Tag: Salaga

  • ಒಂಟಿ ಸಲಗ ಅಪಾಯಕಾರಿ, ಆದ್ರೆ ಇದು ಹಾಗಾಗದಿರಲಿ- ಸಿದ್ದರಾಮಯ್ಯ

    ಒಂಟಿ ಸಲಗ ಅಪಾಯಕಾರಿ, ಆದ್ರೆ ಇದು ಹಾಗಾಗದಿರಲಿ- ಸಿದ್ದರಾಮಯ್ಯ

    – `ಸಲಗ’ ಚಿತ್ರದ ಮುಹೂರ್ತದಲ್ಲಿ ಮಾಜಿ ಸಿಎಂ

    ಬೆಂಗಳೂರು: ಸಿನಿಮಾಗಳಲ್ಲಿ ಸಂದೇಶ ಮತ್ತು ಮನೋರಂಜನೆ ಇರಬೇಕು. ಹಾಗೆಯೇ ಮೌಲ್ಯಗಳು ಇರಬೇಕಾಗುತ್ತದೆ. `ಸಲಗ’ ಚಿತ್ರದ ಕಥೆ ನನಗೆ ಗೊತ್ತಿಲ್ಲ. ಒಂಟಿ ಸಲಗ ಅಪಾಯಕಾರಿ. ಈ ಒಂಟಿ ಸಲಗ ಅಪಾಯಕಾರಿ ಆಗದಿರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.

    ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ಸಲಗ ಸಿನಿಮಾಗೆ ಶುಭಕೋರಿದರು. ಯಾವುದೇ ಸಿನಿಮಾದ ಸಕ್ಸಸ್ ನಿರ್ದೇಶಕನಿಗೆ ಮೊದಲು ಸೇರುತ್ತದೆ. ಆ ಬಳಿಕ ನಟ-ನಟಿ ಹಾಗೂ ಖಳನಾಯಕರು ಬರುತ್ತಾರೆ. ನಿರ್ದೇಶಕರು ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ಸಮಾಜಕ್ಕೆ ಸಂದೇಶ ಸಾರುವಂತಹ ಸಿನಿಮಾಗಳು ಬರಬೇಕು. ಸಿನಿಮಾಗೆ ಮನೋರಂಜನೆಯೇ ಮುಖ್ಯವಲ್ಲ. ಆದರೆ ಜೊತೆಗೆ ನೀತಿಪಾಠ, ಸಾಮಾಜಿಕ ಮೌಲ್ಯ, ಬದುಕಿನ ಮೌಲ್ಯವಾಗುತ್ತದೆ ಎಂದು ಹೇಳಿದರು.

    ವಿಜಿಯವರು ಒಂಟಿಸಲಗ ಸಿನಿಮಾದ ಕಥೆ ನನ್ನ ಬಳಿ ಹೇಳಿಲ್ಲ. ಆನೆ ನಡೆದಿದ್ದೇ ದಾರಿ. ಒಂಟಿ ಸಲಗನಾ-ಗುಂಪು ಸಲಗನಾ ನೋಡೋಣ. ಒಂಟಿ ಸಲಗ ಅಂದರೆ ಯಾವಾಗಲೂ ಅಪಾಯವಾಗಿರುತ್ತದೆ. ಆನೆಗಳು ಗುಂಪಿನಲ್ಲಿದ್ದರೆ ದಾರಿಯಲ್ಲಿ ಒಂದು ವೇಳೆ ಸಿಕ್ಕಿದರೂ ಏನು ಮಾಡಲ್ಲ. ಆದರೆ ಒಂಟಿ ಸಲಗಕ್ಕೆ ಭಯ, ಆತಂಕ ಎರಡೂ ಇರುತ್ತದೆ. ಒಂಟಿ ಸಲಗನೂ ಪರೋಪಕಾರಿಯಾಗಿ ಇರಲಿ ಎಂದು ಸಿದ್ದರಾಮಯ್ಯ ಆಶಿಸಿದರು.

    ಈಗ ಸಿನಿಮಾ ನೋಡೋದನ್ನ ಕಡಿಮೆ ಮಾಡಿದ್ದೇನೆ. ಯಾಕಂದ್ರೆ ಇತ್ತೀಚೆಗೆ ಟೈಮ್ ಸಿಗೋದಿಲ್ಲ. ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ ಒಂದು ಸಿನಿಮಾ ನೋಡುತ್ತಿದ್ದೆ. ಹಿಂದೆ ಇದ್ದಂತಹ ಕಥೆ-ಮೌಲ್ಯ-ನೀತಿ ಸಂದೇಶ ಕಡಿಮೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಸಾಲೆ ಸಿನಿಮಾಗಳು ಜಾಸ್ತಿ ಬರುತ್ತಿವೆ. ಆದರೆ ಜಾಸ್ತಿ ದಿನ ಆ ಸಿನಿಮಾಗಳು ಓಡೋದಿಲ್ಲ. ಚಿತ್ರದಲ್ಲಿ ಒಂದೊಳ್ಳೆ ಕಥೆ-ಸಂದೇಶ ಹಾಗೂ ನಟ-ನಟಿಯರು ಅಭಿನಯ ಚೆನ್ನಾಗಿ ಮಾಡಿದರೆ ಮಾತ್ರ ಸಿನಿಮಾ ಓಡುತ್ತದೆ. ವಿಜಿ ಒಳ್ಳೆಯ ನಟ. ವಿಜಯ್ ಅಭಿನಯದ ಒಂದೆರಡು ಸಿನಿಮಾ ನೋಡಿದ್ದೇನೆ. ನಿರ್ದೇಶನದಲ್ಲೂ ವಿಜಿಗೆ ಯಶಸ್ಸು ಸಿಗಲಿ. ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಆ ತಾಯಿಯ ಆಶೀರ್ವಾದ ತಂಡದ ಮೇಲಿರಲಿ ಎಂದು ಅವರು ತಿಳಿಸಿದರು.

    ಮೈಲಾರಿ ಹಾಗೂ ಟಗರು ನಂತರ ಒಂಟಿ ಸಲಗಕ್ಕೆ ಸಿದ್ದರಾಮಯ್ಯ ಫಸ್ಟ್ ಕ್ಲಾಪ್ ಹಾಕಿ ನಂತರ ನಿರ್ಮಾಪಕ ಶ್ರೀಕಾಂತ್‍ಗೆ ಶುಭಕೋರಿದರು. ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾ ಕಾಳಮ್ಮ ದೇವಸ್ಥಾನದಲ್ಲಿ ಇಂದು ನಡೆಯಿತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕಿಚ್ಚ ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಸಂಸದ ಡಿಕೆ ಸುರೇಶ್ ಶುಭ ಹಾರೈಸಿದ್ರು.

  • ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

    ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

    ಬೆಂಗಳೂರು: ಕಳೆದ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿದ್ದ ಚಿತ್ರ ದುನಿಯಾ ಸೂರಿ ನಿರ್ದೇಶನದ ಟಗರು. ತಾಂತ್ರಿಕವಾಗಿಯೂ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಭಾರೀ ಸದ್ದು ಮಾಡಿದ್ದ ಈ ಚಿತ್ರದ ತಂಡವೇ ಮತ್ತೊಂದು ಚಿತ್ರಕ್ಕೆ ಸಾಥ್ ನೀಡಿದೆ ಅಂದರೆ ಅದರ ಬಗ್ಗೆ ಕುತೂಹಲ ಹುಟ್ಟದಿರಲು ಸಾಧ್ಯವೇ? ಸದ್ಯಕ್ಕೆ ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರೋ ಸಲಗ ಚಿತ್ರವೂ ಕೂಡಾ ಇಂಥಾ ಕಾರಣದಿಂದಲೇ ಮತ್ತೆ ಸದ್ದು ಮಾಡಿದೆ!

    ಸಲಗ ಎಂಬ ಶೀರ್ಷಿಕೆಯಲ್ಲಿಯೇ ಒಂದು ಫೋರ್ಸ್ ಇದೆ. ಅದು ದುನಿಯಾ ವಿಜಯ್ ಅವರ ಇಮೇಜಿಗೆ ಹೇಳಿ ಮಾಡಿಸಿದಂತಿದೆ ಅನ್ನೋ ವಿಚಾರ ಆರಂಭದಿಂದಲೇ ಕೇಳಿ ಬಂದಿತ್ತು. ಅದಾದ ನಂತರದಲ್ಲಿ ಈ ಸಿನಿಮಾ ಬಗ್ಗೆ ಗಂಭೀರವಾಗಿ ತಯಾರಿ ನಡೆಸಿದ್ದ ವಿಜಯ್ ಅವರು ಇದೀಗ ಎಲ್ಲವನ್ನೂ ಅಂತಿಮ ಹಂತಕ್ಕೆ ತಂದಿದ್ದಾರೆ. ಟಗರು ಚಿತ್ರತಂಡ ಸಲಗಕ್ಕೆ ಸಾಥ್ ನೀಡಿರೋ ರೋಚಕ ಸುದ್ದಿಯೊಂದರ ಮೂಲಕ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ.

    ಅಂದಹಾಗೆ, ನಿರ್ದೇಶಕ ಸೂರಿಯವರನ್ನು ಹೊರತು ಪಡಿಸಿ ಒಂದಿಡೀ ಟಗರು ಟೀಮು ಸಲಗ ಚಿತ್ರವನ್ನು ರೂಪಿಸಲು ಪಣ ತೊಟ್ಟ ನಿಂತಿದೆ. ಟಗರು ಚಿತ್ರಕ್ಕೆ ಹೊಸ ಶೈಲಿಯ ಸಂಭಾಷಣೆ ಬರೆದಿದ್ದ ಮಾಸ್ತಿ ಮಂಜು, ಅಭಿ ಮಲ್ಲ ಸೇರಿದಂತೆ ಪ್ರತಿಭಾವಂತರ ದಂಡು ಸಲಗಕ್ಕೆ ಸಾಥ್ ನೀಡಿದೆ. ವಿಶೇಷವೆಂದರೆ ಟಗರು ನಿರ್ಮಾಪಕರಾಗಿದ್ದ ಕೆ.ಪಿ ಶ್ರೀಕಾಂತ್ ಅವರೇ ಸಲಗಕ್ಕೂ ಬಂಡವಾಳ ಹೂಡಲು ಮುಂದಾಗಿದ್ದಾರೆ. ಯಾವುದೇ ಚಿತ್ರ ಮಾಡುವಾಗಲೂ ಕಥೆಯೂ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸೋ ಶ್ರೀಕಾಂತ್ ಅವರಿಗೆ ಸಲಗದ ಕಥೆ ತುಂಬಾ ಹಿಡಿಸಿದೆ. ಪಟ್ಟಾಗಿ ಪರಿಶ್ರಮ ಹಾಕಿದರೆ ಟಗರು ಚಿತ್ರದಂಥಾದ್ದೇ ಭರಪೂರ ಯಶಸ್ಸನ್ನು ಸಲಗವೂ ತನ್ನದಾಗಿಸಿಕೊಳ್ಳಲಿದೆ ಎಂಬ ಭರವಸೆಯೂ ಶ್ರೀಕಾಂತ್ ಅವರಿಗಿದೆ.

    ಡಾಲಿ, ಕಾಕ್ರೋಚ್ ಪಾತ್ರಧಾರಿಗಳೂ ಇರುತ್ತಾರೆ!: ಹಾಗಾದ್ರೆ, ಟಗರು ಚಿತ್ರದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪಾತ್ರಗಳಲ್ಲಿ ಮಿಂಚಿದ್ದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರೂ ಸಲಗದಲ್ಲಿರುತ್ತಾರಾ ಎಂಬ ಪ್ರಶ್ನೆ ಕಾಡುತ್ತೆ. ಅದರಲ್ಲಿಯೂ ಬ್ರ್ಯಾಂಡ್ ಆಗಿ ಬಿಟ್ಟಿದ್ದ ಡಾಲಿ ಮತ್ತು ಕಾಕ್ರೋಚ್ ಪಾತ್ರಧಾರಿಗಳಾಗಿದ್ದ ಧನಂಜಯ್ ಮತ್ತು ಸುಧಿಯಂಥವರೂ ಜೊತೆಯಾಗ್ತಾರಾ ಎಂಬ ಕುತೂಹಲವೂ ಕಾಡುತ್ತೆ. ಇದಕ್ಕೆ ಸಿಕ್ಕ ಉತ್ತರ ಪ್ರೇಕ್ಷಕರನ್ನು ಥ್ರಿಲ್ ಆಗಿಸುವಂತಿದೆ. ಯಾಕಂದ್ರೆ, ಸಲಗ ಚಿತ್ರದಲ್ಲಿಯೂ ಧನಂಜಯ್ ಮತ್ತು ಸುಧಿ ಪಾತ್ರ ನಿರ್ವಹಿಸಲಿದ್ದಾರೆ. ಆ ಪಾತ್ರಗಳೂ ಕೂಡಾ ಟಗರು ಪಾತ್ರಗಳಂತೆಯೇ ತೀರಾ ಭಿನ್ನವಾಗಿರಲಿವೆ!

    ಇನ್ನುಳಿದಂತೆ ಟಗರುವಿನಂಥಾ ಸೂಪರ್ ಹಿಟ್ ಚಿತ್ರದ ತಂಡವೇ ತಮ್ಮ ಚಿತ್ರಕ್ಕೆ ಸಾಥ್ ನೀಡಿರೋದರಿಂದ ದುನಿಯಾ ವಿಜಯ್ ಕೂಡಾ ಖುಷಿಗೊಂಡಿದ್ದಾರೆ. ಅದ್ಭುತವಾದೊಂದು ಕಥೆಯ ಮೂಲಕ ತೆರೆ ಮೇಲೆ ಬರುವ ಭರವಸೆಯ ಮಾತುಗಳನ್ನೂ ಅವರಾಡಿದ್ದಾರೆ. ಇನ್ನೂ ಮುಖ್ಯ ಸಂಗತಿಯೆಂದರೆ, ಟಗರು ಚಿತ್ರದ ಮೂಲಕ ಭಿನ್ನವಾದ ಸಂಗೀತದ ತರಂಗಗಳನ್ನೆಬ್ಬಿಸಿದ್ದ ಚರಣ್ ರಾಜ್ ಸಲಗಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.

    ಆದರೆ ಸಲಗ ಚಿತ್ರದ ನಿರ್ದೇಶಕರು ಯಾರೆಂಬುದನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡ ಅದನ್ನೂ ರಿವೀಲ್ ಮಾಡಲಿದೆ. ಇದೀಗ ಭರದಿಂದ ಸಲಗಕ್ಕಾಗಿ ತಯಾರಿಗಳು ನಡೆಯುತ್ತಿವೆ. ಈ ತಿಂಗಳಲ್ಲಿಯೇ ಎಲ್ಲ ಪೂರ್ವಭಾವಿ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು ಮುಂದಿನ ತಿಂಗಳಿಂದ ಸಲಗ ಚಿತ್ರೀಕರಣ ಶುರುವಾಗೋ ಲಕ್ಷಣಗಳಿವೆ.

  • ದುನಿಯಾ ವಿಜಯ್ ಈಗ ಸಲಗ!

    ದುನಿಯಾ ವಿಜಯ್ ಈಗ ಸಲಗ!

    ಬೆಂಗಳೂರು: ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಕುಸ್ತಿ ಚಿತ್ರ ಮೂಡಿ ಬರೋದಾಗಿ ಈ ಹಿಂದೆ ಸುದ್ದಿಯಾಗಿತ್ತು. ಆದರೆ ಅದಾದ ಕೆಲ ದಿನಗಳಲ್ಲಿಯೇ ಕುಸ್ತಿ ನಿಂತು ಹೋಗಿದೆ ಎಂದೂ ರೂಮರ್ ಹರಿದಾಡಿತ್ತು. ಆದರೆ ಕುಸ್ತಿ ನಿಂತಿಲ್ಲ ಮುಂದಕ್ಕೆ ಹೋಗಿದೆ ಅಂತ ಸ್ಪಷ್ಟೀಕರಣ ನೀಡಿದ್ದ ರಾಘು, ಈ ಗ್ಯಾಪಲ್ಲಿ ತಾವು ದುನಿಯಾ ವಿಜಿಗಾಗಿ ಮತ್ತೊಂದು ಚಿತ್ರ ನಿರ್ದೇಶನ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು. ಇದೀಗ ಆ ಚಿತ್ರದ ಟೈಟಲ್ ಅನಾವರಣಗೊಂಡಿದೆ!

    ಈ ಚಿತ್ರಕ್ಕೆ ಸಲಗ ಎಂಬ ನಾಮಕರಣವಾಗಿದೆ. ಇದರ ಟೈಟಲ್ ಡಿಸೈನ್ ಕೂಡಾ ಹೊರ ಬಂದಿದೆ. ಹೊಸಾ ಶೈಲಿಯಲ್ಲಿ, ಕ್ರಿಯೇಟಿವ್ ಆಗಿ ಮಾಡಲಾಗಿರೋ ಈ ಟೈಟಲ್ ಡಿಸೈನಿಗೆ ನಿಜಕ್ಕೂ ಒಂದು ಫೋರ್ಸ್ ಇದೆ. ಈ ಚಿತ್ರದ ಮೂಲಕವೇ ದುನಿಯಾ ವಿಜಯ್ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತಾರೆಂಬಂಥಾ ಸೂಚನೆಯೂ ಹೊಮ್ಮುವಂತಿದೆ. ಅಂದ ಹಾಗೆ ಈ ಚಿತ್ರಕ್ಕೆ ರಾಘು ಶಿವಮೊಗ್ಗ ವಿಶಿಷ್ಟವಾದೊಂದು ಕಥೆಯನ್ನ ಸಿದ್ಧಪಡಿಸಿಕೊಂಡಿದ್ದಾರಂತೆ. ಈ ಚಿತ್ರದ ಫಸ್ಟ್ ಲುಕ್ ಜನವರಿ ಒಂದರಂದು ಬಿಡುಗಡೆಯಾಗಲಿದೆ.

     

    ಸಲಗಕ್ಕೆ ಹೊಸಾ ವರ್ಷದಿಂದಲೇ ಚಿತ್ರೀಕರಣ ನಡೆಯುತ್ತಿದೆ. ಹಾಗಾದರೆ ಕುಸ್ತಿ ಚಿತ್ರದ ಕಥೆಯೇನು ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೂ ಕೂಡಾ ರಾಘು ಉತ್ತರ ನೀಡಿದ್ದಾರೆ. ಬಹುಶಃ ಕುಸ್ತಿ ಮಾಮೂಲಿ ಚಿತ್ರವಾಗಿದ್ದರೆ ಈ ಹೊತ್ತಿಗೆಲ್ಲಾ ದುನಿಯಾ ವಿಜಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರೇನೋ. ಆದರೆ ಅವರು ಈ ಚಿತ್ರಕ್ಕಾಗಿ ನಡೆಸಿದ್ದ ಬಾಡಿ ಬಿಲ್ಡ್, ಕುಸ್ತಿ ತರಬೇತಿಗಳೆಲ್ಲ ವೈಯಕ್ತಿಕ ವಿವಾದಗಳಿಂದ ನಿಂತು ಹೋಗಿವೆ. ಇನ್ನು ಹೊಸದಾಗಿಯೇ ಆರಂಭ ಮಾಡಬೇಕಷ್ಟೇ. ಇನ್ನು ವಿಜಿ ಮಗ ಸಾಮ್ರಾಟ್ ಕೂಡಾ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲು ರೆಡಿಯಾಗುತ್ತಿದ್ದ. ಆತನಿಗೂ ತರಬೇತಿ ಕೊಡಿಸಲಾಗುತ್ತಿತ್ತು. ಅದೂ ಕೂಡಾ ಬ್ರೇಕಾಗಿದೆ.

    ಈಗ ಅಪ್ಪ ಮಗನಿಗೆ ಈ ತರಬೇತಿಗಳನ್ನು ಹೊಸತಾಗಿ ಕೊಡಿಸಿ ರೆಡಿಯಾಗಿಸೋ ಕೆಲಸವೂ ಸಲಗ ಚಿತ್ರದ ಜೊತೆಗೇ ನಡೆಯಲಿದೆ. ಸಾಮ್ರಾಟ್ ಗೆ ಇನ್ನೇನು ಶಾಲಾ ಪರೀಕ್ಷೆಗಳು ಶುರುವಾಗೋದರಿಂದ ಅದೂ ಕೂಡಾ ಕಷ್ಟ ಸಾಧ್ಯ. ಆದ್ದರಿಂದಲೇ ದುನಿಯಾ ವಿಜಿ ಮತ್ತು ರಾಘು ಸೇರಿ ಚರ್ಚೆ ನಡೆಸಿ ಕುಸ್ತಿ ಚಿತ್ರವನ್ನು ಮುಂದಿನ ವರ್ಷದಿಂದ ಆರಂಭಿಸಲು ನಿರ್ಧಾರ ಮಾಡಿದ್ದಾರೆ. ಸಲಗ ಚಿತ್ರ ಮುಗಿಯೋ ಹೊತ್ತಿಗೆಲ್ಲ ಕುಸ್ತಿಯೂ ಆರಂಭವಾಗಲಿದೆ…!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv