Tag: Sadhvi Pragya Thakur

  • ಬಾಬರಿ ಮಸೀದಿ ಧ್ವಂಸಗೊಳಿಸಿದ ಬಗ್ಗೆ ಹೆಮ್ಮೆಯಿದೆ: ಸಾಧ್ವಿ ಪ್ರಜ್ಞಾಸಿಂಗ್

    ಬಾಬರಿ ಮಸೀದಿ ಧ್ವಂಸಗೊಳಿಸಿದ ಬಗ್ಗೆ ಹೆಮ್ಮೆಯಿದೆ: ಸಾಧ್ವಿ ಪ್ರಜ್ಞಾಸಿಂಗ್

    – ಚುನಾವಣಾ ಆಯೋಗದಿಂದ ನೋಟಿಸ್

    ನವದೆಹಲಿ: ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಿರುವ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಅವರು, ಮತ್ತೆ ಚುನಾವಣಾ ಆಯೋಗದ ನೋಟಿಸ್‍ಗೆ ಗುರಿಯಾಗಿದ್ದಾರೆ.

    ಖಾಸಗಿ ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾಸಿಂಗ್ ಅವರು, ಬಾಬ್ರಿ ಮಸೀದಿ ಕೆಡವಲು ನಾನು ಕೂಡ ಸಹಕರಿಸಿದ್ದೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಾಬರಿ ಮಸೀದಿ ಧ್ವಂಸಗೊಳಿಸಿದ್ದಕ್ಕೆ ನಾವು ಯಾಕೆ ವಿಷಾದ ವ್ಯಕ್ತಪಡಿಸಬೇಕು? ನಮಗೆ ಆ ಬಗ್ಗೆ ಹೆಮ್ಮೆ ಇದೆ. ಈ ಸುವರ್ಣ ಅವಕಾಶ ನೀಡಿದ್ದಕ್ಕೆ ದೇವರಿಗೆ ನಾನು ವಂದನೆ ಸಲ್ಲಿಸುತ್ತೇನೆ. ಆ ಘಟನೆ ದೇಶದ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ. ಬಾಬ್ರಿ ಮಸೀದಿಯ ತುದಿಗೆ ಏರಿ ಮಸೀದಿ ಕೆಡವಲು ನಾನೂ ನೆರವಾಗಿದ್ದೆ ಎಂದು ಹೇಳಿದ್ದಾರೆ.

    ನಾವು ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ. ರಾಮ ಮಂದಿರ ನಿರ್ಮಾಣ ಮಾಡುವುದು ಬಿಜೆಪಿಗೆ ರಾಜಕೀಯ ವಿಚಾರವಲ್ಲ ಎಂದು ಸಾಧ್ವಿ ಪ್ರಜ್ಞಾಸಿಂಗ್ ಹೇಳಿದರು. ಈ ವೇಳೆ ರಾಮಮಂದಿರ ನಿರ್ಮಾಣಕ್ಕೆ ಕಾಲಮಿತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಈಗಾಗಲೇ ನಾವು ಮಸೀದಿ ಕೆಡವಿದ್ದೇವೆ. ಅಲ್ಲಿ ನಾವು ಮಂದಿರ ನಿರ್ಮಿಸುತ್ತೇವೆ ಎಂದರು.

    ಈ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗವು ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿದೆ. ಅಷ್ಟೇ ಅಲ್ಲದೆ 24 ಗಂಟೆಗಳ ಒಳಗಾಗಿ ಉತ್ತರ ನೀಡಬೇಕು ಎಂದು ಸೂಚನೆ ನೀಡಿದೆ.

    ಈ ಹಿಂದೆ ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಚುನಾವಣಾ ಆಯೋಗವು ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿತ್ತು. ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೋರುವುದಾಗಿ ತಿಳಿಸಿದ್ದರು.

    ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 2008ರ ಸೆಪ್ಟೆಂಬರ್ ನಲ್ಲಿ ಸ್ಫೋಟದಲ್ಲಿ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಉಗ್ರ ನಿಗ್ರಹ ದಳವು ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಕುರಿತು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ಆರಂಭಿಸಿತ್ತು. ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.

    ಸಾಧ್ವಿ ಪ್ರಜ್ಞಾಸಿಂಗ್ ಇತ್ತೀಚೆಗೆ ಬಿಜೆಪಿ ಸೇರಿದ್ದು, ಭೋಪಾಲ್‍ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.