Tag: Salaries

  • ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಮಂಗಳೂರು: ವೈದ್ಯರು ಹಾಗೂ ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೊರೊನಾ ಸಂದರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‍ಗೆ ಸಂಬಳ ನೀಡದೆ ಸರ್ಕಾರ ನಿರ್ಲಕ್ಷಿಸಿದೆ. ವಾರಿಯರ್‍ಗಳಿಗೇ ಸಂಬಳ ನೀಡಿಲ್ಲ ಎಂದಮೇಲೆ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ತಕ್ಷಣ ಸಂಬಳ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಗೂ ಸಂಬಳ ಆಗಿಲ್ಲ. ಅಂದರೆ ರಾಜ್ಯದಲ್ಲಿ ಒಟ್ಟು 26 ಸಾವಿರ ಮಂದಿಗೆ ಸರ್ಕಾರ ಸಂಬಳ ನೀಡಿಲ್ಲ. ಎರಡು ತಿಂಗಳು ಬಿಡುವಿಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್ ನಲ್ಲಿ ಸಂಗ್ರಹವಾದ ಹಣವನ್ನು ಕೊಡಲಿ. ಜೊತೆಗೆ ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

  • ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ.

    ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಏಪ್ರಿಲ್ ಸಂಬಳ ಹಾಕುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಪ್ರಕ್ರಿಯೆ ಪ್ರಾರಂಭಿಸಿದೆ. ಸಂಬಳ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಸ್ವತಃ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಈ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ನೀಡುವುದೇ ಕಷ್ಟಕರವಾಗಿದೆ. ನೌಕರರು ಯಾವುದಕ್ಕೂ ಸಿದ್ಧರಾಗಿರಬೇಕು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಸರ್ಕಾರ ಏಪ್ರಿಲ್ ತಿಂಗಳ ಸಂಬಳಕ್ಕೆ ಅನುಮತಿ ನೀಡಿದ್ದು, ಈ ಮೂಲಕ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬೆಂಗಳೂರು: ಆರ್ಥಿಕವಾಗಿ ಸಮರ್ಥರಿರುವ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿಲು ಮುಂದಾದರೆ, ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು.

    ಈ ಹಿನ್ನೆಲೆಯಲ್ಲಿ ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸುವಂತೆ ಸಚಿವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

    ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ. ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು. ಅಲ್ಲದೇ ಈ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸುರೇಶ್ ಕುಮಾರ್ ನೀಡಿದ್ದಾರೆ.