾತ್ರ ತಾಪ್ಸಿ ಒಪ್ಪಿಕೊಳ್ಳುತ್ತಾರೆ. ಬದ್ಲಾ, ಗೇಮ್ ಓವರ್, ಮಿಷನ್ ಮಂಗಳ್, ಸಾಂದ್ ಕಿ ಆಂಕ್ ಹಾಗೂ ತಪ್ಪಡ್ ನಂತರ ವಿಶಿಷ್ಠ ಸಿನಿಮಾಗಳಲ್ಲಿ ತಾಪ್ಸಿ ಪಾತ್ರ ನಿಭಾಯಿಸಿದ್ದಾರೆ. ತಪ್ಪಡ್ ಸಿನಿಮಾ ಮೂಲಕ ಮಹಿಳೆಯರ ಮೇಲಿನ ಶೋಷಣೆ ಕುರಿತು ಬೆಳಕು ಚೆಲ್ಲಿದ್ದಾರೆ.

    ಹೀಗಿರುವಾಗಲೇ ಸಿನಿಮಾ ತಾರೆಯರ ಸಂಬಳದ ಕುರಿತ ಪ್ರಶ್ನೆಗೂ ಉತ್ತರಿಸಿರುವ ಅವರು, ಇಂತಹ ಸಂದರ್ಭದಲ್ಲಿ ನಾನು ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಸಂಬಳ ಸಿಗುತ್ತಿಲ್ಲ. ಮುಂದೆ ಸಂಬಳ ಕಟ್ ಮಾಡುವುದಾದರೆ ಮಾಡಲಿ. ನಾನು ಅದಕ್ಕೆ ಸಿದ್ಧಳಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವರು ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಈ ಕುರಿತು ಹಲವು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಹ ಉತ್ತರಿಸಿರುವ ತಾಪ್ಸಿ, ಅವರು ಸಿಟ್ಟಾಗಿರುವುದರಲ್ಲಿ ಅರ್ಥವಿದೆ. ನಿರ್ಮಾಪಕರು ಸಿಟ್ಟಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಿನಿಮಾ ಬಿಡುಗಡೆಗೆ ಆತರ ಪಡಬಾರದು, ಸ್ವಲ್ಪ ಕಾಯಬೇಕು ಎಂದಿದ್ದಾರೆ. ಅಲ್ಲದೆ ದೇಶದಲ್ಲಿ ಚಿತ್ರಮಂದಿರಗಳು ನಶಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

    ತಾಪ್ಸಿ ಪನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹಸೀನ್ ದಿಲ್ರುಬಾ, ಲೂಪ್ ಲಪೇಟಾ, ಜನ ಗಣ ಮನ, ಶಹಬ್ಬಾಷ್ ಮಿತು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

  • ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಬೆಂಗಳೂರು: ಕೊರೊನಾ ಸೃಷ್ಟಿಸಿದ ಅವಾಂತರಗಳಿಂದ ಒಂದೆಡೆ ಜನಸಾಮಾನ್ಯರು ಕೆಲಸವಿಲ್ಲದೇ ಪರದಾಡುತ್ತಿದ್ದರೆ, ಮತ್ತೊಂದೆಡೆ ದುಡಿದ ಕೆಲಸಕ್ಕೂ ಸಂಬಳ ಸಿಗದೇ ಕೆಲ ಜನ ಒದ್ದಾಡುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಸೆಕ್ಯೂರಿಟಿ ಗಾರ್ಡ್. ಖಾಸಗಿ ಕಾಲೇಜೊಂದು ಸೆಕ್ಯೂರಿಟಿ ಗಾರ್ಡ್ ಗಳಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ.

    ಹೌದು. ಕೊರೊನಾದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಲಾಕ್ ಡೌನ್ ಆದ್ರೂ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಎಂಎಸ್ ಪಾಳ್ಯದ ಸಂಭ್ರಮ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೊನಾ ನೆಪವೊಡ್ಡಿ ಮೂರು ತಿಂಗಳ ಸಂಬಳವನ್ನೇ ಹಾಕಿಲ್ಲ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳ ಸಂಬಳವನ್ನು ಒಬ್ಬರಿಗೆ 10 ಸಾವಿರದಂತೆ ನೀಡಿಲ್ಲವೆಂದು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪ್ರಶ್ನಿಸಲು ಹೋದ ಪಬ್ಲಿಕ್ ಟಿವಿ ವರದಿಗಾರರಿಗೆ ಕಾಲೇಜಿನ ಪ್ರಿನ್ಸಿಪಾಲ್, ಯಾವುದಕ್ಕೂ ಉತ್ತರ ಕೊಡದೇ ಮೊಂಡುತನ ಪ್ರದರ್ಶಿಸಿದ್ದಾರೆ. ನಮಗೆನೂ ಗೊತ್ತಿಲ್ಲ, ಮ್ಯಾನೆಜ್ಮೆಂಟ್, ಏಜೆನ್ಸಿಯವ್ರನ್ನು ಕೇಳಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿದ ಖಾಸಗಿ ಏಜೆನ್ಸಿ, ಕಾಲೇಜು ಮ್ಯಾನೆಜ್ಮೆಂಟ್ ಕೊಟ್ಟಿಲ್ಲ ನಾವು ಸಂಬಂಳ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದುಡಿದ ಬಡ ಜೀವಗಳು ಸಂಬಳವಿಲ್ಲದೇ ಕಷ್ಟಪಡುತ್ತಿವೆ. ಪ್ರತಿಷ್ಠಿತ ಕಾಲೇಜಿಗೆ ತಿಂಗಳಿಗೆ 10 ಸಾವಿರ ಕೊಡೋದು ಭಾರವಾಯಿತೇ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಚಿಕ್ಕಬಳ್ಳಾಪುರ: ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಬಗ್ಗೆ ಸಭೆ ನಡೆಸಿ ಮಾತನಾಡುತ್ತಿದ್ದ ಸಚಿವವರು, ಸಭೆ ನಡುವೆ ಕೊರೊನಾದಿಂದ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ನಾವು ಜನರನ್ನು ಮನೆಯಲ್ಲಿರುವಂತೆ ಮನವಿ ಮಾಡುತ್ತೇವೆ. ಅಧಿಕಾರಿಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತೇವೆ. ಮತ್ತೊದೆಡೆ ಹಣಕಾಸಿನ ಸಮಸ್ಯೆ ಇದೆ. ಯಾವುದೇ ಹಳ್ಳಿಗಳಿಗೂ ಹೋದರೂ ದಾನ ಧರ್ಮ ಮಾಡುವವರ ಸಂಖ್ಯೆ ಬಹಳ ಇದೆ. ನಮ್ಮ ಸಂಸ್ಕೃತಿಯೇ ನಮ್ಮನ್ನ ಉಳಿಸುತ್ತಿದೆ. ಅಕ್ಕಿಯನ್ನು ಇಲ್ಲ ಅಂತಿದ್ದವರು ಈಗ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಬಡವರಿಗೆಲ್ಲರಿಗೂ ಸರ್ಕಾರ ಸ್ಪಂದಿಸುತ್ತಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಗಳ ಹಣ ಸೇರಿದಂತೆ ಕೆಲ ಯೋಜನೆಗಳ ಹಣ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ. ಹಲವು ಯೋಜನೆಗಳಿಗೆ ಸಕಾಲಕ್ಕೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಹಣ ಇದ್ದಿದ್ದರೇ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಿಕೊಡಿಸುತ್ತಿದೆ. ಆದರೆ ಈಗ ಆ ರೀತಿ ಮಾಡಲು ಆಗುತ್ತಿಲ್ಲ. ಆದರೂ ಕೇಂದ್ರ ಸರ್ಕಾರದಿಂದ ಈ ಬಾರಿ ಒಂದೇ ಕಂತಿನಲ್ಲಿ ಮೊದಲ ಬಾರಿಗೆ 1,861 ಕೋಟಿ ನರೇಗಾ ಹಣ ಬಿಡುಗಡೆಯಾಗಿದೆ. ಹೀಗಾಗಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಇನ್ನೂ ಇಲ್ಲ ಅಂದಾಗಲೂ ನಿಮಗೆ ಹೇಳಬೇಕಲ್ವಾ ಎಂದು ಹೇಳುತ್ತಿರುವುದಾಗಿ ತಿಳಿಸಿದರು. ನಂತರ ಇದೇ ಮಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಇರೋದು ನಿಜವಾದ್ರೂ, ಸರ್ಕಾರ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    -ಹೊರಗುತ್ತಿಗೆ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಸ್ವಾಗತ
    -ಈ ರೀತಿ ತಾರತಮ್ಯ ನೀತಿ ಏಕೆ?

    ಶಿವಮೊಗ್ಗ : ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಶ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಕೇವಲ ಎಂಬಿಬಿಎಸ್ ವೈದ್ಯರ ವೇತನವನ್ನು ಹೆಚ್ಚಳ ಮಾಡಿದೆ, ಅದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಇವರಷ್ಟೇ ಕೆಲಸ ನಿರ್ವಹಿಸುವ ಆಯುಷ್ ವೈದ್ಯರಿಗೆ, ಸ್ಟಾಫ್ ನರ್ಸ್ ಗಳಿಗೆ ಮಾತ್ರ ಹೆಚ್ಚಳ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಸರ್ಕಾರವೇ ಈ ರೀತಿ ತಾರತಮ್ಯ ಮಾಡಿದರೇ ಇವರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಎಂಎಲ್ ಸಿ ಆಯನೂರು ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡಿದಂತೆ ಆಯುಷ್ ವೈದ್ಯರು ಹಾಗೂ ಸ್ಟಾಪ್ ನರ್ಸ್ ಗಳ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ.

  • ಕೋವಿಡ್ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡಿದ ಕಂಡಕ್ಟರ್

    ಕೋವಿಡ್ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡಿದ ಕಂಡಕ್ಟರ್

    ಧಾರವಾಡ: ಕೋವಿಡ್-19 ಪರಿಹಾರ ನಿಧಿಗೆ ಜಿಲ್ಲೆಯ ಕಂಡಕ್ಟರ್ ಒಬ್ಬರು ತಮ್ಮ ಒಂದು ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ.

    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸವರಾಜ ನೀಲಪ್ಪ ಗಾಣಿಗೇರ ಅವರು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ. ಬಸವರಾಜ ಅವರು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ನಿವಾಸಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಸಾರಿಗೆ ಸಂಸ್ಥೆಯ ಕಂಡಕ್ಟರ್ ಬಸವರಾಜ ಅವರು ಸ್ವಯಂ ಪ್ರೇರಣೆಯಿಂದ ತಮ್ಮ ಒಂದು ತಿಂಗಳ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿರುವುದು ಸಮಾಜಕ್ಕೆ ಮಾದರಿಯಾದ ಕಾರ್ಯವಾಗಿದೆ. ಜಿಲ್ಲಾಡಳಿತ ಈ ಕಾರ್ಯವನ್ನು ಪ್ರಶಂಸಿಸುತ್ತದೆ ಎಂದರು.

    ಈ ವೇಳೆ ವಾ.ಕ.ರ.ಸಾ.ಸಂ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್, ಬಸವರಾಜ ಅವಾರಿ, ಎಂ.ಎಸ್.ರೋಣದ, ವೆಂಕಟೇಶ್ ಹರ್ತಿ, ಡಾ.ಪಿ.ವಿ.ಸವದಿ ಇದ್ದರು.

  • ಕೊರೊನಾ ವಿರುದ್ಧದ ಹೋರಾಟ – ರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷ ವೇತನ ಕಡಿತ

    ಕೊರೊನಾ ವಿರುದ್ಧದ ಹೋರಾಟ – ರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷ ವೇತನ ಕಡಿತ

    ನವದೆಹಲಿ: ಕೊರೊನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷದ ವೇತನ ಕಡಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸಂಸದರು ಮತ್ತು ಕೇಂದ್ರ ಸಚಿವರ ವೇತನವನ್ನು ಒಂದು ವರ್ಷದಲ್ಲಿ ಶೇ.30ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‍ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್‍ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದಾರೆ.

    ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. 1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದು ಏಪ್ರಿಲ್ 1ರಿಂದ ಒಂದು ವರ್ಷದವರೆಗೆ ಜಾರಿಗೆ ಬರಲಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಹಣಕ್ಕಿಂತ ಹೆಚ್ಚಾಗಿ, ಸರಿಯಾದ ಸಂದೇಶವನ್ನು ಕಳುಹಿಸುವುದು ಮಹತ್ವವಾಗಿದೆ. ಸಂಸದರು ಮತ್ತು ಇತರ ಗಣ್ಯರ ವೇತನವನ್ನು ಕಾನೂನಿನಿಂದ ನಿರ್ಧರಿಸುವುದರಿಂದ ಸುಗ್ರೀವಾಜ್ಞೆ ಅಗತ್ಯವಾಗಿದೆ ಎಂದರು.

    ಕೊರೊನಾ ವಿರುದ್ಧದ ಹೋರಾಟಕ್ಕೆ ಸುದೀರ್ಘ ಪ್ರಯಾಣದ ತಯಾರಿ ನಡೆಸುವಂತೆ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದರು. ಇದಾದ ಕೆಲ ಗಂಟೆಯಲ್ಲಿ ಈ ನಿರ್ಧಾರವನ್ನು ಕ್ಯಾಬಿನೆಟ್‍ನಲ್ಲಿ ಕೈಗೊಂಡು ಸುದೀರ್ಘ ಹೋರಾಟಕ್ಕೆ ಸಿದ್ಧತೆಯನ್ನು ಸ್ಪಷ್ಟಪಡಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ರಾಜ್ಯ ಸರ್ಕಾರಗಳು ಈಗಾಗಲೇ ವೇತನ ಕಡಿತ ಮತ್ತು ಇತರ ಕ್ರಮಗಳನ್ನು ಕೈಗೊಂದಿವೆ. ರಾಜ್ಯ ವಿಪತ್ತು ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಕೇರಳ ಸರ್ಕಾರವು ಶಾಸಕರು, ಸಚಿವರ ಹಾಗೂ ಅಧಿಕಾರಿಗಳ ಒಂದು ತಿಂಗಳ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಕೋವಿಡ್-19 ಬಿಕ್ಕಟ್ಟಿನ ವಿರುದ್ಧ ಹೋರಾಡಲು ರಾಜ್ಯಕ್ಕೆ ಸಹಾಯ ಮಾಡಲು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ವರ್ಷದ ಸಂಬಳವನ್ನು ಬಿಟ್ಟುಕೊಟ್ಟಿದ್ದಾರೆ.

    ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳು ತಮ್ಮ ಸರ್ಕಾರಿ ನೌಕರರ ಶ್ರೇಣಿಯನ್ನು ಅವಲಂಬಿಸಿ ವೇತನವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

  • ಏಪ್ರಿಲ್ 14ರ ತನಕ ಮದ್ಯ ಇಲ್ಲ, ಕೊಡಲ್ಲ : ಸಿಎಂ

    ಏಪ್ರಿಲ್ 14ರ ತನಕ ಮದ್ಯ ಇಲ್ಲ, ಕೊಡಲ್ಲ : ಸಿಎಂ

    ಬೆಂಗಳೂರು: ಏಪ್ರಿಲ್ 14ರ ತನಕ ಮದ್ಯ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಖಡಕ್ ಆಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಏ.14ರ ವರಗೆ ಮದ್ಯದದಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. 14ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮದ್ಯದಂಗಡಿ ತೆರೆಯಬೇಕೋ ಬೇಡ್ವೋ ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ಹಿಂದೂ ಮುಸ್ಲಿಂ ಎಲ್ಲರಲ್ಲೂ ಒಂದೇ ಭಾವನೆ ಇದೆ. ಯಾರ ಬಗ್ಗೆಯೂ ಯಾರೂ ಮಾತಾಡಬಾರದು. ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು ಅಪರಾಧವಲ್ಲ. ಮುಸ್ಲಿಂ ನಾಯಕರ ಜತೆ ಸಭೆ ನಡೆಸಿದ್ದೇನೆ ಎಂದು ಈ ವೇಳೆ ಹೇಳಿದರು.

    ಕಟ್ಟಿಂಗ್ ಶಾಪ್ ನವರು, ಆಟೋ ಡ್ರೈವರ್, ಮನೆ ಕೆಲಸದವರು ಪಡಿತರ ವ್ಯವಸ್ಥೆಯಲ್ಲಿ ಬರುತ್ತಾರೆ. ಗೋಧಿ ದಾಸ್ತಾನು ಸ್ವಲ್ಪ ಸಮಸ್ಯೆ ಆಗಿತ್ತು. ಈಗ ಖರೀದಿ ಮಾಡಿದ್ದೇವೆ. ಸರ್ಕಾರೇತರ ಸಂಸ್ಥೆಯ ಮೂಲಕ 50 ಸಾವಿರ ಊಟವನ್ನು ಹಂಚುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ಊಟವನ್ನು ಪ್ರಮುಖ ರಾಜಕೀಯ ಪಕ್ಷದ ಮುಖಂಡರೇ ಚುನಾವಣೆಗೆ ಹಂಚುತ್ತಿದ್ದರು. ಹಾಗಾಗಿ ಇಂದಿರಾ ಕ್ಯಾಂಟೀನ್ ಊಟ ದುರುಪಯೋಗಕ್ಕಾಗಿ ಹಣ ನಿಗದಿ ಮಾಡಿದ್ದು ಹೊರತು ಹಣ ಉಳಿಸಲು ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ – ‘ನಿರ್ಧಾರ’ದ ಬಗ್ಗೆ ಸಿಎಂ ಮಾತು

    ನರ್ಸ್, ಡಾಕ್ಟರ್ ಚಿಂತೆ ಮಾಡುವುದು ಬೇಡ. ಅವರ ಏನೇ ದೂರುಗಳಿದ್ದರೂ ಬಗೆಹರಿಸುತ್ತೇವೆ, ಸರ್ಕಾರ ಅವರ ಜೊತೆ ಇರುತ್ತದೆ ಎಂದ ಅವರು ತರಕಾರಿ, ಹಣ್ಣು ಪಡಿತರ ವ್ಯವಸ್ಥೆಯಲ್ಲಿ ಕೊಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅದು ಕಷ್ಟ ಆಗುತ್ತದೆ ಎನ್ನುವ ವರದಿ ಬಂತು. ಹೀಗಾಗಿ ಐನೂರು- ಸಾವಿರ ಅಡಿ ಹತ್ತಿರದಲ್ಲಿ ಹಣ್ಣು, ತರಕಾರಿ ಸಿಗುವ ವ್ಯವಸ್ಥೆಯನ್ನು ಬೆಂಗಳೂರಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

    ಕೊರೊನಾ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಮೈಸೂರು ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತಾಡಿದ್ದೇನೆ. ಇವತ್ತು ಮೈಸೂರು ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ನಂಜನಗೂಡು ಮತ್ತು ದೆಹಲಿಯ ಜಮಾತ್ ಎರಡು ಪ್ರಕರಣದಿಂದಾಗಿ ನಮ್ಮಲ್ಲಿ ಕೊರೊನಾ ಹೆಚ್ಚಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏ.14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ: ಸಿಎಂ

  • ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ – ‘ನಿರ್ಧಾರ’ದ ಬಗ್ಗೆ ಸಿಎಂ ಮಾತು

    ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ – ‘ನಿರ್ಧಾರ’ದ ಬಗ್ಗೆ ಸಿಎಂ ಮಾತು

    ಬೆಂಗಳೂರು: ಕೊರೊನಾ ವೈರಸ್‍ನಿಂದ ಆಗುತ್ತಿರುವ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಸಿಎಂ ಸದ್ಯಕ್ಕೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಆದರೂ ಸರ್ಕಾರಿ ನೌಕರರ ಏಪ್ರಿಲ್ ತಿಂಗಳ ಸಂಬಳ ನಿಲ್ಲಿಸಬೇಡಿ ಎಂದು ಸೂಚಿಸಿದ್ದೇನೆ. ಆದರೆ ಆ ನಂತರದ ತಿಂಗಳ ಬಗ್ಗೆ ಗೊತ್ತಿಲ್ಲ. ಕಟ್ ಮಾಡಬೇಕೇ? ಬೇಡವೇ ಎನ್ನುವ ಬಗ್ಗೆ ಕೊರೊನಾ ಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಎಷ್ಟು ಕೊಡಬಹುದು, ಎಷ್ಟು ಕಟ್ ಮಾಡಬಹುದು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಲ್ಲ. ರಾಜ್ಯಕ್ಕೆ ಬರುವ ಆದಾಯ ಕಡಿಮೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಮುಂದೇನು ಮಾಡಬೇಕು ಅಂತ ದಿಕ್ಕು ತೋಚದೇ ಕೈ ಕಟ್ಟಿ ಕುಳಿತುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಏ.14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ: ಸಿಎಂ

    ಕೊರೊನಾ ನಿಯಂತ್ರಣಕ್ಕೆ ಬಂದರೆ 14ರ ನಂತರ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳುತ್ತದೆ. ಅದಕ್ಕಾಗಿ ನಾನು ಜನರ ಜೊತೆ ಕೈಮುಗಿದು ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ ಎಂಬುದಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

  • ಒಂದು ತಿಂಗಳ ಸಂಬಳವನ್ನ ಸಿಎಂ ಪರಿಹಾರ ನಿಧಿಗೆ ಕೊಟ್ಟ ಪೊಲೀಸರು

    ಒಂದು ತಿಂಗಳ ಸಂಬಳವನ್ನ ಸಿಎಂ ಪರಿಹಾರ ನಿಧಿಗೆ ಕೊಟ್ಟ ಪೊಲೀಸರು

    ಯಾದಗಿರಿ: ಕೊರೊನಾ ಭೀತಿಯಿಂದ ಲಾಕ್‍ಡೌನ್ ಆದ ದಿನದಿಂದಲೂ ಪೊಲೀಸರು ನಿದ್ದೆ, ಆಹಾರ ಬಿಟ್ಟು ಜನರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಇದೀಗ ಪೊಲೀಸರು ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

    ಯಾದಗಿರಿ ಪೊಲೀಸ್ ಅಧಿಕಾರಿಗಳು ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನರ ಹಿತಕ್ಕಾಗಿ, ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳ ಒಟ್ಟು ನಾಲ್ಕು ಅಧಿಕಾರಗಳು ಮಾರ್ಚ್ ತಿಂಗಳ ಸಂಪೂರ್ಣ ಸಂಬಳವನ್ನು ಕೊರೊನಾ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

    ಸುರಪುರ ಡಿವೈಎಸ್‍ಪಿ ವೆಂಕಟೇಶ್ 75 ಸಾವಿರ, ಸಿಪಿಐ ಸಾಹೇಬಗೌಡ 60 ಸಾವಿರ, ಶಹಪುರ ಗ್ರಾಮೀಣ ಸಿಪಿಐ ಶ್ರೀನಿವಾಸ್ 60 ಸಾವಿರ, ಬಿ.ಗುಡಿ ಪಿಎಸ್‍ಐ ರಾಜಕುಮಾರ್ 40 ಸಾವಿರ ದೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    – ತೆಲಂಗಾಣದಲ್ಲಿ ಪ್ರೋತ್ಸಾಹ ಧನ, ರಾಜ್ಯದಲ್ಲಿ ಸಂಬಳ ನೀಡಬೇಕಾ?
    – ಅಸುರಕ್ಷತೆಯಲ್ಲೆ ಹಗಲಿರುಳು ದುಡಿಯುವರನ್ನ ಕೇಳುವವರಿಲ್ಲ

    ರಾಯಚೂರು: ಕೊವಿಡ್ 19 ನಿಯಂತ್ರಣಕ್ಕೆ ಒಂದು ದಿನದ ಸಂಬಳ ಕಟ್ ಮಾಡಲಾಗುವುದು. ಯಾರದಾದರೂ ನಿರಾಕರಿಸುತ್ತಿದ್ದರೆ ತಿಳಿಸಿ ಅಂತ ಹೇಳಿದ್ದ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದಾರೆ.

    ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಠಾಣಾ ಪಿಎಸ್ ಐ ಮೂಲಕ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನಿರಾಕರಿಸಿ ಪತ್ರ ಬರೆದಿದ್ದಾರೆ. ಮಾರ್ಚ್ ತಿಂಗಳ ಒಂದು ದಿನದ ಸಂಬಳ ನೀಡಲು ಸರ್ಕಾರ ಕೋರಿತ್ತು. ಆದರೆ ಹಗಲಿರುಳು ರಜೆಯಿಲ್ಲದೆ ಕೊವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಸೌಲಭ್ಯಗಳಿಲ್ಲದೆ ನಾವು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಯಾರೊಬ್ಬರು ಸಹಾಯ ಮಾಡಿಲ್ಲ. ತೆಲಂಗಾಣ ಸರ್ಕಾರ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷತೆ ಜೊತೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳ ಸಂಬಳ ಬೇಕಾದರೆ ಕಡಿತ ಮಾಡಿ. ಆದರೆ ನಮ್ಮ ಸಂಬಳ ಕಡಿತ ಮಾಡಬೇಡಿ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ.

    ರಾಯಚೂರು ಮಾತ್ರವಲ್ಲದೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಗಳ ಪೊಲೀಸರು ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನೀರಾಕರಿಸುವ ಮೂಲಕ ಸಮರ್ಪಕವಾಗಿ ಔರಾದ್ಕರ್ ವರದಿ ಜಾರಿಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.