Tag: Safari Ride

  • ಸಫಾರಿ ಬಯಸಿ ಕಾರ್ ಬಾಗಿಲು ತೆಗೆದು ಲಿಫ್ಟ್ ಕೇಳಿದ ಸಿಂಹ- ವಿಡಿಯೋ

    ಸಫಾರಿ ಬಯಸಿ ಕಾರ್ ಬಾಗಿಲು ತೆಗೆದು ಲಿಫ್ಟ್ ಕೇಳಿದ ಸಿಂಹ- ವಿಡಿಯೋ

    ಕೇಪ್‍ಟೌನ್: ಸಫಾರಿ ಬಯಸಿದ ಹೆಣ್ಣು ಸಿಂಹವೊಂದು ಕಾರ್ ಬಾಗಿಲು ತೆಗೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು. ದಕ್ಷಿಣ ಆಫ್ರಿಕಾದಲ್ಲಿ ಸಫಾರಿ ಸವಾರಿಯನ್ನು ಆನಂದಿಸುತ್ತಿದ್ದ ಕುಟುಂಬವೊಂದು ಸಿಂಹ ತಮ್ಮ ಕಾರಿನ ಬಾಗಿಲು ತೆರೆದಾಗ ಆತಂಕಕ್ಕೆ ಒಳಗಾಗಿದ್ದರು. ಈ ಘಟನೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‍ಎಸ್) ಅಧಿಕಾರಿ ಸುಸಂತ ನಂದಾ ಟ್ವೀಟ್ ಮಾಡಿದ್ದಾರೆ.

    “ಹೆಣ್ಣು ಸಿಂಹವು ಸಫಾರಿ ಹೋಗಲು ಬಯಸುತ್ತಿದೆ. ಅದು ಕಾರಿನ ಬಾಗಿಲು ತೆರೆದು ಲಿಫ್ಟ್ ಕೇಳಿತು. ಇಂತಹ ಘಟನೆ ನಿಮ್ಮ ಮುಂದಿನ ಸಫಾರಿಗಳಲ್ಲಿಯೂ ಸಂಭವಿಸಬಹುದು. ಕಾಡು ಪ್ರಾಣಿಗಳಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ” ಎಂದು ನಂದಾ ಬರೆದುಕೊಂಡಿದ್ದಾರೆ.

    ಕಾರಿನಲ್ಲಿದ್ದ ಕುಟುಂಬವೊಂದು ದೂರದಿಂದ ಸಿಂಹಗಳ ಗುಂಪನ್ನು ನೋಡುತ್ತಾ ಮುಂದೆ ಸಾಗುತ್ತಿತ್ತು. ಕುತೂಹಲದಿಂದ ಹೆಣ್ಣು ಸಿಂಹ ಒಂದು ಸಫಾರಿ ಕಾರಿನ ಕಡೆಗೆ ನಡೆದು ಬಂದಿತು. ಬಳಿಕ ಕಾರಿನ ಬಾಗಿಲು ತೆರೆದಾಗ ಪ್ರಯಾಣಿಕರು ಗಾಬರಿಗೊಂಡಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋವನ್ನು 15 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಕೆಲವರು ಆಘಾತ ವ್ಯಕ್ತಪಡಿಸಿ ಮುಂದೆ ಏನಾಯಿತು ಎಂದು ತಿಳಿಯುವ ಕುತೂಹಲ ವ್ಯಕ್ತಪಡಿಸಿದ್ದಾರೆ. “ವಾಹ್ ಸಿಂಹ ಎಷ್ಟು ಬುದ್ಧಿವಂತವಾಗಿದೆ. ಬಾಗಿಲನ್ನು ಅಷ್ಟು ಸುಲಭವಾಗಿ ತೆರೆಯಿತು” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಸಿದ್ದಾರೆ. ಮತ್ತೊಬ್ಬರು, “ಬಾಗಿಲುಗಳನ್ನು ಅನ್‍ಲಾಕ್ ಮಾಡದೆ ಬಿಡುವುದು ಎಷ್ಟು ಮೂರ್ಖತನ” ಎಂದು ಕಾರಿನಲ್ಲಿದ್ದವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.