Tag: Sairat

  • 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸೈರಾಟ್ ಬೆಡಗಿ

    12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸೈರಾಟ್ ಬೆಡಗಿ

    ಮುಂಬೈ: ಮರಾಠಿಯ ‘ಸೈರಾಟ್’ ಚಿತ್ರದ ಮೂಲಕ ಖ್ಯಾತರಾಗಿರುವ ನಟಿ ರಿಂಕು ರಾಜ್‍ಗುರು ಈಗ 12ನೇ ತರಗತಿ ಕಲಾ ವಿಭಾಗದಲ್ಲಿ ಶೇ. 82ರಷ್ಟು ಅಂಕಗಳಿಸಿ ತೇರ್ಗಡೆಯಾಗಿದ್ದಾರೆ.

    ಮಂಗಳವಾರ ಮಹಾರಾಷ್ಟ್ರದ 12ನೇ ತರಗತಿ ಫಲಿತಾಂಶ ಹೊರಬಂದಿದ್ದು, ನಟಿ ರಿಂಕು 650ಕ್ಕೆ 533 ಅಂಕಗಳಿಸಿದ್ದಾರೆ. ರಿಂಕು ಇಂಗ್ಲಿಷ್‍ನಲ್ಲಿ 54, ಮರಾಠಿ ಹಾಗೂ ಇತಿಹಾಸದಲ್ಲಿ 86, ಭೂಗೋಳಶಾಸ್ತ್ರದಲ್ಲಿ 98, ರಾಜಕೀಯ ವಿಜ್ಞಾನದಲ್ಲಿ 83, ಅರ್ಥಶಾಸ್ತ್ರದಲ್ಲಿ 77 ಹಾಗೂ ಪರಿಸರ ಶಿಕ್ಷಣದಲ್ಲಿ 50ಕ್ಕೆ 49 ಅಂಕ ಪಡೆದಿದ್ದಾರೆ.

    ಎಸ್‍ಎಸ್‍ಎಲ್‍ಸಿಯಲ್ಲಿ ಫಲಿತಾಂಶದಲ್ಲಿ ರಿಂಕು ಶೇ.66ರಷ್ಟು ಅಂಕಗಳಿಸಿದ್ದರು. ಈಗ ರಿಂಕು ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಿಂತಲೂ 12ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

    2016ರಲ್ಲಿ ಬಿಡುಗಡೆಯಾದ ಸೈರಾಟ್ ಚಿತ್ರದಿಂದ ರಿಂಕು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸೈರಾಟ್ ಚಿತ್ರ ಸೂಪರ್ ಡೂಪರ್ ಹಿಟ್ ಆಗಿ ಮರಾಠಿ ಚಿತ್ರ ಉದ್ಯಮದಲ್ಲಿ ಎಲ್ಲ ದಾಖಲೆಯನ್ನು ಮುರಿದಿತ್ತು. ಅಲ್ಲದೆ ಈ ಚಿತ್ರಕ್ಕಾಗಿ ರಿಂಕು ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.

    ಸೈರಾಟ್ ಚಿತ್ರ ಕನ್ನಡ, ಹಿಂದಿ, ಬೆಂಗಾಲಿ, ಒಡಿಯಾ ಹಾಗೂ ಪಂಜಾಬಿ ಭಾಷೆಯಲ್ಲಿ ರಿಮೇಕ್ ಮಾಡಲಾಗಿತ್ತು. ಅಲ್ಲದೇ ಹಲವು ಭಾಷೆಗಳಲ್ಲಿ ಡಬ್‍ ಕೂಡ ಮಾಡಲಾಗಿತ್ತು. ಕನ್ನಡದಲ್ಲಿ ‘ಮನಸ್ಸು ಮಲ್ಲಿಗೆ’ ಆಗಿ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲೂ ರಿಂಕು ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಎಸ್. ನಾರಾಯಣ್ ನಿರ್ದೇಶನ ಮಾಡಿದ್ದರು.

  • ಪುತ್ರಿ ಜಾಹ್ನವಿ ‘ಧಡಕ್’ ಟ್ರೇಲರ್ ಗೆ ಕೊನೆಗೂ ಪ್ರತಿಕ್ರಿಯಿಸಿದ ಬೋನಿ ಕಪೂರ್

    ಪುತ್ರಿ ಜಾಹ್ನವಿ ‘ಧಡಕ್’ ಟ್ರೇಲರ್ ಗೆ ಕೊನೆಗೂ ಪ್ರತಿಕ್ರಿಯಿಸಿದ ಬೋನಿ ಕಪೂರ್

    ಮುಂಬೈ: ಬಾಲಿವುಡ್‍ನ ಚಾಂದಿನಿ, ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಧಡಕ್ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟ್ರೇಲರ್ ನೋಡಿದ ಬೋನಿ ಕಪೂರ್ ‘ವಾವ್..ಎಂತಹ ನೈಜ ಅಭಿನಯ ಮಾಡುತ್ತೀಯ’ ಎಂದು ಮಗಳಿಗೆ ಮೆಚ್ಚುಗೆ ನೀಡಿದ್ದಾರೆ. ಚಿತ್ರದಲ್ಲಿ ಜಾಹ್ನವಿ ನಟನೆ ಕುರಿತು ಅವರ ತಂದೆ ಬೋನಿ ಕಪೂರ್ ರವರ ಪ್ರತಿಕ್ರಿಯೆ ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದರು.

    ಚಿತ್ರದ ಪೋಸ್ಟರ್ ಗಳು ಹಾಗೂ ಮೊದಲ ಹಾಡು ಈಗಾಗಲೇ ರಿಲೀಸ್ ಆಗಿದ್ದು ನೋಡುಗರ ಮೆಚ್ಚುಗೆ ಪಡೆದಿದೆ. ಚಿತ್ರದ ಮೊದಲ ನೋಟವು ಪ್ರೇಕ್ಷಕರ ಹೃದಯ ಮುಟ್ಟಿದ್ದು, ಜಾಹ್ನವಿ ಅವರ ಕುಟುಂಬವೂ ಚಲನಚಿತ್ರಕ್ಕೆ ಮೆಚ್ಚುಗೆ ನೀಡಿದ್ದಾರೆ. ಇಡೀ ಕಪೂರ್ ಕುಟುಂಬವು ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲಿ ಜಾಹ್ನವಿಗೆ ಸಂಪೂರ್ಣ ಬೆಂಬಲ ನೀಡಿದೆ.

    ಕರಣ್ ಜೊಹರ್ ವರ ಧರ್ಮ ಪ್ರೊಡಕ್ಷನ್‍ನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರ ಜೊತೆ ಬಾಲಿವುಡ್‍ನ ಖ್ಯಾತ ನಟ ಶಾಹಿದ್ ಕಪೂರ್ ರವರ ಸಹೋದರ ಇಶಾನ್ ಖಟ್ಟರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಧಡಕ್ ಸೂಪರ್ ಹಿಟ್ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್ ಆಗಿದ್ದು ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

    ಚಿತ್ರದ ಮೊದಲ ಹಾಡಿನಲ್ಲಿ ಜಾಹ್ನವಿ ಹಾಗೂ ಇಶಾನ್ ಜೋಡಿ ಪ್ರೇಕ್ಷಕರಿಗೆ ಬಹುಮೆಚ್ಚುಗೆ ಆಗಿದ್ದು, ಹಾಡಿನಲ್ಲಿ ಇಬ್ಬರೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಎರಡು ಹೃದಯಗಳು ಪ್ರೀತಿಸುವ ಕಥೆ ಇದಾಗಿದ್ದು, ಶಶಾಂಕ್ ಖೈತಾನ್ ಚಿತ್ರದ ನಿರ್ದೇಶಕರಾಗಿದ್ದು, ಅಜಯ್ ಅತುಲ್ ಸಂಗೀತ ನೀಡಿದ್ದಾರೆ. ಜುಲೈ 20 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

     

  • ಸ್ಯಾಂಡಲ್‍ವುಡ್‍ನಲ್ಲಿಂದು ಡಬಲ್ ಧಮಾಕ – ಮನಸು ಮಲ್ಲಿಗೆ, ರೋಗ್ ಸಿನಿಮಾ ತೆರೆಗೆ

    ಸ್ಯಾಂಡಲ್‍ವುಡ್‍ನಲ್ಲಿಂದು ಡಬಲ್ ಧಮಾಕ – ಮನಸು ಮಲ್ಲಿಗೆ, ರೋಗ್ ಸಿನಿಮಾ ತೆರೆಗೆ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಎರಡು ಭರ್ಜರಿ ಚಿತ್ರಗಳು ರಿಲೀಸ್ ಆಗ್ತಿವೆ. ದೇಶದ ಚಿತ್ರಪ್ರೇಮಿಗಳ ಮನಗೆದ್ದ ಮರಾಠಿಯ ಸೈರಾಟ್ ಚಿತ್ರ ಕನ್ನಡದಲ್ಲಿ ಮನಸು ಮಲ್ಲಿಗೆಯಾಗಿ ಇವತ್ತು ರಿಲೀಸ್ ಆಗಲಿದೆ.

    ಕಳೆದ ವರ್ಷ ಮರಾಠಿ ಚಿತ್ರರಂಗವನ್ನ ಇಡೀ ಭಾರತೀಯ ಚಿತ್ರಪ್ರೇಮಿಗಳು ನೋಡುವಂತೆ ಮಾಡಿದ್ದ ಸಿನಿಮಾ ಸೈರಾಟ್. ಮರಾಠಿ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ನೂರು ಕೋಟಿ ರೂ. ಸಂಪಾದಿಸಿತ್ತು. ಈಗ ಆ ಮರಾಠಿಯ ಮುದ್ದಾದ ಪ್ರೇಮಕಾವ್ಯ ಕನ್ನಡದಲ್ಲಿ ಮನಸು ಮಲ್ಲಿಗೆ ಎಂಬ ಹೆಸರಿನಲ್ಲಿ ಅರಳಲಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ಕಲ್ಪನೆಯಲ್ಲಿ ಮನಸು ಮಲ್ಲಿಗೆ ಅರಳುತ್ತಿದೆ. ಮರಾಠಿಯ ಸೈರಾಟ್ ಚಿತ್ರದಲ್ಲಿ ಅಭಿನಯಿಸಿದ್ದ ರಿಂಕು ರಾಜ್‍ಗುರು ನಾಯಕಿಯಾಗಿ ಇಲ್ಲೂ ಮುಂದುವರೆದಿದ್ದಾರೆ. ನಿಶಾಂತ್ ಹೊಸ ನಾಯಕರಾಗಿದ್ದಾರೆ. ಮನಸು ಮಲ್ಲಿಗೆ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

    ಇನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ 15 ವರ್ಷಗಳ ನಂತರ ರೋಗ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಬಂದಿದ್ದಾರೆ. ಹೊಸ ಹೀರೋಗಳನ್ನ ಸಿನಿ ಇಂಡಸ್ಟ್ರಿಗೆ ಪರಿಚಯ ಮಾಡೋದ್ರಲ್ಲಿ ನಿಸ್ಸೀಮರಾದ ಪೂರಿ ಜಗನ್ನಾಥ್, ಇದೀಗ ಹೊಸ ಪ್ರತಿಭೆ ಇಶಾನ್‍ರನ್ನ ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ಗೆ ಪರಿಚಯಿಸುತ್ತಿದ್ದಾರೆ. ಎರಡು ವಿಭಿನ್ನ ಶೇಡ್‍ನಲ್ಲಿ ಇಶಾನ್ ಕಾಣಿಸ್ಕೊಳ್ಳುತ್ತಿದ್ದು ಇಶಾನ್‍ಗೆ ಮನ್ನಾರಾ ಛೋಪ್ರಾ ಮತ್ತು ಆಂಜೆಲಾ ನಾಯಕಿಯರು. ಸಿ.ಆರ್.ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.