Tag: sahakara sarige

  • ಏಷ್ಯಾದ ಹೆಗ್ಗಳಿಕೆ, ಕಾಫಿನಾಡ ಕಾರ್ಮಿಕರ ಸಾರಿಗೆ ಸಂಸ್ಥೆಯ ಯುಗಾಂತ್ಯ

    ಏಷ್ಯಾದ ಹೆಗ್ಗಳಿಕೆ, ಕಾಫಿನಾಡ ಕಾರ್ಮಿಕರ ಸಾರಿಗೆ ಸಂಸ್ಥೆಯ ಯುಗಾಂತ್ಯ

    ಚಿಕ್ಕಮಗಳೂರು: ಕಾಫಿನಾಡಿನ ಹೆಗ್ಗಳಿಕೆ, ಹಳ್ಳಿಗರ ಜೀವನಾಡಿಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರಿ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದೆ. ಆಡಳಿತ ಮಂಡಳಿ ಸಾಲ ಮರುಪಾವತಿ ಮಾಡದ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಕಂಪನಿಯೂ ಸಾರಿಗೆ ಸಂಸ್ಥೆಗೆ ಸೇರಿದ 1 ಎಕೆರೆ 10 ಗುಂಟೆ ಜಾಗವನ್ನ ಮುಟ್ಟುಗೋಲು ಹಾಕಿಕೊಂಡಿದೆ.

    ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಜಯಪ್ರಕಾಶ್ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಸೇರಿದ ಆಸ್ತಿಯನ್ನು ಆಧಾರವಾಗಿ ನೀಡಿ 1.20 ಕೋಟಿ ರೂ. ಸಾಲ ಪಡೆದಿದ್ದರು. 2019ರ ಬಳಿಕ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ಅವರಿಗೆ ನೋಟಿಸ್ ಕೂಡ ನೀಡಿದ್ದರು. ಬಡ್ಡಿ ಸಹಿತ 1,31,41,210 ರೂ. ಮೊತ್ತವನ್ನು ನೀಡಲು ನಿರಾಕರಿಸಿದ ಕಾರಣ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶದ ಅನ್ವಯ ಸೋಮವಾರ ತಾಲೂಕು ದಂಡಧಿಕಾರಿ ಪರಮೇಶ್ ನೇತೃತ್ವದಲ್ಲಿ ಸರ್ವೇ ನಂ 97ರಲ್ಲಿರುವ ಸಹಕಾರಿ ಸಾರಿಗೆ ಸಂಸ್ಥೆಗೆ ಸೇರಿದ 1 ಎಕರೆ 10 ಗುಂಟೆ ಆಸ್ತಿಯನ್ನ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಚೇರಿಗೆ ಬಾರದಂತೆ ಬೀಗ ಹಾಕಿದೆ.

    ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯ ಬೆಟ್ಟ-ಗುಡ್ಡಗಳ ಬಹುತೇಕ ಗ್ರಾಮವನ್ನ ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದ ಪರಿಗೆ ಏಷ್ಯಾದಲ್ಲೇ ಅತ್ಯುತ್ತಮ ಸಹಕಾರ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‍ನಿಂದ 76 ಬಸ್‍ಗೆ ಸಂಸ್ಥೆಯನ್ನ ತಂದಿದ್ದರು. ರಾಜ್ಯಕ್ಕೆ ಕೆಎಸ್‍ಆರ್‍ಟಿಸಿ ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ನಾಣ್ಣುಡಿಯನ್ನ ಸ್ಥಳಿಯರೇ ಹುಟ್ಟುಹಾಕಿದ್ದರು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನದ ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಅಂತಹ ಸಂಸ್ಥೆ ಸರ್ಕಾರದ ರೀತಿ-ನೀತಿ-ನಿರ್ಧಾರಗಳಿಂದ ತೀವ್ರ ಸಂಕಷ್ಟಕ್ಕೀಡಾಗಿ ಬಾಗಿಲು ಹಾಕುವ ಹೊಸ್ತಿಲಿಗೆ ಬಂದು ನಿಂತಿತ್ತು. ಇಂದು ಅಧಿಕೃತವಾಗಿ ಬೀಗ ಬಿದ್ದಂತಾಗಿದೆ.

    1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಭಾಂದವ್ಯ ಬೆಸೆದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಂಸ್ಥೆ ತನ್ನ ಸೇವೆಯನ್ನು ಸಂಪೂರ್ಣ ನಿಲ್ಲಿಸಿತ್ತು. ಪರಿಹಾರ ಹಾಗೂ ಸಹಕಾರಕ್ಕಾಗಿ ಸರ್ಕಾರದ ಕದ ಬಡಿದರೂ ಯಾವುದೇ ಉಪಯೋಗವಿಲ್ಲದಂತಾಗಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ಹೊರೆ. ಆದ್ದರಿಂದ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಕಾರದ ದಾರಿ ನೋಡುತ್ತಿತ್ತು. ಆದರೆ ಈ ಕಾರ್ಮಿಕರ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ. ಆದ್ದರಿಂದ ಸಂಸ್ಥೆ ಮಾಡಿದ ಸಾಲ ತೀರಿಸದ ಕಾರಣ ಇಂದು ಸಂಸ್ಥೆಗೆ ಬೀಗ ಬಿದ್ದಿದ್ದು, ಏಷ್ಯಾ ಖಂಡದಲ್ಲೇ ಮೊದಲ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಸಂಸ್ಥೆ ತನ್ನ ಸಂಚಾರವನ್ನ ನಿಲ್ಲಿಸಿದೆ. ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದ ಸುಮಾರು 200ಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಂತಾಗಿದೆ.

  • ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಚಿಕ್ಕಮಗಳೂರು: ನಾನು ಮಠ-ಮಾನ್ಯದ ಅಧಿಪತಿಯಲ್ಲ. ಗಾಂಧಿ ಟ್ರಸ್ಟಿನ ಅಧಿಪತಿ. ಅಧಿಪತಿಯೂ ಅಲ್ಲ ಕೆಲಸಗಾರನಷ್ಟೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

    ಜನರಿಗೆ 30 ವರ್ಷಗಳಿಂದ ಸೇವೆ ನೀಡುತ್ತಿದ್ದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೀಡಾಗಿ ಸಂಸ್ಥೆಗೆ ಬೀಗ ಹಾಕಿದೆ. ಕೊಪ್ಪ ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರು ಸಂಸ್ಥೆಗೆ ಸರ್ಕಾರ ಸಹಕಾರ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿನಯ್ ಗುರೂಜಿ ಅವರು ಕೂಡ ಭಾಗವಹಿಸಿ ಮಾತನಾಡಿ ಸರ್ಕಾರಕ್ಕೆ ಎಚ್ಚರಿಸಿದರು.

    ನನ್ನೊಬ್ಬನ ಸ್ವರವೇ ಮುಷ್ಕರವಾಗುವುದಿಲ್ಲ. ಎಲ್ಲರ ಸ್ವರವೂ ಸೇರಿದರೆ ಅದು ಪ್ರತಿಭಟನೆಯಾಗುತ್ತದೆ. ನಾನೊಬ್ಬನೇ ಮಾತನಾಡಿದರೆ ಅದು ಧ್ವನಿಯಾಗುತ್ತದೆ. ನಿಮ್ಮೆಲ್ಲರ ಧ್ವನಿ ಸೇರಿಸಿ ನಿಮ್ಮ ಪ್ರತಿನಿಧಿಯಾಗಿ ನಾನು ಮಾತನಾಡಬೇಕು ಎಂದು ಕೊಂಡಿದ್ದೇನೆ ಎಂದರು.

    ನನಗೆ ತಿಳಿದಂತೆ ಈ ಸಮಸ್ಯೆ ಶೇಕಡಾ 100ರಷ್ಟು ಬಗೆ ಹರಿಯುತ್ತದೆ. ಯಾಕೆಂದರೆ, ನಾನು ಸೋಮವಾರ ಮಾತನಾಡಿದಾಗ, ಮೂರು ಪಕ್ಷದವರು ಸಂಸ್ಥೆ ಬಗ್ಗೆ ರಾಜಕೀಯ ಬೆರಸದೆ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ನನಗೆ ತಿಳಿದಂತೆ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಆಗದಿದ್ದರೆ ಕಾರ್ಮಿಕರು ಅನ್ನ-ನೀರು ಬಿಟ್ಟು ಉಪವಾಸ ಕೂರುವುದಕ್ಕಿಂತ ನಾವು ಹಾಗೂ ನಮ್ಮ ಆಶ್ರಮದವರು ಅನ್ನ-ನೀರು ಬಿಟ್ಟು ಇದೇ ಜಾಗದಲ್ಲಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ

    ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ

    ಚಿಕ್ಕಮಗಳೂರು: 30 ವರ್ಷಗಳಿಂದ ದಣಿವರಿಯದೆ ಓಡಿದ್ದ, ಕಾರ್ಮಿಕರೇ ಮಾಲೀಕರಾಗಿದ್ದ ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ ಬಿದ್ದಿದೆ.

    ಡೀಸೆಲ್ ಬೆಲೆ, ಟ್ಯಾಕ್ಸ್, ಇನ್ಸುರೆನ್ಸ್ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲಿದ್ದ ಚಿಕ್ಕಮಗಳೂರಿನ ಕೊಪ್ಪದ ಈ ಬಡವರ ಬಸ್ ಕಳೆದೆರಡು ವರ್ಷಗಳಿಂದ ಸರ್ಕಾರದ ನೆರವನ್ನ ಜಾತಕ ಪಕ್ಷಿಯಂತೆ ಕಾಯ್ತಿತ್ತು. ಆದರೆ ಸರ್ಕಾರದ ನಿರೀಕ್ಷಿತ ಸಹಕಾರ ಸಿಗದ ಕಾರಣ ಮಲೆನಾಡಿಗರ ಬದುಕಲ್ಲಿ ಹಾಸುಹೊಕ್ಕಾಗಿದ್ದ ಹೆಮ್ಮೆಯ ಸಾರಿಗೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಇದರಿಂದ 300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿದ್ದು, ಇಂದಿಗೂ ಸರ್ಕಾರದ ಸಹಾಯಹಸ್ತವನ್ನ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ಶನಿವಾರದಿಂದಲೇ ಎಲ್ಲಾ ಬಸ್‍ಗಳನ್ನ ಕೇಂದ್ರ ಕಚೇರಿಯಲ್ಲಿ ನಿಲ್ಲಸಿದ್ದ ಬಸ್ ಮಾಲೀಕರು ಭಾನುವಾರ ಕೊಪ್ಪ ನಗರದಲ್ಲಿ ಸಾರ್ವಜನಿಕರು ಹಾಗೂ ಜನನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಸರ್ಕಾರದ ಸಹಕಾರವಿಲ್ಲದೆ ಬಸ್‍ಗಳ ಸಂಚಾರ ಸಾಧ್ಯವಿಲ್ಲ ಎಂಬುದರಿಂದ ಬಸ್‍ಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇಂದಿನಿಂದ ಮಲೆನಾಡಿಗರ ಜೀವನಾಡಿಯಾಗಿದ್ದ ಬಸ್‍ಗಳು ರಸ್ತೆಗಿಳಿಯಲ್ಲ. ಇದರಿಂದ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದ 300ಕ್ಕೂ ಹೆಚ್ಚು ಕುಟುಂಬಗಳು ಚಿಂತಾಕ್ರಾಂತರಾಗಿದ್ದಾರೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಲಕ್ಷಾಂತರ ಸಾರ್ವಜನಿಕರು ಈ ಬಸ್‍ಗಳನ್ನೇ ಆಶ್ರಯಿಸಿದ್ದರು. ಆದರೆ ಇಂದಿನಿಂದ ಬಸ್‍ಗಳು ರಸ್ತೆಗಿಳಿಯದ ಕಾರಣ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

    ಸರ್ಕಾರದ ನೆರವನ್ನ ಬಯಸಿದ ಸಹಕಾರ ಸಾರಿಗೆ ಸಂಸ್ಥೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿ ಸಂಸ್ಥೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದರು. ನೌಕರರ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಹಣಕಾಸಿನ ನೆರವು ನೀಡೋ ಭರವಸೆ ನೀಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ, ಸಹಕಾರ, ನೆರವು ಯಾವುದೂ ಸಿಗಲಿಲ್ಲ. ದಿನಕ್ಕೆ ಡಿಸೇಲ್‍ನಿಂದಲೇ ಲಕ್ಷಾಂತರ ಹಣ ನಷ್ಟವಾಗುತ್ತಿರುವುದರಿಂದ ನಷ್ಟವನ್ನ ಸರಿದೂಗಿಸಲಾಗದೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಹಾಕಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ನೆರವು ನೀಡಿದರೆ ಸಹಕಾರ ಸಾರಿಗೆ ಕಾರ್ಯರೂಪಕ್ಕೆ ಬಂದು ಮಲೆನಾಡಿಗರ ಮನೆ-ಮನೆಗಳಲ್ಲಿ ಹಬ್ಬದ ವಾತಾವರಣವಿರುತ್ತೆ.

    30 ವರ್ಷಗಳಿಂದ ಮಲೆನಾಡಿನ ಮಳೆ-ಗಾಳಿಗೂ ಜಗ್ಗದೆ ಮಲೆನಾಡ ಕುಗ್ರಾಮಗಳ ಜನರ ಬದುಕಿಗೂ ಸಹಕಾರ ಸಾರಿಗೆ ಸಾಥ್ ನೀಡಿತ್ತು. ಆದರೀಗ ಕಾಮೀಕರೇ ಕಟ್ಟಿ ಬೆಳೆಸಿದ ಸಂಸ್ಥೆಯನ್ನ ಕಾರ್ಮಿಕರೇ ನಡೆಸಲು ಸಾಧ್ಯವಾಗ್ತಿಲ್ಲ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಈ ಬಸ್‍ಗಳನ್ನ ಆಶ್ರಯಿಸಿಕೊಂಡಿದ್ದರು. ಇದೀಗ ಬಸ್‍ಗಳ ಸಂಚಾರ ನಿಂತಿರುವುದರಿಂದ ಮಲೆನಾಡಿಗರು ಸಂಕಷ್ಟಕ್ಕೀಡಾಗಿರೋದಂತು ಸತ್ಯ. ಹೀಗಾಗಿ ಕೂಡಲೇ ಸರ್ಕಾರ ಇವರ ನೆರವಿಗೆ ಧಾವಿಸಿಬೇಕಾದ ಅನಿವಾರ್ಯತೆ ಬಹಳಷ್ಟಿದೆ.