Tag: Saffron Stoles

  • ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    ನವದೆಹಲಿ: ಮಂಡ್ಯದ ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಕೇಸರಿ ಶಾಲು (Saffron Stoles) ಧರಿಸಬಾರದಿತ್ತು, ನಾನು ಯಾವುದೇ ಕಾರಣಕ್ಕೂ ಕೇಸರಿ ಶಾಲು ಧರಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರು ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (HD Kumaraswamy) ಅವರು ಕೇಸರಿ ಶಾಲು ಧರಿಸಿದ್ದು ಹೆಚ್ಚು ಚರ್ಚೆಯಾಗುತ್ತಿದೆ. ಆದ್ರೆ ಅಕಸ್ಮಾತ್‌ ಆಗಿ ನಡೆದಿರುವ ಘಟನೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ, ಜೊತೆಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಂಸದನ ದೇಶ ವಿಭಜನೆ ಹೇಳಿಕೆ – ಸೋನಿಯಾ ಗಾಂಧಿ ಭಾರತೀಯರ ಕ್ಷಮೆಯಾಚಿಸಲಿ: ಜೋಶಿ ಆಗ್ರಹ

    ಮೋದಿ ಜೊತೆ ಹೋದಾಗಲೂ ಕೇಸರಿ ಶಾಲು ಹಾಕಲ್ಲ:
    ಕೆರಗೋಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಯಾರೋ‌ ಬಂದು ಕೇಸರಿ ಶಾಲು ಹಾಕಿರುತ್ತಾರೆ, ಆಯಾ ಸಂದರ್ಭಕ್ಕೆ ಹಾಕಿರ್ತಾರೆ, ಅದಕ್ಕೇನು ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯ ಇಲ್ಲ, ಕೇಸರಿ ಶಾಲು ಹಾಕಬಾರದಿತ್ತು. ನಮ್ಮ ಪಕ್ಷದ ಶಾಲು ಹಾಕಬಹುದಿತ್ತು, ನಾಳೆ‌ ನಾನು ಮೋದಿ (Narendra Modi) ಅವರ ಜೊತೆಗೆ ಹೋದಾಗಲೂ ನನ್ನ ಪಕ್ಷದ ಶಾಲನ್ನೇ ಹಾಕುತ್ತೇನೆ. ನಾನು ಖಂಡಿತಾವಾಗಿ ಕೇಸರಿ ಶಾಲು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ

    ‌ಇದೇ ವೇಳೆ ಸಂಸದ ಡಿ.ಕೆ ಸುರೇಶ್ ಅವರ ʻಪ್ರತ್ಯೇಕ ರಾಷ್ಟ್ರʼದ ಹೇಳಿಕೆ ಸಂಬಂಧ ಮಾತನಾಡಿ, ಡಿ.ಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ ಅವರು ವ್ಯಕ್ತಿಗತವಾಗಿ ಹೇಳಿರಬಹುದು, ಅದು ಪಕ್ಷದ ನಿರ್ಣಯ ಅಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ, ಸರ್ಕಾರ ನಡೆಸಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಹನುಮಧ್ವಜ ವಿವಾದ – ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ರೆ ಬೀಳುತ್ತೆ ಕೇಸ್‌!

    ನಾನೂ ಬಹಳಷ್ಟು ಕಠುವಾಗಿ ಮಾತನಾಡಿದ್ದೇನೆ:
    ಅನ್ಯಾಯ – ನ್ಯಾಯ ಬಜೆಟ್‌ನ ವಿಚಾರದಲ್ಲಿ ಮಾತನಾಡುತ್ತೇವೆ ಅದರಲ್ಲೇನು ಸಮಸ್ಯೆ ಇಲ್ಲ. ಕೃಷಿ ನೀರಾವರಿ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಹೆಚ್ಚು ಅನುದಾನ ಕೊಡಬೇಕು ಅಂತಾ ನಾನು ಬಹಳಷ್ಟು ಕಠುವಾಗಿ ಮಾತನಾಡಿದ್ದೇನೆ. ಆದರೆ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಸದಸ್ಯರಾಗಿ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಇದಕ್ಕಿಂತ ಹೆಚ್ಚು ನಾನು ಮಾತನಾಡಬಾರದು ಎಂದಿದ್ದಾರೆ.

    ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಮತ್ತು ಅಮಿತ್ ಶಾ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ, ಸೀಟು ಹಂಚಿಕೆ ಬಳಿಕ ಎಲ್ಲವೂ ಗೊತ್ತಾಗುತ್ತೆ. ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ರಾಜ್ಯಸಭೆ ಸೀಟು ಕೊಡುವ ಬಗ್ಗೆ ಅಮಿತ್ ಶಾ ಹೇಳಿರುವುದಾಗಿಯೂ ದೊಡ್ಡಗೌಡರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ: ಡಿ.ಕೆ.ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು